(೧೦-೧೨ ವರ್ಷದ ಬಾಲಕನು ಕೃಷ್ಣನ ವೇಷ ಭೂಷಣದಲ್ಲಿ ಅಂದರೆ ಮೈಯೆಲ್ಲ ನೀಲಿ, ನವಿಲುಗರಿಯನ್ನು ತಲೆಗೆ ಕಟ್ಟಿಕೊಂಡಿರುತ್ತಾನೆ. ಕಿರೀಟ ತೋಳಬಂದಿಗಳಿರುತ್ತವೆ )

ಕಿಂವಾ…ಕಿಂವಾ…ಕಿಂವಾ…ಎನ್ನುತ್ತ ಪ್ರವೇಶಿಸುತ್ತಾನೆ.

ಭಾಗವತ : ಏನ ಬೆಕ್ಕಿನ ಮರಿಯೇನಪಾ…

ಮರಿ ಭಾಗವತ : ಅದೆಲ್ಲಿತ್ತೋ ಮಾರಾಯಾ ಇದು ಬೆಕ್ಕಿನ ಮರಿ ಅಲ್ಲ ಗೋಪಾಲಕನ ಕರೆ

ಭಾಗವತ : ಹೌದಾ-ನನ್ನ ಗಿಣಿ ಕರೆ
ಅವ್ವಾ ಅಂತಾ ಕರೀತಾನ
ಇವ್ನ ಗುರುತ ನನಗೇನ
ಯನ್ನ ಹೊಟ್ಟೆಯಲ್ಲಿ ಹುಟ್ಟಾನೇನ
ಸುಳ್ಳ ತುಪಾನಿ ಕೊಡತಾನ

ಗೋಪಾಲ : ಹೊರಗೆ ಗಿಲ್ ಗಿಲ್ ಸಪ್ಪಳಾ ಮಾಡತಾ ಇರುವವರು ಯಾರು?

ಭಾಗವತ : ಅವಳು ಗೊಲ್ಲತಿ ಬಾಳ…

ಗೋಪಾಲ : ಗೊಲ್ಲತಿ ಅಂದ್ಯಾ…ಬಿಡಬ್ಯಾಡ ಹಿಡಿ ಅವಳ್ನ ಆ ಗೊಲ್ಲತೀನ

ಆದಿತಾಳ,

ಸಖಿಯೇ ನೀನು ಬಾರೆ || ಪ ||
ಬಾರೆ ಮೈಯಾರ | ಮನೋಹರೆ ಸುಂದರ ಸಖಿ | ಬಾಬಾ  || ಅ.ಪ ||
ಬಡುನಡು ಬಳಕುತ ಬಡಿವಾರ ಮಾಡುತ
ಮಡದಿ ಶಿರೋಮಣಿ ನಡದೀ ಎಲ್ಲಿಗೆ ನೀ  | ಬಾ, ಬಾ
ಬಿದರಿದೆರಳಿ ಪೋರಿ ಎದುರಿಗೆ ಕಾಣುತ
ಮದಗಜಗಾಮಿನಿ ಸದನಕ ಕರೀತೀನಿ… ಬಾ | ಬಾ | ಬಾ
ಗೊಲ್ಲತಿ, ಗೊಲ್ಲತಿ, ಕಿಂವಾ…ಗೊಲ್ಲತಿ ಮೂಕ ಐತೇನ… ಮಾತಾ ಇಲ್ಲ.

ಭಾಗವತ : ಅದಾಕ್ಯೊ-ಇಷ್ಟರ ತನಕ ಹಾಡ್ಯಾಳ, ಕುಣದಾಳ ನಿನ್ನ ಕೂಡ ಮಾತಾಡಲಿಲ್ಲ

ಗೋಪಾಲ : ಹೌದಾ ಹಾಗಾದರ ಇನ್ನೂಮ್ಮೆ ಮಾತಾಡಿಸಿ ನೋಡ್ಲ್ಯಾ. ಗೊಲ್ಲತಿ ಏ-ಗೊಲ್ಲತಿ ಗೂಡ ಮಾತಾಡ

ಗೊಲ್ಲತಿ : (ಕಪಾಳಕ್ಕೆ ಹೊಡೆದು…) ಯಾಕಪಾ ಗೋಪಾಲ…

ಗೋಪಾಲ : ಅಯ್ಯಯ್ಯ… ಕಪಾಳ ಕೆಂಪಾತು ಕಿಂವಾ…(ಅಳು …)

ಭಾಗವತ : ನೀ ಎಂಥ ಕೀನ ನಮ್ಮವ್ವ… ನನ್ನ ಕೂಸಿನ ಕಪಾಳಕ ಹೊಡಿದಿ ನೀ ಎಂಥ ಹೆಂಗಸು

ಗೊಲ್ಲತಿ : ದೂತೆ…ನಾನು ಗೋಪಾಲನ ಕೆನ್ನೆಗೆ ಬಡಿಲಿಲ್ಲ

ಭಾಗವತ : ಬಡೀದ ಅಳತೈತೇನ ನನ್ನ ಕೂಸು

ಗೋಪಾಲ : ಕೇಳರ ಕೇಳನಮ್ಮವ್ವಾ… ನಾನೇನು ಹೊಡಿದಿಲ್ಲ…

ಭಾಗವತ : ಲೇ ಗೋಪಾಲಾ ಗೊಲ್ಲತಿ-ಬಡದಳೇನ

ಗೋಪಾಲ : ಇಲ್ಲ ಕಿಂವಾ

ಭಾಗವತ : ಮತ್ತ ಬೈದಳೇನ

ಗೋಪಾಲ : ಇಲ್ಲ

ಭಾಗವತ : ಮತ್ತ ಚಿವುಟಿದಳೇನು

ಗೋಪಾಲ : ಅದೂ ಇಲ್ಲ

ಭಾಗವತ : ಮತ್ತ ಯಾವುದೂ ಇರದಿದ್ರ ಅಳಾಕಯಾಕ ಹತ್ತೀಯೋ…

ಗೋಪಾಲ : ಗೊಲ್ಲತಿ ನನಗ, ಯಾಕಪಾ ಗೋಪಾಲ ಅಂತ ಅನಬೇಕೇನು

ಭಾಗವತ : ಮತ್ತ ಯಾಕಪಾ ಅಂತಾ ಅನದೆ ಯಾಕರಿ ಅಂತ ಕರೆಯಲು ನೀನೇನು ಅವಳ ಗಂಡನೇನು

ಗೋಪಾಲ : ಕಿಂವಾ ನಿನ್ನ ಗಂಡ

ಭಾಗವತ : ಪಾಡಾತು ಬಿಡು…ಏನಿದು ಹಾಂಗ ನೋಡತೀ ಅಲ್ಲ ಅವಳ ಕೊಳ್ಳಾನ ಗೆಜ್ಜಿಟೀಕೆ

ಗೋಪಾಲ : ಅದು ಏನ
ಅದು ಕಾಲಿಂದು ರುಳಿ, ಅದೆಲ್ಲಾ ನಿನಗ್ಯಾಕೋ ಬೇಕು.

ಗೋಪಾಲ : ಆ ಆ ಅದು ನಂದು ನನಗಬೇಕು.
ಹೀಗೆ ಗೋಪಾಲನು ಸುಂಕಕ್ಕಾಗಿ ಗೊಲ್ಲತಿಯನ್ನು ಕಾಡಿಸುತ್ತಾನೆ

ಗೋಲ್ಲತಿ : ಹೇ ದೂತೆ… ನಿನ್ನ ಗೋಪಾಲ ಕೈ ಹಿಡಿದಿದ್ದಾನೆ… ಬಿಡಿಸು

ಭಾಗವತ : ಎರಡನೆಯವರ ಜಗಳದಾಗ ಕೈ ಹಾಕೂದು ನೆಟ್ಟಗಲ್ಲರೀ ಯವ್ವಾ ನೀವ ಕೈಬಿಡಿಸಿಕೊಳ್ಲರೆಲ್ರಾ…

ಗೊಲ್ಲತಿ : ಕೈಯ ಬಿಡೋ ಗೋಪಾಲ, ಛೀ ತಗೀ ತಗೀ
ಮೊದಲೆ ಪುರುಷ ಭರದಿ | ಬೆದರಿ ನಾನಂಜುವೆ
ಮದನ ಕಲಾಪಕೆ ಕರೀತೀಯೋ ರಂಗಾ
ನಗೆಯಾಡಲು ಎದೆ ಭುಗಿಲೆಂಬುದು ಮೈ |
ಗೋಪಾಲ ನಿನ್ನ ಕೈ ಮುಗಿತೀನಿ ನನ್ನ ಕೈಬಿಡಪಾ, ಪರಸ್ತ್ರೀಯರನ್ನು ಕಾಡೂದು ನೆಟ್ಟಗಲ್ಲ.

ಭಾಗವತ : ಹೌದ್ರೆಪಾ… ಪರಸ್ತ್ರೀಯನ್ನು ಕಾಡೂದು ನೆಟ್ಟಗಲ್ಲ

ಗೋಪಾಲ : ದೂತೆ-ಈಗ ನೋಡು ಕೈಬಿಟ್ಟು ಸೆರಗ ಹಿಡಿದೀನಿ

ಭಾಗವತ : ಈಗ ಏನಂತೀಬೆ… ಕೈ ಹಿಡಿದಿಲ್ಲ ಮೈ ಹಿಡಿದಿಲ್ಲ, ಹಿಡಿದ ಸೆರಗಾಟು ಕತ್ತರಿಸಿ ಬಿಟ್ಟಾರತಲ್ಲಾ…

ಗೊಲ್ಲತಿ : ಅಯ್ಯೋ ದೂತೆ… ಸೆರಗು ಹರಿದರೆ ಮುತ್ತೈದೆತನ ಹೋಗುದಿಲ್ಲ? ಮುಚ್ಚಳಾ ತುಂಬಾ ಹೊನ್ನ ಕೊಟ್ಟರೂ ಮುತ್ತೈದೆತನ ಸಿಗೋದಿಲ್ಲ. ಅದಕ ಸೆರಗು ಹ್ಯಾಂಗ ಕತ್ತರಿಸಲೀಯಮ್ಮಾ :

ಭಾಗವತ : ಹ್ಯಾಂಗ ಕತ್ತರಿಸಲೀ ಅಂದ್ರ ಹ್ಯಾಂಗವ್ವ…ಬಂಡೀ ತುಂಬಾ ಹೊನ್ನ ಕೊಟ್ಟರೂ ರಂಡಿತನ ಸಿಗೊಲ್ದಿಂತ ಹಿಂದ ನಿಂತ ದೂತಿ ಬಡಕೊಂತ್ತೆತೆ.

ಗೊಲ್ಲತಿ : ಜ್ಯಾಷ್ಟಿ ಮಾಡತೀಯೇನೆ ದೂತಿ ಏನಾರ ಹೇಳಿ ಬಿಡಿಸಲ್ವಾ

ಭಾಗವತ : ನಾ ಏನಾರ ಹೇಳಿ ಬಿಡಿಸಲಿ…ನೀನ ಕೇಳಿಕೋ ಅಣ್ಣ ಸೆರಗ ಬೀಡೋ ಅಪ್ಪಾ ಸೆರಗ ಬಿಡೋ ಅಂತ ಬೇಡಿಕೊ

ಆದಿ ತಾಳ
ಅಪ್ಪ ಸೆರಗ ಬಿಡೋ ! ಅಣ್ಣ ಸೆರಗ ಬಿಡೋ
ಅಪ್ಪಯ್ಯ ಸೆರಗ ಬಿಡೋ ! ಗೋಪಾಲ ಸೆರಗ ಬಿಡೋ

ಗೋಪಾಲ : (ಹಾಡಿನಿಂದಲೇ ಉತ್ತರಿಸುತ್ತಾನೆ… )
ಅಪ್ಪನು ನಾನಲ್ಲ ! ನಿನ್ನಣ್ಣ ನಾನಾಲ್ಲ
ನಿಮ್ಮಪ್ಪನ ಅಳಿಯ ! ಕಾಣೆ
ನಿಮ್ಮಪ್ಪನ ಅಳಿಯ ಗೊಲ್ಲರ ಭಾಮೆ…

ಗೊಲ್ಲತಿ : ದೂತೆ-ಈಗ ಏನ ಹೇಳಲಿ. ನಿಮ್ಮಪ್ಪನ ಅಳಿಯ ಅಂತಾ ಅನ್ನಾಕ ಹತ್ಯಾನ.

ಭಾಗವತ : ಈಗಿನ ಹುಡುಗರು ಮಾವ ಅಂದ್ರ ಬಾಳ ಪ್ರೇಮ ಮಾಡತಾರ ಕಾರಣ ಮಾವಾ ಅಂದರ ನೋಡ.

ಗೊಲ್ಲತಿ : ಮಾವ ಸೆರಗ ಬಿಡೋ ! ಭಾವ ಸೆರಗ ಬಿಡೋ
ಮಾವಯ್ಯ ಸೆರಗ ಬಿಡೋ ಗೋಪಾಲ

ಗೋಪಾಲ : ಮಾವನು ನಾನಲ್ಲ ! ಭಾವನು ನಾನಲ್ಲ
ಮಾವನ ಮಗ ಕಾಣೆ ! ಗೊಲ್ಲರ ಭಾಮೆ…

ಗೊಲ್ಲತಿ : ದೂತೆ-ಏನಿದು ಮಾತು. ಕಂದ ಸೆರಗು ಬಿಡೋ ಅನ್ನಲೇ

ಭಾಗವತ : ಅಂದ ನೋಡ ಯವ್ವಾ  ಅದಕೇನೈತಿ…

ಗೊಲ್ಲತಿ : ಕಂದ ಸೆರಗ ಬಿಡೋ ! ತಂದೆ ಸೆರಗ ಬಿಡೋ
ಕಂದಯ್ಯಾ ಸೆರಗ ಬಿಡೋ
ಕಂದಯ್ಯ ಸೆರಗ ಬಿಡೋ ! ಗೋಪಾಲ

ಗೋಪಾಲ : ಕಂದನು ನಾನಲ್ಲ ! ತಂದೆಯು ನಾನಲ್ಲ
ನಿಮ್ಮ ಕಂದನ ತಂದೆ ನಾನು ! ಗೊಲ್ಲರ ಭಾಮೆ…

ಭಾಗವತ : ಕಂದಿಗೊಂದು ತಂದಿ ಆದಂಗಾತು, ಹರೇದ ಸೊಸಿ ನನಗ ಸಿಕ್ಕಂಗಾತು. ಚಿಂತೆ ಇಲ್ಲ ಬಿಡ್ರಪಾ.

ಗೊಲ್ಲತಿ : ದೂತೆ- ನಿನಗರ ಇದು ಮನಸ್ಸಿಗೆ ಬರತ್ತಾ…

ಭಾಗವತ : ಬರದೇನ ಮಾಡತ್ತಬೇ…ಬಿಸಿ ರೊಟ್ಟಿ ಕೊಡು ಸೊಸಿ ಸಿಕ್ಕೀ…
ಆದಿತಾಳ ಶ್ರಿರಾಗ

ಗೊಲ್ಲತಿ : ಸುಮ್ಮನೆದ್ದು ಬಾರೋ ರಂಗಾ ಹೋಗೋನು ನಡೆ ಮನೆಗೆ ಸೋತು ಬಂದೆನು ನಿನ್ನ ಮಾತಿಗೆ ! ಸುಮ್ಮನೆದ್ದು

(ಹಾಡಿನ ಅಂತ್ಯಕ್ಕೆ ಗೋಪಾಲ, ಗೊಲ್ಲತಿಯರ ನಿರ್ಗಮನ…)

(ಇಲ್ಲಿಯವರೆಗಿನದು ಪೂರ್ವರಂಗ-ಪೂರ್ವಪೀಠಕೆಯಾಯಿತು-)

(ಹಾಡುತ್ತ ಕೃಷ್ಣ ಪ್ರವೇಶಿಸಿ ಜೊತೆಯಲ್ಲಿ ರುಕ್ಮಿಣಿ.)

ಶ್ಲೋಕ :  ಬ್ರಹ್ಮಾದಿ ಕುಲಗಳಿಗೆಲ್ಲಾ ! ಪರಬ್ರಹ್ಮನೆನಸಿದೆ ನಾ
ಹಮ್ಮಿನ ಸುರರನ್ನು ಕೊಂದು ಹತ್ತಾವತಾರವ ತಾಳಿ
ತಂದೆ ವಸುದೇವ ತಾಯಿ ಕೇವಕಿಯರುದರದಲಿ ಜನಿಸಿದೆನಾ ನಾರೀಶಿರೋಮಣಿ ಕೇಳೆ…

ಭಾಗವತ : ನಮೋ ನಮಃ ತಾವು ಬಂದಂಥವರು ಯಾರು ?

ಕೃಷ್ಣ : ನಮ್ಮನ್ನ ವಿಚಾರಿಸುವ ನೀನು ಯಾರಲೋ ?

ಭಾಗವತ : ನಮಗೆ ದೂತೆ, ದೂತಿ-ಅಂತಾ ಅಂತಾರ್ರಿ…

ಕೃಷ್ಣ : ದೂತಿ-ಅಂದಮೇಲೆ ನನ್ನ ಭಕ್ತಳಾದಿ. ನಾನು ಯಾರೆಂಬುದನ್ನು ಹೇಳಬೇಕಲ್ಲವೆ. ಕೇಳು ದೂತಿ- ಕೇಳು

ಪದ:  ಝಂಪಾತಾಳ ಬ್ರೂಪರಾಗ
ಆದಿಮೂಲ ಆದಿಬ್ರಹ್ಮ ಆದಿಬ್ರಾಹ್ಮ ನಾ
ನಿರಾಕಾರ ನಿರ್ಗುಣ ನಿರ್ವಿಕಲ್ಪ ಸೃಷ್ಟಿಮೂಲ ಸೃಷ್ಟಿಲಯ
ಆದಿಮೂಲ ಪರಮಪುರುಷ ಪರಬ್ರಹ್ಮ ಪರಶಿವ!
ದೂತೆ ನಾನು ಆದಿಮೂಲನು, ಆದಿಬ್ರಹ್ಮನು… ನಾನು ನಿರಾಕಾರಿಯು, ನಿರ್ಗುಣನು, ಸೃಷ್ಟಿಮೂಲನು ಆಗಿದ್ದೇನೆ. ಸೃಷ್ಟಿ ಲಯಗಳಿಗೆಲ್ಲಾ ನಾನೇ
ಕಾರಣನು. ನಾನೇ ಪರಿಬ್ರಹ್ಮ.

ಭಾಗವತ : ತಿಳೀತು ಬಿಡ್ರಿ… ಈಗ ಯಾವ ಅವತಾರದಾಗ ಬಂದಿರಿ ಅವಿಷ್ಟೂ ಹೇಳ್ರಿ.

ಕೃಷ್ಣ : ಈಗ ಯಾವ ಅವತಾರ ಅಂತೀಯಾ. ಕೇಳಿನ್ನು ವಸುದೇವ ದೇವಕೀಸುತ ! ಎನ್ನ ಹೆಸರು ಕೃಷ್ಣ
ಭಂಡ ದೈತ್ಯಾರೆಲ್ಲರ ತುಂಡುಮಾಡಿದಾತ
ದುರುಳ ದೈತ್ಯರ ಕೊರಳು ಕೊಯ್ದು ! ಕರುಳ ಮಾಲೆ ಧರಿಸಿದಾತ
ದ್ರೌಪದಿಯ ಸೀರೆ ಸೆಳೆವಾಗ ! ಮಾನರಕ್ಷಣೆ ಮಾಡಿದಾತ
ಪಾಂಡವರ ಮನೆಯ ಧಾತ ! ಎನ್ನ ಹೆಸರು ಕೃಷ್ಣ ಕೃಷ್ಣ
ದೂತೆ-ನಾನೀಗ ಕೃಷ್ಣಾವತಾರದಲ್ಲಿದ್ದೇನೆ. ಭಕ್ತರು ಈಗ ಶ್ರೀಕೃಷ್ಣ ಶ್ರೀಕೃಷ್ಣ ಅಂತಾರ.

ದೂತೆ : ಯಾಕ್ರೆಪಾ ಇಷ್ಟೋತ್ತನಕ ಸೀರ್ಯಾಗ ಇದೇನ್ರೀ ?

ಕೃಷ್ಣ : ದೂತೆ- ಸೀರೆಯಲ್ಲ ಸಿರಿ ಅಂದರೆ ಲಕ್ಷ್ಮಿ. ಕೃಷ್ಣ ಅಂದರೆ ನನ್ನ ಹೆಸರು. ಈಗಲಾದರೂ ತಿಳೀತೋ ಇಲ್ಲೊ.

ಭಾಗವತ : ತಿಳೀತ್ರೆಪ್ಪಾ ತಿಳೀತು…ತಾವು ಕೃಷ್ಣ ಪರಮಾತ್ಮ ಅನ್ನು ಮಾತು ತಿಳೀತು…ಆದರೆ ಆ ವೈಕುಂಠಾ ಬಿಟ್ಟು ಇಲ್ಲಿಗೆ ಬಂದ ಬಗೆಯೇನು ದೇವಾ ?

ಕೃಷ್ಣ : ಬಗೆಯುಂಟು ದೂತೆ-ಒಂದು ಕಾರಣ ಇದೆ.

ಭಾಗವತ : ಏನು ಕಾರಣ ಸ್ವಾಮಿ ?

ಕೃಷ್ಣ : ದೂತೆ-ಕಾರಣವೇನಂದರೆ, ದೈತ್ಯರು ಮಾಡಿದ ಪಾಪದ ಹೊರೆಯನ್ನು ಹೊರಲಾರದೆ ಬಂದೇವಿ. ಗೋರೂಪ ಧಾರಣ ಮಾಡಿಕೊಂಡು ನಾನಿದ್ದ ಕ್ಷೀರಸಾಗರಕ್ಕೆ ಬಂದು, ಯನ್ನಲ್ಲಿ ಮೊರೆಯಿಡಲು ನಾನು ವಚನ ಕೊಟ್ಟೆ.

ಭಾಗವತ : ಏನಂತ ವಚನ ಕೊಟ್ಟಿರಿ ?

ಕೃಷ್ಣ : ಶ್ಲೋಕಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ-ಭಾರತ
ಅಭುತ್ಥಾನಾಂ ಅದರ್ಮಸ್ಯ
ತದಾತ್ಮಾನಾಂ ಸೃಜಾಮ್ಯಹಂ

ಅಂದರೆ ಯಾವ ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಬರುತ್ತದೆಯೋ, ಅಧರ್ಮ ಬೆಳೆಯುತ್ತದೆಯೋ ಯಜ್ಞ ಯಾಗಾದಿಗಳಿಗೆ ತೊಂದರೆಗಳುಂಟಾಗುತ್ತವೆಯೋ ಗೋಹತ್ಯೆ, ಬ್ರಹ್ಮಹತ್ಯೆ, ಶಿಶುಹತ್ಯೆ ಮುಂತಾದ ಮಹಾಪಾಪಗಳು ಸಂಭವಿಸುತ್ತವೆಯೋ ಆಗ್ಗೆ ನಾನು ಬರುತ್ತೆನೇಂದು ಭೂದೇವಿಗೆ ವಚನ ಕೊಟ್ಟಿದ್ದೇನೆ;

ಭಾಗವತ : ಯಾರ ಯಾರ ಸಲುವಾಗಿ ಬರಾತೀರಿ…

ಕೃಷ್ಣ : ದೂತೆ ನಾನು,

ಶ್ಲೋಕ: ಪರಿತ್ರಾಣಾಯ ಸಾಧೂನಾಂ
ವಿನಾಶಾಯಾ ದುಷ್ಟತಾನಾಂ
ಧರ್ಮ ಸಂಸ್ಥಾಪನಾರ್ಧಾಯ
ಸಂಭವಾಮಿ ಯುಗೇ ಯುಗೇ…

ಆದರೆ ಸಾಧು ಸತ್ಪುರುಷರನ್ನು ರಕ್ಷಿಸಿ, ಧರ್ಮವನ್ನು ಸ್ಥಾಪಿಸುವುದಕ್ಕಾಗಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಲು ಯುಗಯುಗದಲ್ಲಿ ನಾನು ಅವತಾರ ಮಾಡಿಕೊಂಡು ಬರುತ್ತೇನೆ. ಅದರಂತೆ ಈಗ ನಾನು ಕೃಷ್ಣಾವತಾರ ಧರಿಸಿ ಬಂದಿದ್ದೇನೆ.

ದೂತೆ : ಈ ಅವತಾರದಲ್ಲಿ ತಾವು  ಯಾವಯಾವ ದುಷ್ಟರನ್ನು ಸಂಹರಿಸಿದ್ದೀರಿ?

ಕೃಷ್ಣ : ಬಕಾಸುರ, ಅಘಾಸುರ, ಗಜಾಸುರ, ಕಂಸ, ವಕ್ರದಂತ, ಶಿಶುಪಾಲ ಇವರೇ ಮೊದಲಾದವರನ್ನು ಸಂಹರಿಸಿದ್ದೇನೆ.

ದೂತೆ : ಅದು ಸರಿ ತಮ್ಮಿಂದ ಉದ್ಧಾರ ಹೊಂದಿದವರು ಯಾರ್ಯಾರು?

ಕೃಷ್ಣ : ಯನ್ನ ಭಕ್ತರಾದ ಪಾಂಡವರು, ಯನ್ನ ಮಮತೆಯ ಮಿತ್ರನಾದ ಸುಧಾಮ, ಇವರನ್ನೊಳಗೊಂಡು ಅನೇಕ ಭಕ್ತರು ಉದ್ಧಾರ ಹೊಂದಿದ್ದಾರೆ.

ಭಾಗವತ : ಅದು ಸರಿ, ತಾವೀಗ ಒಬ್ಬರೇ ಬಂದಿದ್ದೀರೋ ಅಥವಾ ತಮ್ಮ ಕುಟುಂಬ

ಕೃಷ್ಣ : ದೂತೆ-ನನ್ನ ಅಷ್ಟ ರಾಣಿಯರೂ ಬಂದಿದ್ದಾರೆ

ಭಾಗವತ : ಅವರ್ಯಾರ್ರಿ

ಕೃಷ್ಣ : ಮಿತ್ರವತಿ, ಜಾಂಬವತಿ, ವೃಂದ, ಗಂಧಿ, ಕಾಲಿಂದಿ, ತುಲಸಿ, ಸತ್ಯಭಾಮಾ, ರುಕ್ಮಿಣಿ ಎಲ್ಲರೂ ಬಂದಿದ್ದಾರೆ.

ಭಾಗವತ : ಅವರೆಲ್ಲಿದ್ದಾರೆ ಈಗ

ಕೃಷ್ಣ : ತಮ್ಮ ತಮ್ಮ ಮಂದಿರಗಳಲ್ಲಿದ್ದಾರೆ. ನನ್ನೂಡನೆ ಈಗ ಒಬ್ಬಳೇ ಬಂದಿದ್ದಾಳೆ.

ಭಾಗವತ : ಒಬ್ಬಳ ಬಂದಾಳ-ಪರವಾಯಿಲ್ಲರೆಪಾ ನಿಮ್ಮ ಹಿಂದ ನಿಂತಾರಲಾರಿ ಅವರ ಏನ್ರಿ- ಎಷ್ಟ ದೊಡ್ಡಾಕಿ ಅದಾಳಲ್ಲೋ ಮಾರಯಾ ಅವರ್ನ ನಾನು ಮಾತಾಡಿಸಲ್ಯಾ-

ಕೃಷ್ಣ : ಅದಕ್ಕೇನ ನಯವಿನಯದಿಂದ ಮಾತಾಡಿಸಬಹುದು ನಾನಿನ್ನು ಬರುವೆ (ನಿರ್ಗಮನ…)

ಭಾಗವತ : ಅಮ್ಮಾ ತಾವು ಬಂದಂಥವರು ದಾರು-ತಮ್ಮ ನಾಮಾಂಕಿತವೇನು ?

ರುಕ್ಮಿಣಿ : ನನ್ನ ಕೇಳತಕ್ಕವಳು ದಾರು-

ಭಾಗವತ : ಅಮ್ಮಾ ನನಗೆ ದೂತಿ ದೂತೀ ಅಂತಾ ಕರಿತಾರ

ರುಕ್ಮಿಣಿ : ದೂತಿ-ನಿನಗೆ ಬೇಕಾದ ವಿಷಯ ಯಾವುದು

ಭಾಗವತ : ಪ್ರಥಮದಲ್ಲಿ ಹೆಣ್ಣು ಮಕ್ಕಳಿಗೆ ತವರ ಮನೆ ಶ್ರೀಷ್ಠ

ರುಕ್ಮಿಣಿ : ಹೌದು ದೂತೆ ನನಗೆ ತವರುಮನೆ ಉಂಟು

ಭಾಗವತ : ಮತ್ತ ಅತ್ತಿ ಮನಿ-

ರುಕ್ಮಿಣಿ : ಅದೂ ಉಂಟು

ಭಾಗವತ : ಹಾಂಗಾದ್ರ ತಮ್ಮ ತವರು ಮನೆ ಯಾವುದು, ಅತ್ತಿಮನಿ ಯಾವುದೂ ಒಂದಿಟು ಹೇಳ್ರಿ

ರುಕ್ಮಿಣಿ : ಕ್ಷೀರ ಸಾಗರ ತವರಮನೀ
ದ್ವಾರಕಾ ನನ್ನ ಅತ್ತೀಮನಿ ! ಈಗ
ಸ್ಥಿರವಾಗಿರುವುದು ವೈಕುಂಠಪುರವಮ್ಮಾ-
ದೂತೆ-ಕ್ಷೀರಸಾಗರ ನನ್ನ ತವರ ಮನೆ. ದ್ವಾರಕಾಪಟ್ಟಣ ನನ್ನ ಅತ್ತೆಯ ಮನೆ- ಈಗ ವಾಸ ವೈಕುಂಠದಾಗ

ಭಾಗವತ: ಅಯ್ಯ ನಮ್ಮವ್ವ ನಿನ್ನ ಒಯ್ದು ಆ ಕುಂಠಗ ಯಾಕ ಕೊಟ್ಟ್ರು ತಾಯಿ

ರುಕ್ಮಿಣಿ : ದೂತೆ-ಕುಂಠಗ ಕೊಟ್ಟಿಲ್ಲ ನನ್ನ-ನಮ್ಮವರು ವೈಕುಂಠದ ಅಧಿಪತಿ-

ಭಾಗವತ : ತಮ್ಮ ಅತ್ತಿಮಾವರ ಸುದ್ಧಿ ಒಂದಿಟ ಹೇಳ್ರಿವ್ವಾ

ರುಕ್ಮಿಣಿ : ದೇವಕಿ ನನ್ನ ಅತ್ತಿಯವ್ವಾ
ವಸುದೇವ ಯನ್ನ ಮಾವನವ್ವಾ
ಭಾವನಾಗಬೇಕೆನಗೆ ಬಲರಾಮದೇವರವ್ವಾ

(ಇದರಂತೆ ರುಕ್ಮಿಣಿಯು ತನ್ನ ಪರಿಚಯ ಹೇಳಿ ಕೃಷ್ಣನು ತನ್ನ ಪತಿ ಎಂದು ಹೇಳುತ್ತಾಳೆ. ಅಲ್ಲಿಗೆ ಕೃಷ್ಣನು ವಾಪಸ್ಸಾಗುವನು)

ರುಕ್ಮಿಣಿ : ದೂತೆ-ಪರಮಾತ್ಮನು ಇಲ್ಲಿಯವರೆಗೆ ಎಲ್ಲಿಗೆ ಹೋಗಿದ್ದರು ಕೇಳು

ಭಾಗವತ : ಯಪ್ಪಾ-ಇಲ್ಲಿಯವರೆಗೆ ಎಲ್ಲಿಗೆ ಹೋಗಿದ್ದಿರಿ ಕೇಳು ಅಂತಾ ಹೇಳಿದ್ರು ಅವ್ವಾರು

ಕೃಷ್ಣ : ಹೌದ, ನಾನು ನನ್ನ ಮನಸ್ಸಿಗೆ ಬಂದ ಕಡೆಗೆ  ಹೋಗಿದ್ನೆಂತ ಹೇಳು

ಭಾಗವತ : ಹಾಂಗ ಹೇಳಿದರ್ಯಾಂಗ್ರೆಪ್ಪಾ…ಬಿಡಿಸಿಹೇಳ್ರಿ ಒಂದಿಷ್ಟ

ಕೃಷ್ಣ : ಪಾತಾಳ ಲೋಕದಲ್ಲಿ ಬಲಿಚಕ್ರವರ್ತಿ ನನ್ನ ಧ್ಯಾನ ಮಾಡುತ್ತ ಕೂತಿದ್ದ ಅವನಿಗೆ ದರ್ಶನ ಕೊಡಬೇಕಿತ್ತು. ಇದೂ ಅಲ್ಲದೆ ನನ್ನ ಗುರುಗಳಾದ ಸಂದೀಪರಿಗೆ ಭೆಟ್ಟಿ ಕೊಡಬೇಕಿತ್ತು. ಇದೂ ಅಲ್ಲದೆ ಇನ್ನೂ ಎಷ್ಟೂ ಭಕ್ತಾದಿಗಳನ್ನು ಕಾಣಬೇಕಾಗಿತ್ತು. ಅವರ ಕೋರಿಕೆಗಳನ್ನು ಈಡೇರಿಸಬೇಕಾಗಿತ್ತು. ಈ ಕಾರಣಕ್ಕಾಗಿ ಹೋಗಿದ್ದೆನೆಂದು ಹೇಳು .

ಭಾಗವತ :  (ರುಕ್ಮಿಣಿಗೆ-) ತಾಯೀ ಪರಮಾತ್ಮನು ಗುರುಗಳಿಗೆ ಭೆಟ್ಟಿಯಾಗಲು ಬಲಿಚಕ್ರವರ್ತಿಗೆ ದರ್ಶನ ಕೊಡಲು ಪಾತಾಳಕ್ಕೆ ಹೋಗಿದ್ದರಂತೆ ಹೀಂಗ ಹೇಳು ಅಂತ ಅಂದ್ರು ನೋಡ್ರಿ.

ರುಕ್ಮಿಣಿ : ದೂತೆ-ಇದೆಲ್ಲಾ ಸುಳ್ಳು, ಅವರೋದ ಜಾಗ ಬ್ಯಾರೆ ಅದ…

ಭಾಗವತ : ಹೌದ್ರೆವ್ವಾ-ಊರಹೊರಗಿನ ಕೇರಾಗ ತಿರಗತಿದ್ರು

ರುಕ್ಮಿಣಿ : ಹುಚ್ಚೀ ಹುಚ್ಚೀ-ನಿನಗ ಅವರ ಗುಣ ಗೊತ್ತಿಲ್ಲ.

ಭಾಗವತ : ನಮಗ್ಯಾಂಗ ಗೊತ್ತಿರುತ್ರಿ..ತಾವು ಹೇಳಿದ್ರ ಗೊತ್ತು

ರುಕ್ಮಿಣಿ : ಹೇಳಿದ್ರ ಗೊತ್ತಾಗತ್ತಲ್ಲ…ಹೇಳುತ್ತೇನೆ ಕೇಳು…
ಪದ ಆದಿತಾಳ, ರಾಗ-
ಬಂದದ್ದೇನು ಕುಂದು ! ಪ್ರಿಯಾ ಪ್ರಿಯಾ
ಇಂಡು ಕೇಳಿ ಬಾ !
ಮಂದಗಮನೆಗೆ ಮೆಚ್ಚಿ ಎನ್ನನ್ನು
ನಿಂದಗೆ ಗುರಿ ಮಾಡಿದುದು ಜಿತವೆ,
ನಂದನಂದನ…ನಂದ ನಂದನ,

ದೂತೆ-ನನ್ನ ಮೇಲಿನ ಮನಸ್ಸು ತೆಗೆದು, ಮತ್ತೊಬ್ಬಳ ಮೇಲಿಟ್ಟು ನನ್ನನ್ನು ಮನ್ಮಥನ ಬಾಣಕ್ಕೆ ಗುರಿ ಮಾಡಿದ್ದಾರೆ, ಇದು ತಪ್ಪು ಹೌದಿಲ್ಲೋ ಕೇಳಿಬಾ…

ಹೋಗು ಕೇಳಿ ಬಾ.

ಭಾಗವತ : ಕೃಷ್ಣನನ್ನು ಸಮೀಪಿಸಿ-ಯಪಾ…ತಪ್ಪು ನಿಮ್ಮ ಕಡೇನ ಅದ.

ಕೃಷ್ಣ : ಅದಾವ ತಪ್ಪು

ಭಾಗವತ : ಯನ್ನ ಮೇಲಿನ ಮನಸ್ಸು ತೆಗೆದು

ಕೃಷ್ಣ : ನಿನ್ನ ಮೇಲಿನ ಮನಸ್ಸ

ಭಾಗವತ : ಅಲ್ರೆಪಾ ಅಮ್ಮಾವರ ಮೇಲಿನ ಮನಸ್ಸು ತೆಗೆದು, ಮತ್ತೂಬ್ಬಳ ಮ್ಯಾಲೆ ಇಟ್ಟಿದ್ದಿರಂತೆ…

ಕೃಷ್ಣ : ಏನೇ ದೂತೆ  ರುಕ್ಮಿಣಿ ಹೀಂಗ ಆಂತಾಳ

ಭಾಗವತ : ಹೂನ್ರಿ ಹೀಂಗ ಅಂದ್ರು

ಕೃಷ್ಣ : ದೂತೆ-ತಪ್ಪು ಅವಳ ಕಡೇನ ಅದ ಕೇಳು ಹೇಳತೀನಿ

ಪದ ಮಿಶ್ರತಾಳ,
ಸುದುತಿ-ನಿನ್ನ ಕದದೆಗೆ ಚುಂಬನವನಿಕ್ಕಲು
ಅಧರ ಸುಧೆಯ ಸವಿದೇನಂದರೆ
ವದನ ವಕ್ರವ ಮರೆಯ ಮಾಡಿದೆ ! ಸುದುತಿ-ನಿನ್ನ
ದೂತೆ-ರುಕ್ಮಿಣಿ ಪ್ರೇಮದವಳೆಂದು ತಿಳಿದು, ಎಡದೊಡೆಯ
ಮೇಲೆ ಅವಳನ್ನು ಕೊಡಿಸಿಕೊಂಡು ಚುಂಬನ ಕೊಡುವ ಕಾಲದಲ್ಲಿ
ಅವಳು ಸುಂದರವಾದ ಮುಖವನ್ನು ಓರೆ ಮಾಡಬೇಕೆ ? ಇದು ತಪ್ಪು ಹೌದಲ್ಲ

ಭಾಗವತ : ಬರಬರಿ ತಪ್ಪು ಬಿಡ್ರಿ

ಕೃಷ್ಣ : ಹಾಗದರೆ ರುಕ್ಮಿಣೀನ್ನ ಕೇಳು

ಭಾಗವತ : ಅಮ್ಮಾವ್ರ ತಪ್ಪು ನಿಮ್ಮ ಕಡೇನ ಅದ…

ರುಕ್ಮಿಣಿ : ಅದು ಹ್ಯಾಗೆ ತಪ್ಪು ನನ್ನ ಕಡೆ ಇದೆ

ಭಾಗವತ : ರುಕ್ಮಿಣಿಯು ಪ್ರೇಮದವಳೆಂದು ತಿಳಿದು, ಎಡದೊಡೆಯ ಮೇಲೆ ಕೂಡ್ರಿಸಿಕೊಂಡಿ ಚುಂಬಮ ಕೊಡುವ ಕಾಲದಲ್ಲಿ ಮುಖ ಸೂಟ್ಟ ಮಾಡಿಕೊಂಡಾತೆ

ದೂತೆ    ಹೀಗಂತಾರ
ಹೂನ್ರಿ ಹೀಂಗ ಅಂತಾರ
ಇದು ತಪ್ಪಲ್ಲ; ತಪ್ಪು ಅವರ ಕಡೇನ ದ
ಅದಾವ ತಪ್ಪರಿ
ದೂತೆ-ಕೇಳು ಹೇಳುತ್ತೇನೆ-
ಚದುರಾ ನೀ ಕೇಳೋ ಮದನ ಕಲಹದಲ್ಲಿ
ಉದಕ-ಸುರಿಯಲು ಮೊದ್ದ ದುಕೂಲದ
ತುದಿಯ ಸೆರಗಿಲೊರಿಸುತಿದ್ದೆ-
ಮದನ ಕಲಾಪದಲ್ಲಿ ಮುಖದ ಬೆವರು ಬರಲು, ಒರೆಸಿಕೊಳ್ಳಲು ಮುಖವಾರಿ ಮಾಡಿಕೊಂಡೆ…

(ಹೀಗೆಯೇ ಆರೋಪ ಪ್ರತ್ಯಾರೋಪಗಳು ನಡೆದು, ಪ್ರಣಯ ಕಾಲದಲ್ಲಿ ಘಟಿಸಿದ ಘಟನಗಳನ್ನು ಬಿಡಿಬಿಡಿಯಾಗಿ ಹಾಡಿ ವಿಸ್ತರಿಸುತ್ತಾರೆ-

ಕೃಷ್ಣ : ನೀರೆ ಮಾರನೆ ತೋರ್ಪುವಂದದಿ
ನಾರಿ ನಿನ್ನಯ ಸುಖ | ಗುರುಕುಚುಗಳಲಿ
ಕರಮಾರ ಬೇಕೆಂಬ ಸಮಯದಿ
ಚಾರುಕರವ ಮರೆಯ ಮಾಡಿದೆ | ನೀರೆ:

ರುಕ್ಮಿಣಿ : ದೀರಾ | ಗುಣಗಂಭೀರಾ ನೀ ಲಾಲಿಸೋ
ತೋರ ಮುತ್ತಿನ ಹಾರ
ತೋರ ಮುತ್ತಿನ ಹಾರಭಾರದಿ
ಓರೆ ಮಾಡಿ ನಾ ಕಲನಗ್ರಂಥಿಯ |
ಹೀಗೆಯೇ ಸಾಗಿ ಕೃಷ್ಣನು,-
ಬಿಡು ಬಿಡು ನಿನ್ನಯ  ಸಲಿಗೆಯ ಸಾತಿ ! ಹೇ ಮಾನಿನಿಯೇ
ಪಟ್ಟದರಸಿಯೆಂದು ಬಗೆದೆ ! ಹೇಳಿದಂತೆ –ಕೇಳದೆ
ಪ್ರೀತಿ ಭಕ್ತಿಗಾಗಿ ನಾನು ಮೋಹಹೋದೆ ! ನಾನು !
ಎಂದು ಕೋಪಿಸಿಕೊಂಡು ಸ್ವಾಮಿಯನ್ನು ರುಕ್ಮಿಣಿಯು-
ಮಾತಾಡೋ ಮನೋಹರ ! ಮುರಲೀಧರ
ಅಪರಾಧ ಕ್ಷಮಿಸೆನ್ನ ! ಮಾತಾಡೋ

ಪದ : ಪತಿಸೇವೆಯೋ ಗತಿ-ಸತಿಗೆ
ಏತಕೆ ಯಾತ್ರೆ ! ಏತಕೆ ತೀರ್ಥ
ಪತಿ ವಚನಗಳು ಸತಿಗೆ ವಿನೋದ…
ಇಬ್ಬರಿಗೂ ಕೋಪ ಉಂಟಾಗಿ ಕೃಷ್ಣನು ರುಕ್ಮಿಣಿಯನ್ನು ಮಾತನಾಡಿಸಿ
ಮಾತಾಡ ಮಂದಯಾನಿ !
ಮುನಿಸೇನ ಮಾನನಿನೇ
ಏನಜಾಕ್ಷಿ ನಾ ನಿನ್ನ ನೆನಸುವೆನು ಸುದಿನ
ಮನಸಿಜನಾಟದೂಳು ಅನುಕೂಲ ಸೇವೆ !

(ಈ ದೃಶ್ಯದಲ್ಲಿ ಹಾಡು, ನೃತ್ಯದ ಭಂಗಿಗಳು ಜನಪ್ರಿಯ, ಭಾಗವತನು ಇಬ್ಬರ ಮಾತನ್ನು ಬಿಡಿಸಿಹೇಳುತ್ತಾನೆ)