ರಾಗ ಭೈರವಿ ಅಷ್ಟತಾಳ

ನುಡಿಯ ಕೇಳುತ ಪಾರ್ವತಿ | ಕ್ರೋಧವ ಕೊಂಡು | ಗುಡುಗುಡಿಸುತ ಗರ್ಜಿಸಿ ||
ಹುಡುಗನ ಜರೆದೆಯ ಫಡ ನಿನ್ನ ನಾಲಿಗೆ | ಒಡನೆ ಸೀಳುವೆ ನಿಶ್ಚಯ      ||೨೪೭||

ಬಿಡು ನಿನ್ನ ಬಡಿವಾರವ | ಬೂದಿಯ ಗುಡ್ಡೆ | ಬಿಡದೆ ಕಾಯುತ ಮೆರೆವ ||
ಬಡ ಜೋಗಿ ಭದ್ರಂಗೆ ಮರುಳಾಗಿ ವರಿಸಿದೆ | ಒಡಲನ್ನು ಸುಡಬಾರದೆ    ||೨೪೮||

ತನ್ನ ತಾನರಿಯದೋಲು | ಪೇಳುವೆ ಏಕೆ | ನಿನ್ನ ಗಂಡಗೆ ಒಡಲು ||
ಗನ್ನ ಘಾತಕಿಯಾಗಿ ಹಾಲು ಮೊಸರು ಬೆಣ್ಣೆ | ಯನ್ನು ಕದಿವ ಚೋರಗೆ    ||೨೪೯||

ಮರುಳಾಗಿ ಮುದಿ ವಿಪ್ರನ | ಕಳುಹಿಕೊಟ್ಟು | ಕರೆಸಿದೆ ಬಹುಜಾರನ ||
ಅರಿಯದಂದದಿ ಮಾತೆಪಿತರನ್ನು ವಂಚಿಸಿ | ಮರಿಯಾದೆ ಬಿಟ್ಟವಳೆ       ||೨೫೦||

ಬಾಯ ಪೌರುಷವೇತಕೆ | ಶತಕಂಠನ | ಪಾಯದಿ ಸಂಹರಿಸಿ ||
ದೇವತೆಯರಿಗೆಲ್ಲ ಸುಖಪಡಿಸಿರ್ಪೆನು | ಮಾಯಾಗಾತಿಯೆ ನೀನೀಗ       ||೨೫೧||

ಮುಚ್ಚು ಮುಚ್ಚೆಲೆ ಬಾಯನು | ಶುಂಭನಿಶುಂಭರ | ಕೊಚ್ಚಿ ಕಳೆದು ಮತ್ತಿನ್ನು ||
ಬೆಚ್ಚಿದ ಸರ್ವರ ಸಂತಸಬಡಿಸಿದೆ | ಹುಚ್ಚು ಮಾತಾಡದಿರು      ||೨೫೨||

ಅಂಥ ಪೌರುಷವಿರ್ದರೆ | ತಾಳಿಕೊಯೆನು | ತಂತು ಶರವನು ಹೂಡಿಕೆ ||
ಹೊಂತಕಾರದಿ ಬಹ ಶರವನ್ನು ತುಂಡಿಸಿ | ನಿಂತು ತಾ ಶಸ್ತ್ರವನು         ||೨೫೩||

ಬಿಡಲು ಭೋರ್ಗುಡಿಸುತ್ತಲೆ | ಬಂದೆರಗಲು | ಒಡನೆ ರುಕ್ಮಿಣಿಯಾಗಲೆ ||
ಕಡಲಶಯನ ಕೃಷ್ಣಯೆಂದು ಮೂರ್ಛೆಯ ತಾಳೆ | ತಡೆವವರಿಲ್ಲದಾಗೆ      ||೨೫೪||

ಭಾಮಿನಿ

ಚಂಡಿಯಂದದಿ ಮೆರೆಯಲಾಗಳೆ |
ಕಂಡು ಕಾಶ್ಮೀರೇಶ ಈಪರಿ |
ಕೆಂಡದಂತುರಿಮಸಗಿ ಪೇಳಿದ ದಂಡಧರನಂತೆ ||
ಹಿಂಡಿ ಕಳೆವೆನು ಬಂದ ಪ್ರಮಥರ |
ದಿಂಡೆ ಹೆಂಗುಸೆ ನಿನ್ನ ನೀಕ್ಷಣ |
ಖಂಡಪರಶುವೆ ಬರಲಿ ಸಮರಕೆ ಗೆಲುವೆ ನೋಡೆಂದ  ||೨೫೫||

ರಾಗ ಮಾರವಿ ಏಕತಾಳ

ಎನುತೀಪರಿಯೊಳು ಗರ್ಜಿಸಿ ನುಡಿದಿಹ | ಜನಪತಿ ಸಮ್ಮುಖದಿ ||
ಅನುವರಕಾಗಳೆ ಸೈಂಧವ ಚೇದಿಪರ್ | ಕನಲುತ ಪೊರಮಡಲು         ||೨೫೬||

ಬಂದಿಹ ನೃಪರನು ಕಾಣುತಲಾಗಳೆ | ಚಂದದಿ ನಂದೀಶ ||
ಕಂದರ್ಪಾರಿಯ ಸುತ ಭೃಂಗೀಶರು | ಒಂದೆ ಮನಸಿನೊಳಗೆ    ||೨೫೭||

ಪೊರಟಿದಿರಾಗುತ ಸರಿಸರಿ ಕಾದಲು | ಉರುತರ ವಿಕ್ರಮದಿ ||
ತರಿದರು ಸೈನ್ಯವ ಸೈಂಧವ ಮುಖ್ಯರು | ತಿರುಗಿದರ್ ಪುರಕಾಗ          ||೨೫೮||

ಕಾಣುತ ಕೌಂಡ್ಲಿಕ ಮಾಣದೆ ತಿರುಗಿದ | ಸೈನಿಕರಿಗೆ ಪೇಳ್ದ ||
ಹಾನಾಹಾನಿಯ ಗೈವೆನು ಬೆದರದೆ | ಈ ಪ್ರಮಥೌಘವನು      ||೨೫೯||

ಶರವನ್ನೆಸೆಯುತ ಬರುತಿಹ ನೃಪರನು | ಅರಿಬಲದವರ್ ಬಂದು ||
ಉರುತರ ಭೀತಿಯ ತಾಳುತ ತಿರುಗಲು | ಹರನರಸಿಯು ಬಂದು        ||೨೬೦||

ರಾಗ ಮಾರವಿ ಮಟ್ಟೆತಾಳ

ಎಲವೊ ದುರುಳ ಸಮರಗೈವ ಪರಿಯದೇನೆಲಾ |
ಒಲವಿನಿಂದ ಬಂದುದೇಕೆ ಪೇಳು ನೀನೆಲಾ   ||೨೬೧||

ಮೊದಲೆ ರಾಮ ಎನಗೆ ಪತ್ರ ಮುದದಿ ಬರೆಯುತ |
ಯದುಕುಲೇಂದ್ರಸುತೆಯನೆನಗೆ ಮುದುವೆಯೆನ್ನುತ    ||೨೬೨||

ಕಳುಹಿಸಿರ್ಪ ಕಾರಣದಿ ಬಂದೆ ನಾನೆಲೆ |
ಗೆಲವಿನಿಂದ ನೀನು ಬಂದ ಪರಿಯದೇನೆಲೆ   ||೨೬೩||

ಎನ್ನ ಕುವರಗೆನುತ ಮೊದಲೆ ಬ್ರಹ್ಮಲಿಖಿತವು |
ಅಣ್ಣಸುತೆಯ ಕೊಂಡು ಪೋಪುದೆನ್ನ ನೇಮವು          ||೨೬೪||

ಹೆಣ್ಣಿನಾಸೆಗಾಗಿ ಬಂದು ಸಾಯಬೇಡೆಲೆ |
ಮುನ್ನ ನೀನು ತೆರಳಿ ಪೋಗು ಬಂದ ಹಾಗೆಲೆ ||೨೬೫||

ಬರಿದೆ ಪೋಪಳಲ್ಲ ಕೇಳು ದುರುಳ ನೀನೆಲಾ |
ತರಳೆಯನ್ನು ಕೊಂಡುಪೋಪ ಪರಿಯ ನೋಡೆಲಾ     ||೨೬೬||

ರಾಗ ಕಾಂಭೋಜಿ ಅಷ್ಟತಾಳ

ಎಂದು ತಮ್ಮೊಳಗೆ ಮೂದಲಿಸುತ್ತ | ಬೇಗ | ನಿಂದು ಸರಳ ಹೊಡೆ ನೋಡುತ್ತ ||
ಇಂದುವದನೆ ಅದ ಕಡಿಯುತ್ತ | ಬದ | ಲೊಂದು ಶಕ್ತಿಯ | ಬಿಟ್ಟು ಗಜರುತ್ತ         ||೨೬೭||

ಬರುವ ಶಕ್ತಿಯ ಕಂಡು  ಕಡಿದನು | ಬಲು | ಉರುತರ ಬಾಣವ ಹೊಡೆದನು ||
ಗಿರಿಸುತೆಗಾ ಶರ ನಾಂಟಲು | ತರ | ಹರಿಸಿ ಮೂರ್ಛೆಯೊಳಾಗ ಬೀಳಲು ||೨೬೮||

ಚೇತರಿಸುತಲೊದ್ದು ಗಣರಿಗೆ | ಗಿರಿ | ಜಾತೆಯು ಉಸಿರ್ದಳು ತರಳಗೆ ||
ಆತುರದಿಂದಲಿ ಲಗ್ನವ | ನಾನು | ವೋತುಗೆಯ್ಯಲು ಬಂದ ಹದನವ      ||೨೬೯||

ತಿಳಿದಿರ್ದು ಪಿತನಿನ್ನು ಬರಲಿಲ್ಲ | ಈ | ಗಳಿಗೆಯೊಳ್ ಪರಿಣಯ ಗೈಲಿಲ್ಲ ||
ನಳಿನಜಲಿಪಿಯು ಎಂತಿರ್ಪುದೊ | ಖಳ | ಗೆದುರಾಗಿ ಕಾದುವರಿಲ್ಲವೊ     ||೨೭೦||

ಏನಮಾಡುವುದೆಂದು ತಿಳಿಯದು | ತನ್ನ | ಸೂನುವ ನೋಡುತ್ತ ಮನನೊಂದು ||
ಕಾಣುತ್ತ ತರಳನು ಕ್ರೋಧದಿ | ತನ್ನ | ಬಾಣವ ಕೈಕೊಂಡ ಶೌರ್ಯದಿ     ||೨೭೧||

ಭಾಮಿನಿ

ಚಿಂತೆ ಬೇಡೆಲೆ ತಾಯೆ ದುರುಳಗೆ |
ಅಂತಕನು ತಾನೀಗ ವೈರಿಯ |
ಸಂತತಿಯ ಗೆಲುವುದಕೆಯೆನ್ನನು ಪರಸಿ ಕಳುಹೀಗ ||
ಸಂತವಿಸಿ ಮಾತೆಯೊಳು ನುಡಿವುತ |
ಅಂತಕಾಂತಕನಂತೆ ಪೊರಮಡೆ |
ನಿಂತು ಕುವರನ ತಕ್ಕವಿಸಿ ಪರಸುತ್ತ ಕಳುಹಿದಳು      ||೨೭೨||

ರಾಗ ಕಾಂಭೋಜಿ ಝಂಪೆತಾಳ

ಕರದಿ ಧನುಶರವಾಂತು ತರಳ ಬರುವುದ ಕಂಡು | ಅರಸ ನಸುನಗುತೆಂದನಾಗ ||
ಕರಿಯಮೊಗನಾಗಿರುವ ಮನುಜನೋ ಮೃಗನೆಂದು | ಅರಿಯದಾದೆನು ಮುದದೊಳೀಗ     ||೨೭೩||

ಎಲವೊ ನೀನಾರು ಮಾನುಷನೊ ಮೃಗವೋ  ಎಂಬ | ಒಳವ ಪೇಳೆನಗೆ ನೀನಿಂದು ||
ಕಲಹಕ್ಕೆ ಬಂದೆಮ್ಮೊಳಳವಿಗೊಟ್ಟುದದೇಕೆ | ಛಲ ಬೇಡ ಮರುಳೆ ನಡೆ ಮನೆಗೆ     ||೨೭೪||

ಹುಚ್ಚರಂದದಿ ನುಡಿವೆ ಮುಚ್ಚು ಬಾಯ್ ನೀನೆಮ್ಮ | ಎಚ್ಚರಿಸಿ ಕೇಳ್ವೆ ಯಾರೆಂದು ||
ಹೆಚ್ಚು ಮಾತುಗಳೇಕೆ ಸಮರದಲಿ ನಿನ್ನನುರಿ | ನುಚ್ಚು ಗೈದಪೆನು ನೋಡೆಂದ      ||೨೭೫||

ಮರುಳ ನಾನಲ್ಲ ಕೇಳ್ ತರಳ ನೀನಾಗಿರುವೆ | ದುರುಳತನದಲಿ ನಮ್ಮ ಕೂಡೆ ||
ಧುರಕೆ ಬಂದಿದಿರಾಗಿ ಬರಿಮಾತನಾಡಿದರೆ | ಮರುಳು ಶಾಕಿನಿಗೆ ನಿನ್ನಸುವ        ||೨೭೬||

ಕರುಳಮಾಲೆಯ ಹಿಂದೆ ನರಹರಿಯು ಧರಿಸಿದಂ | ತರಿದು ನಿನ್ನನು ಈಗ ನಾನು ||
ದುರುಳ ನರಮೃಗವಾಗಿ ಬಂದಿಹೆನು ನಾನೀಗ | ಪುರಕೆ ತೆರಳೀಗ ಕೇಳ್ ನೀನು   ||೨೭೭||

ಬಾಯ ಪೌರುಷ ಬೇಡ ಕಾಯುವವರ್ಯಾರ್ ನಿನ್ನ | ಸಾಯಬಡಿದಪೆನು ನಾನೀಗ ||
ಕಾಯದಾಸೆಯು ಇರಲು ನಿನ್ನ ನಿಜವನು ಪೇಳಿ | ನೋಯದಂದದಿ ತೆರಳಿ ಪೋಗು          ||೨೭೮||

ಧುರದಿ ಎನ್ನನು ಕೆಣಕಿ ಹರಣಗೊಂಡವರಿಲ್ಲ | ಬರಿದೆ ಬಾಯಲಿ ಶಾಪವೀಯೆ ||
ಉರಿದು ಪೋಗುವರೆಮ್ಮ ಪೆಸರು ಗಣಪತಿಯೆಂದು | ಕರೆವರೆಲ್ಲರು ಜಗದೊಳಿಂದು ||೨೭೯||

ರಾಗ ಪಂಚಾಗತಿ ಮಟ್ಟೆತಾಳ
ಎಲವೊ ಈಶಕುವರ ಕೇಳು | ಕಲಹ ನಮ್ಮೊಳೇಕೆ ನಿನಗೆ |
ಕೊಳುಗುಳಕ್ಕೆ ಬಂದುದೇಕೆ | ನಿಲದೆ ಪೋಗೆಲಾ        ||೨೮೦||

ದುರುಳ ನೃಪತಿ ಕೇಳು ಬಲನ | ತರಳೆಯನ್ನು ಲಗ್ನಗೈದು |
ಕರೆದುಕೊಂಡು ಪೋಪ ಬಗೆಗೆ | ಬಂದೆ ಕೇಳೆಲಾ       ||೨೮೧||

ತರಳೆಯಾಸೆ ಬಿಟ್ಟು ಪೋಗು | ಧುರವು ನಿನಗೆ ಸಲ್ಲದೀಗ |
ತರುಣಿಯೆನಗೆ ಲಗ್ನಗೈಸಿ ಪುರಕೆ ಒಯ್ವೆನು    ||೨೮೨||

ಬಿಡುವರ್ಯಾರು ಎನಗೆ ಸುತೆಯ | ಕೊಡದಿರೀಗ ಬಲನ ತಲೆಯ |
ಬಡಿದು ಸುತೆಯನೊಯ್ವು ಪರಿಯ | ಕಡೆಗೆ ಕಾಂಬುದು          ||೨೮೩||

ಬೇಡ ಸಾರಿ ಪೇಳ್ದೆ ನಿನಗೆ | ಮಾಡು ಯುದ್ಧವೆನುತ ಸರಳ |
ಜಾಡಿಸಲ್ಕೆ ಕಡಿದ ಕುವರ | ರೂಢಿಪತಿಯನು ||೨೮೪||

ಕೂಡೆ ಶರಗಳಿಂದ ಮುಸುಕಿ | ಆಡಿ ಫಲಗಳೇನೆನುತ್ತ |
ನೋಡುತೀರೈದು ಬಾಣ | ಜೋಡಿಸುತ್ತಲಿ    ||೨೮೫||

ಭಾಮಿನಿ

ಭೂಪ ಕೇಳೇನೆಂಬೆ ಧರಣಿಪ |
ತಾಪದಿಂ ಒರಗುತ್ತಲಾಕ್ಷಣ |
ಕೋಪದಿಂದೆಚ್ಚರಿತು ಕುವರನ ರೂಪು ಬಿಡೆನೆನುತ ||
ಭಾಪು ಭಳಿರೆಲ ನಿನಗೆ ಮೆಚ್ಚಿದೆ |
ಈ ಪರಿಯ ಬಲುಹೆನಿತು ಕುವರನೆ |
ಚಾಪವನು ಇನ್ನೊಮ್ಮೆ ಪಿಡಿಪಿಡಿ ಸಮರಕನುವಾಗು    ||೨೮೬||

ರಾಗ ಭೈರವಿ ಏಕತಾಳ

ಎನುತಲಿ ಗದೆಯನು ಕೊಂಡು | ತಾ | ನನುವಾಗಲು ಮುಂಕೊಂಡು ||
ಗಣಪತಿ ನೋಡುತಲಾಗ | ನೃಪ | ಗನುವಾದನು ತಾ ಬೇಗ     ||೨೮೭||

ಶರಚಾಪವ ತಾ ಪಿಡಿದು | ಬಲು | ಉರುತರ ಬಾಣವ ಹೊಡೆದು ||
ಬರಬರುತಲಿ ಅದ ಮುರಿದು | ಗದೆ | ಯೆರಗಿದ ಕುವರಗೆ ಮುಳಿದು       ||೨೮೮||

ನೆತ್ತಿಗೆ ಯೆರಗಲು ಕುವರ | ಕೆ | ನ್ನೆತ್ತರು ಕಾರುತ ಬವರ ||
ಗೊತ್ತಾಗದೆ ಧರೆಗುರುಳೆ | ತಾ | ಚಿತ್ತದಿ ಹರುಷವ ತಾಳೆ        ||೨೮೯||

ಕಾಣುತ ಗಿರಿಸುತೆ ಆಗ | ಬಾ | ಕ್ಷೋಣಿಪಾಲಕ ನೀ ಬೇಗ ||
ಬಾಣವ ನೋಡುವೆ ನಿನ್ನ | ಕೇಳ್ | ಪ್ರಾಣವ ಕೊಂಬೆನು ಮುನ್ನ ||೨೯೦||

ಎನುತಸ್ತ್ರವ ತಾ ಹೊಡೆಯೆ | ಆ | ಜನಪತಿ ಕಾಣುತ ಮುರಿಯೆ ||
ಕಿನಿಸಿನೊಳಿಡೆ ಕಾಣುತ್ತ | ಬಹ | ಜನಪಗೆ ನುಡಿದಳು ಮತ್ತ      ||೨೯೧||

ರಾಗ ಭೈರವಿ ಅಷ್ಟತಾಳ

ಖಳನೃಪ ಕೇಳು ನೀನು | ಯುದ್ಧವ ಗೈದು | ಕಳಕೊಂಬೆ ಪ್ರಾಣವನು ||
ಲಲನೆಯಾಸೆಯ ಬಿಟ್ಟು ಹೊಳಲ ನೀ ಸಾರತ್ತ | ಗಳಿಗೆಯೊಳ್ ಕಾಂಬುದಿನ್ನು       ||೨೯೨||

ದುರುಳೆ ಹೆಂಗಸೆ ನೀನಿಂದು | ಯುದ್ಧಕೆ ಬಂದು | ಶಿರವ ಕೊಂಬೆಯ ಬೇಡಿಂದು ||
ಪರರಾಯರೊಡನೆ ನೀ ಧುರವನ್ನು ಗೈವಡೆ | ಸುರನಾರಿಯೇನೆ ಪೇಳು   ||೨೯೩||

ದುರುಳತ್ವ ಗೈವ ನೃಪ | ಭೂಮಿಯೊಳಿರೆ | ಶಿರವ ಕೊಂಬುವ ಪ್ರತಾಪ ||
ದುರುಳ ನಿನ್ನನು ಯಮನಿಳಯಕೆ ಕಳುಹುವೆ | ಮರುಳ ನೋಡಿಕೊ ಜತನ         ||೨೯೪||

ನ್ಯಾಯವ ಬಿಟ್ಟು ನಾವು | ನಿನ್ನಂತೆ ಅ | ನ್ಯಾಯದಿ ಬರಲಿಲ್ಲವು ||
ಸಾವಧಾನದಿ ಸುತೆಯಳ ಕೊಡಲೆನ್ನುತ | ನ್ಯಾಯದಿ ಕರೆಸಿರ್ಪನು        ||೨೯೫||

ಬಲನ ತರಳೆಯೆನ್ನಯ | ಸುತಗೆಯೆಂದು | ಒಲವಿಂದ ಕಮಲಭವ ||
ನಿಲದೆ ಫಣೆಯೊಳಾಗ ಬರೆದಿರ್ಪ ನಿನಗಿಂದು | ಲಲನೆ ಸಿಕ್ಕುವಳಲ್ಲವೊ    ||೨೯೬||

ನಿನ್ನ ಕುವರಗೆನ್ನಲಿ | ಮತ್ತೀಗಳು | ನಿನ್ನ ಶಿರವು ಸಹಿತಲಿ ||
ಎನ್ನಯ ಶರಕೆ ಆಹುತಿಯೆಂದು ಬ್ರಹ್ಮನು | ಮುನ್ನ ಬರೆದ ನೋಡಿಕೊ     ||೨೯೭||

ಎಂದ ಮಾತನು ಕೇಳುತ | ಗಿರಿಜೆಯಾಗ | ಲಂದು ರೌದ್ರವ ತಾಳುತ ||
ಮಂದಮತಿಯೆ ನಿನ್ನಾ ಶರವನ್ನು ತೋರೆಂದು | ಒಂದು ಮೂರೊಂದುಶರ         ||೨೯೮||

ಬಿಡಲು ಕಾಣುತ ಭೂಪತಿ | ತುಂಡಿಸುತದ | ಹೊಡೆದನು ಅತಿಕೋಪಿಸಿ ||
ಕಡುಕ್ರೂರ ಶರವಾಗ ಬಿಡದೆ ನಾಂಟಲು ಬಂದು | ಮಡದಿ ಮೂರ್ಛೆಯಗೊಂಡಳು ||೨೯೯||

ರಾಗ ಕಾಂಭೋಜಿ ಝಂಪೆತಾಳ

ನೋಡುತಲಿ ಬಲಭದ್ರ ಮಾಡುತ್ತ ಧೈರ್ಯವನು |
ರೂಢಿಪಾಲಕ ನಿನಗೆ ಜೋಡಿಲ್ಲವೆನುತ ||
ಗಾಢದಿಂ ಸುತೆಯನ್ನು ಮಾಡುವೆನು ಧಾರೆಯನು |
ಜೋಡಿಸೈ ಸಭೆಯ ಇನ್ನೇನು       ||೩೦೦||

ಕರೆ ಪುರೋಹಿತರನ್ನು ತರಳೆಯನು ಶೃಂಗರಿಸಿ |
ತರಲಿ ಮಂಟಪಕೆಂದು ಒರೆದ ಮಂತ್ರಿಯೊಳು ||
ಪರಿಪರಿಯ ಸನ್ನಾಹವೆರಸುತಿರಲಿತ್ತ ಹರ |
ನರಿತನೆಲ್ಲವನು ಮನದೊಳಗೆ       ||೩೦೧||

ಪೋಗಬೇಕೆನುತಾಗ ನಾಗಭೂಷಣನಂದು |
ಬೇಗದಲಿ ಹೊರವಂಟು ಬಂದು ||
ಆಗ ಪ್ರಮಾಥಾದಿಗಳ ಮುಖದಿ ವಾರ್ತೆಯ ತಿಳಿದು |
ಕೂಗುತಾರ್ಭಟೆಗೈವುತೆಂದ         ||೩೦೨||

ಬಲನ ಬಲುಹನು ಕಾಂಬೆ ಛಲದಿ ಕೃಷ್ಣನು ಇಂಥ |
ದುರುಳತನ ಗೈದನೇ ನಮ್ಮ ||
ಬಲವನೆಣಿಸದೆ ವ್ಯರ್ಥ ಕಲಹವನು ಗೈದರೇ |
ಮುಳುಗಿಸುವೆ ದ್ವಾರಕಾಪುರವ      ||೩೦೩||

ಎನುತ ಕೋಪದೊಳಾಗ ವನಿತೆಯನು  ಸಂತೈಸಿ |
ಅನುವರಕೆ ತಾ ನಡೆದನಂದು ||
ಘನತರದ ವೈವಾಹಸಭೆಗೆ ಬರೆ ಕಾಣುತ್ತ |
ಜನಪತಿಯ ಕರೆದು ಪೇಳಿದನು      ||೩೦೪||

ರಾಗ ಮಾರವಿ ಏಕತಾಳ

ದುಷ್ಟ ಕ್ಷಾತ್ರಿಯಕುಲದಲಿ ಜನಿಸಿದ | ಭ್ರಷ್ಟ ಕೌಂಡ್ಲಿಕ ನೀನು ||
ತಟ್ಟನೆ ಇದಿರಾಗೆನ್ನುತ ಸುರಿದನು | ವೃಷ್ಟಿಯ ಸರಳುಗಳ       ||೩೦೫||

ಬರುವಸ್ತ್ರಗಳನು ಪುಡಿಪುಡಿ ಗೈವುತ | ಉರುತರ ಕೋಪದೊಳು ||
ಸರಿಸಕೆ ಬಂದುಸಿರಿದನಾಕ್ಷಣದೊಳು ಹರನಿಗೆ ಹದನವನು       ||೩೦೬||

ರಾಗ ಭೈರವಿ ಅಷ್ಟತಾಳ

ಈಶ ನೀನಾಗಿರುವೆ | ಈ ಸಮಯದಿ | ದೋಷವ ನೀ ಗೆಯ್ಯುವೆ ||
ಲೇಸಿನ ಕಾರ್ಯವ ಗೆಯ್ಯುವ ಬಲನೊಳು | ದ್ವೇಷವ ಸಾಧಿಸುವೆ          ||೩೦೭||

ಎನ್ನ ಸುತಗೆ ಬಲನ | ಕನ್ನೆಯ ಕೊಟ್ಟು | ಮುನ್ನ ಲಗ್ನವ ಗೈವನಾ ||
ಹೆಣ್ಣಿನ ಆಶೆಯೊಳ್ ನೀ ಬಂದು ಬಲನನು | ನಿನ್ನ ವಶಕೆ ಮಾಡಿಹೆ        ||೩೦೮||

ಎನಗೆ ಲೇಖನವ ಹಿಂದೆ | ಬರೆದನೆಂದು | ಮನೆಗೆ ದಿಬ್ಬಣವ ತಂದೆ ||
ಗಣಗೆ ಲಗ್ನವ ಗೈವನೆಂದರೆ ಬಲನೀಗ | ಮನೆಗೆ ಪೋಪೆನು ನಿಶ್ಚಯ      ||೩೦೯||

ಆ ವಿಚಾರವ ನಿನಗೆ | ಕೊಟ್ಟವರಾರು | ಸಾವಿಗಂಜುತ ಸುಮ್ಮಗೆ ||
ಭೂವರೇಣ್ಯನೆ ಪೋಗದಿರ್ದರೆ ನಿನಗೆ ಯಮ | ಠಾವ ತೋರ್ಪೆನು ನೋಡಿಕೊ     ||೩೧೦||

ನೀತಿ ವಿಚಾರವನು | ಮಾಳ್ಪರೆ ನೀನು | ಖ್ಯಾತಿಯ ಪಡೆದವನು ||
ನೀತಿ ತಪ್ಪಿದರೀಗ ನಿನ್ನ ಬಿಡುವರಾರು | ಪಾತಕ ಮಾಡದಿರು    ||೩೧೧||

ದುರುಳಗೆ ನೀತಿಯನು | ಸಂಗರದೊಳು | ಕೊರಳನ್ನೆ ಕಡಿದು ಇನ್ನು ||
ಕರುಳನ್ನು ಶಾಕಿನಿಬಳಗಕ್ಕೆ ಉಣಿಸುವೆ | ಬುರುಡೆಯ ಕೈಕೊಂಬೆನು      ||೩೧೨||

ಎಂದ ಮಾತನು ಕೇಳುತ | ಕೋಪದಿ ಭೂಪ | ಸ್ಯಂದನವಡರಿ ಮತ್ತ ||
ಕಂದರ್ಪಾರಿಯೆ ನಿನ್ನ ಒಂದೆ ಶರದಿ ನಾನು | ಕೊಂದು ಕಳೆವೆ ನೋಡೆಂದ         ||೩೧೩||

ಕಂಡು ಹರನು ಕೋಪದಿ | ನಂದಿಯನೇರಿ | ಕೆಂಡಕಾರುವ ಶರದಿ ||
ಖಂಡಿಸಿದನು ನೃಪಶಿರವನು ತನ್ನಯ | ರುಂಡಮಾಲೆಗೆ ಶೀಘ್ರದಿ          ||೩೧೪||

ಭಾಮಿನಿ

ಋಷಿಕುಲಾಧಿಪರೆಲ್ಲ ಕೇಳಿರಿ |
ಅಸಮ ಸಾಹಸಿ ಕೌಂಡ್ಲಿಕಾಖ್ಯನ |
ಎಸೆವ ಶಿರವನು ರುಂಡಮಾಲೆಗೆ ಅಪಹರಿಸಿ ಹರನು ||
ಬಸಿವ ಕಂಬನಿಯಿಂದ ಮಿಕ್ಕಿನ |
ವಸುಧೆಪಾಲರು ಪುರಕೆ ತೆರಳಲು |
ಅಸುರರಿಪು ಬಂದಾಗ ಶಂಕರಗುಸಿರಿದನು ಮತ್ತೆ       ||೩೧೫||

ರಾಗ ತೋಡಿ ಅಷ್ಟತಾಳ

ಈಶ ನೀನೆಲ್ಲಿಹೆ ಕೋಪಿಸಿಕೊಂಡು ನೀ | ದೋಷವಗೈದೆಯಲ್ಲ ||
ಲೇಸು ಕಾರ್ಯಕೆ ಬಂದ ಭೂಪನ ಕೊಂದೆನಿ | ನ್ನೇಸು ಹೇಳಿದರಿಲ್ಲವು     ||೩೧೬||

ಗಣನಾಥನಿಗೆ ಲಗ್ನಗೈಯಬೇಕೆಂಬಾಗ | ಗಣನೆಯಿಲ್ಲದೆ ಬಂದಿರ್ಪ ||
ಬಣಗುಭೂಪನ ಜೀವ ವಶಮಾಡಿಕೊಂಡಿಹೆ | ರಣಕನುವಾಗಿಹನ          ||೩೧೭||

ಅಗ್ರಜನಾತಗೆ ಸುತೆಯನ್ನು ಕೊಡುವೆನೆಂ | ದಾಗ್ರಹಿಸುತ ಆತನ ||
ಶೀಘ್ರದಿಂ ದಿಬ್ಬಣವೆರಸಿ ಬರುವರೆ ಸ | ಮಗ್ರವ ಕೂಡಿ ಬಂದ    ||೩೧೮||

ತರಳಗೆ ಕೊಡಬೇಕೆಂದೆನುತೆಮ್ಮ ತರುಣಿಯು | ಅರುಹಲಿಲ್ಲವೆ ಮೊದಲೆ ||
ದುರುಳಗೆ ನಾ ಬಂದು ಒರೆದರು ಕೇಳದೆ | ಮರಣವ ಗೈದ ಭೂಪ        ||೩೧೯||

ಅಣ್ಣದೇವನು ತನ್ನ ತರಳೆಯ ನಿನ್ನಯ | ಚಿಣ್ಣಗೆ ಕೊಡಲೊಲ್ಲನು ||
ಎಣ್ಣಿಸದಿರು ನೀನು ಲಗ್ನದ ಯೋಚನೆ | ಮಿಣ್ಣನೆ ನಡೆ ಪುರಕೆ     ||೩೨೦||

ಕೊಡದಿರ್ದರೆನ್ನಯ ತರಳಗೆ ಸುತೆಯನ್ನು | ಬಿಡುವವರಾರು ನಿನ್ನ ||
ಬಡಿವಾರದ ನುಡಿ ಬೇಡವೊ ಸುಮ್ಮನೆ | ಕಡೆಗೆ  ಕಾಂಬೆನು ಬಂದುದ     ||೩೨೧||

ಬಿಡು ಹರ ನಿನ್ನಯ ಸಡಗರ ನಮ್ಮಲ್ಲಿ | ನಡೆಯದು ನೋಡು ಹಿಂದೆ ||
ಕಡು ಪಾಪಿ ಬಾಣನ ಕಡೆಯಲಿ ನೀ ಬಂದು | ತಡೆಯದೆ ಓಡಿಪೋದೆ      ||೩೨೨||

ಜಗದೀಶ ನಾನಾಗಿ ಇರುವಾಗ ನಿನ್ನಯ | ಬಗೆ ಬಗೆ ಯುಕ್ತಿಗಳು ||
ಜಗವೆಲ್ಲ ಕ್ಷಣದೊಳು ಭಸ್ಮವ ಗೈವೆನು | ಜಗತಿಪಾಲನು ನಾನಲ್ಲೈ        ||೩೨೩||

ಆದಿನಾರಾಯಣ ನಾನಾಗಿರುತಿರೆ | ಬೂದಿಬಸವ ನೀನಾರು ||
ಮೇದಿನಿ ಅಳಿಸುವುದುಳಿಸುವುದೆನ್ನಯ | ಸ್ವಾಧೀನ ಇರುವದಲ್ಲೆ ||೩೨೪||

ಹಾಗಾದರೀಗ ನೀ ಮಾಗಧಗಂಜುತ | ಬೇಗ ದ್ವಾರಕಾ ಪುರಕೆ ||
ಸಾಗಿಬಂದುದು ಯಾಕೆ ಪೇಳಬೇಕೆನುತಲಿ | ನಾಗಭೂಷಣ ಪೇಳಲು      ||೩೨೫||

ರಾಗ ಭೈರವಿ ಅಷ್ಟತಾಳ

ಮನೆ ಮನೆ ಭಿಕ್ಷವನು | ಗೈವುತ ಹಿಂದೆ | ತನುವ ನೀಗಿಸಿಕೊಂಡಿನ್ನು ||
ಕನಕಬೊಂಬೆಯೊಳ್ ನೀನು ಮನುಮಥನುರುಬೆಯ | ಅನಕ ಸೈರಿಸಿದೇಕಯ್ಯ    ||೩೨೬||

ಗೊಲ್ಲರ ಮನೆ ಪೊಗುತ | ಪಾಲ್ಮೊಸರನು | ಎಲ್ಲ ಬೆಣ್ಣೆಯಕಳುತ ||
ಗುಲ್ಲು ಮಾಡುತ ಗೋಪಸತಿಯರು ಕುಟ್ಟಲು | ಕಳ್ಳರಂದದಿ ಓಡಿದೆ       ||೩೨೭||

ಬಿಡು ನಿನ್ನ ಬಡಿವಾರದ | ಮಾತನು ಈಗ | ನುಡಿಯದೆ ತೆರಳುವುದು ||
ಕಡೆಗಾಲ ತೋರುವೆ ನಡೆ ಸುಡುಗಾಡಿಗೆ | ಅಡಿಯಿಡಬೇಡ ಮುಂದೆ      ||೩೨೮||

ಸುಡುಗಾಡ ನಿನಗೆಯಿಂದೆ | ತೋರಲು ಬಂದೆ | ಬಡ ಗೊಲ್ಲತಿಯರ ಮುಂದೆ ||
ಹಡೆಮಾತ ನುಡಿವರೆ ಪೋಗತ್ತ ನಮ್ಮಯ | ಗೊಡವೆ ನಿನಗೆ ಬೇಡಯ್ಯ   ||೩೨೯||

ನಮ್ಮ ಪುರಕೆ ಬಂದೀಗ | ಬಾಯಿಗೆ ಬಂದ | ಹೆಮ್ಮೆ ಮಾಡಿದರೀಗದ ||
ಒಮ್ಮೆ ಸೈರಿಸಿಕೊಂಡೆ ತಿರುಗಿ ನುಡಿದರೀಗ | ಹೆಮ್ಮೆಯ ನಿಲಿಸುವೆನು     ||೩೩೦||

ಪನ್ನಿಮಾತುಗಳಾಡದೆ | ಸಮ್ಮುಖನಾಗು | ನಿನ್ನನು ಕ್ಷಣದೊಳಗೆ ||
ಮಣ್ಣಗೂಡಿಸಿ ನಿನ್ನ ಅಣ್ಣನ ಸುತೆಯನ್ನು | ಎನ್ನ ಪುರಕೆ ಒಯ್ವೆನು ||೩೩೧||

ಹಾಗಾದರೀಗಿದನು | ತಾಳಿಕೊಯೆನು | ತಾಗ ಚಕ್ರವನೆ ತಾನು ||
ತೂಗಿ ಬಿಡುವೆ ನೋಡು ಸಾಗು ನೀ ಯಮಪುರ | ಬೇಗ ತೋರುವೆ ನೋಡಯ್ಯ   ||೩೩೨||

ಎನಲೀಶನಾರ್ಭಟಿಸಿ | ತ್ರಿಶೂಲವ | ಘನಬೇಗ ಅಳವಡಿಸಿ ||
ಚಿನುಮಯನಂಗಕೆ ಎಸೆಯಲು ಆಕ್ಷಣ | ಇನನ ಮಾರ್ಗದಿತೊಳಗೆ        ||೩೩೩||

ಭಾಮಿನಿ

ಹರಿಯ ಚಕ್ರವು ಹರನ ಶೂಲವು |
ಗಿರಗಿರನೆ ತಿರುಗುತ್ತಲೊಯ್ಯನೆ |
ಭರದಿ ಅಂಬರಕಡರಿ ಹೋರುತ್ತಿರಲು ಭೀಕರದಿ ||
ಉರಿ ಭಯಂಕರವಾಗೆ ಜಗದೊಳು |
ತಿರುಗಿ ಕರೆಯಲ್ಕಾಗ ಉಭಯರು |

ಹರನೆ ಇಂದಿಗೆ ಸೋತೆ ತಾನೆನುತಾಗ ಮುರಹರನು  ||೩೩೪||
ತೆರಳಿ ಪೋಗಲು ಕಂಡು ಈಶನು
ಕರೆದು ಬಲಭದ್ರನೊಳು ಪೇಳಿದ
ತರಳೆಯನು ಬೇಗದಲಿ ಧಾರೆಯನೆರೆದು ಕೊಡುನೀನು |
ಹರನ ವಚನವ ಕೇಳಿ ಹಲಧರ
ಭರಿತ ರೋಷಾತುರದಿ ಬಂದಾ
ಧುರಕೆ ಇದಿರಾಗೆನುತ ನುಡಿದನು ಕೆರಳುತಾರ್ಭಟಿಸಿ   ||೩೩೫||

ರಾಗ ಮಾರವಿ ಏಕತಾಳ

ಮರುಳೋ ಮೂರ್ಖನೊ ಪಿತ್ತದ ಭ್ರಮಣೆಯೊ | ತಲೆಗಡರಿತೆ ನಿನಗೆ ||
ದುರುಳತನದಿ ನೀನೆನ್ನಯ ತರಳೆಯ | ವರನ ಕೊರಳ ಕಡಿದೆ   ||೩೩೬||

ಮರುಳನು ನೀ ದಿಟ ನಿನ್ನಯ ತರಳೆಯ | ವರನೆನ್ನಯ ತರಳ ||
ನಿರುತಿರೆ ಅನ್ಯರ ವರನೆನ್ನುವದಿದು | ಮರುಳಾಟಿಕೆ ಕೇಳೂ      ||೩೩೭||

ನಿನ್ನಯ ಕುವರಗೆ ಸುತೆಯನು ಕೊಡುವರೆ | ನಿರ್ಣಯ ಗೈದವರು ||
ಇನ್ನಾರಿರುವರು ಸುಮ್ಮನೆ ಗಳಹದೆ | ನಿನ್ನ ಪುರಕೆ ತೆರಳು      ||೩೩೮||

ಸೋದರ ಅಳಿಯನ ಆದರಿಸುತ ನೀ | ಸಾಧಿಸು ಲಗ್ನವನು ||
ನೀ ದಯಮಾಡದೆ ಬಿಟ್ಟರೆ ಎಮ್ಮ | ನ್ನಾದರಿಸುವರಾರು          ||೩೩೯||