Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಎ. ಸುಂದರಮೂರ್ತಿ

ಸಂಗೀತವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಮಹಾನ್ ಕಲಾವಿದ ಶ್ರೀ ಎ. ಸುಂದರಮೂರ್ತಿ ಅವರು.
೧೯೩೯ರಲ್ಲಿ ಜನಿಸಿದ ಶ್ರೀಯುತರದು ಸಂಗೀತದ ಮನೆತನ, ಪ್ರಾರಂಭದಲ್ಲಿ ಇಂಡಿಯನ್ ಟೆಲಿಫೋನ್‌ ಕಾರ್ಖಾನೆಯಲ್ಲಿ, ನಂತರ ಸಂಶೋಧನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ವೃತ್ತಿಗೆ ರಾಜೀನಾಮೆ ನೀಡಿ ಸಂಗೀತವನ್ನೇ ಸಂಪೂರ್ಣವಾಗಿ ಆಯ್ಕೆ ಮಾಡಿಕೊಂಡರು. ಆನುವಂಶಿಕವಾಗಿ ಬಂದ ಸಂಗೀತ ಪ್ರತಿಭೆಗೆ ಚೆಂಬೈ ಕೃಷ್ಣನ್ ಅವರಿಂದ ಪಡೆದ ಸಂಗೀತ ಶಿಕ್ಷಣದಿಂದ ಹೆಚ್ಚಿನ ಮೆರುಗು ಬಂದಿತು. ಪಂಡಿತ ಡಿ.ಬಿ. ಹರೀಂದ್ರ ಅವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಕೊಳಲು, ವೀಣೆ, ಸಿತಾರ್, ಮೃದಂಗಗಳಂಥ ಹತ್ತಾರು ವಾದ್ಯಗಳನ್ನು ಅವರೇ ಸ್ವತಃ ಕಲಿತುಕೊಂಡರು. ಅವರಿಗೆ ಕೊಳಲು ಮೆಚ್ಚಿನ ವಾದ್ಯವಾಯಿತು. ಹಲವು ವಾದ್ಯಗೋಷ್ಠಿಗಳ ನಿರ್ದೇಶಕರಾಗಿಯೂ ಶ್ರೀಯುತರು ಕೆಲಸ ಮಾಡಿದ ಹಾಗೂ ಕೊಳಲು ಮತ್ತು ಸಿತಾರ್ ವಾದ್ಯ ಸಹಕಾರಕ್ಕಾಗಿ ರಮಣಾಂಜಲಿ ತಂಡದೊಂದಿಗೆ ವಿದೇಶ ಪ್ರವಾಸ ಮಾಡಿದ ಹಿರಿಮೆ ಶ್ರೀ ಸುಂದರಮೂರ್ತಿ ಯವರದ್ದಾಗಿದೆ.
ಆಕಾಶವಾಣಿಯಲ್ಲಿ ಸುಗಮ ಸಂಗೀತ ನಿರ್ದೇಶಕರಾಗಿ, ಎಂ.ಎಸ್.ಐ.ಎಲ್. ನಡೆಸಿದ ಧ್ವನಿ ಮುದ್ರಣ ಕಾರ್ಯದ ನಿರ್ವಾಹಕರಾಗಿ, ಕರ್ನಾಟಕ ವಾರ್ತಾ ಇಲಾಖೆಯ ನ್ಯೂಸ್ ರೀಲ್‌ಗಳ ಸಂಗೀತ ನಿರ್ದೆಶಕರಾಗಿ, ಕರ್ನಾಟಕದ ಎಲ್ಲ ಮುಖ್ಯಸಂಗೀತ ಧ್ವನಿಮುದ್ರಣ ಸಂಸ್ಥೆಗಳಿಗೆ ನಿರ್ದೆಶಕರಾಗಿ, ಹಾಗೂ ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಸಂಗೀತದ ಧ್ವನಿ ಮುದ್ರಣ ಕಾರ್ಯದಲ್ಲಿ ನಿರ್ದೆಶಕರಾಗಿ ಸಂಗೀತ ಕ್ಷೇತ್ರಕ್ಕೆ ಇವರು ಅಪಾರ ಸೇವೆ ಸಲ್ಲಿಸಿರುತ್ತಾರೆ.
ದಿ|| ಕಾಳಿಂಗರಾವ್, ದಿ|| ಮೈಸೂರು ಅನಂತಸ್ವಾಮಿ, ಶ್ರೀ ಸಿ. ಅಶ್ವಥ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ವೈ.ಕೆ. ಮುದ್ದು ಕೃಷ್ಣ, ಶ್ರೀಮತಿ ರತ್ನಮಾಲಾ ಪ್ರಕಾಶ್ ಮುಂತಾದ ಹಿರಿಯ ಹಾಗೂ ಕಿರಿಯ ಗಾಯಕರಿಗೆ ವಾದ್ಯ ಸಹಕಾರ ನೀಡಿರುತ್ತಾರೆ. ಶ್ರೀಯುತರ ಸ್ವಂತ ಧ್ವನಿ ಮುದ್ರಣ ನಿರ್ದೆಶನದಲ್ಲಿ ಸರ್ವಶ್ರೀ ಆರ್.ಕೆ. ಶ್ರೀಕಂಠನ್, ಶ್ರೀ ಹೆಚ್.ಕೆ. ನಾರಾಯಣ, ರಾಜಕುಮಾರ ಭಾರತಿ, ವಿದ್ಯಾಭೂಷಣರಂಥ ಹಲವಾರು ಶ್ರೇಷ್ಠ ಗಾಯಕರು ಹಾಡಿರುತ್ತಾರೆ.
ಮುನ್ನೂರಕ್ಕೂ ಹೆಚ್ಚು ಕ್ಯಾಸೆಟ್ಟುಗಳಿಗೆ ಸಂಗೀತ ನಿರ್ದೆಶನ ಮಾಡಿರುವ ಶ್ರೀ ಎ. ಸುಂದರಮೂರ್ತಿ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಆಸಕ್ತಿಯುಳ್ಳವರು.
ಸುಮಾರು ೬೦ ರಾಗಗಳ ನೂತನ ರೀತಿಯ ಲಕ್ಷಣ ಗೀತೆಗಳ ರಚನೆ, ಸ್ವರಜತಿ, ವರ್ಣ, ಕೀರ್ತನೆಗಳ ರಚನೆ ಮಾಡಿ ಸಂಗೀತ ಜ್ಞಾನದ ಪರಿಪೂರ್ಣತೆಗೆ ಸಾಕ್ಷಿಯಾಗಿರುವವರು ಶ್ರೀ ಎ. ಸುಂದರಮೂರ್ತಿ ಅವರು.