ನ್ಯಾಯಾಂಗ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಿದ ಕನ್ನಡಿಗರು ಎಚ್.ಎಲ್.ದತ್ತು. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆಯ ಸಾಧಕರು.
ನ್ಯಾಯಾಂಗ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಎಚ್.ಎಲ್.ದತ್ತು. ಚಿಕ್ಕಮಗಳೂರಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಜನಿಸಿದ ದತ್ತು ಅವರ ತಂದೆ ಇಂಗ್ಲೀಷ್ ಶಿಕ್ಷಕರು. ಕಡೂರು, ತರೀಕೆರೆ ಮತ್ತು ಬೀರೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ದತ್ತು ಅವರು ೧೯೭೫ರಲ್ಲಿ ವಕೀಲರಾಗಿ ವೃತ್ತಿಬದುಕು ಆರಂಭಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ೮೩ರಿಂದ ೧೯೯೦ರವರೆಗೆ ಕಾರ್ಯನಿರ್ವಹಿಸಿದ ಅವರು ೯೦ರಿಂದ ೯೩ರವರೆಗೆ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ೧೯೯೫ರ ಡಿಸೆಂಬರ್ ೧೮ರಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ದತ್ತು ಅವರು ೨೦೦೭ರ ಫೆಬ್ರವರಿ ೧೨ರಂದು ಛತ್ತೀಸಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು. ಆನಂತರ ಕೇರಳ ಹೈಕೋರ್ಟ್ಗೆ ವರ್ಗಾವಣೆ. ೨೦೧೪ರಲ್ಲಿ ಪ್ರತಿಷ್ಠಿತ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅತ್ಯುನ್ನತ ಹುದ್ದೆಗೆ ನೇಮಕಗೊಳ್ಳುವ ಮೂಲಕ ಕರುನಾಡಿಗೆ ಕೀರ್ತಿ ತಂದವರು. ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ದತ್ತು ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾನವೀಯ ನಡೆಗೆ ಹೆಸರಾದವರು. ರೋಟರಿಕ್ಲಬ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡವರು.
Categories
ಶ್ರೀ ಎಚ್.ಎಲ್.ದತ್ತು
