Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಲ್ ಬಿ ಕೆ ಆಲ್ದಾಳ್

ನಾಟಕ ರಚನೆ ಹಾಗೂ ರಂಗನಿರ್ದೆಶನವನ್ನೇ ಬಾಳಿನ ಧೈಯವಾಗಿ ಸ್ವೀಕರಿಸಿ, ದೀರ್ಘಕಾಲದಿಂದ ಕಲಾರಾಧಕರಾಗಿ ಸೇವೆ ಸಲ್ಲಿಸುತ್ತಿರುವವರು ರಂಗಕರ್ಮಿ ಶ್ರೀ ಲಾಲ್ ಮಹ್ಮದ್ ಬಂದೇ ನವಾಜ್ ಕೆ ಆಲ್ದಾಳ್ ಅವರು.

ಏಳನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಲಾಲ್ ಮಹಮದ್‌ ಬಂದೇನವಾಜ್ ಆಲ್ದಾಳ್ ಅವರು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ೧೯೩೮ರಲ್ಲಿ ಜನಿಸಿದರು.

ಊರ ಸುತ್ತಮುತ್ತ ಪ್ರದರ್ಶಿತವಾಗುತ್ತಿದ್ದ ನಾಟಕಗಳಿಂದ ಪ್ರಭಾವಿತರಾಗಿ ೧೯೬೨ರಿಂದ ಬರವಣಿಗೆಯನ್ನು ಪ್ರಾರಂಭಿಸಿದ ಶ್ರೀಯುತರು ಸುಮಾರು ೫೦ ಕೃತಿಗಳನ್ನು ರಚಿಸಿದ್ದಾರೆ. ಪತಿಭಕ್ತಿ, ಕಲಿಯುಗದ ಕನ್ಯಾ, ನಮಸ್ಕಾರ, ನನ್ನ ದೇವರು, ವಂಚಕ, ಗರತಿ, ವಿಶ್ವದ ಜ್ಯೋತಿ ಮುಂತಾದ ೧೨ ಕೃತಿಗಳು ಪ್ರಕಟವಾಗಿವೆ. ೨೫ಕ್ಕೂ ಹೆಚ್ಚು ಕೃತಿಗಳು ಅಪ್ರಕಟಿತ. ದೇಶಭಕ್ತಿಗೀತೆಗಳ ಹತ್ತಾರು ಧ್ವನಿಸುರುಳಿಗಳು ಹೊರಬಂದಿವೆ. ರಾಘವೇಂದ್ರ ನಾಟ್ಯ ಸಂಘ, ಬಸವೇಶ್ವರ ನಾಟ್ಯ ಸಂಘ, ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ಸಂಘ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ ಸನ್ಮಾನಿತರಾದ ಶ್ರೀ ಎಲ್ ಬಿ ಕೆ ಆಲ್ದಾಳ್ ಅವರಿಗೆ ಸಂಘ ಸಂಸ್ಥೆಗಳಿಂದ, ಮಠಗಳಿಂದ ಅನೇಕ ಸನ್ಮಾನಗಳು ಸಂದಿವೆ. ಶ್ರೀಯುತರಿಗೆ ನಾಟ್ಯ ಕವಿರತ್ನ, ಸರಸ್ವತಿ ವರಪುತ್ರ, ಶರಣಸಾಹಿತ್ಯ ಸಿಂಧು, ಶರಣ ಸಾಹಿತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ರಂಗಭೂಮಿ ಸಾಹಿತ್ಯಕ್ಕೆ ಸತ್ವಪೂರ್ಣ ಕೊಡುಗೆಯನ್ನು ನೀಡುತ್ತಿರುವ, ರಂಗಕಲಾಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇಂದಿಗೂ ಚಟುವಟಿಕೆಯ ಚಿಲುಮೆಯಾಗಿರುವವರು ಶ್ರೀ ಎಲ್ ಬಿ ಕೆ ಆಲ್ದಾಳ್ ಅವರು.