“ಊರಿನ ಅಂಗಡಿ ಸಾಲುಗಳಲ್ಲಿ ಅಕ್ಕಿ, ಜೋಳ ಮಾರುವಂತೆ ಮುತ್ತು ರತ್ನಗಳನ್ನು ರಾಶಿ ಹಾಕಿಕೊಂಡು ಅಳೆದು ಮಾರುತ್ತಿದ್ದರು.”

ರಾತ್ರಿ ಹೊತ್ತಿನಲ್ಲಿ ತರುಣಿಯಾದವಳು ಒಡವೆಗಳನ್ನು ಧರಿಸಿ ಒಬ್ಬಲೇ ಹೆದರಿಕೆ ಇಲ್ಲದೆ ಓಡಾಡಬಹುದು.”

ಬೇರೆ ದೇಶಗಳಿಂದ ಬಂದವರು ನಮ್ಮದೇಶದ ಒಂದು ರಾಜ್ಯವನ್ನು ಕುರಿತು ಹೀಗೆ ಬರೆದಿಟ್ಟರು.

ಇಂತಹ ರಾಜ್ಯ ಎಷ್ಟು ಶ್ರೀಮಂತವಾಗಿರಬೇಕು, ಪ್ರಭು ಎಷ್ಟು ಸಮರ್ಥನಾಗಿರಬೇಕು!

ಆ ಪ್ರಭು ಕೃಷ್ಣದೇವರಾಯ, ವಿಜಯನಗರದ ಚಕ್ರವರ್ತಿ.

ವೈಭವಯುತ ಯುಗದ ನಿರ್ಮಾಪಕ.

ಭಾರತದ ಇತಿಹಾಸದಲ್ಲಿ ಕರ್ನಾಟಕ ವಿಚಾರ ಬಂದಾಗ ಥಟ್ಟನೆ ಕಣ್ಣೆದುರಿಗೆ ಎದ್ದುನಿಲ್ಲವ ಎರಡು ಹೆಸರಗಳೆಂದರೆ ಬಾದಾಮಿಯ ಚಾಲುಕ್ಯ ವಂಶದ ಪುಲಿಕೇಶಿ ಮತ್ತು ವಿಜಯನಗರದ ಕೃಷ್ಣದೇವರಾಯ.

ಕೃಷ್ಣದೇವರಾಯನ ಕಾಲವೆಂದರೆ ಕರ್ನಾಟಕ ಅತ್ಯಂತ ವೈಭವದಿಂದ ಮೆರೆದ ಕಾಲ. ನೂರಾರು ಭವ್ಯವಾದ, ಸುಂದರವಾದ ದೇವಾಲಯಗಳು ನಿರ್ಮಾಣವಾದ ಕಾಲ. ಸಾವಿರಾರು ಕೆರೆಗಳು, ಕಾಲುವೆಗಳು ಸೃಷ್ಟಿಯಾಗಿ ತುಂಬಿ ಹರಿದು ನೆಲವೆಲ್ಲ ಫಲಭರಿತವಾದ ಕಾಲ. ಕವಿಗಳು, ಸಾಹಿತಿಗಳು, ನಾಟಕಕಾರರು ರಾಜವನ್ನಣೆಯನ್ನು ಪಡೆದು ಸಾಹಿತ್ಯ ಸಮಾಲೋಚನೆಯಲ್ಲಿ ದೆನಗಳನ್ನು ದೂಡುತ್ತಿದ್ದ ಕಾಲ; ಯತಿಗಳೂ ರಾಜರುಗಳೂ ವಿದ್ವಾಂಸರೂ ಹಿಮದು ಧರ್ಮ ಹಾಗೂ ಸಂಸ್ಕೃತಿಗಳ ಸಂರಕ್ಷಣೆಯನ್ನು ಸಮರ್ಥನಾದ ಕೃಷ್ಣದೇವರಾಯನಿಗೆ ಒಪ್ಪಿಸಿ ತಾವು ತಾತ್ವಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತಿದ್ದ ಕಾಲ. ಎಲ್ಲಕ್ಕೂ ಹೆಚ್ಚಾಗಿ ಆಗಾಗ ದಕ್ಷಿಣ ಭಾರತದ ಒಳನುಗ್ಗಿ ಹಿಂದು ಧರ್ಮ, ಸಂಸ್ಕೃತಿ ಘಾಸಿಗೊಳಿಸುತ್ತಿದ್ದ ಸುಲ್ತಾನರು ಅನೇಕ ಯುದ್ಧಗಳಲ್ಲಿ ಸೋತು ಕೃಷ್ಣದೇವರಾಯನ ಹೆಸರು ಕೇಳಿದರೆ ಸಡುಗಿ ಹಿಂಜರಿಯುತ್ತಿದ್ದ ಕಾಲ.

ಆದರೆ ನಮ್ಮ ದರದೃಷ್ಟ. ಆತನ ವೈಯಕ್ತಿಕ ಜೀವನದ ವಿವರಗಳು ತಿಳಿದೆರವುದೇ ಕಡಿಮೆ.

ಹಿನ್ನೆಲೆ

ಕೃಷ್ಣದೇವರಾಯ ಪಟ್ಟಕ್ಕೆ ಬರುವ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದ ಪರಿಸ್ಥಿತಿ ಹೇಗೆ ಇತ್ತು? ಆ ಸಾಮ್ರಾಜ್ಯವನ್ನು ಆಳುತ್ತಿದ್ದ ಸಾಳುವ ವಂಶದ ಅರಸರಿಂದ ಅಧಿಕಾರವೆಲ್ಲ ತುಳು ವಂಶದವನೂ ಮತ್ತು ಸಾಳುವ ಅರಸರ ಮಹಾದಂಡನಾಯಕನೂ ಎಂದು ಖ್ಯಾತನಾದ ನರಸನಾಯಕನ ಕೈಗೆ ಬಂದಿತ್ತು. ಈತನೇ ಕೃಷ್ಣದೇವರಾಯನ ತಂದೆ. ಈತನಿಗೆ ತಿಪ್ಪಾಂಬಿಕೆ ಎಂಬ ಹೆಂಡತಿಯಿಂದ ಹುಟ್ಟಿದಾತ ಇಮ್ಮಡಿ ವೀರನರಸಿಂಹ. ನಾಗಾಂಬಿಕೆಯೆಂಬ ಹೆಂಡತಿಯ ಮಗ ಕೃಷ್ಣದೇವರಾಯ. ಈತ ೧೪೭೪ ರಲ್ಲಿ ಹುಟ್ಟಿದ ಎಂದು ಕಾಣುತ್ತದೆ. ತಾನೇ ಸರ್ವಾಧಿಕಾರಿಯಾಗಿ ಇದ್ದರೂ ನರಸನಾಯಕ ತನ್ನನ್ನು ಸಾಮ್ರಾಟನೆಂದು ಕರೆದುಕೊಂಡಿರಲಿಲ್ಲ. ಆದರೆ ಈತನ ಹಿರಿಯ ಮಗ ಇಮ್ಮಡಿ ವೀರನರಸಿಮಹ ಪಟ್ಟಕ್ಕೆ ಬಂದ ಕೂಡಲೇ ಪರಿಸ್ಥಿತಿ ಬದಲಾಯಿತು. ವೀರನರಸಿಂಹ ಸಾಳುವ ವಂಶಚವರನ್ನು ಪೂರ್ಣ ಬದಿಗೊತ್ತಿ, “ಮಹಾರಾಜಾಧಿರಾಜ” ಮುಂತಾದ ಸಾರ್ವಭೌಮ ಬಿರುದುಗಳನ್ನು ಬಳಸತೊಡಗಿದ. ಇದು ಮಾಂಡಲೀಕ ಅರಸರಲ್ಲಿ ಅಸಹನೆನ್ನು ಹೆಚ್ಚಿಸಿತು. ಅಲ್ಲಲ್ಲಿ ವಿದ್ರೋಹದ ಚಟುವಟಿಕೆಗಳು ಪ್ರಾರಂಭವಾದುವು. ಕೇವಲ ಐದಾರು ವರ್ಷ ಮಾತ್ರ ಆಳಿದ ಇಮ್ಮಡಿ ವೀರನರಸಿಂಹ ಸಾಮಂತ ರಾಜರನ್ನೂ ಪ್ರಾಂತಾಧಿಕಾರಿಗಳನ್ನೂ ಹತೋಟಿಯಲ್ಲಿ ಇಟ್ಟಕೊಳ್ಳಲು ಸಮರ್ಥನಾಗಲಿಲ್ಲ.

ಈತನಿರುವಾಗಲೇ ಕೃಷ್ಣದೇವರಾಯ ಶೂರನೂ ರಸಿಕನೂ ಚಾಣಾಕ್ಷನೂ ಎಂದು ಹೆಸರಾಗಿ ಆಗಲೇ ಅಧಿಕಾರವನ್ನು ರೂಢಿಸಿಕೊಂಡ ತರುಣನಾಗಿದ್ದ. ವೀರನರಸಿಂಹ ತಾನು ದುರ್ಬಲವಿದ್ದರು ಕೃಷ್ಣದೇವರಾಯನ ಶೌರ್ಯ, ಪ್ರಾಬಲ್ಯಗಳನ್ನು ಸಹಿಸಲಿಲ್ಲ. ಸಾಮ್ರಾಜ್ಯ ತನ್ನ ಎಂಟು ವರ್ಷದ ಮಗನಿಗಾಗಬೇಕೆಂಬ ಲೋಭ. ತನ್ನ ಮರಣ ಸಮೀಪಿಸಿತೆಂದು ತಿಳಿದ ಕೂಡಲೇ ತನ್ನ ವಿಶ್ವಾಸದ ಮಹಾಮಂತ್ರಿ ತಿಮ್ಮರಸನನ್ನು ಕರೆಯಿಸಿಕೊಂಡು ಒಳಸಂಚು ಹೂಡಿದ.

“ಸಾಮ್ರಾಜ್ಯ ತನ್ನ ಸಂತತಿಗೆ ಸಲ್ಲಬೇಕಾದರೆ ಕೃಷ್ಣದೇವರಾಯ ಇಲ್ಲದಂತಾಗಬೇಕು ಮಹಾಮಂತ್ರಿಗಳೇ” ಎಂದ, ಸಾವನ್ನು ಎದುರುನೋಡುತ್ತಿದ್ದ ದೊರೆ.

ತಿಮ್ಮರಸನಿಗೆ ಸಿಡಿಲು ಬಡಿದಂತಾಯಿತು. ಕೃಷ್ಣದೇವರಾಯನನ್ನು ತಮ್ಮ ಮಗನಿಗಿಂತ ಹೆಚ್ಚಿನ ವಾತ್ಸಲ್ಯದಿಂದ ತಿಮ್ಮರಸ ಹಾಗೂ ಅವನ ಪತ್ನಿ ಬೆಳೆಸಿದ್ದರು. ಕೃಷ್ಣದೇವರಾಯನೂ ಅವರ ಮನೆಯಲ್ಲಿಯೇ ಅವರ ಮಕ್ಕಳೊಂದಿಗೆ ಬೆಳೆದವನಾಗಿ ತಿಮ್ಮರಸನನ್ನು ಅಪ್ಪಾಜಿಯೆಂದೇ ಕರೆಯುತ್ತಿದ್ದನು. ಇದಲ್ಲದೆ ಕೃಷ್ಣದೇವರಾಯನ ಚುರುಕು ಬುದ್ಧಿ, ಧೈರ್ಯ, ಸಾಹಸದ ಸ್ವಭಾವ ಹಾಗೂ ಸಾಹಿತ್ಯ, ಕಲೆಗಳಲ್ಲಿ ಆತನಿಗಿದ್ದ ಅಭಿರುಚಿ ಇವುಗಳನ್ನೆಲ್ಲ ತಿಮ್ಮರಸನು ಮೆಚ್ಚಿಕೊಂಡಿದ್ದನು. “ಶಕ್ತಿವಂತರಾದ ಶತ್ರುಗಳಿಂದ ರಾಜ್ಯವನ್ನು ಎಂಟು ವರ್ಷದ ಹುಡಗ ರಕ್ಷಿಸಲಾರ. ಪರಾಕ್ರಮಿ ಕೃಷ್ಣದೇವರಾಯನೇ ಈ ಕಾರ್ಯಕ್ಕೆ ಸಮರ್ಥ. ಇಂಥವನನ್ನು ಹೇಗೆ ಕೊಲ್ಲಿಸುವುದು?” ಎಂದು ಯೋಚನೆ ಇಟ್ಟುಕೊಂಡಿತು.

ತಿಮ್ಮರಸ ಬಹಳ ಯೋಚನೆಮಾಡಿ ಒಂದು ತೀರ್ಮಾನಕ್ಕೆ ಬಂದನು.

“ಆಗಲಿ ಸಾಮ್ರಾಟರೇ, ತಮ್ಮ ಇಚ್ಛೆಯಂತೆ ನಾಳೆ ಬೆಳಗಾಗುವುದರೊಳಗಾಗಿ ಕೃಷ್ಣದೇವರಾಯನನ್ನು ಇಲ್ಲದಂತೆ ಮಾಡುತ್ತೇನೆ” ಎಂದು ತಿಮ್ಮರಸ ಹೇಳಿದ.

ತಿಮ್ಮರಸ ಮನೆಗೆ ಬಂದು ಎಲ್ಲ ಸಮಾಚಾರವನ್ನೂ ಪತ್ನಿಗೂ ಕೃಷ್ಣದೇವರಾಯನಿಗೂ ತಿಳಿಸಿದ. ಕೃಷ್ಣದೇವರಾಯ “ನಾನು ರಾಜ್ಯವನ್ನೇ ಬಿಟ್ಟು ಜೋಗಿಯಾಗಿ ಹೋಗುತ್ತೇನೆ” ಎಂದ. ಆದರೆ ಹಿರಿಯರ ಸಲಹೆಯಂತೆ ಕೂಡಲೇ ಕೃಷ್ಣದೇವರಾಯನನ್ನು ರಹಸ್ಯವಾಗಿ ಚಂದ್ರಗಿರಿಗೆ ಕಳುಹಿಸಿಕೊಟ್ಟನು. ಮರುದಿನದ ಹೊತ್ತಿಗೆ ವೀರನರಸಿಂಹನಿಗೆ ಅರ್ಧ ಜ್ಞಾನದ ಸ್ಥಿತಿ. ಆಗ ತಿಮ್ಮರಸ ಕೃಷ್ಣದೇವರಾಯನ ಕಣ್ಣುಗಳೆಂದು ಹೇಳಿ ಕುರಿಯ ಕಣ್ಣುಗಳನ್ನು ತೋರಿಸಿ ರಾಯನ ಅವತಾರ ಮುಗಿಯಿತಿಂದು ಸಮಾಧಾನಪಡಿಸಿದ. ದೊರೆ ಕಣ್ಮುಚ್ಚಿದ.

ಅಶ್ವಾರೋಹಿ

ಒಂದು ಮುಂಜಾವಿನ ನಸುಬೆಳಕಿನಲ್ಲಿ ವಿಜಯನಗರದ ಅರಮನೆಯ ಹೊರ ಕೋಟೆಯ ಮಹಾದ್ವಾರದ ಬಳಿ, ಡೋಮಿಂಗೋ ಪೇಸ್ ಎಂಬ ಪೋರ್ಚುಗೀಸನೊಬ್ಬ ಕೃಷ್ಣದೇವರಾಯನನ್ನು ಕಾಣಬೇಕೆಂದು ಕಾಯುತ್ತಿದ್ದ.

ಒಂದು ಸುಂದರವಾದ ಬಿಳಿಯ ಕುದುರೆ ಒಳಕೋಟೆಯಿಂದ ಹೊರಬರುವುದು ಕಾಣಿಸಿತು. ಕುದುರೆಯ ಮೇಲಿನ ಕೃಷ್ಣದೇವರಾಯನ ಕಣ್ಣು ವಿದೇಶಿಯನತ್ತ ಹರಿಯಿತು. ಕೂಡಲೇ ಪೇಸ್ ತನ್ನ ದೇಶದ ಪದ್ಧತಿಯಂತೆ ಮಂಡಿಯೂರಿ ಮುಜರೆ ಮಾಡಿ ಎದ್ದುನಿಂತು ಮತ್ತೆ ನೋಡತೊಡಗಿದ.

ಸುಂದರವಾದ ಕುದುರೆಯ ಮೇಲೆ ಕೃಷ್ಣದೇವರಾಯ

ಅಷ್ಟು ಎತ್ತರವಲ್ಲದ ಪರಿಪುಷ್ಪ ಆಕಾರ. ತಿಳಿಗೆಂಪು ಮೈಬಣ್ಣ. ಮುಖದಲ್ಲಿ ಅಸ್ಪಷ್ಟವಾಗಿ ಕಾಣುವ ಮೈಲಿಯ ಕಲೆಗಳು. ನಿಯಮಿತ ವ್ಯಾಯಾಮದಿಂದ ಹುರಿಕಟ್ಟಾಗಿ ಕಾಣುವ ತೋಳುಗಳು, ತೊಡೆಗಳು, ಹರವಾದ ಎದೆ. ನೋಡಿದವರನ್ನು ಸೆರೆ ಹಿಡಿದು ನಿಲ್ಲಸುವ ಕಣ್ಣ ಕಾಂತಿ. ಮೈಗೆ ಹತ್ತಿಕೊಂಡಂತಿದ್ದ ತೆಳುವಾದ ಬಿಳಿಯ ನಿಲುವಂಗಿ. ಸೂರ್ಯೋದಯಕ್ಕೆ ಮೂರು ತಾಸುಗಳಿರುವಾಗಲೇ ಎದ್ದು ಗರಡೀ ಮನೆಯಲ್ಲಿ ವ್ಯಾಯಾಮವನ್ನು ಮಾಡಿ, ಜಟ್ಟಿಗಳೊಂದಿಗೆ ಕುಸ್ತಿಯಾಡಿ, ಯೋಧ ಸರದಾರರೊಂದಿಗೆ ಕತ್ತಿವರಸೆ ಮುಂತಾದವನ್ನು ರೂಢಿಸಿಕೊಂಡು, ಆಮೇಲೆ ಬಲಿಷ್ಠ ಜಟ್ಟಿಗಳಿಂದ ಮೈಗೆಲ್ಲ ಎಣ್ಣೆ ಹಚ್ಚಿಸಿ ತಿಕ್ಕಿಸಿಕೊಂಡು, ಆ ಎಣ್ಣೆ ಆರಿ ಬೆವರು ಬರುವಂತೆ ಸೂರ್ಯೋದಯವಾಗುವವರೆಗೆ ಕುದುರೆ ಸವಾರಿ ಮಾಡುವುದು ಕೃಷ್ಣದೇವರಾಯನ ಪರಿಪಾಠವಾಗಿತ್ತು.

ಅದೇ ಆಗ ಇಪ್ಪತ್ತರ ಗಡಿ ದಾಟಿದ್ದ ತರುಣ ಕೃಷ್ಣದೇವರಾಯ ಯೌವನ, ಉತ್ಸಾಹ, ಸಾಹಸಗಳಿಂದ ತುಂಬಿ ತುಳುಕುತ್ತಿದ್ದ. ಅಷ್ಟೇ ಸುಂದರವಾದ ಬಿಳಿಯ ಕುದುರೆ.

“ಯಾರು ನೀವು?” ಮಹಾರಾಜ ನಯವಾಗಿ ಕೇಳಿದ.

ಪೇಸ್ ಸಾವರಿಸಿಕೊಂಡು ತನ್ನ ಹೆಸರು, ದೇಶವನ್ನು ತಿಳಿಸಿದ.

“ಅರಮನೆಯಲ್ಲಿ ಕಾಣಿರಿ” ಎಂದು ಸ್ವಲ್ಪ ತಲೆ ಅಲುಗಿಸಿ, ಕುದುರೆಯ ಕಾಲು ಮೀಟಿದ. ಕುದುರೆ ನೆಗೆಯಿತು. ಪೇಸ್‌‌ಗೆ ಆಶ್ಚರ್ಯವು ಆಗಿತ್ತು. ಆನಂದವೂ ಆಗಿತ್ತು. ವಿದೇಶಿಯರಲ್ಲಿ ಸಹ ಇಷ್ಟು ಸೌಜನ್ಯ ತೋರಿಸುವನಲ್ಲ ಎಂದು.

ಮದುವೆ, ಪಟ್ಟಾಭಿಷೇಕ

ಒಮ್ಮೆ ಉಷಃಕಾಲದಲ್ಲಿ ಕೃಷ್ಣದೇವರಾಯ ಹೀಗೆ ಹೊರಟಾಗ ಒಬ್ಬಳು ಬಹು ಸುಂದರ ಯುವತಿಯನ್ನು ಕಂಡ.

ಆ ಯುವತಿ ತಿಪ್ಪಾಸಾನಿ ಎಂಬ ವೇಶ್ಯೆಯ ಸಾಕು ಮಗಳು. ಹೆಸರು ನಾಗಾಂಬಿಕೆ. ಚಿನ್ನಾ ಎಂಬುದು ಅವಳ ಅಕ್ಕರೆಯ ಹೆಸರು. ವಯಸ್ಸು, ರೂಪ, ನಡತೆ, ಬುದ್ಧಿ, ವಿದ್ಯೆ ಎಲ್ಲದರಲ್ಲಿಯೂ ಅವಳು ಚಿನ್ನವೇ. ರಾಜ ಅವಳನ್ನು ಮದುವೆಯಾಗಬಯಸಿದ. ಆದರೆ ಚಿನ್ನಾದೇವಿಯನ್ನು ತಮ್ಮ ರಾಣಿ ಎಂದು ಜನ ಒಪ್ಪುವರೇ? ತಿಮ್ಮರಸ ಬಹಳ ತಾಳ್ಮೆ ಹಾಗೂ ಯುಕ್ತಿಯಿಂದ ಕೃಷ್ಣದೇವರಾಯನ ಮನವೊಲಿಸಬೇಕಾಯಿತು. ಚಿನ್ನಾದೇವಿಯನ್ನು ಸಹ ರಾಣಿಯಾಗಿ ಪರಿಗ್ರಹಿಸಬಹುದೆಂಬ ಭರವಸೆ ಮೇಲೆ ದಳಪತಿಕುಮಾರ ವೀರಯ್ಯನ ಮಗಳಾದ ತಿರುಮಲಾಂಬೆಯೊಡನೆ ಕೃಷ್ಣದೇವರಾಯನ ವಿವಾಹವಾಯಿತು.

ಇಮ್ಮಡಿ ವೀರನರಸಿಂಹನ ಮರಣಾನಂತರ ಕೃಷ್ಣದೇವರಾಯ ಪಟ್ಟಕ್ಕೆ ಬರಲು ಶ್ರಮವಾಗಲಿಲ್ಲ. ಸಾಳುವ ಅರಸರ ಕಾಲದಿಂದಲೂ ಮಂತ್ರಿಯಾಗಿ ಕೆಲಸ ಮಾಡುತ್ತ ಬಂದಿದ್ದ ತಿಮ್ಮರಸನ ದೂರದೃಷ್ಟಿ ಹಾಗೂ ಜಾಣ್ಮೆಗಳಿಂದ ಕರ್ನಾಟಕಕ್ಕೂ ಭಾರತಕ್ಕೂ ಒಬ್ಬ ಮಹಾ ಚಕ್ರವರ್ತಿ ದೊರಕಿದಂತಾಯಿತು. ಕೃಷ್ಣದೇವರಾಯನ ಪಟ್ಟಾಭಿಷೇಕ ಹಂಪೆಯ ವಿರೂಪಾಕ್ಷ ದೇವಾಲಯದಲ್ಲಿಯೇ ಬಹುವೈಭವದಿಂದ ಜರುಗಿತು.

ಹಿಂದೆ ವಿದ್ಯಾರಣ್ಯರಿದ್ದಂತೆ ಧಾರ್ಮಿಕ ಮತ್ತು ಆಧ್ಯಾತ್ಮಕ ಬೆಂಬಲವನ್ನು ಕೊಡುತ್ತ ಮಹಾಪುರುಷರಾದ ವ್ಯಾಸರಾಯ ಯತಿಗಳು ಈಗ ರಾಜಧಾನಿಯಲ್ಲಿಯೇ ಇರುತ್ತಿದ್ದರು.

ಪಟ್ಟಾಭಿಷೇಕದ ನೆನಪಿಗಾಗಿ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ರಂಗನಾಥ ದೇವಾಲಯವೂ ಮತ್ತು ಗೋಪುರವೂ ನಿರ್ಮಾಣವಾದವು.

ಸಿದ್ಧತೆ

ಕೃಷ್ಣದೇವರಾಯ ಅಧಿಕಾರ ವಹಿಸಿಕೊಂಡ ಕೂಡಲೇ ತಮ್ಮನಾದ ಅಚ್ಚುತರಾಯನನ್ನು, ಅಣ್ಣನ ಮಕ್ಕಳನ್ನು ಚಂದ್ರಗಿರಿಗೆ ಕಳಿಸಿ ಅವರಿಂದ ಅಪಾಯ ಒದಗದಂತೆ ವ್ಯವಸ್ಥೆ ಮಾಡಿದ. ಮೊದಲ ವರ್ಷ ಹದಿನೆಂಟು ಪ್ರಾಂತಗಳ ಮಹಾಮಂಡಲೇಶ್ವರರನ್ನು ಕರೆಸಿಕೊಂಡು ಅರಮನೆಯಲ್ಲಿ ಅವರಿಗೆ ಆತಿಥ್ಯ ನೀಡಿ ಸಾಮ್ರಾಜ್ಯದ ಧ್ಯೇಯ, ಧೋರಣೆಗಳ ಬಗ್ಗೆ ಮತ್ತು ಅವರು ಮಾಡಬೇಕಾದ ಸಿದ್ಧತೆಯ ಬಗ್ಗೆ ಸೂಚನೆಗಳನ್ನು ಕೊಟ್ಟು ಕಳಿಸಿದ. ಗೋವೆಯನ್ನು ಆಕ್ರಮಿಸಿದ ಪೋರ್ಚುಗೀಸರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ಸುಲ್ತಾನರಿಗೆ ಅವರ ನೆರವು ದೊರೆಯದಂತೆ ಮಾಡಿದ. ಸೈನ್ಯಕ್ಕೆ ಕುದುರೆಗಳನ್ನೂ ತೋಪುಖಾನೆಗಳನ್ನೂ ಒದಗಿಸಿದ.

ಆದರೂ ರಾಯನಿಗೆ ಮನಶ್ಯಾಂತಿ ಇಲ್ಲ.

ಒಂದು ದಿನ ತಿಮ್ಮರಸರೊಡನೆ ಮಾತನಾಡುತ್ತಾ ಹೇಳಿದ “ಅಪ್ಪಾಜಿ ನಮ್ಮ ಪೂರ್ವಿಕರು ನಮಗೊಪ್ಪಿಸಿದ ಹೊಣೆ ಮರೆಯುತ್ತಿದ್ದೇವೆ ಎನ್ನಿಸುತ್ತದೆ. ಕಲಿಂಗದ ಗಜಪತಿ ಪ್ರತಾಪರುದ್ರನೂ ಗೋಲ್ಕಂಡ ಸುಲ್ತಾನರೊಂದಿಗೆ ಸೇರಿ ನಮ್ಮ ಪೂರ್ವ ಪ್ರಾಂತಗಳಲ್ಲಿ ಹೆಜ್ಜೆ ಇಟ್ಟಿದ್ದಾನೆ. ಈ ಗಜಪತಿರಾಯನಿಗೆ ಬೇಗ ಬುದ್ಧಿ ಕಲಿಸಬೇಕು ನೋಡಿರಿ. ತನ್ನ ಹಿತ, ದೇಶ ಹಿತ, ತನ್ನ ಧರ್ಮ, ಸಂಸ್ಕೃತಿಯ ಹಿತ ಇದಾವುದರ ಕಲ್ಪನೆಯೂ ಅವನಿಗೆ ಇದ್ದಂತಿಲ್ಲ” ಎಂದ ಕೃಷ್ಣದೇವರಾಯ.

“ನಾವು ಮೊದಲು ಉಮ್ಮೆತ್ತೂರಿನ ಚಿಕ್ಕರಾಯನನ್ನು ಹತ್ತಿಕ್ಕಬೇಕು. ಅವನು ತಾನು ಸ್ವತಂತ್ರ ರಾಜ ಎಂದು ಹೇಳಿಕೊಳ್ಳುತ್ತಿದ್ದಾನಂತೆ” ಎಂದ ತಿಮ್ಮರಸ.

ಇಮ್ಮಡಿ ವೀರನರಸಿಂಹನ ಅಸಾಮರ್ಥ್ಯದಿಂದಾಗಿ ವಿಜಯನಗರಕ್ಕೆ ಹಲವು ಮಂದಿ ವಿರೋಧಿಗಳಿಂದ ಅಪಾಯವಿತ್ತು. ಒಂದೊಂದಾಗಿ ಅಪಾಯಗಳನ್ನು ನಿವಾರಿಸಲು ಪ್ರಾರಂಭಿಸಿದ ಕೃಷ್ಣದೇವರಾಯ.

ಉಮ್ಮೆತ್ತೂರ ದೊರೆ ಚಿಕ್ಕರಾಯ ಕದನದಲ್ಲಿ ಮಡಿದ. ಅವನ ಮಗ ವೀರಪ್ಪ ಒಡೆಯ ಕೃಷ್ಣದೇವರಾಯನ ಸ್ನೇಹವನ್ನು ಬಯಸಿ ಬಂದು ತನ್ನ ಸೀಮೆಯನ್ನು ಮರಳಿ ಪಡೆದ. ಈ ಜಯದಿಂದ ಸಾಮಂತ ರಾಜರಲ್ಲಿ ಕೃಷ್ಣದೇವರಾಯನ ವರ್ಚಸ್ಸು ಹೆಚ್ಚಿತು.

ಪೆನುಕೊಂಡ ಬಿಡುಗಡೆಯಾಯಿತು. ಮಂತ್ರಿ ಕೊಂಡರಸಯ್ಯನ ಮಗ ದೇವರಸಯ್ಯ ಅಲ್ಲಿಯ ರಾಜ್ಯಪಾಲರಾಗಿ ನೇಮಕನಾದ. ಹಲವು ತೆರಿಗೆಗಳನ್ನೆಲ್ಲಾ ಬಿಟ್ಟುಬಿಡಲಾಯಿತು. ಅನೇಕ ದೇವಾಲಯಗಳಿಗೆ, ಅಗ್ರಹಾರಗಳಿಗೆ ದಾನದತ್ತಿಗಳು ದೊರೆತವು. ಜನಸಾಮಾನ್ಯರಲ್ಲಿ ಕೃಷ್ಣದೇವರಾಯನ ಬಗ್ಗೆ ಅಭಿಮಾನ ಹೆಚ್ಚಾಯಿತು.

 

ಚಕ್ರವರ್ತಿ ಕೃಷ್ಣದೇವರಾಯ

ಮಹಾ ದಂಡಯಾತ್ರೆ

ಕೃಷ್ಣದೇವರಾಯನ ಬೆಳೆಯುತ್ತಿರುವ ವರ್ಚಸ್ಸು ಸುಲ್ತಾನರು ಹಾಗೂ ಕಲಿಂಗ ಗಜಪತಿಯ ಸಂಶಯವನ್ನು ಹೆಚ್ಚಿಸಿತು. ಅಹಮ್ಮದನಗರ ಮತ್ತು ಗೋಲ್ಕಂಡದ ಸುಲ್ತಾನರು ಮೊದಲು ಒಳನುಗ್ಗಿ ವಿಜಯನಗರದ ಸೀಮೆಯಲ್ಲಿಯೇ ಯುದ್ಧ ಪ್ರಾರಂಭಿಸಬೇಕೆಂದೂ ಅವರು ಸೋತರೆ ಕೃಷ್ಣಾ ನದಿಯನ್ನು ಖಂಡಿತವಾಗಿ ಕೃಷ್ಣದೇವರಾಯ ದಾಟಿ ಬರುವನೆಂದೂ ಆಗ ಗಜಪತಿ ಪ್ರತಾಪರುದ್ರ ಮೇಲೆ ಬಿದ್ದು ವಿಜಯನಗರದ ಸೈನ್ಯವನ್ನು ಹಣ್ಣು ಮಾಡಬೇಕೆಂದು ಯೋಚನೆ ಮಾಡಿದರು. ಆ ಪ್ರಕಾರ ತಮ್ಮ ಸೈನ್ಯಗಳನ್ನು ಅಲ್ಲಲ್ಲಿ ಶೇಖರಿಸಿದ್ದರು. ಕೃಷ್ಣದೇವರಾಯನ ಗೂಢಾಚಾರರು ಇದನ್ನೆಲ್ಲ ತಿಳಿದು ವರದಿ ಒಪ್ಪಿಸಿದರು.

ಕೃಷ್ಣದೇವರಾಯ ಇನ್ನಷ್ಟು ಸಿದ್ಧತೆ ಮಾಡಿಕೊಂಡ ರಾಜಧಾನಿಯ ಸಂರಕ್ಷಣೆಯ ವ್ಯವಸ್ಥೆಯನ್ನೂ ಮಾಡಿದ. ಅನಂತರ ಬಹಳ ತೀವ್ರಗತಿಯಿಂದ ಗಜಪತಿ ಪ್ರತಾಪ ರುದ್ರನ ಉದಯಗಿರಿ ರಾಜ್ಯದ ಕಡೆಗೆ ದೊಡ್ಡ ಸೈನ್ಯದೊಂದಿಗೆ ಸಾಗಿದ. ೩೪ ಸಾವಿರ ಸೈನಿಕರು, ೮ ನೂರು ಕುದುರೆ ಸವಾರರಿದ್ದರು. ಕೋಟೆಯನ್ನು ಭೇದಿಸುವುದು ಕಷ್ಟವಾಗಿತ್ತು. ಹೊರಗಿನಿಂದ ಏನೂ ಸಾಮಗ್ರಿ ಹೋಗದಂತೆ ಮಾಡಿ ಒಳಗಿರುವವರನ್ನು ಹಸಿವಿನಿಂದ ಹಣ್ಣು ಮಾಡುವುದೊಂದೇ ಉಪಾಯವಾಗಿತ್ತು.

ಮುತ್ತಿಗೆ ಸುಮಾರು ಒಂದೂ ವರೆ ವರ್ಷ ನಡೆಯಿತು.

ಉದಯಗಿರಿ ಕೋಟೆಯ ಒಳಗೆ ಸಂಗ್ರಿಹಿಸಿದ ಆಹಾರವೆಲ್ಲ ತೀರಿತು. ಕೋಟೆ ವಶವಾಯಿತು.

ಕೃಷ್ಣದೇವರಾಯ ವಿಜಯನಗರಕ್ಕೆ ಹಿಂದಿರುಗುವಾಗ ತಿರುಪತಿಗೆ ಹೋಗಿ ದೇವರಿಗೆ ೩೦ ಸಾವಿರ ಚಿನ್ನದ ವರಹಗಳ ಕನಕಾಭಿಷೇಕ ಮಾಡಿಸಿದ. ಉದಯಗಿರಿಯ ವಿಜಯದ ನೆನಪೆಂದು ಉದಯಗಿರಿಯ ದೇವಾಲಯದಲ್ಲಿದ್ದ ಬಾಲಕೃಷ್ಣ ಪ್ರತಿಮೆಯನ್ನು ತರಲು ಹೇಳಿದ್ದ. ಈಗ ಈ ಪ್ರಮುಖ ವಿಜಯದ ಸ್ಮಾರಕವಾಗಿ “ಭುವನವಿಜಯ” ಎಂಬ ಅರಮನೆಯನ್ನೂ ಹಜಾರ ರಾಮಸ್ವಾಮಿ, ವಿಜಯ ವಿಠ್ಠಲ ಹಾಗೂ ಕೃಷ್ಣಸ್ವಾಮಿ ದೇವಾಲಯಗಳನ್ನೂ ಕಟ್ಟಿಸಲು ಪ್ರಾರಂಭಿಸಿದರು. ನಗರದಲ್ಲೆಲ್ಲ ನಿರ್ಮಾಣ ಕಾರ್ಯಗಳು ಪ್ರಾರಂಭವಾದವು.

ಆದರೆ ಕೃಷ್ಣದೇವರಾಯ ಕಲಿಂಗವನ್ನು ಮರೆತಿರಲಿಲ್ಲ. ಎರಡನೆಯ  ದಾಳಿಯನ್ನು ಮೊದಲಿಗಿಂತ ದೊಡ್ಡ ಪ್ರಮಾಣದಲ್ಲಿ ಸಂಘಟಿಸಿದ. ಈ ಸಲ ಮೊದಲ ತುತ್ತಿಗೆ ಕಂದಕೂರು ಕೋಟೆ ಬಿತ್ತು. ಕಲಿಂಗದ ಪ್ರಮುಖ ನಗರವಾದ ಕೊಂಡವೀಡಿನತ್ತ ರಾಯನ ಸೈನ್ಯ ಧಾವಿಸಿತು. ಅದರ ಸಂರಕ್ಷಣೆಗಾಗಿ ಗಜಪತಿ ಪ್ರತಾಪರುದ್ರ ಸ್ವತಃ ೧೩೦೦ ಆನೆ, ೨೦ ಸಾವಿರ ಕುದುರೆ ಹಾಗೂ ಐದು ಲಕ್ಷ ಕಾಲಾಳುಗಳೊಂದಿಗೆ ಧಾವಿಸಿ ಬಂದ. ಎರಡು ಸೈನ್ಯಗಳ ನಡುವೆ ಭಾರಿ ಪ್ರವಾಹದ ನದಿ. ಆದರೂ ಕೃಷ್ಣದೇವರಾಯ ಸ್ವತಃ ಮುಂದುವರಿದು ನದಿ ದಾಟಲು ಸೈನ್ಯಕ್ಕೆ ಆಜ್ಞೆಯಿತ್ತ. ನೀರಿನಲ್ಲಿಯೇ ಕದನ ಪ್ರಾರಂಭವಾಯಿತು. ಅನೇಕ ಸೈನಿಕರು ಹತರಾದರು. ಆದರೂ ವಿಜಯನಗರದ ಸೈನ್ಯದ ಬಹುಭಾಗ ನದಿಯನ್ನು ದಾಟಿ ಕಲಿಂಗ ಸೈನ್ಯವನ್ನು ಎದುರಿಸಿತು. ಭೀಕರ ಕದನವಾಗಿ ಗಜಪತಿ ರಣರಂಗದಿಂದ ಓಡಿಹೋಗಬೇಕಾಯಿತು. ವೈರಿಗಳ ಸಾವಿರಾರು ಆನೆ, ಕುದುರೆಗಳು ಹತವಾದವು. ಯುದ್ಧಮುಗಿದು ಕೊಂಡವೀಡು ಕೋಟೆ ವಶಪಡಿಸಿಕೊಳ್ಳಲು ಮತ್ತೆ ಎರಡು ತಿಂಗಳು ಮುತ್ತಿಗೆ ಹಾಕಿ ಸ್ವತಃ ರಾಯ ಮತ್ತು ತಿಮ್ಮರಸ ಮುಂದುವರಿದರು. ಕೊಂಡವೀಡು ಪತನವಾಯಿತು. ಗಜಪತಿ ಪ್ರತಾಪರುದ್ರನ ಮಗನಾದ ರಾಜಕುಮಾರ ವೀರಭದ್ರನು ರಾಜ್ಯದ ಹಲವು ಪ್ರಮುಖರು ಸೆರೆ ಸಿಕ್ಕರು.

ಕೃಷ್ಣದೇವರಾಯ ಮೂರನೇ ದಾಳಿಯಲ್ಲಿ ಮಿಂಚಿನ ವೇಗದಿಂದ ದಾರಿಯಲ್ಲಿ ಸಿಕ್ಕ ಪ್ರಾಂತಗಳನ್ನೆಲ್ಲ ಆಕ್ರಮಿಸತೊಡಗಿದ. ಈ ನಡುವೆ ಪಕ್ಕದಿಂದ ಸುಲ್ತಾನರುಗಳ ಸೈನಿಕರು ಸುತ್ತುವರಿದಿದ್ದಾರೆಂದು ಬೀದರ್ ಪ್ರಾಂತದಲ್ಲೊಮ್ಮೆ ನುಗ್ಗಿ ಬಂದ. ಅತ್ಯಂತ ಅನಿರೀಕ್ಷಿತವಾಗಿ ಕೊಂಡಪಲ್ಲಿಯ ರಾಜಧಾನಿಯಾಗಿತ್ತು. ಮೂರು ತಿಂಗಳ ಮುತ್ತಿಗೆಯಲ್ಲಿ ಆ ಮುಖ್ಯ ಕೋಟೆ ವಶವಾಯಿತು. ಒಳಗಿದ್ದ ಪ್ರಹರಸೇನ, ಸರೀಶಚಂದ್ರ, ಬಿಜಲಿಖಾನ ಮುಂತಾದ ಪ್ರಮುಖ ನಾಯಕರೆಲ್ಲ ಸೆರೆಯಾಳಾದರು. ಗಜಪತಿ ಪ್ರತಾಪರುದ್ರನ ರಾಣಿ ಹಾಗೂ ಇನ್ನೊಬ್ಬ ಮಗ ರಾಮಚಂದ್ರದೇವ ಇಲ್ಲಿ ಸೆರೆಸಿಕ್ಕರು. ಆಮೇಲೆ ವಿಜಯದ ಮೇಲೆ ವಿಜಯಗಳಾದವು. ಸಿಂಹಾಚಲದ ದೇವಸ್ಥಾನಕ್ಕೆ ಮತ್ತು ಧರಣೀಕೋಟೆಯ ಅಮರೇಶ್ವರ ದೇವಸ್ಥಾನಕ್ಕೆ ಕೃಷ್ಣದೇವರಾಯಯನೂ ಆತನ ರಾಣಿಯರೂ ಹೇರಳವಾಗಿ ದಾನ ದತ್ತಿಗಳನ್ನು ಕೊಟ್ಟರು. ಈಗ ಗಜಪತಿ ಪ್ರತಾಪರುದ್ರ, ಪ್ರತಾಪವನ್ನೆಲ್ಲ ಕಳೆದುಕೊಂಡು ಊರಿಂದೂರಿಗೆ ತಲೆ ತಪ್ಪಿಸಿಕೊಳ್ಳಲು ಓಡತೊಡಗಿದ.

ನಾಲ್ಕು ವರ್ಷಗಳ ಅವಧಿಯಲ್ಲಿ ಮೂರು ಮಹಾದಂಡಯಾತ್ರೆಗಳು. ಒಂದೂವರೆ ಸಾವಿರ ಮೈಲುಗಳಷ್ಟು ದೂರ ವೈರಿಗಳ ನಾಡಿನಲ್ಲಿ ಮೂರು ನಾಲ್ಕು  ಲಕ್ಷ ಸೈನಿಕರನ್ನೂ ಸಾವಿರಾರು ಆನೆಗಳು, ಕುದುರೆಗಳನ್ನೂ, ಅವಕ್ಕೆಲ್ಲ ಬೇಕಾಗುವ ಸಾಮಗ್ರಿ, ಶಸ್ತ್ರಾಸ್ತ್ರಗಳನ್ನೂ ಸಾಗಿಸುವ ವ್ಯವಸ್ಥೆ ಮಾಡಬೇಕಾಗಿತ್ತು. ಈ ಎಲ್ಲ ಕೆಲಸಕ್ಕೆ ಬೇಕಾಗುವ ಹಣವನ್ನು ಸಂಪಾದಿಸಬೇಕಾಗಿತ್ತು. ಹೆಜ್ಜೆ ಹೆಜ್ಜೆಗೆ ಕದನ, ಅದನ್ನೆಲ್ಲ ಎದುರಿಸಿ ಗೆದ್ದು ಮುಂದೆ ಸಾಗುವ ಧೈರ್ಯ ಅಗತ್ಯವಾಗಿತ್ತು. ಜೊತೆಗೆ ಹಿಂದಿನಿಂದ ದಾಳಿಯಾಗದಂತೆ ಬೀದರ್, ಗೋಲ್ಕಂಡ ಸೈನ್ಯಗಳನ್ನು ಅಲ್ಲಲ್ಲಿ ನಿಯೋಜಿಸಲಾಯಿತು. ಕೃಷ್ಣದೇವರಾಯ ಇಷ್ಟನ್ನೂ ಸಾಧಿಸಿದ. ಇಂತಹ ವಿಜಯಯಾತ್ರೆಗೆ ಸಾವಿರಾರು ವಿಷಯಗಳನ್ನು ಯೋಚನೆ ಮಾಡಬೇಕು, ಎಲ್ಲ ಕಾಲಕಾಲಕ್ಕೆ ಸರಿಯಾಗಿ ನಡೆಯಬೇಕು. ಕೃಷ್ಣದೇವರಾಯ ಎಂತಹ ಸಮರ್ಥ ಆಡಳಿತಗಾರ ಎಂಬುದು ಇದರಿಂದ ಗೊತ್ತಾಗುತ್ತದೆ. ವಿಜಯವಾಡದಿಂದ ಆರಂಭಿಸಿ ಪೂರ್ವ ಕರಾವಳೀ ಪ್ರಾಂತಗಳೆಲ್ಲ ಕೃಷ್ಣದೇವರಾಯ ಅಧಿಪತ್ರದಲ್ಲಿ ಸೇರಿದವು.

ಜಗನ್ಮೋಹಿನಿ

ರಾಜ್ಯವನ್ನೂ ಹೆಂಡತಿ ಮಕ್ಕಳನ್ನೂ ಬಿಟ್ಟುಹೋದ ಗಜಪತಿ ರಾಜನಿಗೆ ತನಗೆ ಯಾರ ನೆರವೂ ದೊರೆಯುವುದಿಲ್ಲ ಎಂದು ಖಚಿತವಾಯಿತು. ಹೆಂಡತಿ ಮಕ್ಕಳ ಚಿಂತೆ ಕವಿಯಿತು. ಕಡೆಗೆ ಸಂಧಿಗಾಗಿ ಕಾಗದ ಬರೆದ.

ಕೃಷ್ಣದೇವರಾಯನೂ ತಿಮ್ಮರಸರೂ ಬುದ್ದಿವಂತರು, ಉದಾರಿಗಳು. ಗಜಪತಿರಾಜನು ಸೋತಿದ್ದರೂ ಅವನ ಬೆಂಬಲದಿಂದ ವಿಜಯನಗರಕ್ಕೆ ಲಾಭವುಂಟು ಎಂದು ಗುರುತಿಸಿದರು. ತಿಮ್ಮರಸನೇ ಗಜಪತಿಯನ್ನು ಕಂಡ.

“ತಮ್ಮಗಾಗಲಿ, ತಮ್ಮ ಹೆಂಡತಿ ಮಕ್ಕಳಾಗಲಿ ಅಪಾಯವಾಗುವುದು ಪ್ರಭುಗಳಿಗೆ ಇಷ್ಟವಿಲ್ಲ” ತಿಮ್ಮರಸ ಹೇಳಿದ. “ಹಿಂದು ಧರ್ಮ ಮತ್ತು ಸಂಸ್ಕೃತಿಗಳ ರಕ್ಷಣೆಗೇ ಅವರು ಮುಡಿಪು. ಈ ಕೆಲಸದಲ್ಲಿ ನಾವು ಅವರಿಗೆ ನೆರವಾಗಬೇಕು ಎಂದೇ ಅವರ ಅಪೇಕ್ಷೆ. ತಮ್ಮ ರಾಜ್ಯವನ್ನೆಲ್ಲ ತಾವೇ ವಹಿಸಿಕೊಳ್ಳಬೇಕು”.

ಗಜಪತಿರಾಜನಿಗೆ ಆಶ್ಚರ್ಯವಾಯಿತು.

“ಇದು ನಿಜವೇ?” ಎಂದು ಕೇಳಿದ.

“ನಿಸ್ಸಂದೇಹವಾಗಿ. ತಮ್ಮ ಹೆಂಡತಿ ಮಕ್ಕಳು ಸುಖವಾಗಿದ್ದಾರೆ. ತಾವು ಅವರಿವರ ಮಾತನ್ನು ಕೇಳಿಕೊಂಡು ನಮ್ಮ ಪ್ರಭುಗಳ ವಿರುದ್ಧ ಕತ್ತಿ ಮಸೆಯಬಾರದು ಎಂದಷ್ಟೇ ಅವರ ಅಪೇಕ್ಷೆ.”

ಗಜಪತಿರಾಜ ಆ ಔದಾರ್ಯಕ್ಕೆ ಮೆಚ್ಚಿದ. ಕೃಷ್ಣಾ ನದಿ ಇಬ್ಬರ ರಾಜ್ಯಗಳ ನಡುವಣ ಇಲ್ಲೆಯಾಗಬೇಕೆಂದು ಒಪ್ಪಂದವಾಯಿತು.

ಇಂತಹ ಶೂರ, ಉದಾರ ತರುಣನ ನಂಟನ್ನು ಬಯಸಿ ಗಜಪತಿರಾಜನು ತನ್ನ ಮಗಳು ಜಗನ್ಮೋಹಿನಿಯನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆ ಮಾಡಿದ.

ಪರಿಪೂರ್ಣ ಸಾಮ್ರಾಟ

ರಾಜನಾದವನು ಶತ್ರುಗಳಿಂದ ರಾಜ್ಯವನ್ನು ರಕ್ಷಿಸಬೇಕು. ಮತ್ತೆ ಮತ್ತೆ ಇತರ ರಾಜ್ಯಗಳವರು ತನ್ನ ರಾಜ್ಯವನ್ನು ಮುತ್ತಿ ಪ್ರಜೆಗಳಿಗೆ ಕೋಟಲೆಯಾಗದಂತೆ ತನ್ನ ಪೌರಷವನ್ನು ಮೆರೆಯಬೇಕು. ಆದರೆ ಇಷ್ಟೇ ಸಾಲದು. ಪ್ರಜೆಗಳ ಹಿತ, ಸುಖ ಇವೂ ಮುಖ್ಯ. ಪ್ರಜೆಗಳು ನೆಮ್ಮದಿಯಿಂದ, ಸಂತೋಷದಿಂದ ಇದ್ದರೆ ರಾಜ ನಿಜವಾಗಿ ದೊಡ್ಡವನು. ಕೃಷ್ಣದೇವರಾಯನ ಆಡಳಿತದಲ್ಲಿ ರಾಜಧಾನಿಯ ಸೌಂದರ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವಂತಹ ಅನೇಕ ದೇವಾಲಯಗಳ, ಕೆರೆ, ಕಾಲುವೆಗಳ ನಿರ್ಮಾಣ ಪ್ರಾರಂಭವಾದವು. ವಿರೂಪಾಕ್ಷ ದೇವಾಲಯದ ಕಲ್ಯಾಣ ಮಂಟಪ, ಮಹಾಗೋಪುರ ಸಿದ್ಧವಾದವು. ಖಾಸಗಿ ಉಪಯೋಗಕ್ಕಾಗಿ “ಮಲಯಕೂಟ”ವೆಂಬ ಸುಂದರವಾದ ಅರಮನೆ ನಿಮಾರ್ಣವಾಗಯಿತು. ಸಾಮ್ರಾಟನ ಅಭಿರುಚಿಯನ್ನು ತಿಳಿದಿದ್ದ ಸಾಮಂತರೂ ದಳವಾಯಿಗಳೂ ಡಣಾಯಕರೂ ತಮ್ಮ ತಮ್ಮ ಪ್ರದೇಶಗಳಲ್ಲಿ ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಜಲಾಶಯಗಳ ನಿರ್ಮಾಣಗಳಲ್ಲಿ ತೊಡಗಿದರು. ಗೌಡರೂ ಪಾಂಚಾಲರೂ ಪಟ್ಟಣ ಸ್ವಾಮಿಗಳೂ ಮುಂದಾಗಿ ಸಾರ್ವಜನಿಕ ಸೌಕರ್ಯದ ಕಾರ್ಯಗಳಲ್ಲಿ ಪಾಲುಗೊಂಡರು. ಕೃಷ್ಣದೇವರಾಯ ಸ್ವತಃ ತನ್ನ ತಾಯಿಯ ಸ್ಮರಣೆಗಾಗಿ ನಾಗಲಾಪುರ (ಈಗಿನ ಹೊಸಪೇಟೆ) ವಿಸ್ತರಣವನ್ನು ಕಟ್ಟಿಸಿದ.

ಅಲ್ಲದೆ ಅಲ್ಲಿ ತುಂಗಭದ್ರಾ ನದಿಗೆ ಅಣೆಕಟ್ಟು ಹಾಕಿ ದೊಡ್ಡ ನೀರಾವರಿ ಜಲಾಶಯವನ್ನು ಪೋರ್ಚುಗೀಸ್ ಇಂಜಿನಿಯರ್ ಜೋವಾಡಿ ಲಾಪೊಂಟಿ ಎಂಬುವನ ಸಲಹೆಯಂತೆ ನಿರ್ಮಿಸಲು ಪ್ರಾರಂಭಿಸಿದ. ಬಸವನ ಕಾಲುವೆ, ತುರ್ತು ಕಾಲುವೆಗಳು ನೀರಾವರಿಗೆ ತಯಾರಾದವು.

ಜನರನ್ನು ಒಂದುಗೂಡಿಸುವುದರಲ್ಲಿ ಧರ್ಮ ಬಹುಪ್ರಬಲವಾದ ಶಕ್ತಿಯಂಬುದು ಅನೇಕ ದಾಳಿಗಳಲ್ಲಿ ಕೃಷ್ಣದೇವರಾಯನಿಗೆ ಮನವರಿಕೆಯಾಗಿತ್ತು. ಅದಕ್ಕಾಗಿಯೇ ಧಾರ್ಮಿಕ ಸಂಸ್ಥೆಗಳಿಗೆ ಭದ್ರತೆ ಇರಬೇಕೆಂದು ರಾಜ್ಯಾದ್ಯಂತ ಸಾವಿರಾರು ದೇವಾಲಯಗಳಿಗೂ ಅಗ್ರಹಾರಗಳಿಗೂ ಹೇರಳವಾಗಿ ದಾನದತ್ತಿಗಳ ವ್ಯವಸ್ಥೆ ಮಾಡಿದ. ಸಾಮ್ರಾಜ್ಯದಲ್ಲೆಲ್ಲ ಸಂಚರಿಸಿ ವ್ಯಾಸರಾಯರು ಏಳು ನೂರಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಆಂಜನೇಯನ ಪ್ರತಿಷ್ಠೆ ಮಾಡಿ ಜನರಲ್ಲಿ ಧರ್ಮಜಾಗೃತಿಯುಂಟು ಮಾಡಿದರು.

ತಂತ್ರನಾಯಕನೆಂದು ಬಿರುದು ಪಡೆದ ಸಾಳುವ ತಿಮ್ಮರಸ ಮಹಾಪ್ರಧಾನಿಯಾದ. ಕೃಷ್ಣದೇವರಾಯ ಬೇರೆ ಬೇರೆ ಪ್ರಾಂತಗಳಿಗೆ ದಕ್ಷರಾದ ಪ್ರಾಂತಾಧಿಕಾರಿಗಳನ್ನು ನೇಮಿಸಿದ. ಪೂರ್ವ ಪ್ರಾಂತಗಳ ದಂಡಯಾತ್ರೆಗಳಿಂದ ಧನ ಹಾಗೂ ಪ್ರಾಣಹಾನಿ ಆಗಿತ್ತಾದರೂ ಹೋದಲ್ಲೆಲ್ಲಾ ಜಯ ಸಂಪಾದಿಸಿದ ಕಾರಣ ಶತ್ರುಗಳ ಸಂಪತ್ತು, ಶಸ್ತ್ರಾಸ್ತ್ರ, ಕುದುರೆಗಳು ಹೇರಳವಾಗಿ ರಾಯನ ಕೈವಶವಾಗಿತ್ತು. ಸಾಮ್ರಾಜ್ಯದಲ್ಲಿಯೂ ಈಗ ತೆರಿಗೆ ಸುಧಾರಣೆ ಮತ್ತು ಬಿಗಿಯಾದ ಆಡಳಿತದಿಂದ ವ್ಯವಸ್ಥಿತವಾಗಿ ವರಮಾನ ಹೆಚ್ಚಿ ಖಜಾನೆ ಸಂಪದ್ಭರಿತವಾಯಿತು. ಒಳನಾಡಿನಲ್ಲಿ ಮತ್ತು ವಿದೇಶಗಳೊಂದಿಗೆ ವ್ಯಾಪಾರ ಹೆಚ್ಚಿತು. ದೇಶದಲ್ಲಿ ಶಾಂತಿ, ನಿರ್ಭೀತಿ ನೆಲಸಿದವು. ಮುತ್ತು-ರತ್ನಗಳನ್ನು ರಾಜಧಾನಿಯ ಬೀದಿಗಳಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದರು. ಕಳವು, ದರೋಡೆ ಮಾಡುವವರಿಗೆ ಶಿಕ್ಷೆ ಎಂದರೆ ಕೈಯನ್ನು ಕಾಲನ್ನು ಕತ್ತರಿಸುವುದು. ಇದರಿಂದ ಜನ ಅಂಥ ಅಪರಾಧ ಮಾಡಲು ಹೆದರುತ್ತಿದ್ದರು. ರಾಜಧಾನಿಯಲ್ಲಿದ್ದ ನರ್ತಕಿಯರು, ಗಾಯಕಿಯರು ಹಾಕಿಕೊಳ್ಳುತ್ತಿದ್ದ ಭಾರಿ ಬೆಲೆಯ ಆಭರಣಗಳನ್ನು ನೋಡಿಯೇ ವಿದೇಶೀ ಪ್ರವಾಸಿಗಳು ಬೆರಗಾಗಿ ಕೃಷ್ಣದೇವರಾಯನ ಶ್ರೀಮಂತಿಕೆಯನ್ನು ಹೊಗಳುತ್ತಿದ್ದರು.

ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದ್ದವು. ರಾಜನಿಗೆ ಸ್ವತಃ ಸಾಹಿತ್ಯ, ಸಂಗೀತಗಳಲ್ಲಿ ಅಭಿರುಚಿ. ಇದರಿಂದ ಇವೆಲ್ಲ ಸಹಜವಾಗಿ ಅಭಿವೃದ್ಧಿ ಹೊಂದಿದವು. ನವರಾತ್ರಿಯ ವಿಶೇಷ ದರ್ಬಾರು ಹಾಗೂ ದಸರಾ ಉತ್ರವವನ್ನು ಕೃಷ್ಣದೇವರಾಯ ವಿಜಯದ ನೆನಪಿಗಾಗಿ ಪ್ರಾರಂಭಿಸಿದ. ಎಲ್ಲ ಕಡೆಯಿಂದ ಲಕ್ಷ ಸಂಖ್ಯೆಯಲ್ಲಿ ಸಾಮಂತರೂ ಸರದಾರರೂ ಯೋಧರೂ ಜಟ್ಟಿಗಳೂ ಕಲಾವಿದರೂ ವಿದ್ವಾಂಸರೂ ಸೇರುತ್ತಿದ್ದರು. ತಮ್ಮ ತಮ್ಮ ಸಾಹಸಗಳನ್ನೂ ಕಲಾ ನೈಪುಣ್ಯಗಳನ್ನೂ ಪ್ರದರ್ಶನ ಮಾಡಿ ಬಹುಮಾನ ಪಡೆಯುತ್ತಿದ್ದರು.

ವಿದ್ವತ್ ಸಭೆಗಳು

ಕೃಷ್ಣದೇವರಾಯನ ಆಸ್ಥಾನದಲ್ಲಿ ವಿವಿಧ ಭಾಷೆಗಳ ಅನೇಕ ಕವಿಗಳೂ ವಿದ್ವಾಂಸರೂ ಸೇರಿದರು. ವ್ಯಾಸರಾಯರು ಸ್ಥಾಪಿಸಿದ ಸರಸ್ವತೀ ವಿದ್ಯಾಪೀಠ ಈಗ ವಿಶ್ವ ವಿದ್ಯಾಲಯವಾಗಿ ವಿವಿಧ ಶಾಸ್ತ್ರಗಳ ಅಧ್ಯಯನ ಕೇಂದ್ರವಾಯಿತು. ದೂರ ದೇಶಗಳಿಂದ ವಿದ್ಯಾರ್ಥಿಗಳೂ ವಿದ್ಯಾಂಸರೂ ಅಲ್ಲಿಗೆ ಬರತೊಡಗಿದರು. ರಾಜನ ಆಸ್ಥಾನದಲ್ಲಿ ವ್ಯಾಸರಾಯರು ಅಧ್ಯಕ್ಷತೆಯಲ್ಲಿ ವಿದ್ವಾಂಸರ ತಾತ್ವಿಕ ಚರ್ಚೆಗಳಾಗುತ್ತಿದ್ದವು. ದೇಶಾದ್ಯಂತ ಟೀಕಾ, ಟಿಪ್ಪಣಿ, ಸ್ವತಂತ್ರ ಗ್ರಂಥ, ಕಾವ್ಯ, ನಾಟಕಗಳ ರಚನೆಯ ಚಟುವಟಿಕೆಗಳು ನಡೆದವು.

ಕಲಿಂಗದ ವಿಜಯದಿಂದ ಮರಳುವಾಗ ಗಜಪತಿಯ ಆಸ್ಥಾನದಿಂದ ಲೊಲ್ಲಲಕ್ಷ್ಮೀಧರ ಹಾಗೂ ದಿವಾಕರ ಎಂಬ ವಿದ್ವಾಂಸರು ರಾಯನನ್ನು ಹಿಂಬಾಲಿಸಿದ್ದರು. ಕೃಷ್ಣದೇವರಾಯನ ಸಂಗೀತ ಗುರು ಬಂಧಂ ಲಕ್ಷ್ಮೀನಾರಾಯಣ ಸಂಗೀತ ವಿದ್ವಾಂಸ. ದಂಡಯಾತ್ರೆಗಳಲ್ಲಿ ಆತನೂ ಆತನ ತಮ್ಮಂದಿರೂ ತೋರಿದ ಸಾಹಸಕ್ಕಾಗಿ “ಸಾಮ್ರಾಜ್ಯ ಧುರಂಧರ” ಎಂಬ ಬಿರುದು ಪಡೆದ. ಮಹಾ ಪ್ರಧಾನಿ ತಿಮ್ಮರಸ ಸ್ವತಃ ಸಂಸ್ಕೃತದಲ್ಲಿ ಮಹಾಪಂಡಿತ. ಅವನ ಬಂಧು ನಾಡಿಂದಲಗೋಪ ಮಂತ್ರಿಯೂ ಸಂಸ್ಕೃತ ವಿದ್ವಾಂಸ. ತೆಲುಗು ವಿದ್ವಾಂಸರಲ್ಲಿ ನಂದಿ ತಿಮ್ಮಣ್ಣ, ದೂರ್ಜಟಿ, ರಾಮಭದ್ರ ಕವಿ, ಪಿಂಗಳ್ಳಿ ಸೂರಣ್ಣ, ಹಾಸ್ಯ ಕವಿ ತೆನಾಲಿ ರಾಮಕೃಷ್ಣ, ತಾಳ್ಳಪಾಕ ಪೆದ್ದ ತಿರುಮಲಯ್ಯ, ಚಿಂತಲಪುಡಿ ಮಲ್ಲಕವಿ ಪ್ರಮುಖರು. ಕನ್ನಡ ವಿದ್ವಾಂಸ ಕವಿಗಳಲ್ಲಿ ತಿಮ್ಮಣ್ಣ ಕವಿ, ಅಭಿನವವಾದಿ ವಿದ್ಯಾನಂದ, ಗುಟ್ಟಿಯ ಮಲ್ಲಣ್ಣ, ಕುಮಾರ ವಾಲ್ಮೀಕಿ, ಚಾಟು ವಿಠ್ಠಲನಾಥ ಪ್ರಮುಖರು. ಮಹಾ ತಪಸ್ವಿಗಳೂ ವೇದಾಂತಿಗಳೂ ಆದ ವ್ಯಾಸರಾಯ, ಪುರಂದರ, ಕನಕದಾಸಾದಿಗಳೂ ಸಹ ಕೃಷ್ಣದೇವರಾಯನ ಸಾಹಿತ್ಯ ಪ್ರೀತಿಯಿಂದ ಪ್ರಭಾವಿತರಾಗಿದ್ದರು. ಕೃಷ್ಣದೇವರಾಯನ ಸಾಮ್ರಾಜ್ಯ ವಿಸ್ತಾರ ವೈವಿಧ್ಯಗಳಷ್ಟೇ ಆತನ ಆಸ್ಥಾನದಿಂದ ಆಶ್ರಯ ಪಡೆದ ವಿದ್ವಾಂಸರ ಹಾಗೂ ಕವಿಗಳ ಭಾಷಾ ವೈವಿಧ್ಯವಿತ್ತು. ತಮಿಳು ವಿದ್ವಾಂಸರಾದ ಕುಮಾರ ಸರಸ್ವತಿ, ಮಂಡಲ ಪುರುಷ, ಜ್ಞಾನ ಪ್ರಕಾಶರ್, ಹರಿಹರದಾಸ್ ಮತ್ತು ತತ್ವಪ್ರಕಾಶ ಕವಿ ಮೊದಲಾದವರು ಸಹ ರಾಯನ ಆಸ್ಥಾನದಲ್ಲಿ ಗೌರವಾನ್ವಿತರಾಗಿದ್ದರು.

ಕೃಷ್ಣದೇವರಾಯ ಸ್ವತಃ ಕವಿ. ಪಂಡಿತರು ಮೆಚ್ಚತಕ್ಕ ಗ್ರಂಥಗಳನ್ನು ಬರೆದ. ಸುಪ್ರಸಿದ್ಧವಾದ “ಆಮುಕ್ತಮಾಲ್ಯದಾ” ತೆಲುಗು ಕಾವ್ಯ ಕೃಷ್ಣದೇವರಾಯನ ರಾಜನೀತಿಯನ್ನೂ ಕವಿತಾ ಸಾಮರ್ಥ್ಯವನ್ನೂ ತಿಳಿಸುತ್ತದೆ. “ಮದಾಲಸಚರಿತ್ರೆ”, “ರಸಮಂಜರಿ” ಎಂಬ ಗ್ರಂಥಗಳನ್ನೂ “ಜಾಂಬವತೀ ಕಲ್ಯಾಣ” ಎಂಬ ಸಂಸ್ಕೃತ ನಾಟಕವನ್ನೂ ಕೃಷ್ಣದೇವರಾಯನೇ ರಚಿಸಿ ಆಡಿಸಿದನೆಂದು ಹೇಳುತ್ತಾರೆ. ಕೃಷ್ಣದೇವರಾಯನ ರಾಣಿ ಜಗನ್ಮೋಹಿನಿ “ತುಕ್ಕಾ ಪಂಚಕ” ಎಂಬ ಕೆಲವು ಸಂಸ್ಕೃತ ಪದ್ಯಗಳನ್ನು ರಚಿಸಿದ್ದಾಳೆ.

ಪಲ್ಲಕ್ಕಿಗೆ ರಾಜನ ಹೆಗಲು

ವಿಜಯನಗರದ ರಾಜಬೀದಿಯಲ್ಲಿ ಒಂದು ದಿನ ಸಾವಿರಾರು ಮಂದಿ ಸೇರಿದ್ದಾರೆ. ಆಶ್ಚರ್ಯದಿಂದ ಕಣ್ಣು ಅಗಲಿಸಿ ನೋಡುತ್ತಿದ್ದಾರೆ.

ಅಲಂಕೃತವಾದ ಚಿನ್ನದ ತಗಡಿನ ಹೊದಿಕೆಯ ಪಲ್ಲಕ್ಕಿ, ಅದರಲ್ಲಿ ಬಡಕಲು ಶರೀರದ ಬ್ರಾಹ್ಮಣನೊಬ್ಬ ಕುಳಿತಿದ್ದ. ಅವನ ಕಾಲಲ್ಲಿ, ಕೈಯಲ್ಲಿ, ಕೊರಳಲ್ಲಿ ಚಿನ್ನದ ಆಭರಣಗಳು.

ಪಲ್ಲಕ್ಕಿಗೆ ಭುಜಕೊಟ್ಟು ಮುಂದೆ ಬರುತ್ತಿರುವಾತ ವಿಜಯನಗರ ಸಾಮ್ರಾಟ ಕೃಷ್ಣದೇವರಾಯ!!

ಜನ ಕಣ್ಣುಜ್ಜಿಕೊಂಡು ಮತ್ತೊಮ್ಮೆ ನೋಡಿದರು.

ಪಲ್ಲಕಿಯಲ್ಲಿ ಕುಳಿತವನು ಎಂಟು ದಿನಗಳ ಹಿಂದೆ ರಾಜನ ಆಸ್ಥಾನಕ್ಕೆ ಬಂದ ಕವಿ ಅಲ್ಲಸಾನಿ ಪೆದ್ದನ. ಅವನ “ಮನು ಚರಿತಮು” ಕಾವ್ಯವನ್ನು ಕುರಿತು ವಿದ್ವಾಂಸರು ಚರ್ಚಿಸಿ ಅದು ಶ್ರೇಷ್ಠ ಕೃತಿ ಎಂದರು. ರಾಜನು “ಗಂಡ ಪೆಂಡಾರ” ಎಂಬ ಚಿನ್ನದ ಕಡಗವನ್ನು ಅವನ ಕಾಲಿಗೆ ತೊಡಿಸಿ, “ಆಂಧ್ರ ಕವಿ ಪಿತಾಮಹ” ಎಂಬ ಬಿರುದನ್ನು ಕೊಟ್ಟ. ಈಗ ಅವನ ಮೆರವಣಿಗೆ ನಡೆಯುತ್ತಿತ್ತು. ರಾಜನೇ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದ!!

ಚಕ್ರವರ್ತಿ ಅವನಿಗೆ ಗ್ರಾಮಗಳನ್ನೇ ಬಹುಮಾನವಾಗಿ ಕೊಟ್ಟ.

ಕುಹಯೋಗ

ವಿಜಯನಗರಕ್ಕೆ ಕುದುರೆಗಳನ್ನು ಪೂರೈಸಲು ಹಣ ತೆಗೆದುಕೊಂಡು ಮೋಸ ಮಾಡಿದವನನ್ನು ವಿಜಾಪುರದ ಆದಿಲ್ ಷಹ ಬಿಟ್ಟುಕೊಡಲಿಲ್ಲ. ಇದು ಯುದ್ಧಕ್ಕೆ ಕಾರಣವಾಯಿತು. ಇದನ್ನು ರಾಯನೂ ತಿಮ್ಮರಸನೂ ಪರಿಶೀಲಿಸುತ್ತಿದ್ದರು.

ಈ ಹೊತ್ತಿಗೆ ಇನ್ನೊಂದು ಚಿಂತೆ ಕವಿಯಿತು. ಚಕ್ರವರ್ತಿಯ ಜಾತಕದಲ್ಲಿ ಶನಿ, ಸೂರ್ಯ, ಮಂಗಳ ಗ್ರಹಗಳು ವಿಷಮವಾಗಿ ಸೇರಿವೆ (ಇದಕ್ಕೆ ಕುಹಯೋಗ ಎಂದು ಹೆಸರು). ಇದರಿಂದ ಆತನಿಗೆ ಧನಹಾನಿ, ಪ್ರಾಣಹಾನಿ ಆಗಬಹುದು ಎಂದು ರಾಜಪುರೋಹಿತ ಸೂಚಿಸಿದ. ಮಹಾಮಂತ್ರಿ ಮತ್ತು ರಾಯ ಚಿಂತೆಗೊಳಗಾದರು. ಕೂಡಲೇ ಆಪ್ತ ಸಚಿವರೊಂದಿಗೆ ವ್ಯಾಸರಾಯರ ಮಠಕ್ಕೆ ಆಗಮಿಸಿದರು.

ಕೃಷ್ಣದೇವರಾಯ ಹೇಳಿದ “ನನ್ನ ಸಾಮ್ರಾಜ್ಯವೆಲ್ಲ ಈ ಮಠದ ಗೋಪಾಲಕೃಷ್ಣ ದೇವರಿಗೆ; ತಪೋನಿಧಿ ವ್ಯಾಸರಾಯರಿಗೆ ಅರ್ಪಿತ. ಸ್ವಾಮಿಯವರು ರಾಜ್ಯಾಧಿಕಾರ ಸ್ವೀಕರಿಸುವರು”

ಬಂದಿದ್ದ ಸಚಿವರಿಗೆಲ್ಲ ಈ ಗೂಢವೇ ತಿಳಿಯಲಿಲ್ಲ. ಅವರಿಗೆ ದಿದ್ಭ್ರಮೆ.

ವ್ಯಾಸರಾಯರು ಹೇಳಿದರು, “ಮಹಾಮಂತ್ರಿಗಳೇ, ಕುಹಯೋಗ ಮುಗಿದುಹೋಗುವವರೆಗೆ ಕೃಷ್ಣದೇವರಾಯ ಸಾಮ್ರಾಟರೇ ಅಲ್ಲ. ಅದೆಲ್ಲ ಭಾರ ನನ್ನ ಮೂಲಕ ನಮ್ಮ ಗೋಪಾಲಕೃಷ್ಣನ ಮೇಲೆ ಹೊರಿಸಿದ್ದಾರೆ, ಆಗಲಿ.”

ನಿಶ್ಚಿತವಾದ ದಿನ ಕೃಷ್ಣದೇವರಾಯನು ರಾಜ್ಯವನ್ನು ವ್ಯಾಸರಾಯರಿಗೆ ಒಪ್ಪಿಸಿಕೊಟ್ಟ. ಅವರ ಮೇಲೆ ಮುತ್ತು ರತ್ನಗಳನ್ನೇ ಸುರಿಸಿದ. ವ್ಯಾಸರಾಯರು ಅವುಗಳಲ್ಲಿ ಕೆಲವನ್ನು ವಿದ್ವಾಂಸರಿಗೆ, ಕವಿಗಳಿಗೆ, ಕಲಾವಿದರಿಗೆ ಬಹುಮಾನವಾಗಿ ಕೊಟ್ಟರು. ಉಳಿದುದನ್ನು ವಿಜಯನಗರದ ಮತ್ತು ನೆರೆ ಹೊರೆ ರಾಜ್ಯಗಳ ಬಡಬಗ್ಗರಿಗೆ ಹಿಂದುಗಳು, ಮುಸ್ಲಿಮರು ಎಂಬ ಬೇದವಿಲ್ಲದೆ ಹಂಚಿದರು.

ಕುಹಯೋಗ ಕಳೆಯುವವರೆಗೆ ವ್ಯಾಸರಾಯರು ಸಿಂಹಾಸನದ ಮೇಲಿದ್ದರು.

ರಾಯಚೂರು ಯುದ್ಧ

ಅದೇ ಆಗ ಬೇಸಿಗೆಯ ಆರಂಭ. ೧೫೨೦ ನೇ ಇಸವಿ. ಕೃಷ್ಣದೇವರಾಯ ಮಹಾ ಸೈನ್ಯದೊಂದಿಗೆ ರಾಯಚೂರು ಮುತ್ತಿಗೆಗಾಗಿ ಹೊರಟ. ವಿದೇಶೀ ಪ್ರವಾಸಿ ನೂನಿಜ್ ಕೊಡುವ ವಿವರಣೆ ಪ್ರಕಾರ ಎಲ್ಲ ಪ್ರಾಂತಗಳ ಮಹಾದಂಡನಾಯಕರೂ ಮಂಡಲೇಶ್ವರರೂ ತಮ್ಮ ತಮ್ಮ ಸೈನ್ಯದೊಂದಿಗೆ ಬಂದಿದ್ದರು. ವಿಜಯನಗರದವರ ಕಡೆಗೆ ಒಟ್ಟು ೭,೩೬,೦೦೦ ಯೋಧರೂ, ೫೦೦ ಆನೆಗಳೂ, ೧೨೦೦೦ ಕುದುರೆಗಳೂ ಇದ್ದವು. ಈ ಸೈನ್ಯದ ಜೊತೆಗೆ ೧೨ ಸಾವಿರ ಜನ ನೀರು ಪೂರೈಸುವವರೂ ಅಗಸರೂ ವ್ಯಾಪಾರಿಗಳೂ ಕುದರೆ, ಆನೆಗಳ ನೌಕರರೂ ಇದ್ದರೆಂದಾಗ ಆ ಸೈನ್ಯದ ಸಂಖ್ಯೆಯ ಅಂದಾಜು ಮಾಡಬಹುದು. ಸೈನ್ಯ ಬೀಡುಬಿಟ್ಟಲ್ಲಿ ದೊಡ್ಡದೊಂದು ನಗರವೇ ಹುಟ್ಟುತ್ತಿತ್ತು.

ರಾಯಚೂರು ಮುತ್ತಿಗೆ ಪ್ರಾರಂಭವಾಯಿತು. ಕೋಟೆಯ ಒಳಗಿನ ಸುಲ್ತಾನನ ಸೈನಿಕರ ಹತ್ತಿರ ದೂರಗಾಮಿಯಾದ ೨೦೦ ತೋಪುಗಳಿದ್ದ ಕಾರಣ ಮೂರು ತಿಂಗಳಾದರೂ ಕೋಟೆ ಹತ್ತಿರ ಹೋಗುವುದು ವಿಜಯನಗರದವರಿಗೆ ಅಸಾಧ್ಯವಾಯಿತು. ಈ ನಡುವೆ ವಿಜಾಪುರದಿಂದ ಇಸ್ಮಾಯಿಲ್ ಅದಿಲ್ ಷಹ ಸೈನ್ಯ ಸಮೇತ ಕೃಷ್ಣಾ ನದಿಯ ಉತ್ತರದ ದಡ ಸಮೀಪಿಸಿದ ಎಂಬ ವಾರ್ತೆ ಬಂತು. ಸುಲ್ತಾನನು ೧,೨೦,೦೦೦ ಕಾಲಾಳು. ೧೮,೦೦೦ ಕುದುರೆ ಸವಾರರು ಹಾಗೂ ೧೫೦ ಆನೆಗಳೊಂದಿಗೆ ಅನೇಕ ತೋಪು ಕಳ ಸೇರಿಸಿಕೊಂಡು ಬಂದಿದ್ದ.

ಸುಲ್ತಾನನ ಸೈನ್ಯ ನದಿಯನ್ನು ದಾಟಿ ಬಂದಿತು. ಭೀಕರ ಕದನವಾಯಿತು. ಮೊದ ಮೊದಲು ವಿಜಯನಗರದ ಸೈನಿಕರು ಸುಲ್ತಾನನ ಸೈನಿಕರ ಏಟಿಗೆ ತತ್ತರಿಸ ಓಡಲಾರಂಭಿಸಿದರು.

ಕೃಷ್ಣದೇವರಾಯ ತನ್ನ ಸೈನ್ಯದ ಈ ಸ್ಥಿತಿಯನ್ನು ಕಂಡ, ತಾನೇ ಕುದುರೆಯೇರಿ ಮುಂದೆ ಹೊರಟು ಗಟ್ಟಿಯಾಗಿ ಹೇಳಿದ “ಸೈನಿಕರೇ ಇದು ದ್ರೋಹ. ನನ್ನೊಂದಿಗೆ ಸಾಯಲು ಯಾರು ಸಿದ್ಧರಿದ್ಧೀರಿ? ಬನ್ನಿರಿ. ಇಸ್ಮಾಯಿಲ್ ಅದಿಲ್ ಪ್ರಪಂಚದ ಮಹಾರಾಜನನ್ನು ಕೊಂದನೆಂದು ಹೇಳಿಕೊಳ್ಳಲಿ. ಆದರೆ ಸೋಲಿಸಿದೆನೆಂಬ ಹೆಮ್ಮೆ ಅವನಿಗೆ ದಕ್ಕಗೊಡುವುದಿಲ್ಲ.”

ನನ್ನೊಂದಿಗೆ ಸಾಯಲು ಯಾರು ಸಿದ್ಧರಿದ್ಧೀರಿ?

ಸಾಮ್ರಾಟರ ಈ ವೀರವಾಣಿಯನ್ನು ಕೇಳಿದ ದಳಪತಿಳೂ ದಂಡನಾಯಕರೂ ಮತ್ತೆ ಒಂದುಗೂಡಿದರು. ರಾಜನೇ ಸ್ವತಃ ಸೈನ್ಯದ ಮುಂದೆ ನಡೆದ. ಸುಲ್ತಾನನ ಸೈನಿಕರು ತತ್ತರಿಸಿ ಓಡತೊಡಗಿದರು. ಓಡುವ ಸೈನಿಕರನ್ನು ವಿಜಯನಗರದ ಆನೆಗಳು ತುಳಿದವು, ಸೊಂಡಿಲುಗಳಿಂದ ಹಿಡಿದು ಬಿಸಾಡಿದವು. ಹೀಗೆ ನದಿಯ ದಂಡೆಯವರೆಗೂ ವಿಜಯನಗರದ ಸೈನ್ಯ ಸುಲ್ತಾನನ ಸೈನಿಕರನ್ನು ಬೆನ್ನಟ್ಟಿತು. ರಾಯನೇ ಶತ್ರುಗಳ ಮೇಲೆ ಕರುಣೆ ತೋರಿಸಿ ಸೈನ್ಯವನ್ನು ಹಿಂದಕ್ಕೆ ಕರೆದ.

ಕೃಷ್ಣದೇವರಾಯನ ಕಣ್ಣು ರಾಯಚೂರು ಕೋಟೆಯ ಮೇಲೆ ಇತ್ತು. ಇಸ್ಮಾಯಿಲ್‌ ಆದಿಲ್ ಷಹನ ಶಸ್ತ್ರ ಸಂಗ್ರಹವೆಲ್ಲ ವಿಜಯನಗರದವರ ವಶವಾಗಿತ್ತು. ಸುಲ್ತಾನನ ಐದು ಜನ ದಂಡನಾಯಕರು ಸೆರೆ ಸಿಕ್ಕಿದರು. ಇನ್ನೊಬ್ಬ ಮಹಾಸೇನಾಪತಿ ಸಲಾಬತ್ ಖಾನ್ ಶೂರತನದಿಂದ ಕಾದಾಡಿ ಸೆರೆಯಾಳಾಗಿದ್ದ. ಸುಲ್ತಾನನ ೪,೦೦೦ ಅರಬ್ಬೀ ಕುದುರೆಗಳೂ, ೧೦೦ ಆನೆಗಳು, ೪೦೦ ತೋಪುಗಳು, ೯೦೦ ಫಿರಂಗಿಗಳೂ, ಅಸಂಖ್ಯಾತ ಡೇರೆಗಳ ಹೊರುವ ಕತ್ತೆಗಳೂ, ಎತ್ತುಗಳು, ವಿಜಯನಗರದ ಸೈನಿಕರಿಗೆ ಸಿಕ್ಕಿದವು. ವಿಜಯನಗರದ ಸೈನ್ಯದಲ್ಲಿ ೧೬,೦೦೦ ಸೈನಿಕರು ಹತರಾದರು. ಕಡೆಗೆ ರಾಯಚೂರು ಕೋಟೆಯು ಕೃಷ್ಣದೇವರಾಯನ ವಶವಾಯಿತು.

ಊರಿನ ಜನರಿಗೆ ಹೆದರಿಕೆ. ರಾಯನ ಸೈನಿಕರು ಯಾರನ್ನು ಕೊಲ್ಲುವರೋ ಏನೇನು ಲೂಟಿ ಹೊಡೆಯುವರೋ ಊರಿನಲ್ಲಿ ಎಂತೆಂತಹ ಅಪಚಾರಗಳು ನಡೆದು ಹೋಗುತ್ತವೆಯೋ ಎಂದು. ಆದರೆ ಮಂತ್ರಿ ತಿಮ್ಮರಸ “ಊರನ್ನು ಲೂಟಿ ಮಾಡಕೂಡದು” ಎಂದು ಸೈನಿಕರಿಗೆ ಆಜ್ಞಾಪಿಸಿದ. ಮರುದಿನ ಕೃಷ್ಣದೇವರಾಯ ರಾಯಚೂರು ನಗರದ ಬೀದಿಗಳಲ್ಲಿ ಸಕಲ ರಾಜಮನ್ನಣೆಯಿಂದ ಮೆರೆದ. ಜನರೆಲ್ಲ ತಮ್ಮನ್ನು ನೋಡಿಕೊಂಡದ್ದಕ್ಕಾಗಿ ರಾಜನಿಗೆ ಕೃತಜ್ಞತೆ ಸಲ್ಲಿಸಿದರು.

ಯವನ ರಾಜ್ಯ ಸ್ಥಾಪನಾಚಾರ್ಯ

ರಾಯಚೂರು ಪತನ ಹಾಗೂ ಕೃಷ್ಣದೇವರಾಯನ ವಿಜಯದ  ವಾರ್ತೆ ಭಾರತದಾದ್ಯಂತ ವ್ಯಾಪಿಸಿತು.

ಸುಲ್ತಾನರೆಲ್ಲ ಒಂದಾಗಿ, ಇಸ್ಮಾಯಿಲ್ ಆದಿಲ್‌ನಿಂದ ಗೆದ್ದ ಎಲ್ಲ ಭಾಗವನ್ನೂ ಅವನಿಗೆ ಬಿಟ್ಟಿಕೊಡದಿದ್ದರೆ ತಾವೆಲ್ಲ ಅವನೊಂದಿಗೆ ಸೇರುವುದಾಗಿ ಕೃಷ್ಣದೇವರಾಯನಿಗೆ ಹೇಳಿಕಳಿಸಿದರು. ಏರು ಹರೆಯದ ತರುಣ, ವಿಜಯದ ಮೇಲೆ ವಿಜಯ ಸಂಪಾದಿಸಿದ್ದ. ನ್ಯಾಯವೂ ತನ್ನ ಕಡೆಗಿರುವಾಗ ಕೃಷ್ಣದೇವರಾಯ ಕೇಳಿಯಾನೆ? ಬಿರುಸಾದ ಉತ್ತರ ಕೊಟ್ಟ. “ಇಸ್ಮಾಯಿಲನಿಗೆ ತಕ್ಕುದ್ದನ್ನೇ ನಾನು ಮಾಡಿದ್ದೇನೆ. ಅವನ ಬೆನ್ನುಕಟ್ಟಿ ನೀವು ಬರುವ ಶ್ರಮ ವಹಿಸಬೇಕಾಗಿಲ್ಲ. ನಾನೇ ನೀವಿದ್ದಲ್ಲಿಗೆ ಬರುತ್ತೇನೆ” ಎಂದು ಬರೆದು ತಿಳಿಸಿದ.

ರಾಯ ಸೈನ್ಯ ಸಮೇತ ವಿಜಾಪುರವನ್ನು ಹೊಕ್ಕ. ಇಸ್ಮಾಯಿಲ್ ಅಲ್ಲಿಂದಲೂ ಓಡಿಹೋದ. ವಿಜಾಪುರದ ಲೂಟಿ ಆಯಿತು. ಮರಳಿ ಮುದಗಲ್ಲಿಗೆ ಬಂದ. ಮುದಗಲ್ ಕೋಟೆಯನ್ನು ವಶಪಡಿಸಿಕೊಂಡ ರಾಯ ಶತ್ರುಗಳನ್ನು ಅಷ್ಟಕ್ಕೇ ಬಿಡಬಾರದೆಂದುಕೊಂಡು, ಸಗರ, ಕಲ್ಬುರ್ಗಿಗಳವರೆಗೆ ಧಾವಿಸಿದ. ದಾರಿಯಲ್ಲಿ ಅನೇಕ ಕೋಟೆಗಳು ಧ್ವಂಸವಾದವು. ಕಲ್ಬುರ್ಗಿಯ ಕೋಟೆಯನ್ನು ಒಡೆದು ಹಾಕಲಾಯಿತು.

ಬಹುಮನಿ ವಂಶದ ಸುಲ್ತಾನ ಮಹಮದ್‌ನ ಮೂವರು ರಾಜಕುಮಾರರನ್ನು ಅದಿಲ್ ಷಹ ಬಂಧಿಸಿಟ್ಟಿದ್ದ. ಕೃಷ್ಣದೇವರಾಯ ಅವರನ್ನು ಬಂಧನದಿಂದ ಬಿಡಿಸಿ ಅವರಲ್ಲಿ ಅಲ್ಲಾವುದ್ದೀನ್ ಎಂಬುವವನನ್ನು ಕಲ್ಬುರ್ಗಿಯ ಬಾದಷಹನೆಂದು ಘೋಷಿಸಿದ. ಇನ್ನಿಬ್ಬರು ರಾಜಕುಮಾರರನ್ನು ತನ್ನೊಂದಿಗೆ ಕರೆದೊಯ್ದು ಪ್ರತಿ ಒಬ್ಬರಿಗೂ ೫೦ ಸಾವಿರ ಪಾಗೋಡಗಳನ್ನು ಉಪ ಜೀವನಕ್ಕಾಗಿ ಕೊಡಮಾಡಿದ. ರಾಯನಿಗೆ “ಯವನ ರಾಜ್ಯ ಸ್ಥಾಪನಾಚಾರ್ಯ” ಎಂಬ ಬಿರುದು ಬಂತು.

ಕಲ್ಬುರ್ಗಿಯ ದಾಳಿಯ ನಂತರ ಕೃಷ್ಣದೇವರಾಯ ಸೈನ್ಯಬಲ, ಕದನ ಸಾಮರ್ಥ್ಯಗಳ ಕಲ್ಪನೆ ಎಲ್ಲಾ ಸುಲ್ತಾನರುಗಳಿಗೆ ಮನದಟ್ಟಾಯಿತು. ಕೃಷ್ಣದೇವರಾಯ ಹೆದರಿಕೆ ಎಷ್ಟಾಗಿತ್ತೆಂದರೆ ಇಸ್ಮಾಯಿಲ್ ಅದಿಲ್ ಷಹ ಮತ್ತೊಮ್ಮೆ ಮುದಗಲ್ ಹತ್ತಿರ ಸೈನ್ಯ ಸಮೇತ ಬಂದ ವಾರ್ತೆ ಕೇಳಿದ ಕೃಷ್ಣದೇವರಾಯ ಒಬ್ಬನೇ ತನ್ನ ಕುದುರೆಯೇರಿ ಧಾವಿಸಿದ. ಕೃಷ್ಣದೇವರಾಯ ರಾಜಧಾನಿಯಿಂದ ಹೊರಟನೆಂಬ ಸುದ್ದಿ ಕೇಳಿಯೇ ಇಸ್ಮಾಯಿಲ್ ಅದಿಲ್ ಷಹ ಓಡಿಹೋಗಿದ್ದ.

ಬಾಳ ಸಂಜೆ

ಕೃಷ್ಣದೇವರಾಯನಿಗೀಗ ಸಮಾಧಾನವಾಗಿತ್ತು. ತನ್ನ ಪೂರ್ವಿಕರು ಉಳಿಸಿಹೋದ ಮಹತ್ಕಾರ್ಯವನ್ನು ಪೂರೈಸಿದ ಸಂತೋಷವಾಗಿತ್ತು. ಪಟ್ಟಕ್ಕೆ ಬಂದ ನಂತರ ಸುಮಾರು ಹತ್ತು ವರ್ಷಗಳನ್ನು ದಂಡಯಾತ್ರೆಗಳಲ್ಲಿಯೇ ಕಳೆದಿದ್ದರೂ ಶ್ರಮ ಸಾರ್ಥಕವಾಗಿತ್ತು. ಸಾಮ್ರಾಜ್ಯ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಸಮುದ್ರಗಳವರೆಗೂ ಹಬ್ಬಿ ಆತನಿಗೆ “ತ್ರಿಸಮುದ್ರದೊಡೆಯ” ಎಂಬ ಬಿರುದನ್ನು ತಂದಿತ್ತು. ಹಂಪೆಯ ವಿರೂಪಾಕ್ಷ “ಕರ್ನಾಟಕ ರಾಜ್ಯ ರಕ್ಷಾಮಣಿ” ಆಗಿದ್ದ. ಕೃಷ್ಣದೇವರಾಯನು ಶ್ರೀವೈಷ್ಣವ ಪಂಥದವನಾದರೂ ಎಲ್ಲ ಧರ್ಮಗಳನ್ನೂ ಗೌರವಿಸಿದ. ಪದವೀಡು ಮತ್ತು ಚಂದ್ರಗಿರಿ ಪ್ರಾಂತಗಳ ಜೈನರ ಮೇಲಿನ ಕಂದಾಯಗಳನ್ನು ಬಿಟ್ಟುಕೊಟ್ಟ. ಕಾಮಕೋಟಿ ಮಠಕ್ಕೆ ಒಂದು ಹಳ್ಳಿಯನ್ನು ಕಾಣಿಕೆಯಾಗಿ ಕೊಟ್ಟ. ದ್ವೈತ ಮಠದ ವ್ಯಾಸರಾಯರಲ್ಲಿ ಅವನಿಗೆ ಅಪಾರ ಭಕ್ತಿ. ಮಸ್ಲಿಮರಿಗೆ, ಕ್ರೈಸ್ತರಿಗೆ ಮಸೀದಿಗಳನ್ನೂ, ಚರ್ಚುಗಳನ್ನೂ ಕಟ್ಟಿ ತಮ್ಮ ತಮ್ಮ ಮತಗಳನ್ನು ಅನುಸರಿಸಲು ಅಡ್ಡಿ ಇರಲಿಲ್ಲ. ಸಾಮ್ರಾಜ್ಯದ ತುಂಬ ಪ್ರಮುಖ ಸ್ಥಳಗಳಿಗೆ ಮತ್ತು ದೇವಾಲಯಗಳಿಗೆ ರಾಣಿಯರ ಜೊತೆ ಸಾಮ್ರಾಟ ಸಂದರ್ಶನ ಕೊಟ್ಟ. ಎಲ್ಲ ಕಡೆಗೂ ಹೇರಳವಾದ ಸುವರ್ಣದಾನ, ಗ್ರಾಮದಾನ. ಎಲ್ಲ ದಾಳಿಗಳಲ್ಲಿ ಅಸಾಧಾರಣ ಸಾಹಸ ಹಾಗೂ ಜಾಣ್ಮೆಯಿಂದ ನೆರವಾದ ಸಾಳುವ ತಿಮ್ಮರಸ ಅಪ್ಪಾಜಿಯನ್ನು ವಿಶೇಷ ದರ್ಬಾರು ಸೇರಿಸಿ ಸುವರ್ಣಾಭಿಷೇಕ ಮಾಡಿ ಗೌರವಿಸಿದ.

ಇಷ್ಟೆಲ್ಲ ತಾನು ಪ್ರತಾಪಶಾಲಿಯಾಗಿದ್ದರೂ ಮಲತಮ್ಮನಾದ ಅಚ್ಚುತನೂ ಹಾಗೂ ಇಮ್ಮಡಿ ವೀರನರಸಿಂಹನ ಮಕ್ಕಳು ಚಂದ್ರಗಿರಿಯಲ್ಲಿ ಗೃಹಬಂಧನದಲ್ಲಿ ಇದ್ದುದರಿಂದ ಮುಂದೆ ಅವರಿಂದ ಸಾಮ್ಯಾಜ್ಯಕ್ಕೆ ತೊಂದರೆಯಾದೀತೆಂದು ಕೃಷ್ಣದೇವರಾಯನಿಗೆ ಅನಿಸಿತು. ತನ್ನ ಆರು ವರ್ಷದ ಮಗನಾದ ತಿರುವಲದೇವರಾಯನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದ. ಆದರೆ ದುರ್ದೈವದಿಂದ ಎಂಟು ತಿಂಗಳೊಳಗಾಗಿಯೇ ಆ ರಾಜಕುಮಾರನಿಗೆ ಯಾರೋ ವಿಷಹಾಕಿ ಕೊಂದುಬಿಟ್ಟರು. ಮಹಾಮಂತ್ರಿ ತಿಮ್ಮರಸನ ಮಗ ತಿಮ್ಮಣ ಡಣಾಯಕನೇ ಈ ಕೆಲಸ ಮಾಡಿದ ಅಪರಾಧಿ ಎಂದು ಭಾವಿಸಿ ಆತನನ್ನು ಸೆರೆಹಿಡಿದರು. ತಿಮ್ಮರಸನೂ ಆತನ ಇನ್ನೊಬ್ಬ ಮಗ ಗೋವಿಂದರಾಜನೂ ಬಂಧಿಗಳಾದರು. ಇವರೆಲ್ಲ ಶೂರ ಸರದಾರರಾಗಿ ಹೋರಾಡಿದವರು. ರಾಜ್ಯದ ಉನ್ನತ ಅಧಿಕಾರಿಗಳು. ಆದರೂ ದ್ರೋಹದ ಆಪಾದನೆಯ ಮೇಲೆ ರಾಜಕೃಪೆ ಮಾಯವಾಗಿ ಹೋಯಿತು. ಕೃಷ್ಣದೇವರಾಯನಲ್ಲಿದ್ದ ಒಂದು ದೋಷ ಎಂದರೆ ಕೋಪವನ್ನು ಅಂಕೆಯಲ್ಲಿ ಇಡದೆ ಹೋಗುತ್ತಿದ್ದುದ್ದು. ರಾಜ ಕೋಪದಲ್ಲಿ ಇಲ್ಲವನ್ನೂ ಮರೆತ. ಕೃಷ್ಣದೇವರಾಯ ವಿಚಾರಣೆಯ ಶಾಸ್ತ್ರ ಮಾಡಿ ಇವರೆಲ್ಲರ ಕಣ್ಣುಗಳನ್ನು ತೆಗೆದುಬಿಡಲು ಅಜ್ಞೆ ಮಾಡಿದ. ತಿಮ್ಮಣ್ಣ ಸೆರೆಮನೆಯಲ್ಲೆ ಸತ್ತ. ಮಹಾಮಂತ್ರಿ, ಮಹಾ ವಿದ್ವಾಂಸ ತಿಮ್ಮರಸ ಗೌರವಶಿಖರದಿಂದ ಒಮ್ಮೆಲೆ ಪಾತಾಳಕ್ಕೆ ಬಿದ್ದು ಹೇಳಹೆಸರಿಲ್ಲದಂತಾದ.

ಸಾಹಸದ ಯಾತ್ರೆ ಮುಗಿಯಿತು

ಈ ಎಲ್ಲ ಘಟನೆಗಳಿಂದ ಕೃಷ್ಣದೇವರಾಯನ ಮನಸ್ಸು ಕಲಕಿಹೋಯಿತು; ಆದರೂ ರಾಜನಾಗಿ ತನ್ನ ಕರ್ತವ್ಯವನ್ನು ಮರೆಯಲಿಲ್ಲ. ತನ್ನ ಸೈನ್ಯವನ್ನು ಬಲಪಡಿಸಿದ, ಫಿರಂಗಿದಳವನ್ನೇ ಸಿದ್ಧಮಾಡಿದ. ಆದರೆ ಈ ಹೊತ್ತಿಗೆ ಅವನಿಗೆ ಉದರರೋಗ ಪ್ರಾರಂಭವಾಯಿತು. ಅದೇ ಬೇನೆಯಿಂದ ಕಣ್ಮುಚ್ಚಿದ. ೧೫೨೯ರಲ್ಲಿ ಆತ ತೀರಿಕೊಂಡಿರಬೇಕು.

ತಿರುಪತಿಯ ವೆಂಕಟೇಶ್ವರ ದೇವಾಲಯದಲ್ಲಿ ಕೃಷ್ಣದೇವರಾಯ, ತಿರುವಲಾದೇವಿ ಮತ್ತು ಚಿನ್ನಾದೇವಿಯರ ವಿಗ್ರಹಗಳನ್ನು ಇಂದೂ ನೋಡಬಹುದು.

ಕೇವಲ ಇಪ್ಪತ್ತೊಂದು ವರ್ಷಗಳ ಕಾಲ ಆಳಿದರೂ ಕೃಷ್ಣದೇವರಾಯ ಪ್ರತಾಪಶಾಲಿಯಾಗಿ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿದನು. ದಕ್ಷಿಣ ಭಾರತದ ಇತಿಹಾಸದ ಅತ್ಯಂತ ಸಂಕಟ ಸಮಯದಲ್ಲೂ ಹಿಂದು ಧರ್ಮ, ಸಂಸ್ಕೃತಿಗಳನ್ನು ಉಳಿಸಿ, ಬೆಳೆಸಿ, ಸಾಮಾಜಿಕ ಜನಜೀವನವು ನೆಮ್ಮದಿಯಿಂದ ಸಾಗುವಂತೆ ಆಳಿದನು; ಬಾಳಿದನು.

ಕೃಷ್ಣದೇವರಾಯ ಭಾರತದ ಇತಿಹಾಸದ ಮೇಲೆ ತನ್ನ ಮುದ್ರೆಯೊತ್ತಿ ಕಣ್ಮರೆಯಾಗಿದ್ದಾನೆ. ಈಗಲೂ ಹಂಪೆಗೆ ಯಾತ್ರೆ ಮಾಡುವವರಿಗೆ ಅವನ ಸಾಮ್ರಾಜ್ಯದ ವೈಭವದ ಮತ್ತು ಹಿರಿಮೆಯ ನೆನಪಾಗುತ್ತದೆ.