Categories
ಕ್ರೀಡೆ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಬೋನಿಫೇಸ್ ಪ್ರಭು

ಮೂರುವರೆ ವರ್ಷದ ಮಗುವಾಗಿದ್ದಾಗ ವೈದ್ಯರು ಮಾಡಿದ ತಪ್ಪೆಂದರಿಂದ ಶಾಶ್ವತವಾಗಿ ಅಂಗವಿಕಲರಾಗಿ ಗಾಲಿ ಕುರ್ಚಿಯ ಮೇಲೆ ಕಾಲ ಕಳೆಯಬೇಕಾಗಿ ಬಂದರೂ ಎದೆಗುಂದದೆ ಅಂತರರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುವಾಗಿ ಹೆಮ್ಮೆಯ ಸಾಧನೆ ಮಾಡಿದವರು ಶ್ರೀ ಎಚ್. ಬೋನಿಫೇಸ್ ಪ್ರಭು ಅವರು.
ಗಾಲಿಕುರ್ಚಿಯ ಮೇಲೆ ಕುಳಿತು ಪಾಠ ಕೇಳುವ ಅವಕಾಶವನ್ನು ಯಾವ ಶಾಲೆಯೂ ಒದಗಿಸದಿರುವುದರಿಂದ ಪ್ರಭು ಶಾಲೆಗೆ ಹೋಗಿ ಶಿಕ್ಷಣ ಪಡೆಯುವ ಅವಕಾಶದಿಂದಲೂ ವಂಚಿತರಾದರು. ಓದಿನ ಬಗ್ಗೆ ಅವರಿಗಿದ್ದ ಅಪಾರ ಆಸಕ್ತಿಯಿಂದ ಮನೆಯಲ್ಲಿಯೇ, ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದರು. ನಂತರ ಸಾಫ್ಟ್‌ವೇರ್‌ನಲ್ಲಿ ಡೇಟಾ ಬೇಸ್ ಮ್ಯಾನೇಜ್‌ಮೆಂಟ್‌ ಡಿಪ್ಲೊಮಾ ಮಾಡಿಕೊಂಡರು. ಅದರ ಫಲವಾಗಿ ಭಾರತ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕಳೆದ ಏಳು ವರ್ಷಗಳಿಂದ ಉದ್ಯೋಗಿಯಾಗಿದ್ದರೂ ಪ್ರಭು ತಮ್ಮ ಕ್ರೀಡಾಸಕ್ತಿಯನ್ನು ಮುಖ್ಯವಾಗಿ ಟೆನಿಸ್ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ.
ಗಾಲಿಕುರ್ಚಿ ಟೆನಿಸ್ ಪಟುವಾಗಿ ವರ್ಷದಿಂದ ವರ್ಷಕ್ಕೆ ಸಾಧನೆ ಮಾಡುತ್ತ ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ, ನ್ಯೂಜಿಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ನಡೆದ ಮುಕ್ತ ಟೆನಿಸ್ ಪಂದ್ಯಾವಳಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೆಲವು ಪಂದ್ಯಗಳಲ್ಲಿ ಚಾಂಪಿಯನ್‌ಷಿಪ್ಪನ್ನು, ಗ್ರಾಂಡ್‌ ಸ್ಲಾಮನ್ನೂ ಸಾಧಿಸಿದರು. ಭಾರತದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುಗಳ ಪೈಕಿ ವಿಶ್ವ ಬ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೊದಲಿಗರು. ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡೆಗಳ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು.
ಭಾರತದ ಅಂಗವಿಕಲ ಕ್ರೀಡಾಪಟುಗಳಿಗಾಗಿ ಒಂದು ಗಾಲಿಕುರ್ಚಿ ಟೆನಿಸ್ ಅಕಾಡೆಮಿ ಸ್ಥಾಪಿಸಬೇಕೆಂಬ ಕನಸನ್ನು ಹೊಂದಿರುವ ಭಾರತೀಯರೆಲ್ಲರೂ ಅಭಿಮಾನಪಡುವಂತಹ ಧೀಮಂತ ಕ್ರೀಡಾಪಟು ಶ್ರೀ ಬೋನಿಫೇಸ್ ಪ್ರಭು ಅವರು.