ಈ ದ್ಯಶ್ಯದಲ್ಲಿ ಕೃಷ್ಣನು ಕೊರವಂಜಿಯ ವೇಷದಲ್ಲಿ ಪ್ರವೇಶಿಸುತ್ತಾನೆ…

ಶ್ಲೋಕ : ಹಾಡುತ್ತ ಪ್ರವೇಶ…

ಶ್ಲೋಕ :  
ಇದು ಏನು ಸೋಜಿಗವೋ ಎನ್ನ ಜೀವ ಮರಗುತಿದೆ
ಕದಡಿದಂತಃಕರಣ ಕಾಯ ತಲ್ಲಣಿಸುತ್ತಿದೆ
ಕರಗೊತಿದೆ ಯನ್ನ ಮನಸ್ಸು ಕಡುದೈನ್ಯಂದಬಲಿಯಮೇಲೆ
ದೂತೆ – ಏನಾಶ್ಚರ್ಯವಿದು – ಕೋಮಲಿಗಾಗಿ ನನ್ನ ಜೀವ ಮರಮರನೆ ಮರುಗುತಿದೆ – ಸತ್ಯಭಾಮೆಯನ್ನು ಕೂಡಬೇಕೆಂದು ಯನ್ನ ಮನಸ್ಸು ತಲ್ಲಣಿಸುತಿದೆ.

ಭಾಗವತ : ಮನಸ್ಯಾಕ ಮರಗಸತೀಯಪ್ಪ ನಡ್ರಿ ಅಮ್ಮವ್ರ ಮನೆಗೆ ಹೋಗೋಣ

ಕೃಷ್ಣ : ಯಾವ ವೇಷದಲ್ಲಿ ಹೋಗೋಣ್

ಭಾಗವತ : ಅದನ್ನ ನಾಹ್ಯಾಂಗ ಹೇಳಲ್ರಿ…ಎಲ್ಲಾ ವೇಶ ಬಲ್ಲವರು ನೀವು ಯವುದು ತುರ್ತೂ ತಯಾರಾಗತೈತಿ ನೋಡ್ರಿ ಆ ಡ್ರೆಸ್ ಹಾಕಿ.

ಕೃಷ್ಣ : ದೂತೆ-ನಾನು ಈಗ ಕೊರವಂಜಿ ವೇಷ ಧರಿಸುವೆ..ಕೊರವಂಜಿ ಹೇಗಿರುತ್ತಾಳೆ ಗೋತ್ತೆ.

ಭಾಗವತ : ಹೇಳದ ಹ್ಯಾಂಗ ಗೊತ್ತಾಗತೈತಿ…ಹೇಳಿಪಾ ಕೊರವಂಜಿ ಹ್ಯಾಂಗಿರತಾಳ

ಕೃಷ್ಣ : ಜಡೆಬಿಚ್ಚಿ ಸಂಪಿಗೆಣ್ಣಿಯ ಹೆಚ್ಚಿ ನಲವಿನಲಿ
ಜಡಿಯಲಿರ್ಪವು ಝಗೊವೆರಸಿ ಕೇಶಗಳು
ದೂತೆ ಜಡೆಗೆ ಸಂಪಿಗೆ ಎಣ್ಣೆ ಹಚ್ಚಿಕೊಂಡಿದ್ದೇನೆ

ಭಾಗವತ : ಬಹಳ ಚೋಲೋ ಆತು… ಎನೇನು ಒಡವಿ ಹಾಕೊಂಡಿರಿ.

ಕೃಷ್ಣ : ಶಂಕರಮಣಿ ತಾವರೇಮಣಿ ಕರ್ಪೂರಮಣಿ
ಬಿಂಕದ ತುಳಸೀಮಣಿ ಶ್ರೀಗಂಧದ ಮಣಿ
ಶಂಕಮಣಿ, ತಾವರೀಮಣಿ ತುಳಸೀಮಣಿ, ಗಂಧದ ಮಣಿಗಳನ್ನೇ ಧರಿಸಿದ್ದೇನೆ.

ಭಾಗವತ : ಹಾಂಗಾದರ ದೇವರಿಗೆ ಪೂಜಾ ಮಾಡ್ರಿ-ಹೊರಡಿನ್ನು ನನ್ನ ದೇವತೆ-ಭೈರವಿ
ಭೈರವನಾಶ್ರಿತೆ-ಎನ್ನ ವೈರಿಗಳ ಹಲ್ಲು ಮುರಿಯೆ
ಬಿರುದು ಹೊತ್ತೀನೆ ತಾಯಿ ನೀ ನನ್ನ ಮರೆಯಬೇಡ
ತಾಯಿ ಶಾಕಾಂಬರೀ, ಶಾಂಭವೀ ಜಗದಂಬೆ, ಜಗದಂಬೆ

ಮರಿಭಾಗವತ : ಯವ್ವ, ಕೊರವಂಜಿಗೊಂದು ಕೂಸು ಇರಬೇಕ್ರಿ. ಶೆರಗಿನ ಜೋಳಗ್ಯಾಗ.

ಕೃಷ್ಣ : ಹೌದು, ನನ್ನ ಕಂದ ಇದು.
ತೂಗಿರೆ ರಂಗನ | ತೊಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ
ಚಂತಿ || ತೂಗಿರೆ ವರಗಿರಿ ದೇವಾದಿದೇವನ
ಜೋಯಂದು ತೊಟ್ಟಿಲ ತೂಗಿರೆ…||
(ಕೊರವಂಜಿ ವೇಷದಲ್ಲಿ ಸತ್ಯಭಾಮೆಯಲ್ಲಿಗೆ ಬರುವ ವಿವರ-)

ಭಾಗವತ : ಇಲ್ಲಿಗೆ ಹ್ಯಾಂಗ ಬಂದೆಯವ್ವಾ-ಯತ್ಲಾಗ ಹಾಸಿ ಬಂದಿ

ಕೊರವಂಜಿ : ಕೇರಿಕೇರಿಯೊಳಾಡುತಾ ಹಾಡುತಾ
ವಯ್ಯಾರದಿ ಮನೆ ಮನೆ ತಿರುಗುತಾ
ಚಂತಿ || ನಾರಿಮಣಿಯರಿಗೆ ಶಕುನವಾ ಹೇಳುತಾ
ಸಾರುತಾ ಸುಖವನು ಬೀರುತಾ-
ದೂತೆ-ನಾನು ಕೇರಿ ಕೇರಿಗಳಲ್ಲಿ ಹಾಡುತ್ತಾ, ಪಾಡುತ್ತಾ ಅಲ್ಲಿಯ ನಾರಿಯರಿಗೆ ಅವರವರ ಶಕುನ ಹೇಳುತ್ತ ಬಂದೆ.

ಭಾಗವತ : ಬರೆ ಶಕುನ ಹೇಳದು. ಆಟ ಬರತ್ತ. ಮತೇನರ ಬರತೈತಿ ?

ಕೊರವಂಜಿ : ದೂತೆ,
ಪದ ಆದಿತಾಳ
ಭೂತ ಬಿಡಿಸಲು ಬಲ್ಲೆ ! ಬೇತಾಳ ವಿದ್ಯೆಯ ಬಲ್ಲೆ
ಮಾತಾಡದ ಮೂಕರ ಮಾತಾಡಿಸಬಲ್ಲೆ
ಕೊತು ಕೇಳಿದರೊಂದು ಮಾತು ಹೇಳಲು ಬಲ್ಲೆ

ದೂತೆ, ನಾನು ಭೂತ ಪಿಶಾಚಿಗಳನ್ನು ಬಿಡಿಸಬಲ್ಲೆ, ಬೇತಾಳ ವಿದ್ಯೆಯು ನನಗೆ ತಿಳಿದಿದೆ. ಮಾತು ಬಾರದ ಮೂಕರನ್ನು ಮಾತಾಡುವಂತೆ ಮಾಡಬಲ್ಲೆ, ಭಯಭಕ್ತಿಯಿಂದ ಪ್ರಶ್ನೆ ಕೇಳಿದರೆ ಅವರ ಮನದಲ್ಲಿಯ ವಿಚಾರವನ್ನು ಹೇಳಬಲ್ಲೆ.

ಭಾಗವತ : ನನ್ನ ಮನಸಿನಾಗ ಏನೈತಿ ಹೇಳ ನಮ್ಮವ್ವ.

ಕೊರವಂಜಿ : ನನ್ನನ್ನು ನಿಮ್ಮ ಒಡತಿಯಲ್ಲಿಗೆ ಕರೆದುಕೊಂಡು ಹೋಗುವ ಮನಸ್ಸಿದೆ ನಿನಗೆ, ಹೌದಲ್ಲೋ ?

ಭಾಗವತ : ಖ್ರೆ ನಮ್ಮವ್ವಾ… ಬರ್ರಿ ಹೋಗೋಣ. ಯವ್ವಾ, ಯವ್ವಾ, ಕೊರವಂಜಿನ ಕರಕೊಂಡ ಬಂದೇನ್ರಿ.

ಸತ್ಯಭಾಮ : ಹೌದೇ-ಅಮ್ಮಾ ಕೊರವಂಜಿ ನನ್ನ ಮನಸ್ಸಿನ ಪ್ರಶ್ನೆ ಹೇಳತೀಯಾ ?

ಕೊರವಂಜಿ : ಹೌದಮ್ಮಾ ಹೌದು…ಹೇಳುವೆ-ಪದ್ಧತಿ ಪ್ರಕಾರ ನನ್ನ ಕೂಡ್ರಿಸಿ ಪ್ರಶ್ನೆ ಹಾಕಬೇಕು.

ಭಾಗವತ : ಅದೆಂಥ ಪದ್ಧತಿಯವ್ವ ನಿನ್ನದು-ಹೇಳಾಟು.

ಕೊರವಂಜಿ : ಪದ || ಬಿಡಿಮುತ್ತು ಮರದಲ್ಲಿ ತರಿಸೇ ನೀ
ಪಡಸಾಲೆಯೊಳು ರಂಗಾ ಬರೆಸೇ ಏಳು
ತಡವ್ಯಾಕೆ-ದೀಪಗಳಿರಿಸೇ ನೀನ
ಗಡತಿ ಕಬ್ಬು ತೆಂಗು ಸುರಿಸೇ
ನೀ ದೇವಿಯರ ತೃಪ್ತಿ ಪಡಿಸೇ |

ದೂತೆ, ಪಡಸಾಲೆಯನ್ನು ಆಕಳ ಸೆಗಣಿಯಿಂದ ಸಾರಿಸಿ, ಮರದಲ್ಲಿ ಮುತ್ತು ತಂದು ಹಸೆ ಹಾಕಬೇಕು, ಅದರ ಮೇಲೆ ನಾನು ಕೂಡ್ರಬೇಕು. ನಿಮ್ಮ ದೊರೆಸಾನಿ ಎದುರಿಗೆ ಕುಂತಗೋಬೇಕು. ಆಗ ಹೇಳತೇನಿ ಏನ ಐತಿ ಅವರ ಮನಸಿನಾಗಂತ.

ಭಾಗವತ : ನೀವು ಹೋಳೊದೇನ ಚಂದಾಗಿ ಪದ್ಧತಿ ಪ್ರಕಾರನ ಐತಿ ಅನ್ರಿ ಯವ್ವಾ, ನೀವು ನಮಸ್ಕಾರ ಮಾಡಿ, ಮುಂದ ಕುಂತ್ರ

ಸತ್ಯಭಾಮ : ಅಲ್ಲ ದೂತೆ-ಇಂಥ ಕೊರವಿಗೆ ನಾ ಹ್ಯಾಂಗ ಕೈ ಮುಗೀಲಿ ?
ನನ್ನ ಸವತೇರ ಮುಂದ ನನ್ನ ಬಾಳ ನಗೆಗೇಡಿ ಆಗಾಕಿಲ್ಲ

ಕೊರವಂಜಿ : ದೂತೆ ನಿಮ್ಮ ದೊರೆಸಾನಿಗೆ ಹೊಡೆದಿರುವುದೇ ಈ ದೆವ್ವ…. ಅಭಿಮಾನ ದುರಭಿಮಾನ ಸವತೀ-ಸವತೀ-

ಭಾಗವತ : ಇರ್ಲಿ ಬಿಡ್ರೆಪಾ… ನಮಸ್ಕಾರ ಹ್ಯಾಂಗ ಮಾಡಲಾದು

ಕೊರವಂಜಿ : ನೀವು ಹೇಂಗ ಮಾಡತೀರಿ ಈಗ ?

ಭಾಗವತ : ಈಗ ಹ್ಯಾಂಗ ನಮಸ್ಕಾರ ಮಾಡತೀವಿ ಅಂದ್ರ- ಯಾಕ್ರೆಪಾ ಈಗ ಬಂದ್ರ್ಯಾ ಅಂತ ಹಣಿಗೆ ಕೈ ಹಚ್ಚತೀವಿ, ಇಲ್ಲ ಎದಿಗೆ ಕೈ ಒಯ್ಯತೀವಿ.

ಕೊರವಂಜಿ : ನಿನ್ನ ನಮಸ್ಕಾರ ಯಥಾರ್ಥಾವಾಗಿದೆ ದೂತೆ- ಹಣೆ ಈಶ್ವರನ ವಾಸಸ್ಥಾನ, ಎದೆ ವಿಷ್ಣುವಿನ ಸ್ಥಾನ, ಹೆಣೆಗೆ ಕೈ ಹಚ್ಚಿದರೆ ಈಶ್ವರನಿಗೆ ನಮಸ್ಕಾರ. ಎದೆಗೆ ಕೈ ಹಚ್ಚಿದರೆ ವಿಷ್ಣುವಿಗೆ ನಮಸ್ಕರಿಸಿದಂತೆ-ನನಗೆ ನಮಸ್ಕಾರ ಮಾಡಬೇಕಾದರೆ ಎದೆಗೆ ಕೈ ಜೋಡಿಸಿ ನಮಸ್ಕಾರ ಮಾಡಬೇಕು. ತೀಳಿಯಿತೇ ?

ಸತ್ಯಭಾಮ : ದೂತೆ-ನಾವು ಎದೆಗೆ ಕೈ ಜೋಡಿಸಿ ನಮಸ್ಕಾರ ಮಾಡಿದರೆ ವಿಷ್ಣುಪರಮಾತ್ಮನಿಗೆ ವಂದಿಸಿದಂತಾಗುತ್ತದೆ. ಕಾರಣ ಕೊರವಂಜಿಗೆ ನಮಸ್ಕಾರ ಮಾಡೋಣವೇ ?

ಭಾಗವತ : ಮಾಡ ನಮ್ಮವ್ವ.

ಕೊರವಂಜಿ : ದೂತೆ, ನಿಮ್ಮ ದೊರೆಸಾನಿ ಕೈ ನೋಡಿ ಹೇಳುವೆ,… ಕೈ ತೋರಿಸು.

ದೂತೆ : ತೋರಸ ನಮ್ಮವ್ವ… ಆದರ ಜ್ವಾಕೆ… ಕೈಯಾನ ಉಂಗಾರ ಉಚಗೊಂಡಾಳು…

ಕೊರವಂಜಿ : (ಕೈ ನೋಡಿ…)
ಶ್ಲೋಕ : ತೋರುವುದು ಕೈಯಲ್ಲಿ ಚಾತುಚಕ್ರ
ಸಾರಮತ್ಸದ ರೇಖೆ ಅತಿ ಸುಂದರ
ತೋರುವುದು ಧನರೇಖೆ, ಪಾರ್ಶ್ವತೆ-ಅನ್ನದ ರೇಖೆ,
ತೋರುವುದು ಮಂಗಳಾಕಾರ, ಜಾರುದಂಪತಿ-ರೇಖಾ ಚಿಹ್ನ
ಆಯುಷ್ಯ ವರ್ಧಿಸುವ ರೇಖೆ…

(ಹೀಗೆಯೇ ವರ್ಣನೆ ನಡೆಯುವುದು-ದೂತೆ-ಪ್ರತಿ ಪಾದಕ್ಕೂಮ್ಮೆ ಪ್ರಶ್ನಿಸುತ್ತಾನೆ) ಕೊನೆಗೆ ಕೊರವಂಜಿ ಸತ್ಯಭಾಮೆಯ ಮುತ್ತಿನ ಹಾರ ಪಡೆದು  ರಾತ್ರಿಯೇ ಪರಮಾತ್ಮ ಬರುತ್ತಾನೆ ಎಂಬ ಭರವಸೆ. ದೂತೆ-ನಾನಿನ್ನು ಬರುವೆ, ಪರಮಾತ್ಮ ಬರತಾನ ಭಜನೆ ಮಾಡ್ರಿ.

ದೂತೆ : ಭಜನೆ ಮಾಡಿದ್ರ ಬರುದೂ ಗ್ಯಾರಂಟಿ ಹೌದಲ್ಲ ನಮ್ಮವ್ವ.

ಕೊರವಂಜಿ : ಸಂದೇಹವೇಕೆ ದೂತೆ, ಭಜನಾ ಅಂದ್ರ ಏನಂತ ತಿಳಿದೀ-ಭ ಅಂದ್ರ ಭವ ಈ ಲೋಕ, ಜ ಅಂದರ ಜನನ ಹೂಟ್ಟೋದು, ನ ಅಂದ್ರ ಇಲ್ಲ, ಪರಮಾತ್ಮನನ್ನು ಭಜಿಸುವವರಿಗೆ ಈ ಲೋಕದಲ್ಲಿ ಜನನ ಮರಣವಿಲ್ಲೆಂದರ್ಥ

ಭಾಗವತ : ಏನ ಶ್ಯಾಣಾಕ್ಕಿ ಅದಿಯ ನಮ್ಮವ್ವ ಮತ್ತ ಭಜನಿ ಮಾಡುವಾಗ ಏಕದಾರಿ ಇರತೈಲ್ಲ ಅದರ ಅರ್ಥ ಏನ

ಕೊರವಂಜಿ : ಏಕದಾರಿಗೆ ಒಂದು ಕಾಯಿ, ಸೊರೋಕಾಯಿ ಇರಬೇಕಲ್ಲ ಅದು ಕಾಯಕಾಯ ಅಂದರೆ ಶರೀರ, ಇದರ ಮಧ್ಯದಿಂದ ಉದ್ದನ್ನು ಕೋಲು, ಮನಸ್ಸಿನ ಏಕಾಗ್ರತೆಯ ಚಿಹ್ನೆ, ತಂತಿ-ಮಾತು ಅಂದರೆ ಕಾಯ, ವಾಚಾ ಮನಸಾ ಆ ಪರಮಾತ್ಮನನ್ನು ನೆನೆಯಬೇಕೆಂಬುದೇ ಏಕಧಾರಿಯ ಅರ್ಥ.

ಭಾಗವತ : ತಾ ಹಾಕರಾರಲ್ಲವ್ವ ಅದು ಏನು

ಕೊರವಂಜಿ : ದೂತೆ-ತಾಳು ಅಂದ್ರೆ ತಾಳ್ಮೆ ಅಂದರೆ ಏನೆ ಕಷ್ಟ ಬಂದರೂ ತಾಳ್ಮೆಯಿಂದ ಇರಬೇಕೆಂಬುದೇ ಇದರ ಅರ್ಥ-ನನಿನ್ನು ಬರುವೆ  (ನಿರ್ಗಮನ)

(ಕೃಷ್ಣ ಪಾರಿಜಾತದಲ್ಲಿ ಕೊರವಂಜಿಯ ಸ್ಥಾನ ಅಮೋಘವಾದುದು-ಸುಮಾರು ¸Àj ರಾತ್ರಿಯ ನಂತರ ಈ ಪಾತ್ರ ರಂಗಭೂಮಿಯಲ್ಲಿ ಕಾಣಿಸಿಕೊಂಡಾಗ ಅ¥ÀÆರ್ವ ಉತ್ಸಾಹ ಪ್ರೇಕ್ಷಕರಲ್ಲಿ)

ಸತ್ಯಭಾಮೆ : ದೂತೆ, ನೀನು ಇಲ್ಲಿ ಕುಳಿತು ಧ್ಯಾನ ಮಾಡುತ್ತಿರು, ನಾನು ಒಳಗೆ ಮಂದಿರದಲ್ಲಿ ಪೂಜೆ ಮಾಡುತ್ತೇನೆ. ನನ್ನ ಅಪ್ಪಣೆಯಿಲ್ಲದೆ ಯಾರನ್ನೂ ಒಳಗೆ ಬಿಡಬೇಡ (ನಿರ್ಗಮನ )

ಭಾಗವತ : ಆಗಲ್ರೆವ್ವಾ

ಕೃಷ್ಣ : ದೂತೆ-ದೂತೆ-ಏಳು

ಭಾಗವತ :  ನಮ್ಮನ್ನ ಎಬ್ಬಿಸಬ್ಯಾಡ್ರಪ-ನವು ಪೂಜೆ ಮಾಡಕ ಹತ್ತಿವಿ ಧ್ಯಾನದಾಗ ಅದೀವಿ.

ಕೃಷ್ಣ : ದುತೆ-ಸತ್ಯಭಾಮಾ ಮಂದಿರದಲ್ಲಿ ಇರಬೇಕಲ್ಲ

ಭಾಗವತ : ಇರದ ಎಲ್ಲಿಗೆ ಹೋಗತಾಳ

ಕೃಷ್ಣ : ಬಣ್ಣ-ಸುಣ್ಣ ಇಳ್ಳೆ ಕಡಕ ಮಾಡೀರಪ-ನನ್ನ ಅವತಾರದ ನೆನಪು ಮಾಡಿಕೊಟ್ಟು ಸತ್ಯಭಾಮಾಳನ್ನು ಎಬ್ಬಿಸುತ್ತೇನೆ-

ಭಾಗವತ : ಹಾಂಗ ಮಾಡ್ರೆಪ-

ಕೃಷ್ಣ : ಪದ | ಸುಮಕ ಕಳ್ಳನ ಕೊಂದು
ನೇಮದಿ ವೇದದ ತಂದ
ತೆರೆಯ ಬಾಗಿಲಾ ತೆರೆಯ-

ಹೇ ಸತ್ಯಭಾಮಾ, ಸುಮಕಾಸುರನು ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿಸಿರಲು, ಮತ್ಸ್ಯಾವತಾರವ ತಾಳಿ ವೇದಗಳನ್ನು ರಕ್ಷಿಸಿದ ನಾನು ಬಂದಿದ್ದೇನೆ. ಬಾಗಿಲು ತೆರೆಯೆ-

ಸತ್ಯಭಾಮೆ : (ಒಳದಿನಿಂದಲೇ) ಮತ್ಸ್ಯಾವತಾರವಾದರೆ ಒಳ್ಳೆದಾಯಿತು. ಯಾವುದಾದರೂ ಒಂದು ಸಮುದ್ರ ನೋಡಿಕೊಂಡು ಹೋಗ್ರಿ-ಇಲ್ಲಿಗ್ಯಾಕ ಬಂದೀರಿ- ಇದರಂತೆಯೇ ಹತ್ತೂ ಅವತಾರಗಳ ವರ್ಣನೆ ನಡೆಯುತ್ತದೆ-

ಭಾಗವತ : ರಾಮಾವತಾರ ಯಾವಾಗ ಆತರಿ-

ಕೃಷ್ಣ : ರಾಮಾವತಾರ ಧರಿಸಿದ ಕಾಲ ಚೈತ್ರ ಶುದ್ಧ ನವಮಿ, ಶುಕ್ರವಾರ ಪುನರ್ವಸು ನಕ್ಷತ್ರ, ತಂದೆ ದಶರಥ, ತಾಯಿ ಕೌಶಲ್ಯ ರಾಣಿ ಸೀತಾ ದೇವಿ, ಗುರು ವಶಿಷ್ಟಾ ಮುನಿಗಳು, ಅಯೋಧ್ಯಾದಲ್ಲಿ ವಾಸ-ಬಾಗಿಲು ತೆರೆಯದ್ದರಿಂದ ಕೃಷ್ಣನು

ದೂತೆ, ಇವಳು ಕೃಷ್ಣ ಕೃಷ್ಣ ಅಂತ ಇಲ್ಲೆ ಇರ್ಲಿ ನಾನಿನ್ನು ಬರುವೆ (ನಿರ್ಗಮನ)

ಸತ್ಯಭಾಮಾ : (ಹೊರಬಂದು) ದೂತೆ-ಯಾರರ ಬಂದ್ರು ಹೋದ್ರೆನು-

ದೂತೆ : ಯಾರೂ ಬಂದಿಲ್ಲ್ರೆವ್ವಾ-

ಸತ್ಯಭಾಮಾ : ಯಾರುದ ಧ್ವನಿ ಕೇಳಿಸಿತಲ್ಲೇ ದೂತೆ- ಪರಮಾತ್ಮರ ಧ್ವನಿ ಇದ್ದಾಂಗ ಇತ್ತು- ನೀ ಏನ ಕಾಯಿತಿದ್ದಿ ಬಗಲುದಾಗ

ದೂತೆ : ಹೌದ ನಮ್ಮವ್ವಾ-ಯಾರ ಬಂದಿದ್ರು ಯತ್ಲಾಗ ಹೋದ್ರು ಇಬ್ಬರೂ ಹುಡುಕೋಣ ಬರ್ರಿ-ಅವರೆಲ್ಲಿಗೆ ಹೋಗತಾರಾ ಅರೆರೆ ಅಲ್ಲೆ ಅದಾರ ನೋಡ್ರಿ ಮಂದ್ಯಾಗ ಹ್ಯಾಂಗ ಕೂತಾರ

ಸತ್ಯಭಾಮೆ : ನೀನು ಹೋಗಿ ಕರೆದುಕೊಂಡು ಬಾ ದೂತೆ

ದೂತೆ : ಇಷ್ಟೂತನಕ ಪರಮಾತ್ಮರು ನಿಮ್ಮ ಮುಂದ ನಿಂತು-ಸತ್ಯಭಾಮಾ ನಾನು ಅಂಥವನು ಅಂದ್ರ ಬಾಗಿಲ ತೆರೆಯಲಿಲ್ಲ ಈಗ ಹ್ಯಾಂಗ್ರಿ ಅವರನ್ನ ಕರೆಯೋದು-

ಸತ್ಯಭಾಮೆ : ದೂತೆ-ಈಗಾದ ತಪ್ಪನ್ನು ಹೊಟ್ಯಾಗ ಹಕೊಂಡು, ಅವರ ಕಾಲು ಮುಗಿದು ಕರೆದುಕೊಂಡು ಬಾ-

ಭಾಗವತ : ತಪ್ಪು ಮಾಡಿದರ ಕಾಲ ಹಿಡಿದ್ರ ಒಳ್ಳೆದೆವ್ವ-ಇಬ್ಬರೂ ಕೊಡೇ ಹೋಗೋಣ ಬರ್ರಿ-ಯಪ್ಪಾ ಪರಮಾತ್ಮಾರ ಅಮ್ಮಾವರು ತಪ್ಪಾತು ಅಂತಾರ ಬರ್ರೆಪ

ಕೃಷ್ಣ : (ಪ್ರೇಕ್ಷಕರ ಮದ್ಯದಿಂದಲೇ-) ದೂತೆ-ಅವಳ ಹತ್ರ ಪದ್ದತಿನೇ ಇಲ್ಲ-

ಭಾಗವತ : ಹೀಂಗತೀರ ಹಾಂಗಾದರ ಯವ್ವಾ ಅಪ್ಪಾರಂತಾರ ನಿಮ್ಮಂರ್ತೆ ಪದ್ದತೀನ ಇಲ್ಲ ಅಂತ

ಸತ್ಯಭಾಮ : ಅಂದ್ರ ಏನ ದೂತೆ-

ಭಾಗವತ : ಅಂದ್ರ ಯವ್ವ-ನೀವು ಮಾಗನಿಂತುಕೊಂಡು ಕರದರ ಹ್ಯಾಂಗ್ರೆವ್ವ

ಸತ್ಯಭಾಮ : ಹಾಗದ್ರೆ ನಡೆ ದೂತೆ

ಪದ:
ಯಾತಕೆನ್ನನು ಪೀಡಿಸುವೆ ನೀ ಬಾರೋ ರಂಗಾ
ಪ್ರೀತಿಯಿಂದ ಕರೆದೆ ನಿನ್ನ
ಸೋತು ಬಂದವಳಿಗೆ ಸುಧೆಯುಣಿಸಬಾರೋ ರಂಗಾ ||
(ಇಬ್ಬರೂ ರಂಗದಿಂದು ಕೆಳಕ್ಕೆ ಇಳಿದು )

ಸತ್ಯಭಾಮೆ : ಸ್ವಾಮಿ ನನ್ನದು ತಪ್ಪಾಯಿತು, ಮನ್ನಿಸು ಪರಮಾತ್ಮಾ
(ಎಲ್ಲರೂ ರಂಗವನ್ನೇರಿದ ನಂತರ )

ಸತ್ಯಭಾಮೆ : ದೂತೆ-ನನ್ನದು ಸರ್ವಥಾ ತಪ್ಪಾಯಿತು ಪರಮಾತ್ಮರು ನನ್ನ ಕ್ಷಮಿಸಲಾರರೆ–

ಭಾಗವತ : ಕ್ಷಮಿಸ್ರಿ ಅಂತ ಕೇಳಿಕೊಳ್ರೆವ್ವಾ-

 

ಭಾಮೆ ನನ್ನೂಡನೆ ಕೋಪಮೇ?

ಸತ್ಯಭಾಮ : ಸ್ವಾಮಿ ನನ್ನದು ಸರ್ವಥಾ ತಪ್ಪಾಯಿತು. ಮನ್ನಿಸಿ, ಮಂದಿರಕ್ಕೆ ಬನ್ನಿರಿ.

ಕೃಷ್ಣ : ಹೇ ಭಾಮೆ, ನೀನು ಗುಣವಂತೆ ಸಿರಿವಂತೆ, ಕೇಳು. ಭಾಮೆ ಜಗದೊಳು ನೀನು ದೀಮಂತೆ, ಸತ್ರಾಜಿತ ಪುತ್ರಿ ನಾ ಕೊಟ್ಟ ಮುತ್ತಿನ ಹಾರ ಕೊಡು

ಸತ್ಯಭಾಮೆ : ದೂತೆ ಅದರ ಸುದ್ದಿ ಹೇಳ ತಾಯಿ – –

ದೂತೆ : ಅಪ್ಪಾವ್ರ – ಆ ಹಾರನ – ಅಮ್ಮಾವ್ರು ನಿಮ್ಮ ಚಿಂತ್ಯಾಗ ಕೊರವಂಜಿಗೆ ಕೊಟ್ಟಾರ್ರೀ

ಕೃಷ್ಣ : ಹೌದೇ ದೂತೆ – ಇದೇ ಇಲ್ಲವೆ ಆ ಹಾರ – –

ಸತ್ಯಭಾಮೆ : ಅಯ್ಯಾ ಆಶ್ಚರ್ಯ – ದೂಡೆ ನೋಡಿಲ್ಲಿ – – ಪರಮಾತ್ಮರ ಕೊರಳೊಳಗಿದೆ ಆ ಹಾರ. ಅಂದ್ರ ಆ ರೊರವಂಜಿ ನೀ – –

ಕೃಷ್ಣ : ಹೌದು ಸತ್ಯಭಾಮೆ – – ಆ ರೊರವಂಜಿಯು ನಾನೇ ಅಂದು ನಾನು ನಿನಗೆ ಯಾವುದಾದರೂ ರೂಪದಿಂದ ಹಾರ ಒಯ್ಯುವೆನೆಂದು ಹೇಳಿರಲಿಲ್ವೆ – –
ಅಂದ್ರೆ ಹೆಣ್ಣು ವೇಷ ಧರಿಸಬಾರದಿತ್ತು.
ವೇಷ ಯಾವುದಾದರೂ ಶಪಥ ಗೆದ್ದಂಗಾಯಿತಲ್ಲ. ನನ್ನ ಶಪಥ ನನಗೆ ಸತ್ಯಭಾಮೆಯದು ಅವಳಿಗೆ ದೂತೆ – ನಿನ್ನ ಶಪಥ ನಮ್ಮಿಬ್ಬರನ್ನು ಶಂದು ಕೂಡಿಸಿತು – ನಾವೆಲ್ಲರೂ ಮಂದಿರಕ್ಕೆ ಹೋಗೋಣ ನಡೆಯಿರಿ.

ಸತ್ಯಭಾಮೆ : ಬನ್ನಿ ಪರಮಾತ್ಮ – ಬನ್ನಿ ದೂತೆ – || ತೆರೆ ||

* ಮಂಗಳಂ *