Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಎಸ್. ಪಾಟೀಲ

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ನೆರವಾಗುವ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿ ಸುಮಾರು ಹತ್ತು ಸಾವಿರ ಮಂದಿಗೆ ಉದ್ಯೋಗ ನೀಡಿರುವ ನಮ್ಮ ನಾಡಿನ ಹೆಮ್ಮೆಯ ಉದ್ಯಮಿ ಶ್ರೀ ಎಸ್.ಎಸ್. ಪಾಟೀಲ ಅವರು. ಇವರ ನೇತೃತ್ವದ ‘ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್’ ಕಂಪನಿ ಗುಲ್ಬರ್ಗದಲ್ಲಿ ‘ದಾಲ್’ (ಬೇಳೆ) ಕಾರ್ಖಾನೆ, ಘಟಪ್ರಭಾ, ಬೆಳಗಾವಿಯಲ್ಲಿ ಆರ್.ಸಿ.ಸಿ. ಹಾಗೂ ಪಿ.ಎಸ್.ಸಿ. ಕಂಬ ಉತ್ಪಾದನಾ ಕಾರ್ಖಾನೆ, ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಕ್ರೀಟ್ ಸ್ಲಿಪರ್‌ಗಳ ಉತ್ಪಾದನಾ ಕಾರ್ಖಾನೆ, ಮಧ್ಯಪ್ರದೇಶದ ಬಿಲಾಸಾಪುರದಲ್ಲಿ, ಗೋವಾದ ಮಡಗಾಂವ್‌ನಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ಪಶ್ಚಿಮ ಬಂಗಾಲದ ಅನಾರದಲ್ಲಿ, ಪಂಜಾಬ್‌ನ ಚಂಡೀಗಡ್‌ನಲ್ಲಿ ಭಾರತೀಯ ರೈಲ್ವೆಗಾಗಿ ಸ್ತ್ರೀಪರ್ಸ್ ಮತ್ತು ಸಿಮೆಂಟ್ ಕಂಬ ಉತ್ಪಾದನಾ ಕಾರ್ಖಾನೆಗಳನ್ನು ನಡೆಸುತ್ತಿದೆ ಬೆಳಗಾವಿ ಹಾಗೂ ಜೀವರ್ಗಿಯಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಫುಡ್ ಪಾರ್ಕ್‌ಗಳಲ್ಲಿ ಸಹಭಾಗಿತ್ವ ಪಡೆದಿದೆ. ಜರ್ಮನಿ ದೇಶದ ವೋಸ್ತೋ ಕಂಪನಿಯ ಸಹಯೋಗದೊಂದಿಗೆ ಹೈದ್ರಾಬಾದನಲ್ಲಿ ರೈಲ್ವೆ ಉಪಕರಣಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪನೆ ಮಾಡಿದ್ದಾರೆ.
ಹೈದ್ರಾಬಾದ್‌ನ ಮೆಡಚಲ್‌ನಲ್ಲಿ, ದಕ್ಷಿಣ ಕೊರಿಯಾದ ಬೊಯಿಲ್ ಮೆಡಿಕಾ ಕಂಪನಿಯ ಸಹಭಾಗಿತ್ವದಲ್ಲಿ ಸಂಗಮ್ ಹೆಲ್ತ್‌ಕೇರ್ ಸಂಸ್ಥೆಯನ್ನು ಸ್ಥಾಪಿಸಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ಮೂರು ಸಾವಿರ ಮಂದಿಗೆ ಉದ್ಯೋಗ ನೀಡಿರುವ ಈ ಸಂಸ್ಥೆ ಹೊರದೇಶಗಳಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದೆ.
ಅನೇಕ ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶ್ರೀ ಪಾಟೀಲರು ಜಗತ್ತಿನ ಪ್ರಮುಖ ದೇಶಗಳ ಪ್ರವಾಸವನ್ನು ಮಾಡಿ ಅಪಾರ ಅನುಭವ ಗಳಿಸಿದ್ದಾರೆ.
ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ, ಮಠಮಾನ್ಯಗಳಿಗೆ ಗಣನೀಯ ಪ್ರಮಾಣದ ವಂತಿಗೆಯನ್ನು ನೀಡಿ ಸಮಾಜಕ್ಕೆ ನೆರವಾಗುತ್ತಿದ್ದಾರೆ ಶ್ರೀ ಎಸ್.ಎಸ್. ಪಾಟೀಲ್‌.