Categories
ರಾಜ್ಯೋತ್ಸವ 2006 ಸಮಾಜಸೇವೆ

ಶ್ರೀ ಎಚ್. ಜಿ. ಗೋವಿಂದಗೌಡ

ರಾಜಕಾರಣದಲ್ಲಿದ್ದೂ ಸರಳತೆ, ಪ್ರಾಮಾಣಿಕತೆ ಹಾಗೂ ತತ್ವನಿಷ್ಠೆಗಳಿಂದ ಜನಮನ ಗೆದ್ದ ಅಪರೂಪದ ರಾಜಕಾರಣಿ ಶ್ರೀ ಎಚ್.ಜಿ. ಗೋವಿಂದ ಗೌಡ ಅವರು.
ಹಸಿರು ಚಿಮ್ಮುವ ಮಲೆನಾಡಿನ ಕಾನೂರಿನಲ್ಲಿ ಜನಿಸಿದ ಗೋವಿಂದಗೌಡರು ಜೀವನ ಶಿಕ್ಷಣ ಪಡೆದದ್ದು ಸ್ವಾತಂತ್ರ ಹೋರಾಟದ ಪಾಠಶಾಲೆಯಲ್ಲಿ, ಕಡಿದಾಳು ಮಂಜಪ್ಪನವರ ಗರಡಿಯಲ್ಲಿದ್ದುಕೊಂಡು ಪುಟ್ಟ ಅಂಗಡಿ ಆರಂಭಿಸಿದ ಗೋವಿಂದಗೌಡರು ಕೊಪ್ಪ ಪುರಸಭೆಯ ಅಧಿಕಾರೇತರ ಅಧ್ಯಕ್ಷನಾಗುವ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟರು.
ಜನಹಿತ ಕಾಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಗೋವಿಂದಗೌಡರು ತಾಲ್ಲೂಕು ಅಭಿವೃದ್ಧಿ ಮಂಡಲಿ ಹಾಗೂ ಕೃಷಿ ವ್ಯವಸಾಯೋತ್ಪನ್ನ ಸಮಿತಿ ಅಧ್ಯಕ್ಷರಾಗಿದ್ದು ನಂತರ ವಿಧಾನಸಭೆ ಪ್ರವೇಶಿಸಿದರು.
ಪ್ರಾಥಮಿಕ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಎಚ್.ಜಿ. ಗೋವಿಂದಗೌಡ ವಿದ್ಯಾ ಇಲಾಖೆಯಲ್ಲಿ ತಂದ ಸುಧಾರಣೆಗಳು ಹತ್ತಾರು. ಶಿಕ್ಷಕರ ನೇಮಕಾತಿ ಹಾಗೂ ವರ್ಗಾವಣೆಯಲ್ಲಿ ಅವರು ರೂಪಿಸಿದ ಪಾರದರ್ಶಕ ವಿಧಾನ ಅನುಕರಣೀಯ.
ದೀರ್ಘಕಾಲದ ರಾಜಕೀಯ ಜೀವನದಲ್ಲಿ ಯಾವುದೇ ವಿವಾದಕ್ಕೊಳಗಾಗದೆ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿ ಬಾಳುತ್ತಿರುವ ಶ್ರೀ ಗೋವಿಂದಗೌಡರು ಆದರ್ಶಪ್ರಾಯರು.