ತತ್ತ್ವಪದ, ಜನಪದ ಗೀತಗಾಯನ, ರಾಧಾನಾಟ, ಶ್ರೀಕೃಷ್ಣ ಪಾರಿಜಾತ ಕಲೆಗಳನ್ನು ಮೈಗೂಡಿಸಿಕೊಂಡು ಸಮರ್ಥವಾಗಿ ಪ್ರದರ್ಶಿಸುವ ಅಪರೂಪದ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸಾಪುರ ಗ್ರಾಮದ ಒಕ್ಕಲು ಕುಟುಂಬದಿಂದ ಬಂದವರು. ಸಂಗೀತದ ಗೀಳಿನಿಂದಾಗಿ ಚಿಕ್ಕಂದಿನಿಂದಲೇ ಪ್ರಾಥಮಿಕ ಓದಿಗೆ ತಿಲಾಂಜಲಿ ಬಿಟ್ಟರು. ಸರ್ಪಭೂಷಣ ಶಿವಯೋಗಿ ನಾಗಲಿಂಗ, ಶಿಶುನಾಳ ಶರೀಫ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಮುಂತಾದ ಅನುಭಾವಿ ಕವಿಗಳ ತತ್ವಪದಗಳನ್ನು ಮೈಮರೆಯುವಂತೆ ಹಾಡುವ ಲಿಂಗಪ್ಪನವರು ಜನಪ್ರಿಯ ಗಾಯಕರಾಗಿದ್ದಾರೆ.
ರಾಜ್ಯಾದ್ಯಂತ ಸಂಚರಿಸಿ ಹಾಡಿರುವ ಈ ಕಲಾವಿದನನ್ನು ಹಲವಾರು ಸಂಘ ಸಂಸ್ಥೆಗಳು ಪ್ರೀತಿಯಿಂದ ಗೌರವಿಸಿದಂತೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ೧೯೯೯ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಸುಮಾರು ನಾಲ್ಕುನೂರು ರಾಧಾನಾಟಕದ ಪ್ರದರ್ಶನ ನೀಡಿರುವ ಹಾಗೂ ಸಣ್ಣಾಟವನ್ನು ಪುನರುತ್ಥಾನಗೊಳಿಸಲು ಮುಂದಾಗಿರುವ ಜನಪ್ರೀತಿಯ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ ಅವರು.
Categories