Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಈರಬಡಪ್ಪ

ನೂರಾರು ಜಾನಪದ ಕಥೆಗಳನ್ನು ತಮ್ಮ ಮಸ್ತಿಷ್ಕದಲ್ಲಿ ತುಂಬಿಟ್ಟುಕೊಂಡಿರುವ ಜಾನಪದ ಭಂಡಾರ ಈರಬಡಪ್ಪ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯಲ್ಲಿ ಜನನ. ಓದು-ಬರಹ ಬಾರದಿದ್ದರೂ ಈರಬಡಪ್ಪ ಅವರು ಹೇಳುವ ಜಾನಪದ ಕಥೆಗಳು ತಮ್ಮ ವಿಶಿಷ್ಟತೆಯ ಮೂಲಕ ಶಿಷ್ಟ ಸಾಹಿತ್ಯದೊಂದಿಗೆ ಸರಿಸಮವಾಗಿ ನಿಲ್ಲಬಲ್ಲವು. ಹಳ್ಳಿಯ ಎಲ್ಲ ಜೀವಸತ್ವಗಳನ್ನು ಮೈಗೂಡಿಸಿಕೊಂಡಿರುವ ಅವರ ಕಥೆಗಳು ವಸ್ತು ವೈವಿಧ್ಯದಿಂದ ಕೂಡಿದ್ದು, ಅದ್ಭುತ ಲೋಕವನ್ನೇ ತೆರೆದಿಡುವ ಚಮತ್ಕಾರವುಳ್ಳವು.
ಚಮತ್ಕಾರ ಅವರ ಕಥೆಗಳ ಜೀವಾಳ, ಪ್ರತಿಯೊಂದು ಕಥೆಯಲ್ಲೂ ಸಮುಚಿತವಾದ ಸಂಭಾಷಣೆ, ವಿಭಿನ್ನ ನಿರೂಪಣೆ ಅವರ ವೈಶಿಷ್ಟ್ಯ. ಕಥೆಗಳನ್ನು ಗ್ರಾಮೀಣ ಪರಿಸರಕ್ಕೆ ಹೊಂದಿಸಿ ತತ್ಕಾಲೀನ ಜೀವನವನ್ನು ಚಿತ್ರಿಸುವಂತೆ ಮಾಡಿ ಥಟ್ಟನೆ ಪ್ರಾಚೀನ ಕಾಲದ ವಸ್ತುವನ್ನು ಎತ್ತಿಕೊಳ್ಳುವ ಮೂಲಕ ಕಥೆಗೆ ಹೊಸತೊಂದು ತಿರುವು ನೀಡುವ ಕಲೆಗಾರಿಕೆ ಅವರದು. ಶ್ರೀಯುತರ ಸಹಜ ಪ್ರತಿಭೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ, ಮೈಸೂರಿನ ದಸರಾ ನವರಾತ್ರಿ ರಂಗೋತ್ಸವ ಗೌರವಗಳು ಸಂದಿವೆ.
ಜಾನಪದ ಕಥೆಗಳ ಆಗರ ಎನಿಸಿರುವ ಈರಬಡಪ್ಪ ಅನನ್ಯ ಕಥೆಗಾರರು. ಅವರಲ್ಲಿರುವ ಜಾನಪದ ಕಥಾ ಸಾಹಿತ್ಯ ಖಾಲಿಯಾಗದ ಬತ್ತದ ತೊರೆಯಂತೆ, ಮೊಗೆದಷ್ಟೂ ಉಕ್ಕುಕ್ಕಿ ಬರುತ್ತದೆ.