ಶತ ಸಹಸ್ರ ದಳವ ತೆರೆದು
ಅರಳಿದ ಅರವಿಂದವೇ
ದಶದಿಸೆಗಳ ವ್ಯಾಪಿಸಿಹುದು
ನಿನ್ನ ಈ ಸುಗಂಧವೆ.

ಭಾರತೀಯ ಸ್ವಾತಂತ್ರ್ಯದ
ಪ್ರಥಮ ಸ್ಫೋಟ ಸ್ಫೂರ್ತಿಯೆ
ರಾಷ್ಟ್ರ ಮಹಾತೇಜಸ್ಸಿಗೆ
ರೂಪವಿತ್ತ ಶಿಲ್ಪಿಯೆ.

ಅತಿಮಾನಸ ಶಿಖರ ಸರೋವರದ
ದಿವ್ಯ ಹಂಸವೆ
ಕಾವ್ಯನಭದಿ ಗರಿಗೆದರಿದ
ವೈನತೇಯ ಸತ್ವವೆ.

ನವ ಮಾನವ ನಿರ್ಮಾಣದ
ಸಂಕಲ್ಪದ ಕಿರಣಕೆ
ಶರಣೆಂಬೆವು. ಮಹಾಯೋಗಿ
ನಿನ್ನ ದಿವ್ಯ ಚರಣಕೆ.