ಶಾಲೆಯ ಹೆಬ್ಬಾಗಿಲಿನಲ್ಲಿ ಧ್ವಜಾರೋಹಣ ನಡೆಯುತ್ತಿದೆ.

ವಂದೇ ಮಾತರಂ,
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶಾಮಲಾಂ
ಮಾತರಂ ||

ತ್ರಿವರ್ಣ ಬಾವುಟ ಗಂಭೀರವಾಗಿ ಹಾರುತ್ತಿದೆ. ಶಾಲಾ ಬಾಲಕರು ರಾಷ್ಟ್ರಗೀತೆ ಹಾಡುತ್ತಿದ್ದಾರೆ

ಶುಭ್ರಜ್ಯೋತ್ಸ್ನಾ ಪುರಕಿತಯಾಮಿನೀಂ
ಫುಲ್ಲಕುಸುಮಿತ ದ್ರಮದಲ ಶೋಭೀನಿಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ವಂದೇ ಮಾತರಂ ||

ರಾಷ್ಟ್ರಗೀತೆ  ಮುಗಿದು ಬಾಲಕರು ಶಾಲೆಯ ಒಳ ಅಂಗಳಕ್ಕೆ ನಡೆದರು. ಅಲ್ಲಿ  ಮುಖ್ಯ ಉಪಾಧ್ಯಾಯರು ಸಿಹಿ ಹಂಚುತ್ತಿದ್ದಾರೆ. ಒಬ್ಬನ ಕೈಯಲ್ಲಿ ಒಂದು ಪೊಟ್ಟಣ  ಇಟ್ಟು:

ಈ ಸಿಹಿ ಯಾಕೆ ಗೊತ್ತಾ? ಎಂದು ಆ ಹುಡುಗನನ್ನು ಕೇಳಿದರು.
“ಇವೊತ್ತು ಸ್ವಾತಂತ್ರ್ಯೋತ್ಸವ ಸರ್”
ಅಂದರೆ,?

“ಅಂದರೆ, ನಮ್ಮ ದೇಶ ಪರರ ಆಳ್ವಿಕೆಯಿಂದ ಬಿಡುಗಡೆಹೊಂದಿ ಸ್ವತಂತ್ರವಾಯಿತು ಅಂತ”

“ಗಾಂಧಿತಾತಾ ಸತ್ಯಾಗ್ರಹ , ಹೂಡಿ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ತಂದರು, ಸರ್”.

ಅವರ ಜೊತೆಗೆ  ಮತ್ತೇ ಯಾರು ಯಾರು ದುಡಿದರು? ಅವರಿಗಿಂತ ಮೊದಲು ಯಾರು ದುಡಿದರು?

“ದೇಶದ ಜನರೆಲ್ಲ ಚಳುವಳಿ ಮಾಡಿದರು. ಸುಭಾಷ ಚಂದ್ರಬೋಸರು, ಲಾಲಾಲಜಪತರಾಯರ,  ಬಾಲಗಂಗಾಧರ ತಿಲಕರು, ವೀರಸಾವರಕರರು, ಅರವಿಂದರು, ಇನ್ನೂ ಎಷ್ಟೋ  ಜನ ದೇಶಕ್ಕಾಗಿ ದುಡಿದರು”.

ಭೇಷ್ ! ದೇಶಕ್ಕಾಗಿ ದುಡಿದರು ಅಂದರೇನು?

“ಚಳುವಳಿ ಹೂಡಿದರು ಲಾಠಿ ಎಟು ತಿಂದರು! ಜೈಲು ಸೇರಿದರು! ಕೆಲವರು ಪ್ರಾಣಕೊಟ್ಟರು!!”

ಹಾಗೆಯೇ ಜನರನ್ನು ಹುರಿದುಂಬಿಸಿದವರು ಯಾರು ? ಹುಡುಗರಿಗೆ ಈ ಪ್ರಶ್ನೆ ಸ್ವಲ್ಪ ಕಠಿಣವಾಯಿತು. ಸುಮ್ಮನೆ ನಿಂತರು.

“ಈಗ ತಾನೇ ನೀವು ರಾಷ್ಟ್ರಗೀತೆ ಹಾಡಿದ್ದೀರಲ್ಲ. ಅದನ್ನು ಯಾರು ಬರೆದಿದ್ದು?

“ಗೊತ್ತಿಲ್ಲ ಗುರುಗಳೇ”.

ಗೊತ್ತು ಮಾಡಿಕೋಬೇಕು. ಆ ಪುಣ್ಯಾತ್ಮನ ಹೆಸರನ್ನು ಮರೆತರೆ ನಾವು ಯಾತಕ್ಕೂ ಸಲ್ಲದವರಾಗ್ತೇವೆ. ಹೆತ್ತ ತಂದೆ-ತಾಯಿಗಳನ್ನು ಮರೆತಷ್ಟು ದೊಡ್ಡ ತಪ್ಪು.

“ಯಾರು ಗುರುಗಳೇ ಅವರು?” ನಾಲ್ಕಾರು ಹುಡುಗರು ಒಂದೇ ಬಾರಿಗೆ ಕೇಳಿದರು.

ಬಂಕಿಂ ಚಂದ್ರ ಚಟರ್ಜಿ ಅಂತ ಒಬ್ಬ ಮಹಾ ಪುರುಷರಿದ್ದರು.  ಅವರು “ಆನಂದಮಠ” ಎಂಬ ಕಾದಂಬರಿ ಬರೆದರು. ಅದರಲ್ಲಿ ಬರುವ ಸಂತಾಲ ಸಂನ್ಯಾಸಿಗಳು ತಾಯಿ ಭವಾನಿಯನ್ನು ಕುರಿತು “ವಂದೇ ಮಾತರಂ” ಎಂದು ಒಂದು ಗೀತೆಯನ್ನು ಹಾಡುತ್ತಾರೆ. ಆ ಗೀತೆಯೇ ನಮ್ಮ ಸ್ವಾತಂತ್ಯ್ರ ಯೋಧರ ಸಮರಗೀತೆ ಆಯಿತು.

” ಆ ಸಂನ್ಯಾಸಿಗಳ ಗೀತೆ  ಸ್ವಾತಂತ್ಯ್ರ ಯೋಧರ ಸಮರ ಗೀತೆ ಹೇಗಾಯಿತು ಗುರುಗಳೇ?”

೧೯೦೫ರಲ್ಲಿ ಬಂಗಾಳ ಅದಿಪತ್ಯವನ್ನು ಎರಡಾಗಿ ಸೀಳಬೇಕೆಂದು ಬ್ರಿಟಿಷರು ಒಂದು ಶಾಸನ ಮಾಡಿದರು. ಅದರು ಆಗಬಾರದೆಂದು ಬಂಗಾಳದಲ್ಲಿ ಒಂದು ಭಯಂಕರ ಬಂಡಾಯ ಎದ್ದಿತು. ಆ ಬಂಡಾಯದ ಕಾಲಕ್ಕೆ”ವಂದೇ ಮಾತರಂ” ಗೀತೆಯನ್ನು ಸಮರಗೀತೆಯನ್ನಾಗಿ ಬಳಸಿಕೊಂಡರು.

“ಆ ಗೀತೆಯನ್ನೇ ಏಕೆ ಬಳಸಿಕೊಂಡರು?” ಎಂದೊಬ್ಬ ಹುಡುಗ ಹೇಳಿದ.

ಬಂಗಾಳದ ಜನ ಬಂಡಾಯ ಹೂಡಿದರು. “ವಂದೇಮಾತರಂ” ಎಂದು ಜಯಘೋಷ ಮಾಡುತ್ತಾ ಕಲಕತ್ತ, ಢಾಕಾ ಮುಂತಾದ ಪಟ್ಟಣಗಳಲ್ಲಿ ಮೆರವಣೀಗೆ ಹೂಡಿದರು. ಸರಕಾರ ಆ ಘೋಷಣೆ ಮಾಡಬಾರದೆಂದು ಅಪ್ಪಣೆ ಹೊರಡಿಸಿತು. ಆದರೆ ಜನ ಕೂಗುವುದನ್ನು ಬಿಡಲಿಲ್ಲ. ಚಿಕ್ಕ ಚಿಕ್ಕ ಬಾಲಕರು ಸಹ ಆ ಮಂತ್ರವನ್ನು  ಘೋಷಿಸತೊಡಗಿದರು.

“ಸರಕಾರ ಸುಮ್ಮನಿತ್ತೇ ಗುರುಗಳೇ?”

ಸುಮ್ಮನೆ ಏಕೆ ಇದ್ದೀತು? ಹಾಗೆ ಕೂಗಿದವರನ್ನು ತಲೆ ಒಡೆಯುವಂತೆ , ಮೂಳೆ ಮುರಿಯುವಂತೆ ಬಡಿದರು. ನಿಮ್ಮಂಥ ಶಾಲಾ ಬಾಲಕರೂ ಸಹ “ವಂದೇ ಮಾತರಂ” ಎಂಬ ಘೋಷಣೆ ಮಾಡಿ ಛಡಿ ಏಟು ತಿಂದರು. ಈ “ವಂದೇ ಮಾತರಂ ಘೊಷಣೆಯಿಂದಲೇ ಖುದಿರಾಮ ಬೋಸ್ ಎಂಬ ಒಬ್ಬ ವಿದ್ಯಾರ್ಥಿ ನಗುನಗುತ್ತಲೇ ನೇಣುಗಂಭ ಹತ್ತಿದ.  ಕುತ್ತಿಗೆಗೆ ಉರುಳೂ ಎಳೆಯುವಾಗಲೂ ಅವನು “ವಂದೇ ಮಾತರಂ” ಎಂದು ಕೂಗಿದ. “ವಂದೇ ಮಾತರಂ ಎಂದು ಪ್ರಾಣ ಬಿಟ್ಟ.

“ಇಂಥ ಹುಮ್ಮಸ್ಸು ಹುಟ್ಟುವಂತೆ ಯಾರು ಮಾಡಿದರು ಗುರುಗಳೇ”

ಅರವಿಂಧ ಘೋಷ್ ಎಂಬ ಮಹಾನುಭಾವರೊಬ್ಬರರಿದ್ದರು. ಅವರು “ವಂದೇ ಮಾತರಂ” ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಈ ಪತ್ರಿಕೆಯ ಮೂಲಕ ಪುಣ್ಯಾತ್ಮರು ಇಡೀ ಬಂಗಾಳದ ಜನತೆಯನ್ನು ಎಚ್ಚರಿಸಿದರು. ಬಂಕಿಮಚಂದ್ರರು ರಚಿಸಿದ “ವಂದೇ ಮಾತರಂ” ಎಂಬ ಮಂತ್ರಕ್ಕೆ  ಜೀವ ತುಂಬಿದವರು ಶ್ರೀ ಅರವಿಂದ ಘೋಷರು.

“ಅವರ ವಿಚಾರವಾಗಿ ಹೇಳಿ ಗುರುಗಳೇ?

ಈ ಸ್ವಾತಂತ್ಯ್ರ ದಿನವೇ ಅವರ ಜನ್ಮ ದಿನವೂ ಕೂಡ. ನಮ್ಮ ಸ್ವಾತಂತ್ಯ್ರದ ಸುವರ್ಣ ಮಹೋತ್ಸವದ ಈ ದಿನವೇ (೧೫-೮-೧೯೯೭ ಶ್ರೀ ಅರವಿಂದರ ೧೨೫ನೇ ಜನ್ಮದಿನ ಕೂಡ. ಶ್ರೀ ಅರವಿಂದರು ಜನ್ಮ ಕಥೆಯನ್ನು ಕೇಳಿರಿ.

ಬೇರೊಂದು ಸಂಸ್ಕೃತಿಯು ಜಗತ್ತಿನಲ್ಲಿ :

ನಮ್ಮ ದೇಶದಲ್ಲಿ ಪಶ್ಚಿಮ ಬಂಗಾಳವೆಂಬ ರಾಜ್ಯವಿದೆ. ಅಲ್ಲಿ ಕೊನ್ನಗರ ಎಂಬ ಪಟ್ಟಣವಿದೆ. ಆ ನಗದಲ್ಲಿ ಡಾ.ಕೃಷ್ಣಧನ ಘೋಷ್ ಎಂಬ ವೈದರಿದ್ದರು. ಅವರು ಆಗಿನ ಕಾಲಕ್ಕೆ ದೊಡ್ಡ ಅಧಿಕಾರಿಗಳು. ಐ.ಎಂ.ಎಸ್. (ಇಂಡಿಯನರ್ ಮೆಡಿಕಲ್ ಸರ್ವಿಸ್ )ಪದವಿ ಪಡೆದವರು. ಅವರು ಇಂಗ್ಲಂಡಿಗೆ ಹೋಗಿ ಬಂದಿದ್ದರು.

ಶ್ರೀ ಅರವಿಂದ ಘೋಷರಿಗೂ ಅವರಿಗೆ ಏನು ಸಂಬಂಧ ಸಾರ್?

ಅದನ್ನೇ ಹೇಳುತ್ತಿದ್ದೆ ಮಗೂ. ಅವರು ಶ್ರೀ ಅರವಿಂದರ ತಂದೆ. ಸ್ವರ್ಣಲತಾದೇವಿ ಶ್ರೀ ಅರವಿಂದರ ತಾಯಿ. ೧೮೭೨ನೇ ಅಗಸ್ಟ ೧೫ ರಂದು ಶ್ರೀ ಅರವಿಂದರು ಹುಟ್ಟಿದರು. ಶ್ರೀ ಅರವಿಂದರ ತಂದೆ ಇಂಗ್ಲೆಂಡರಿಗೆ ಹೋಗಿ ಬಂದಿದ್ದರು ಎಂದು ಹೇಳುತ್ತಿದ್ದೇನಲ್ಲವೇ? ಆಗ ಇಂಗ್ಲೇಂಡಿಗೆ ಹೋಗಲು ಸಮುದ್ರ ಪ್ರಯಣ ಮಾಡಿಯೇ ಹೋಗಬೇಕಾಗಿತ್ತು. ಕೃಷ್ಣಧನರೂ ಕೂಡ ಸಮುದ್ರ ಪ್ರಯಾಣ ಮಾಡಿ ಬಂದರು.

“ಆದರೇನಾಯಿತು ಸಾರ್?”

ಏನೂ ಆಗುವುದಿಲ್ಲ. ಆದರೆ ಆಗಿನ ಕಾಲದಲ್ಲಿ ಒಂದು ಮೂಢನಂಬುಗೆ ಜನರಲ್ಲಿತ್ತು. ಸಮುದ್ರ ಪ್ರಯಾಣ ಮಾಡಿದರೆ ಕುಲಗೆಟ್ಟು ಹೋಗುತ್ತದೆ ಎಂದು ಜನ ನಂಬಿದ್ದರು.  ಕುಲಗೆಟ್ಟವರನ್ನು ಕುಲದಲ್ಲಿ ಸೇರಿಸಿಕೊಳ್ಳಲು ಪ್ರಾಯಶ್ಚಿತ ಮಾಡಿಸಿಕೊಳ್ಳಬೇಕೇಂದು ಅಲ್ಲಿಯ ಮಡಿವಂತ ಜನ ಹೇಳಿದರು. ಕೃಷ್ಣಧನರಿಗೆ ಈ ಮಾತು ಸರಿಬರಲಿಲ್ಲ. ಆದ್ದರಿಂದ ನಿಮ್ಮ ಕುಲವೂ ಬೇಡ ನಿಮ್ಮ ಊರೂ ಬೇಡ ಎಂದು ಎರಡನ್ನೂ ಬಿಟ್ಟು ಬಿಟ್ಟರು. ಅವರ ಮನಸ್ಸು ಹೀಗೆ ತುಂಬ ಬೇಸರಗೊಂಡಾಗಲೇ ಶ್ರೀ ಅರವಿಂದರು ಹುಟ್ಟಿದರು. ಕೃಷ್ಣಧನರು ತಾವು ಈ ಹಿಂದೆ ಧರ್ಮದ ಪ್ರಭಾವದಿಂದ ಸಿಡಿದುಹೋದರಲ್ಲದೇ, ತಮ್ಮ ಮಕ್ಕಳಿಗೂ ಅದರ ಸೊಂಕು ತಗುಲಬಾರದೆಂದು ನಿರ್ಧರಿಸಿದರು.

“ಅದು ಸಾಧ್ಯವೇ ಗುರುಗಳೇ?”

ಅಷ್ಟು ಸುಲಭವಲ್ಲ. ಶ್ರೀ ಅರವಿಂದರಿಗೂ ಈ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಏನೊಂದು ತಿಳೀಬಾರದೆಂದು ಒಬ್ಬ ಆಂಗ್ಲ ಮಹಿಳೆಯ ವಶಕ್ಕೆ ಮಗು ಅರವಿಂದರನ್ನು ಕೊಟ್ಟು ಬೆಳೆಸತೊಡಗಿದರು. ಆ ದಾದಿ ಅರವಿಂದರೊಡನೆ ಮರೆತೂ ಬಂಗಾಳಿ ಭಾಷೆಯಲ್ಲಿ ಮಾತನಾಡಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಕೇವಲ ಇಂಗ್ಲೀಷಿನಲ್ಲಿಯೇ ಮಾತನಾಡಬೇಕೆಂದು ಆಜ್ಞೆ ವಿಧಿಸಿದ್ದರು. ಅವರ ಅಪೇಕ್ಷೆಯಂತೆಯೇ ಬಾಲಕ ಅರವಿಂದ ಬೆಳೇದ. ಅವನಿಗೆ ಏಳು ವರ್ಷ ಆದಗಲೂ  ಒಂದಕ್ಷರ  ಬಂಗಾಳಿ ಭಾಷೆ ಬರುತ್ತಿರಲಿಲ್ಲ. ಅವರಪ್ಪ ಅರವಿಂದನನ್ನು ಪಕ್ಕಾ ಆಂಗ್ಲದೊರೆಯನ್ನಾಗಿ ಮಾಡಬೇಕೆಂದು ಅಂದುಕೊಂಡಿದ್ದರು. ಆದ್ದರಿಂದ ಅರವಿಂದ ಇನ್ನೂ ಏಳು ವರ್ಷದ ಬಾಲಕನಾಗಿದ್ದಾಗಲೇ ಅವನನ್ನೂ ಅವನಣ್ಣಂದಿರನ್ನೂ ಕರೆದುಕೊಂಡು ಇಂಗ್ಲೇಂಡಿಗೆ ಹೋದರು. ಮ್ಯಾಂಚೇಸ್ಟರ್‌ ಪಟ್ಟಣದಲ್ಲಿ ಡ್ರೂವೆಟ್ ದಂಪತಿಗಳೆಂಬ ಕ್ರೈಸ್ತ ಪಾದ್ರಿಗಳ ಮನೆಯಲ್ಲಿ ಬಿಟ್ಟರು.

ಅಯ್ಯೋ ಅಂತೂ ಅವರು ಕ್ರೈಸ್ತರಾಗೇ ಬಿಟ್ಟರೇ?” ಎಂದು ಒಬ್ಬ ಹುಡುಗ ದಿಗಿಲಿನಿಂದ ನುಡಿದ.

ಇಲ್ಲ, ಇಲ್ಲ! ದೇವರ ದಯೆಯಿಂದ ಅವರು ಕ್ರೈಸ್ತರಾಗಲಿಲ್ಲ. ಕ್ರೈಸ್ತರನ್ನಾಗಿ ಮಾಡಬೇಕೆಂದು ಶ್ರೀಮತಿ ಡ್ರೂವೆಟ್ ಸೂಚಿಸಿದಾಗ, ಆಕೆಯ ಗಂಡ, “ಕೂಡದು” ಎಂದು ಆಗಗೊಡಲಿಲ್ಲ. ಡ್ರೂವೆಟ್ ದೊಡ್ಡ ಮನುಷ್ಯ. ನಂಬಿ ತಮ್ಮ ವಶಕ್ಕೆ ಒಪ್ಪಿಸಿದ ಚಿಕ್ಕ ಮಕ್ಕಳ ಜಾತಿ ಕೆಡಿಸಲು ಆತ ಒಪ್ಪಲಿಲ್ಲ. ಡ್ರೂವೆಟ್ ದಂಪತಿಗಳು ಬಾಲಕ ಅರವಿಂದನಿಗೆ ಅತ್ಯಂತ ಉತ್ತಮ ಶಿಕ್ಷಣ ಕೊಟ್ಟರು. ಅವನಿನ್ನೂ ಶಾಲೆಗ ಸೇರುವ ವಯಸ್ಸಾಗಿರಲಿಲ್ಲದ್ದರಿಂದ ಮನೆಯಲ್ಲೇ ಚೆನ್ನಾಗಿ ಪಾಠ ಹೇಳೀಕೊಟ್ಟರು. ಇಂಗ್ಲೀಷಿನ ಜೊತೆಗೆ ಗ್ರೀಕ್, ಲ್ಯಾಟಿನ್, ಫ್ರೆಂಚ್, ಭಾಷೆಗಳನ್ನು ಕಲಿಸಿದರು. ಎಷ್ಟು ಚೆನ್ನಾಗಿ ಓದು ಕಲಿಸಿದರೆಂದರೆ ಅರವಿಂದನಿಗೆ ಹನ್ನೆರಡು ವರ್ಷ ತುಂಬುವುದರ ಒಳಗಾಗಿ ಷೆಕ್ಸಪೀಯರನ ನಾಟಕಗಳನ್ನೆಲ್ಲ ಓದಿಸಿದರು. ಇಂಗ್ಲೀಷಿನಲ್ಲಿ ಕವಿತೆ ಬರೆಯುವ ಶಕ್ತಿಯೂ ಬಂತು.

“ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಷ್ಟು ಭಾಷೆಗಳನ್ನು ಕಲಿಯಲು ಸಾಧ್ಯವೇ? ಗುರುಗಳೆ?

ಯಾಕೆ ಸಾಧ್ಯವಿಲ್ಲ? ಶ್ರೀ ಅರವಿಂದರು ಕಲಿತವರಲ್ಲ. ಶ್ರೀಶಂಕರಾಚಾರ್ಯರೂ ಅಷ್ಟೇ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಮೇಧಾಶಕ್ತಿ ತೋರಿಸಿದ್ದರಂತಎ! ಮನಸ್ಸಿಟ್ಟು ಕಲಿತರೆ ಅದೇನೂ ಅಸಾರ್ಧಯದ ಮಾತಲ್ಲ. ಪ್ರಯತ್ನ  ಮಾಡಿದರೆ ನಿಮಗೂ ಸಾಧ್ಯ! ೧೮೮೪ರಲ್ಲಿ ಡ್ರೂವೆಟ್ ದಂಪತಿಗಳು ಆಸ್ಟ್ರೇಲಿಯಾಕ್ಕೆ ಹೋದರು. ಹೋಗುವಾಗ ಅರವಿಂದನನ್ನೂ ಮತ್ತು ಅವನ ಇಬ್ಬರೂ ಅಣ್ಣಂದಿರನ್ನೂ ಲಂಡನ್ನಿಗೆ ಕರೆದುಕೊಂಡು ಹೋದರು. ಅಲ್ಲಿ ಅವರನ್ನು ಡ್ರೂವೆಟರ ತಾಯಿಯ ಬಳಿ ಬಿಟ್ಟರು. ಅಲ್ಲಿ ಹುಡುಗ ಅರವಿಂದ ಸೇಂಟ್ ಪಾಲ್ಸ್ ಹೈಸ್ಕೂಲಿಗೆ  ಸೇರಿದ. ಐದು ವರ್ಷಗಳವರೆಗೆ ಅಲ್ಲಿ ಶಿಕ್ಷಣ ಪಡೆದ.ಗ್ರೀಕ್, ಲ್ಯಾಟಿನ್, ಫ್ರೇಂಚ್ ಮತ್ತು ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯ ಪಡೆದ. ಅದಕ್ಕಾಗಿ ಅವನಿಗೆ “ಬಟರ್ ವರ್ತ” ಬಹುಮಾನ ಬಂದು. ಇತಿಹಾಸದಲ್ಲಿ ಪ್ರಾವಿಣ್ಯತೆ ಪಡೆದುದಕ್ಕಾಗಿ ಪೋರ್ಡ ಬಹುಮಾನ ಬಂತು.  ಒಟ್ಟು ಎಂಬತ್ತು ಪೌಂಡ್ ಸಿಗುತ್ತಿತ್ತು. ಆ ಹಣದಿಂದಲೇ ಅರವಿಂದ ವಿದ್ಯಾಭ್ಯಾಸ ಮುಂದುವರೆಸಿದ್ದು.

“ಹಾಗಾದರೆ ಅವರ ತಂದೆಯವರು ಹಣ ಕಳೀಸುತ್ತಿರಲಿಲ್ಲವೇ, ಸರ್?”

ಮ್ಯಾಂಛೇಸ್ಟರಿನಲ್ಲಿರುವಾಗಲೇ ಕೃಷ್ಣಧನ ಘೋಷರು ಮಕ್ಕಳೀಗೆ ಹಣ ಕಳೂಹಿಸುವುದನ್ನು ನಿಲ್ಲಿಸಿ ಬಿಟ್ಟಿದ್ದರು. ಅದರಿಂದಾಗಿ ಅವರಿಂದ ಮತ್ತು ಅವನ ಅಣ್ಣಂದಿರು ಬಹಳ ಕಷ್ಟ ಅನುಭವಿಸಬೇಕಾಯಿತು. ಉಡುವ ಬಟ್ಟೆಗೂ ತಾಪತ್ರಯವಾಗಿತ್ತು.ರಾತ್ರಿ ಹೊದೆಯಲು ರಗ್ಗು ಕೂಡ ಇರಲಿಲ್ಲ. ಕಾಲಿಗೆ ಬೂಟ್ಸ ಇರಲಿಲ್ಲ. ಆದರೂ ಓದನ್ನೂ ಅಲಕ್ಷ್ಯ ಮಾಡಲಿಲ್ಲ. ಯಾವಾಗಲೂ ಉನ್ನತ ಶ್ರೇಣಿಯಲ್ಲಿಯೇ ತೇರ್ಗಡೆ ಹೊಂದುತ್ತ, ಸೇಂಟ್ ಪಾಲ್ಸ್ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿದ. ಅಷ್ಟು ಹೊತ್ತಿಗೆ ಐ.ಸಿ.ಎಸ್. ಪದವಿಗೂ ಅರ್ಹತೆ ಪಡೆದ.

ಕಮಲಕಠಾರಿ:

ಸೇಂಟ್ ಪಾಲ್ಸ್ ಹೈಸ್ಕೂಲ್ ವ್ಯಾಸಂಗ ಮುಗಿಸಿದ ಮೇಲೆ ಅರವಿಂದರು ಕೆಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿದ ಕಿಂಗ್ಸ ಕಾಲೇಜಿಗೆ ಸೇರಿಕೊಂಡರು. ಅಲ್ಲಿ ಎರಡು ವರ್ಷ ವ್ಯಾಸಂಗ ಮಾಡಿ “ಕ್ಲಾಸಿಕಲ್ ಟ್ರೈ ಪಾಸ್” ಪರೀಕ್ಷೆಯಲ್ಲಿ ಬಹುಶ್ರೇಷ್ಠ ಮಟ್ಟದಲ್ಲಿ ತೇರ್ಗಡೆ ಹೊಂದಿದರು. ಅವರು ೧೮೯೧ರಲ್ಲಿ ಆ ಪದವಿಯಲ್ಲಿ ಪಡೆದಷ್ಟು ಅಂಕಗಳನ್ನು ಇದುವರೆಗೆ ಯಾರೂ ಪಡೆದಿಲ್ಲವೆಂದು ಬಲ್ಲವರು  ಹೇಳುತ್ತಾರೆ.  ಶ್ರೀ ಅರವಿಂದರು ಪರೀಕ್ಷೆಯಲ್ಲಿ ಬೆರೆದಿದ್ದ ಪ್ರಬಂಧಗಳನ್ನು ಪರೀಕ್ಷಿಸಿದ ಆಸ್ಕರ್ ಬ್ರೌನಿಂಗ್ ಎಂಬ ಘನ ವಿಧ್ವಾಂಸರು, ಅವರ ಜಾಣ್ಮೆಯನ್ನು ನೋಡಿ ಶ್ರೀ ಅರವಿಂದರ ಮುಂದೆ ಹೇಳಿದರಂತೆ. ನಾನು ಹದಿಮೂರು ವರ್ಷ ಪರೀಕ್ಷೆಗಳಲ್ಲಿ ಉತ್ತರ ಪತ್ರಿಕೆಗಳನ್ನು ಪರೀಕ್ಷಿಸಿದ್ದೇನೆ. ನೀವು ಬರೆದಂತಹ  ಅತ್ಯಂತ ಶ್ರೇಷ್ಠ ಮಟ್ಟದ ಪತ್ರಿಕೆಯನ್ನು ಎಂದೂ ಕಾಣಲಿಲ್ಲ” ಎಂಬುವುದಾಗಿ.

ಶ್ರೀ ಅರವಿಂದರು ಆಗಲೇ ಶ್ರೇಷ್ಠ ಮಟ್ಟದ ಕವಿ ಎಂಬ ಪ್ರತೀತಿಯಾಗಿತ್ತು. ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಬ್ರೌನಿಂಗ್ ಕಾವ್ಯಪಕ್ಷಪಾತಿ. ಆದ್ದರಿಂದ ಶ್ರೀ ಅರವಿಂದರು ಅಲ್ಲಿ ಬರೆದಿದ್ದ ಕೆಲವು ಕಾವ್ಯ ಕೃತಿಗಳನ್ನು ಕಂಡು ಅವರು ಬೆರಗಾಗಿದ್ದರು. ಶ್ರೀ ಅರವಿಂದರನ್ನು ಒಮ್ಮೆ ತಮ್ಮ ಮನೆಗೆ ಉಪಹಾರಕ್ಕಾಗಿ ಕರೆದು ಗೌರವಿಸಿ, ಬ್ರೌನಿಂಗ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

“ಇದೆಲ್ಲವೂ ಸರಿ.ಆದರೆ ಅವರು ಇಂಗ್ಲೆಂಡಿನಲ್ಲಿದ್ದಾಗ ನಮ್ಮ ದೇಶ ಸ್ವಾತಂತ್ಯ್ರದ ಬಗ್ಗೆ ಏನಾದರೂ ಹಚ್ಚಿಕೊಂಡರೋ?”

ಅದನ್ನೇ ಹೇಳಲಿದ್ದೆ. ಕೇಂಬ್ರಿಜ್‌ ನಲ್ಲಿದ್ದ ಎರಡು ವರ್ಷ ಮಾಡಿದ ಕೆಲಸವೆಂದರೆ ಅಲ್ಲಿದ ಭಾರತೀಯ ಯುವಕರನ್ನು ದೇಶದ ಸ್ವಾತಂತ್ಯ್ರಕ್ಕಾಗಿ ದುಡಿಯುವಂತೆ ಹುರಿದುಂಬಿಸಿದ್ದು.

“ದೇಶಸ್ವಾತಂತ್ಯ್ರ ವಿಚಾರವಾಗಿ, ಅವರಿಗೆ ಗೀಳು ಹಿಡಿದದ್ದು ಹೇಗೆ ಎಂಬುವುದೇ ಗೊತ್ತಾಗಲಿಲ್ಲ, ಸಾರ್”.

ಯಾವ ಕಾರಣಗಳಿಂದ ಅವರು ನಮ್ಮ ದೇಶ ಬಂದ ವಿಮೋಚನೆಗಾಗಿ ಹೆಣಗಲು ಮುಂದೆ ಬಂದರೋ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆಗ ಭಾರತ ದೇಶದಲ್ಲಿ ಅದರಲ್ಲಿಯೂ ಬಂಗಾಳದಲ್ಲಿ ಬ್ರಿಟಿಷ್ ನೌಕರರ ದಬ್ಬಾಳಿಕೆ,ದೌರ್ಜನ್ಯದ ಘೋರ ಸುದ್ಧಿಗಳನ್ನು ಅವರ ತಂದೆಯವರು ಒಂದೆಡರಡು ಬಾರಿ ತಿಳಿಸಿದರಂತೆ. ಒಮ್ಮೆ ಕಲ್ಕತ್ತೆಯ ಒಂದು ಆಟದ ಮೈದಾನದಲ್ಲಿ ನಿಮ್ಮಂಥ ಶಾಲಾ ಬಾಲಕರು”ಫುಟ್ ಬಾಲ್” ಆಡುತ್ತಿದ್ದರಂತೆ. ಆ ಚೆಂಡು ಆಟದ ಮೈದಾನದಿಂದ ನೆಗೆದು ರಸ್ತೆಗೆ ಹೋಯಿತು. ಆಗಲೇ ಒಬ್ಬ ಆಂಗ್ಲ ಅಧಿಕಾರಿ ಕುದುರೆಯ  ಮೇಲೆ ಅಲ್ಲಿ ಹಾದು ಹೋಗುತ್ತಿದ್ದ. ಒದೆದ ಚೆಂಡು ರಭಸಕ್ಕೆ ಬಂದುದರಿಂದ ಕುದುರೆ ಬೆದರಿತು.  ಕುದುರೆಯಿಂದ ಇಳಿದು ಆ ಚೆಂಡನ್ನು ತೆಗೆದುಕೊಂಡು ಚಾಕುವಿನಿಂದ ಸೀಳೀ ಎರಡು ಹೋಳೂ ಮಾಡಿದನಂತೆ ಆ ಶೂರ!

“ಎಲ್ಲಾ ಇವನ!” ಎಂದ ಒಬ್ಬ ವಿದ್ಯಾರ್ಥಿ.

ಅಷ್ಟೇ ಅಲ್ಲ, ಆ ಚೆಂಡನ್ನು ಸೀಳಿ ಹೋಳೂ ಮಾಡಿದ್ದಲ್ಲದೇ, ಆ ಶಾಲಾ ಬಾಲಕರ ಮೇಲೆಯೂ ಸಹ ಕೈ ಮಾಡಿದನಂತೆ!

“ಅಷ್ಟೊಂದು ಸೊಕ್ಕೆ!”

ಇದೊಂದೇ ಅಲ್ಲ. ಇಂಥ ಸಾವಿರ ಸಂಗತಿ ದಿನ ದಿನ ನಡೆಯುತ್ತಿದ್ದವು. ಆಂಗ್ಲ ಅಧಿಕಾರಿ ಬೀದಿಯಲ್ಲಿ ಬಂದರೆ, ಎಷ್ಟೇ ದೊಡ್ಡವರಾದರೂ ನಮ್ಮ ಜನ ದಾರಿ ಬಿಟ್ಟು, ಬದಿಗೆ ಸರಿದು ನಿಲ್ಲಬೇಕು. ಕೊಡೆ ಎತ್ತಿದ್ದರೆ ಅದನ್ನು ಇಳಿಸಿ ಕೈಕಟ್ಟಿಕೊಂಡು ನಿಲ್ಲಬೇಕು. ಆ ದೊರೆ ಮುಂದಕ್ಕೆ ಹೊದ ಮೇಲೆ ಈ ಭಾರತೀಯರ ಛತ್ರಿ ಮೇಲಕ್ಕೆತ್ತಿ ಕಳ್ಳನಂತೆ ದಾರಿ ಹಿಡಿಯಬೇಕು….

“ಇದೊಳ್ಳೆ ವಿಚಿತ್ರವಾಯಿತಲ್ಲ ಸರ್! ನಮ್ಮ ದೇಶಕ್ಕೆ ಬಂದ ಈ ಪರದೇಶದವರು ಇಷ್ಟೆಲ್ಲ ಅಪಮಾನ ಮಾಡಿದರೆ?”

ಇಷ್ಟೇ ಅಲ್ಲ, ಇದಕ್ಕಿಂತಲೂ ಅಪಮಾನಕರವಾದ ಕೆಲಸ ಮಾಡಿದರು. ಅವರು ಪ್ರಯಾಣ ಮಾಡುವ ರೇಲ್ವೆ ಡಬ್ಬಿಯಲ್ಲಿ ನಮ್ಮನ್ನು ಹಿಡಿದುಕೊಂಡಿದರೆ, ಆ ಮೇಲೆ ಬಂದ ಆ ಬಿಳಿ ಮೈ ದೊರೆ ನಮ್ಮನ್ನು ನಿರ್ದಾಕ್ಷಿಣ್ಯವಾಗಿ ಕತ್ತು ಹಿಡಿದು ಕೆಳಗೆ ದಬ್ಬಿಸುತ್ತಿದ್ದ.!

ಓ !  ಇದನ್ನು ನಮ್ಮವರು ಹ್ಯಾಗೆ ಸಹಿಸಿಕೊಂಡಿದ್ದರು.  ಸರ್! ಅವರಿಗೇನೂ ಮಾನಮರ್ಯಾದೆ ಇರಲಿಲ್ಲವೇ ಸರ್?

ಸ್ವಾತಂತ್ಯ್ರ ಇಲ್ಲದವರಿಗೆ ಮಾನ ಮರ್ಯಾದೆ ಎಲ್ಲಿಂದ ಬಂತು? ಈ ಅಪಮಾನದ ಮಾತು ಒತ್ತಟ್ಟು ಏನಾದರೂ ಆಗಲಿ, ಹೊಟ್ಟೆ ತುಂಬ ಅನ್ನ, ಮೈ ತುಂಬ ಬಟ್ಟೇಗಾದರೂ ಅನುಕೂಲತೆ ಮಾಡಿದರೇ ಎಎಂದರೆ, ಆದೂ ಇಲ್ಲ. ಬ್ರಿಟಿಷರು ಆಳ್ವಿಕೆಯ ಕಾಲಕ್ಕೆ ಬರಗಳೀಗೆ ಲೆಕ್ಕವೇಯಿಲ್ಲ.  ವರ್ಷ ವರ್ಷವೂ ಸಾವಿರಾರು ಜನ ತುತ್ತನ್ನು ಇಲ್ಲದೆ, ಗುಟುಕು ನೀರಿಗೆ ಗತಿಯಲ್ಲದೆ ಸುಮ್ಮನೆ ನೊಣ ನೊರಜು ಇರುವೆಗಳಂತೆ ಸತ್ತರು!

“ಅಯ್ಯೊಯ್ಯೋ! ಏನನ್ಯಾಯ! ಏನನ್ಯಾಯ!! ಎಂದೊಬ್ಬ ಬಾಲಕ ಕೂಗಿದ”.

ಹಾ! ಇಂಥಾ ಅನ್ಯಾಯವನ್ನು ಸಹಿಸಲಾರದೆ ಶ್ರೀ ಅರವಿಂದರು, ಬ್ರೀಟಿಷರನ್ನು ಹೇಗಾದರೂ ಮಾಡಿ ಭಾರತದಿಂದ ತೊಲಗಿಸಲೆಬೇಕೆಂದು ಪಣ ತೊಟ್ಟರು.  ಇಂಗ್ಲೇಂಡಿನಲ್ಲಿದ್ದ ಭಾರತೀಯ ಯುವಕರನ್ನು ಗುಂಪುಕಟ್ಟಿ ಭಾರತದ ಸ್ವಾತಂತ್ಯ್ರಕ್ಕಾಗಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತಿದ್ದರು.  “ಇಂಡಿಯನ್ ಮಜಲಿಸ್” ಎಂಬ ಒಂದು ಸಂಘದ ಆಶ್ರಯದಲ್ಲಿ ಬಹಿರಂಗ ಸಭೆಗಳನ್ನು ಅಯೋಜಿಸಿ ಭಾರತೀಯ ಸ್ವಾತಂತ್ಯ್ರ ಸಂಪಾದನೆಗೆ ಜನರನ್ನು ಹುರಿದುಂಬಿಸುತ್ತಿದ್ದರು. ಜೊತೆಗೆ ಕಮಲ-ಕಠಾರಿ” ಎಂಬ ಗುಪ್ತ ಸಂಸ್ಥೆಯೊಂದನ್ನು ಕಟ್ಟಿ ಅದರಮೂಲಕ ಬ್ರಿಟಿಷರ ವಿರುದ್ಧ ಬಂಡಾಯ ಹೂಡುವ ಸಂಚು ನಡೆಸುತಿದ್ದರು.

“ಇಂಗ್ಲೆಂಡಿನಲ್ಲಿದ್ದ ಭಾರತದಲ್ಲಿದ್ದ ಬ್ರಿಟಿಷರನ್ನು ಓಡಿಸಲು ಹೇಗೆ ಪ್ರಯತ್ನಿಸಿದರು?”

ಇಂಗ್ಲೆಂಡಿನಲ್ಲಿದ್ದಾಗ, ಬಾಂಬು ಪಿಸ್ತೂಲು ಮಾಡುವ ಮಾಡಿದ್ದನ್ನು ಉಪಯೋಗಿಸುವ ವಿದ್ಯೆಯನ್ನು ಗುಪ್ತವಾಗಿ ಕಲಿತರು. ಭಾರತಕ್ಕೆ ಬಂದ ಮೇಲೆ ಆ ವಿದ್ಯೆಯನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸುವ ಪಣ ತೊಟ್ಟರು. “ಕಮಲ ಕಠಾರಿ”ಯ ಸದಸ್ಯರೆಲ್ಲ ಭಾರತಾಂಬೆಯ ಆಣೆಯಿಟ್ಟು ದೇಶಕ್ಕಾಗಿ ಏನಾಧರೊಂದು ಕೆಲಸ ಮಾಡಿಯೇ ತೀರುತ್ತೇವೆಂದು ಪ್ರಮಾಣ ಮಾಡಬೇಕಾಗಿತ್ತು. ಹಾಗೇ ಶ್ರೀ ಅರವಿಂದರು ಅಲ್ಲಿರುವಾಗಲೇ ಸಶಸ್ರತ್ರ ಬಂಡಾಯ ಹೂಡಿ ಬ್ರಿಟಿಷರನ್ನು ಭಾರತದಿಂದ ಓಡಿಸುವಬ ಉಪಾಯವನ್ನು ಹುಡುಕುತ್ತಿದ್ದರು.

“ಈ ಗಲಾಟೆಯಲ್ಲಿ ಅರವಿಂದರ ಕಾಲೇಜು ಶಿಕ್ಷಣೆಲ್ಲಿಗೆ ಬಂತು ಸರ್?”

ವ್ಯಾಸಂಗವೇನೋ ಸಾಗಿತು. ಪರೀಕ್ಷೆಯ ಪಾಸಾಗಲು ಅವರು ಪಠ್ಯಪುಸ್ತಕಗಳನ್ನು ಓದಲೆಬೇಕೆಂಬ ತಗಾದೆ ಏನೂ ಇರಲಿಲ್ಲ. ಓದೆಯೇ ಪಾಸಾಗುವ ಸಾಮರ್ಥ್ಯವಿತ್ತು. ಪಾಸಾಗಿಯೇ ಆದರು.

“ಮತ್ತೆ ಅವರು ಐ.ಸಿ.ಎಸ್. ಪರೀಕ್ಷೆಯ ಗತಿ?

ಐ.ಸಿ.ಎಸ್.ನಲ್ಲೂ ಪಾಸಾದರು. ಆದರೆ,ಕುದುರೆ ಸವಾರಿ ಪರೀಕ್ಷೆಯಲ್ಲಿ ಹಾಜರಾಗದೇ ನಪಾಸು ಅನ್ನಿಸಿಕೊಂಡರು! ಅಲ್ಲಿಂದ ಹೊರಟು ೧೮೯೩ನೇ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿ ಬಂದರು.

ಯೋಗಿಯೋಧ :

“ಐ.ಸಿ.ಎಸ್. ಹುದ್ದೆಯನ್ನು ಕಳಕೊಂಡು ಇಲ್ಲಿಗೆ ಬಂದೇನು ಮಾಡಿದರು, ಸರ?

ಇಲ್ಲಿಗೆ ಅವರು ಬರುವುದಕ್ಕಿಂತ ಮುಂಚೆಯೇ ಅವರಿಗೊಂದು ನೌಕರಿ ಸಿಕ್ಕಿತ್ತು.

೧೮೯೧ರಲ್ಲಿ ಆಗಿನ ಬರೋಡಾ ಮಹಾರಾಜರು ಲಂಡನ್ನಿಗೆ ಹೋಗಿದ್ದರು.  ಅವರು ಒಬ್ಬ ಸಮರ್ಥ ಆಡಳೀತಗಾರರು ಬೇಕೆಂದು ಕಣ್ಣಿಟ್ಟು ಹುಡುಕುತ್ತಿದ್ದರು. ಆಗ ಶ್ರಿ ಅರವಿಂದರು ಕಣ್ಣಿಗೆ ಬಿದ್ದರು. ತಿಂಗಳಿಗೆ ಇನ್ನೂರು ರೂಪಾಯಿ ಸಂಬಳದ ಮೇಲೆ ಬರೋಡಾ  ಸಂಸ್ಥಾನದಲ್ಲಿ ನೌಕರಿ ಕೊಟ್ಟರು.

“ಯಾವ ಕೆಲಸ”

ಬೇರೆ ಬೇರೆ ಕೆಲಸ ಕೊಟ್ಟರು. ಕೆಲವು ದಿನ ಸರ್ವೆ ಸೆಟ್ಲ ಮೆಂಟ್ ಆಫೀಸಿನಲ್ಲಿ, ಇನ್ನಷ್ಟು ದಿನ ಸ್ಟ್ಯಾಂಪ್ ಆಫೀಸಿನಲ್ಲಿ ಕೆಲಸ ಮಾಡಿದರು.  ಆಮೇಲೆ ಬರೋಡಾ ಕಾಲೇಜಿನಲ್ಲಿ ಇಂಗ್ಲೀಷ ಮತ್ತು ಫ್ರೆಂಚ್ ಪ್ರಾಧ್ಯಾಪಕರಾಗಿ ಸೇರಿಕೊಂಡರು.

ಹಾಗದರೆ ಅವರು “ಕಮಲ-ಕಠಾರಿ”ಸಂಘದಲ್ಲಿ ಕೈಗೊಂಡ ಗುಪ್ತ ಪ್ರತಿಜ್ಞೆ ಏನಾಯಿತು ಸರ್?  ದೇಶಕ್ಕಾಗಿ ಯಾವುದಾದರೂ ಒಂದು ರೀತಿಯಿಂದ ಸೇವೆ ಮಾಡುವ ಅವರ ನಿರ್ಧಾರ ಏನಾಯಿತು?

ಒಂದು ತೋಟದಲ್ಲಿ ಬಾಂಬು, ಮದ್ದುಗುಂಡು, ಎಲ್ಲ ಸಕ್ಕಿದ್ದರಿಂದ ಪೋಲಿಸರು ಅರವಿಂದರನ್ನು ಬಂಧಿಸಿದರು

ನೋಡು ತಮ್ಮ, ಅವರು ಯಾವುದನ್ನು  ದುಡುಕಿ ಮಾಡುವವರಲ್ಲ. ಇಲ್ಲಿಗೆ ಬಂದಾಗ ಅವರಿಗಿನ್ನೂ ಇಪ್ಪತ್ತೊಂದು ವರ್ಷ ವಯಸ್ಸು. ಈ ದೇಶದ ರಾಜಕೀಯ ಪರಿಸ್ಥಿತಿ ವಿದ್ಯಮಾನವೊಂದೂ ತಿಳಿಯದು. ಆದ್ದರಿಂದ ಕೆಲವು ಕಾಲ ಅವರು ರಾಜಕೀಯದಲ್ಲಿ ಪ್ರವೇಶಿಸುವಂತಿರಲಿಲ್ಲ.

“ಹಾಗಾದರೆ ಅವರು ಮಾಡಿದ್ದೇನು ಮತ್ತೇ?”

ಆದರೂ ಅವರದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಲೇ ಇದ್ದರು. ಯಾವುದೇ ಕೆಲಸ ಮಾಡುವುದಕ್ಕೆ ಮುಂಚೆ, ಕೆಲಸ ಮಾಡಬೇಕೆಂಬ ಭಾವನೆ ಮೂಡಬೇಕಲ್ಲವೇ? “ಹೀಗೆ ಮಾಡಬೇಕು” ಎಂಬ ಅಲೋಚನೆಯನ್ನು ಹುಟ್ಟಿಸುವುದೂ ಕೆಲಸವೇ.

“ಅಂಥ ಕೆಲಸವನ್ನಾದರೂ ಮಾಡಿದರೋ?”

ಮುಂಬಯಿಯಲ್ಲಿ ಆಗ “ಇಂದು ಪ್ರಕಾಶ” ಅಂತ ಒಂದು ಪತ್ರಿಕೆ ಹೊರಡುತಿತ್ತು. ಒಂದೇ ಪತ್ರಿಕೆಯಲ್ಲಿ ಕೆಲವು ಪುಟ ಇಂಗ್ಲೀಷ್,.ಕೆಲವು ಪುಟ ಮರಾಠಿ. ಆ ಪತ್ರಿಕೆಯನ್ನು ಕೆ.ಜಿ.ದೇಶಪಾಂಡೆ ಎಂಬ ಒಬ್ಬರು ಸಂಪಾದಿಸುತ್ತಿದ್ದರು. ಅವರು ಅರವಿಂದರ ಗೆಳೆಯರು. ಶ್ರೀ ಅರವಿಂದರು ಈ ಪತ್ರಿಕೆಗೆ ಬೇರೆ ಹೆಸರಿಟ್ಟುಕೊಂಡು ಲೇಖನ ಬರೆಯುತ್ತಿದ್ದರು.

“ಹಾಗೇ ಲೇಖನ ಬರೆದರೆ ದೇಶ ಸೇವೇ ಆಯಿತೇ, ಸರ್?”

ದೇಶ ಸೇವೆ ಎಂದರೆ, ಬೀದಿಯಲ್ಲಿ ಮೆರವಣಿಗೆ ಮಾಡುವುದು,ವೇದಿಕೆಯ ಮೇಲೆ ಭಾಷಣ ಮಾಡುವುದು, ಚುನಾವಣೆಗೆ ನಿಲ್ಲುವುದು ಇಷ್ಟೇ ಅಂತ ಆಂದು ಕೊಂಡಿದ್ದೀರೇನು? ನಮ್ಮ ಜನ ಹೇಗೆ ಬದುಕಬೇಕೆಂಬುವುದನ್ನು ಚೆನ್ನಾಗಿಯೋಚನೆ ಮಾಡಿ, ಆ ಯೋಚನೆಗಳನ್ನು ಬರೆದು ಪ್ರಚುರ ಪಡಿಸಿ, ಅದರಂತೆಯೇ ನಡೆಯುವಂತೆ ಮಾಡುವುದೇ ನಿಜವಾದ ದೇಶಸೇವೆ. ಈ ದೃಷ್ಟಿಯಿಂದ ಶ್ರೀ ಅರವಿಂದರು ಲೇಖನ ಬರೆದು ಸೇವೆ ಸಲ್ಲಿಸಿದರು. ಅನೇಕ ಜನ ನಾಯಕರು ಎನ್ನಿಸಿಕೊಂಡವರು ಸರಕಾರಕ್ಕೆ ಸಂತೋಷಪಡಿಸಿ, ಆ ನೌಕರಿ ಬೇಕು, ಈ ಸೌಕರ್ಯ ಕೊಡಿರಿ ಎಂದು ಅರ್ಜಿ ಬರೆದು ಕೊಳ್ಳುತ್ತಾ ಆಳೂವವರ ಗುಣಗಾನ ಮಾಡುತ್ತಾ ಕಾಲಕಳೆಯುತ್ತಿದ್ದರು.  ಶ್ರೀ ಅರವಿಂದರು ಇದರನ್ನೆಲ್ಲ ನಿರ್ಭಯವಾಗಿ ಖಂಡಿಸಿದರುಇಂಥ ಭಿಕ್ಷೆ ಬಡುವರಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲವೆಂದು ಅಂದಿನ ಮಂದಗಾಮಿ ಮುಖಂಡರಾಗಿದ್ದ ಗೊವಿಂದ ರಾನಡೆ ಎಂಬ ಮಹಾನುಭಾವರು ಬ್ಯಾರಿಸ್ಟರ್ ದೇಶಪಾಂಡೆಯವರನ್ನು ಕರೆದು, ಅಷ್ಟು ತೀಕ್ಷ್ಣವಾಗಿ ಬರೆದರೆ ಪತ್ರಿಕೆಯನ್ನು ಮುಚ್ಚಬೇಕಾಗಬಹುದೆಂದೂ, ಮುದ್ರಾಣಾಲಯಕ್ಕೆ ಬೀಗ ಜಡಿದು ಬಿಟ್ಟಾರೆಂದು ಅಂಜಿಕೆ ಹಾಕಿದರು. ದೇಶಪಾಂಡೆ ಈ ಅಂಜಿಕೆಯನ್ನು ಅರವಿಂದರ ಮುಂದೆ ಹೇಳಿದರಂತೆ.  ಶ್ರೀ ಅರವಿಂದರು ಆಮೇಲೆ “ಇಂದು ಪ್ರಕಾಶ” ಪತ್ರಿಕೆಗೆ ರಾಜಕೀಯ ಲೇಖನವನ್ನು ಬರೆಯುವುದೇ ಬಿಟ್ಟರು.

“ಆಮೇಲೆ?”

ಆಮೇಲೆ ಏನು? ಬರೋಡಾ ಮಹಾರಾಜರ ಕಾಲೇಜಿನಲ್ಲಿ ಇಂಗ್ಲೀಷ್ ಮತ್ತು ಫ್ರೆಂಚ್ ಪಾಠ ಹೇಳಿಕೊಡುತ್ತಿದ್ದರು. ಮಹಾರಾಜರು ಬ್ರಿಟಿಷರ ರೆಸಿಡೆಂಟರಿಗೆ ಯಾವುದಾದರೂ  ಮಹತ್ವದ ಪತ್ರವನ್ನೋ, ಮನವಿಯನ್ನೋ ಬರೆಯಬೇಕಾದಾಗ ಶ್ರೀ ಅರವಿಂದರನ್ನು ಕರೆ ಕರೆಸಿ ಆ ಕಾಗದ ಪತ್ರಗಳನ್ನು ಬರೆಸುತ್ತಿದ್ದರು. ಒಮ್ಮೊಮ್ಮೆ ಮಹಾರಾಜರು ಅವರನ್ನು ತಮ್ಮ ಜೊತೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಂತ ಒಂದು ಸಂದರ್ಭದಲ್ಲಿ ಕಾಶ್ಮೀರಕ್ಕೆ ಹೊಗಿದ್ದರು. ಅಲ್ಲಿಗೆ ಹೋದಾಗ ಅವರು ವಿಚಿತ್ರ ಅನುಭವವಾಯಿತು! ಕಾಶ್ಮೀರದ ಆ ಶುಭ್ರ ಹಿಮ ಮುಚ್ಚಿದ ಪರ್ವತಶ್ರೇಣಿಗಳನ್ನು ಕಂಡಾಗ ಒಮ್ಮೆ ಶಿವನದರ್ಶನವಾಯಿತಂತೆ!

“ಅದೆಲ್ಲಿಂದ ಬಂತು ಸರ್ ಅವರಿಗೆ? ಅವರೇನೂ ಸಾಧನೆ ಮಾಢಿದ್ದೇ ಕಂಡುಬರುವುದಿಲ್ಲ. ಸಾಧನೆ ಮಾಡದೇ ಅಂಥಾದ್ದೆಲ್ಲ ಸಾಧ್ಯವಿಲ್ಲವೆಂದು ಹೇಳುತ್ತಾರೆ”.

ನಿಜ. ಸಾಧನೆಯಿಲ್ಲದೆ ಸಿದ್ಧಿ ಸಾಧ್ಯವಿಲ್ಲ. ಆದರೆ ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರು ಪೂರ್ವಜನ್ಮ ಸಂಸ್ಕಾರ ಪಡೆದು ಬಂದವರು ಇರುತ್ತಾರೆ. ಅಂಥವರು ವಿಶೇಷ ಸಾಧನೆ ಮಾಡದೆಯೇ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಮರ್ಥರಾಗಿರುತ್ತಾರೆ.

“ಅಂದರೆ ಗುರುಗಳಿಲ್ಲದೆ, ಸಾಧನೆಯಿಲ್ಲದೆ ಸಾಕ್ಷಾತ್ಕರ ಸಾಧ್ಯವೇ?

ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಶ್ರೀ ಅರವಿಂದರಂಥ ಮಹಾಪುರುಷರಿಗೆ ನಮ ನಿಮಗೇ ಬೇಕಾಗುವಂಥಹ ಗುರುಬೇಕಾಗಿಲ್ಲ. ಅವರಿಗೂ ಯಾರೋ ಹೇಗೋ ದಾರಿ ತೋರಿಸುತ್ತಾರೆ. ಅವರನ್ನು ಗುರು ಎಂದು ಕರೆಯಲಾಗದಿದ್ರೂ ಕೂಡ,.

“ಅಂಥವರು ಯಾರಾದರೂ ಸಿಕ್ಕಿದ್ದರೆ ಸಾರ್?:

ಹೌದು. ಒಬ್ಬ ಸಿಕ್ಕಿದ್ದರು. ಲೇಲೇ ಎಂಬ ಒಬ್ಬ ಸಾಧಕರು ಒಮ್ಮೆ ಅವರಿಗೆ ಸಿಕ್ಕರು. ಅವರು ಶ್ರೀ ಅರವಿಂದರಿಗೆ ಯೋಗಾಭ್ಯಾಸದ ರಹಸ್ಯ ತಿಳಿಸಿದರು. ಅವರು ಒಂದೇ ಬೀಜವಾಕ್ಯ ಹೇಳಿದರು; “ಮನಸ್ಸನ್ನು ಬರಿದು ಮಾಡಿಬಿಡಿ. ಆ ಮೇಲೆಒಂದು ಶಾಂತಿ , ಪರಮ ಶಾಂತಿ ಮನವನ್ನೆಲ್ಲ ತುಂಬಿ ಬಿಡುವುದು “ಎಂಬುದಾಗಿ. ಶ್ರೀ ಅರವಿಂದರು ಅವರ ಮುಂದೆ ಕುಳಿತರು. ಅವರು ಹೇಳಿದಂತೆಯೇ ಮಾಡಿದರು. ಕೂಡಲೇ ಮನಸ್ಸು ಶೂನ್ಯವಾಯಿತಂತೆ! ಆಮೇಲೆ ಅಪಾರವಾದ ಪರಮಶಾಂತಿ ಅವರನ್ನು ಅವರಿಸಿಬಿಟ್ಟಿತು….

“ಸ್ವಲ್ಪ ತಡೆಯಿರಿ ಸರ‍. ಅರವಿಂದರು ದೇಶ ಸ್ವಾತಂತ್ಯ್ರ ಬೇಕೆಂದು ವಾದಿಸುತ್ತಿದ್ದರು., ಈ ಯೋಗಾಭ್ಯಾಸದ ಗೊಡವೆಗೆ ಯಾಕೆ ಹೋದರು?”

ಅದೂ ಒಂದು ವಿಚಿತ್ರ ಘಟನೆ,. ಬಹುಶಃ ದೇವರ ಇಚ್ಛೆಯೇ ಹಾಗಿತ್ತೆಂದು ಕಾಣುತ್ತದೆ.

“ಹೇಗೆ”?

ಅದೇ: ಸ್ವಾತಂತ್ಯ್ರ ಸಂಗ್ರಾಮದ ಯೋಧನಾಗಬೇಕೆದು ಯೋಗವನ್ನು ಅವಲಂಬಿಸಿದ್ದು, ಯೋಗಿಯಾದರೂ ಯೋಧನಂತೆ ಹೋರಾಡಿದ್ದು!

“ಸ್ವಲ್ಪ ಬಿಡಿಸಿ ಹೇಳಿ ಸಾರ್”.

ಶ್ರಿ ಅರವಿಂದರು ಬರೋಡಾದಲ್ಲಿದ್ದಾಗ, ಬಂಗಾಳದಲ್ಲಿ ನಡೆಯುತ್ತಿದ್ದ ಸ್ವಾತಂತ್ಯ್ರ ಹೋರಾಟದ ಗುಪ್ತ ಸಿದ್ಧತೆಗಳ ಪ್ರಯತ್ನ ತಿಳಿದು ಬಂದಿತು. ಅವರು ಬಂಗಾಳದ ಕ್ರಾಂತಿಕಾರಿ ಯುವಕರಿಗೆ ಮಾರ್ಗದರ್ಶನ , ಪ್ರೋತ್ಸಾಹ ಕೊಡುತ್ತಿದ್ದರು.  ಅವರು ತಮ್ಮ ಹೆಂಡತಿ ಮೃಣಾಳಿದೇವಿ ಅವರಿಗೆ ಬರೆದ ಒಂದು ಪತ್ರದಲ್ಲಿ….

“ಅರವಿಂದರಿಗೆ ಮದುವೆ ಯಾವಾಗ ಆಯಿತು ಸರ್?”

ಬರೋಡಾದಲ್ಲಿ ಕೆಲಸ ಮಾಡುತಿದ್ದಾಗ ಅವರ ಇಪ್ಪತ್ತನ್ನಾಲ್ಕನೆಯ ವಯಸ್ಸಿನಲ್ಲಿಯೇ ಮದುವೆ ಆಗಿತ್ತು. ತಮ್ಮ ಹೆಂಡರಿಗೆ ಒಂದು ಪತ್ರ ಬರೆಯುತ್ತಾ ತಮ್ಮ ಜೀವನೋದ್ದೇಶ ದೈವಸಾಕ್ಷಾತ್ಕಾರವೆಂದೂ, ಅದಕ್ಕೆ ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರೆಂದೂ, ಜೊತೆಗೆ, ತಾವು ಕೈಗೊಂಡ ಒಂದು ಮಹತ್ವದ ಕೆಲಸಕ್ಕಾಗಿ ತಮ್ಮ ಎಲ್ಲ ದುಡಿಮೆಯ ಹಣವೂ ಬೇಕೆಂದು ಬರೆದಿದ್ದಾರೆ. ಆ ಮಹತ್ವದ ಕೆಲಸ ವೇನೂ ಗೊತ್ತೇ?

“ಇಲ್ಲ”

ಶ್ರೀ ಅರವಿಂದರೂ, ಮಾಧವರಾವ್ ಜಾಧವ್, ಎಂಬ ಒಬ್ಬ ಯುವಕನನ್ನು ಇಂಗ್ಲೇಂಡಿಗೆ ಕಳಿಸಿದ್ದರು. ಅವನು ಅಲ್ಲಿಂದ ಬಾಂಬು, ಮದ್ದುಗುಂಡು ಮಾಡಲು ಕಲಿತು, ಕೆಲವನ್ನು ಅಲ್ಲಿಂದ ಕೊಂಡು ತರಬೇಕೆಂದು ಅವನನ್ನು ಕಳಿಸಿದ್ದರು.ಅದಕ್ಕಾಗಿ ತಾವು ದುಡಿದ ಹಣವನ್ನೆಲ್ಲಾ ಉಪಯೋಗಿಸುತ್ತಿದ್ದರು. ಇದರೊಂದಿಗೆ ಬಂಗಾಳದಿಂದ ಬರೋಡಾಕ್ಕೆ ಬಂದಿದ್ದ ಜತೀಂದ್ರಾನಾಥ ಬ್ಯಾನರ್ಜಿ ಎಂಬ ಯುವಕನನ್ನು ಬರೋಡಾ ಸಂಸ್ಥಾನದ ಸೈನಿಕ ಇಲಾಖೆಯಲ್ಲಿ ಸೇರಿಸಿ ಅವನಿಗೆ ಯುದ್ಧ ವಿದ್ಯೆಯನ್ನು ಕಲಿಯಲು ಅನುಕೂಲತೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಲೋಕಮಾನ್ಯ ತಿಲಕರ ಪರಿಚಯ ಮಾಢಿಕೊಂಡರು.

ಭಾರತದ ಬಿಡುಗಡೆ ಸಶಸ್ತ್ರ ಬಂಡಾಯದಿಂದಲೇ ಸಾಧ್ಯ ಎಂಬ ಬಗ್ಗೆ ತಿಲಕರಿಗೂ ಅರವಿಂದರಿಗೂ ಒಮ್ಮತವಿತ್ತು.

“ಇದೆಲ್ಲ ಸರಿ ಸರ್ ಆದರೆ ಅವರು ಯೋಗದ ಕಡೆ ತಿರುಗಿದ್ದೇಕೆ ಎಂಬುದನ್ನು ಹೇಳಲೇ ಇಲ್ಲ”.

ಅವರು ಸ್ವಾತಂತ್ಯ್ರ ಸಂಪಾದನೆಗಾಗಿ ಹೂಡಿದ ಉಪಾಯದಿಂದ ಕೆಲಸ ಮಾಡುವವರು ಯಾರು? ಮನೆ ಮಠ, ಮಡದಿ ಮಕ್ಕಳು ಯಾರೂ ಇಲ್ಲದ,ಇದ್ರೂ ಅವರನ್ನು ಕೈಬಿಟ್ಟು ಬರುವಂಥ ತ್ಯಾಗಿಗಳಿಂದಲೇ ಆ ಕೆಲಸ ಆಗಬೇಕಾಗಿತ್ತು. ಯಾಗ ಯಾರಿಂದ ಸಾಧ್ಯ?

“ಎಲ್ಲಾ ಬಿಟ್ಟವರೆಂದರೆ ಸಂನ್ಯಾಸಿಗಳು”.
ಹಾ! ಸರಿಯಾಗಿ ಹೇಳಿದೆ. ಎಲ್ಲ ಬಿಟ್ಟ ಸಂನ್ಯಾಸಿಗಳು ಮಾತ್ರ ದೇಶಕ್ಕಾಗಿ ಪ್ರಾಣವನ್ನೂ ಈಡಾಡಬಲ್ಲರು. ಆದ್ದರಿಂದ ಶ್ರೀ ಅರವಿಂದರು ಅಂಥ ಸಂನ್ಯಾಸಿಗಳ ಒಂದು ಸೈನ್ಯವನ್ನು ಕಟ್ಟಲು ಹವಣಿಸಿದರು.  ಸಂನ್ಯಾಸಿಗಳೆಂದರೆ ಒಬ್ಬ ಆರಾಧ್ಯ ದೈವ ಬೇಕು. “ಭವಾನಿ” ಆ ದೈವ ಎಂದು ನಿರ್ಧರಿಸಿದರು. “ಭವಾನಿ ಮಂದಿರ” ಎಂಬ ಒಂದು ಸಂಸ್ಥೆಯನ್ನು ಕಟ್ಟಲು ಹವಣಿಸಿದರು.  ಆದರೆ ಶ್ರೀ ಅರವಿಂದರು ಬಯಸಿದ್ದ ಸಂನ್ಯಾಸಿಗಳು ಬೇರೆ ತರದವರು. ದೇಶವೇ ದೇವಿಯೆಂದು ತಮ್ಮ ಪ್ರಾಣಾರ್ಪಣೆ ಮಾಡುವಂಥ ತ್ಯಾಗಿಗಳು ಅವರು ತರಬೇತಿ  ಮಾಡಬೇಕೆಂದಿದ್ದ ಸಂನ್ಯಾಸಿಗಳು. ಆದಕ್ಕಾಗಿ ” ಭವಾನಿ ಮಂದಿರ”ದ ಸ್ಥಾಪನೆ ಮಾಡಬೇಕೆಂದೂ, ಒಂದು ಸರಿಯಾದ ಗುಟ್ಟಾದ ಸ್ಥಳವನ್ನು ಹುಡುಕಿಕೊಂಡು ಬರಲು ತಮ್ಮನಾದ ಗುಟ್ಟಾದ ಸ್ಥಳವನ್ನು ಹುಡುಕಿಕೊಂಡು ಬರಲು ತಮ್ಮನಾದ ಬಾರೀಂದ್ರನನ್ನು ಅವರು ವಿಂದ್ಯ ಪರ್ವತಗಳಿಗೆ ಕಳಿಸಿಕೊಟ್ಟರು.  ಆವನು ತಿಂಗಳುಗಟ್ಟಲೆ ಆ ಪರ್ವತಾರಣ್ಯಗಳಲ್ಲಿ ತಿರುಗಾಡಿ ಅಂಥ ಸ್ಥಳಕ್ಕಾಗಿ ಹುಡುಕಿದ.  ತಿರುಗಿ ವಾಪಾಸು ಬಂದ ಮೇಲೆ ಒಂದು ವಿಚಿತ್ರ ಜ್ವರದಿಂದ ಹಾಸಿಗೆ ಹಿಡಿದ. ಏನು ಮಾಡಿದರೂ ಆ ಕೆಟ್ಟ ಜ್ವರ ಬಿಡಲೇ ಇಲ್ಲ. ಯಾವ ಯಾಔ ಔಷಧಿ ಕೊಟ್ಟರೂ ಬಿಡಲಿಲ್ಲ.  ಒಂದು ದಿನ ಸಂನ್ಯಾಸಿ ಬಂದ. ಆತ ಒಂದು ಲೋಟದಲ್ಲಿ ನೀರನ್ನು ಮಂತ್ರಿಸಿ ಕೊಟ್ಟ. ಆನೀರು ಕುಡಿಸಿದ ಮೇಲೆ ಬಾರೀಂದ್ರನಿಗೆ ಕೂಡಲೇ ಜ್ವರ ಬಿಟ್ಟಿತು. ಶ್ರೀ ಅರವಿಂದರು ಇದನ್ನು ಕಂಡು ಯೋಗದ ಮೂಲಕ ಅಂಥ ಅಸಾಧಾರಣ ಅತಿ ಮಾನವ ಶಕ್ತಿಯನ್ನು ಪಡೆದರು. ಆ ನಾಗಾ ಸಂನ್ಯಾಸಿ ಜ್ವರವನ್ನು ಓಡಿಸಿದಂತೆ ಬ್ರಿಟಿಷರನ್ನೂ ಓಡಿಸಬಹುದೆಂದು ತಾವೂ ಯೋಗಶಕ್ತಿ ಪಡೆಯಲು ನಿರ್ಧರಿಸಿದರು!

ಇದು ಸಾಧ್ಯವೇ ಸರ್?

ಸಾಧ್ಯವೊಂದೇ ಅಲ್ಲ, ಅನಿವಾರ್ಯ ಎಂಬುವುದಾಗಿ ಶ್ರೀ ಅರವಿಂದರು ಹೇಳುತ್ತಿದ್ದರು.  ಆದ್ದರಿಂದ ಅವರು ಪ್ರಾಣಾಯಾಮ ಮಾಡಲು ಶುರುಮಾಡಿದರು. ಯೋಗಾಭ್ಯಾಸ  ಅಂದರೆ ತಲೆಕೆಳಗಾಗಿ ನಿಲ್ಲುವುದು, ಒಂಟಿ ಕಾಲಿನಿಂದ ನಿಂತು ತಪಸ್ಸು ಮಾಡುವುದು.. ಇವೇ ಯೋಗಾಭ್ಯಾಸವಲ್ಲ. ಈಗ ನಿಮಗೆ ಈ ಪುಣ್ಯ ಚರಿತೆ ಹೆಳುತ್ತಿದ್ದೇನೆ.  ನೀವು  ಕೇಳುತ್ತಿದ್ದಿರಿ. ಈಗ ನಿಮ್ಮ ಮನಸ್ಸಿನಲ್ಲಿ ಮತ್ತಾವ ಯೋಚನೆಯೂ ಇಲ್ಲ. ಇದೂ ಒಂದು ಯೋಗವೇ! ಯೋಗ ಎಂದರೇನು? “ಕೊಡುವುದು” ಎಂದು. ಯಾವುದರಲ್ಲಿ ಕೊಡುವುದು? ಯಾವ ಆದರ್ಶವನ್ನು ಇಟ್ಟುಕೊಳ್ಳುತ್ತೇವೆಯೋ ಅದರಲ್ಲಿಯೇ ಒಂದಾಗುವುದು. ಯೋಗಿಗಳ ಗುರಿಯಾವುದು? ಆದರ್ಶವೇನು? ಯಾವುದೋ ಒಂದು ಕಣ್ಣೀಗೆ ಕಾಣದ ಸರ್ವಶಕ್ತಿಯೊಂದು ಎಲ್ಲೆಲ್ಲೂ ತುಂಬಿದೆ. ಅದೇನೆಂಬುವುದನ್ನು ಬುದ್ಧಿಯಿಂದ ಅರಿಯಲು ಸಾಧ್ಯವಿಲ್ಲ. ಬಾಯಿಂದ ಹೇಳಲು  ಬರುವುದಿಲ್ಲ. ಆ ಶಕ್ತಿಯನ್ನು ಅನುಭವಿಸಬಹುದು. ಅದನ್ನು ಅನುಭವಿಸಿದಾಗ ಆ ಶಕ್ತಿಯೇ ತಾನಾಗುತ್ತದೆ. ಆಂಥ ಶಕ್ತಿ, ಇಚ್ಛಾಮಾತ್ರದಿಂದ ಎನನ್ನಾದರೂ ಸಾಧಿಸಬಲ್ಲದು ಎನಿಸಿತು ಶ್ರೀ ಅರವಿಂದರಿಗೆ. ಅಂಥ ಶಕ್ತಿಯನ್ನು ಸಂಪಾದಿಸಲು ಅವರು ಯೋಗಾಭ್ಯಾಸಕ್ಕೆ ತೊಡಗಿದರು. ಇದರಿಂದ ಅವರ ಜ್ಞಾಪಕ ಶಕ್ತಿ ಅಗಾಧವಾಗಿ ಬೆಳೆಯಿತು! ಅವರ ಮೈಬಣ್ಣವೇ ಬದಲಾಯಿತು! ದ್ವನಿಯೇ ಸುಮಧುರವಾಯಿತು.

“ಹಾಗಾದರೆ ಮಂತ್ರ ಹಾಕಿ ಬ್ರಿಟಿಷರನ್ನು ಓಡಿಸಬಹುದಾಗಿತ್ತೋ ಸರ್?”

ಮಂತ್ರಿಸಿದರೆ ಮಾವಿನಕಾಯಿ ಉದುರುವುದಿಲ್ಲ ತಮ್ಮಾ! ಕಲ್ಲು ಬೀರಿದರೆ ಮಾವಿನ ಕಾಯಿ ಉದುರಿ ಬೀಳುತ್ತವೆ. ಅಂದರೆ ಈ ಯೋಗ ಶಕ್ತಿ ಪಡೆದ ಮೇಲೆ ಅದನ್ನು ಉಪಯೋಗಿಸಬೇಕು.

“ಹಾಗಾದರೆ ಅರವಿಂದರೇನು ಮಾಡಿದರು,ಸರ್?”

ಅಷ್ಟು ಹೊತ್ತಿಗೆ ಬಂಗಾಳ ಪ್ರಾಂತವನ್ನು ಇಬ್ಬಾಗ ಮಾಡಬೇಕೆಂದು ಬ್ರಿಟಿಷರು ಹೊಂಚು ಹಾಕಿ ವಂಗಭಂಗ ಶಾಸನವನ್ನು ಮಂಜೂರು ಮಾಡಿದರು. ಅದರ ವಿರುದ್ಧವಾಗಿ ಬಂಗಾಳದ ಜನತೆ ಬಂಡೆದಿತು. ಆಗ ಶ್ರೀ ಅರವಿಂದರು ಬರೋಡಾ ಸಂಸ್ಥಾನದ ನೌಕರಿಗೆ ರಾಜೀನಾಮೆ ಕೊಟ್ಟು ಕಲಕತ್ತೆಗೆ ಬಂದರು…

“ಜೀವನೋಪಾಯಕ್ಕೆ ಏನು ಮಾಡಿದರು?”

ಅಲ್ಲಿಯೂ ಒಂದು ನೌಕರಿ ಸಿಕ್ಕಿತ್ತು. ಠಾಣಾದಲ್ಲಿ ಚಾರು ಚಂದ್ರದತ್ತ ಎಂಬ ಕಲೆಕ್ಟರ ಇದ್ದರು. ಅವರ ಪರಿಚಯ ಶ್ರೀ ಅರವಿಂದರಿಗಿತ್ತು. ಅವರಿಗೂ ದೇಶ ಸ್ವಾತಂತ್ಯ್ರದ  ಹಂಬಲ ಹಿಡಿದಿತ್ತು. ಅವರ ಬಂಧುಗಳೊಬ್ಬರೂ, ಸುಭೇಧಚಂದ್ರ ಮಲ್ಲಿಕ್ ಎಂಬ ಭಾರಿ ಶ್ರೀಮಂತರಿದ್ದರು.  ಅವರು ಒಂದು ಸ್ವದೇಶಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಒಂದು ಕಾಲೇಜು ಪ್ರಾರಂಭಿಸಿದರು.  ಆ ಕಾಲೇಜಿನಲ್ಲಿ ಶ್ರೀ ಅರವಿಂದರನ್ನು ತಿಂಗಳಿಗೆ ನೂರು ರೂಪಾಯಿ ಮೇಲೆ ಅಜೀವ ಸೇವಾ ಸದಸ್ಯರನ್ನಾಗಿ ನೇಮಿಸಿಕೊಂಡರು. ಶ್ರೀ ಅರವಿಂದರು, ಬರೋಡಾ ಕಾಲೇಜಿನಲ್ಲಿ ಪ್ರೀನ್ಸಿಪಾಲ್ ಹುದ್ದೆಗೆ ರಾಜೀನಾಮೆ ಕೊಟ್ಟು ಕಲ್ಕತ್ತೆಯ ದೇಶೀಯ ವಿದ್ಯಾಕಾಲೇಜಿನ ನೌಕರಿಯನ್ನು ಒಪ್ಪಿಕೊಂಡು ಅಲ್ಲಿಗೆ ಬಂದರು.

ಪೂರ್ಣಯೋಗದತ್ತ :

“ಕಲ್ಕತ್ತೆಯಲ್ಲಿಅವರೇನೂ ಮಾಡಿದರು ಸಾರ್?” ಆಗ ಬಂಗಾಳದಲ್ಲಿ ಎದ್ದಿದ್ದ ಬಂಡಾಯದ ಸ್ವರೂಪ ಹೇಗಿತ್ತು ಎಂಬುವುದನ್ನು ನಿಮಗೆ ಹೇಗೆ ತಿಳಿಸುವುದು? ನಿಮ್ಮ ತಾಯಿಯನ್ನೋ ತಂಗಿಯನ್ನೋ ಯಾರಾದರೂ ಅವಮಾನ ಮಾಡಿದರೆ ಏನು ಮಾಡುತ್ತೀರಿ?

“ಅದನ್ನು ಸಹಿಸೋದಿಲ್ಲ. ಪ್ರತಿಭಟಿಸುತ್ತೇವೆ”.

ಅವಮಾನ ಮಾಡಿದವನು ನಿಮಗಿಂತ ಬಲಿಷ್ಠನೆಂದು ಇಟ್ಟುಕೊಳ್ಳಿ. ನೀವು ದುರ್ಬಲರಾಗಿದ್ದರೆ, ಅಸಹಾಯಕರಾಗಿದ್ದರೆ ಏನು ಮಾಡುತ್ತೀರಿ? ನಿಮ್ಮ ಎದುರಿಗೇನಿಮ್ಮ ತಾಯಿಗೆ ಅವಮಾನ ಮಾಡಲು ಪ್ರಯತ್ನಿಸಿದರೆ ಏನು ಮಾಡುತ್ತೀರಿ?

“ಆ ನೀಚನ ಕೈಯಿಂದ ತಾಯಿಯನ್ನು ಉಳಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅವನು  ಇನ್ನೂ ಕೆಟ್ಟ ಕೆಲಸಕ್ಕೆ ಕೈಹಾಕಿದರೆ, ಅದನ್ನು ತಡೆಯುವ ಪ್ರಯತ್ನದಲ್ಲಿ ಸತ್ತಾದೂ ಹೋಗುತ್ತೇವೆ. ಕಣ್ಣೇದುರಿಗೆ ಆಗುವ ಅನ್ಯಾಯವನ್ನು ಮಾತ್ರ ಸಹಿಸುವುದಿಲ್ಲ…”

ಹಾಗೇ ನೋಡಿ ಮಕ್ಕಳೇ! ಬಂಗಾಳದಲ್ಲಿ ಎದ್ದಿದ್ದ ಬಂಡಾಯ ತಾಯಿಯ ಅಪಮಾನವನ್ನು ತಡೆಯುವುದಕ್ಕೆ.ಬ್ರಿಟಿಷರನ್ನು ಎಲ್ಲಿ ಸಿಕ್ಕರೆ ಅಲ್ಲಿ ಗುಂಡು ಹಾಕಿಕೊಲ್ಲಲು ಜನ ಸಿದ್ಧರಾದರು. ಹಾಗೆ ಜನರನ್ನು ತ್ಯಾಗಕ್ಕೆ ಹುರುಪು ಗೊಳಿಸಿದವರು ಶ್ರೀ ಅರವಿಂದರು ಅಂತ ಸರಕಾರ ಎಂದು ಕೊಂಡಿತ್ತು.

“ಅದು ಹೇಗೆ?”

ಶ್ರೀ ಅರವಿಂದರು “ವಂದೇ ಮಾತರಂ” ಎಂಬ ಒಂದು  ಪತ್ರಿಕೆಯಲ್ಲಿ ಅಂಥ ಕಿಡಿಕಾರುವ ಬೆಂಕಿಯಂಥ ಲೇಖನ ಬರೆಯುತ್ತಿದ್ದರು. ಆ ಲೇಖನಗಳು ಜನರಲ್ಲಿ ರಾಜದ್ರೋಹವನ್ನು ಹುಟ್ಟಿಸುತ್ತವೆ ಎಂದು ಸರಕಾರ ಪತ್ರಿಕೆಯ ಮೇಲೆ, ಬರೆದವರ ಮೇಲೆ ಕೇಸು ಹಾಕಿತು. ಆದರೆ ಕೇಸು ರುಜುವಾತು ಆಗದೇ, ಅವರು ನಿರ್ದೂಷಿಗಳೆಂದು ಕೋರ್ಟ “ಸರಕಾರದ ಮುಖಕ್ಕೆ ಒಳ್ಳೆ ಮಂಗಳಾರತೀ ಆಯಿತು.

ಹೌದು ಆದರೆ ಸರಕಾರ ಶ್ರೀ ಅರವಿಂದರನ್ನು ಸುಮ್ಮನೆ ಬಿಡಲಿಲ್ಲ. ಹೇಗಾದರೂ ಮಾಡಿ ಅವರನ್ನು ಸೆರಮನೆಗೆ ತಳ್ಳಲು ಹವಣಿಸುತ್ತಿತ್ತು.

ಬ್ರಿಟಿಷ್ ಸರಕಾರ ಎಂದರೆ ಅಸಾಮಾನ್ಯ ಶಕ್ತಿಯಿದ್ದ ಸರಕಾರ. ಏನು ಬೇಕಾದರೂ ಮಾಡಲು ಶಕ್ತವಾಗಿತ್ತು ಆಗ ಏನಾಯಿತೆಂದರೆ, ಶ್ರೀ ಅರವಿಂದರ ತಮ್ಮನಾದ ಬಾರೀಂದ್ರ ಮಾಣಿಕ ತೋಲಾ ಎಂಬ ತೋಟದಲ್ಲಿ ಬಾಂಬು, ಮದ್ದುಗುಂಡು, ಕೂಡಿಟ್ಟಿದ್ದ. ಸರಕಾರಕ್ಕೆ ಈ  ಸಂಗತಿ ಗೊತ್ತಾಗಿ ಆ ಮನೆಯನ್ನು ಶೋಧಿಸಿದರು.  ಅಲ್ಲಿ ಕೈಬಾಂಬ್, ಪಿಸ್ತೂಲ್, ಬಂದೂಕು, ರಿವಲ್ವಾರ್, ರೈಫಲ್ ಸಿಕ್ಕವು. ಆಗ ಅನೇಕ ಜನರನ್ನು ಕೈದು ಮಾಡಿದರು. ಅರವಿಂದರನ್ನೂ ಹಿಡಿದರು. ಅವರ ಮೇಲೆ ಕೇಸ ಹಾಕಿದರು.  ಅದನ್ನು “ಅಲಿಪುರ ಬಾಂಬ್ ಕೆಸ್: ಎಂದು ಕರೆಯುತ್ತಾರೆ. ಏಕೆಂದರೆ  ಅಲೀಪುರ ಎಂಬ ಕಡೆ ಗವರ್ನರ ಮೇಲೆ ಬಾಂಬ ಎಸೆದಿದ್ದರಿಂದ ಬಂಗಾಳದಲ್ಲೆಲ್ಲ ಶೋಧ ನಡೆದು ಶ್ರೀ ಅರವಿಂದರು ಸಿಕ್ಕುಬಿದ್ದರು….

” ಆಕೇಸು ಏನಾಯಿತು ಸಾರ್?”

ಅದೂ ರುಜುವಾತಾಗದೆ ಶ್ರೀ ಅರವಿಂದರು ನಿರ್ದೋಷಿಗಳೆಂದು ಬಿಡುಗಡೆ ಆದರು.

ಹುಡುಗರು ಚಪ್ಪಾಳೆ ತಟ್ಟಿ: “ಒಳ್ಳೆಯದಾಯಿತು! ಸಧ್ಯ ಬದುಕಿದರು”.

ಹೌದು, ಅವರು ಅಕ್ಷರಶಃ ಸಾವಿನ ದವಡೆಯಿಂದಲೇ ಹೊರಗೆ ಬಂದು ಬದುಕಿದರು. ಅವರಿಗೆ ಶಿಕ್ಷೆಯೆ ನಾದರೂ ಆಗಿದ್ದರೆ ,ಮರಣದಂಡನೆಯೇ ಆಗುತ್ತಿತ್ತು.  ಸರಕಾರದ ಕಣ್ಣು ಅವರ ಮೇಲೆ ಇದ್ದಷ್ಟು ಉಳಿದವರ ಮೇಲೆ ಇರಲಿಲ್ಲ. ಆ ಮಾತನ್ನು ನ್ಯಾಯಾಧೀಶರೇ ತಮ್ಮ ತೀರ್ಪಿನಲ್ಲಿ  ಸ್ಪಷ್ಟವಾಗಿ ಹೇಳಿದ್ದಾರೆ.  ಆದರೂ ಸರಕಾರ ಶ್ರೀ ಅರವಿಂದರನ್ನು ವಿಚಾರಣೆಯಿಲ್ಲದೇ ಅಂಡಮಾನ್ ದ್ವೀಪಕ್ಕೆ ಗಡೀಪಾರು ಮಾಡಬೇಕೆಂದು ಹೊಂಚುಹಾಕಿತ್ತು.  ಆಗ ಶ್ರೀ ಅರವಿಂದರು, ದೇಶದ ಯುವಕರ ಮೇಲೆ ಪ್ರಚಂಡ ಪ್ರಭಾವ ಬೀರಿದ್ದಾರೆಂದೂ ಅವರು  ಹೊರಗೆ ಉಳೀಯುವುದು ಬ್ರಿಟಿಷ್ ಸರಕಾರಕ್ಕೆ ಮಹಾ ಗಂಡಾಂತರಕಾರಿಯೆಂದು ಭಾವಿಸಿ ಸರಕಾರ ಅವರನ್ನು ಸೆರೆಹಿಡಿಯಲು ಅಪ್ಪಣೆ  ಹೊರಡಿಸಿತು. ಅದು ಅರವಿಂದರಿಗೆ ಹೇಗೋ ಗೊತ್ತಾಗಿ , ಯಾವುದೋ ಒಂದು ಎದೆಯ ದನಿಗೆ ಕಿವಿಗೊಟ್ಟು ಫ್ರೆಂಚ್ ವಸಹಾತು ಚಂದ್ರನಗರಕ್ಕೆ ಏಕಾ ಎಕಿ ಹೊರಟು ಹೋದರು. ಅಲ್ಲಿ ಒಂದು ತಿಂಗಳಿದ್ದು, ಅಲ್ಲಿಂದ ಪಾಂಡಿಚೇರಿಗೆ ೧೯೧೦ರ ಏಪ್ರೀಲ್ ೧ ರಂದು ಹೊರಟು, ೪ನೇ ತಾರೀಖು ಪಾಂಡಿಚೇರಿಗೆ ತಲುಪಿದರು. ಬ್ರಿಟಿಷ ಸರಕಾರ ಬೀಸಿದ ಬಲೆಯಿಂದ ತಪ್ಪಿಸಿಕೊಂಡರು. ಮತ್ತೇ ಅವರನ್ನು ಹಿಡಿಯುವುದು ಬ್ರಿಟಿಷರಿಂದ ಸಾಧ್ಯವಾಗಲೇ ಇಲ್ಲ! ಪಾಂಡಿಚೇರಿಯನ್ನು ಬಿಟ್ಟ ಅವು ಕೊನೆಯ ತನಕ ಕದಲಲೇ ಇಲ್ಲ.

“ಇದೇನೋ ವಿಚಿತ್ರವಾಗಿದೆ ಸರ್. ದೇಶದ ಸ್ವಾತಂತ್ಯ್ರಕ್ಕೆ ಹೋರಾಡಬೇಕೆಂದಿದ್ದವರು, ತಾವಾಗಿಯೇ ಪಾಂಡಿಚೇರಿಗೆ ಹೋಗಿ ತಲೆಮರೆಸಿಕೊಂಡರೆಂದು ಹೇಳುತ್ತೀರಿ! ಹ ಈಗೆ ತಲೆತಪ್ಪಿಸಿಕೊಂಡು ಹೋದದ್ರಿಂದ ದೇಶ ಸೇವೆ ಹೇಗಾಯಿತು ಸರ್?”

ಹೌದು. ಸ್ವಲ್ಪ ವಿಚಿತ್ರವಾಗಿಯೇ ಇದೆ. ಅವರ ಈ ನಡತೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ್ದರಿಂದಲೇ ಪಾಂಡಿಚೇರಿಯ ಆ ಏಕಾಂತವಾಸದಿಂದ ಅವರನ್ನು ಹೊರಗೆಳೆಯಲು ತಿಲಕರೇ ಆದಿಯಗಿ ಬಹುಜನ ಪ್ರಯತ್ನಿಸಿದರು. ಆದರೆ ಸಾಧ್ಯವೇ ಆಗಲಿಲ್ಲ. ಅವರು ಮತ್ತೇ ರಾಜಕೀಯಕ್ಕೆ ಕಾಲಿಡಲು ಒಪ್ಪಲೇ ಇಲ್ಲ.

“ಯಾಕೆ?”

೧೯೧೭ರಲ್ಲಿ ಅಂಬುಭಾಯಿ ಪುರಾಣಿ ಎಂಬ ಅವರ ಶಿಷ್ಯರೊಬ್ಬರು ಗುಜರಾತಿನಿಂದ ಪಾಂಡಿಚೇರಿಗೆ ಬಂದು ಅವರನ್ನು ಕಂಡು, ದೇಶದ ಬಿಡುಗೆಗಾಗಿ ಏನು ಅವರನ್ನು ಕಂಡು , ದೇಶದ ಬಿಡುಗಡೆಗೆ ಏನು ಮಾಡಬೇಕೆಂದು ಕೇಳದಿರು. ಅದಕ್ಕೆ ಶ್ರೀ ಅರವಿಂದರು: “ಅದಿರಲಿ, ನಿನ್ನ ಯೋಗ್ಯಾಭ್ಯಾಸ ಹೇಗೆ ನಡೆದಿದೆ” ಎಂದು  ಮರು ಪ್ರಶ್ನೆ ಕೇಳಿದರಂತೆ.

ಅಂಬುಬಾಯಿ ಪುರಾಣಿ: ದೇಶದ ಸ್ವತಂತ್ಯ್ರವಾಗುವವರೆಗೆ ನನಗೆ ಯೋಗವೂ ಬೇಡ, ಏನೂ ಬೇಡ. ನೀವೇ ಹಾಕಿಕೊಟ್ಟ ಮಾರ್ಗದಂತೆಯೇ ನಾವೀಗ ಸಶಸ್ತ್ರ ಬಂಡಾಯಕ್ಕೆ ಅಣೀಯಾಗಿದ್ದೇವೆ. ಈಗ ಒಂದು ಕಾರ್ಯಕ್ರಮವನ್ನು ಹಾಕಿಕೊಡಿ.

ಶ್ರೀ ಅರವಿಂದರು: ಸಶಸ್ತ್ರ ಬಂಡಾಯ, ಬಾಂಬ್ ಕಾಯಕ ಅವೆಲ್ಲ ಅಗತ್ಯವಿಲ್ಲ. ಸ್ವಾತಂತ್ಯ್ರ ಬಂದೇ ಬರುತ್ತದೆ.

ಅಂಬುಬಾಯಿ:    ಯಾರು ಹೇಳುತ್ತಾರೆ?

ಶ್ರೀ ಅರವಿಂದರು: ನಾನು ಹೇಳುತ್ತೇನೆ,.

ಅಂಬುಬಾಯಿ:    ತಾವು ಹೇಳುವುದಾದರೆ ನನಗೆ ನಂಬುಗೆ ಹುಟ್ಟೀತು.

ಶ್ರೀ ಅರವಿಂದರು, ಕಿಟಕಿಯಾಚೆ ದೃಷ್ಟಿಬೀರಿ, ತಮ್ಮ ಬಲಗೈ ಮುಷ್ಟಿಯನ್ನು ಬಿಗಿ ಹಿಡಿದು, ಮುಂದಿದ್ದ ಮೇಜಿನ ಮೇಲೆ ಮುಷ್ಟಿಯನ್ನಿಟ್ಟು, “ಇಗೋ, ನಾನು ಭರವಸೆ ಕೊಡುತ್ತೇನೆ. ಭಾರತ ಸ್ವತಂತ್ರ ಆಗಿಯೇ ಆಗುತ್ತದೆ. ಆ ಬಗ್ಗೆ ಅನುಮಾನಬೇಡ” ಎಂದು ಹೇಳೀದರು.  ಅಂಬುಭಾಯಿ ಆ ಸ್ವಾತಂತ್ಯ್ರ ಸಂಗ್ರಾಮದ ಗೀಳೂ ಬಿಟ್ಟು ಪಾಂಡಿಚೇರಿಯಲ್ಲಿ ನೆಲಸಿ ಸಾಧನೆಯಲ್ಲಿ ತೊಡಗಿದರು.  ಹೀಗೆ ಶ್ರೀ ಅರವಿಂದರಿಗೆ ಭಾರತದ ಸ್ವಾತಂತ್ಯ್ರ ಸಿಕ್ಕೇ ಸಿಗುತ್ತದೆ. ಎಂದು ಇಂಥ ಭರವಸೆಯಿದ್ದುದರಿಂದ ರಾಜಕೀಯದಿಂದ ನಿವೃತ್ತರಾದರು.

“ಸ್ವಾತಂತ್ಯ್ರ ಸುಮ್ಮನೆ ಬರಲಿಲ್ಲವಲ್ಲ ಸರ್. ೧೯೪೭ರ ವರೆಗೆ ದುಡಿಯಬೇಕಾಯಿತು. ಹಾಗೆ ದುಡಿಯಲು ಶ್ರೀ ಅರವಿಂದರು ಯಾಕೆಮುಂದಾಗಲಿಲ್ಲವೆಂಬುವುದು ನಮ್ಮ ಸಮಸ್ಯೆ:” ಎಂದು ಒಬ್ಬ ವಿದ್ಯಾರ್ಥಿ.

ಅದಕ್ಕೆ ಶ್ರೀ ಅರವಿಂದರೇ ಉತ್ತರ ಕೊಟ್ಟಿದ್ದಾರೆ.

“ಏನದು?”

ಸ್ವರಾಜ್ಯ ಸ್ವದೇಶಿ, ವಿದೆಶಿ ಬಹಿಷ್ಕಾರ- ಎಂಬ ಮೂರು ದಾರಿಗಳನ್ನು ನಾನು ತೋರಿಸಿಕೊಟ್ಟೆ.  ಆ ದಾರಿ ಹಿಡಿದು ಹೋರಾಡಿ ಸ್ವಾತಂತ್ಯ್ರವನ್ನು ತರಲು ಸಹಸ್ರಾರು ಮುಖಂಡರು , ಲಕ್ಷಾಂತರ ಜನರು ಹುಟ್ಟಿ ಮುಂದೆ ಬಂದಿದ್ದಾರೆ. ಇನ್ನೂ ಮುಂದೆಯೂ ಬರುತ್ತಾರೆ. ಅವರು ನನ್ನ ಆ ಆದರ್ಶವನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ನನಗೆ ಅನುಮಾನವೇ ಇಲ್ಲ. ಅವರಿಂದ ಆಗುವ ಅದೇ ಕೆಲಸವನ್ನು ಮಾಡಲು ನಾನೇ ಬೇಕಾಗಿರಲಿಲ್ಲ. ಆದ್ದರಿಂದ ನಾನು ರಾಜಕೀಯದಿಂದ ನಿವೃತ್ತನಾದೆ ಎಂದು ಶ್ರೀ ಅರವಿಂದರೇ ಹೇಳಿದ್ದಾರೆ.

“ಹಾಗಾದರೆ ಅವರು ಮಾಡುವ ಕೆಲಸ ಏನೂ ಇರಲಿಲ್ಲವೇ?

ಇತ್ತು. ಅವರೇ ಇನ್ನೊಮ್ಮೆ ಹೇಳಿದ್ದಾರೆ. ನನ್ನ ಮುಂದಿದ್ದ ಸಮಸ್ಯೆ, ಸ್ವಾತಂತ್ಯ್ರವನ್ನು ಹೇಗೆ ಪಡೆಯಬೇಕೆಂಬುವುದಲ್ಲ. ಬಂದ ಸ್ವಾತಂತ್ಯ್ರವನ್ನು ಹೇಗೆ ಉಪಯೋಗಿಸಬೇಕೆಂಬುದೇ ನನ್ನ ಸಮಸ್ಯೆ ಆಗಿತ್ತು ಎಂದಿದ್ದಾರೆ. ಆದ್ದರಿಂದ ಶ್ರೀ ಅರವಿಂದರು ಪಾಂಡಿಚೇರಿಗೆ ಹೋಗಿಯೋಗಾಭ್ಯಾಸದಲ್ಲಿಯೇ ಸಂಪೂರ್ಣವಾಗಿ ತಲ್ಲೀನರಾದರು ಅವರು ದೇಶದ ಹಿತವನ್ನು ಕಡೆಗಣಿಸಿದವರಲ್ಲ.

“ಮಾಡಿದ್ದೇನು ಸರ್ ಹಾಗಾದರೆ?”

ಶ್ರೀ ಅರವಿಂದರು ಪಾಂಡಿಚೇರಿಗೆ ಹೋದ ನಾಲ್ಕು ವರ್ಷಗಳ ಮೇಲೆ ಫ್ರಾನ್ಸನಿಂದ ಶ್ರೀಮತಿ ರಿಚರ್ಡ್ಸ ಎಂಬ ಮಹಿಳೆ ಪಾಂಡಿಚೇರಿಗೆ ಬಂದರು. ಅವರೇ ಇಂದು ಆಶ್ರಮದ ಮಾತಾಜಿ. ಮಾತಾಜಿ ಮತ್ತು ಶ್ರೀ ಅರವಿಂದರು, “ಆರ್ಯ”  ಎಂಬ ಒಂದು ಮಾಸ  ಪತ್ರಿಕೆಯನ್ನು ಹೊರಡಿಸಿದರು.  ಅದರಲ್ಲಿ ಮುಂದೆ ಹುಟ್ಟಲೇಬೇಕಾಗಿರುವ ಅತಿ ಮಾನವ,ಮಾನವ ಸಮಾಜ, ಈ ಲೋಕದ ಉಜ್ವಲ ಭವಿಷ್ಯ ಮುಂತಾದವುಗಳನ್ನು ಕುರಿತು ಏಳು ವರ್ಷಗಳು ಅಖಂಡವಾಗಿ ಬರೆದರು.  ಅವರು ಮನುಷ್ಯನ ಜೀವನದ ಎಲ್ಲ ವಿಷಯಗಳನ್ನು ಕುರಿತು ಬರೆರದರು.  ಈ ಮಾನವ ಕುಲ ಉದ್ಧಾರವಾಗಬೇಕಾದರೆ, ಮೊದಲು ಮಾನವ ತಾನು ಉತ್ತಮನಾಗಬೇಕು. ಹೀಗೆ ಉತ್ತಮನಾಗುತ್ತ ಹೋಗುವ ಮಾನವ ಅತೀ ಮಾನವನಾಗುವವನು! ಅವನು ಈ ಸಮಾಜವನ್ನು ಶುಚಿಗೊಳಿಸಿ, ಈ ಭೂಮಿಯೇ ಸ್ವರ್ಗವಾಗುವಂತೆ ಮಾಡುವನು.  ಶ್ರೀ ಅರವಿಂದರ ದೃಷ್ಟಿಯಲ್ಲಿ ಈ ಪ್ರಪಂಚ ಬಿಟ್ಟು ಸ್ವರ್ಗ ಎಂಬುವುದಿಲ್ಲ.  ಸತ್ತ ಮೇಲೆ ಮುಕ್ತಿ ಎಂಬುವುದಿಲ್ಲ. ಒಟ್ಟು ಈ ಕೊಳಕು ಬಾಳು ಪರಿಶುದ್ಧವಾಗಿ ಅಪರಂಜಿಯಂಥ ಬಾಳಾಗಬೇಕು.  ಅದು ಪೂರ್ಣಯೋಗ ಪದ್ಧತಿಯಿಂದ ಮಾತ್ರ ಸಾಧ್ಯವೆಂಬುವದಾಗಿ ತಮ್ಮ ಅನಂತ ಬರವಣಿಗೆಗಳ ಮೂಲಕ ಪ್ರತಿಪಾದಿಸಿದರು.

“ಅಂಥ ಜನ ಯಾರಾದರೂ ಸಿಕ್ಕುವರೇ?”

ಯಾಕೆ ಸಿಕ್ಕುವುದಿಲ್ಲ? ಪಾಂಡಿಚೇರಿಯ ಶ್ರೀ ಅರವಿಂದಾಶ್ರಮಕ್ಕೆ ಹೋದರೆ ಅಂಥ ಕೆಲವರನ್ನು ನೋಡಬಹುದು.

“ಶ್ರೀ ಅರವಿಂದರು ಒಂದು ಆಶ್ರಮವನ್ನೂ ಕಟ್ಟಿದರೆ?”

ಆಶ್ರಮವನ್ನು ಕಟ್ಟಬೇಕೆಂಬ ಉದ್ದೇಶದಿಂದ ಪಾಂಡಿಚೇರಿಯ ಆಶ್ರಮವನ್ನು ಶ್ರೀ ಅರವಿಂದರು ಸ್ಥಾಪಿಸಲಿಲ್ಲ. ಅವರು ಅಲ್ಲಿಗೆ ಹೋದಾಗ ಅವರೊಡನೆ ನಾಲ್ಕೈದು ಜನ ಅವರ ಅನುಯಾಯಿಗಳಿದ್ದರು.  ಅವರೆಲ್ಲ ಒಂದು ಮನೆಯಲ್ಲಿದ್ದರು. ಕ್ರಮೇಣ ಅವರನ್ನು ಆಶ್ರಯಿಸಿಕೊಂಡು ಕೆಲವರು ಬಂದರು.ಅವರಿಗೂ ಇರಲು ಜಾಗಬೇಕಾಯಿತು. ಆ ಜಾಗದಲ್ಲಿ ಊಟಕ್ಕೆ ಏರ್ಪಾಟು ಮಾಡಿದರು. ಬರುಬರುತ್ತಾ ಆ ಸ್ಥಳವೇ ಆಶ್ರಮವಾಯಿತು. ಶ್ರೀ ಮಾತಾಜಿ ಆಶ್ರಮವನ್ನು ಸುವ್ಯವಸ್ಥೆಯಿಂದ ನೋಡಿಕೊಳ್ಳುವ ಎರ್ಪಾಟು ಮಾಡಿದರು. ಈಗ ಆ ಆಶ್ರಮವೇ ಶ್ರೀ ಅರವಿಂದರ ಪೂರ್ಣಯೋಗದ ಪ್ರಯೋಗಶಾಲೆ ಆಗಿದೆ. ಮುಂದೆ ಯಾವ ಸಮಾಜ ನಿರ್ಮಾಣ ಆಗಬೇಕೆಂದು ಶ್ರೀ ಅರವಿಂದರು ಕನಸು ಕಂಡಿದ್ದರೋ, ಆ ಕನಸನ್ನು ಕೆಲವು ಮಟ್ಟಿಗೆ ಈ ಆಶ್ರಮದ ಸಾಧಕರು ನನಸನ್ನಾಗಿ ಮಾಡಿದ್ದಾರೆ. ಅದನ್ನು ಚೆನ್ನಾಗಿ ತಿಳಿಯಬೇಕಾದರೆ ಒಮ್ಮೆ  ಆದರೂ ಆಶ್ರಮವನ್ನು ನೋಡಿ ಬರಬೇಕು.