ನಾರದ  (ಹಾಡುತ್ತ ಪ್ರವೇಶ..)
ನಾರಾಯಣ ಗೋವಿಂದ ಜಯ
ಹರಿ ನಾರಾಯಣ ದುರತ ನಿವಾರಣ
ಪರತರ ಪರಮಾನಂದ ಸದಾ ಶಿವಶಂಕರ ||
ದೂತೆ- ಸತ್ಯಭಾಮಾದೇವಿಯವರು ಇದ್ದಾರೆಯೇ ?

ಭಾಗವತ : ಇದ್ದಾರೆ, ಸ್ವಾಮಿ

ನಾರದ : ದೂತೆ ಅವರನ್ನು ಕರೆಯುವಂಥವನಾಗು.

ಭಾಗವತ : ಅಮ್ಮಾ… ಸತ್ಯಭಾಮಾ ದೇವಿಯವರೇ, ನಾರದ ಮಹರ್ಷಿಗಳು ಬಂದಿದ್ದಾರೆ.

ಸತ್ಯಭಾಮ : (ಪ್ರವೇಶಿಸಿ) ಮುನಿಪುಂಗವಾ ವಂದನೆಗಳು…ಕುಳಿತುಕೊಳ್ಳಿ.

ನಾರದ : ತಾಯಿ ಸತ್ಯಭಾಮ, ಒಂದು ಮಿಷಾಯ ಹೇಳಲು ನನಗೆ ಸಂಕಟವಾಗುತ್ತಿದೆ ತಾಯಿ.

ಸತ್ಯಭಾಮ : ಅದಾವ ವಿಚಾರ ಸ್ವಾಮಿ

ನಾರದ : ಇಂದ್ರ ಲೋಕದಿಂದ ತಂದ ವರ ಪಾರಿಜಾತನ ಪರಮಾತ್ಮನು ಪಡೆದು ರುಕ್ಮಿಣಿಗೇ ಮುಡಿಸಿದರಮ್ಮ. ನಾನು ನಿನಗೆ ಕೊಡೋಣವೆಂದರೂ ಕೇಳಲಿಲ್ಲವಮ್ಮ.

ಸತ್ಯಭಾಮ : ಅದರಲ್ಲೇನು ಬಿಡಿ. ನಾನು ಮುಡಿದರೂ ಅಷ್ಟೇ ನನ್ನಕ್ಕ ಮುಡಿದರೂ ಅಷ್ಟೇ.

ನಾರದ : ಹಾಗಲ್ಲ ಸತ್ಯಭಾಮ… ಅದು ಸಾಮಾನ್ಯ ಪುಷ್ಪವಲ್ಲ, ಅದು ಇದ್ದಲ್ಲೇ ಪರಮಾತ್ಮನ ವಾಸ.. ಕಾರಣ ನಿನಗೆ ಪರಮಾತ್ಮನು ಬರಬೇಕಾದರೆ ಅದನ್ನು ಹೊಂದಲೇಬೇಕು.

ಸತ್ಯಭಾಮ : ಅದಾವ ಮಹಾವಿಚಾರ ನಾರದರೇ ನಾನು ಪಾರಿಜಾತವನ್ನು ಪಡೆದೇ ಪಡೆಯುವೆ…

ನಾರದ : ಹಾಗೇ ಮಾಡು ತಾಯಿ, ನಾನಿನ್ನು ಬರುವೆ…ನಾರಾಯಣ, ನಾರಾಯಣ.

ಸತ್ಯಭಾಮ : ದೂತೆ- ಪರಮಾತ್ಮರು ಯನ್ನ ಮಂದಿರಕ್ಕೆ ಬಾರದೆ ಇಂದಿಗೆ ನಾಲ್ಕು ದಿನಗಳಾದವು. ನಾರದರು ಹೇಳಿದ ವಿಚಾರ ಕೇಳಿ…ಸರಿಸರಿ ಸವತಿಯರಲ್ಲಿ ನನಗೆ ಅವಮಾನವಾಯಿತು. ಇದಕ್ಕೇನು ಉಪಾಯವ ಮಾಡಲಿ, ಚಿಂತೆ ಹತ್ತಿದೆ ದೂತೆ-

ಭಾಗವತ : ಅದನ್ಯಾಕೆ ಹಚ್ಚಿಕೊಂಡ್ರಿ ಸುಡ್ಲಿ ಬಾಳಕೆಟ್ಟದ್ದು ತಾಯಿ ಚಿಂತಿ. ತಿಳಿದವರು ಏನ ಹೇಳ್ಯಾರ.

ಸತ್ಯಭಾಮ : ಏನ ಹೇಳ್ಯರ ದೂತೆ

ಭಾಗವತ : ಚಿತಾಹಶ್ಚ ಚಿಂತಾಯಶ್ಚ | ಬಿಂದುಮಾತ್ರ ವಿಶೇಷತಃ |
ಚಿತಾದಹತಿ-ನಿರ್ಜೀವಂ | ಚಿಂತಾದಹತಿ ಚೇತನಂ ||
ಯವ್ವಾ ಚಿಂತೆಗೂ ಚಿತೆಗೂ ಒಂದೇ ಒಂದು ಬಿರದು ಅಂತವಿದೆ, ಚಿಂತೆಯೊಳಗಿನ ಪೂಜೆ ತಗದರ ಚಿತೆ ಅಗತೈತಿ, ಚಿತೆ ಅಂದ್ರೆ ಬೆಂಕಿ ಯವ್ವ ಬೆಂಕಿ,

ಬೆಂಕಿ ನಿರ್ಜೀವಿಗಳನ್ನು ಸುಟ್ಟರೆ, ಚಿಂತೆ ಸಜೀವಿಗಳನ್ನು ಸುಡತೈತಿ ಅಂತ ಶಾಸ್ತ್ರ ಉಂಟು ತಾಯಿ…ಚಿಂತೆ ಯ್ಯಾಕ ಮಾಡತೀರಿ ಧೈರ್ಯಂ
ಸರ್ವತ್ರ ಸಾಧನಂ…

ಸತ್ಯಭಾಮ : ಏನಮಾಡಿದರೂ ಧೈರ್ಯ ಬರಲೊಲ್ಲದು ದೂತೆ ನನಗೆ.

ಭಾಗವತ : ಯವ್ವಾ ಪರಮಾತ್ಮನಿಗೆ ಒಂದು ಪತ್ರ ಬರೀರಿಯವ್ವ ಹಾಂಗೂ ಕಲತವರ ಅದೀರಿ.

ಸತ್ಯಭಾಮ : ಹೌದಲ್ಲ ದೂತೆ- ಒಕ್ಕಣಿಕಿ ಏನಂತ ಬರೆಯಲಿ

ಭಾಗವತ : ಬರೀರಿ-ತೀರ್ಥರೂಪ ರಾಜಮನ್ಯ ರಾಜಶ್ರೀ

ಸತ್ಯಭಾಮ : ದೂತೆ- ಇದು ತಂದೆ, ಹಿರಿಯರಿಗೆ ಬರೆಯುವಂಥ ಒಕ್ಕಣಿಕೆ
ಮತ್ತ-ಹೀಗೆ ಬರೆದರೆ ಹೇಗೆ ದೂತೆ-

ಪದ :  ಶ್ರೀಮಂತ ಧೀಮಂತ ರಹಿತಾದಿಮದ್ಯಂತ |
ಶ್ರೀಮಧುವಿನ ಕಾಂತ ಮಹಿಮಾನಂತ ||
ಕಾಮನಾ ಪಡೆದಂಥ ಸೌಮ್ಯ ರೂಪವಂತ |
ಕಾಮಿನಿಯರೊಲಿಸುವ ನೀನೆ ಬಲವಂತ
ಹೇಗಿದೆ ದೂತೆ-

ಭಾಗವತ : ಎಲ್ಲಾ ಬರಬರಿ ಐತೆವ್ವ. ಆದರೆ ಬಲವಂತ, ಎಡದಂತಾ ಬರೆದೀರಲ್ರಿ. ಆದ್ರ ಪತ್ರದಾಗ ಮಜಕೋರನ ಬರೀಲಿಲ್ಲ ನಮ್ಮವ್ವ

ಸತ್ಯಭಾಮ : ಬರೆಯುವೆ ಕೇಳು ದೂತೆ-
ವಿಧಿಸುತನು ತಂದಿತ್ತ ಪಾರಿಜಾತವ ಕುಸುಮ,
ಅದನು ಕೊಟ್ಟು ಕಳುಹಿಸಿದರೆ ಅತ್ಯಂತ ಪ್ರೇಮ
ಯದುಕುಲತಿಲಕಾ ಯನ್ನನ ಮೇಲೆ ದಯವಿಟ್ಟು
ಅದ ಕಳುಹಿದರಾತ್ಯಂತ ಪ್ರೀತಿ ಅಹುದು…
ಅಂದರೆ ಪಾರಿಜಾತವ ಕಳಿಸಿದರೆ ಅತ್ಯಂತ ಪ್ರೀತಿ-ಅಂತ

ಭಾಗವತ : ಬರೋಬರಿ ಆಯಿತು ಬಿಡು ತಾಯಿ…ಇನ್ನ ಪತ್ರ ಹ್ಯಾಂಗ ಮುಟ್ಟಿಸೋದು ?

ಸತ್ಯಭಾಮ : ದೂತೆ-ನೀನಿದ್ದಿಯಲ್ಲ ತೊಗೊಂಡು ಹೋಗು…

ಭಾಗವತ : ತೊಗೊಂಡು ಹೋದೇನು. ಆದರ ಅವರ ಮನಿ ಅಡ್ರೆಸ್ ನನಗೆ ಗೊತ್ತಾಗಾಕಿಲ್ಲ.

ಸತ್ಯಭಾಮ : ಹಾಗದರೆ ದೂತೆ- ಯನ್ನ ಅರಮನೆಯ ಅರಗಿಳಿಯನ್ನು ನಿನ್ನ ಸಂಗಡ ಕಳಿಸುವೆ-ನೇರವಾಗಿ ನೀವಿಬ್ಬರೂ ಪರಮಾತ್ಮರಲ್ಲಿಗೆ ಹೋಗಿ, ಕಾಗದ ಕೊಟ್ಟು ಬನ್ನಿ.

ಮೇಳ || ಅರಗಿಳಿಯ ರುಂಡದೂಳು
ಅರನೆ ಪತ್ರವ ಕಟ್ಟಿ
ಮುರಹರಿಗೆ ಮುಟ್ಟುಸಲು
ತ್ವರಿತದಿ ಕಳುಹಿದಳು… (ನಿರ್ಗಮನ- ಸತ್ಯಭಾಮ)

ಭಾಗವತ : ಸ್ವಾಮಿ ತಮಗೊಂದು ಪತ್ರ ಬಂದೈತಿ

ಕೃಷ್ಣ : ಎಲ್ಲಿಂದೋ

ಭಾಗವತ : ಮತ್ತೆಲ್ಲಿಂದ-ಸ್ವರ್ಗದಿಂದ (ಕಾಗದ ಕೊಡುವನು…)

ಕೃಷ್ಣ : ದೂತೆ-ಇದು ಸತ್ಯಭಾಮೆಯ ಪತ್ರ ಅಂತ ಕಾಣತ್ತ

ಭಾಗವತ : ಅಲ್ಲ ಯಪ್ಪ ಪತ್ರ ಮುಟ್ಟದನ ಸತ್ಯಭಾಮೆಂದು ಅಂದ್ರಿ-ಅದರ ಮಜಕೂರಾಟ ಹೇಳಿ ಬಿಡ್ರಿ.

ಕೃಷ್ಣ : (ಓದಿ-) ಶ್ರೀಮಂತ ಧೀಮಂತ ರಹಿತಾದಿಮಮದ್ಯಾಂತ
ಶ್ರೀವದುವಿನ ಕಾಂತ ಮಹಿಮಾನಂತ
ಕಾಮನಾ ಪಡೆದಂಥ ಸೌಮ್ಯ ರೂಪವಂತ
ಕಾಮಿನಿಯರೊಲಿಸುವ ನೀನೆ ಬಲವಂತ-

ದೂತೆ ಪತ್ರ ಓದಿದ್ದಾಯಿತು……ಪಾರಿಜಾತವ ಪಟ್ಟದರಸಿ ರುಕ್ಮೀಣಿಗೆ ಕೊಟ್ಟಿದ್ದರಿಂದ್ದ ಅದನ್ನು ಕೂಡಲು ಸಾಧ್ಯವಿಲಾಂತ ಹೋಗೋಗು…

ಭಾಗವತ : ಒಂದು ಪತ್ರಾನ ಗೀಚಿ ಕೂಡ್ರೆಪ್ಪಾ ನಮ್ಮ ಯಜಮಾನಿತಿ ಬಹಳ ಚಾಲಾಕು..

ಕೃಷ್ಣ : ಬರೆದಿದ್ದೀನೆ-ತೂಗೊಂಡು ಹೋಗು… ಬಂದರೂ ಬಂದೇನೆಂದು ಹೇಳು.

ಭಾಗವತ : ಹಾಗ ಮಾಡ್ರಿಯಪ್ಪಾ…-ನಿರ್ಗಮನ-
ಚಿಂತಿಸುತ್ತಾ ಸತ್ಯಭಾಮೆಯ ಪ್ರವೇಶ-
ದೂತೆ-ಹೋಗಿ ಎರಡು ದಿನವಾದರೂ ಬರಲಿಲ್ಲವಲ್ಲ ಏತಕಿರಬಹುದು.

ಮರಿಭಾಗವತ : ನಾನೂ ಅದನ್ನ ಅಂತೀನೆಯವ್ವಾ -ಯಾಕ ಬಂದಿರಕಿಲ್ಲ… ಅಲ್ಲೇ ಊಟಾ ಪಾಟಾ ಹೊಡಕೊಂತ ಕುಂತಳ ಏನ ಅಂತ ಅಂತೀನಿ

ಸತ್ಯಭಾಮ : ದೂತೆ-ಅಲ್ಲಿ ನೋಡು

ಮರಿಭಾಗವತ : ಹೌದೆವ್ವಾ…ಅವಲ ನಮ್ಮ ದೂತೆ ಅದ ನಮ್ಮ ಅರಗಿಳಿ

ಸತ್ಯಭಾಮ : ದೂತೆ-ಬಂದೆಯಾ- ಪರಮಾತ್ಮರು ಪಾರಿಜಾತವ ಕೂಟ್ಟರಾ?

ಭಾಗವತ : ಪಾರಿಜಾತ ಕೊಟ್ಟಿಲ್ಲ ನಮ್ಮವ್ವ… ಪತ್ರ ಕೊಟ್ಟಾರ (ಕೊಡುವನು)

ಸತ್ಯಭಾಮ : ಓದಿ-ದೂತೆ…

ಭಾಗವತ : ಯವ್ವಾ ಎಷ್ಟೂಂದು ಮುಕಾ ಕೆಂಪಾಯಿತಲ್ಲ… ಎಷ್ಟು ಸಿಟ್ಟಿಗೆದ್ದಿಯಲ್ಲಬೇ

ಮರಿಭಾಗವತ : ಯವ್ವಾ…ಸಿಟ್ಟು ಕೆಟ್ಟದ್ದು ನಮ್ಮವ್ವಾ…

ಭಾಗವತ :  ಸಿಟ್ಟಿನಿಂದ ಈಗ ಕೆಲಸ ನಡೆಯುವುದಿಲ್ಲ ನಮ್ಮವ್ವಾ…

ಸತ್ಯಭಾಮ : ಮತ್ತೇನು ಮಾಡಬೇಕು ದೂತೆ…

ಭಾಗವತ : ಯಾವ್ವಾ ನೀವು ಪರಮಾತ್ಮರಲ್ಲಿಗೆ ಹೋಗಿ ಕರಕೊಂಡು ಬರ್ರಿ…

ಸತ್ಯಭಾಮ : ಆಗಲಿ ದೂತೆ- ಅ ನನ್ನ ಪರಮಾತ್ಮನನ್ನು ಈಗಲೇ ಹೋಗಿ ಕರೆದುಕೊಂಡು ಬರೋಣ ನಡಿ…ದೂತೆ

ಭಾಗವತ : ನಡಿ ನಮ್ಮವ್ವ…ಅಲ್ಲಿಂದ ಇಲ್ಲಿಂದ ಅಲ್ಲಿಗೆ-ಮತ್ತೇನು ಐತಿ ನಮ್ಮ ಕೆಲಸ

ಸತ್ಯಭಾಮ : ದೂತೆ-ಪರಮಾತ್ಮರ ಮಂದಿರಕ ಬಂದದ್ದಾಯಿತು-ಒಳದ ಏನ ಮಾಡಾತಾರ ನೋಡು ದೂತೆ… ಪರಮಾತ್ಮರನ್ನ ಕರೆ…

ಭಾಗವತ : ಯವ್ವಾ ಒಳಗ ಹೋಗಿ ಬಂದ್ಯಾ… ಕರೆದರೂ ಅವರು ಬರು ಸ್ಥಿತಿಯಾಗ ಇಲ್ಲ ನಮ್ಮವ್ವ…

ಸತ್ಯಭಾಮ : ಏನ ಮಾಡತಾ ಇದಾರೋ…

ಭಾಗವತ : ಯವ್ವಾ ರುಕ್ಮಿಣಿಯವರೂಂದಿಗೆ ಪಗಡಿ ಆಡಾಕ ಹತ್ತಾರ ಅಲ್ನೋಡ್ರಿ

ಕೃಷ್ಣ : ರುಕ್ಮಿಣಿ ನನ್ನದು ದಶ್ಯಾ ಬಿತ್ತು

ರುಕ್ಮಿಣಿ : ಸ್ವಾಮಿ ನಂದು ಚಾರಿ ಬಿತ್ತು

ಕೃಷ್ಣ : ದೇವಿ ನನ್ನದು ಭಾರಾ

ರುಕ್ಮಿಣಿ : ಸ್ವಾಮಿ ನನ್ನದು ಪಂಚೀಸ

ಕೃಷ್ಣ : ನನ್ನ ಕಾಯಿ ಕಡತಾಯಿತು

ರುಕ್ಮಿಣಿ : ನನ್ನದೂ ಕಡತಾಯಿತು ಸ್ವಾಮಿ

ಸತ್ಯಭಾಮ : ದೂತೆ-ಎಷ್ಟು ಭರಟೆಯಿಂದ ಆಟ ಆಡಾಕ ಹತ್ತಾರ

ಭಾಗವತ : ಹೌದ್ರಿವ್ವಾ ನವು ನಿಂತ್ರ ಇಲ್ಲೇ ನಿಂದ್ರೂದ….ಅತಾತ ಹೋಗೋಣ ಬರ್ರಿ

ಭಾಗವತ : ನಮಸ್ಕಾರ್ರೀ ಅಪ್ಪಾವರ್ರ

ಕೃಷ್ಣ : ಹಾ ದೂತೆ-ಬಹಳ ದಿನಕ ಬಂದಂಗಾತು ದೂತೆ-

ಭಾಗವತ : ಹೌದ್ರೆಪಾ ನೀವು ಆಡುದ ಇದೇನ್ರಪಾ ಇದು

ಕೃಷ್ಣ : ಇದು ಪಗಡಿ ಆಟ ಅಂತ

ಭಾಗವತ : ಅದೇನೋ ಸರಿಐತಿ-ಆದ್ರ ನಾಲ್ಕು ತುಕಡಿ ಆದ ಅರಿವಿ ಹಾಸಿ ಕೊಂಡಿರಲ್ಲಾ ಗಟ್ಟಿನ ಅರಿವಿ ಸಿಗಲಿಲ್ಲೇನು ನಿಮಗ

ಕೃಷ್ಣ : ಹಾಗಲ್ಲ ದೂತೆ ನಾಲ್ಕು ತುಕಡಿಗಳಲ್ಲಿ ಇವು-ಇವು ನಾಲ್ಕು ವೇದಗಳು, ವರ್ಣಾಶ್ರಮಗಳು – ಮನುಷ್ಯನಿಗೆ ಬ್ರಹ್ಮಚರ್ಯಾ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಈ ನಾಲ್ಕು ವರ್ಣಾಶ್ರಮಗಳೇ ನಮ್ಮ ಜೀವನದ ಪಗಡಿ ಆಟಕ್ಕೆ ಹಾಸಿದ ಅರಿವೆ.

ಭಾಗವತ : ಹೌದ್ರಾ ಇಲ್ಲೂಂದು ಕಿರ್ತಿ ಹಾಕಿರ್ರೀಲ್ರಿ ಅದರ ಗುರ್ತ್ತೇನು-

ಕೃಷ್ಣ : ಅದು ಕಟ್ಟಿಮನಿ-ಅಂದರ ಗುರುಮನಿ… ಕಾಯಿ ಇಲ್ಲಿ ಬಂದರೆ ಅದಕ ಕಡತದ ಅಂಜಿಕೇನೆ ಇಲ್ಲ. ಅದರಂತೆ ಮನವನು ಗುರುವಿನ ಆಶ್ರಯದಲ್ಲಿದ್ದರೆ ಆತನಿಗೆ ಸಂಸಾರದ ಕಡತದ ಅಂಜಿಕೇನೆ ಇಲ್ಲ…ಅಲ್ಲಿ ಬಿದ್ದೈತಿ ನೋಡು ಹಣ್ಣಾದ ಕಾಯಿ, ಅಂದರೆ ಗೆದ್ದ ಕಾಯಿ

ಭಾಗವತ : ಅದರ ಕೈಯಾಗ ಕವಡಿ ಯಾಕದಾವ್ರಿ…

ಕೃಷ್ಣ : ಮಾನವನ ಆರು  ಗುಣಗಳೇ ಕವಡಿಗಳು – ಕಾಯಿ ಅಂದರೆ ಕಾಯ ಶರೀರವೇಂದರ್ಥ, ಹೊಟ್ಟೀಮನೆಯಲ್ಲಿ ಹುಟ್ಟಿ ಕಟ್ಟೀಮನೆ ಹೊಂದೊದೇ ಇದರ ರ್ಮ

ಭಾಗವತ : ಮತ್ತ ಆಗಳೇ ನೀವು,ಅವ್ವವ್ರು, ದಶ್ಯ ಬಾರಾ ಅಂದ್ರೆಲ್ರಿ, ಅದರ ಅರ್ಥ ಏನ್ ?

ಕೃಷ್ಣ : ದಶ್ಯಾ ಅಂದ್ರೆ, ಪಂಚೇಂದ್ರಿಯಗಳ ವ್ಯಾಪಾರ ನಿಲ್ಲಿಸಿ ಮನಸ್ಸನ್ನು ಆ ಪರಮಾತ್ಮನ ಕಡೆಗೆ ತಿರುಗಿಸುವುದು ಅಂಥ, ತೀನಿ ಅಂದ್ರ ಹೆಣ್ಣು ಮಣ್ಣು ಮತ್ತು ಹೊನ್ನು ಇವನ್ನು ತಿಳಿಯುವುದು ಅಂಥ್, ಬಾರಾ ಅಂದ್ರೆ ಜಗತ್ತಿನಲ್ಲಿಯ ಹನ್ನೆರಡು ಜ್ಯೋತಿಲಿಂಗಗಳೆಂದರ್ಥ.

ಭಾಗವತ : ಬಾಳಾ ಬಾಳಾ ಅರ್ಥಾಐತ್ರಿ ಬಿಡ್ರಿ ನಮ್ಮಪ್ಪಾ…ನಿಮ್ಮ ಈ ಆಟದಾಗ ಹೊರಗ ಅಮ್ಮಾವ್ರ ನಿಂತಾರ್ರಿ…

ಕೃಷ್ಣ : ನಿಂತ್ರ ನಿಂದರ್ಲಿ

ಭಾಗವತ : ಯವ್ವಾ ಘಾತ ಆಯಿತು. ಪರಮಾತ್ಮರು ನಿಂತ್ರ ನಿಂದರ್ಲಿ ಅಂದ್ರು

ಸತ್ಯಭಾಮ : ಹಾಂಗಾದರ ನಾನ ಮಾತಡಿಸಲ್ಯಾ

ಭಾಗವತ : ಅದರಾಗೇನೈತ್ರಿ -ಹೆಂಡ್ತಿ ಗಂಡನ್ನ ಮತಾಡಸ್ಕ ನನ್ನ ಕೇಳಬೇಕಾ

ಸತ್ಯಭಾಮ : ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ… ||ಪ||
ಖಗವಾಹನನೆ | ಬಗೆ ಬಗೆ ರೂಪದಿ |
ನಗುಮೊಗದರಸ | ನೀ ಬಾರೋ | ||ಅ.ಪ||
ಅಖಿಳಾಂಕ ಮದಿಮೆ | ಆದಿನಾರಾಯಣ
ಅಕ್ಕರೆಯ ಭಕ್ತರಿಗೆ ಒಲಿದು ಬಾರೋ
ಸೋದರ ಮಾವನ ಮಧುರೆಲಿ ಮಡಹಿದ
ಯಶೋಧೆಯ ಕಂದ ನೀ ಬಾರೋ ||
ಸ್ವಾಮಿ ನನ್ನ ಕೂಡ ಬಂದು ಮಾತಾಡ್ರಿ

ರುಕ್ಮಿಣಿ : ಮಾತಾಡ ಬ್ಯಾಡ್ರಿ…

ಸತ್ಯಭಾಮ : ಮಾತಾಡ ಬ್ಯಾಡ್ರಿ ಅಂತ ಹ್ಯಾಂಗ ಹೇಳತಾಳ ನೋಡ
ದೂತೆ ನಮ್ಮವರ್ನ ನಾ ಮಾತಾಡಿಸಿದರ ಇವಳನೇನ
ಸವತಿ-ಸ್ವಭಾವ ನಿಂಮದೂ ಅಂತಾದ
ದೂತೆ ಪರಮಾತ್ಮರು ನನ್ನ ಕೂಡ ಮಾತಾಡಲಿಲ್ಲ.

 

ಪಟ್ಟದರಸಿ ರುಕ್ಮಿಣಿಗೆ ಪಾರಿಜಾತಪುಷ್ಪ

ಭಾಗವತ     : ಬೇಡಿಕೊಳ್ಳ ನನ್ನ ತಾಯಿ… ದಯಮಾಡೋ ರಂಗ…

ಮಾತಾಡೋ ನನ್ನ ರಾಜ ಅಂತ ಬೇಡಿಕೊಳ್ಳೇ ನಮ್ಮವ್ವ…

(ಇಲ್ಲಿ ಸವತಿಯರ ಮಧ್ಯದಲ್ಲಿ ಪರಸ್ಪರ ದೂಷಣೆ… ಪರಮಾತ್ಮನು ಹೋಗಲು ಸತ್ಯಭಾಮೆ ಮೂರ್ಛೆ ಹೋಗುವಳು…ಭಾಗವತ ಬೇಡಲು ಕೃಷ್ಣನು ಬರುವನು ಶೀತೋಪಚಾರದ ನಂತರ )

ಕೃಷ್ಣ : ದೂತೆ-ಸತ್ಯಭಾಮೆಗೆ ಏನಾದರೂ, ಯಾವುದಾದರ ಬಗ್ಗೆ ಚಿಂತೆ ಇದೆ ಏನು…

ಭಾಗವತ : ಹೌದನಮ್ಮೂಪ್ಪ ನಾಲ್ಕು ದಿನದಿಂದ ಪುಷ್ಪ ಪಾರಿಜಾತ ಪುಷ್ಪ ಅಂತ ಒಂದ ಸವನೆ ರಾತ್ರಿಹಗಲು ನೆಳ್ಳತಾರ್ರಿ…

ಕೃಷ್ಣ : ಹೇ ಪ್ರಾಣಸಖಿ ಸತ್ಯಭಾಮಾ
ಒಂದು ಹೂವಿಗೆ ಮನ ನೊಂದಿಪರೇನೆ
ತಂದು ಕೊಡುವೆ | ವೃಕ್ಷ ಚಂದಿರವದನೆ
ಚಿಂತೆಯ ಮಾಡುವ ಛಲವು ಇದೇನೇ…

ಹೇ ಸತ್ಯಭಾಮಾ, ಕೇವಲ ಒಂದು ಹೂವಿಗಾಗಿ ನೀನು ಹೀಗೆ ಚಿಂತಿಸಬಹುದೇ. ನಿನಗೆ ಬೇಕಾದರೆ ನಾನು ಅ ಪಾರಿಜಾತ ವೃಕ್ಷವನ್ನೇ ತಂದು ನಿನ್ನ ಮಂದಿರದಲ್ಲಿ ಹಚ್ಚುತ್ತೇನೆ-ಚಿಂತಿಸಬೇಡಾ ಏಳು (ಎಬ್ಬಿಸುವನು)

ಸತ್ಯಭಾಮ   : ಪದ : ಯಾತಕೆನ್ನನು  ಎಬ್ಬಿಸಿ ತೆಕೆಯೊಳಿದ್ದಾ
ನಾಥನಗಲಿಸಿದಿರಾ | ಯಾತಕೆನ್ನನು ಎಬ್ಬಿಸಿದಿರಿ |
ನನ್ನನ್ನು ಯಾತಕ್ಕೆ ಎಬ್ಬಿಸಿದಿರಿ…ಎಂಥ ಒಳ್ಳೆಯ ಕನಸಿತ್ತು. ಸ್ವಾಮಿ ನೀವಾಡಿದ ಮಾತು ನೀಜವೆ..

ಕೃಷ್ಣ : ನಿಜವಲ್ಲದೆ ಇನ್ನೇನು…ಬೇಕಾದರೆ ಕೈಮೇಲೆ ಕೈಹಾಕಿ ಹೇಳುವೆ ಕೇಳು.

ಪದ: ಖಚಿತವಾದರೆನ್ನ ವಚನ ನಂಬಿ
ರಚನೆಯ ಮಾತಲ್ಲ | ರಜಿಸಿದ ಗೊಂಬೆ
ಚಿಂತೆಯ ಮಾಡುವ ಛಲವು ಯಾತಕೆ-ನಿನಗೆ |

ಸತ್ಯಭಾಮ : ಕೇಳಿದೆಯಾ ದೂತೆ-ಪರಮಾತ್ಮರು ನನಗೆ ಪಾರಿಜಾತ ವೃಕ್ಷವನ್ನೇ ತಂದು ಕೊಡುತ್ತಾರಂತೆ.

ಭಾಗವತ : ಎಂದ ತಂದ ಕೊಡತಾರ ಏನ ನನ ತಾಯಿ… ಅದರ ಬದ್ಲಿ ಈಗ ಐತಲ್ಲ ಒಂದು ಅದನ್ನ ಇಸಗೊಳ್ರಿ

ಸತ್ಯಭಾಮ : ಪರಮಾತ್ಮ- ಆ ನನ್ನ ಸವತಿ ಹತ್ತಿರ ಐತಲ್ಲ ಅದನ್ನ ಕೊಡ್ರಿ…

ಕೃಷ್ಣ : ಅದನ್ನ ನಾನು ಕೊಡುದಿಲ್ಲ

ಸತ್ಯಭಾಮ : ನಾ ಬಿಡುದಿಲ್ಲ

ಕೃಷ್ಣ : ಎಷ್ಟೂಂದು ಅಹಂಕಾರ ನಿನಗೆ ಸತ್ಯಭಾಮಾ
ಯಜ್ಞಯಾಗಾದಿಗಳಲಿಲ್ಲ | ನೂರು ತೀರ್ಥಂಗಳಲಿಲ್ಲ
ನಾರಿ ವೈಕುಂಠದಲ್ಲಿ ನಾನಿಲ್ಲ | ಸನ್ಯಾಸಾಶ್ರಮದಲಿಲ್ಲ
ಅಹಂಕಾರ ಕರ್ಮಕ್ಕೆ ದೂರ-ನಾನಿರುವೆ ಭಾಮೆ
ಭಾಮೆ ನಿನ್ನಲ್ಲಿ ಅಹಂಕಾರವು ತುಂಬಿದೆ ನಾನಿಲ್ಲಿ ಇರಲಾರೆ.

ಸತ್ಯಭಾಮ : ದೂತೆ-ಪರಮಾತ್ಮರು ಹೊರಟೇ ಹೋದರಲ್ಲಾ-ನನ್ನ ಸರಿಸರಿ ಸವತಿ ನನ್ನ ಕೈಯಾಗ ಸಿಗಲಿ ಒಂದು ಕೈ ನೋಡೇ ಬಿಡಿತೀನಿ

ಭಾಗವತ : ಒಂದು ಕೈಯಾದ ನಮ್ಮವ್ವ ಎರಡು ಕೈಲೇನ ನೋಡಂತೀಯಾವ್ವ

ಸತ್ಯಭಾಮ : ದೂತೆ ನನ್ನ ಸವತಿ ಗುಣ ಕೇಳು
ಕಣ್ಣಿಗೆ ಹುಬ್ಬು ಐತೇನ ಕಲಹಗಂಟಿ ರುಕ್ಮಿಣಿ
ಎನ್ನ ನೋಡಿ ಸಣ್ಣ ನಗೆಯ ನಗುವಿಯತಕೆ |

ರುಕ್ಮಿಣಿ : ಸಣ್ಣವಳೆ, ಬಣ್ಣನೆಯ ಮಾತಿನಿಂದ
ಶ್ರೀಕೃಷ್ಣಗೆ ಚನ್ನಾರೆ ತಲುವಿಕೆ ತೋರಿ
ಒಲಿಸ ಬಂದೆಯಾ ?

ಸತ್ಯಭಾಮ : ಚಲುವೆಯೆಂದು ಒಬ್ಬನ ಕಳುಹಿ
ದ್ವಾರಕೆಯ ನಿಲಯನ ಒಲಿಸಿಕೊಂಡ
ಚಲುವನ ಒಲಿಸಿಕೊಂಡೇ ನೀ ಒಲಿಸಿಕೊಂಡೆ

ರುಕ್ಮಿಣಿ : ತಲೆಯತೊತ್ತು ತಂದು
ಮಣಿಯ ಕಳುವಿನ ತಪ್ಪಿಗೆ
ಕೇಳದೆ ನಿನ್ನ ಕೊಟ್ಟರಲ್ಲಿ ಭಾಮಿನಿ..

(ಪರಸ್ಪರ ದೂಷಣೆ…ಕೊನೆಗೆ ಸತ್ಯಭಾಮೆಯು ಶಕ್ತಿದೇವಿಯ ಪೂಜೆಯನ್ನು ಆರಂಭಿಸುತ್ತಾಳೆ…ಆಕಾಶವಾಣಿಯು ಭಾಮೆಗೆ ಕೃಷ್ಣನು ನಿನ್ನ ಮಂದಿರಕ್ಕೆ ಬರುತ್ತಾನೆ ಎಂಬುದನ್ನು ಕೇಳಿ ಮಂದಿರಕ್ಕೆ ಹೋಗೋಣವೆಂದು ಹೊರಡುವಳು)