Categories
ಪತ್ರಿಕೋದ್ಯಮ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ.ಎ. ಪೊನ್ನಪ್ಪ

ಕನ್ನಡ ಪತ್ರಿಕೋದ್ಯಮದಲ್ಲಿ ಕ್ರೀಡಾ ವಿಭಾಗದ ವರದಿಗಳಿಗೆ ಹೆಚ್ಚಿನ ಮಾನ್ಯತೆಯನ್ನು ತಂದು ಕೊಟ್ಟಿರುವವರು ಜನಪ್ರಿಯ ಕ್ರೀಡಾ ಪತ್ರಕರ್ತರಾದ ಶ್ರೀ ಎಂ. ಎ. ಪೊನ್ನಪ್ಪ ಅವರು.
ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿರುವ ಶ್ರೀ ಪೊನ್ನಪ್ಪ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡಿದ್ದರು. ಪದವೀಧರರಾದ ಮೇಲೆ ಪತ್ರಿಕೋದ್ಯಮದ ಕಡೆಗೆ ಆಕರ್ಷಿತರಾಗಿ ಕೊಡಗಿನ ದಿನಪತ್ರಿಕೆ ‘ಶಕ್ತಿ’ಯಲ್ಲಿ ವೃತ್ತಿ ಪ್ರಾರಂಭಿಸಿದರು. ಲೋಕವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ‘ಪ್ರಜಾವಾಣಿ’ ಬಳಗಕ್ಕೆ ಸೇರ್ಪಡೆ ಯಾದರು. ನಂತರ ನೈಜ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ದೊರೆಯಿತು. ಕರ್ನಾಟಕದ ವಿವಿಧೆಡೆಗಳಲ್ಲಿ ಹಾಗೂ ಭಾರತದ ಬೇರೆ ಬೇರೆ ನಗರಗಳಲ್ಲಿ ನಡೆದ ಅನೇಕ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಗಳ ವರದಿಯನ್ನು ವೈಶಿಷ್ಟ್ಯಪೂರ್ಣವಾಗಿ ಮಾಡಿ ಓದುಗರ ವಿಶ್ವಾಸಕ್ಕೆ ಪಾತ್ರರಾದರು. ಹಲವು ಬಾರಿ ವಿದೇಶಕ್ಕೆ ಹೋಗಿ ಅಂತರರಾಷ್ಟ್ರೀಯ ಕ್ರೀಡೆಗಳನ್ನು ವರದಿ ಮಾಡಿ ಅಲ್ಲಿ ಕನ್ನಡಿಗ ಕ್ರೀಡಾಪಟುಗಳ ಸಾಧನೆಯನ್ನು ಆಕರ್ಷಕವಾಗಿ ನಿರೂಪಿಸಿದ್ದಾರೆ.
ಬೆಂಗಳೂರು ಕ್ರೀಡಾ ಬರಹಗಾರರ ಸಂಘದ ಅಧ್ಯಕ್ಷರಾಗಿ ಬೆಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿ, ಒಂಬತ್ತು ಬಾರಿ ಪ್ರೆಸ್ ಕ್ಲಬ್‌ನ ಪ್ರಧಾನ ಕಾವ್ಯದರ್ಶಿಯಾಗಿ ದುಡಿದಿದ್ದಾರೆ. ಕ್ರೀಡಾ ವರದಿಗಾರರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ವರ್ಷದ ಅತ್ಯುತ್ತಮ ಕ್ರೀಡಾ ವರದಿಗಾರ ಪ್ರಶಸ್ತಿ, ದಸರಾ ಕ್ರೀಡಾ ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಶ್ರೀಯುತರಿಗೆ ಸಂದಿವೆ.
ಚುರುಕಿನ ಕೆಲಸಗಾರರಾಗಿರುವ, ಪತ್ರಿಕಾ ವೃತ್ತಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸ್ನೇಹಮಯಿ ಕ್ರೀಡಾ ಸಂಪಾದಕ ಶ್ರೀ ಎಂ. ಎ. ಪೊನ್ನಪ್ಪ ಅವರು.