Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅನಂತನಾಗ್

ಮರಾಠಿ ರಂಗಭೂಮಿಯಲ್ಲಿ ಹೆಸರುಮಾಡಿ ನಂತರ ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ಖ್ಯಾತಿ ಪಡೆದ ಸಂವೇದನಾಶೀಲ ನಟರು ಅನಂತನಾಗ್ ಅವರು. ಹುಟ್ಟಿದ್ದು ಹಸಿರು ಕಡಲ ಮಡಿಲು ಉತ್ತರ ಕನ್ನಡದ ನಾಗರಕಟ್ಟೆಯಲ್ಲ.
ಶ್ರೀ ಅನಂತನಾಗ್ ಅವರು ಕಲಾತ್ಮಕ ಚಿತ್ರಗಳಲ್ಲಿ ಮೊದಲು ಕಾಣಿಸಿಕೊಂಡ ಅನಂತನಾಗ್ ನಂತರ ವಾಣಿಜ್ಯ ಚಿತ್ರಗಳಲ್ಲೂ ನಾಯಕರಾಗಿ ಮಿಂಚಿದವರು. ಅನಂತ್ನಾಗ್ ಅವರ ಮೊದಲ ಚಿತ್ರ ಪಿ. ವಿ. ನಂಜರಾಜ್ ಅರಸ್ ಅವರ ‘ಸಂಕಲ್ಪ’ ಯಾವುದೇ ಪಾತ್ರವಿದ್ದರೂ ಅದಕ್ಕೆ ಜೀವ ತುಂಬುವ ಅನಂತನಾಗ್ ಈವರೆಗೆ ಮಿಂಚಿನ ಓಟ, ಹೊಸನೀರು, ಅವಸ್ಥೆ, ಗಂಗವ್ವ ಗಂಗಾಮಾಯಿ ಚಿತ್ರಗಳ ಅಭಿನಯಕ್ಕಾಗಿ ಮೂರು ಬಾಲ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಾಯಕ ನಟರಾಗಿಯೂ ಹಾಸ್ಯ ಪಾತ್ರಗಳಲ್ಲೂ ಸೈ ಎನ್ನಿಸಿಕೊಂಡಿರುವ ಅನಂತನಾಗ್ ಗಂಭೀರ ಪಾತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಚಂದನದ ಗೊಂಬೆ, ಬೆಂಕಿಯಬಲೆ, ಹಂಸಗೀತೆ, ಬಯಲುದಾಲ, ಗೋಲ್ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಮತದಾನ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಅನಂತನಾಗ್ ಹಿಂದಿ-ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯಲ್ಲೂ ಜನಪ್ರಿಯರು. ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರ ಪಾತ್ರವಂತೂ ಜನಮನದಲ್ಲಿ ಹಚ್ಚಹಸಿರು. ‘ಕನ್ನೇಶ್ವರ ರಾಮ’, ‘ಬರ’, ‘ಮಿಂಚಿನ ಓಟ’, ‘ಬೆಳದಿಂಗಳ ಬಾಲೆ’ ಯಂತಹ ವಿಭಿನ್ನ ಚಿತ್ರಗಳು ಅಭಿನಯ ಪ್ರತಿಭೆಗೆ ಹೊಸ ಆಯಾಮ ನೀಡಿದ ಚಿತ್ರಗಳು
ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಅನಂತನಾಗ್ ಕರ್ನಾಟಕದಲ್ಲಿ ಮಂತ್ರಿಯಾದ ಚಿತ್ರನಟರಲ್ಲೊಬ್ಬರು. ಅದ್ಭುತ ಅಭಿನಯದಿಂದ ಜನಮನವನ್ನು ಸೂರೆಗೊಂಡ ಕನ್ನಡದ ಮೇರುನಟರಲ್ಲೊಬ್ಬರು ಶ್ರೀ ಅನಂತನಾಗ್ ಅವರು.