ಶಾರ್ದೂಲವಿಕ್ರೀಡಿತವೃತ್ತ
ಭಾರದ್ವಾಜಸುತಾಂ ಪುರಾ ಹಲಧೃತಾ ಸಂರಕ್ಷಿತಾಂ ಯೋಗಿನೀಂ
ಸಾರಾಂ ಕೌಂಡ್ಲಿಕಭೂವರಾಯ ಹಲಿನಾ ವೀರೇಣ ಸಂಕಲ್ಪಿತಾಮ್ |
ಗೌರೀಪುತ್ರವರಾಯ ವಿಘ್ನಪತಯೇ ಶೌರಿಃ ಛಲಾತ್ತಾಂ ವಧೂಂ
ಗೌರೀಶಾದೃತಸತ್ಕ್ರಿಯಃ ಸುಘಟಯನ್ ಸಂರುದ್ಧಯುದ್ಧೋ ಜಯೇತ್ || ||೧||
ವಾರ್ಧಕ
ಶಾರದೆಯ ಬಲಗೊಂಡು ಶೂರಗಣಪತಿಗೆರಗಿ |
ನಾರದಾದ್ಯಖಿಳ ಮುನಿನಿಕರಮಂ ಧ್ಯಾನಿಸುತ |
ಭೂರಿ ಹರುಷದಿ ವಂದಿಸುವೆ ಎಲ್ಲ ಕವಿಜನರ ಪದಗಳನು ಶಿರವ ಬಾಗಿ ||
ಮಾರಪಿತನನು ಮನದಿ ನೆಲೆಗೊಳಿಸಿ ಪೇಳುವೆನು |
ಈ ರಸಿಕ ಚರಿತೆಯಿದ ಯೋಗಿನೀಕಲ್ಯಾಣ |
ಸ್ವಾರಸ್ಯವನು ಸಕಲ ಊರ ಜನರರಿವಂತೆ ಯಕ್ಷಗಾನದಿ ಮುದದೊಳು ||೨||
ದ್ವಿಪದಿ
ಸಕಲ ದೇವರ್ಕಳನು ಮನದಿ ನೆಲೆಗೊಳಿಸಿ |
ನಿಖಿಳ ಮುನಿವರರನ್ನು ಧ್ಯಾನಿಸುತ ಸ್ಮರಿಸಿ ||೩||
ಪೇಳುವೆನು ತಿಳಿವಂತೆ ಯಕ್ಷಗಾನದಲಿ |
ಕೇಳುವುದು ಮನವೊಲಿದು ಸುಜನರಂದದಲಿ ||೪||
ವರಮಹಾಸ್ಕಾಂದಪೌರಾಣ ಕಥನದೊಳು |
ವರಗೌರಿಪುತ್ರನಿಗೆ ಲಗ್ನ ಪೂರ್ವದೊಳು ||೫||
ವಿರಚಿಸಿದರೆಂದೆನುತ ಸೂತಮುನಿಯಂದು |
ಒರೆದನಾ ಶೌನಕ ಮುನೀಶ್ವರರಿಗಂದು ||೬||
ಕೇಳಿದನು ಜನಮೇಜಯಾಖ್ಯ ನೃಪವರನು |
ಶೀಲ ವೈಶಂಪಾಯನ ಮುನಿ ಪೇಳಿದನು ||೭||
ಯದುಕುಲದ ಉದ್ಭವವ ಮೊದಲೆ ಪೇಳಿದೆನು |
ಅದರ ಮೇಲ್ ಪೇಳುವೆನು ಕೇಳು ನೀನಿದನು ||೮||
ಭಾಮಿನಿ
ನಂದಗೋಕುಲದೊಳಗೆ ಪರಮಾ |
ನಂದ ಲೀಲೆಯೊಳಿರಲು ಹರಿಬಲ |
ರಂದು ಮಾಗಧನೊಡನೆ ವೈರವು ಬೆಳೆಯೆ ದಿನದಿನದಿ ||
ಚಂದದಲಿ ಇರಗೊಡನು ಎನುತಲಿ |
ಬಂದು ದ್ವಾರಕಪುರವ ರಚಿಸುತ |
ನಂದನಂದನರಿರ್ದರೀಪರಿಯಿಂದ ಸಂತಸದಿ ||೯||
ರಾಗ ಮಧ್ಯಮಾವತಿ ತ್ರಿವುಡೆತಾಳ
ಇನಿತು ವೈಭವದಿಂದ ರಾಮನು | ವಿನಯದಿಂದಲಿ ಮಂತ್ರಿ ಸಹಿತಲಿ ||
ಅನುನಯದಿ ಓಲಗದೊಳೊಪ್ಪಿರೆ | ವನದ ಪಾಲಕರೆಲ್ಲರು ||೧೦||
ಒಟ್ಟುಗೂಡುತ ತಮಗೆ ಬಂದಿಹ | ಕಷ್ಟಗಳನೆಲ್ಲವನು ತಮ್ಮಯ |
ಪಟ್ಟದರಸಗೆ ಪೇಳ್ವುದೆನುತಲಿ | ತಟ್ಟನಾಗೈತಂದರು ||೧೧||
ಬಂದು ಪಾದಕೆ ವಂದಿಸುತ್ತಲಿ | ನಿಂದ ವನಪಾಲಕರನಾ ಯದು |
ನಂದನನು ನುಡಿಸಿದನು ನಿಮಗೈ | ತಂದ ವ್ಯಥೆಯೇನೆನ್ನುತ ||೧೨||
ರಾಗ ಮುಖಾರಿ ಏಕತಾಳ
ನಂದನಂದನ ಲಾಲಿಸು | ನಾವೆಂಬ ನುಡಿಯ | ಇಂದು ಮನದಿ ಗ್ರಹಿಸು ||
ಚಂದದಿ ನಿಮ್ಮುಪವನವನು ಪಾಲಿಸು | ತಿಂದಿನವರೆಗಾವ್ ಮಂದಿಯು ಸಹಿತಲಿ || ಪೊಂದಿರ್ದೆವು ಸುಖ |
ಮುಂದೇನೆನಲೀ || ನಂದನಂದನ ಲಾಲಿಸು ||೧೩||
ನುಡಿವರೆಮ್ಮಯನಾಲಿಗೆ | ಒಳಸೇರ್ವದಿಂದು | ಒಡಲೊಳ್ ಸಂಕಟ ಆಮ್ಯಾಗೆ ||
ಒಡೆಯನೆ ಲಾಲಿಸು | ಬೆಡಗಿನ ವನದಲಿ | ಅಡಿಯಿಡುತೈದುತ | ಪುಡಿಪುಡಿಗೈದವು |
ಕಡುಖತಿಯಿಂದಲಿ | ಬಿಡದೆಲ್ಲವನೂ || ನಂದನಂದನ ಲಾಲಿಸು ||೧೪||
ಕರಿ ಸಿಂಗ ಶರಭ ಶಾರ್ದೂಲ | ಅದರೊಟ್ಟಿನಲ್ಲಿ | ನರಿಯು ಸೂಕರವು ಮಾರ್ಜಾಲ ||
ತರತರ ಹಿಂಡುಗಳ್ | ಬೆರಸುತ ಬಂದಾ | ಮರ ಗಿಡ ಗಡ್ಡೆಯ | ಬರಿಗೈವುತಲೀ |
ಪರಿಪರಿ ಲೂಟಿಯ | ವಿರಚಿಸುತಿರ್ಪವು || ನಂದನಂದನ ಲಾಲಿಸು ||೧೫||
ಜಂಬುಲಿಂಬೆ ದಾಳಿಂಬದ ಗಿಡವ | ಪನಸ ಚೂತ | ಅಂಬರದೊಳಗೆ ಏರಿ ಮೆರೆವ ||
ಬೆಂಬಿಡದೆಲ್ಲವ | ಮುರಿವುತ ಬಹುಪರಿ | ಡಂಬರ ಗೈದವು | ಕದಳಿಯ ವನವನು |
ಮುಂಬರಿದೈದುತ | ಗಜಗಳೇನೆಂಬೆವು || ನಂದನಂದನ ಲಾಲಿಸು ||೧೬||
ಪಕ್ಷಿ ಜಾತಿಗಳೆಲ್ಲ ಬಂದು | ಫಲಪಣ್ಣುಗಳನು | ಕೊಕ್ಕಿನಿಂದಲಿ ಕುಕ್ಕಿ ತಿಂದು ||
ಈಕ್ಷಿಸಿ ಬಡಿಯಲು | ಫಕ್ಕನೆ ಹಾರುತ | ರೆಕ್ಕೆಯೊಳ್ ಬಡಿವವು | ಇಕ್ಕೆಲ ಸಾರುತ |
ಘಕ್ಕನೆ ತಿಂಬವು | ರಕ್ಕಸವೈರಿಯೆ || ನಂದನಂದನ ಲಾಲಿಸು ||೧೭||
ಕದಳಿ ಖರ್ಜೂರ ದ್ರಾಕ್ಷೆ ಪಣ್ಣು | ಆಮೇಲೆ ಕೇಳು | ಬದನೆ ಕಿತ್ತಳೆ ಹನೆಯ ಕಣ್ಣು ||
ಅದುಭುತವಾಗಿಹ | ಸೇಬಿನ ಹಣ್ಗಳ | ವಿಧವಿಧದಿಂದಲಿ | ತುದಿಗಾಣಿಸುವವು |
ಒದಗಿಲಿ ನೀವು ಬಂ | ದದರನು ಸದೆವುದು || ನಂದನಂದನ ಲಾಲಿಸು ||೧೮||
ಭಾಮಿನಿ
ಒಡೆಯ ಮೃಗಪಕ್ಷಿಗಳ ಬಾಧೆಯ |
ತಡೆಯಲಾರದೆ ಬಂದು ಪದದಲಿ |
ಬಿಡದೆ ಬಿನ್ನಯಿಸಿದೆವು ನಮ್ಮನು ಕಾಯಬೇಕೆನುತ ||
ಒಡನೆ ಹಲಧರ ಕೇಳಿ ಗರ್ಜಿಸು |
ತಡಿಗಡಿಗೆ ಹಲು ಮೊರೆದು ರೌದ್ರದಿ |
ನುಡಿದ ಬೆದರದಿರೀಗ ಬೇಟೆಯನಾಡಿ ಸಂತಸದಿ ||೧೯||
ರಾಗ ಕೇದಾರಗೌಳ ಝಂಪೆತಾಳ
ಬರುವೆ ನಾ ಮಂತ್ರಿ ಈಗ | ಕ್ಷಣದೊಳಗೆ | ಕರೆಸು ಕೈರಾತಪಡೆ ಬೇಗ ||
ತ್ವರಿತದಿಂ ರಥವ ಹೂಡು | ಬಲಗಳನು | ನೆರಹಿಸೈ ವನಕೆ ಪೊರಡು ||೨೦||
ಕೇಳಿದಾಕ್ಷಣ ಸಚಿವನು | ಕರೆಸಿದನು | ಆಳುಗಳ ಕಳುಹಿ ತಾನು ||
ಮೇಳವಿಸಿ ಶಬರರಂದು | ಪಡೆಸಹಿತ | ಕಾಲಿಗೆರಗಿದರು ಬಂದು ||೨೧||
ರಾಗ ಮಾರವಿ ಏಕತಾಳ
ಸಲಾಮು ತೆಕ್ಕೊ ಬಲರಾಮಪ್ಪಾ | ಸಲುಗೇ ಕಾಟಕ ಜನರ ||
ನಿಲಾದೆ ಅರಿಕೆಯ ಕೇಳಬೇಕು | ವಲವಿಲಿ ಕರೆಸಿದ ಕಾರಣವ ||೨೨||
ವನಕೆ ಪೋಗಿನಾವ್ ಬೇಟೆಯನಾಡಿ | ಮನಕೇ ಬಂದ ಮಿಗವ ||
ಘನದೀ ಹೊಡೆದು ಮೇಲೋಕದೆಮ್ಮ | ಮನವು ಕೇಳೆಮ್ಮೊಡೆಯ ||೨೩||
ಸೂಕರಹಿಂಡಿಗೆ ಬಲೆಯನೊಡ್ಡಿ | ಭೀಕರದಿಂದ ಅಟ್ಟಿ ||
ಜೋಕೆಯಿಂದಲಿ ಗುಂಡಿಲಿ ಹೊಡೆಯಲು | ವ್ಯಾಕುಲವಿಲ್ಲದೆ ಕಟ್ಟಿ ||೨೪||
ಆಕೆಯಿಂದಲದ ಪಾಕವ ಮಾಡಿಸಿ | ಬೇಕೆಂಬಷ್ಟು ಮೆಲುತಾ ||
ಸಾಕಿದ ಒಡೆಯನ ಗೆಳೆಯರ ಜೊತೆಗೆ ಪ | ರಾಕುಗೈದು ನಲಿದು ||೨೫||
ಭಾಮಿನಿ
ಬಂದ ವನಪಾಲಕರ ರಾಮನು |
ಚಂದದಿಂದುಪಚರಿಸಿ ಪೇಳಿದ |
ಮಂದಹಾಸದಿ ವನಕೆ ಪೊರಡಿರಿ ಇಂದು ತವಕದಲಿ ||
ಎಂದು ಪೊರಡುವ ಸಮಯಕಾಗಳೆ |
ಬಂದು ಉಸಿರಿದ ಹರಿಯು ತವಕದಿ |
ನಿಂದು ನುಡಿದನು ಬಲನೊಡನೆ ತಾನಂದು ಸಂತಸದಿ ||೨೬||
ರಾಗ ಕಾಪಿ ಅಷ್ಟತಾಳ
ಗಮನವಿದೆಲ್ಲಿಗಣ್ಣಯ್ಯ | ನೀನು | ಕ್ರಮದಿಂದ ಪೊರಡುವುದೇಕಯ್ಯ ||
ಮಮತೆಯೊಳ್ ಪೇಳೆಂದು ಕಮಲಜಪಿತ ಕೇಳೆ | ಅಮಮ ಶಭಾಸೆಂದು ಅಮರಾರಿವೈರಿಗೆ ||೨೭||
ಅನುಜ ಕೇಳೆಮ್ಮುಪವನದ | ಚಾರ | ವಿನಯದಿಂದಲಿ ಪೇಳಿದನಿದ
ಹನನಗೊಳಿಸಿದವು ಫಲ ಪೈರು ಪಣ್ಗಳ | ವನಮೃಗ ಪಕ್ಷಿಗಳನುತಿಂದು ಕೇಳ್ ನೀನು ||೨೮||
ಬೇಟೆಗೆ ಪೋಪೆ ಕೇಳಿಂದು | ಈಗ | ಸಾಟಿಯ ಶಬರರನಿಂದು ||
ಕೂಟಕೆ ಕರೆಸಿದೆ ಬರುವನಕರ ನೀನು | ಲೂಟಿಗೈಯದೆ ಪುರ ವರವ ಪಾಲಿಸುವುದು ||೨೯||
ಅಣ್ಣ ಲಾಲಿಸಿ ಕೇಳು ನೀನು | ಈಸು | ಸಣ್ಣ ಕಾರ್ಯಕೆ ಎನ್ನ ನೀನು ||
ಕಣ್ಣಾರೆ ಕಳುಹಿಸೆ ವನಮೃಗ ಪಕ್ಷಿಯ | ಮಣ್ಣಗೂಡಿಸಿ ಬರ್ಪೆ ನೋಡೆನ್ನ ಸಾಹಸ ||೩೦||
ಸದರವಲ್ಲಿದು ಬೇಟೆ ನೋಡು | ಅಲ್ಲಿ | ಕದನಕರ್ಕಶರ್ ಬಂದರ್ಕೇಡು ||
ಮುದದಿಂದ ಸಾಧಿಪ ಕಾಶೀಶ ಶಿಶುಪಾಲ | ಮೊದಲಾದ ವೈರಿಗಳ್ ಕದನಕೆ ಬಂದಪರ್ ||೩೧||
ರಾಗ ಮಾರವಿ ಏಕತಾಳ
ಬಿಡು ಬಿಡು ನುಡಿಯನು ಎನ್ನಗ್ರಜ ನೀ | ಸಡೆಪಡೆಗಳ ಧುರದಿ ||
ಬಡಿದಪ್ಪಳಿಸುವೆ ನಿಮಿಷದಿ ನಿನ್ನಯ | ಒಡಹುಟ್ಟಿದ ಅನುಜ ||೩೨||
ಮುರಹರನುಸಿರಲು ಕೇಳುತ ಹಲಧರ | ತರಿಸುತ ವೀಳ್ಯವನು ||
ಹರುಷದಿ ಈಯಲು ಎರಗುತ ಪೊರಟನು | ಉರುತರ ಶೌರ್ಯದಲಿ ||೩೩||
ರಾಗ ಭೈರವಿ ರೂಪಕತಾಳ
ಸರಸಿಜಾಕ್ಷ ನಡೆದ ಬೇಟೆಗೆ | ಕೈರಾತರ್ಕೂಡಿ | ಸರಸಿಜಾಕ್ಷ ನಡೆದ ಬೇಟೆಗೆ || ಪಲ್ಲವಿ ||
ಬರುತ ಬರುತ ಹರಿಣ ಹಂದಿ ನರಿಯ ಹಿಂಡನು | ತ್ವರಿತದಿಂದ ಕಂಡು ಬಾಣ |
ಶರಗಳಿಂದ ಸವರುತದರನು ||
ಕರಿಯ ಹಿಂಡು ಕಂಡು ಕೆಡಹಿ | ದುರುಳ ಮೃಗಗಳನ್ನು ತರಿದು |
ಬರಿಯಗೈದು ಶಬರಬಲವ ಹರುಷದಿಂದ ಸಂತವಿಸುತ |
ತೆರಳಿಮುಂದೆ ಬಂದನಾಗ || ಸರಸಿಜಾಕ್ಷ ನಡೆದ ಬೇಟೆಗೆ ||೩೪||
ಹೊಗುತ ಹೊಲನ ಮಿಗದ ಹಿಂಡ ಬಗೆಯ ಕಾಣುತ | ಅಗಣಿತಾಸ್ತ್ರಗಳನು ಹೂಡಿ | ಸೊಗಸಿನಿಂದ ಮೃಗವ ಸವರುತ ||
ಬಗೆಬಗೆಯ ಪಕ್ಷಿಗಳನು | ಹೊಗಲುಗೊಡದೆ ಹಿಡಿದು ಮತ್ತೆ |
ಖಗಮೃಗಾದಿಗಳನು ಬಡಿದು | ಹಗಲುತನಕ ಬೇಟೆಯಾಡಿ |
ವಿಗಡರ್ಸಹಿತ ಬಂದನಾಗ || ಸರಸಿಜಾಕ್ಷ ನಡೆದ ಬೇಟೆಗೆ ||೩೫||
ಭಾಮಿನಿ
ಇಂದುವಂಶೋದ್ಭವನೆ ಕೇಳೈ |
ಚಂದದಿಂ ಶ್ರೀಹರಿಯು ಆದಿನ |
ಅಂಧಕಾರವು ಬರಲು ಯಾದವ ಶಬರರೊಡಗೂಡಿ ||
ಬಂದು ವರ ಕಾಸಾರದೆಡೆಯಲಿ |
ನಿಂದು ಕಾಲ್ಮೊಗ ತೊಳೆದು ಹರುಷದಿ |
ತಂದ ಪಾಥೇಯವನು ಭುಂಜಿಸಿ ಪವಡಿಸಿರಲಾಗ ||೩೬||
ಹಿಂದೆ ಭಾರದ್ವಾಜ ಋಷಿವರ |
ನಂದು ತಪವಿರಲದನು ಕೆಡಿಸಲು |
ಬಂದಿಹ ತಿಲೋತ್ತಮೆಲಿ ಜನಿಸಿದ ಬಾಲೆಯನು ಕಂಡು ||
ಚಂದವಲ್ಲಿದುಯೆನುತ ವೃಕ್ಷದ |
ಕೊಂಬೆಯೆಡೆಯೊಳು ಇರಿಸಿ ಗಮಿಸಿದ |
ಕಂದಳಾಕ್ಷಣ ಚೀರಿ ಮರುಗಲು ಕೇಳಿ ಹರಿಯಾಗ ||೩೭||
ರಾಗ ಕಾಂಭೋಜಿ ರೂಪಕತಾಳ
ಏನಿದಚ್ಚರಿಯಿದು ಕಾನನ ಮಧ್ಯದಿ | ತಾನು ಚೀರುತಲಿದೆ ಶಿಶುವು ||
ಜ್ಞಾನ ತಪ್ಪಿತೊಯೆಂದು ಆಲೈಸಲಾಕ್ಷಣ | ಸೂನು ಮರುಗುವ ಶಬ್ದ ಕೇಳಿ ||೩೮||
ಬಳಿಕ ಯಾದವರನ್ನು ಕರೆದೆಬ್ಬಿಸುತಲಾಗ | ಹಳುವದಿ ಪುಡುಕಿರೆಂದೆನುತ ||
ಅಳುತಿದೆ ಶಿಶುವೆತ್ತ ನೋಡಿ ತಹುದೆನುತಲಿ | ನಳಿನನಾಭನು ಪೇಳಲಾಗ ||೩೯||
ಮಾಧವನುಸಿರಲು ಕೇಳುತ ಪೊರಟರು | ಯಾದವರೆಲ್ಲ ಆ ಕ್ಷಣದಿ ||
ಸಾಧಿಸಿ ಪುಡುಕಲು ವೃಕ್ಷಕೊಂಬೆಯೊಳಿರ್ಪ | ಆ ದಿವ್ಯ ಶಿಶುವ ಕೈಗೊಂಡು ||೪೦||
ಪರಮಾತ್ಮ ಲಾಲಿಸು ಮರವು ಈ ಶಿಶು ಪೆತ್ತು | ದುರುಚೋದ್ಯವಾಗಿಹುದಿಂದು ||
ಅರುಹುವುದಿನ್ನೇನು ನೋಡೆಂದು ಕೊಡಲಾಗ | ಹರಿಯು ಮನದಿ ಚೋದ್ಯವಾಂತು ||೪೧||
ಬಳಿಕ ಯೋಚಿಸಿ ತಿಳಿದನು ಶಿಶು ವಿವರವ | ನಳಿನಾಕ್ಷ ನಕ್ಕು ತನ್ನೊಳಗೆ ||
ಹಲವು ಯೋಚನೆ ಯಾಕೆ ಅಗ್ರಜಗೀಯುವೆ | ಕಳವಳ ಬೇಡೆಂದನಾಗ ||೪೨||
ಅನಿತರೊಳ್ ದಿನಮಣಿಯುದಯಿಸೆ ಕಾಣುತ್ತ | ಚಿನುಮಯ ಸರ್ವರ ಕರೆದು ||
ವಿನಯದಿ ತೆರಳುವ ಪುರಕೀಗಯೆನ್ನುತ್ತ | ವನಪಾಲರನ್ನು ಸಂತಯಿಸಿ ||೪೩||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಲನು ಒಡ್ಡೋಲಗದೊಳಿರುತಿರೆ | ಒಲವಿನಿಂದಲಿ ಕೃಷ್ಣ ಬಂದಾ |
ಹಳುವದಾ ಮೃಗಪಕ್ಷಿ ಬಾಧೆಯ | ಗಳಿಗೆಯೊಳಗೆ ||೪೪||
ಪರಿಹರಿಸಿ ಬಂದಿಹೆನು ನೋಡೈ | ಇರುಳು ವನದಲಿ ಶಿಶುವು ದೊರೆತಿದೆ |
ಹರುಷದಲಿ ಕೈಗೊಳ್ಳಿರೆಂದನು | ಸರಸಿಜಾಕ್ಷ ||೪೫||
ಪುತ್ರರಿಲ್ಲದೆ ವ್ಯಥೆಯೊಳಿರುತಿಹೆ | ಪುತ್ರಿಯಳಸಲಹುತ್ತ ಸುಖದಲಿ |
ಅರ್ತಿಯನು ನೋಡುತ್ತಲಿರು ಶತ | ಪತ್ರ ನೇತ್ರ ||೪೬||
ಎಂದು ಶ್ರೀಹರಿ ನುಡಿಯಲಾಕ್ಷಣ | ಕಂದು ಹಲಧರ ಕೇಳಿ ಗರ್ಜಿಸು |
ತೆಂದ ಹರಿಯೊಡನಾಗ ರೌದ್ರದಿ | ಕಂದಿಕೊಳುತ ||೪೭||
ರಾಗ ದೇಶಿ ಅಷ್ಟತಾಳ
ಏನೆಂದೆ | ಕೃಷ್ಣಾ | ಏನೆಂದೆ || ಏನೆಂದೆ ಕೃಷ್ಣ ನೀ ಹೀನರಂದದಲಿ |
ಕಾನನದಲಿ ದೊರೆತ | ಹೀನ ಶಿಶುವನೀಗ || ಏನೆಂದೆ || ಪಲ್ಲವಿ ||
ವನದಲಿ ದೊರಕಿಹ ಶಿಶುವ | ಕುಲ | ವನು ತಿಳಿಯದೆ ನೀನೊರೆವ ||
ವಿನಯದ ನುಡಿಯೆನ್ನೊಳೀಗ | ಎಮ್ಮ | ನ್ವಯಕೆ ಯೋಗ್ಯವೆ ಕೇಳು ಪೋಗತ್ತ ಬೇಗ || ಏನಂದೆ ||೪೮||
ರಾಗ ಸೌರಾಷ್ಟ್ರ ಅಷ್ಟತಾಳ
ಸಣ್ಣ ಕೂಸಿನ ಕುಲ | ಯೆಣ್ಣಲು ಬೇಡ ನೀ | ಅಣ್ಣದೇವ || ಈ |
ಬಣ್ಣದ ಶಿಶು ನೋಡೆ | ಕಣ್ಣಾರೆ ಕಾಂಬುದು | ಅಣ್ಣದೇವ ||೪೯||
ರಾಗ ದೇಶಿ ಅಷ್ಟತಾಳ
ಕಳ್ಳರಂದದಿ ಮನೆಮನೆಯ | ಪೊಕ್ಕು | ಎಲ್ಲ ಪಾಲ್ಬೆಣ್ಣೆ ಗಡಿಗೆಯ ||
ಡೊಳ್ಳ ತುಂಬಿಸಿಕೊಂಡ ಪರಿಯ | ಅಲ್ಲಿ | ಸುಳ್ಳ ಸಟೆಯ ನುಡಿದು ಸತಿಯ || ಏನೆಂದೆ ||೫೦||
ರಾಗ ಸೌರಾಷ್ಟ್ರ ಅಷ್ಟತಾಳ
ಎನ್ನ ನಿಂದಿಸಿ ನೀನು | ಇನ್ನು ನುಡಿವುದೇಕೆ | ಅಣ್ಣದೇವ || ಸಣ್ಣ |
ಹೆಣ್ಣ ನೀ ಸುತೆಯಂತೆ | ಮುನ್ನ ನೀ ಸಲಹಿಕೊ | ಅಣ್ಣದೇವ ||೫೧||
ರಾಗ ದೇಶಿ ಅಷ್ಟತಾಳ
ಗೊಲ್ಲಕುಲದ ಹೆಂಗಳನ್ನು | ನೀ | ನೆಲ್ಲರ ಕೂಡಿ ಮತ್ತಿನ್ನು ||
ಸಲ್ಲದ ಕಾರ್ಯವ ಗೈವ | ಈಗ | ನಿಲ್ಲದೆ ಕೊಂಡೊಯ್ಯೊ ಶಿಶುವ || ಏನೆಂದೆ ||೫೨||
ಭಾಮಿನಿ
ಎಂದು ಗರ್ಜಿಸಿ ರಾಮ ನುಡಿಯಲು |
ಇಂದಿರಾಪತಿ ಸ್ಮರಿಸೆ ನಾರದ |
ಬಂದನಾಕ್ಷಣ ಹರಿಯ ನಾಮೋಚ್ಚರಣೆಯಿಂದಾಗ ||
ವಂದಿಸುತ ನಿಂದಿರುವ ನಾರದ |
ರಂದವನು ಕಾಣುತ್ತ ಬಲ ಮುದ |
ದಿಂದ ಸತ್ಕರಿಸುತಲಿ ಕುಳ್ಳಿರಿಸಿದನು ಪೀಠದಲಿ ||೫೩||
ರಾಗ ಸಾಂಗತ್ಯ ರೂಪಕತಾಳ
ಪಾದಪೂಜೆಯ ಗೈದು ಎರಗಿದ ಬಲನ ಕಂ | ಡಾದರಿಸುತ ಸುರಮುನಿಪ ||
ಹೇ ದಯಾನಿಧಿ ಅಪರೂಪದಿ ಬಂದಿಹೆ | ನೀ ದಯಮಾಡಿದ ಕಾರ್ಯ ||೫೪||
ಅರುಹಿ ಪೋಪುದು ನಿನ್ನ ತರಳೆಯ ನಮ್ಮಲ್ಲಿ | ಅರುಹದಿರೆಲೆ ಮುನಿಶ್ರೇಷ್ಠ ||
ಪರಿಪರಿ ವಾರ್ತೆಯ ಪೇಳಬೇಕೆನಲಾಗ | ಅರುಹಿದ ಸುರಮುನಿ ಬಲಗೆ ||೫೫||
ರಾಗ ನವರೋಜು ಏಕತಾಳ
ರಾಕೇಂದುನಿಭವದನ | ಈ | ಲೋಕದ ವಾರ್ತೆಗಳೇನ ||
ನಾ ಕಾಣೆನು ನೀ ಕೇಳ್ದರೆಯೆನ್ನೊಳು | ಸಾಕಾರದಿ ಪೇಳ್ ಕೇಳುವೆನೆಲ್ಲವ ||೫೬||
ತ್ವರಿತದಿ ಬಂದಿಹುದೇಕೆ | ಹೇ | ಸುರಮುನಿಪನೆ ಈ ಪುರಕೆ ||
ಧರೆಯನು ನೀನರೆನಿಮಿಷದಿ ತಿರುಗುವೆ | ಅರುಹೇನಾದರು ತಿಳಿದಿರ್ದುದ ನೀ ||೫೭||
ದ್ವಾರಕಾಪಟ್ಟಣಕೆ | ನಾ | ಬಾರದೆ ಬಹುದಿನಕೆ ||
ಸಾರಿದೆನಲ್ಲದೆ ಬೇರೇನಿಲ್ಲವು | ಕಾರಿಯ ನಿನ್ನ ವಿಚಾರಿಸಿ ತೆರಳ್ವುದು ||೫೮||
ಮುನಿವರ ಕೇಳ್ ನೀನು | ಎ | ನ್ನನುಜ ಪೇಳುವುದನು ||
ವನಮೃಗಬೇಟೆಗೆ ತೆರಳಿಹನಲ್ಲಿಯೆ | ವನದಿ ದೊರೆತ ಶಿಶುಕೊಳ್ಳೆನೆ ಸರಿಯೆ ||೫೯||
ರಾಗ ಬೇಗಡೆ ಅಷ್ಟತಾಳ
ಕೇಳು ಯದುಕುಲಮೌಳಿ ವರಮಣಿಯೆ | ನಾ ಪೇಳ್ವ ನುಡಿಯ |
ಜಾಲವೆನ್ನದೆ ಗ್ರಹಿಸು ಗುಣಮಣಿಯೆ ||
ಶೀಲಗುಣಸಂಪನ್ನೆ ಈ ಶಿಶು | ಕೀಳುಕುಲವೆಂದೂಹಿಸದೆ ನೀ |
ಬಾಲೆಯನು ಸಂತಸದಿ ಪೊರೆವುದು | ಪೇಳುವೆನು ಇವಳಿರವನೆಲ್ಲವ || ಕೇಳು ||೬೦||
ಯೋಗಿ ಭಾರದ್ವಾಜಮುನಿವರನು | ಶಂಕರನ ಒಲಿಪಡೆ |
ಯೋಗದಿಂದಲೆ ಭಜಿಸುತಿರೆ ತಾನು ||
ಆಗ ತಪದಾಜ್ವಾಲೆ ಸುರಪುರ | ಬೇಗ ಮುಸುಕಲು ತಿಳಿದು ಶಕ್ರನು |
ತಾಗಿ ತಿಲೋತ್ತಮೆಯ ಕಳುಹಲು | ಹೋಗಿ ತಪವನು ಕೆಡಿಸಿ ಬಾರೆನೆ ||೬೧||
ಕಳುಹಲಾ ಕ್ಷಣದೊಳಗೆ ಸುರಸತಿಯು | ಮುನಿಯಿರ್ಪಯೆಡೆಗೆ |
ಹೊಳೆಹೊಳೆದು ಬರೆ ಕಂಡು ತಾಪಸಿಯು ||
ಕಳವಳಿಸಿ ಮನ್ಮಥನ ಬಾಧೆಗೆ | ಲಲನೆಯನು ಭೋಗಿಸಲಿಕಾಕ್ಷಣ |
ಚೆಲುವಿನಿಂದಲಿ ಶಿಶುವು ಜನಿಸಲು | ಮುಳಿಸಿನಿಂದಲಿ ಪೊರಟಳಾಕ್ಷಣ ||೬೨||
ತೆರಳಿಪೋಗಲು ಸತಿಯು ಮುನಿಯಾಗ | ಸ್ಮರಹತಿಯ ಸೈರಿಸಿ |
ಪರಿಪರಿಯ ಚಿಂತೆಯಲಿ ತಾ ಯೋಗ ||
ಭರಿತನಾಗಿರೆ ಭ್ರಷ್ಟಕೃತ್ಯವ | ವಿರಚಿಸಿದ ಕಾರಣದಿ ಈ ಪರಿ |
ದುರಿತಕೊಳಗಾಗಿಹೆನು ಹರಹರ | ಮರುಳು ತನವಾಯ್ತೆಂದು ಮರುಗಿದ ||೬೩||
ಭಾಮಿನಿ
ತಪಕೆ ವಿಘ್ನವುಯೆನುತ ಯೋಚಿಸಿ |
ಗುಪಿತದಿಂ ಶಿಶುವನ್ನುಯೆತ್ತುತ |
ಕೃಪೆಯ ನೀಗಿಯೆ ಮರನ ಪೊದೆಯೊಳಗಿರಿಸಿ ತಾಪಸನು ||
ತಪವನಾಚರಿಸುವಡೆ ತೆರಳಿದ |
ಚಪಲನೇತ್ರೆಯ ಸಲಹು ಸುತೆಯಂ |
ತಪರಿಮಿತ ಸುಖಪಡುವೆ ಕೇಳೈ ಪೆಸರು ಯೋಗಿನಿಯು ||೬೪||
ರಾಗ ಕೇದಾರಗೌಳ ಅಷ್ಟತಾಳ
ಎಂದು ಈ ಪರಿಯಿಂದ ಅರುಹಲು ಮುನಿ ರಾಮ | ನಂದು ಸಂತೋಷ ತಾಳಿ ||
ಚಂದದಿ ಸತಿಯೊಳು ಕರೆದು ಪೇಳಿದನಾಗ | ಮುಂದಿನ್ನು ಸುತೆಯಂದದಿ ||೬೫||
ಸಲಹುತ್ತಲಿರು ನೀನು ಕುಲಕೆ ರತುನವಿದು | ಹಲವು ಮಾತುಗಳಿನ್ನೇನು ||
ಒಲಿದೀಗ ಹರ ನಮಗಿತ್ತಿಹನೆನೆ ಕೇಳಿ | ಗೆಲವಿಂದ ರೇವತಿಯು ||೬೬||
ಮುದ್ದು ಬಾಲಕಿಯನು ಕಾಣುತ್ತ ಹರುಷದಿ | ಮುದ್ದಾಡಿ ಕ್ಷೀರವನು ||
ಎದ್ದ ಗಳಿಗೆಯೊಳು ಕುಡಿಸುತ್ತ ಸಲಹಲು | ಪದ್ಧತಿಯಂತೆ ಆಗ ||೬೭||
ರಾಗ ಜೋಗುಳ
ದಿವಸ ಹನ್ನೊಂದರೋಳ್ ಯದುಸುದತಿಯರು |
ತವತವಗೈತಂದು ಸರಸಿಜಾಕ್ಷಿಯರು ||
ಸವನಿಸಿ ಶಿಶುವಿನ ತೊಟ್ಟಿಲೊಳಿಟ್ಟು |
ವಿವಿಧ ರಾಗಗಳಿಂದ ಪಾಡಿ ತೂಗಿದರು | ಜೋ ಜೋ ||೬೮||
ಜೋ ಜೋ ಯೋಗಿನಿ ಕಂದಳೆ ಜೋ ಜೋ |
ಜೋ ಜೋ ಸುರಸತಿಬಾಲಕಿ ಜೋ ಜೋ ||
ಜೋ ಜೋ ರಾಮನ ಕುವರಿಯೆ ಜೋ ಜೋ |
ಜೋ ಜೋ ಯೋಗಿಯ ರೇತಸ್ವಿ ಜೋ ಜೋ | ಜೋ ಜೋ ||೬೯||
ರಾಗ ಕಾಂಭೋಜಿ ಝಂಪೆತಾಳ
ಇನಿತು ಸತಿಯರು ತೂಗಿ ಮನೆಗಳಿಗೆ ತೆರಳಲಾ |
ವನಿತೆ ಸಲಹುತ್ತಿರಲು ವಿನಯದಿಂದಾಗ ||
ದಿನದಿನಕೆ ಸಿತಪಕ್ಷಶಶಿಯವೋಲ್ ಹೊಳೆಯುತ್ತ |
ವನಿತೆ ಬೆಳೆಯುತ್ತಿದ್ದಳಾಗ ಮನೆಯೊಳಗೆ ||೭೦||
ಒಂದು ದಿನ ಬಲನು ಓಲಗದೊಳೊಪ್ಪಿರಲಾಗ |
ಬಂದಳೊಯ್ಯನೆ ಪುತ್ರಿಯಂ ನೋಡಿ ಮನದಿ ||
ಮಂದಹಾಸದಿ ಕರೆದು ಮುದ್ದಾಡಿ ಪೇಳಿದನು |
ಮುಂದಿರುವ ಕುವರಿಯನು ಕುಳ್ಳಿರಿಸುತೊಡನೆ ||೭೧||
ಭರಿತವಾದುದು ಪ್ರಾಯ ಹರುಷದಲಿ ಲಗ್ನವನು |
ವಿರಚಿಸಲು ಬೇಕೀಗ ದೊರೆಗಳೊಳಗರಸಿ ||
ತರಳೆಯಂ ಬೀಳ್ಕೊಟ್ಟು ಕರೆದು ಕೃತವರ್ಮನನು |
ಅರುಹಿದನು ಮನದೊಲವ ಪಿರಿದು ಚಿಂತೆಯಲಿ ||೭೨||
ಭಾಮಿನಿ
ಆರಿಗೀ ಸುತೆಯಳನು ಪ್ರೇಮದಿ |
ಧಾರೆಯನು ತಾನೆರೆದು ಕೊಡುವೆನು |
ಆರಿಹರು ಭೂತಳದಿ ನಮಗೆ ಸಮಾನರಾಗಿಹರ ||
ತೋರಿಕೊಡು ನೀ ಸಚಿವ ಮುದದಲಿ |
ನಾರಿಮಣಿ ಯೋಗಿನಿಗೆ ಸರಿಯಹ |
ಧೀರನಾರೆಂಬುದನು ಪೇಳೈ ಸಾರಗುಣಯುತನು ||೭೩||
Leave A Comment