Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಪಾಂಡುರಂಗಪ್ಪ

ವೃತ್ತಿರಂಗಭೂಮಿಯ ಬಯಲಾಟದಲ್ಲಿ ಪಕ್ಕವಾದ್ಯಪಟುವಾಗಿ ಸೇವೆಸಲ್ಲಿಸಿದ ದೇಸಿ ಕಲಾಚೇತನ ಎಚ್.ಪಾಂಡುರಂಗಪ್ಪ, ಕಲಾರಸಿಕರ ಮನಗೆದ್ದ ತಬಲವಾದಕ, ಸ್ವರಸಂಯೋಜಕ, ಗಣಿನಾಡು ಬಳ್ಳಾರಿಯ ಕಲಾಕೊಡುಗೆ ಪಾಂಡುರಂಗಪ್ಪ. ಅಕ್ಷರಕ್ಕಿಂತಲೂ ಕಲಾಮೋಹಕ್ಕೊಳಗಾದವರು. ಬಾಲ್ಯದಲ್ಲಿ ಅ೦ಟಿದ ಸಂಗೀತದ ಗೀಳಿನ ಬೆನ್ನುಹತ್ತಿ ತಬಲವಾದಕರಾಗಿ ರೂಪುಗೊಂಡವರು. ಶ್ರೀಕನಕದುರ್ಗಮ್ಮ ಬಯಲಾಟ ಕಲಾ ಟ್ರಸ್ಟ್ ಸ್ಥಾಪಿಸಿ ಕಲಾಕೈಂಕರ್ಯದಲ್ಲಿ ನಿರತರಾದವರು. ಪುರಾಣ ಪ್ರವಚನ, ಹರಿಕಥೆ, ಬಯಲಾಟ, ಅಭಿಮನ್ಯುಬಳಗ, ಪ್ರಮೀಳ ದರ್ಬಾರ್, ಪಾರ್ಥವಿಜಯ, ಗಿರಿಜಾಕಲ್ಯಾಣ, ರತಿಕಲ್ಯಾಣ, ಪಾಂಡುವಿಜಯ ಮುಂತಾದ ನಾಟಕಗಳಿಗೆ ತಬಲ ಸಾಥ್ ಜತೆಗೆ ಸ್ವರಸಂಯೋಜನೆ, ಜಾನಪದ ಜಾತ್ರೆ, ಸಂಸ್ಕೃತಿ ದಿಬ್ಬಣ, ಜಾತ್ರಾಮಹೋತ್ಸವ, ಅನೇಕ ಸಾಂಸ್ಕೃತಿಕ ಉತ್ಸವ, ಶರಣಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸೇರಿದಂತೆ ನೂರಾರು ವೇದಿಕೆಗಳಲ್ಲಿ ಬೆಳಗಿದ ಪ್ರತಿಭೆ, ತೆಲುಗು ನಾಟಕಗಳಲ್ಲೂ ಸೇವೆ. ಕರ್ನಾಟಕ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನವಾಗಿರುವ ಪಾಂಡುರಂಗಪ್ಪ ಅವರಿಗೆ ಕಲೆಯೇ ಬದುಕು, ಕಲೆಯಿಂದಲೇ ಬದುಕು. ೫೫ ವರ್ಷಗಳಿಂದಲೂ ಕಲಾಸೇವೆಯಲ್ಲಿ ತನ್ಮಯರಾಗಿರುವ ಪಾಂಡುರಂಗಪ್ಪ ಹಳ್ಳಿಗಾಡಿನ ಗಟ್ಟಿ ಪ್ರತಿಭೆ, ಮಾದರಿ ಕಲಾಸೇವಕ.