* ಚಲನಚಿತ್ರ ರಂಗದಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಹಾಗೂ ಖಳನಾಯಕನಾಗಿ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕನ್ನಡ ಜನಮನದಲ್ಲಿ ನೆಲೆನಿಂತವರು ಶ್ರೀ ಕೂದುವಳ್ಳಿ ಚಂದ್ರಶೇಖರ್ ಅವರು.
ಶ್ರೀ ಚಂದ್ರಶೇಖರ್ ಅವರ ಮೊದಲ ಒಲವು ನಾಟಕಗಳು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ಶ್ರೀಯುತರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಹಯವದನ ಮೀಸೆ ಬಂದೋರು ಶ್ರೀಯುತರು ಅಭಿನಯಿಸಿದ ಯಶಸ್ವೀ ನಾಟಕಗಳು. ೧೯೭೦ರಲ್ಲಿ ಸಿನಿಮಾರಂಗಕ್ಕೆ ಪ್ರವೇಶಿಸಿದ ಶ್ರೀ ಚಂದ್ರಶೇಖರ್ ಅವರು ನಮ್ಮ ಮಕ್ಕಳು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದರು. ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ ವಂಶವೃಕ್ಷದಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಪುಟ್ಟಣ್ಣ ಕಣಗಾಲ್ ಅವರ ಪ್ರಶಸ್ತಿ ಪುರಸ್ಕೃತ ಚಿತ್ರ ಎಡಕಲ್ಲು ಗುಡ್ಡದ ಮೇಲೆ, ನಾಯಕನ ಪಾತ್ರದಿಂದ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ ಖ್ಯಾತರಾದರು. ಸುಮಾರು ೬೫ ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಹೃದಯಂಗಮವಾಗಿ ಅಭಿನಯಿಸಿ ಚಿತ್ರರಸಿಕರ ಮನದಲ್ಲಿ ನೆಲೆನಿಂತವರು ಶ್ರೀ ಚಂದ್ರಶೇಖರ್.
‘ತ್ರಿಭಂಗ’ ದೂರದರ್ಶನ ಧಾರಾವಾಹಿ ನಿರ್ಮಾಣ ಹಾಗೂ ‘ಸಂಸ್ಮರಣೆ’ ದೂರ ದರ್ಶನ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ ಶ್ರೀ ಚಂದ್ರಶೇಖರ್ ಇತ್ತೀಚೆಗೆ ನಿರ್ಮಿಸಿದ ಶ್ರೀಮತಿ ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರ ಪೂರ್ವಾಪರ ಸದಭಿರುಚಿಯ ಚಿತ್ರವೆಂದು ಜನಮನ್ನಣೆ ಪಡೆದಿದೆ. ಈ ಚಿತ್ರದಲ್ಲಿ ಶ್ರೀಯುತರ ಅಭಿನಯ ಹಾಗೂ ನಿರ್ದೇಶನ ಎರಡನ್ನೂ ಮಾಡಿದ್ದಾರೆ.
ಕೆನಡಾಕ್ಕೆ ವಲಸೆ ಹೋದ ಶ್ರೀ ಚಂದ್ರಶೇಖರ್ ಕೆನಡಾ ಮತ್ತು ಅಮೆರಿಕಾ ದೇಶಗಳಲ್ಲಿ ಕನ್ನಡ ನಾಟಕಗಳು ಹಾಗೂ ಚಲನಚಿತ್ರಗಳನ್ನು ಜನಪ್ರಿಯಗೊಳಿಸಲು ಶ್ರಮಿಸಿದ್ದಾರೆ. ಶ್ರೀ ಚಂದ್ರಶೇಖರ್ ಬೆಂಗಳೂರಿನ ರಂಗ ತಂಡವೊಂದರೊಂದಿಗೆ ಗುರುತಿಸಿಕೊಂಡು ಉತ್ತರ ಅಮೆರಿಕದಲ್ಲಿ ಹಲವಾರು ಕನ್ನಡ ನಾಟಕಗಳನ್ನು ನಿರ್ದೆಶಿಸಿದ್ದಾರೆ.
ಹೊರದೇಶದಲ್ಲಿದ್ದರೂ ತಾಯ್ತಾಡನ್ನು ಮರೆಯದೆ ಕನ್ನಡ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಾಗೂ ಕನ್ನಡದ ಕಂಪನ್ನು ಹೊರನಾಡಿನಲ್ಲಿ ಬಿತ್ತರಿಸುತ್ತಿರುವ ಅಪರೂಪದ ಹೊರನಾಡ ಕನ್ನಡಿಗ ಶ್ರೀ ಚಂದ್ರಶೇಖರ್ ಅವರು.
Categories
ಶ್ರೀ ಕೂದವಳ್ಳಿ ಶಿವಸ್ವಾಮಿ ಚಂದ್ರಶೇಖರ್
