ಬಿಸಿಲಿರುವುದೂ, ಮೋಡವಿರುವುದೂ ಸೃಷ್ಟಿಯ ವಿಕಾಸಕ್ಕೆ ಎಷ್ಟು ಆವಶ್ಯಕವೋ, ಕವಿ ಇರುವುದೂ ಅಷ್ಟೇ ಆವಶ್ಯಕ.

* * *

ಕವಿ ಅಸಾಧಾರಣ ಅಸಾಮಾನ್ಯ ಸ್ಥಿತಿಗಳನ್ನು ಪಡೆಯಲು ಅರ್ಹನಾದ ವ್ಯಕ್ತಿ. ಭಾವಗಳೇ ಅವನ ಆಹಾರ, ಆಲೋಚನೆಗಳಿಗಿಂತ. ಎಷ್ಟೋ ಕೋಟ್ಯಂತರ ಭಾವಗಳು ಚಿದ್ರೂಪಗಳು ಮನುಷ್ಯ ಚೇತನದಲ್ಲಿ ಸಂಚರಿಸುತ್ತವೆ. ಅವುಗಳನ್ನು ಗ್ರಹಿಸಿ ಸಾಕಾರಗೊಳಿಸುವವರು ಕವಿಗಳು.

* * *

ಅಪೂರ್ವ ವ್ಯಕ್ತಿಯೇ ಸೃಷ್ಟಿಯ ಪ್ರಗತಿಯ ಒಂದು ಮಿಂಚು. ಇಂತಹ ಮಿಂಚುಗಳ ಪ್ರಭಾವದಿಂದ ಮೊದ ಮೊದಲು ಅಸಾಧಾರಣವಾಗಿದ್ದ ಭಾವಗಳು ಬರಬರುತ್ತಾ ಸಾಧಾರಣವಾಗುತ್ತವೆ.

* * *

ಕವಿಯ ಸಂಸ್ಕಾರ, ಮನಸ್ಸು, ಜೀವ, ಆತ್ಮ ಇವುಗಳ ಮೂಲವಾದ ಪ್ರಯೋಗ ಶಾಲೆಗೇ ನಾವು ಹೋಗಬೇಕಾಗುತ್ತದೆ. ಎಲ್ಲ ಜ್ಞಾನ ವಿಜ್ಞಾನಗಳಿಗೂ ಮಾನವ ಮನಸ್ಸು ‘ಚೇತನೆ’. ಈ ಚೇತನೆ ಸರ್ವ ಸಂಸ್ಕಾರಗಳ ಕೋಶ. ಆಧಿಷ್ಠಾನ, ಬದುಕಿನಲ್ಲಿ ನಾನಾ ರೀತಿಯಲ್ಲಿ ಅಭಿವ್ಯಕ್ತವಾಗುವ ಮನಸ್ಸು ಕಲೆಯಲ್ಲಿ ಮಾತ್ರ ಸಂಪೂರ್ಣವಾಗಿ ಪ್ರಸ್ಫುಟಗೊಳ್ಳುತ್ತದೆ.

* * *

ಅದು (ಕಾವ್ಯ) ಇತಿಹಾಸವೂ ಅಲ್ಲ, ಜೀವನ ಚರಿತ್ರೆಯೂ ಅಲ್ಲ. ಆದರೆ ಅದು ಅವುಗಳ ಪ್ರತಿನಿಧಿ, ಸಾರ್ವಕಾಲಿಕ ಪ್ರತಿನಿಧಿ.

* * *

ನಮ್ಮ ಚೇತನದ ರಸನೆಗೆ ಒಂದು ಸೌಂದರ್ಯದ ಆಸ್ವಾದನೆಯನ್ನುಂಟು -ಮಾಡುವುದಲ್ಲದೆ, ಜಗತ್ತಿನ ಕ್ಲೇಶ ಕಷ್ಟಗಳನ್ನು ನಿವಾರಿಸುವ ಸದ್ಯಃಪರ ನಿರ್ವೃತಿಯನ್ನೂ ಕೊಡುತ್ತದೆ. ಅತಿಶಯತೆಯನ್ನು, ಲೋಕಾತಿಕ್ರಾಂತವಾದುದನ್ನು ತೋರಿಸುತ್ತದೆ.  ಸದ್ಯದ ಲೋಕ ಸ್ಥಿತಿಯಲ್ಲಿ ಇನ್ನೂ ಸಿದ್ಧವಾಗದಿದ್ದರೂ, ಲೋಕಾತೀತದಲ್ಲಿ ಸ್ಥಿತವಾಗಿರುವ ಸತ್ಯ ಧರ್ಮದ ಕಡೆಗೆ ನಮ್ಮ ಮನಸ್ಸನ್ನು ಸೆಳೆಯುತ್ತದೆ.

* * *

ಕವಿ ಸ್ವರಸತುಷ್ಟ. ಅವನು ಯಾವ ರಸಗಳನ್ನು ಅನುಭವಿಸಿ ಆನಂದಿಸುತ್ತಾನೋ ಅವುಗಳನ್ನು ವಿಶ್ವದಲ್ಲೂ ದರ್ಶಿಸುತ್ತಾನೆ. ಕಲ್ಪನಾ ಪ್ರತ್ಯಕ್ಷೀಕರಣ ಶಕ್ತಿ ಅವನಲ್ಲಿ ಇತರರಿಗಿಂತಲೂ ಅಧಿಕವಾಗಿರುತ್ತದೆ. ಈ ಶಕ್ತಿ ಭ್ರಮೆ ಅಲ್ಲ. ಪ್ರಮಾ. ಅವುಗಳ ಗುಣ ಲೋಕಭಾವ ಸದೃಶ, ಆದರೆ ಸಮನಲ್ಲ. ಸಾಮಾನ್ಯರು ಈ ಲೋಕ ವಸ್ತುಗಳನ್ನು ನೋಡಿದಾಗ ಅವರು ತಮ್ಮಲ್ಲಿ ಯಾವ ಯಾವ ಭಾವಗಳನ್ನು ಪ್ರಚೋದನೆ ಮಾಡಿಕೊಳ್ಳಬಲ್ಲರೋ ಅದಕ್ಕಿಂತ ಅಧಿಕತರವಾಗಿ ಕವಿ ತನ್ನ ಪ್ರತಿಭೆಯಿಂದಲೂ, ವ್ಯುತ್ಪತ್ತಿಯಿಂದಲೂ, ಅಭ್ಯಾಸದಿಂದಲೂ ಪಡೆಯಬಲ್ಲ.

* * *

ನಮ್ಮ ಮೊದಲ ಅನುಭವ ‘ನಾನು’ ಎಂಬುದು. ಸ್ಥೂಲ ಜಗತ್ತು ನಮ್ಮ ಮೊದಲ ಅನುಭವವಲ್ಲ. ನಾವು ನಮ್ಮ ಅನುಭವಗಳನ್ನೆಲ್ಲಾ ಜೋಡಿಸಿ ಲೋಕವನ್ನು ಮಾಡಿಕೊಳ್ಳುತ್ತೇವೆ. ಲೋಕ ಎಂಬುದು ಕ್ರಮಬದ್ಧವಾದ ಅನುಭವಗಳ ಸಮಷ್ಟಿ.

ಬಾಹ್ಯ ಸೃಷ್ಟಿಯನ್ನು ಯಾವುದು ಸೃಷ್ಟಿಸಿದೆಯೋ ಅದೇ ಈ ಸೃಷ್ಟಿಯನ್ನು ಅನುಭವಿಸುವ ಮನಸ್ಸನ್ನೂ ಸೃಷ್ಟಿಸಿದೆ. ನಮ್ಮ ಇಂದ್ರಿಯಗಳ ಮೂಲಕ ಆ ಮಹಾ ಮನಸ್ಸು ಬಾಹ್ಯ ಜಗತ್ತಿಗೂ ನಮಗೂ ಸಂಬಂಧವನ್ನು ಕಲ್ಪಿಸಿದೆ.

* * *

ಯಾವ ಶಕ್ತಿ ಪ್ರಕೃತಿಯಲ್ಲಿ ಸೌಂದರ್ಯವಾಗಿದೆಯೋ ಅದೇ ಶಕ್ತಿ ನಮ್ಮಲ್ಲಿ ಸೌಂದರ್ಯಾನುಭವ ಶಕ್ತಿಯಾಗಿದೆ. ಇವೆರಡಕ್ಕೂ ಒಂದು ಬಗೆಯ ಸಂಬಂಧ ಒದಗಿದಾಗ ಸೌಂದರ್ಯ ಎಂಬ ‘ಆವಿರ್ಭೂತಿ’ ಒದಗುತ್ತದೆ. ಸೌಂದರ್ಯವನ್ನು ನೀಡುವ ಶಕ್ತಿ ವಸ್ತುವಿನಲ್ಲಿದ್ದು, ಸೌಂದರ್ಯಾನುಭವ ಸಾಮರ್ಥ್ಯ ನಮ್ಮಲ್ಲಿ ಇನ್ನೂ ನಿದ್ರಿತವಾಗಿದ್ದರೆ, ವಸ್ತುವಿನಲ್ಲಿ ಸೌಂದರ್ಯವಿಲ್ಲ ಎಂದು ಅರ್ಥವಲ್ಲ. ಜಗತ್ ಪ್ರಜ್ಞೆ ನಿತ್ಯ ರಸಾನುಭವ ಮೂಡುತ್ತಿರುತ್ತದೆ. ನಮ್ಮ ಸೌಂದರ್ಯಾನುಭವ ಅದರದೊಂದು ತರಂಗ ಮಾತ್ರ.

* * *

ಅತೀಂದ್ರಿಯ ಸತ್ಯವನ್ನು ಪ್ರಕೃತಿಯೂ ಪ್ರಕಾಶಪಡಿಸುತ್ತದೆ. ಕಲೆಯೂ ಪ್ರಕಾಶಪಡಿಸುತ್ತದೆ. ಅತೀಂದ್ರಿಯ ಸತ್ಯಗಳನ್ನು ಗ್ರಹಿಸಲು ಕಲ್ಪನಾ ಶಕ್ತಿಯೊಂದೇ ನಮಗಿರುವ ಸಾಧನ. ಕಲ್ಪನಾ ಗೋಚರವಾದದ್ದೆಲ್ಲಾ ಸತ್ಯವಾಗದೆ ಇರಬಹುದು, ಭ್ರಾಂತಿ ಇರಬಹುದು. ಆದರೆ ಅತೀಂದ್ರಿಯವಾದುದನ್ನು ಗ್ರಹಿಸಲು ಕಲ್ಪನೆಯಿಂದ ಮಾತ್ರ ಸಾಧ್ಯ.

* * *

ಋಷಿಕವಿಯ ಪ್ರತಿಭಾಬಾಹು ಅತಿ ಉನ್ನತದ ಮತ್ತು ಅತಿ ಆಳಕ್ಕೆ ಹೋಗಿ ಹುಡುಕಿ ತಂದ ಸತ್ಯಗಳು ಮುಂದೆ ಸತ್ಯವಾಗಲಿರುವ ಮೂಲರೂಪಗಳು.

* * *

ಯಾವುದು ಭವಿಷ್ಯತ್ತಿನಲ್ಲಿ ಸಂಭವನೀಯವೋ ಅದು ಈಗಲೂ ಚಿದ್ರೂಪದಲ್ಲಿ ಅವ್ಯಕ್ತವಾಗಿ ಇದ್ದೇ ಇರಬೇಕು. ಬೀಜದಲ್ಲಿ ವೃಕ್ಷ ಬ್ರಹ್ಮಸಂಕಲ್ಪ ರೂಪವಾಗಿರುವಂತೆ.

* * *

ಆತ್ಮಶ್ರೀಪರವಾದ ದೃಷ್ಟಿ ಇಲ್ಲದಿದ್ದರೆ, ಅದಕ್ಕೆ ಅನುರೂಪವಾದ ತಪಸ್ಯೆ ಇಲ್ಲದಿದ್ದರೆ, ಒಂದು ಸಂಯಮ ಶಕ್ತಿ ಇಲ್ಲದಿದ್ದರೆ, ಬುದ್ಧಿಪ್ರತಿಭೆ ವಿಲಕ್ಷಣವಾದ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತದೆ. ಇಂತಹ ವಿಲಕ್ಷಣತೆಯನ್ನು ವಿಪರೀತವನ್ನು ಒಂದು ನೂತನತೆ ಎಂದು, ಸ್ವತಂತ್ರವಾದ ಮಾರ್ಗ ಎಂದು ಭಾವಿಸಿ ಸುಲಭ ಯಶಃ ಪ್ರಾಪ್ತಿಗೆ ಆಶಿಸುವವರೂ ಇದ್ದಾರೆ.

* * *

ಯಾರ ಅಧ್ಯಾತ್ಮನಿಷ್ಠೆ ನಮ್ಮ ಇರವಿನ ಅನುಗಾಲದ ಅಡಿಗಲ್ಲ ಮೇಲೆ ಕಾಲೂರಿ, ಬೇರೂರಿ ನಿಲ್ಲದಿದ್ದ ಪಕ್ಷದಲ್ಲಿ, ಅಂಥವನ ಕಾವ್ಯ ಚಿರವಾಗದು. ಪ್ರತಿಭೆಯ ಉಗಮ ಈ ದರ್ಶನದಲ್ಲಿ ಸ್ಥಾಪಿತವಾಗಿರಬೇಕು, ಈ ಆತ್ಮಶ್ರೀಯಿಂದ ಹೊಮ್ಮಿರಬೇಕು. ಹಾಗಾದಾಗ ನಾಸ್ತಿಕನಿಂದಲೂ ಮಹಾಕಾವ್ಯ ಬಂದೀತು.

* * *

ಕವಿ ಕಾವ್ಯವನ್ನು ಸೃಜಿಸುವಾಗ ಪ್ರಜ್ಞಾಪ್ರಳಯ ಸ್ಥಿತಿಯಲ್ಲಿ ಇರುವುದಿಲ್ಲ. ಬಾಹ್ಯ ಮತ್ತು ಅಂತರ ಎರಡು ಪ್ರಜ್ಞೆಯೂ ಇರುತ್ತದೆ ಅವನಿಗೆ. ಅವನು ಒಂದು ರೀತಿಯಲ್ಲಿ ಇಚ್ಛಾ ನಿರಿಚ್ಛನಾಗಿರುತ್ತಾನೆ.

* * *

ಕವಿ ತನ್ನ ಶಕ್ತಿಯ ಮಿತಿಯಲ್ಲಿಯೇ ಕೆಲಸ ಮಾಡಬೇಕು. ಮಿತವಲಯದಲ್ಲಿಯೆ ತನ್ನ ಶಕ್ತಿಯನ್ನು ಪ್ರಕಾಶಿಸಿದರೆ ಅಷ್ಟರಲ್ಲಿಯೆ ಅದು ಉತ್ತಮವಾಗುತ್ತದೆ. ಪ್ರಥಮವಾಗುತ್ತದೆ. ಶಾಶ್ವತವಾಗುತ್ತದೆ. ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂಬುದು ಕವಿಗೂ ಅನ್ವಯಿಸುತ್ತದೆ.

* * *

ಕವಿಗೆ ಅಸಾಧಾರಣಾನುಭವ ಶಕ್ತಿಬೇಕು, ಆದರೆ ಬರಿಯ ಭಾವಾನುಭವ ಸಾಲದು. ಅದಕ್ಕೆ ಬುದ್ಧಿಯ ಅಂಶವೂ ಸೇರಬೇಕು – ಆ ಭಾವಕ್ಕೆ ಸ್ಥಾಯಿತ್ವ ಲಭಿಸ -ಬೇಕಾದರೆ. ಬಹು ಕಾಲ ತತ್ವ ಜಿಜ್ಞಾಸೆ ಮಾಡಿರಬೇಕು. ಜೀವನ ದೃಷ್ಟಿ ಸಿದ್ಧವಾಗಿರಬೇಕು.

* * *

ನಮ್ಮ  ಭಾವ ಮತ್ತು  ಅನುಭವಗಳು ನಮ್ಮ ಆಲೋಚನೆಗಳಿಂದ ತತ್ವಜಿಜ್ಞಾಸೆಯಿಂದ ಒಂದು ರೀತಿಯಲ್ಲಿ ದೇಹಧಾರಣೆ ಮಾಡುತ್ತವೆ. ಹೇಗೆ ಶುದ್ಧ ಚೇತನ ದೇಹಧಾರಣೆ ಮಾಡುವಾಗ ಜಡಪದಾರ್ಥವನ್ನೂ ಪ್ರಾಣಪದಾರ್ಥವನ್ನಾಗಿ ಪರಿವರ್ತಿಸಿ ಆಶ್ರಯಿಸುತ್ತದೆಯೋ ಹಾಗೆಯೇ ಭಾವ ಶರೀರ ಧಾರಣೆ ಮಾಡುವಾಗ, ಆಲೋಚನೆ ಬುದ್ಧಿ ಇವುಗಳನ್ನು ಅನುಸರಿಸುತ್ತದೆ, ಕಡೆಯಲ್ಲಿ ಭಾಷೆಯ ಮೂಲಕ ಹೊಮ್ಮುತ್ತದೆ.

* * *

ಸೃಷ್ಟಿಸ್ವರೂಪವನ್ನರಿತರೆ ಕಾವ್ಯರೂಪವನ್ನರಿಯಬಹುದು, ಬೀಜದಲ್ಲಿ ಮರ ಸಂಕಲ್ಪ ರೂಪದಲ್ಲಿದೆ, ಈಗ ಮರವಾಗಿ ಹೊರಗೆ ಕಾಣುವ ‘ರೀತಿ’ ರೂಪದಲ್ಲಿ ಅಲ್ಲ. ಈ ‘ರೀತಿರೂಪ’ದಲ್ಲಿಯೆ ಅದು ಬೀಜ ರೂಪದಲ್ಲಿತ್ತು ಎಂದು ನಾವು ಭಾವಿಸುವುದಾದರೆ ಸೃಷ್ಟಿ ಎಂಬುದಕ್ಕೆ ಅರ್ಥವೆ ಇಲ್ಲ. ಹೊರಗೆ ಕಾಣುವ ಮರದ ಈ ‘ರೀತಿ’ ರೂಪುಗೊಂಡಿರುವುದು ನೆಲ-ಜಲ-ನೇಸರಿನ ಕೃಪೆಯಿಂದ. ಈ ‘ರೀತಿ’ ಶಕ್ತಿ ಸಂಕಲ್ಪರೂಪದಲ್ಲಿ ಅವ್ಯಕ್ತವಾಗಿರಬಹುದು, ಅದು ಶಕ್ತಿಸಂಕಲ್ಪವಾದರೂ ಅದರ ವಿಕಾಸ ಹೆಜ್ಜೆ ಹೆಜ್ಜೆಗೂ ಒಂದು ನವೀನ ಸೃಷ್ಟಿ. ಹಾಗೆ ಈ ರೂಪ ಈ ಭೂಮಿಕೆಯಲ್ಲಿ ಈ ರೀತಿ ಮೈದಾಳುವುದು ಅನಿವಾರ‍್ಯ ಹಾಗೂ ಆವಶ್ಯಕ.

* * *

ಕವಿಯ ಒಳಗೆ ಏನು ಸೂಚನಾ ರೂಪವಾಗಿ ಇದೆಯೋ, ಸಂಕಲ್ಪರೂಪವಾಗಿ ಇದೆಯೋ, ದರ್ಶನಸಿದ್ಧವಾಗಿ ಇದೆಯೋ ಅದು, ಹೊರಗೆ ಇಚ್ಛಾಪ್ರಕಾರವಾಗಿ, ಶಾಸ್ತ್ರಬದ್ಧವಾಗಿ ಮೂಡುತ್ತದೆ. ಕವಿ ಕೃತಿ ತೋರಿಕೆಗೆ ಇಚ್ಛಾ ಪೂರ್ವಕವೆಂಬಂತೆ ಆದರೂ, ಅದು ವಾಸ್ತವವಾಗಿ ಗುಪ್ತವಾಗಿ, ಅನೈಚ್ಛಿಕವಾಗಿ ಮೂಡಿದುದು. ಅದು ಯಾಂತ್ರಿಕವಾದ ಪ್ರತಿಕ್ರಿಯೆಯಲ್ಲ; ಅರ್ಥ ಉದ್ದೇಶ, ಕ್ರಿಯೆಗಳಿಂದ ಬದ್ಧವಾದದ್ದು.

* * *

ಕೃತಿ ನಿರ್ಮಿತಿ ಎಂಬುದು ಉದ್ದಕ್ಕೂ ಸೃಷ್ಟಿ. ಕವಿಯ ಅನುಭವ ಸಂಪೂರ್ಣ ಕೃತಿಯಾಗುವವರೆಗೂ ಸೃಷ್ಟಿಯೇ. ಆದುದರಿಂದ ಅದರ ರೀತಿಯೂ ರಸದಷ್ಟೆ ಮುಖ್ಯವಾಗುತ್ತದೆ. ರಸದ ಅಭಿವ್ಯಕ್ತಿಯೂ ರಸದ ಆವಿರ್ಭಾವವೇ. ‘ರೀತಿರಾತ್ಮಾ ಕಾವ್ಯಸ್ಯ’ ಎಂಬುದೂ ನಿಜವಾಗಿ, ರಸವೇ ಪರಮ ಪ್ರಧಾನವಾಗುತ್ತದೆ. ರೀತಿ ಮತ್ತು ರಸ ಎರಡೂ ಒಂದಕ್ಕೊಂದು ವಿರುದ್ಧವಲ್ಲ, ಏಕೆಂದರೆ ಮೃದ್ರೂಪಕ್ಕೆ ಬರುವುದೂ ಒಂದು ಚಿತ್ಕ್ರಿಯೆಯೇ.

* * *

ಭಾವ ಶಕ್ತಿ ತನಗೆ ತಾನೇ ಮೆಯ್ಯನ್ನು ಸೃಜಿಸಿಕೊಳ್ಳುತ್ತದೆ. ಜೀವಸಂಕಲ್ಪವೇ ಸೃಷ್ಟಿಸುತ್ತದೆ. ಅದೇ ಪ್ರತಿಮೆ. ಅದು ಮಾಡಿದ್ದಲ್ಲ, ಮೂಡಿದ್ದು. ಅದು ಅಂತಶ್ಚೇತನದ ಅನಿವಾರ್ಯ ಶಕ್ತಿಯ ಆವಿರ್ಭಾವ.

* * *

ಅನುಭವಕ್ಕೆ ಒದಗಿ ಬರುವ ಪ್ರತಿಮೆ ಮತ್ತು ಆ ಅನುಭವದ ಅಭಿವ್ಯಕ್ತಿ ಇವುಗಳು ಎಷ್ಟು ಮುಖ್ಯವೋ, ಆ ಅನುಭವವೂ ಅಷ್ಟೇ ಮುಖ್ಯ. ಪ್ರತಿಮೆಯ ಪರಿಪೂರ್ಣತೆ ಎಷ್ಟು ಮುಖ್ಯವೋ, ಆ ಪ್ರತಿಮೆ ಒದಗಿಸುವ ಭಾವ ಸತ್ಯವೂ ಅಷ್ಟೇ ಮುಖ್ಯ.

* * *

ತತ್ವವೊಂದು ಕವಿಯ ಮನೋಮಯಕ್ಕೆ ಇಳಿದು, ಪ್ರಾಣಮಯವನ್ನೆಲ್ಲ ವ್ಯಾಪಿಸಿ, ಅನ್ನಮಯದಲ್ಲಿ ಅಥವಾ ಭಾಷೆಯಲ್ಲಿ ವ್ಯಕ್ತಗೊಳ್ಳುವುದು ಪ್ರತಿಮೆ.

* * *

ಪ್ರತಿಮೆ ಕವಿಭಾವದ ಅಭಿವ್ಯಕ್ತಿ. ಪ್ರತಿಮೆ ಸಂಸ್ಕಾರ ಸಮಷ್ಟಿಯ ಅಧೀನವಾಗಿರು -ತ್ತದೆ. ಕಲೆಯಲ್ಲಿ ಭಾವ ಮನಃಸ್ಥಿತಿಗಳು ತಾವೇ ಸ್ವಯಂ ಪ್ರತಿಮೆಗಳಾಗಿ ಪ್ರತಿಮಾ ವಿಧಾನದಲ್ಲಿ ಪ್ರತಿಮಾ ರೂಪದಲ್ಲಿ ಮೂಡುತ್ತವೆ. ಕಾವ್ಯಸೃಷ್ಟಿ ಕವಿಯ ಇಚ್ಛಾಕ್ರಿಯೆಯಂತೆ ತೋರಿದರೂ, ಅವನ ಇಚ್ಛೆ ಇನ್ನಾವುದೋ ಶಕ್ತಿಯ ಅಧೀನದಲ್ಲಿ ಕೆಲಸಮಾಡುತ್ತದೆ. ವ್ಯಕ್ತಿತ್ವ ಎಷ್ಟರ ಮಟ್ಟಿಗೆ ತೆಳ್ಳಗಾಗುತ್ತದೆಯೋ ಅಷ್ಟರ ಮಟ್ಟಿಗೆ ಲೋಕ ಅವನಲ್ಲಿ ಪ್ರವೇಶಿಸುತ್ತದೆ. ವ್ಯಕ್ತಿ ಎಷ್ಟರ ಮಟ್ಟಿಗೆ ಶೂನ್ಯನಾಗುತ್ತಾನೋ ಅಷ್ಟರ ಮಟ್ಟಿಗೆ ಪೂರ್ಣತೆ ಆತನಲ್ಲಿ ಪ್ರವೇಶಿಸುತ್ತದೆ; ಅದ್ದರಿಂದ ಪೂರ್ಣ ಶೂನ್ಯತೆಯೇ ಪೂರ್ಣ ಪೂರ್ಣತೆ!

* * *

ಎಂಥಾ ಅದ್ಭುತವಾದ ಕಲ್ಪನೆಯಾಗಲೀ ಅದಕ್ಕೆ ಸ್ಪಷ್ಟತೆ ಇರುತ್ತದೆ ಎನ್ನುತ್ತಾನೆ ಕ್ರೋಚೆ. ಕಲ್ಲನ್ನು ಚಿತ್ರಿಸುವಾಗ ಸ್ವಷ್ಟತೆ ಸಾಧ್ಯ; ಆದರೆ ಚಲಿಸುವ ಹೊಗೆಯನ್ನು ಚಿತ್ರಿಸುವಾಗ?

ಅನುಭವ ಅತೀಂದ್ರಿಯವಾದದ್ದಾದರೆ ಅಸ್ಪಷ್ಟತೆ ಆವಶ್ಯಕ ಅನ್ನಿಸುತ್ತದೆ. ಆಗ ಅಸ್ಪಷ್ಟತೆಯೇ ಪ್ರತಿಮೆ. ಭಗವದ್ಗೀತೆಯ ವಿಶ್ವರೂಪವನ್ನಾಗಲೀ, ಆಂಜನೇಯನ ಸಾಗರೋಲ್ಲಂಘನವನ್ನಾಗಲಿ ಚಿತ್ರಿಸುವಾಗ ಅಲ್ಲಿ ಸ್ವಷ್ಟತೆ ಹೇಗೆ ಸಾಧ್ಯ?

ವೇದಗಳಲ್ಲಿನ ಭಾಷೆ ಇದೆಯಲ್ಲ, ಅದು ಗಾಳಿ ಇಟ್ಟಿಗೆಯಂತೆ!

* * *

ಷೆಲ್ಲಿ ಹೇಳುತ್ತಾನೆ, ಕವಿ ಸ್ಫೂರ್ತಿಯಲ್ಲಿ ಬರೆಯುವಾಗ, ಅವನ ಬರವಣಿಗೆ ಶುರುವಾದೊಡನೆಯೇ ಸ್ಫೂರ್ತಿ ಆಗಲೇ ಇಳಿಕೆಯಲ್ಲಿರುತ್ತದೆ – ಎಂದು. ಇದು ಒಪ್ಪತಕ್ಕದಲ್ಲ, ಕವಿಯ ಕಾವ್ಯರಚನಾ ವಿಧಾನ, ಭಾವಪಚನಾ ವಿಧಾನವೂ ಹೌದು. ರಚನೆಯಲ್ಲಿಯೇ ಸೃಷ್ಟಿ ಆಗುತ್ತಾ ಹೋಗುತ್ತದೆ. ಅದೊಂದು ಜೀವಂತಕ್ರಿಯೆ. ಮುಗಿದುದಕ್ಕೆ ಮೈಗೂಡುವುದಲ್ಲ; ಮೈಗೂಡುತ್ತಲೇ ಆವಿರ್ಭಾವವಾಗುತ್ತದೆ.

ಆವಿರ್ಭಾವ ಎಂದರೆ, ಎರಡರ ಸಂಪರ್ಕದಿಂದ ಮೂಡುವ ಮೂರನೆಯದು. ಸಕ್ಕರೆ ಮತ್ತು ನಾಲಗೆಯ ಸಂಪರ್ಕದಿಂದ ಸಿಹಿ ಆವಿರ್ಭವಿಸುತ್ತದೆ.

* * *

ಅದು (ಕವಿಯ ಅನುಭವ) ಕೃತಿಯಾಗುವ ತನಕ ಮತಿ ಗೋಚರವಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ, ಅದು ಕೃತಿಯಾದ ಮೇಲೂ ಸಂಪೂರ್ಣ ಗೋಚರವಾಗುತ್ತದೆ ಎಂದು ಹೇಳಲು ಬರುವುದಿಲ್ಲ.

* * *

ಕವಿಯ ಅನುಭವ ಸೌಂದರ್ಯ ಉಕ್ತಿಸೌಂದರ್ಯವಾಗಿ ಪರಿವರ್ತಿತವಾಗುವಾಗ, ಎಲ್ಲ ಅಂಶಗಳನ್ನೂ ಸೌಂದರ್ಯವನ್ನಾಗಿ ಪರಿವರ್ತಿಸುತ್ತದೆ. ನಾದಾಂಶವನ್ನು ಅದು ಸೌಂದರ್ಯವನ್ನಾಗಿ ಪರಿವರ್ತಿಸುವಾಗ ಛಂದಸ್ಸು ಅನಿವಾರ್ಯವಾಗಿ ಮೂಡಿ ಬರುತ್ತದೆ.

* * *

ಅಭಿವ್ಯಕ್ತಿ ಅನ್ನುವುದು ಪದಗಳ ಪ್ರಯತ್ನಪೂರ್ವಕವಾದ ಜೋಡಣೆ ಅಲ್ಲ. ಅದು ಕಟ್ಟಿದ್ದಲ್ಲ ಹುಟ್ಟಿದ್ದು. ರೀತಿ ಅನ್ನುವುದು ರಸವಸ್ತು ಕೃತಿಯಲ್ಲಿ ರೂಪಧಾರಣ ಮಾಡುವ ವಿಧಾನ. ಅದರಲ್ಲಿ ಛಂದಸ್ಸೂ ಒಂದು ಅಂಶ. ಕಾಲ ಕಾಲಕ್ಕೆ ಈ ಛಂದಸ್ಸು ಬದಲಾಯಿಸುತ್ತಾ ಹೋಗಿರುವುದನ್ನು ಎಲ್ಲ ಸಾಹಿತ್ಯಗಳಲ್ಲೂ ಕಾಣಬಹುದು.

* * *

ಒಂದು ಸಮರೂಪತೆಯಲ್ಲಿ ಬಹುರೂಪತೆಯನ್ನು, ಒಂದು ವೈವಿಧ್ಯವನ್ನು ಛಂದಸ್ಸು ತಂದುಕೊಡುತ್ತದೆ, ಜೀವಧಾರಣೆಗೆ ಶರೀರಧಾರಣೆ ಹೇಗೆ ಆವಶ್ಯಕವೋ ಹಾಗೆಯೆ ಮೂಲಾಲಂಕಾರವು (ರಸಾನುಭವವು) ಭಾಷೆಯಲ್ಲಿ ಆವಿರ್ಭವಿಸುವಾಗ ಛಂದಸ್ ಶರೀರದಲ್ಲಿಯೆ ಉದ್ಭವಿಸುತ್ತದೆ.

* * *

ಕಾವ್ಯಾನುಭವ ಭಾಷೆಯಿಂದ ಅಪ್ರತ್ಯೇಕ. ಅನುಭವದ ಪರಿಣಾಮವೇ ರಚನೆ. ಅನುಭವ ಹಾಗೂ ಈ ಅಭಿವ್ಯಕ್ತಿ ಎರಡೂ ಅಖಂಡ, ಅಪ್ರತ್ಯೇಕ – ಮನುಷ್ಯನ ಮೈ ಹಾಗೂ ಚರ್ಮ ಈ ಎರಡರ ಸಂಬಂಧದಂತೆ;

* * *

ಕವಿಯ ಜ್ಞಾನ, ಸಂಸ್ಕೃತಿ, ಹೃದಯಸಂವೇದನೆ ಇವುಗಳ ಮೇಲೆ ಭಾಷೆ ಸಿದ್ಧವಾಗುತ್ತದೆ. ಭಾವ ಯಾವ ನಿಯಂತ್ರಣಕ್ಕೆ ಒಳಗಾಗುತ್ತದೆಯೋ ಛಂದಸ್ಸೂ ಅದೇ ನಿಯಂತ್ರಣಕ್ಕೆ ಒಳಗಾಗುತ್ತದೆ.

* * *

ನಿಯತವಾದ, ಕ್ರಮಬದ್ಧವಾದ, ಮತ್ತೆ ಮತ್ತೆ ಆವೃತ್ತಿಗೊಳ್ಳುವ ಲಯ ವಿಧಾನಕ್ಕೆ ಛಂದಸ್ಸು ಎನ್ನಬಹುದು. ಛಂದಸ್ಸಿನ ಓಟ ಮನಸ್ಸಿಗೆ ಗೋಚರವಾಗುತ್ತಿದ್ದು, ಅದು ಅಷ್ಟು ಸ್ಪಷ್ಟವಾಗಿರಲಿ, ಕ್ರಮಬದ್ಧವಾಗಿಯಾಗಲಿ ಅಲ್ಲದಿದ್ದಾಗ ಲಯ ಎನ್ನಿಸಿಕೊಳ್ಳುತ್ತದೆ.

* * *

ಛಂದಸ್ಸು ರಮಣೀಯತೆಯ ಪ್ರಕಾಶನದ ಒಂದು ಅಂಶ, ಅಂಗ. ಛಂದಸ್ಸು ರಸಸ್ಥಿತಿಯ ವಾಹಕ. ಧ್ಯಾನೋತ್ತರ ಭಾವ ಸ್ಥಿತಿಯಲ್ಲಿಯೆ ಛಂದಸ್ಸು ಸಾಧ್ಯ.

* * *

ಛಂದಸ್ಸು ತನಗೆ ತಾನೇ ಆಸ್ವಾದ್ಯವಾಗಬಲ್ಲ ಗುಣವನ್ನು ಪಡೆದಿದೆ. ಭಾವದ ಕರ್ಮಕ್ಕೆ ಒಂದು ಲಯದ ಸಂಯಮವನ್ನು ತರುತ್ತದೆ ಛಂದಸ್ಸು. ಈ ಸಂಯಮವಿದ್ದರೇ ಅದು ಪರಿಣಾಮಕಾರಿಯಾಗುವುದು. ಸ್ವಾತಂತ್ರ್ಯ ಸಂಯಮ ಇವೆರಡರ ಸಮನ್ವಯವೇ ಛಂದಸ್ಸು. ಭಾವ ಸ್ಥಿತಿಯಿಂದಲೇ ಛಂದಸ್ಸು ಉದ್ಭವವಾಗುತ್ತದೆ. ಭಾಷೆಯೂ ಛಂದೋಮಯವಾಗಲು ಇದೇ ಕಾರಣ.

* * *

ಅಂತರನುಭವದ ನಾದಲಯಗಳಿಗೆ ಒಡ್ಡಿದ ಬಾಹ್ಯ ಪ್ರತಿಮೆ ಈ ಛಂದಸ್.

ಭೂಮಿ ಗುಂಡಾಗಿರುವಿಕೆಯೇ ಅದರ ಸುತ್ತುವಿಕೆಗೆ ಸಹಾಯಕವಾಗುವಂತೆ, ಕಾವ್ಯಕ್ಕೆ ಛಂದಸ್ಸು.

* * *

ಕವಿಗೆ ಛಂದಸ್ಸು ಮೀನಿಗೆ ನೀರಿದ್ದಂತೆ, ಹಕ್ಕಿಗೆ ಆಕಾಶವಿದ್ದಂತೆ, ಅದೇ ಅದಕ್ಕೆ ಸಹಕಾರಿ. ಇತರ ಎಲ್ಲಾ ಭಾವ – ರಸಗಳು ಹೇಗೆ ಉಂಟಾಗುತ್ತವೆಯೋ ಹಾಗೆಯೇ ಛಂದಸ್ಸೂ ಮೈದಾಳುತ್ತದೆ.

* * *

ಛಂದಸ್ಸು ಎರವಲು ತಂದದಲ್ಲ. ಅನುಭವದ ರಸ ಲಕ್ಷಣವನ್ನು ಸೂಚಿಸುವುದು ಮಾತ್ರವಲ್ಲ, ಅದನ್ನು ಪ್ರದಾನ ಮಾಡುವುದರಲ್ಲೂ ಛಂದಸ್ಸಿಗೆ ಶಕ್ತಿ ಇದೆ. ಮೀಮಾಂಸಕರು ಶಬ್ದವೇ ‘ಶಕ್ತಿ’ ಎಂದರು. ಅತ್ಯಂತ ಭೌತವಾದ ಧ್ವನಿವಿನ್ಯಾಸವಾದ ಶಬ್ದಕ್ಕೂ ಒಂದು ಬಗೆಯ ಶಕ್ತಿ ಇದೆ. ಭಾರವಾದ ಕೆಲಸ ಮಾಡುವವರು, ಮೇನಾ ಹೊರುವವರು, ದೋಣಿ ನಡೆಸುವವರು ಛಂದೋಬದ್ಧವಾದ ಕೆಲಸವನ್ನು ಮಾಡುತ್ತಾ, ಮಾಡುವ ಕೆಲಸವನ್ನು ಹಗುರವನ್ನಾಗಿ ಮಾಡಿಕೊಳ್ಳುವುದು ತಿಳಿದ ಸಂಗತಿ.

* * *

ಸೃಷ್ಟಿಯೇ ಛಂದೋಬದ್ಧವಾಗಿದೆ. ಆತ್ಮದ ಅಭಿವ್ಯಕ್ತಿ ಇಂತಹ ನಿಯಮದ ಒಂದು ಆನಂದದಿಂದ ಉದ್ಭವಿಸಿದೆ. ಆದುದರಿಂದ ನಮ್ಮ ಅಭಿವ್ಯಕ್ತಿಯಲ್ಲೂ ಅದು ಪ್ರಕಾಶಗೊಂಡಿದೆ. ಇದರಿಂದ ರಸಾನುಭವ ಮಾತ್ರವಲ್ಲ, ಲೌಕಿಕ ಪ್ರಯೋಜನವೂ ಉಂಟು. ಎಲ್ಲದರಲ್ಲೂ ಒಂದು ನಿಯಮ ನಿಷ್ಠೆ, ಸಮರೂಪತೆ ಕಂಡು ಬರುತ್ತದೆ. ಈ ಸಮರೂಪತೆಯಲ್ಲೆ ಅಸಂಖ್ಯ ವೈವಿಧ್ಯವೂ ಇರಬಹುದು.

ಇದು ವೇದಗಳಲ್ಲಿ ಮೊದಲು ವ್ಯಕ್ತವಾಯಿತು. ಇದು ನಾವು – ಕೃತಕವಾಗಿ ಸೃಷ್ಟಿಸುವುದಲ್ಲ, ಅದನ್ನು ಕಂಡು ಹಿಡಿಯುವುದು, ಬಳಸುವುದು ನಮ್ಮ ಕೆಲಸ. ಮಂತ್ರ ಎಂಬುದು ಶ್ರುತ. ಋಷಿಗೆ ಅದು ಛಂದೋಬದ್ಧವಾಗಿಯೇ ಅನುಭವಕ್ಕೆ ಬರುತ್ತದೆ.

ಛಂದಸ್ಸು ಒಂದು ದೃಷ್ಟಿಯಲ್ಲಿ ರಸವಾಹಿ. ಅದನ್ನು  ಕಾವಿಲ್ಲದಾಗಲೂ ಕೃತಕವಾಗಿ ಮೂಡಿಸಬಹುದು. ವರ್ಣ ವರ್ಣಗಳ ವಿನ್ಯಾಸದಲ್ಲಿ, ಸ್ವರಮಾಧುರ್ಯದಲ್ಲಿ ಇದನ್ನು ಗುರುತಿಸಿದವರು ಪ್ರಾಸ ಅನುಪ್ರಾಸ ಎಂದು ಹೆಸರಿಸಿದರು.

* * *

ಪ್ರತಿಯೊಂದು ವಸ್ತುವಿನಲ್ಲೂ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟತೆ ಉಂಟು. ಪಿಂಡಾಂಡ ಎಷ್ಟು ವಿಶಿಷ್ಟವೋ ಬ್ರಹ್ಮಾಂಡವೂ ಅಷ್ಟೇ ವಿಶಿಷ್ಟ. ಕಾವ್ಯದ ಮುಖ್ಯ ಪ್ರಯೋಜನ ವಿಶಿಷ್ಟತಾ ಅನುಭವ. ಸಾಮಾನ್ಯತೆಯಲ್ಲಿಯೂ ಅತ್ಯಂತ ವಿಶಿಷ್ಟವಾದುದನ್ನು ಕಾವ್ಯ ಅನುಭವಕ್ಕೆ ತಂದುಕೊಡುತ್ತದೆ.

* * *

ಕಲೆ ವಿಶಿಷ್ಟತೆಯ ಅಭಿವ್ಯಕ್ತಿ. ವ್ಯಕ್ತಿ ಹೇಗೆ ವಿಶಿಷ್ಟವೋ ಕೃತಿಯೂ ಅಂತೆಯೇ ವಿಶಿಷ್ಟ. ಗಿಡದ ಒಂದು ಸಂಪೂರ್ಣತೆಯೇ ಅದರ ಒಂದೊಂದು ಹೂವಿನಲ್ಲಿಯೂ ಗೋಚರವಾಗುವಂತೆ, ವ್ಯಕ್ತಿಯ ವ್ಯಕ್ತಿತ್ವದ ಪೂರ್ಣತೆ ಕೃತಿಯಲ್ಲಿಯೂ ಪ್ರತಿಫಲಿತವಾಗುತ್ತದೆ.

* * *

ಪ್ರತಿಯೊಂದು ಅಭಿವ್ಯಕ್ತಿಯೂ ಸೃಷ್ಟಿ. ಏಕತ್ವದಿಂದ ಅನೇಕತ್ವವನ್ನು ತಾಳುವುದು ಸೃಷ್ಟಿ ಲಕ್ಷಣ. ಕಲಾಭಿವ್ಯಕ್ತಿ ಎನ್ನುವುದು ಒಂದು ಸೃಷ್ಟಿ. ಪ್ರತಿಯೊಂದು ಅಭಿವ್ಯಕ್ತಿಯೂ ಸಾವಯವ ಪೂರ್ಣವಾದದ್ದು. ಅಲ್ಲಿ ಸಾವಯವತೆ ಇದ್ದರೂ ಪೂರ್ಣತೆ ಇರುತ್ತದೆ.

* * *

ಕಲೆಯ ಪ್ರಕಾಶನ ವಿಧಾನ ವ್ಯಕ್ತಿ ವಿಶಿಷ್ಟವೆಂಬಂತೆ ತೋರಿದರೂ, ಅದರ ಮೂಲ ಸಮಷ್ಟಿ ಮನಸ್ಸಿನಲ್ಲಿದೆ. ಒಂದು ರೀತಿಯಲ್ಲಿ ಅದು ಅತಿವ್ಯಕ್ತಿರೂಪವಾದುದು. ಎಂದರೆ, ಅದು ವ್ಯಕ್ತಿಯಿಂದ ಸಂಭವಿಸಿದಂತೆ ಕಂಡರೂ ಅದರ ವ್ಯಾಪ್ತಿ ವ್ಯಕ್ತಿಯನ್ನೂ ಮೀರುತ್ತದೆ. ಈ ಕಾರಣದಿಂದ ಅದು ಲೋಕಕ್ಕೆ ಅತಿಶಯವಾದುದು. ಆದುದರಿಂದ ಅದರ ಪ್ರಕಾಶನ ವಿಧಾನವೂ ಅತಿಶಯದ ಅನುಭವಕ್ಕೆ ಅನುಸಾರವಾಗಿರಬೇಕು. ಹಾಗಿಲ್ಲದಿದ್ದರೆ ಅದು ಅನುಭವದ ಅತಿಶಯತೆಯನ್ನು ಕಟ್ಟಿಕೊಡಲಾರದು.

* * *

ವಿಶಿಷ್ಟತೆ ಎನ್ನುವುದರ ಮೂಲ ಸಾಧಾರಣತೆಯಲ್ಲಿದೆ. ವ್ಯಷ್ಟಿ ಯಾವಾಗಲೂ ಸಮಷ್ಟಿಯಲ್ಲಿ ನಿಂತಿದೆ. ಸಮಷ್ಟಿ ಯಾವಾಗಲೂ ವ್ಯಷ್ಟಿಯಲ್ಲಿದೆ. ಇದು ಮರಕ್ಕೂ ಅದರ ಎಲೆಗಳಿಗೂ ಇರುವ ಸಂಬಂಧದಂತೆ ಇದು ಅನ್ಯೋನ್ಯಾಭಿನ್ನತೆ.

* * *

ಯಾವುದು ಕವಿಯ ವಿಶಿಷ್ಟಾನುಭವವೋ, ಅದು ಸಾಧಾರಣವಾಗದಿದ್ದರೆ ಇತರರು ಅದನ್ನು ತಿಳಿಯಲು ಹೇಗೆ ಸಾಧ್ಯ?

ವೇದಿಕೆಯಲ್ಲಿ ಸಮರೂಪವಿದ್ದರೂ, ನೃತ್ಯಕಾರ ಅನಂತ ಅಂಗಭಂಗಿಗಳನ್ನು ಪ್ರದರ್ಶಿಸುವಂತೆ, ಕಾವ್ಯದ ಏಕರೂಪತೆಯಲ್ಲಿಯೇ ಅನೇಕತೆ ಅಭಿವ್ಯಕ್ತವಾಗಿರುತ್ತದೆ.

* * *

ಕವಿಕೃತಿ ಬ್ರಹ್ಮಕೃತಿಯಾಗಿಲ್ಲ. ಅಥವಾ ಆಗಬೇಕು ಎಂಬ ಮಾತಿಗೆ ಅರ್ಥವಿಲ್ಲ. ಪ್ರಕೃತಿಯೂ ಬ್ರಹ್ಮಕೃತಿ, ಕವಿಯೂ ಬ್ರಹ್ಮಕೃತಿ. ಪ್ರಕೃತಿಯನ್ನು ಹೊಸತಾಗಿ ಸೃಷ್ಟಿಸುವುದೂ ಅನವಶ್ಯಕ. ಪ್ರಕೃತಿಯಲ್ಲಿ ಯಾವುದು ಅರ್ಥಗರ್ಭಿತವಾಗಿ ಅವ್ಯಕ್ತವಾಗಿರುತ್ತದೋ ಅದನ್ನು ವ್ಯಕ್ತವನ್ನಾಗಿ, ಅರ್ಥಪೂರ್ಣವನ್ನಾಗಿ ಕವಿ ಸೃಷ್ಟಿಸುತ್ತಾನೆ. ‘ಕವಿಕೃತಿಯುಂ ಆ ಬ್ರಹ್ಮ ಕೃತಿಯಂತೆ ಋತ ಚಿದ್ ವಿಲಾಸಂ’

* * *

ಕಾವ್ಯವೂ ಒಂದು ಶಿವಾಂಶ. ಆದರೆ ನಾವು ಯಾವುದನ್ನು ಕಾವ್ಯ ಸಮುದಾಯ ಎನ್ನುತ್ತೇವೋ ಅದರಲ್ಲಿ ಶಿವ – ಅಶಿವ, ಸುರ – ಅಸುರ ಎಲ್ಲವೂ ಇರಬಹುದು. ಕಾವ್ಯ ‘a kind of human good’ ಮಾತ್ರವಲ್ಲ. ಅದು ‘a kind of human evil’ ಕೂಡ ಆಗಬಹುದು. ವಾಸ್ತವವಾಗಿ ಅದು ಶಿವಪರವಾದಾಗ ಉತ್ತಮವಾಗುತ್ತದೆ, ಶಿವೇತರವಾದಾಗ ಅಧಮವಾಗುತ್ತದೆ.

* * *

ಕಾವ್ಯ-ಕಲೆಗಳನ್ನು ಪ್ರತ್ಯೇಕವಾಗಿ ಗಮನಿಸದೆ, ಅವನ್ನು ಜೀವನಕ್ಕೆ ಸಂಬಂಧಿಸಿದಂತೆ ನೋಡಬೇಕು. ಸದ್ಯಕ್ಕೆ ರಸಾನುಭವವೇ ಪರಮ ಪ್ರಯೋಜನದಂತೆ ತೋರಿದರೂ, ಅದರ ಪರಿಣಾಮ ನಮ್ಮ ಬದುಕನ್ನು ಅರಳಿಸಿ ಪೂರ್ಣತೆಯ ಕಡೆಗೆ ಒಯ್ಯುವುದು. ಈ ದೃಷ್ಟಿಯಿಂದ ಕಾವ್ಯದಲ್ಲಿ ರಸಾನುಭವವೇ ಪರಮಪ್ರಯೋಜನ ಎಂಬುದನ್ನು ಒಪ್ಪಲಾರೆವು. ಬ್ರಹ್ಮ ರಸಾಸ್ವಾದನೆಗೆ ಇದು ಒಂದು ಸಾಧನಾ ರೂಪದ ಪ್ರಯೋಜನ ಎಂದು ಭಾವಿಸಬೇಕಾಗುತ್ತದೆ. ಈ ಒಂದು ದೃಷ್ಟಿ ನಮ್ಮ ಕವಿಗಳಿಗೆ ಇದೆ.

* * *

ಕಾವ್ಯ ಕವಿಯ ಪೂರ್ಣ ಪ್ರಜ್ಞೆಯಿಂದ ಸ್ವತಃ ಸಿದ್ಧವಾಗಿ ಮೂರ್ತಗೊಳ್ಳುವ ರಸಾನುಭವ, ಕಾವ್ಯ ರಸಾನುಭವ ಎಂಬುದನ್ನರಿಯದವರು ಅದರಲ್ಲಿ ತಮಗೆ ಪ್ರಿಯವಾದ ಲೋಕ ವ್ಯಾಪಾರಗಳಿದ್ದರೆ ಮಾತ್ರ ಮೆಚ್ಚುತ್ತಾರೆ.

* * *

ಲೋಕ ಕೃತಿ ಕಲಾಕೃತಿ ಅಲ್ಲ; ಆದರೂ ಕಲಾಕೃತಿಯಂತೆ ಅದು ರಸಾನುಭವವನ್ನು ಕೊಡಬಲ್ಲುದು, ಹಾಗಾಗುವುದು ಸಾಕ್ಷೀ ಪ್ರಜ್ಞೆಗೆ ಮಾತ್ರ. ಎಷ್ಟರ ಮಟ್ಟಿಗೆ ನಾವು  ಸಾಕ್ಷ್ಮೀ ಪ್ರಜ್ಞೆಯಲ್ಲಿರಬಲ್ಲೆವೋ ಅಷ್ಟರ ಮಟ್ಟಿಗೆ ಲೌಕಿಕ ಘಟನೆಗಳೂ ರಸಾನುಭವಕಾರಿ -ಯಾಗಬಲ್ಲವು.

* * *

ಅನುಭವದಲ್ಲಿ ಹೊಸತನ ಕಾಣುವುದು ಅತ್ಯಂತ ಆವಶ್ಯಕ. ಕಾವ್ಯದ ಮೂಲಕ್ಕೆ ಇನ್ನೇನಲ್ಲದಿದ್ದರೂ ಅನುಭವದ ನಾವೀನ್ಯತೆ ಬೇಕು. ಇಂತಹ ಅನುಭವದಿಂದ ಹುಟ್ಟಿದುದು ರಸವತ್ ಕೃತಿಯಾಗುತ್ತದೆ. ಕಾವ್ಯಕ್ಕೆ ಬೇಕಾದುದು ‘ನವೋರ್ಥ’, ಅನುಭವದ ನವತ್ವ. ನವತ್ವ ಸಿದ್ಧವಾದ ನಂತರ ಭಾವಕ್ಕೆ ಒಂದು ಸಂಸ್ಕಾರ ಒದಗಿ ಅದು ‘ಅಗ್ರಾಮ್ಯ’ವಾಗುತ್ತದೆ. ಅನಂತರ ಅದು ‘ಅಕ್ಲಿಷ್ಟ’ವಾಗಬೇಕು. ಕವಿಯ ಕಾವ್ಯ ಸಹೃದಯಾನುಭವವಾಗಬೇಕಾದರೆ, ಯಾವುದೇ ತಡೆಗಳಿರಬಾರದು.

* * *

ಜಾಗ್ರತ್ ಪ್ರಜ್ಞಾ ಅನುಭವ ಸಾಮಗ್ರಿಯನ್ನು ಕವಿ ಭಾವಪೂರ್ವಕವಾಗಿ ಗ್ರಹಿಸುತ್ತಾನೆ; ಬುದ್ಧಿಪೂರ್ವಕವಾಗಿ ಅಲ್ಲ, ಆದುದರಿಂದ ಅವು ಸಂಸ್ಕಾರಗಳಾಗಿ ಪರಿಣಮಿಸುತ್ತವೆ. ಆಗ ಅವುಗಳಿಗೆ ರಮಣೀಯತೆ ವಕ್ರತೆ ಲಭಿಸುತ್ತದೆ. ಗ್ರಾಮ್ಯವಾದದ್ದು ಅಗ್ರಾಮ್ಯವಾಗುತ್ತದೆ; ವಾರ್ತೆ ವಕ್ರೋಕ್ತಿಯಾಗಿ, ಲೋಕ ವಸ್ತು ರಸವಸ್ತುವಾಗಿ ಸಹೃದಯ ಮನೋಗೋಚರವಾಗುತ್ತದೆ.

* * *

ಎಲ್ಲಕ್ಕೂ ಮೂಲವಾದದ್ದು ಅನುಭವ. ಯಾವ ಲೋಕಾನುಭವ ಕವಿಯ ಅನುಭವವಾದಾಗ, ಅದು ಆಲಂಕೃತವಾದ ಸ್ವಭಾವೋಕ್ತಿಯಾಗುತ್ತದೆ. ಆ ವಿನ್ಯಾಸ ವಿಶೇಷ ಅನುಭವವಿಶೇಷಕ್ಕೆ ಸಂವಾದಿಯಾದ ಉಕ್ತಿ. ಅದು ಲೋಕದವರಿಗೆ ವಕ್ರೋಕ್ತಿಯಂತೆ ಗೋಚರಿಸುತ್ತದೆ. ಸಹೃದಯ ಆ ವಕ್ರತೆಯಿಂದಲೇ ಕಾವ್ಯಾನುಭವಕ್ಕೆ ಪ್ರವೇಶಿಸುತ್ತಾನೆ. ಆದುದರಿಂದಲೇ ಆ ವಿನ್ಯಾಸ ವಿಶೇಷ ರಮಣೀಯವಾದದ್ದು ಎನ್ನುವುದು. ರಮಣೀಯತೆ ಇಲ್ಲದ ವಿಶೇಷ ವಿನ್ಯಾಸ ನಮ್ಮ ಗಮನ ಸೆಳೆಯಲಾರದು. ಅದರ ಹಿಂದೆ ಒಂದು ವಸ್ತು ವಿಶೇಷ, ಅಲಂಕಾರ ವಿಶೇಷ ಇರಬೇಕು. ಲೋಕದ ವಸ್ತು ಸೌಂದರ್ಯ ಭಾವಗಳು ರಸಾನುಭವದಿಂದ ಪರಿವರ್ತಿತವಾಗುತ್ತವೆ.

* * *

ಒಂದು ಕಲಾಕೃತಿ ಸೃಷ್ಟಿಯಾದ ಮೇಲೆ ಅದು ಅಲ್ಲಿಗೇ ಮುಗಿಯುವುದಿಲ್ಲ; ಅಲ್ಲಿಂದಲೇ ಅದರ ನಿಜವಾದ ಆರಂಭ. ಸಹೃದಯನ ನಿಜವಾದ ಆಸ್ವಾದದಿಂದ, ಅವನಿಗೆ ಅದರ ಪೂರ್ಣತೆಯ ಅರಿವಾಗುತ್ತದೆ, ಸಹೃದಯ ಹೆಚ್ಚು ಸುಸಂಸ್ಕೃತನಾಗಿದ್ದರೆ, ಕವಿಯ ಚೇತನ ಎಷ್ಟರ ಮಟ್ಟಿಗೆ, ಅನುಭವವನ್ನು ಪಡೆಯುವುದೋ ಅಷ್ಟರ ಮಟ್ಟಿಗೆ, ಅಷ್ಟೇ ಏಕೆ ಅದಕ್ಕೂ ಹೆಚ್ಚಿನ ಮಟ್ಟಕ್ಕೂ ಏರಬಹುದು.

ಓದುಗನ ದೃಷ್ಟಿಯಿಂದ ಕವನದ ಒಂದೊಂದು ಪಂಕ್ತಿಯೂ ಮುಖ್ಯ. ಯಾಕೆಂದರೆ ಅವೆಲ್ಲವೂ ಕಾವ್ಯದ ಅಂಶಗಳೇ. ಕಾವ್ಯವೊಂದನ್ನು ಪೂರ್ತಿಯಾಗಿ ಓದಿದ ನಂತರವೇ ಅದರ ಪೂರ್ಣಾನುಭವ ಸಾಧ್ಯ. ಕಲಾಕೃತಿ ಅಂಶದಲ್ಲೂ ಪೂರ್ಣ, ಪೂರ್ಣವಾದಲ್ಲೂ ಪೂರ್ಣ. ಪ್ರತಿಯೊಂದು ಪಂಕ್ತಿಯಲ್ಲೂ ಆ ಪೂರ್ಣತೆ ಒಂದು ರೀತಿಯಲ್ಲಿ ಸಿದ್ಧವಾಗಿರುವುದು ಕಂಡುಬರುತ್ತದೆ. – ಕಡಲಿನ ಒಂದೊಂದು ಹನಿಯ ಮೇಲೂ ಇಡೀ ಕಡಲಿನ ಒತ್ತಡವಿರುವಂತೆ. ಅಂತಹ ಕೃತಿಯಲ್ಲಿ ಒಂದು ಸಾಮರಸ್ಯದಿಂದ ಒಡಗೂಡಿದ ಐಕ್ಯತೆ ಇರುತ್ತದೆ. ಈ ಐಕ್ಯತೆ ಯಾವ ಅಂಶದಲ್ಲೂ ತನ್ನ ಸಾಮರಸ್ಯವನ್ನು ಕಳೆದುಕೊಳ್ಳುವುದಿಲ್ಲ.

* * *

ಒಂದು ಹೊಸ ಆಲೋಚನೆ, ಭಾವದ ತೀಕ್ಷ್ಣತೆ ಒಬ್ಬನಿಗೆ ಲಭಿಸಿತೆಂದರೆ, ಅದು ಎಲ್ಲರಿಗೂ ಲಭಿಸಿದಂತೆಯೇ. ಆ ಒಬ್ಬ ತನಗೆ ಲಭಿಸಿದ್ದನ್ನು ಎಲ್ಲರಿಗೂ ಸಂಪಾದಿಸಿ -ದಂತೆಯೇ ಆಯಿತು.

ಕಾವ್ಯದಿಂದ ನಾವು ಹೊಸ ಅನುಭವವನ್ನು ಪಡೆಯುತ್ತೇವೆ. ನಮ್ಮಲ್ಲಿ ಅದುವರೆಗೂ ಇರದಿದ್ದ ಅಥವಾ ತೆರೆಯದಿದ್ದ ಏನೋ ಒಂದು ನಮಗೆ ದೊರೆಯುತ್ತದೆ. ಆದರೆ ಹಾಗೆ ಅದನ್ನು ಪಡೆಯುವುದೂ ಅಷ್ಟು ಸುಲಭವಾದ ಕೆಲಸವಲ್ಲ. ಮಗು ತಾಯಿಯ ಎದೆ ಹಾಲಿನಿಂದ ಪುಷ್ಟಿ ಪಡೆಯುತ್ತದೆ. ಮಗುವಿನಲ್ಲಿ ಹಾಗೆ ಪುಷ್ಟಿ ಪಡೆಯುವ ಶಕ್ತಿ ಇರಬಹುದು. ಆದರೆ ಮಗು ಹಾಲನ್ನು ಹೀರದೆ ಅದಕ್ಕೆ ಪುಷ್ಟಿ ಇಲ್ಲ.

* * *

ರಸಾನುಭವ ಮಿಂಚಿನಂತೆ ಆಗುವುದಲ್ಲ. ಅದೊಂದು ಬೆಳವಣಿಗೆ. ಬೇಕಾದರೆ ಅದನ್ನು ನಿಂತ ಮಿಂಚು ಎಂದು ಕರೆಯಬಹುದು. ಕವಿಯ ಅನುಭವ ಚಿನ್ಮೂಲದಿಂದ ಮೃಣ್ಮಯಕ್ಕೆ ಬರುವಾಗ ಅದು ಕೆಲವು ಕಾಲವನ್ನು ತೆಗೆದುಕೊಳ್ಳುತ್ತದೆ. ಅದೊಂದು ಅಖಂಡ ಕ್ರಿಯೆ, ಸಹೃದಯನೂ ಸಹ ಕವಿಯ ರಸಾನುಭವವನ್ನು ಗ್ರಹಿಸಲು ಕಾಲ ಬೇಕು. ಯಾಕೆಂದರೆ ಕವಿಯ ಕೃತಿಯೂ ಒಂದು ಕಾಲಮಾನವನ್ನು ಅನುಸರಿಸಿ ಬೆಳೆದಿರುತ್ತದೆ.  ಅದು ಕೂಡಲೇ ಅರ್ಥವಾಗದಿರಬಹುದು. ಈ ಅರ್ಥವಾಗುವಿಕೆಯೂ ಅವರವರ ಸಂಸ್ಕಾರಗಳಿಗನುಗುಣವಾದುದು. ಒಂದು ಚಿತ್ರ, ಒಂದು ಪ್ರತಿಮೆ ಒಂದು ಸಲಕ್ಕೆ ಪರಿಣಾಮ ಮಾಡದಿರಬಹುದು; ಅದರೆ ನಿತ್ಯವೂ ನೋಡುತ್ತಿದ್ದರೆ ಕ್ರಮೇಣ ಅರ್ಥವಾಗುತ್ತದೆ.

* * *

ರಸಾನುಭವದಲ್ಲಿ ನಾವು ಬೇರೆ ಬೇರೆಯ ರೇಖೆಗಳನ್ನು ಗುರುತಿಸಬಹುದು – ಹೂವಿನೊಳಗಣ ಎಸಳುಗಳಂತೆ. ಯಾವ ಒಂದು ಎಸಳೂ ಹೂವಿನಿಂದ ಪ್ರತ್ಯೇಕವಲ್ಲ. ಯಾವ ಕಾವ್ಯ ಬರಿಯ ರಸಾನುಭವವನ್ನು ಮಾತ್ರವಲ್ಲದೆ, ಬ್ರಹ್ಮರಸವನ್ನೂ ಕೊಡುವುದೋ ಅದು ಚಿರಕಾವ್ಯ. ಜನ ಅದನ್ನು ಗುರುತಿಸದಿರಬಹುದು; ಎಷ್ಟೋ ವೇಳೆ ಸಮರ್ಥನಾದ ವಿಮರ್ಶಕ ದಾರಿತಪ್ಪಿಸಲೂ ಬಹುದು.

ಕಾವ್ಯ ಪ್ರಯೋಜನವಾದ ಮೇಲೆ ಬ್ರಹ್ಮರಸ ಪ್ರಯೋಜನವೂ ಇದ್ದರೆ, ಕಾವ್ಯ ಘನವಾಗುತ್ತದೆ. ಪಂಪನ ವಿಕ್ರಮಾರ್ಜುನ ವಿಜಯಕ್ಕೆ ಇರುವ ಕಾವ್ಯರಸ ಪ್ರಯೋಜನದೊಂದಿಗೆ, ಆದಿಪುರಾಣಕ್ಕೆ ಇರುವ ಬ್ರಹ್ಮರಸ ಪ್ರಯೋಜನವೂ ಇದ್ದಿದ್ದರೆ ಅದು ಕುಮಾರವ್ಯಾಸನ ಕಾವ್ಯದಂತೆ ಮಹತ್ತಾಗಬಹುದಾಗಿತ್ತು.

ಈ ಬ್ರಹ್ಮರಸ ಪ್ರಯೋಜನದ ಕಾವ್ಯ ಎಷ್ಟು ಸಲ ಸವಿದರೂ ತೀರುವುದಿಲ್ಲ. ಬರಿಯ ಕಾವ್ಯರಸ ಪ್ರಯೋಜನದ ಕೃತಿ ಕೇವಲ ಒಂದೆರಡು ಸಲದ ಓದಿನಲ್ಲಿ ತೃಪ್ತಿ ಕೊಟ್ಟೀತು. ಕಾವ್ಯರೂಪದ ಚಾರುತ್ವಕ್ಕೆ ಯಾವ ಭಂಗವೂ ಬಾರದೆ ಅದಕ್ಕೆ ಇನ್ನೊಂದು ಅತೀತವಾದ ಪ್ರಯೋಜನ ಒದಗಿದರೆ ಅದು ಇನ್ನೂ ಉಜ್ವಲವಾದೀತು.

* * *

ಒಂದು ಕಲಾಕೃತಿ ಅತ್ಯಂತ ಜಟಿಲವಾದ ಮನೋಮಯ ವ್ಯಾಪಾರಗಳಿಂದ ರಚಿತವಾಗಿರುತ್ತದೆ. ಒಂದು ಸಣ್ಣ ಸಂಸ್ಕಾರದಿಂದಲಾಗಲಿ, ಮಾನಸಿಕ ಜಟಿಲತೆಯ ಒಂದು ರೇಖೆಯಿಂದಾಗಲಿ, ವ್ಯಕ್ತಿಯ ಜಟಿಲ ಸ್ವಭಾವದ ಒಂದು ರೇಖೆಯಿಂದಾಗಲಿ, ಕಾರ‍್ಯಕಾರಣದಿಂದಾಗಲಿ, ಇಡೀ ಕೃತಿಯನ್ನು ಅಳೆಯ ಹೊರಡುವುದು ಸರಿಯಲ್ಲ. ಕೋವಿಯ ಬಿಲ್ಲೆಳೆದದ್ದೆ ವ್ಯಕ್ತಿಯೊಬ್ಬ ಗುಂಡು ತಗುಲಿ ಸತ್ತದ್ದಕ್ಕೆ ಪ್ರಧಾನ ಕಾರಣವಲ್ಲ. ಹಲವು ಕಾರಣಗಳ ಪರಂಪರೆಯಲ್ಲಿ ಇದೂ ಒಂದು. ಕೃತಿಯ ಎಲ್ಲವನ್ನೂ ವ್ಯಕ್ತಿಯ ಒಂದು ಜಟಿಲ ಸ್ವಭಾವದಿಂದ ಅಳೆಯ ಹೊರಡುವುದು ಅವ್ಯಾಪ್ತಿ ದೋಷವಾಗುತ್ತದೆ. ಒಂದು ವೇಳೆ ಹಾಗೆ ಅಳೆಯ ಹೊರಟರೆ ಅದು ಕಲಾಕಾರ‍್ಯವಾಗುವುದಿಲ್ಲ, ಮನಸ್ ಶಾಸ್ತ್ರವಾಗುತ್ತದೆ. ಹಾಗೆಂದರೆ ಮನಸ್ ಶಾಸ್ತ್ರಜ್ಞನಿಗೆ, ಕಾರ‍್ಯಕಾರಣ ಸಂಬಂಧವನ್ನು ಗಮನಿಸಲು ಅಧಿಕಾರವಿಲ್ಲವೆಂದಲ್ಲ, ಆದರೆ ಕಲೆಯಲ್ಲಿ ಮಾತ್ರವೇ ಪ್ರಸ್ಫುಟಗೊಳ್ಳುವ ಈ ನವನವೋನ್ಮೇಷತ್ವ, ವಿಶ್ಲೇಷಣೆಗಾಗಲೀ, ವಿಚಾರಕ್ಕಾಗಲೀ ಅದನ್ನು ಸಂಪೂರ್ಣವಾಗಿ ವಶಪಡಿಸುವುದನ್ನು ಮೂದಲಿಸುತ್ತದೆ. ಏಕೆಂದರೆ ಕಲಾಕೃತಿ ಲೋಕವಸ್ತುವಿಗೆ ತೋರಿದ ಕೇವಲ ಪ್ರತಿಕ್ರಿಯೆ ಅಲ್ಲ; ಅದಕ್ಕೆ ತದ್ವಿರುದ್ಧವಾದದ್ದು, ಮಾನುಷ ವಿಚಾರಕ್ಕೆ ಅತೀತವಾದದ್ದು, ನಾವು ಅದರ ಕಾರ್ಯವನ್ನು ವಿವರಿಸಬಹುದೇ ಹೊರತು, ಅದರ ಸ್ವರೂಪವನ್ನಲ್ಲ. ಅದನ್ನು ಮಸುಕು ಮಸುಕಾಗಿ ಗುರುತಿಸಬಹುದೇ ಹೊರತು, ಅದನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಿಲ್ಲ. ಕಲಾಕೃತಿಯ ವಿಷಯದಲ್ಲಿ ಮಾತ್ರ, ಯಾವುದಾದರೂ ದೈಹಿಕ ಕ್ರಿಯೆಗೆ ಒದಗುವ ಪ್ರಚೋದನೆಯನ್ನು ಕಾರ‍್ಯ ಕಾರಣ ಸಂಬಂಧದಿಂದ ವಿವರಿಸುವಂತೆ ವಿವರಿಸಲು ಹೊರಡಬಾರದು.

* * *

ಮನಸ್ಸು ತನ್ನ ಪರಿಪೂರ್ಣ ಸ್ಥಿತಿಯಲ್ಲಿಯೆ ಕಲೆಯಲ್ಲಿ ವ್ಯಕ್ತವಾಗುವುದರಿಂದ ಮನಸ್ ಶಾಸ್ತ್ರ ಕಲೆಗೇ ಹೋಗಬೇಕಾಗುತ್ತದೆ. ಕಲಾಕೃತಿ ಮನಸ್ಸಿನ ವಿಶೇಷ ವ್ಯಾಪಾರಗಳ ಪ್ರತಿನಿಧಿ. ಒಂದು ರೀತಿಯಲ್ಲಿ ಪ್ರತಿಮೆ. ಆದ್ದರಿಂದ ಅಲ್ಲಿ ಬೇರೆಯಲ್ಲಿಯೂ ದೊರೆಯದ ಅನೇಕ ರಹಸ್ಯ ಪ್ರಕಾರಗಳು ದೊರೆಯುತ್ತವೆ. ಇದರ ಪರಮಾವಧಿ ಕಲೆಯಲ್ಲೇ ದೊರೆಯುತ್ತದೆ ಎಂದೇನೂ ಈ ಮಾತಿನ ಅರ್ಥವಲ್ಲ. ಕಲೆ ಎಷ್ಟಾದರೂ ಒಂದು ಉನ್ನತ ಘಟ್ಟ. ಕಲೆಗೂ ಅತೀತವಾಗಿ ಅನಾಖ್ಯೇಯವಾಗಿರುವ ಅನುಭವಗಳೂ ಇರುವುದುಂಟು. ಅಂಥವುಗಳನ್ನು ಕೂಡಾ ಕಲೆ ವಾಚಕವಾಗಿ ಅಲ್ಲದಿದ್ದರೂ, ವ್ಯಂಗ್ಯವಾಗಿಯಾದರೂ ಸೂಚಿಸಬಹುದು. ಏಕೆಂದರೆ ಕಲೆ ಚಿತ್ರಿಸುವುದು ಮೇಲಕ್ಕೇರುವ ಮನಸ್ಸಿನ ದಾರಿ ಹೆಜ್ಜೆಗಳನ್ನು ಮಾತ್ರವಲ್ಲ; ಕೆಳಗಿಳಿಯುವ ದೈವಿಕಶಕ್ತಿಗಳನ್ನೂ ಅದು ಗುರುತಿಸಬಲ್ಲುದು. ಕವಿಯ ಈ ಕಲ್ಪನಾ ಶಕ್ತಿ ಐಹಿಕವಾದುದನ್ನೆಲ್ಲ ತಾನು ಹೇಗೆ ಒಂದು ರೀತಿಯಲ್ಲಿ  ಗ್ರಹಿಸಬಲ್ಲುದೋ, ಊಹಿಸಬಲ್ಲುದೋ, ಅಂತೆಯೇ ಅತೀತವಾದುದನ್ನೂ ಅದು ತನ್ನ ವಿಶೇಷ ಅವಸ್ಥೆಯಲ್ಲಿ ಗ್ರಹಿಸಬಲ್ಲುದು ಸ್ಪರ್ಶಿಸಬಲ್ಲುದು. ಆದುದರಿಂದ ಕಲೆ ಮತ್ತು ಮನಸ್ ಶಾಸ್ತ್ರಗಳೆರಡೂ ಒಂದಕ್ಕೊಂದು ಪ್ರೇರಕಗಳಾಗಿ, ಪೂರಕಗಳಾಗಿ ಇರಬಹುದು.

* * *

ಕಲಾವಿದನದು ದ್ವಂದ್ವ ವ್ಯಕ್ತಿತ್ವ : ಇಲ್ಲವೇ ಸಮನ್ವಿತ ವ್ಯಕ್ತಿತ್ವ. ಹಲವು ಕಲಾವಿದರ ವಿಚಾರದಲ್ಲಿ ಅವರ ಜೀವನವೇ ಒಂದು ರೀತಿಯಲ್ಲಿರಬಹುದು, ಅವರ ಕಲಾಕೃತಿಯಲ್ಲಿ ವ್ಯಕ್ತಗೊಂಡ ಜೀವನವೇ ಬೇರೊಂದು ರೀತಿಯಲ್ಲಿರಬಹುದು. ಇಲ್ಲವೇ ಆ ದ್ವಂದ್ವ ವ್ಯಕ್ತಿತ್ವಗಳೆಲ್ಲಾ ಒಂದೇ ಚಕ್ರದ ಅರಗಳಂತೆ ಒಂದಕ್ಕೊಂದು ಪೂರಕವಾದಂತೆ ಸಮನ್ವಿತವಾಗಿರಬಹುದು. ಆತ ಮೊದಲನೆಯದಾಗಿ ಒಬ್ಬ ಕಲಾವಿದ, ಎರಡನೆಯದಾಗಿ ಸಮಾಜದ ಒಬ್ಬ ವ್ಯಕ್ತಿ. ಇಲ್ಲಿ ವೃತ್ತಿವ್ಯಕ್ತಿತ್ವ ಹಾಗೂ ಲೋಕವ್ಯಕ್ತಿತ್ವ ಎಂದು ತೆಗೆದುಕೊಳ್ಳಬಹುದು. – ಮಹಾಭಾರತದ ಧರ್ಮವ್ಯಾಧನಂತೆ. ಕಲೆ ಅವನ ವೃತ್ತಿ ಎಂದರೆ, ಆತನ ಪ್ರವೃತ್ತಿಗೆ ಅವಿರೋಧವಾದ ವೃತ್ತಿ. ಒಂದರ್ಥದಲ್ಲಿ ಕಲಾವಿದನಲ್ಲಿ ವೃತ್ತಿಗೂ ಪ್ರವೃತ್ತಿಗೂ ಅಂತಹ ವಿರೋಧವಿಲ್ಲ.

ಕಲಾವಿದನಿಗೆ ಆತನದೇ ಆದ ವಿಶಿಷ್ಟ ಮನೋವ್ಯಾಪಾರಕ್ಕಿಂತ ಸಮಷ್ಟಿ ಮನಸ್ಸು ಆತನ ವಿಶಿಷ್ಟ ಮನಸ್ಸನ್ನು ಆಕ್ರಮಿಸುತ್ತದೆ. ಆ ಶಕ್ತಿಯ ಆಗಮನಕ್ಕೆ ಕಲಾವಿದ ಒಂದು ಒದಗೆಯಾಗುತ್ತಾನೆ, ಉಪಕರಣವಾಗುತ್ತಾನೆ. ಅವನು ವ್ಯಷ್ಟಿಮಾನವ ಮಾತ್ರವಲ್ಲ, ಸಮಷ್ಟಿ ಮಾನವ. ಅವನನ್ನು ಎರಡು ಶಕ್ತಿಗಳು ಆಳುತ್ತವೆ: ಒಂದು, ಸಾಮಾನ್ಯ ಭೋಗಲಾಲಸೆ; ಇನ್ನೊಂದು, ತನ್ನ ಈ ಎಲ್ಲ ಭೋಗ ಲಾಲಸೆಗಳನ್ನೂ ತೃಣೀಕರಿಸುವ ಕಲಾ ಪ್ರವೃತ್ತಿ.

* * *

ಸಾಹಿತ್ಯ ವಿಮರ್ಶಕನ ವಿಧಾನಕ್ಕೂ ಮನಸ್ ಶಾಸ್ತ್ರಜ್ಞನ ವಿಧಾನಕ್ಕೂ ಉದ್ದೇಶದಲ್ಲೇ ವ್ಯತ್ಯಾಸವಿರುವುದರಿಂದ  ವಿಧಾನದಲ್ಲೂ ವ್ಯತ್ಯಾಸವಿದೆ. ಏಕೆಂದರೆ ವಿಮರ್ಶಕನದು ರಸಾನುಭವ ಪರವಾದ ದೃಷ್ಟಿ: ಮನಸ್ ಶಾಸ್ತ್ರಜ್ಞನದು ವೈಜ್ಞಾನಿಕ ದೃಷ್ಟಿ.

ಸಾಹಿತ್ಯ ವಿಮರ್ಶಕನಿಗೆ ಒಂದು ಕೃತಿಯಲ್ಲಿ ಯಾವುದು ಅತಿ ಮುಖ್ಯವೋ ಅದು, ಮನಸ್ ಶಾಸ್ತ್ರಜ್ಞನಿಗೆ ಅಷ್ಟು ಮುಖ್ಯವೆಂದು ತೋರದಿರಬಹುದು. ಏಕೆಂದರೆ ಇವನಿಗೆ ಆಗಲೇ ತಿಳಿದಿರುವ ತತ್ವಗಳನ್ನೆ ಲೇಖಕ ಚಿತ್ರಿಸಿರುತ್ತಾನೆ. ಶಾಸ್ತ್ರ ಸಿದ್ಧವಾದ ದರ್ಶನದಿಂದ ಮನಸ್ ಶಾಸ್ತ್ರಜ್ಞನಿಗೆ ಉಪಯೋಗವಿಲ್ಲ; ದರ್ಶನ ಸಿದ್ಧವಾದ ಕೃತಿಯಿಂದ ಉಪಯೋಗ’ ವಿದೆ. ಏಕೆಂದರೆ ಮನಸ್ ಶಾಜ್ಞಜ್ಜನಿಗೆ ತನ್ನ ಶಾಸ್ತ್ರದ ಪ್ರಯೋಗಕ್ಕೆ ಅನುಕೂಲವಾದ ಕೃತಿ ಬೇಕು.

* * *

ಪುರಾಣ ಮಾನವ ಮಾನವನಾಗುವ ಮುನ್ನ ನಡೆದಿರಬಹುದಾದ ಮಾನವ ಪೂರ್ವಾವತಾರದ ಕಥಾ ಪ್ರತಿಮೆಗಳು. ಇವು ಚಾರಿತ್ರಿಕ ಸತ್ಯಗಳಲ್ಲ, ಮಾನವ ಅತೀತ ವಿಚಾರಗಳಿಗೆ ತನ್ನ ಊಹೆ ಕಲ್ಪನೆಗಳಿಂದ ರಚಿಸಿದ ಗಾಳಿ ಗೋಪುರಗಳಿವು. ಇವು ಎಲ್ಲ ದೇಶದಲ್ಲೂ ಉಂಟು. ಇವು ಏಕ ಕವಿ ಕೃತವಾದುವಲ್ಲ. ಇಡೀ ಸಮುದಾಯ ಕಟ್ಟಿದ ಕನಸಿನ ಕಥೆಗಳ ಗೊಂಚಲು. ಇವುಗಳ ಸತ್ಯ ಅಸತ್ಯಗಳ ನಿರ್ಣಯದಲ್ಲಿ ತರ್ಕ ಮೂಕವಾಗುತ್ತದೆ.

ಇತಿಹಾಸ – ರಾಮಾಯಣ, ಮಹಾಭಾರತ, ಇವು ಮಾನವ ಸಮಾಜದ ವಾಸ್ತವಿಕ ಘಟನಾ ರೂಪಗಳು, ಭೌಗೋಲಿಕ ಭೂಮಿಕೆಯಲ್ಲಿ ಲೋಕ ಶಕ್ತಿಗಳು ನಡೆಯಿಸಿದ ಘಟನೆಗಳ ವಾಸ್ತವ ಸತ್ಯಗಳು. ಆಲೋಕ ಶಕ್ತಿಗಳು ಈ ಲೋಕದಲ್ಲಿ ಇಲ್ಲಿನ ಭೂಮಿಕೆಗೆ ಅನುಗುಣವಾಗಿ ನಡೆದಿರುವ ಸಂಗತಿಗಳೂ ಇತಿಹಾಸವೇ. ಸಮಷ್ಟಿ ಮನಸ್ಸು ವ್ಯಷ್ಟಿ ಮನಸ್ಸು ಎರಡೂ ಸೇರಿ ಇತಿಹಾಸ ರಚಿತವಾಗಿದೆ.

ಪುರಾಣ ಕಟ್ಟಿದ್ದಲ್ಲ, ಹುಟ್ಟಿದ್ದು; ಇತಿಹಾಸ ಮಾಡಿದ್ದಲ್ಲ, ಮೂಡಿದ್ದು. ಮಹಾಕಾವ್ಯ ಯುಗಮನಸ್ಸಿನ ನಿಧಿಯೂ ಪ್ರತಿನಿಧಿಯೂ ಆದದ್ದು. ಮಹಾಕಾವ್ಯ ಒಂದು ಮಹಾಯಾತ್ರೆ ಇದ್ದಂತೆ.

* * *

ಯಾವುದನ್ನು ‘ಸಮಷ್ಟಿಚಿತ್’ ಎಂದು ಕರೆಯುತ್ತೇವೋ ಆ ಶಕ್ತಿ ಆ ಯುಗದ ವಿಭೂತಿ ಪುರುಷರಲ್ಲಿ ಮೈದೋರುತ್ತದೆ. ಆ ವ್ಯಕ್ತಿ ಒಬ್ಬ ಕವಿಯಾಗಿರಬಹುದು, ಒಬ್ಬ ದಾರ್ಶನಿಕನಾಗಿರಬಹುದು, ಒಬ್ಬ ಮಹಾನಾಯಕನಾಗಿರಬಹುದು. ಯಾವ ವ್ಯಕ್ತಿ ಒಂದು ರೀತಿಯಲ್ಲಿ ತನ್ನ ನಿರಹಂಕಾರವನ್ನು ಸಾಧಿಸಿಕೊಳ್ಳುವನೋ, ಆಗ ಆ ವಿರಾಟ್ ಶಕ್ತಿ ಆತನನ್ನು ಪ್ರವೇಶಿಸುತ್ತದೆ. ಆ ವ್ಯಕ್ತಿ ತನ್ನ ಅಲ್ಪತ್ವದಿಂದ ವಿಮೋಚನೆ ಹೊಂದುತ್ತಾ ಹೋದಂತೆ, ತನ್ನ ಕಾಲದ ಅಪ್ರಕಟವಾದ ಯುಗ ಹೃದಯದ ಅಭೀಪ್ಸೆಗೆ ಆತನ ಚೇತನ ಪಾತ್ರವಾಗುತ್ತದೆ. ಈ ಬಗೆಯ ಹಾರೈಕೆ ಎಲ್ಲರಲ್ಲೂ ತೋರಬಹುದು; ಆದರೆ ಅದು ಗಡ್ಡೆ ಕಟ್ಟುವುದು ಗಾಂಧಿ ಹಿಟ್ಲರ್ ಅಂಥವರಲ್ಲಿ. ಆ ಹಾರೈಕೆ ತನ್ನ ಕಾಲದವರನ್ನು ಶ್ರೇಯಸ್ಸಿಗೋ ವಿನಾಶಕ್ಕೋ ಒಯ್ಯಬಹುದು. ಈ ದೃಷ್ಟಿಯಿಂದ ಒಂದು ಮಹಾಕೃತಿ ಕೇವಲ ವ್ಯಕ್ತಿಯೊಬ್ಬನ ಕೃತಿ ಅಲ್ಲ; ಸಮಷ್ಟಿಯದು.

* * *

ಒಂದು ಮಹಾಕಾವ್ಯ ಆ ಯುಗದ ಸಮಷ್ಟಿ ಚಿತ್ತದ ವಾಙ್ಮಯ ರೂಪದ ಮಹತ್ ಪ್ರಕಾಶನ. ಆ ಯುಗದ ಆಸೆ, ಆಲೋಚನೆ, ಭಾವ, ಚಿಂತನೆಗಳನ್ನು ಒಂದು ರೀತಿಯಲ್ಲಿ ಪ್ರತಿಮಿಸಿ ತಾನೇ ಒಂದು ಪ್ರತಿಮೆಯಾಗುತ್ತದೆ.

ಮಹಾಕಾವ್ಯದಲ್ಲಿ ಅಭಿವ್ಯಕ್ತವಾಗುವ ಈ ‘ಸಮಷ್ಟಿಚಿತ್’ ಪ್ರಜ್ಞೆಗೆ ಪೂರ್ವ- ವಾದುದು, ಅತೀತವಾದುದು. ಮರದ ಒಂದೊಂದು ಎಲೆಯೂ ಬೇರಿಂದ ರಸ ಎಳೆಯುವ ಕ್ರಿಯೆಗೂ ಈ ಮಾತು ಅನ್ವಯಿಸುತ್ತದೆ. ಅದು ಸಮಷ್ಟಿಚಿತ್ ಅಥವಾ ಯುಗ ಮನಸ್ಸು. ಅದು ಜಾಗೃತ್ ಪ್ರಜ್ಞೆಗೆ ಅಗೋಚರವಾಗಿರುವ ಒಂದು ಸಂಸ್ಕಾರಕೋಶ; ಗುಪ್ತವಾದ ಸಂಸ್ಕಾರ ಭಿತ್ತಿ; ನಮ್ಮ ಬಾಹ್ಯಕ್ರಿಯೆಗಳನ್ನು ನಡೆಯಿಸುವ ಶಕ್ತಿ. ಆ ಒಳಗಿನ ಸಂಸ್ಕಾರದ ಮುಂದೆ ನೀತಿ ಬೋಧೆ ನಿರರ್ಥಕ.  ವ್ಯಕ್ತಿಯ ಬಾಹ್ಯಕ್ರಿಯೆಗಳನ್ನು ನಡೆಯಿಸುವ ಈ ಒಳಗಿನ ಸಂಸ್ಕಾರ ಶಕ್ತಿಯಂತೆ, ಜನಾಂಗವನ್ನು ಅದರ ಸಮಷ್ಟಿ ಮನಸ್ಸು ನಡೆಯಿಸುತ್ತದೆ. ಮಹಾಕವಿಯ ಅಂತರಂಗದಲ್ಲಿ ಪ್ರೇರಣೆಯಾಗಿ, ಅಗೋಚರವಾಗಿ ಈ ಶಕ್ತಿ ಇರುತ್ತದೆ.

* * *

ಮಹಾಕಾವ್ಯ – ಗಾತ್ರವಾದದಕ್ಕೆ ಮಾತ್ರವಲ್ಲ, ಭಾವಗೀತೆ ಕೂಡಾ – ಒಂದು ಜನಾಂಗದ ಗುಪ್ತವಾದ ಸುಪ್ತವಾದ ಚೇತನ ವ್ಯಕ್ತಿಯೊಬ್ಬನ ಮೂಲಕ ಪ್ರಕಟವಾದದ್ದು. ಅದು ಜನ ಜಾಗ್ರತಿಗೂ ಕಾರಣವಾಗುತ್ತದೆ. ಈ ಅರ್ಥದಲ್ಲಿ ಕವಿಯನ್ನು ಋಷಿ ಎಂದು ಕರೆಯುವುದು. ಒಬ್ಬ ವ್ಯಕ್ತಿಯ ಪುರುಷಕಾರ (personality) ತನ್ನ ಸ್ವಂತ ಇಚ್ಛೆಯಿಂದಲೋ, ಕರ್ಮದಿಂದಲೋ ಈ ಸಮಷ್ಟಿಚಿತ್‌ಗೆ ಒಂದು ಪ್ರಣಾಳಿಕೆಯಾಗುವ ಸಾಮರ್ಥ್ಯವನ್ನು ಪಡೆದಾಗ, ಅದು ಆ ಸಾಮರ್ಥ್ಯವನ್ನು ಪಡೆಯುವಷ್ಟು ಪುರುಷಕಾರವನ್ನು ಗಳಿಸಿಕೊಳ್ಳುತ್ತದೆ. ನಾವು ಅಂತಹ ವ್ಯಕ್ತಿಯಲ್ಲಿ ಮಾನುಷಸಹಜವಾದ ಅಲ್ಪತ್ವ, ದೋಷ, ದೌರ್ಬಲ್ಯಗಳನ್ನು ಹುಡುಕಬಾರದು.

* * *

ಉತ್ತಮವಾದ ಕಾವ್ಯದಲ್ಲಿ ಸೌಂದರ್ಯಾಂಶ, ಭಾವಾಂಶ, ವಸ್ತು ಅಂಶ ಈ ಮೂರೂ ಇರುತ್ತವೆ. ಕಬ್ಬನ್ನು ಕುರಿತು, ಕಬ್ಬಿನ ರುಚಿ, ಕಬ್ಬಿನ ಬಣ್ಣ, ಕಬ್ಬಿನ ಹಾಲು ಎಂದು ಬೇರೆ ಬೇರೆ ಮಾತನಾಡಬಹುದು. ಆದರೆ ಕಬ್ಬು ಎಂದರೆ ಈ ಮೂರೂ ಸೇರಿದ ಅಖಂಡ ವಸ್ತು. ಭಾವ ತನಗೆ ತಾನೇ ಯಾವ ಹಿಡಿತಕ್ಕೂ ಸಿಕ್ಕುವುದಿಲ್ಲ. ಭಾವ ಹಿಡಿತಕ್ಕೆ ಸಿಕ್ಕಬೇಕಾದರೆ, ಯಾವುದಾದರೂ ‘ವಸ್ತು’ವಿನಿಂದ ಅದನ್ನು ಗ್ರಹಿಸಬೇಕು. ‘ವಸ್ತು’ ಭಾವವನ್ನು ಗ್ರಹಿಸಲು ಸೌಂದರ್ಯಾಂಶ ಅನಿವಾರ್ಯವಾಗಿ ಇರಬೇಕು. ಸೌಂದರ್ಯಾಂಶ ಸೇರದಿದ್ದರೆ ವಸ್ತು ಭಾವ ಎರಡೂ ಬೇರೆ ಬೇರೆಯಾಗಿಯೆ ನಿಂತಾವು.

* * *

ಆಲೋಚನೆಯ ಮೂಲಕವೇ ಮಾನವ ಸಂಸ್ಕೃತಿ ಬೆಳೆದಿರುವುದು. ಆಲೋಚನೆ ಅನುಭವವಾಗುತ್ತದೆ. ಅನುಭವದಿಂದ ಹೊಸ ಆಲೋಚನೆಗಳು ಮೂಡುತ್ತವೆ. ತತ್ವ ಶುದ್ಧ ಆಲೋಚನೆಯನ್ನು ಕೊಡುತ್ತದೆ. ಕಾವ್ಯ ಆಲೋಚನೆಯನ್ನು ಭಾವ ದೀಪ್ತವನ್ನಾಗಿ ಮಾಡಿಕೊಡುತ್ತದೆ. ಈ ಕಾರಣದಿಂದ ಭಾವ ಆಲೋಚನೆಗಿಂತ ಶ್ರೇಷ್ಠತರವಾದುದು.

ಆಲೋಚನೆ ನಿಂತಿರುವುದು ಅನುಭವದ ಮೇಲೆಯೇ. ಆಲೋಚನೆಗಿಂತಲೂ ಮೂಲವಾದದ್ದು ವಿಸ್ತಾರವಾದುದು ಅನುಭವ. ಅನುಭವ ಪೂರ್ಣವನ್ನು ಪೂರ್ಣವಾಗಿ ಗ್ರಹಿಸುತ್ತದೆ. ಆಲೋಚನೆ ಹಾಗೆ ಮಾಡಲಾರದು. ಆಲೋಚನೆ ನಮ್ಮ ವ್ಯಕ್ತಿತ್ವದ ಒಂದಂಶವಾದ ಬುದ್ಧಿಯ ಕಾರ್ಯ. ಹೊಸತೊಂದು ಅನುಭವ ನಮ್ಮ ಹಳೆಯ ಆಲೋಚನೆಗೆ ಮೀರಿದ್ದರೆ, ನಾವು ನಮ್ಮ ಆಲೋಚನೆಯನ್ನೆ ಬದಲಾಯಿಸಬೇಕು. ಆಲೋಚನೆ ಅನುಭವದ ಅನುಯಾಯಿಯೆ ಹೊರತು ಅಧಿಪತಿ ಅಲ್ಲ; ಸತ್ಯಕ್ಕೆ ಕಡೆಯ ಪ್ರಮಾಣ ಅನುಭವವೇ.

* * *

ಲೋಕಭಾವಗಳು, ರಾಗ-ದ್ವೇಷಗಳು ನಮ್ಮನ್ನು ಭಾವವಶರನ್ನಾಗಿ ಮಾಡುತ್ತವೆಯೇ ಹೊರತು ವಶಭಾವರನ್ನಾಗಿ ಮಾಡುವುದಿಲ್ಲ. ಇದೇ ಲೋಕಭಾವಗಳು ಕಲಾಕೃತಿಯಲ್ಲಿ ಹಾಗೆಯೇ ಬರಬಾರದು. ಈ ದೃಷ್ಟಿಯಿಂದಲೇ ಪ್ರತಿಕೃತಿ ಸಾಹಿತ್ಯ ಅಷ್ಟು ಘನವಾದದ್ದಲ್ಲ ಅನ್ನುವುದು. ಕಲೆಯಲ್ಲಿ ರಜಸ್ಸು ತಮಸ್ಸುಗಳನ್ನು ಚಿತ್ರಿಸಿದರೂ ಅವು ಸತ್ವದ ಹಿನ್ನೆಲೆಯಲ್ಲೇ ಬರಬೇಕು. ಕಲೆಯಲ್ಲಿ ವಶಭಾವರಾಗುವುದನ್ನು ಕಲಿತರೆ, ಬದುಕಿನಲ್ಲಿಯೂ ವಶಭಾವರಾಗಬಹುದು.

* * *

ಬದುಕಿನಲ್ಲಿ ನಾವು ಸಾಧಿಸದಿದ್ದುದನ್ನು ಕಲೆಯಲ್ಲಾದರೂ ಸಾಧಿಸಬೇಕು. ನಮ್ಮ ಜೀವ ಸಂಸಾರಿಯಾಗಿರಲು ಒಪ್ಪಿರುವುದು ಈ ಲೋಕದ ಅನುಭವವನ್ನು ಪಡೆಯಲು. ಎಷ್ಟರ ಮಟ್ಟಿಗೆ ವ್ಯಕ್ತಿ ರಾಗ-ದ್ವೇಷಗಳ ಮಟ್ಟದಿಂದ ಮೇಲೇರುವನೋ ಅಷ್ಟರ ಮಟ್ಟಿಗೆ ಅವನು ರಸಾನುಭವ ಪಡೆಯಲು ಅರ್ಹನಾಗುತ್ತಾನೆ.

* * *

ಧ್ಯಾನಶೀಲವಲ್ಲದ ಕಾವ್ಯ ಕಲಾಕೃತಿಯಾಗಲಾರದು. ಧ್ಯಾನದಿಂದ ಶೋಕ ಶ್ಲೋಕವಾಗುತ್ತದೆ.

ನಾವು ಎಷ್ಟೋ ಪ್ರಮೇಯ (Data)ಗಳನ್ನು, ಅವು ಎಷ್ಟೇ ಸಮರ್ಪಕವಾಗಿದ್ದರೂ ಅವುಗಳ ಪ್ರಯೋಗದಿಂದಲೇ ಸತ್ಯವನ್ನು ನಿರ್ಣಯಿಸುತ್ತೇವೆ. ಕಟ್ಟ ಕಡೆಯ ನಿರ್ಣಯ ಬುದ್ಧಿಯಿಂದ, ಅನುಭವದಿಂದ ಸಾಧ್ಯ. ಬುದ್ಧಿ ತನ್ನ ಅನುಭವ ವಲಯದಲ್ಲಿ ಸಂಪಾದಿಸಿದ ಇಟ್ಟಿಗೆಗಳಿಂದಲೇ ಮನೆ ಕಟ್ಟುತ್ತದೆ. ಆ ಬುದ್ಧಿ ವಿಸ್ತಾರವಾಗಬೇಕಾದರೆ, ಅನುಭವವೂ ವಿಸ್ತಾರವಾಗಬೇಕು. ಎಷ್ಟೋ ವಿಚಾರಗಳನ್ನು ಶ್ರುತಿಯಿಂದ ತೆಗೆದುಕೊಳ್ಳುತ್ತೇವೆ, ಮತಿಯಿಂದ ಪರೀಕ್ಷಿಸುತ್ತೇವೆ.

* * *

ಕಾವ್ಯದ ಉದ್ದೇಶ ಲೋಕವನ್ನು ಪ್ರತಿಕೃತಿಸುವುದಿಲ್ಲ; ಪ್ರತಿಮಿಸುವುದು! ಪ್ರತಿಮೆ -ಯಲ್ಲಿ ಲೋಕ ವಸ್ತುಗಳೇ ಇದ್ದರೂ, ಅವು ರಸವಶವಾಗಿ ಪರಿವರ್ತಿತವಾಗಿರುತ್ತವೆ, ಲೋಕವನ್ನೇ ಸಂಪೂರ್ಣವಾಗಿ ಪ್ರತಿಕೃತಿಸುತ್ತೇವೆಂದು ಹೊರಡುವುದೂ ಸಾಧುವಲ್ಲ. ಕಾವ್ಯ ಬ್ರಹ್ಮ ಕೃತಿ ಅಲ್ಲ, ಕವಿ ಕೃತಿ.

* * *

ಎಷ್ಟರ ಮಟ್ಟಿಗೆ ಕನ್ನಡಿ ಶುದ್ಧವಾಗಿದೆಯೋ ಅಷ್ಟರ ಮಟ್ಟಿಗೆ ಅದು ವಸ್ತು ಸ್ವರೂಪವನ್ನು ಮತ್ತು ತನ್ನ ಸ್ವರೂಪವನ್ನು ವ್ಯಕ್ತಪಡಿಸುತ್ತದೆ.

* * *

ಕವಿ ತನ್ನ ಓದುಗರಿಗೆ ನೀಡುವುದು ಭಾವಸ್ಥಿತಿಯನ್ನಲ್ಲ, ರಸಸ್ಥಿತಿಯನ್ನು. ರಸಾನುಭವದಲ್ಲೂ ಸುಖಾನುಭವವಿದೆ. ಭಾವಗಳಿಗೆ ವ್ಯಾಯಾಮ ನೀಡುವುದೇ ಮಾನವನಿಗೊಂದು ಸುಖಪ್ರದವಾದ ವ್ಯಾಪಾರ.

* * *

ಲೌಕಿಕವಲ್ಲದ ವಿಷಯಗಳಿಂದಲೂ ಭಾವಸಂಚಾರವಾಗಬಲ್ಲುದು. ಒಂದು ಚೇತನ ಮತ್ತೊಂದಕ್ಕಿಂತ ಪೂಜ್ಯ, ವಂದನೀಯ ಎನ್ನುವುದು, ಆ ಚೇತನ ಇದಕ್ಕಿಂತ ಹೆಚ್ಚು  ರಸಾನುಭವ ಶಕ್ತಿಯನ್ನು ಪಡೆದಿರುತ್ತದೆ ಎನ್ನುವುದರಿಂದ. ಯಾವ ಕೃತಿ ಒಂದು ಚೇತನದ ಈ ಶಕ್ತಿಯನ್ನು, ದೃಷ್ಟಿಯನ್ನು ಉತ್ತಮಪಡಿಸಿ ಒಂದು ಬಗೆಯ ದಾರ್ಶನಿಕತೆಯನ್ನು ಕೊಡುತ್ತದೆಯೋ ಅದು ದೈವೀ ಕೃತಿ. ಇದು ಬರಿಯ ಕವಿ ಕಾರ‍್ಯವೇ ಅಲ್ಲ, ಋಷಿ ಕಾರ‍್ಯವೂ ಹೌದು. ಆದುದರಿಂದಲೇ ವರ್ಡ್ಸ್‌ವರ್ತ್ ಒಂದೆಡೆ Take me as a teacher and nothing else ಎಂದ.

ಕಾವ್ಯವಿರುವುದು ಆಲಸ ಸಮಯದ ವಿನೋದಕ್ಕಲ್ಲ. ಜನಹೃದಯ ಚೇತನವನ್ನು ಎಚ್ಚರಿಸುವುದಕ್ಕೆ, ಈ ಉದ್ಧಾರ ಆಹ್ಲಾದದ ವಿನಾ ಅಲ್ಲ. ಇಲ್ಲಿಯ ಉದ್ಧಾರಕ್ಕೂ ಆಹ್ಲಾದಕ್ಕೂ ಅವಿನಾ ಸಂಬಂಧವಿದೆ.

* * *

ಜಗಜ್ಜೀವನ ಭೂಮಿಕೆಯಲ್ಲಿ ಸಾಮಾನ್ಯ ಮನುಷ್ಯ ಪ್ರಜ್ಞೆಗೆ ಅಗೋಚರವಾದ ಭೂಮಿಕೆಗಳೂ ಇವೆ. ನಮ್ಮ ಬುದ್ಧಿ  ಜ್ಞಾನವನ್ನು ಹುಡುಕುವ ಅವಿದ್ಯೆಯ ಉಪಕರಣ ಮಾತ್ರ.

* * *

ಹೊಟ್ಟೆಗೆ ಅನ್ನ ಬೇಕು ಎಂಬ ವಿಚಾರದ ಉತ್ಸಾಹದಲ್ಲಿ, ಮನಸ್ಸಿಗೆ ಶಾಂತಿಬೇಕು ಅನ್ನುವುದನ್ನು ಅಲ್ಲಗಳೆಯಬಾರದು.