Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಆರ್. ನಾಯಕ್

ಜಾನಪದ ತಜ್ಞ ಶಿಕ್ಷಣ ತಜ್ಞ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಪರಿಶ್ರಮ, ಜಾನಪದ ಸಮ್ಮೇಳನಾಧ್ಯಕ್ಷ, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಜಾನಪದ ಪ್ರಕಾಶಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಡಾ. ಎನ್. ಆರ್. ನಾಯಕ ಅವರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಭಾವಿಕೇರಿಯಲ್ಲಿ ೧೯೩೫ರಲ್ಲಿ ಜನಿಸಿದ ನಾಯಕ ಅವರು ಶಿಕ್ಷಣದಲ್ಲಿ ಆಸಕ್ತರಾಗಿ ಉತ್ತಮ ಫಲಿತಾಂಶ ಪಡೆದು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹೊನ್ನಾವರ ಕರ್ನಾಟಕ ಸಂಘದ ಅಧ್ಯಕ್ಷ, ಅರವಿಂದ ಯಕ್ಷಗಾನ ಸಂಘದ ಅಧ್ಯಕ್ಷ ಹೀಗೆ ಹಲವಾರು ಸ್ಥಾನಗಳನ್ನು ಅಲಂಕರಿಸಿದವರು. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಮಿತಿಗಳಲ್ಲಿ ಸದಸ್ಯರಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ರೂಪಕ, ಭಾಷಣಗಳ ಪ್ರಸಾರ, ನಾಟಕೋತ್ಸವ, ನಾಟಕ ತರಬೇತಿ ಶಿಬಿರ, ಜಾನಪದ ಕಮ್ಮಟ, ಸೌಹಾರ್ದತಾ ಸಮ್ಮೇಳನಗಳನ್ನು ಏರ್ಪಡಿಸಿದ್ದಾರೆ.
ಜಾನಪದ ಪ್ರಕಾರದಲ್ಲಿ ೩೫ ಗ್ರಂಥಗಳನ್ನು ರಚಿಸಿ ಪ್ರಕಟಿಸಿರುವುದೇ ಅಲ್ಲದೆ ಹಿಂದುಳಿದ ಬುಡಕಟ್ಟು ಜನಾಂಗಗಳ ಸಾಹಿತ್ಯಕಲೆ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾತ್ಮಕ ಗ್ರಂಥಗಳನ್ನು ಸಹ ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಸಂಸ್ಕೃತಿ ಕುರಿತು ನೂರಾರು ಲೇಖನಗಳು ಪ್ರಕಟವಾಗಿವೆ. ಸುಗ್ಗಿ ಹಬ್ಬ, ಗ್ರಾಮೋಕ್ಕಲ, ಮಹಾಭಾರತ ಮತ್ತು ಕೂಸಾಯ್ತು ನಮ್ಮಾ ಕೊಮರಾಗೆ ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಲಲಿತಾಂಬಾ ವೃಷಭೇಂದ್ರಸ್ವಾಮಿ ದತ್ತಿನಿಧಿ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಸನ್ಮಾನ ಇತ್ಯಾದಿ ಪುರಸ್ಕಾರಗಳು ಲಭ್ಯವಾಗಿವೆ.
ಡಾ. ಎನ್. ಆರ್. ನಾಯಕರನ್ನು ಕುರಿತು ಎರಡು ಅಭಿನಂದನಾ ಗ್ರಂಥಗಳು (ದೀಪಾರಾಧನೆ, ಕಲಶ) ಅವರ ಬದುಕು ಬರಹ ಕುರಿತ ಎಂ.ಫಿಲ್. ಪ್ರಬಂಧ ಪ್ರಕಟವಾಗಿವೆ. ನಾಯಕ ಅವರು ಸಂಪಾದಿಸಿ ಪ್ರಕಟಿಸಿರುವ ಹಲವಾರು ಜಾನಪದ ಕತೆ, ಕಾವ್ಯ, ಸಂಸ್ಕೃತಿ ಚಿತ್ರಗಳು ಮಹತ್ತರ ಕೊಡುಗೆಯಾಗಿದೆ. ಜಾನಪದ ಶಿಬಿರ, ವಿಚಾರ ಸಂಕಿರಣ, ಕಲಾ ಮೇಳಗಳ ಸಂಘಟಕರಾಗಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರವರ್ತಕರಾಗಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸುತ್ತಿರುವ, ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಪ್ರತಿಭಾವಂತ ಡಾ. ಎನ್. ಆರ್. ನಾಯಕ ಅವರು.