Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಆರ್. ವೀರಭದ್ರಾಚಾರ್

ಸಹಜ ಕಲಾಕೌಶಲ್ಯ ಮತ್ತು ಇಚ್ಛಾಶಕ್ತಿಯಿಂದ ಪ್ರತಿಭಾನ್ವಿತ ಶಿಲ್ಪಿಯಾಗಿ ಅರಳಿದವರು ಶ್ರೀ ಆರ್. ವೀರಭದ್ರಾಚಾರ್. ಜನನ ೧೯೪೦. ಕುಶಲ ಕಲಾವಿದರ ಮಾರ್ಗದರ್ಶನದಿಂದ ಬೆಳ್ಳಿವಿಗ್ರಹ ರಚನೆಯಲ್ಲಿ ತರಬೇತಿ ಮತ್ತು ಲೋಹ ಶಿಲ್ಪಕಲೆಯಲ್ಲಿ ನಿಪುಣತೆ ಪಡೆದರು. ತಮ್ಮ ೧೮ನೆಯ ವಯಸ್ಸಿನಲ್ಲಿ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್ಮನ್ ಆಗಿ ವೃತ್ತಿ ಜೀವನದ ಆರಂಭ. ೧೯೫೫ರಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಹಿರಿಯ ಮಾಡೆಲ್ಗಾರರಾಗಿ ಸೇರಿದ್ದು, ೧೯೮೨ರಲ್ಲಿ ಪ್ರಧಾನ ಮಾಡಲ ಆಗಿ ನಿವೃತ್ತರಾದರು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಡುವ ಗಂಧರ್ವರು ಶಿಲ್ಪದ ಪ್ರತಿರೂಪದ ರಚನೆ, ಕುರುಕ್ಷೇತ್ರದ ಶ್ರೀಕೃಷ್ಣ ಮ್ಯೂಸಿಯಂನಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳು, ಹಂಪಿಯ ಮೂಲ ವಿಗ್ರಹಕ್ಕೆ ಮುಖವಾಡ ರಚನೆ ಶ್ರೀಯುತರ ಪ್ರಮುಖ ಸಾಧನೆಗಳಾಗಿವೆ. ೧೯೯೮ನೇ ಸಾಲಿನ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಆರ್. ವೀರಭದ್ರಾಚಾರ್ ಅವರ ಸಾಧನೆಗೆ ೮೪ ಅಡಿ ಬೃಹತ್ ಆದಿನಾಥ ಪ್ರತಿಮೆಯು ದ್ಯೋತಕವಾಗಿದೆ. ಕಲಾನೈಪುಣ್ಯದಿಂದ ರಚಿಸಿದ ಮಹಾತ್ಮಾ ಗಾಂಧೀಜಿ, ಬುದ್ಧ, ಲುಂಬಿನಿ ಸ್ತಂಭಗಳಿಂದ ಎಲ್ಲರ ಶ್ಲಾಘನೆಗೆ ಪಾತ್ರರಾದವರು ಶ್ರೀ ಆರ್. ವೀರಭದ್ರಾಚಾರ್ ಅವರು.