Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಎಂ. ಅಣ್ಣಾದೊರೈ

ಭಾರತದ ಯಶಸ್ವಿ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗೆ ಶ್ರಮಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳಲ್ಲಿ ಪ್ರಮುಖವಾಗಿ ನಿಲ್ಲುವ ವಿಜ್ಞಾನಿ ಎಂ. ಅಣ್ಣಾದೊರೈ
ಚೆನ್ನೈನಲ್ಲಿ ೧೯೫೮ರ ಜುಲೈ ೨ರಂದು ಜನನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಸೂಚನೆ ನೀಡಿದವರು. ಕೊಯಮತ್ತೂರಿನ ಪಿಎಸ್‌ಜಿ ತಾಂತ್ರಿಕ ಕಾಲೇಜಿನಲ್ಲಿ ಅಫ್ರೆಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಇ ಪದವೀಧರರು.
೧೯೮೨ರಲ್ಲಿ ಬೆಂಗಳೂರಿನ ಇಸ್ರೋ ಉಪಗ್ರಹ ಕೇಂದ್ರ ಸೇರುವ ಮೂಲಕ ವೃತ್ತಿ ಬದುಕಿನ ಆರಂಭ. ಸ್ಯಾಟಲೈಟ್ ಸಿಮ್ಯುಲೇಟರ್ ಅಭಿವೃದ್ಧಿ ಪಡಿಸಿದ ತಂಡದ ನಾಯಕತ್ವ, ಐಆರ್‌ಎಸ್‌-೧ಎ, ಐಆರ್‌ಎಸ್-೧ಬಿ, ಇನ್ಸಾಟ್ – ೨ಎ ಮತ್ತು ಇನ್ಸಾಟ್ -೨ಬಿ ಉಪಗ್ರಹ ಕಾರ್ಯಾಚರಣೆಯ ತಂಡದ ವ್ಯವಸ್ಥಾಪಕರು.
ಇನ್ಸಾಟ್ ಸರಣಿಯ ೨ಸಿ, ೨ಡಿ, ೩ಬಿ, ೨೪, ೩೫, ಜಿಸ್ಯಾಟ್-೧ ಉಪಗ್ರಹಣ ಉಡಾವಣೆಯ ಯೋಜನೆಯ ನಿರ್ದೇಶಕರು. ೨೦೦೪ರಲ್ಲಿ ನಡೆದ ಚಂದ್ರಯಾನ-೧ರ ಸಿದ್ಧತೆಯ ಯೋಜನಾ ನಿರ್ದೇಶಕರಾಗಿದ್ದ ಅವರು ಇತ್ತೀಚೆಗಷ್ಟೇ ಯಶಸ್ವಿಯಾಗಿ ನಡೆದ ಚಂದ್ರಯಾನ-೧ ಕಾರ್ಯಾಚರಣೆಯಲ್ಲಿಯೂ ಮುಂದಾಳತ್ವ ವಹಿಸಿದ್ದರು.
ಉಪಗ್ರಹ ಉಡಾವಣಾ ಕಾರ್ಯಾಚರಣೆ, ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತಂತೆ ಇದುವರೆಗೂ ಅವರು ಮಂಡಿಸಿದ ಪ್ರಬಂಧಗಳ ಸಂಖ್ಯೆ ಸುಮಾರು ೫೫. ಉಪಗ್ರಹ ಉಡಾವಣೆ ಯೋಜನೆಯಲ್ಲಿನ ಕೊಡುಗೆಗಾಗಿ ಇಸ್ರೋದ ಪ್ರಮಾಣಪತ್ರ, ವಿಕ್ರಮ್ ಸಾರಾಭಾಯಿ ಸಂಶೋಧನಾ ಪ್ರಶಸ್ತಿ, ಇನ್ಸಾಟ್ ೨೩ ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ತಂಡವನ್ನು ಮುನ್ನೆಡೆಸಿದ ಸಾಧನೆಗಾಗಿ ಪ್ರಶಸ್ತಿಗಳು ಸಂದಿವೆ.
ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದ ನಾಡಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಶ್ರೀ ಎಂ. ಅಣ್ಣಾದೊರೈ.