Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಕುಂ. ವೀರಭದ್ರಪ್ಪ

ಉತ್ತರ ಕರ್ನಾಟಕದ ದಲಿತ ಬದುಕಿನ ದಟ್ಟ ಅನುಭವಗಳಿಗೆ ಪ್ರಾದೇಶಿಕ ಭಾಷೆಯ ಸೊಗಡನ್ನು ನೀಡಿದ ತಾಜಾ ಪ್ರತಿಭೆ ಕಥೆ, ಕಾದಂಬರಿಕಾರ ಕುಂ. ವೀರಭದ್ರಪ್ಪ,
‘ಕುಂ.ವೀ’. ಎಂಬ ಸಂಕ್ಷಿಪ್ತ ನಾಮದಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕುಂಬಾರ ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ೧೯೫೩ರಲ್ಲಿ ಜನಿಸಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಶಾಲಾ ಉಪಾಧ್ಯಾಯರಾಗಿ ಸೇವಾವಧಿಯ ಬಹುಪಾಲನ್ನು ಆಂಧ್ರಪ್ರದೇಶದಲ್ಲಿ ಕಳೆದವರು.
ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಅನುವಾದ, ಜೀವನಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಅರ್ಥಪೂರ್ಣ ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಮುದ್ದಣ, ರತ್ನಾಕರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲ ಅದ್ಭುತ ಕಥನ ಶಿಲ್ಪಿ ಹಾಗೂ ವಿಶಿಷ್ಟ ನಿರೂಪಣಾ ಶೈಲಿಯಿಂದ ವೈಯಕ್ತಿಕ ಛಾಪನ್ನುಂಟುಮಾಡಿರುವ ಅನನ್ಯ ಸೃಜನಶೀಲ ಲೇಖಕರು ಶ್ರೀ ಕುಂ. ವೀರಭದ್ರಪ್ಪ ಅವರು.