Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಎಸ್ ದಿವಾಕರ

ಪತ್ರಿಕೋದ್ಯಮ, ಕಥಾಸಾಹಿತ್ಯ ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ಪ್ರತಿಭಾವಂತ ಶ್ರೀ ಎಸ್ ದಿವಾಕರ ಅವರು.

ಪತ್ರಿಕೋದ್ಯಮದಲ್ಲಿ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತ ಸದ್ಯ ಅಮೇರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ, ಮಲ್ಲಿಗೆ, ಸುಧಾ, ಮೊದಲಾದ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ, ಸಂಪಾದಕರಾಗಿ ಅಪಾರ ಅನುಭವವನ್ನು ಸಂಪಾದಿಸಿದ್ದಾರೆ.

ಸಣ್ಣಕಥೆ, ಕವನ, ವಿಮರ್ಶೆ, ಪ್ರಬಂಧ, ಭಾಷಾಂತರ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಹದಿನೆಂಟಕ್ಕೂ ಮಿಕ್ಕು ಅತ್ಯುತ್ತಮ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರ ಕಥೆ, ಕಾದಂಬರಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರದು.

ಉದಯವಾಣಿ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವ ಅಚ್ಚು-ಮೆಚ್ಚು ಅಂಕಣಬರಹ ಬಹು ಜನಪ್ರಿಯ. ಇವರ ಸಣ್ಣಕತೆಗಳು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ‘ಇಂಡಿಯನ್ ರಿವ್ಯೂ ಆಫ್ ಬುಕ್ಸ್’ ಪತ್ರಿಕೆಯಲ್ಲಿ ಇಂಗ್ಲಿಷ್ ಗ್ರಂಥಗಳ ವಿಮರ್ಶಕನೆಂಬ ಹೆಗ್ಗಳಿಕೆ ಇವರದು.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಫೆಲೋಷಿಪ್, ದೆಹಲಿಯ ಕಥಾ ಸಂಸ್ಥೆಯ ಅಖಿಲಭಾರತ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ರಾಷ್ಟ್ರೀಯ ಹಿಂದಿ ಪುರಸ್ಕಾರ ಮೊದಲಾದ ಗಣ್ಯ ಗೌರವಗಳು ಶ್ರೀಯುತರಿಗೆ ಸಂದಿವೆ.

ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿರುವ ಹೊರನಾಡ ಕನ್ನಡಿಗ ಶ್ರೀ ಎಸ್. ದಿವಾಕರ್ ಅವರು. ಹೊರನಾಡ ಕನ್ನಡಿಗರು