ರಾಗ ದೇಶಿ ಅಷ್ಟತಾಳ

ಏನೆಂದೆ | ನಂದಿ | ಏನೆಂದೆ          || ಪಲ್ಲವಿ ||

ಆನೆಮೊಗದ ಗಣನಾಥಗೆಯೆನ್ನ |
ಮಾನಿನಿಮಣಿ ಸುಕುಮಾರಿಯ ಮುನ್ನ ||
ಏನ ಪೇಳ್ದರು ನಾನು ಕೊಡುವವನಲ್ಲ |
ನೀನು ಪೇಳಿದರೊಪ್ಪೆ ಪೋಗಿ ಪೇಳೆಲ್ಲ || ಏನೆಂದೆ      ||೧೬೮||

ಮುಚ್ಚು ಮುಚ್ಚೆಲೆ ಬಾಯ ಹೆಚ್ಚು ಮಾತುಗಳ |
ಕೊಚ್ಚದಿರೆನ್ನೊಳು ಬೆಚ್ಚುವನಲ್ಲ ||
ತುಚ್ಛ ನೀ ಪೋಗೆಂದು ಪೇಳ್ದುದ ಕೇಳಿ |
ಕಿಚ್ಚಿನಂತುರಿ ತಾಳ್ದು ನಂದೀಶ ಮರಳಿ || ಏನೆಂದೆ     ||೧೬೯||

ಕೊಡದಿರೆ ಬಿಡುವವರ್ಯಾರಯ್ಯ ನಿನ್ನ |
ಹುಡುಗಿಯ ಕೊಂಡೊಯ್ದು ಗಣರಾಯಗೆನ್ನ ||
ಒಡತಿಯು ಪೇಳ್ದಂತೆ ಮಾಡುವೆನಿಂದೆ |
ಬಡಿವಾರ ಬಿಡು ಬಿಡು ಸಾಕಯ್ಯ ಇಂದೆ || ಏನೆಂದೆ    ||೧೭೦||

ಬುದ್ಧಿಯಿಲ್ಲದೆ ನಂದಿ ಪೇಳಬೇಡೆನಗೆ |
ಬುದ್ಧಿ ಕಲಿಸುವೆನು ನಡೆ ನಡೆ ಪುರಿಗೆ ||
ಕದ್ದು ಕೊಂಡೊಯ್ದರೆ ಕನ್ನೆಯ ನೀನು |
ಸದ್ದಡಗಿಸುವೆನು ಕೇಳಯ್ಯ ನಾನು || ಏನೆಂದೆ          ||೧೭೧||

ಭಾಮಿನಿ

ಇನಿತು ನಾನಾವಿಧದಿ ರಾಮನು |
ಗಣಪತಿಯ ಜರೆಯಲ್ಕೆ ನಂದಿಯು |
ಎನಗದೇತಕೆ ಕಲಹ ಪೋಗುವೆ ಜನನಿಯಿದ್ದೆಡೆಗೆ ||
ಘನತರದ ರೋಷದಲಿ ಬಂದಾ |
ವಿನಯದಿಂದಲಿ ಉಮೆಗೆ ವಂದಿಸಿ |
ಮನಕೆ ಬಂದುದ ಪೇಳ್ದರಾಮನ ಪರಿಯನುಸುರಿದನು ||         ||೧೭೨||

ರಾಗ ನವರೋಜು ಏಕತಾಳ

ಲಾಲಿಸಿ ಕೇಳೌ ತಾಯೆ | ನೀ | ಪಾಲಿಸಬೇಕೆಲೆ ಮಾಯೆ ||
ಲೋಲಾಕ್ಷಿಯೆ ನೀ ಪೇಳಿದ ತೆರದಲಿ | ಬಾಲಕಿಯನು ನಾ ಶೀಲಗೆ ಕೇಳಿದೆ         ||೧೭೩||

ಹೀನಯೆಂದನು ಗಣಪ | ಮ | ತ್ತಾನೆಯದೇ ಮೊಗವೆನಿಪ ||
ಮಾನಿನಿಯನು ತಾ ಕೊಡೆನೆನುತೆನ್ನನು | ಹೀನತೆರದಿ ಬೈದಾಡುತ ಜರೆದನು     ||೧೭೪||

ತರದಿರೆ ನಾವಾ ಸತಿಯ | ಬಾ | ಳಿರುವರೆ ಏತಕೆ ಒಡೆಯ ||
ಹರನಿದ ಕೇಳ್ದರೆಯೆಮ್ಮನು ಬೈಯನೆ | ಬರಿದೇತಕೆ ತಡ ತೆರಳುವ ತರುಣಿಯ     ||೧೭೫||

ಅಪ್ಪಣೆಯೀಯಲು ಬೇಗ | ನಾ | ಒಪ್ಪಿಸುವೆನು ತಂದೀಗ ||
ಮುಪ್ಪಿನ ಹೆಂಡತಿ ಗಂಡಗೆ ಬುದ್ಧಿಯ | ತಪ್ಪದೆ ಕಲಿಸುವೆ ಬೊಪ್ಪಗೆ ಪೇಳಲಿ         ||೧೭೬||

ರಾಗ ಕಾಂಭೋಜಿ ಝಂಪೆತಾಳ

ಇಂತೆಂದು ನಂದಿಕೇಶ್ವರ ಪೇಳ್ದ ನುಡಿ ಕೇಳಿ | ಕಾಂತೆ ಪಾರ್ವತಿ ಗಣರ ನೋಡಿ ||
ಮುಂತೆ ತಾನೈದಿ ಕೇಳುವೆ ಬಲನ ಕೂಡೆ ಇರಿ | ಪಿಂತೆ ನೀವೆಲ್ಲರೊಂದಾಗಿ        ||೧೭೭||

ವೀರಾಧಿವೀರ ನೀ ವೀರಭದ್ರನೆ ಕೇಳು | ನೀರಜಾಕ್ಷಿಯ ಕೊಡದಿರಲ್ಕೆ ||
ನೀರೆಯನು ಪಿಡಿತಂದು ಧಾರೆಯನು ಎಸಗಲೀ | ಕಾರಿಯವ ನಡೆಸಬೇಕೆನುತ     ||೧೭೮||

ತಡೆಯ ಬಂದವರನ್ನು ಬಡಬಡಿದು ಎಳೆತಂದು | ಕೆಡಹಬೇಕವರ ಕರ ಕಟ್ಟಿ ||
ಒಡೆಯನೆಡೆಗೆಲ್ಲರನು ಒಡಗೊಂಡು ಪೋಗಿ ಮ | ತ್ತಡಿಗೆ ಕೆಡಹಲುಬೇಕುಯೆನುತ  ||೧೭೯||

ಇನಿತು ನಿಶ್ಚೈಸುತ್ತ ವನಿತೆಯಿರಲಿತ್ತ ಕೇಳ್ | ಜನಪ ಕೌಂಡ್ಲಿಕನ ದಿಬ್ಬಣವು ||
ಘನವೇಗದಿಂದಲೈತರಲಾಗ ರಾಮ ತಾ | ನನುವಿಂದ ಇದಿರ್ಗೊಂಡು ನುಡಿದ     ||೧೮೦||

ರಾಗ ಕಾಂಭೋಜಿ ಅಷ್ಟತಾಳ

ದಿಬ್ಬಣವೊಡಗೊಂಡು ಕೌಂಡ್ಲಿಕಭೂಪರೆ | ಬಂದಿರೇನೈ || ನೀ |
ವಬ್ಬರದಿಂದಲಿ ಶಿಶುಪಾಲ ಸಹಿತಾಗಿ | ಬಂದಿರೇನೈ   ||೧೮೧||

ಸಿಂಧುದೇಶದ ರಾಜ ಸೈಂಧವರೊಡಗೂಡಿ | ಬಂದಿರೇನೈ || ಬಹು |

ಚಂದವಾಯಿತು ಸರ್ವರೀ ಶುಭಕಾರ್ಯಕ್ಕೆ | ಬಂದಿರೇನೈ       ||೧೮೨||

ಬಲದೇವ ನಾವೆಲ್ಲ ನಿಮ್ಮಯ ಪುರಕೀಗ | ಬಂದೆವಯ್ಯ || ನಮ್ಮ |
ಬಲವೆಲ್ಲ ದಣಿದಿದೆ ಬೀಡಿಕೆ ಕೊಡಿಸಯ್ಯ | ಬಂದೆವಯ್ಯ ||೧೮೩||

ಚಪ್ಪರ ಚೌಕಿಯು ನಡುಮನೆಯೊಳಗಿಂದು | ಕೇಳಿರಯ್ಯ || ನೀ |
ವಿಪ್ಪುದು ಸರ್ವರು ಕುಶಲದಿಂದಲಿ ಬಂದು ಕೇಳಿರಯ್ಯ  ||೧೮೪||

ಭಾಮಿನಿ

ಎಂದು ನಾನಾವಿಧದಿ ರಾಮನು |
ಚಂದದಿಂದುಪಚರಿಸಿ ದಿಬ್ಬಣ |
ಬಂದವರಿಗುಣಬಡಿಸಿ ಮುಂದಿನ ಕೆಲಸಕಾಸನದಿ ||
ನಿಂದು ಕುಳ್ಳಿರಿಸುತ್ತ ಸಭಿಕರಿ |
ಗಂದದಲಿ ಪೂಜಿಸುವ ಸಮಯಕೆ |
ಬಂದಳಾ ಗಿರಿಸುತೆಯು ದಿಬ್ಬಣ ಸಹಿತ ಪುರವರಕೆ     ||೧೮೫||

ರಾಗ ತೋಡಿ ಅಷ್ಟತಾಳ

ಅಣ್ಣ ಕೇಳೀಗ ನಾ | ಚಿಣ್ಣನ ಕರಕೊಂಡು |
ಬಣ್ಣದಿ ಬಂದಿಹೆ | ಹೆಣ್ಣ ನೀನೀಯೊ  ||೧೮೬||

ರಾಗ ಮಾರವಿ ಏಕತಾಳ

ಸೋದರಿ ಹ್ಯಾಗಿವಳು | ಕೇಳ್ವಿ | ನೋದದ ಮಾತುಗಳು ||
ವಾದಿಸದೆನ್ನೊಳು ನಡೆ ನಡೆ ಸುಮ್ಮನೆ | ಪಾದರಿ ನೀನಿಂದು    ||೧೮೭||

ರಾಗ ತೋಡಿ ಅಷ್ಟತಾಳ

ತಂಗಿ ನಾನಾದರೆ | ತುಂಗಕುಚೆಯ ಮಹಾ |
ಲಿಂಗನ ಸುತನಿಗೆ ಮಂಗಲದಿಂದ   ||೧೮೮||

ರಾಗ ಮಾರವಿ ಮಟ್ಟೆತಾಳ

ಎನ್ನಯ ಜನಕನಿಗೆ | ನೀ | ನಿನ್ನು ಪುಟ್ಟಿರೆ ಮ್ಯಾಗೆ ||
ಕನ್ನೆಯ ಕೊಡಬಹುದಲ್ಲದೆ ನೀ | ನನ್ಯರಿಗುದಿಸಿದರೆ    ||೧೮೯||

ರಾಗ ತೋಡಿ ಏಕತಾಳ

ನಿನ್ನನು ಪೆತ್ತಿಹ | ಪಿತನ್ಯಾರೆಂಬುದ ನೀನು |
ನಿರ್ಣಯ ಮಾಡಿಕೊ | ಅಣ್ಣ ನೀ ಬರಿದೆ        ||೧೯೦||

ರಾಗ ಮಾರವಿ ಏಕತಾಳ

ತಿಳಿದಿರ್ದೆನು ನಾನು | ಯೆ | ನ್ನೊಳವೆಲ್ಲವನಿನ್ನು ||
ಬಳಗವು ನಿನ್ನಯ ಪ್ರೇತಗಳೆಂಬುದ | ಇಳೆಯೊಳು ಬಲ್ಲಿದರು    ||೧೯೧||

ರಾಗ ತೋಡಿ ಏಕತಾಳ

ಬಲ್ಲವರೆಲ್ಲರು | ಗೊಲ್ಲರೆಂಬರು ನಿಮ್ಮ |
ಸಲ್ಲದಾ ನುಡಿಯೆ | ನ್ನಲ್ಲಿ ಆಡದಿರು  ||೧೯೨||

ರಾಗ ಮಾರವಿ ಏಕತಾಳ

ಗೋಪಕುಲವೆ ಶ್ರೇಷ್ಠ | ಬ | ಲ್ಪಾಪಿಯೆ ನೀ ದುಷ್ಟ ||
ರೂಪಿಗಳೆಡೆಯಲಿ ಕುಣಿಕುಣಿದಾಡುತ | ವ್ಯಾಪಿಸಿಕೊಂಡಿದೆ ಭೂತಸ್ವರೂಪವು      ||೧೯೩||

ರಾಗ ತೋಡಿ ಅಷ್ಟತಾಳ

ಅಣ್ಣಯ್ಯ ನಿಷ್ಠುರ | ದಿಂದ ನೀಯೆನ್ನೊಳು |
ಸಣ್ಣ ಮಾತುಗಳಾಡೆ ಹೆಣ್ಣ ನಾ ಬಿಡೆನು       ||೧೯೪||

ರಾಗ ಮಾರವಿ ಏಕತಾಳ

ಎಂದಿಗೂ ಕೊಡೆ ನಾನು | ನಿನ್ನ | ಕಂದಗೆ ಕುವರಿಯನು ||
ಹೊಂದದ ನುಡಿಯೆಂದೆಂದಿಗು ಉಸಿರದೆ | ಹಿಂದಕೆ ನಡೆಯಿನ್ನು ||೧೯೫||

ರಾಗ ತೋಡಿ ಅಷ್ಟತಾಳ

ಎನ್ನಯ ಕಂದಗೆ | ನಿನ್ನಯ ಸುತೆಯನ್ನು |
ಮುನ್ನ ಲಗ್ನವ ಗೈಸಿ | ಯೆನ್ನ ಪುರಕೆ ಪೋಪೆ  ||೧೯೬||

ರಾಗ ಮಾರವಿ ಏಕತಾಳ

ಭ್ರಷ್ಟತ್ವದ ನುಡಿಯ | ಏ | ದುಷ್ಟಳೆ ಆಡುವೆಯ ||
ಕುಟ್ಟುವೆ ದವಡೆಗೆ ಅಣ್ಣನ ಕರೆದರೆ | ಕೆಟ್ಟು ಪೋಗದಿರೀಗ        ||೧೯೭||

ರಾಗ ತೋಡಿ ಏಕತಾಳ

ನಿಷ್ಠುರದ ನುಡಿಯ ನೀನು | ಎಷ್ಟು ಪೇಳಿದರು ಬೆದರಿ |
ಬಿಟ್ಟು ಪೋಪಳಲ್ಲಾ ನಿನ್ನ | ಕಟ್ಟಿ ಒಯ್ವೆನು    ||೧೯೮||

ರಾಗ ಭೈರವಿ ಅಷ್ಟತಾಳ

ಎಂದ ಮಾತನು ಕೇಳುತ | ರಾಮನು ಕ್ರೋಧ | ದಿಂದಲಿ ಗರ್ಜಿಸುತ ||
ಮಂದಮತಿಯೆಯೆನ್ನ | ಕಟ್ಟುವೆನೆಂಬುವ | ನಿಂದೆ ಮಾತಾಡುವೆಯ       ||೧೯೯||

ಹೀನಬುದ್ಧಿಗಳೆನ್ನೊಳು | ಬರುವುದುಂಟೆ | ಮಾನಿನಿಯಾದೆನ್ನೊಳು ||
ಜ್ಞಾನವಿಲ್ಲದ ನುಡಿ | ಉಸಿರದೆಯೆನ್ನಯ | ಸೂನುಗೆ ಲಗ್ನಗೈಸು  ||೨೦೦||

ಆ ಮಾತಾಡದಿರೆಮ್ಮೊಳು | ನಿನ್ನಯ ಕಂದ | ಆನೆಯ ಮೊಗಕೆ ಕೇಳು ||
ಭಾಮಾಮಣಿಯು ಎನ್ನ | ಕುವರಿಯ ಕೊಡು ಎಂಬೀ | ನಾಮವುಚ್ಚರಿಸಬೇಡ       ||೨೦೧||

ದೇವರ ದೇವನೆಂದು | ಯೆನ್ನಯ ಸುಕು | ಮಾರಗೆ ಕೇಳು ಇಂದು ||
ಯಾವ ಕಾರ್ಯಕು ಸುರು | ಪೂಜೆಯ ಗೈವರು | ಆ ವಿವರವ ನರಿಯೆ     ||೨೦೨||

ಭಾಮಿನಿ

ತರುಣಿ ಕೇಳೆಲೆ ನಿನ್ನನೀಕ್ಷಣ |
ಕರುಳಬಗಿಯುವೆನೆಂದರೆಯುಮೇಣ್ |
ತರುಣಿಹತ್ಯದ ದೋಷಕಂಜುವೆನೆನುತ ಉಸಿರಿದನು ||
ಕರೆದು ಯಾದವಸೈನಿಕರನೀ |
ದುರುಳೆಯನು ಪುರದಿಂದ ನೂಕಿರಿ |
ಬರಿದೆ ಪೋಗುವಳಲ್ಲ ಈ ಕ್ಷಣವೆನುತ ಹಲುಮೊರೆದ   ||೨೦೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದು ಹಲಧರನುಸಿರಲಾಕ್ಷಣ | ಬಂದ ಯದುವರರನ್ನು ಕಾಣುತ |
ಅಂದು ಗಣರನು ನೋಡುತೆಂದಳು | ಮಂದಗಮನೆ   ||೨೦೪||

ಬರುವ ಯಾದವರನ್ನು ಹಿಂದಕೆ | ಮರಳಿ ನೂಕಿರಿ ಪ್ರಾಣ ತೆಗೆಯದೆ |
ಧುರದಿ ಸೋಲಿಸಿರೆಂದು ನುಡಿಯಲು | ಹರನ ತನುಜ ||೨೦೫||

ಭೋರುಗುಡಿಸುತ ವೀರಭದ್ರನು | ಮೀರಿ ಬರುತಿಹ ಯಾದವರ ರಣ |
ಶೂರ ಪಿಂಪಿಂದೊತ್ತಿ ನುಡಿದನು | ಆರುಭಟಿಸಿ ||೨೦೬||

ರಾಗ ಘಂಟಾರವ ಅಷ್ಟತಾಳ

ಕಾಣುತಾಕ್ಷಣ ಸಾಂಬನು ಮುಂದೊತ್ತಿ |
ಸಾಣೆಯಲಗನು ಕರೆದು ಪೇಳಿದ | ಕೇಣವಿಲ್ಲದ ರೌದ್ರದಿ          ||೨೦೭||

ಯಾರೆಲೋ ಭೂತ ಸಾರಿದೆ ಯಾರಲ್ಲಿ |
ನಾರಿ ಸಹಿತಲಿ ಬಂದು ಸುಮ್ಮನೆ | ಮಾರಿಗೌತಣವಾದಿರೆ       ||೨೦೮||

ಕೇಳೊ ಮಾನವಭೂತ ನಿಮ್ಮವರನ್ನು |
ಕೋಳುಗೊಂಬುದಕೀಗ ಬಂದಿದೆ | ತಾಳು ತಾಳೆನುತೆಚ್ಚನು     ||೨೦೯||

ಎರಗೆ ಮುಷ್ಟಿಯೊಳೊರಗಲು ಸಾಂಬನು |
ಭರದಿ ಸಾತ್ಯಕಿ ಬಂದು ಎರಗಿದ | ಭರಿತ ಬಾಣವನಾಕ್ಷಣ        ||೨೧೦||

ಚೀರಿ ಆರ್ಭಟೆಗೈಯಲು ಹರಸುತ |
ಭಾರಿ ಮುಷ್ಟಿಯೊಳಾಗ ಪೊಯ್ಯಲು | ವೀರ ಯದುವರರೆಲ್ಲರು ||

ಕಂದ

ಕರಹತಿ ಸೈರಿಸಲಾರದೆ |
ಉರುತರ ಭೀತಿಯೊಳ್ ಯಾದವರಾಗಳ್ ಅಲ್ಲಿಂ ||
ದಿರದೆ ಪಲಾಯನಗೆಯ್ಯಲು |
ಹಲಧರ ಕಾಣುತ ತಾ ಕ್ರೋಧದೊಳಿದಿರಾದಂ          ||೨೧೧||

ರಾಗ ಮಾರವಿ ಮಟ್ಟೆತಾಳ

ಕಂಡು ಹರನ ಸತಿಯು ಕ್ರೋಧ | ಗೊಂಡು ಮುಂದೆ ನಿಂದು ನುಡಿದಳ್ ||
ದಂಡಧರನ ಪುರಕೆ ತೆರಳ್ವ | ದಿಂಡುತನ ಬಿಡೊ       ||೨೧೨||

ಎಲಗೆ ಹೆಣ್ಣು ಹೆಂಗಸೈಸೆ | ಕಲಹಕೆನುತ ನೀ ನಮ್ಮೊಡನೆ ||
ಛಲದಿ ಬಂದು ನುಡಿಯಬೇಡ | ಹಲವು ಮಾತನು      ||೨೧೩||

ಹಲವು ಮಾತ ನುಡಿವಳಲ್ಲ | ಕಲಹಕೆನುತ ಬಂದುದಿಲ್ಲ ||
ಸುಲಲಿತಾಂಗಿಯನ್ನು ಕೊಟ್ಟು | ಕಳುಹು ನಮ್ಮನು     ||೨೧೪||

ತರಳೆ ಸುದ್ದಿ ಆಡಬೇಡ | ತರುಣಿ ನಿನ್ನ ಕುವರನಿಂಗೆ ||
ಧರಣಿ ಮಗುಚೆ ಕೊಡೆನು ಧುರದಿ | ಕರುಳನುಗಿವೆನು  ||೨೧೫||

ಅಷ್ಟು ಪಂಥ ನಿನ್ನೊಳಿರಲು | ಸೃಷ್ಟಿಯಿರುವ ತನಕ ಸುತಗೆ ||
ಪಟ್ಟದರಸಿಯನ್ನು ಗೈವೆ | ಕುಟ್ಟಿ ನಿನ್ನನು      ||೨೧೬||

ರಾಗ ಭೈರವಿ ಮಟ್ಟೆತಾಳ

ಎಂದ ಮಾತ ಕೇಳಿ ಕ್ರೋಧದಿಂದ ರಾಮನು |
ಸಂದ ಕಳಚುವಂತೆ ಮುಸಲದಿಂದ ಪೊಯ್ದನು         ||೨೧೭||

ಬರುವ ಮುಸಲವನ್ನು ಕಂಡು ತಡೆದು ಬಡೆಯುತ |
ಭರದಿ ಕಡಿಯೆ ಕಂಡು ರಾಮ ಕರದ ಹಲವ ತಾ        ||೨೧೮||

ಬಿಡಲು ಗಿರಿಜೆ ತಡೆದು ಸೂರೆಗೊಳಲು ಗೆಲವನು |
ದುಗುಡದಿಂದ ರಾಮನಾಗ ಒಡನೆ ಹರಿಯನು          ||೨೧೯||

ಕರೆದು ಪೇಳ್ದ ನಡೆದ ಪರಿಯ ಹರನ ಸತಿಯನು |
ಇರದೆಗೆಲಿದು ಬಾರೆನುತ್ತ ಒರೆದನಾತನು     ||೨೨೦||

ರಾಗ ಕಲ್ಯಾಣಿ ಅಷ್ಟತಾಳ

ಮರುಳಾದೆ ಯಾತಕಣ್ಣ | ಗಣಪತಿಗೀಗ | ತರಳೆಯ ಕೊಡಲು ಮುನ್ನ ||
ಸಿರಿಗೆ ಸಾಮ್ರಾಜ್ಯಕ್ಕೆ ಸರಿಯುಂಟೆ ಅಣ್ಣಯ್ಯ | ಹರನ ತನುಜನಾತ ವರವ ಪಾಲಿಸುವಾತ   ||೨೨೧||

ಬೇಡಿದಿಷ್ಟಾರ್ಥವನು | ಈಯುವುದೆಂದು | ಮಾಡಿಹ ಆಜ್ಞೆಯನು ||
ರೂಢಿಯ ಜನರೆಲ್ಲ ಮಾಡುವ ಪೂಜೆಯ | ಗಾಢದಿ ಒಲಿಯುವ ಹರನ ಕಾರುಣ್ಯದಿ  ||೨೨೨||

ಹರ ನಮ್ಮ ವಶನಹನು | ಗಿರಿಜೆ ಸಹ | ಪರಮ ಬಾಂಧವಳು ಇನ್ನು ||
ಪರಿಪರಿ ಹೆಸರುಳ್ಳ ಪ್ರಮಥಾದಿ ಗಣರೆಲ್ಲ | ನಿರತದಿ ತಾವ್ ನಮ್ಮ ವಶವರ್ತಿಯಹರಯ್ಯ    ||೨೨೩||

ಭಾಮಿನಿ

ಅನುಜನಾಡಿದ ನುಡಿಯ ಕೇಳುತ |
ಮನದಿ ಕ್ರೋಧವ ಕೊಂಡು ರಾಮನು |
ಅನುಜ ನೀನೆಂದುಸಿರ‍್ದರೀಪರಿ ಮನವ ನಿನಗೆಂದ ||
ನೆನೆಯದಾಡಿದೆ ಪೋಗಿ ನೀನಾ |
ವನಿತೆಸೇವೆಯ ಗೈದು ಬಾಳಿಕೊ |
ಯೆನುತ ಕಿಡಿಕಿಡಿಯಾಗೆ ಕಾಣುತ ದನುಜರಿಪು ನುಡಿದ ||೨೨೪||

ರಾಗ ಸುರುಟಿ ಏಕತಾಳ

ಸೈರಿಸು ಕೋಪವನೀಗ | ನೀ | ವೈರವ ಮಾಡಿದರಾಗ ||
ಭೈರವ ಮೊದಲಾದವರೊಳುಯೆಮ್ಮಯ |
ಪೌರುಷ ಮೆರೆಯದುಯೆನ್ನುತ ಉಸಿರಿದೆ      ||೨೨೫||

ಪೋಗುವೆ ನಾನೀಗಳಿಗೆ | ಏ | ನಾಗುವುದೋ ಧುರದೊಳಗೆ ||
ಆಗು ಹೋಗುಗಳ ಭಾಗ್ಯವು ನಿನ್ನದು |
ಸಾಗುವೆನೆನುತಲಿ ನಡೆದ ಮುರಾರಿಯು ||    ||೨೨೬||

ರಾಗ ಭೈರವಿ ತ್ರಿವುಡೆತಾಳ

ಬಂದನಾಗ | ಶ್ರೀಹರಿ | ಬಂದನಾಗ || ಪಲ್ಲವಿ ||
ಸ್ಯಂದನದಿ ಕುಳಿತಾಗ ತನ್ನಯ | ಮಂದಗಾಮಿನಿ ಮಡದಿ ರುಕ್ಮಿಣಿ |
ಅಂದದಿಂದಲಿ ಸತ್ಯಭಾಮೆಯು | ಬಂದರಾಕ್ಷಣದೊಳಗೆ ಸಮರಕೆ || ಬಂದನಾಗ    ||೨೨೭||

ಇದಿರು ಬರೆ ನೋಡುತ್ತ ಪಾರ್ವತಿ | ಕದನಕೆನ್ನುತ ಪೊರಡುತ ||
ಅದನರಿತು ಹರಿತಾನು ತನ್ನಯ | ವದನವನು ಗಂಟಿಕ್ಕುತ || ಬಂದನಾಗ ||೨೨೮||

ಸದಮಲಾತ್ಮಕ ಬರಲು ಕಾಣುತ | ಹದನವರಿಯದೆ ಬೆದರಿ ಪ್ರಮಥರು ||
ವಿಧವಿಧದಿ ಧೈರ್ಯವನು ತಾಳುತ | ಅದುಭುತದಿ ತಾವ್ ನಿಂದರು || ಬಂದನಾಗ ||೨೨೯||

ರಾಗ ಭೈರವಿ ಅಷ್ಟತಾಳ

ಭಳಿರೆ ಮೆಚ್ಚಿದೆ ಶಭಾಸು | ಪಾರ್ವತಿ ನಿನ್ನ | ಬಳಗವ ಕಂಡೆ ಲೇಸು ||
ಹಲವು ಭೂತಂಗಳನಿತನೇಕೆ ಕರೆತಂದೆ | ಛಲವ ಕಾಂಬೆನು ನಿನ್ನಯ     ||೨೩೦||

ಮುರಮಥನನೆ ಲಾಲಿಸು | ನಾನೆಂಬುವ | ಪರಿಯ ನೀನದ ಗ್ರಹಿಸು ||
ತರಳೆ ಯೋಗಿನಿಯನ್ನು ತರಳಗೆ ಪರಿಣಯ | ವಿರಚಿಸು ಶೀಘ್ರದಲಿ        ||೨೩೧||

ತರುಣಿಯ ಕೊಡದಿರ್ದಡೆ | ನೀ ಗೈವುದೇನ್ | ಅರುಹೀಗ ಎನ್ನ ಕೂಡೆ ||
ತರಳೆಯ ಕೊಡುವುದು ಬಿಡುವುದು ಅಣ್ಣನ | ಕರೆದು ಕೇಳಿಕೊ ನೀ ನಡೆ   ||೨೩೨||

ಕೊಡದಿರ್ದಡೀಗ ಕೇಳು | ಯುದ್ಧದಿ ನಿಮ್ಮ | ಹೆಡೆಮುರಿ ಬಿಗಿದೀಗಳು ||
ತಡೆಯದೆ ಕುವರಿಯ ಒಯ್ವೆನು ದಿಟವಿದು | ಕಡೆಗೆ ಕೇಳುವೆ ಅಣ್ಣನ       ||೨೩೩||

ಪಂಥ ಪೌರುಷ ನಿನ್ನಲ್ಲಿ | ಇರ್ದಡೆ ಹಿಂದೆ | ಕಾಂತೆಯಜ್ಞದ ಮುಖದಿ ||
ನಿಂತುರಿಯೊಳು ಬೆಂದು ಪೋದುದೇತಕೆ ಪೇಳು | ಹೊಂತಕಾರಿಗಳಿರಲು ||೨೩೪||

ಪಿತನೆಂದು ಭಾವಿಸದೆ | ನ್ಯಾಯವ ಬಿಟ್ಟು | ಅತುಳರ ನೀಗಿಸಿದೆ ||
ಸುತೆಯನ್ನು ಕೊಡದಿರೆ ನಿಮ್ಮನೆಲ್ಲರ ಯಜ್ಞ | ಗತಿಯ ಗೈವೆನು ನೋಡಿಕೊ         ||೨೩೫||

ಎಂದ ಮಾತನು ಕೇಳುತ | ಕ್ರೋಧದಿ ಹರಿ | ಯಂದು ಚಕ್ರವ ತಿರುಹುತ ||
ಲಿಂದೆ ಪೊಡೆಯುವೆನೆಂಬನಿತರೊಳ್ ಶಕ್ತಿಯ | ನಂದನಂದನಗೆಸೆಯೆ     ||೨೩೬||

ಕಂದ

ಗಿರಿಸುತೆ ಬಿಟ್ಟಿಹ ಶಕ್ತಿಯು |
ಉರುತರ ಶರ ನಾಟಲ್ ಮುರಮಥನನು ರಥದಲಿ ||
ಒರಗಿರೆ ಪರಿಯನು ಕಾಣುತ |
ತರುಣೀಮಣಿ ಭಾಮೆಯು ಅತಿಕ್ರೋಧದೊಳಾಗಂ      ||೨೩೭||

ರಾಗ ಮಾರವಿ ಏಕತಾಳ

ಸರಳಿನ ಮಳೆಗರೆಯುತ್ತ | ಅತಿ | ತ್ವರಿತದಿ ಬರೆ ಕಾಣುತ್ತ ||
ಗಿರಿಜೆಯು ವತ್ತರಿಸುತ್ತ | ತಾ | ನೊರೆದಳು ಮೂದಲಿಸುತ್ತ       ||೨೩೮||

ತರುಣಿ ನೀನ್ಯಾರೆಲೆ ಪೇಳು | ಪದಿ | ನಾರ್ ಸಾವಿರ ಹೆಂಗಳೊಳು ||
ಅರಿಯೆನು ನಿನ್ನನು ನಾನು | ನೀ | ನರುಹಲೆ ಗರ್ವಗಳೇನು     ||೨೩೯||

ಎನ್ನನು ಕೇಳ್ವೆಯ ನೀನು | ನಾ | ನೆನ್ನುವ ನುಡಿ ಕೇಳ್ ನೀನು ||
ಮುನ್ನ ಸತ್ರಾಜಿತದೊರೆಗೆ | ನಾ | ಕನ್ನೆಯು ಕೇಳ್ ಶ್ರೀವರಗೆ    ||೨೪೦||

ಮಡದಿಯು ನಾ ಕೇಳೀಗ | ನಿನ್ನ | ಸಡಗರ ನಡೆಯದು ಬೇಗ ||
ನಡೆ ನಡೆ ಸುಮ್ಮನೆ ಪುರಕೆ | ನಿನ್ನ | ಬಡಿವಾರವ ಬಿಡು ಜೋಕೆ ||೨೪೧||

ಕೇಳುತ ನುಡಿಯನು ಗಿರಿಜೆ | ಆ | ಶೂಲವ ತೆಗೆದಿಡೆ ಕಡೆಗೆ ||
ನೀಲಾಂಗನ ಗತಿಯಾಗೆ | ಈ | ಕಾಳಗ ಬಿಟ್ಟಳು ಮೇಗೆ          ||೨೪೨||

ಒರಗಿರೆ ರಥದೊಳು ಕಂಡು | ಬರು | ತ ರುಕ್ಮಿಣಿ ಕೋಪಗೊಂಡು ||
ಶರಚಾಪವ ಕೈಗೊಂಡು | ನಿಂ | ದೊರೆದಳು ಧುರಮುಂಕೊಂಡು          ||೨೪೩||

ರಾಗ ಸೌರಾಷ್ಟ್ರ ಮಟ್ಟೆತಾಳ

ಗಿರಿಜೆ ಕೇಳೆನಮ್ಮ ಪುರಕೆ | ಭರದಿ ಪ್ರಮಥರನ್ನು ಕೂಡಿ |
ಧುರವ ಗೈವ ಪರಿಯಿದೇನು | ಒರೆಯದಿರ್ದರೀಗ ನಿನ್ನ |
ಹರಣಗೊಂಬೆ ನೋಡಿಕೊಳ್ಳೆ | ಪರಮಸಹಸಿ ಎನ್ನ ಕೈಯೊಳ್ |
ಧುರವು ನಿನಗೆ ಸಲ್ಲದೀಗೆಲೆ | ನೀ ಪೋಗದಿರಲು |
ಕರುಳನುಗಿವೆ ತಾಳಿಕೊಳ್ಳೆಲೆ |  ನೀ ಬಂದು ನಿಂತು
ಪರಿಯ ಎನಗೆ ಹೇಳು ಬೇಗೆಲೆ      ||೨೪೪||

ಬಂದ ಪರಿಯ ಕೇಳುಯೆನ್ನ | ಕಂದ ವಿನಾಯಕಗೆ ಬಲನ |
ನಂದನೆಯನು ಲಗ್ನ ಗೈಸು | ವಂದಕೀಗ ಕೇಳ್ದೆ ಕೊಡದ |
ರಿಂದಲೀಗ ಧುರದಿ ಗೆಲಿದೆ | ಮುಂದುವರಿಯಬೇಡ ನಿನ್ನ |
ಸಂದ ಕಳಚಿಬಿಡುವೆ ನೋಡೆಲೆ || ರುಕ್ಮಿಣಿಯೆ |
ಬಂದ ಹಾಗೆ ತೆರಳಿ ಪೋಗೆಲೆ | ನೀನಿಂದು ಎನ್ನ |
ಮುಂದೆ ನಿಲ್ಲಬೇಡ ಕೇಳೆಲೆ ||೨೪೫||

ಹರುಷವಾಯ್ತು ನುಡಿಯ ಕೇಳಿ | ತರಳ ಗೌರಿಸುತನೆನುತ್ತ |
ಕರೆವರೆಲ್ಲ ಜಗದಿ ಹಿಂದೆ | ಉರಿಯೊಳೈದೆ ಮಡಿದ ಗೌರಿ |
ಭರದಿ ಬಂದು ಕೇಳೆ ಸುತೆಯ | ಪರಿಣಯವನು ಗೈಸುವೆನು |
ತರಳೆ ನಿನಗದೇಕೆ ಲಗ್ನದ || ಗೊಡವೆ ಬೇಡ |
ತೆರಳು ನಿನ್ನ ಠಾಣೆಯಕ್ಕದ | ಕೊಡುವರಲ್ಲ |
ತರಳೆಯನ್ನು ಮೊಗವು ಕರಿಯದ    ||೨೪೬||