Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆರ್.ಕೆ. ಪದ್ಮನಾಭ

ಸಂಗೀತ ಕಾಶಿ ಎಂದೇ ಹೆಸರಾದ ರುದ್ರಪಟ್ಟಣದ ಸಂಗೀತ ಪರಂಪರೆಗೊಂದು ಮುಕುಟಮಣಿ ಗಾನಕಲಾ ಭೂಷಣ ಶ್ರೀಯುತ ಆರ್.ಕೆ. ಪದ್ಮನಾಭ ಅವರು.
ಬಾಲಕ ಪದ್ಮನಾಭರ ಸಂಗೀತಾಸಕ್ತಿಯನ್ನು ಊರಿನ ಸಂಗೀತ ಪರಂಪರೆಯೇ ಗಟ್ಟಿಗೊಳಿಸಿತು. ಭೌತಶಾಸ್ತ್ರದಲ್ಲಿ ಪದವಿ ಪಡೆದು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಅವರ ಪ್ರವೃತ್ತಿ ಶಾಸ್ತ್ರೀಯ ಸಂಗೀತವಾಗಿತ್ತು. ಮೈಸೂರು ನಂಜುಂಡಸ್ವಾಮಿ, ವಿದ್ವಾನ್ ಸೀತಾರಾಮಶಾಸ್ತ್ರಿ, ಹೆಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಶಾಸ್ತ್ರೀಯ ಶಿಕ್ಷಣ ಪಡೆದ ಬಹುಮುಖ ಪ್ರತಿಭಾ ಸಂಪನ್ನ ಸಂಗೀತಗಾರರಿವರು.
ಶುದ್ಧ ಶಾರೀರ, ಆಳವಾದ ಸಂಗೀತ ಜ್ಞಾನದಿಂದ ಕರ್ನಾಟಕ ಶೈವ ಹಾಗೂ ಹಿಂದೂಸ್ತಾನಿ ಶೈಲಿ ಎರಡರಲ್ಲಿಯೂ ಪ್ರಾವೀಣ್ಯತೆ ಪಡೆದ ಇವರ ಸಂಗೀತ ಕಚೇರಿಗಳು ದೇಶದೆಲ್ಲೆಡೆಯಷ್ಟೇ ಅಲ್ಲದೆ ದೇಶದಾಚೆಗೂ ಅಪಾರ ಶೋತೃವೃಂದವನ್ನು ಸೃಷ್ಟಿಸಿವೆ. ಶಾರದಾ ಕಲಾಕೇಂದ್ರ ಎಂಬ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಪ್ರತಿಭೆಗಳನ್ನು ಬೆಳೆಸಿದ ಶ್ರೀಯುತರ ಸಂಗೀತ ಸಾಧನೆಯನ್ನು ಅರಸಿಬಂದ ಪ್ರಶಸ್ತಿ ಬಿರುದುಗಳು ಹಲವಾರು. ಗಾನಕಲಾ ಭೂಷಣ, ಸಂಗೀತ ಭೂಷಣ, ಸಂಗೀತ ಸೇವಾ ಮಣಿ, ಶ್ರೇಷ್ಠ ಗಾಯಕ, ಭಕ್ತಿಗಾನ ಸುಧಾಕರ, ನಾದತಪಸ್ವಿ, ಮುಂತಾದ ಬಿರುದು, ಸನ್ಮಾನಗಳು ಅನೇಕ ಸಂಘ ಸಂಸ್ಥೆಗಳಿಂದ ಸಂದಿವೆ.
ಅದ್ವಿತೀಯ ಸಂಗೀತಗಾರರಾಗಿ ಅಪಾರ ಶೋತೃಗಳನ್ನು ಪಡೆದಿರುವಂತೆ ಅನುಭವಿ ಗುರುವಾಗಿ ಅಸಂಖ್ಯ ಶಿಷ್ಯರನ್ನೂ ಪಡೆದಿರುವ ಸಂಗೀತ ನಿಧಿ ಶ್ರೀ ಆರ್.ಕೆ. ಪದ್ಮನಾಭ ಅವರು.