Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕುಮಾರ್ ಮಳವಳ್ಳಿ

ಅಂತರರಾಷ್ಟ್ರೀಯ ಖ್ಯಾತಿಯ ಮಾನವತಾವಾದಿ, ಆದರ್ಶ ಉದ್ಯಮಿ, ಕಂಪ್ಯೂಟರ್ ಸ್ಮರಣಜಾಲದಲ್ಲಿ ಮಹಾನ್ ದಾರ್ಶನಿಕ, ಫೈಬರ್ ಛಾನಲ್ ತಂತ್ರಜ್ಞಾನದ ಬೆನ್ನೆಲುಬು ಹಾಗೂ ಅಮೆರಿಕಾದ ಸಿಲಿಕಾನ್ ವ್ಯಾಲಿಯ ಅನೇಕ ಸಂಸ್ಥೆಗಳ ಪಿತಾಮಹ ಎಂಬ ವರ್ಣನೆಗೆ ಪಾತ್ರರಾದ ಹೊರನಾಡ ಕನ್ನಡಿಗ ಶ್ರೀ ಕುಮಾರ್ ಮಳವಳ್ಳಿ ಅವರು.
ಮಳವಳ್ಳಿಯಲ್ಲಿ ೧೯೪೬ರಲ್ಲಿ ಸುಸಂಸ್ಕೃತ ಮನೆತನದಲ್ಲಿ ಜನಿಸಿದ ಕುಮಾರ್‌ ಮೈಸೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಕಲಿತು ಜರ್ಮನಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ಕೆನಡಾಗೆ ಸಾಗಿ ಯಶಸ್ಸಿನ ಅಲೆಯೇರಿ ಅಮೆರಿಕ ಪ್ರವೇಶಿಸಿದರು. ಸ್ವತಃ ಬಿಲ್ ಕ್ಲಿಂಟನ್ ಆತ್ಮೀಯವಾದ ಪತ್ರ ಬರೆದು ಅಮೆರಿಕದಲ್ಲಿ ನೆಲೆಸಿದರೂ ತಾಯ್ಯಾಡಿನಲ್ಲಿ ಮೊಟ್ಟ ಮೊದಲ ಎಐಎಫ್ ಡಿಜಿಟಲ್ ಈಕ್ವಲೈಸರ್್ರ ಕೇಂದ್ರ ಸ್ಥಾಪಿಸಿದ್ದಕ್ಕೆ ಹೊಗಳಿದ್ದಾರೆ. ವಿಶ್ವಮಾರುಕಟ್ಟೆ ತಂತ್ರ ಯೋಜಕರಾಗಿ ಆಧುನಿಕ ತಂತ್ರಜ್ಞಾನದ ರೂವಾರಿಯಾಗಿ ಹತ್ತು ವರ್ಷಗಳಿಂದ ಸಿಲಿಕಾನ್ ವ್ಯಾಲಿಯಲ್ಲಿ ಸ್ಮರಣಜಾಲ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ಅಮೆರಿಕಾದ ತಂತ್ರಜ್ಞಾನ ಹಾಗೂ ಪ್ರಮಾಣ ಸಮಿತಿಯ ಅಧ್ಯಕ್ಷತೆ ವಹಿಸಿ ಐಬಿಎಂ, ಎಚ್‌ಪಿ ಮತ್ತು ಸನ್ ಮೈಕ್ರೋಸಿಸ್ಟಮ್ಸ್ ಎನ್ನುವ ಮೂರು ಬೃಹತ್ ಪ್ರಧಾನ ಸಂಸ್ಥೆಗಳ ಒಕ್ಕೂಟವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಇವರ ಉನ್ನತ ತಂತ್ರಜ್ಞಾನ ಸ್ಮರಣಜಾಲದ ಪರಿಣಾಮವಾಗಿ ಸೆಪ್ಟೆಂಬರ್ ೧೧, ೨೦೦೧ರಂದು ನಡೆದ ವಿಶ್ವ ವಾಣಿಜ್ಯ ಕೇಂದ್ರದ ನಿರ್ನಾಮದ ನಂತರವೂ ಅಲ್ಲಿಯ ಸಂಸ್ಥೆಗಳ ದಾಖಲೆಗಳು ನಾಶವಾಗದೇ ಉಳಿದು ಅವು ಅನಾಯಾಸವಾಗಿ ಕಾರ್ಯ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಯಿತು.
ಕುಮಾರ್ ಮಳವಳ್ಳಿಯವರ ಸಾಧನೆಯನ್ನು ಗುರುತಿಸಿ ಅಮೆರಿಕಾದ ಸಿಲಿಕಾನ್ ವ್ಯಾಲಿ ಕ್ಯಾಪಿಟಲ್ ಕ್ಲಬ್ “ಹಾಲ್ ಆಫ್ ಫೇಮ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಭಾರತದ ಕುಗ್ರಾಮಗಳಲ್ಲೂ, ಶಾಲೆಗಳ ಡಿಜಿಟಲ್ ಈಕ್ವಲೈಸರ್ ಕೇಂದ್ರಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮಾಂತರ ಜನರ ನಡುವಿನ ಅಂತರ ಕಡಿಮೆ ಮಾಡುವುದಲ್ಲದೆ ಜೊತೆಗೆ ಅನೇಕ ಸಮಾಜ ಸೇವಾ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಭಾರತವು ಭವಿಷ್ಯದ ಸ್ಮರಣಜಾಲ ವಿನ್ಯಾಸದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಂಬಿರುವ ಕುಮಾರ್ ಮಳವಳ್ಳಿ ಅವರು ಅಮೆರಿಕಾದ ಸಂಸ್ಥೆಗಳಿಗೆ ಭಾರತದ ಬಗ್ಗೆ ತಿಳುವಳಿಕೆ ಮೂಡಿಸಿ ಅಲ್ಲಿಯ ಸಂಸ್ಥೆಗಳ ಜೊತೆಗೆ ಸಹಯೋಗ ಹೊಂದಲು ಕಾರಣಕರ್ತರಾಗಿದ್ದಾರೆ.
ಕರ್ನಾಟಕ ಹೆಮ್ಮೆಯ ಪುತ್ರ ಹೊರನಾಡಿನಲ್ಲಿ ಸಾಧಕನಾಗಿ ಭವಿಷ್ಯದ ತಂತ್ರಜ್ಞಾನದ ರೂವಾರಿಯಾಗಿ ಮೆರೆದವರು ಕುಮಾರ್ ಮಳವಳ್ಳಿ ಅವರು.