Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್.ಎನ್. ಷಡಕ್ಷರಪ್ಪ

ಮಧ್ಯಕರ್ನಾಟಕದ ಜಿಲ್ಲೆಗಳ ಆಪ್ತ ಒಡನಾಡಿಯೂ ಆ ಜಿಲ್ಲೆಗಳ ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುವ ಪ್ರಭಾವಶಾಲಿ ಮಾಧ್ಯಮವೂ ಆಗುವಂತೆ ‘ಜನತಾವಾಣಿ’ ದಿನಪತ್ರಿಕೆಯನ್ನು ರೂಪಿಸಿ ಎಲ್ಲ ವರ್ಗದ ಓದುಗರ ಮೆಚ್ಚುಗೆಗೂ ಪಾತ್ರರಾಗಿರುವ ಶ್ರೀ ಎಚ್.ಎನ್. ಷಡಕ್ಷರಪ್ಪ ಒಬ್ಬ ಧೀಮಂತ ಪತ್ರಿಕೋದ್ಯಮಿ.
ಗಾಂಧಿ, ಲೋಹಿಯಾ, ಜೆ.ಪಿ, ಅಂಬೇಡ್ಕರ್, ಬುದ್ಧ, ಬಸವರ ರಾಜಕೀಯ ದಾರ್ಶನಿಕ ವಿಚಾರಧಾರೆಗಳನ್ನುಂಡ ಎಚ್.ಎನ್.ಎಸ್. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕೈಬರಹದ ಪತ್ರಿಕೆ ಹೊರತಂದು, ಮುಂದೆ ಮಾಸಪತ್ರಿಕೆ ಪ್ರಕಟಿಸುವ ಸಾಹಸಕ್ಕೂ ಕೈ ಹಚ್ಚಿದವರು. ಹುಬ್ಬಳ್ಳಿಯ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ ಸಂಪಾದಕ ಮಂಡಳಿಯಲ್ಲಿದ್ದು ಪತ್ರಿಕೋದ್ಯಮಕ್ಕೆ ಅಗತ್ಯವಾಗಿದ್ದ ಸತ್ವ ಹೀರಿಕೊಂಡವರು. ಕರ್ನಾಟಕ ರಾಜ್ಯದ ಸಣ್ಣ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ, ದಾವಣಗೆರೆ ಪ್ರೆಸ್ ಕ್ಲಬ್ ನ ಮುಖ್ಯ ಪೋಷಕರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ದಾವಣಗೆರೆ ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿಯ ಗೌರವಾಧ್ಯಕ್ಷರಾಗಿ, ‘ತುಂಗಭದ್ರಾ ಉಳಿಸಿ’ ಹೋರಾಟ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಷಡಕ್ಷರಪ್ಪನವರು ಪಡೆದುಕೊಂಡಿರುವ ವಿಸ್ತ್ರತ ಅನುಭವ ಪತ್ರಿಕೋದ್ಯಮಿಯಾಗಿ ಅವರನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರಣವಾಗಿವೆ. ಜನತಾವಾಣಿ’ ಒಂದು ಸಾಮಾಜಿಕ ಆಯಾಮ ಪಡೆದುಕೊಳ್ಳುವಲ್ಲಿ, ಸಾಂಸ್ಕೃತಿಕ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳುವಲ್ಲಿ, ಪ್ರಗತಿ ಧೋರಣೆಗೆ ಬದ್ಧವಾಗುವಲ್ಲಿ ಮಧ್ಯತೆಯ ವಿರುದ್ಧ ಸಮರ ಸಾರುವಲ್ಲಿ ಎಚ್.ಎನ್.ಎಸ್.ಅವರ ಪ್ರಗತಿಪರ ಮನೋಧರ್ಮ ವಿಶೇಷವಾಗಿ ಕೆಲಸ ಮಾಡಿದೆ. ‘ಜನತಾವಾಣಿ’ಯನ್ನು ರಾಜ್ಯದ ಅತ್ಯುತ್ತಮ ಸಣ್ಣಪತ್ರಿಕೆಗಳಲ್ಲಿ ಒಂದನ್ನಾಗಿ ರೂಪಿಸುವಲ್ಲಿ ಶ್ರೀ ಎಚ್.ಎನ್. ಷಡಕ್ಷರಪ್ಪನವರ ಶ್ರಮ, ಪ್ರತಿಭೆ, ಛಲಗಳು ಮುಪ್ಪುರಿಗೊಂಡಿರುವುದು ಎದ್ದು ಕಾಣುತ್ತದೆ.