Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐರೋಡಿ ಗೋವಿಂದಪ್ಪ

ಬಡಗುತಿಟ್ಟಿನ ಯಕ್ಷಗಾನ ಕಲೆಯ ಭವ್ಯ ಪರಂಪರೆಯನ್ನು ಕಳೆದ ನವಲತ್ತು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಅನೇಕ ಮಂದಿಯಲ್ಲಿ ಶ್ರೀ ಐರೋಡಿ ಗೋವಿಂದಪ್ಪ ಅವರು ಪ್ರಮುಖರು.
ಉಡುಪಿ ತಾಲ್ಲೂಕಿನ ಐರೋಡಿಯಲ್ಲಿ ಜನಿಸಿದ ಶ್ರೀ ಗೋವಿಂದಪ್ಪನವರು ಹಿಂದುಳಿದ ವರ್ಗದವರು. ತಮ್ಮ ೧೫ನೆಯ ವಯಸ್ಸಿಗೆ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಹಂತ ಹಂತವಾಗಿ ಮೇಲಕ್ಕೇರಿದರು.
ತೆಂಕುತಿಟ್ಟು ಹಾಗೂ ಬಡಗುತಿಟ್ಟು ಈ ಎರಡೂ ಕ್ಷೇತ್ರಗಳಲ್ಲಿ ದುಡಿದ ಅನುಭವ ಇವರದು. ಸ್ತ್ರೀ ವೇಷವನ್ನೂ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಭಾಗವತಿಕೆಯನ್ನು ಮಾಡಬಲ್ಲರು. ಚಂಡೆ ಹಾಗೂ ಮದ್ದಲೆಗಳನ್ನು ನುಡಿಸಬಲ್ಲರು. ಹೀಗೆ ಯಕ್ಷಗಾನದ ಎಲ್ಲ ಆಯಾಮಗಳನ್ನು ಕರಗತಮಾಡಿಕೊಂಡವರು. ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಪಟು ಹಾರಾಡಿ ರಾಮ ಅವರ ಅಭಿನಯದ ಛಾಯೆ ಗೋವಿಂದಪ್ಪನವರಲ್ಲಿ ಮೇಲೈಸಿರುವುದನ್ನು ಕಾಣಬಹುದಾಗಿದೆ.
ಇವರು ಅಭಿನಯಿಸಿದ ಭೀಷ್ಮ, ಕರ್ಣ, ಅರ್ಜುನ, ಮಾರ್ತಾಂಡತೇಜ, ಜಾಂಬವ, ಹಿರಣ್ಯಕಶ್ಯಪು, ಸುಂದರ ರಾವಣ, ವೀರಮಣಿ, ಭೀಮ, ವಿಭೀಷಣ, ಯಯಾತಿ, ಋತುಪರ್ಣ ಮೊದಲಾದ ವೀಲರೋಚಿತ ಪುರುಷ ಪಾತ್ರಗಳು ಕಲಾ ಪ್ರೇಮಿಗಳ ಮನ ಸೂರೆಗೊಂಡಿವೆ.
ಗೋಳಿಗರಡಿ, ಸಾಲಿಗ್ರಾಮ, ಪೆರ್ಡೂರು, ಕಣಿಪುರ, ಮೂಲ್ಕಿ, ಅಮೃತೇಶ್ವರಿ ಮುಂತಾದ ಅನೇಕ ಮೇಳಗಳಲ್ಲಿ ದುಡಿದಿದ್ದಾರೆ.
ಪೌರಾಣಿಕ ಪ್ರಸಂಗಗಳ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇವರ ಕಲಾಸಾಧನೆ ಅದ್ಭುತವಾದುದು. ಶ್ರೀಯುತರ ಕಲಾತಪಸ್ಸಿಗೆ ಮನ್ನಣೆ ನೀಡಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಬ್ರಹ್ಮಾವರದ ಅಭಿಮಾನಿಗಳು ಇವರಿಗೆ ಸನ್ಮಾನ ಮಾಡಿ ಹಮ್ಮಿಣಿ ಅರ್ಪಿಸಿದ್ದಾರೆ.
ತಾವು ವಹಿಸುವ ಪಾತ್ರಗಳಿಗೆ ಜೀವ ತುಂಬಿ ಕಲಾ ರಸಿಕರ ಮನ ಸೂರೆಗೊಳ್ಳುವ ಯಕ್ಷಗಾನ ಕಲೆಯ ಪರಿಪೂರ್ಣ ಕಲಾವಿದರು ಶ್ರೀ ಐರೋಡಿ ಗೋವಿಂದಪ್ಪ ಅವರು.