ರೋಗಿಗಳಿಗೆ ಜೀವದ್ರವ್ಯವಾಗಿರುವ ರಕ್ತಪೂರೈಕೆಯ ಆದರ್ಶ ಕಾಯಕದಲ್ಲಿ ನಿರತರಾಗಿರುವ ಸಮಾಜಸೇವಕ ಶ್ರೀ ಅಬ್ದುಲ್ ರೆಹಮಾನ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ೧೯೪೪ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಉಪ್ಪಿನಂಗಡಿಯಲ್ಲಿ ಪಡೆದು ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣದ ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ.
ಪ್ರಸಿದ್ಧ ಸಾಮಾಜಿಕ ಧುರೀಣ ದಿವಂಗತ ಮಹಮ್ಮದ್ ಕಮಾಲ್‌ರವರ ಸ್ಮರಣಾರ್ಥ ೧೯೯೨ ರಲ್ಲಿ ನ್ಯಾಯವಾದಿ ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್‌ರವರು ಸ್ಥಾಪಿಸಿದ ಬ್ಲಡ್ ಬೈನ್ ಬಯೋಮ್ ಬ್ಯಾಂಕಿಂಗ್ ಟ್ರಸ್ಟ್ ೧೯೯೫, ೯೬, ೯೭, ೯೮, ೯೯ ರಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರಗಳಲ್ಲಿ ಅನುಕ್ರಮವಾಗಿ ೨೭೭, ೩೨೪, ೫೧೩, ೧೮೦, ೧೦೦ ಯೂನಿಟ್‌ಗಳಷ್ಟು ರಕ್ತದ ಸಂಗ್ರಹಿಸಿದ್ದಲ್ಲದೆ, ವಿವಿಧ ಆಸ್ಪತ್ರೆಗಳಲ್ಲಿ ರಕ್ತ ಅಗತ್ಯವಿದ್ದ ಸುಮಾರು ೬೦೦೦ಕ್ಕೂ ಅಧಿಕ ರೋಗಿಗಳಿಗೆ ರಕ್ತ ಒದಗಿಸಿ ದಾಖಲೆ ನಿರ್ಮಿಸಿದೆ. ಈ ರಕ್ತದಾನ ಅಭಿಯಾನದ ರೂವಾರಿ ಶ್ರೀ ಅಬ್ದುಲ್ ರೆಹಮಾನ್ ಅವರು.
ರಕ್ತದಾನಕ್ಕಾಗಿ ಜಾಥಾ, ಸಭೆ, ಭಾಷಣ, ಕಲಾಮೇಳ, ಸ್ಪರ್ಧೆ ಹೀಗೆ ವಿವಿಧ ವಿಧಾನಗಳ ಮೂಲಕ ಪ್ರೇರೇಪಿಸುತ್ತಿರುವ ಶ್ರೀಯುತರ ಕಾರ್ಯವನ್ನು ವಿವಿಧ ಕ್ಷೇತ್ರಗಳಲ್ಲಿನ ಅನೇಕ ಮೇಧಾವಿಗಳು ಪ್ರಶಂಸಿಸಿದ್ದಾರೆ.
ರಕ್ತದಾನಿಗಳ ಡೈರೆಕ್ಟರಿ ಪ್ರಕಟಣೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು, ವಿದ್ಯಾರ್ಥಿವೇತನ ನೀಡಿಕೆ, ಬ್ಯಾಂಕ್ ವಿಜೇತರಿಗೆ ಪುರಸ್ಕಾರ ಇವೇ ಮೊದಲಾದ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕಿನ ಕಾನೂನು ಸಲಹೆಗಾರರಾಗಿ, ನೇತ್ರಾವತಿ ಗ್ರಾಮೀಣ ಬ್ಯಾಂಕಿನ ನಿರ್ದೇಶಕರಾಗಿ, ಜಿಲ್ಲಾ ವಕ್ಸ್ ಮಂಡಳಿ ಉಪಾಧ್ಯಕ್ಷರಾಗಿ ಹೀಗೆ ವಿವಿಧ ಪದಗಳಲ್ಲಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವವರು ಶ್ರೀ ಎಂ.ಬಿ. ಅಬ್ದುಲ್ ರೆಹಮಾನ್ ಅವರು.
Categories
ಶ್ರೀ ಎಂ.ಜಿ. ಅಬ್ದುಲ್ ರೆಹಮಾನ್
