Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಅಜೀಮ್ ಪ್ರೇಮ್ಜಿ

ವಿಪ್ರೊ ಕಂಪೆನಿಯ ಛೇರ್‌ಮನ್, ಗ್ರಾಮೀಣ ಭಾರತದ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಯೋಜನೆಯ ರೂವಾರಿ , ಶ್ರೀ  ಅಜೀಮ್ ಪ್ರೇಮ್‌ಜಿ ಅವರು.

ಅಮೆರಿಕಾದ ಸ್ಟಾನ್‌ಫೋರ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ೧೯೬೬ನೆಯ ಇಸವಿಯಲ್ಲಿ ತಮ್ಮ ೨೧ನೆಯ ವಯಸ್ಸಿನಲ್ಲಿ ವಿಪ್ರೊ ಕಂಪೆನಿ ಸೇರಿದರು. ಅನತಿ ಕಾಲದಲ್ಲಿಯೇ ಕಂಪೆನಿಯ ಬಂಡವಾಳವನ್ನು ಅನೇಕ ಪಟ್ಟು ಹೆಚ್ಚಿಸುವಲ್ಲಿ ಇವರ ಸಮರ್ಥ ಮುಂದಾಳತ್ವ ಪರಿಣಾಮಕಾರಿಯಾದ ಕಾರ್ಯ ಮಾಡಿತು. ಐ.ಟಿ. ಸೇವೆಯಲ್ಲಿ ಪ್ರಪಂಚದಲ್ಲಿಯೇ ಅತ್ಯುತ್ತಮವಾದ ೧೦೦ ತಾಂತ್ರಿಕ ಕಂಪೆನಿಗಳ ಪೈಕಿ ವಿಪ್ರೊ ಕೂಡ ಒಂದು.

ಭಾರತದ ಸಮೃದ್ಧ ಸಂಪ್ರದಾಯ ಉನ್ನತ ಮೌಲ್ಯ ಇವುಗಳನ್ನು ಹೊಂದಿದ ಯುವಕರನ್ನು ಉದ್ಯಮಶೀಲತೆಗೆ ತೊಡಗಿಸಿ ಅವರಿಂದ ಅತ್ಯುತ್ತಮ ಸಾಧನೆಗಳನ್ನು ಮಾಡಿಸುವಲ್ಲಿ ಶ್ರೀ ಪ್ರೇಮ್‌ಜಿ ಅವರ ಕಾರತತ್ಪರತೆ ಪ್ರಶಂಸನೀಯ. ಇವರ ಮಾರ್ಗದರ್ಶನದಲ್ಲಿ ಸಾವಿರಾರು ಯುವಕರು ಜಾಗತಿಕ ಮಟ್ಟದ ಪ್ರತಿಭಾಪೂರ್ಣ ನೇತಾರರಾಗಿ ರೂಪುಗೊಂಡುದು ಪ್ರೇಮ್‌ಜಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ. ಇದೀಗ ವಿಪ್ರೊ ಕಂಪೆನಿಯು ಜಗತ್ತಿನ ಪ್ರಮುಖ ಐ.ಟಿ. ಕಂಪೆನಿಗಳಲ್ಲಿ ಒಂದೆಂಬ ಪ್ರಖ್ಯಾತಿಯನ್ನು ಗಳಿಸಿದೆ. ಮುಂದಿನ ಶತಮಾನದ ಅಗತ್ಯತೆಗಳನ್ನು ಗ್ರಹಿಸಿ ನಿರ್ದೇಶಿಸಬಲ್ಲ ಅತ್ಯಂತ ಸೂಕ್ಷ್ಮಮತಿಯುಳ್ಳ ಶ್ರೀ ಪ್ರೇಮ್‌ಜಿ ಅವರ ಕಾಣಿಕೆ ಭಾರತ ದೇಶಕ್ಕೆ ಅತ್ಯುಪಯುಕ್ತವಾಗಿ ಪರಿಣಮಿಸಿದೆ. ೨೦೦೫ನೆಯ ಇಸವಿಯೊಳಗೆ ಭಾರತದ ೧೦ ಲಕ್ಷ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಶ್ರೀ ಪ್ರೇಮ್‌ಜಿಯವರ ಮಹತ್ವಾಕಾಂಕ್ಷೆ,

ತಮ್ಮ ಅದ್ಭುತ ವ್ಯಕ್ತಿತ್ವ ಕರ್ತೃತ್ವಶಕ್ತಿ, ಭವಿಷ್ಯದ ಮುಂಗಾಕ್ಕೆ ಅಪ್ರತಿಮ ದೇಶಪ್ರೇಮ, ಭವಿಷ್ಯದ ಪ್ರಜೆಗಳ ಕ್ಷೇಮಾಭಿವೃದ್ಧಿ ಮುಂತಾದ ಉದಾತ್ತ ಕನಸುಗಳನ್ನು ಹೊತ್ತು ಸದಾ ಚಟುವಟಿಕೆಯಲ್ಲಿ ನಿರತರಾಗಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಅಜೀಮ್ ಪ್ರೇಮ್‌ಜಿ ಅವರು.