Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಎಂ ರಾಮಸ್ವಾಮಿ ರೆಡ್ಡಿ

ಹಿಂದುಳಿದ ಕೃಷಿಕ ಕುಟುಂಬದಲ್ಲಿ ಜನಿಸಿದರೂ ಸ್ವಂತ ಪರಿಶ್ರಮ ಹಾಗೂ ಆಸಕ್ತಿಯಿಂದ ಸಮಾಜಸೇವೆಯಲ್ಲಿ ತೊಡಗಿರುವವರು ಶ್ರೀ ರಾಮಸ್ವಾಮಿ ರೆಡ್ಡಿ ಅವರು.

೧೯೪೨ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ, ೧೧ ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ೭೬ರ ಇಳಿವಯಸ್ಸಿನಲ್ಲೂ ಫಲಾಪೇಕ್ಷೆ ಇಲ್ಲದೆ ಸಮಾಜಸೇವಾ ಕಾರ್ಯದಲ್ಲಿ ನಿರತರು. ಕರ್ನಾಟಕ ಕ್ಷಯರೋಗ ಸಂಸ್ಥೆಯಲ್ಲಿ ಕೇಂದ್ರ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೧೯೭೨ರಿಂದಲೂ ಕ್ಷಯರೋಗಿಗಳ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಮಾಜದ ಶೋಷಿತ ಜನಾಂಗಕ್ಕೆ ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಯುತರು ಕಾರ್ಯತತ್ಪರರು. ಕೇಂದ್ರ ಕ್ಷಯರೋಗ ಸಮಿತಿಯ ಸದಸ್ಯರಾಗಿ ಬೆಲ್ಸಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿಮೆ ಇವರದಾಗಿದೆ. ಜನತೆಯಲ್ಲಿ ಆರೋಗ್ಯಾಭಿವೃದ್ಧಿ ಮತ್ತು ಶಿಕ್ಷಣದ ಅಗತ್ಯತೆ ಕುರಿತು ತಿಳಿವಳಿಕೆ ನೀಡಿ ಕ್ಷಯರೋಗದ ವಿರುದ್ಧ ಸಮರ ಸಾರುವುದೇ ಇವರ ಜೀವನದ ಧೈಯವಾಗಿದೆ. ಹಲವಾರು ಶೈಕ್ಷಣಿಕ ಸಂಸ್ಥೆಗಳ ಮೂಲಕವೂ ಇವರ ಸೇವೆ ರಾಜ್ಯಕ್ಕೆ ಸಂದಿದೆ.

ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಹಾಗೂ ಬಡವಿದ್ಯಾರ್ಥಿಗಳ ಸೇವೆಯನ್ನು ಶ್ರದ್ಧೆ ಹಾಗೂ ಸೇವಾ ಮನೋಭಾವದಿಂದ ಮಾಡುತ್ತಿರುವ ಹಿರಿಯರು ಶ್ರೀ ರಾಮಸ್ವಾಮಿ ರೆಡ್ಡಿಯವರು.