ರಂಗಭೂಮಿಯೊಂದಿಗೆ ಕಳೆದ ಐವತ್ತು ವರ್ಷಗಳಿಂದ ನಿಕಟ ಸಂಪರ್ಕವಿರಿಸಿಕೊಂಡು ಕೃಷಿ, ಜಾನಪದ, ಪತ್ರಿಕೆ, ಶಿಕ್ಷಣ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿರುವ ಸ್ನೇಹಜೀವಿ – ಕಾಸೀಮಸಾಬ ಹುಸೇನಸಾಬ ಬಿಜಾಪುರ.
ಬಸವನ ಬಾಗೇವಾಡಿ ತಾಲ್ಲೂಕಿನ ಗೊಳಸಂಗಿಯವರಾದ ಕಾಸೀಮಸಾಬ ಅವರು ಶಿಕ್ಷಣ ಪಡೆದದ್ದು ಎಂಟನೆಯ ತರಗತಿಯವರೆಗಾದರೂ ಕನ್ನಡ, ಹಿಂದಿ, ಉರ್ದು ಭಾಷೆಗಳಲ್ಲಿ ಪಡೆದಿರುವ ಪರಿಣತಿ ಮತ್ತು ನಾಟಕ ರಚನೆಯಲ್ಲಿ ಅವರಿಗಿರುವ ಆಸಕ್ತಿ ಅಚ್ಚರಿ ಹುಟ್ಟಿಸುತ್ತದೆ.
“ಮನೆಗೆ ಬೆಳಕು ಮಡದಿ’, ‘ಹೆಂಡತಿಯ ಕೈಗೊಂಬೆ’, ‘ಗಡಿತಂಟೆ’, ‘ಸಾಮ್ರಾಟ ಅಶೋಕ’, ‘ಯುದ್ಧ ಸಾಕು ಶಾಂತಿ ಬೇಕು’, ‘ಮಕ್ಕಳೆರಡೇ ಇರಲಿ’ ಮುಂತಾದ ನಾಟಕಗಳು ಜನಮನವನ್ನು ಸೂರೆಗೊಂಡು ಹಲವಾರು ಪ್ರದರ್ಶನಗಳನ್ನು ಕಂಡಿವೆ, ಬಹುಮಾನಗಳನ್ನು ಪಡೆದುಕೊಂಡಿವೆ.
ಜ್ಯೋತಿಯೇ ಆಗು ಜಗಕೆಲ್ಲ, ಗಾದೆಗಳ ಗಾರುಡಿ, ಚಿಮ್ಮಲಗಿಯ ಚಿನ್ಮಯಿ ಹಾಗೂ ಹೂವಿನ ಹಂದರ ಇವರ ಸಂಪಾದಿತ ಕೃತಿಗಳು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಪ್ರವರ್ಧಕ ಪ್ರಶಸ್ತಿ ಪಡೆದುಕೊಂಡಿರುವ ಕಾಸೀಮಸಾಬ ಅವರನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ರಾಮ ಭೂಷಣ, ಆದರ್ಶ ರೈತ, ಉತ್ತಮ ನಾಟಕಕಾರ, ಜಾನಪದ ತಜ್ಞ ಮುಂತಾದ ಪ್ರಶಸ್ತಿಗಳೂ
ಅರಸಿಕೊಂಡು ಬಂದಿವೆ.
ಸಂಪಾದಕರಾಗಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸದಸ್ಯರಾಗಿ, ನಿರ್ದೆಶಕರಾಗಿ, ಗೌರವಾಧ್ಯಕ್ಷರಾಗಿ ವಿವಿಧ ರಂಗಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಕಾಸೀಮಸಾಬ ಅವರು ಕನ್ನಡದ ಪ್ರತಿಭಾವಂತ ನಾಟಕಕಾರರಲ್ಲಿ ಒಬ್ಬರಾಗಿ ಕ್ರಿಯಾಶೀಲರಾಗಿರುವ ಹೆಮ್ಮೆಯ ಬಹುಮುಖ ಪ್ರತಿಭಾವಂತ ಶ್ರೀ ಕಾಸೀಮಸಾಬ ಹುಸೇನಸಾಬ ಬಿಜಾಪುರ ಅವರು.
Categories
ಶ್ರೀ ಕಾಸಿಮಸಾಬ ಹುಸೇನಸಾಬ
