ಕೈಯಿಟ್ಟ ಕ್ಷೇತ್ರದಲ್ಲೆಲ್ಲ ಅದ್ಭುತ ಪ್ರಗತಿ ಸಾಧಿಸಿದ ಅಸಾಧಾರಣ ಸಾಧಕ, ಉದ್ಯಮಿ ಶ್ರೀ ಆರ್.ಎನ್. ಶೆಟ್ಟಿ ಅವರು.
೧೯೨೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಜನಿಸಿದ ಶ್ರೀಯುತರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಸಿರಸಿಯಲ್ಲಿ. ೧೯೬೧ರಲ್ಲಿ ಪ್ರಥಮವಾಗಿ ಆರ್.ಎನ್. ಶೆಟ್ಟಿ ಕಂಪನಿ ಸ್ಥಾಪಿಸಿದ ಇವರು ಕೆಲವೇ ವರ್ಷಗಳಲ್ಲಿ ನವೀನ್ ಮೆಕ್ಯಾನ್ಸೆಸ್ ಕಂಪನಿಯ ಸ್ವಾಮ್ಯವನ್ನು ಪಡೆದರು.
ಇವರು ಕಟ್ಟಿಸಿದ ಸೇತುವೆಗಳು, ಬೃಹತ್ ಕಟ್ಟಡಗಳು ಜಲವಿದ್ಯುತ್ ಯೋಜನೆಗಳು, ನಿರಾವರಿ ಅಣೆಕಟ್ಟು ಕಾಮಗಾರಿಗಳು ರಾಜ್ಯದ ಬಹುಮುಖ್ಯ ಕಾಮಗಾರಿಗಳೆನಿಸಿದವು. ೧೯೭೫ ರಿಂದ ಹೋಟೆಲ್ ಉದ್ಯಮಕ್ಕೂ ಪ್ರವೇಶಿಸಿ ಪಂಚತಾರ ಹೋಟೆಲ್ಗಳನ್ನು ನಿರ್ಮಿಸಿ ಯಶಸ್ವಿಯಾದರು. ಕೊಂಕಣ ರೈಲ್ವೆಯಲ್ಲಿ ಅಸಾದ್ಯವೆನಿಸಿದ ಹದಿನೆಂಟು ಭೂ ಸುರಂಗಳನ್ನು ನಿರ್ಮಿಸಿ ದಕ್ಷಿಣ ಭಾರತ ರೈಲ್ವೆಗೆ ಅರ್ಪಿಸಿದ ಸಾಧನೆ ಅವರದು. ರಾಜ್ಯದಲ್ಲೆ ಪ್ರಥಮ ಬಾರಿಗೆ ಡೈನಮೈಟ್ ಟೈಲ್ಸ್ ತಯಾರಿಸಿದ ಕೀರ್ತಿ ಇವರ ಮುರುಡೇಶ್ವರ ಟೈಲ್ಸ್ ಕಂಪನಿಗೆ ಸಲ್ಲುತ್ತದೆ. ಇಷ್ಟಲ್ಲದೇ ಆರ್.ಎನ್.ಶೆಟ್ಟಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಶಿಕ್ಷಣ ವಿಸ್ತಣೆಗೆ ಕಾರಣರಾಗಿದ್ದಾರೆ. ಮುರುಡೇಶ್ವರದಲ್ಲಿ ಇವರು ಸ್ಥಾಪಿಸಿರುವ ೧೨೩ ಅಡಿ ಎತ್ತರದ ಶಿವನ ಪ್ರತಿಮೆ ವಿಶ್ವದ ಅತಿ ಎತ್ತರದ ಶಿವ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗೆ ತಾವು ಕೈಯಿಟ್ಟ ಕ್ಷೇತ್ರಗಳಲ್ಲೆಲ್ಲ ಅಸಾಧ್ಯ ಎತ್ತರಕ್ಕೆ ಏರಿದ ವ್ಯಕ್ತಿ ಆರ್.ಎನ್. ಶೆಟ್ಟಿ ಅವರು.
Categories