ಕೈಗಾರಿಕೋದ್ಯಮಿಯೊಬ್ಬರ ಮಗ ಒಬ್ಬ ಯಶಸ್ವಿ ಪತ್ರಿಕೋದ್ಯಮಿಯಾಗಿ ರೂಪುಗೊಂಡ ರೋಚಕ ಕಥನಕ್ಕೆ ಸಾಕ್ಷಿ ಅರಕೆರೆ ಜಯರಾಮ್.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅರಕೆರೆಯ ಜಯರಾಮ್ ಅವರ ಹೆಸರಿನೊಂದಿಗೆ ಲಗತ್ತಾಗಿದೆಯಾದರೂ ಜಯರಾಮ್ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನೂ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನೂ ಪಡೆದುಕೊಂಡ ಜಯರಾಮ್ ಅವರನ್ನು ಆಕರ್ಷಿಸಿದ್ದು ಪತ್ರಿಕೋದ್ಯಮ ಕ್ಷೇತ್ರವೇ. ೧೯೭೨ರಲ್ಲಿ ಹಿಂದೂ ಪತ್ರಿಕೆಗೆ ಪತ್ರಕರ್ತರಾಗಿ ಪ್ರವೇಶಿಸಿದ್ದು ಅವರಿಗೆ ಪತ್ರಿಕೋದ್ಯಮದ ಬಹುಮಖ ಅನುಭವಕ್ಕೆ ನಾಂದಿಯಾಯಿತು.
ವಿಶೇಷ ಬಾತ್ಮೀದಾರರಾಗಿ ರಾಜಕಾರಣದ ವಿವಿಧ ಮುಖಗಳನ್ನು ವಿವಕ್ಷಣತೆಯಿಂದ ವಿಮರ್ಶೆಗೊಳಪಡಿಸುವ ಕಲೆಯನ್ನು ಕರಗತವಾಗಿಸಿಕೊಂಡ ಜಯರಾಮ್ ಅವರು ಸಿದ್ದಪಡಿಸಿದ ವಿಶೇಷ ವರದಿಗಳಲ್ಲಿ ಮುಖ್ಯವಾದವು ನ್ಯಾಯಮೂರ್ತಿ ಜೆ. ಸಿ. ಷಾ ತನಿಖಾ ಆಯೋಗ, ನ್ಯಾಯಮೂರ್ತಿ ಎ.ಎನ್. ಗ್ರೂವರ್ ಆಯೋಗ ಮತ್ತು ನ್ಯಾಯಮೂರ್ತಿ ಕುಲದೀಪ್ಸಿಂಗ್ ಆಯೋಗ, ರಾಜಕಾರಣ, ಇತಿಹಾಸ, ಕಾನೂನು, ಶಿಕ್ಷಣ, ಸಾರ್ವಜನಿಕ ವಿಚಾರಗಳ ಬಗೆಗೆ ತೀವ್ರ ಆಸಕ್ತಿಯಿರುವ ಜಯರಾಮ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಹೆರಿಟೇಜ್ ವಾಚ್’ ಮತ್ತು ‘ಲಿವಿಂಗ್ ಲೆಜೆಂಡ್ಸ್’ ಕಾಲಂಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಮೈಸೂರು ಅರಸರ ಕಾಲದ ಇತಿಹಾಸ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಜಯರಾಮ್ ಆ ಬಗ್ಗೆ ಇಂಗ್ಲಿಷ್ನಲ್ಲಿ ಪ್ರಸ್ತಕವೊಂದನ್ನು ಹೊರತಂದಿದ್ದಾರೆ. ಅತ್ಯುತ್ತಮ ಸಾರ್ವಜನಿಕ ಭಾಷಣಕಾರರಾಗಿದ್ದು ಹಲವಾರು ವಿಚಾರಗೋಷ್ಠಿ ವಿಚಾರಸಂಕಿರಣಗಳಲ್ಲಿ ಭಾಗವಹಿಸಿರುವುದಲ್ಲದೆ ಆಕಾಶವಾಣಿ ದೂರದರ್ಶನದ ಕಾರಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸರ್ಕಾರದ ನಾಮಕರಣ ಸದಸ್ಯರಾಗಿ ವಾರ್ತಾ ಇಲಾಖೆಯ ಪತ್ರಿಕೋದ್ಯಮ ಮಾನ್ಯತಾ ಸಮಿತಿಯಲ್ಲೂ ಕಾರ ನಿರ್ವಹಿಸಿರುವ ಅರಕೆರೆ ಜಯರಾಮ್ ಪ್ರತಿಷ್ಠೆ ಕುಶಲತೆಗಳು ಸಂಗಮಿಸಿದ ಅಪರೂಪದ ಪತ್ರಕರ್ತರಾಗಿದ್ದಾರೆ.
Categories
ಶ್ರೀ ಅರಕೆರೆ ಜಯರಾಂ
