ಸತ್ಯಭಾಮಾ ಹಾಡುತ್ತಾ ಬರುತ್ತಾಳೆ

ಆ ಕೃಷ್ಣ ಪರಮಾತ್ಮನ ಕಾಣದೆ
ನಾ ಹ್ಯಾಂಗ ಜೀವಿಸಲಿ
ನಾ ಹ್ಯಾಂಗ ಜೀವಿಸಲಿ…

ಭಾಗವತ : ಅಮ್ಮಾ ತಾಯಿ ತಾವು ಬಂದಂಥವರು ದಾರು ?

ಸತ್ಯಭಾಮ : ನನ್ನನ್ನು ದಾರು ಎಂಬ ಕೇಳುವ ನೀನು ಯಾರೆ ?

ಭಾಗವತ : ನನಗೆ ದೂತೆ ದೂತೆ ಅಂತ ಅಂತಾರೆವ್ವ

ಸತ್ಯಭಾಮ : ದೂತೆ ನಾನು ಯಾರು ಎಂಬುದನ್ನು ಹೇಳಬೇಕೇ

ಭಾಗವತ : ಅದನ್ನ ಕೇಳಾಕ ಹತ್ತಿನಯವ್ವಾ-ತಮಗೆ ತಂದೆ ಇದ್ಯಾರೆಯೇ

ಸತ್ಯಭಾಮ : ಇದ್ದಾರೆ

ಭಾಗವತ : ತಾಯಿ

ಸತ್ಯಭಾಮ : ತಾಯಿಯೂ ಇದ್ದಾಳೆ ದೂತೆ-

ಭಾಗವತ : ಅವರ ಹೆಸರಿನ ಒಂದಿಷ್ಟು ಹೇಳ ನಮ್ಮವ್ವ

ಸತ್ಯಭಾಮ : ದೂತೆ ಹೇಳುತ್ತೇನೆ ಕೇಳು

ಶ್ಲೋಕ :  ಭಾಸ್ಕರನ ಭಕ್ತನಾದಂಥ
ಸತ್ರಜಿತ ರಾಜನು ಬಂದು
ಯನಗೆ ತಂದಿಯಾಗಬೇಕು
ಶಚಿದೇವಿ ಯನಗೆ ತಾಯಿಯಾಗಬೇಕು
ದೂತೆ- ಸತ್ರಜಿತರಾಜನು ನನಗೆ ತಂದಿಯಾಗಬೇಕು, ಶಚಿದೇವಿಯು ನನಗೆ ತಾಯಿಯಾಗಬೇಕು

ಭಾಗವತ : ಮತ್ತ ನಿಮಗೆ ಅತ್ತಿಮಾವಾ ಇದ್ದಾರೇನ್ರಿ

ಸತ್ಯಭಾಮ : ಇದ್ದಾರೆ

ಭಾಗವತ : ಇದ್ದರ ಅವರ ಹೆಸರಿಷ್ಟು ಹೇಳ ನಮ್ಮವ್ವ

ಸತ್ಯಭಾಮ : ವಸುದೇವ ಮಾವನಾಗಬೇಕು
ದೇವಕಿ ಅತ್ತೆಯಾಗಬೇಕೆನಗ
ದೂತೆ ವಸುದೇವನು ಯನಗೆ ಮಾವನವರಾಗಬೇಕು, ದೇವಕಿಯವರು ಅತ್ತೆಯವರಾಗಬೇಕು.

ಭಾಗವತ : ಮತ್ತ ಯಾರ್ಯಾರ ಅದಾರ ಯವ್ವ ನಿಮ್ಮ ಬಂಧು ಬಳಗಾ

ಸತ್ಯಭಾಮ : ದೂತೆ- ಕೇಳು ಹಾಗದ್ರೆ
ಆ ಬಲರಾಮದೇವ ಯನಗೆ ಭಾವನಾಗಬೇಕು
ಆ ಸುಭದ್ರಾದೇವಿ ಯನಗೆ ನಾದಿನಿಯಾಗಬೇಕು
ದೂತೆ-ಆ ಬಲರಾಮದೇವರು ನನಗೆ ಖಾಸ ಭಾವಂದಿರಾಗಬೇಕು ನೋಡ.

ಭಾಗವತ : ಖಾಸಬಾಗ ಅಂದ್ರ ಏನ ನಮ್ಮವ್ವ ಬೆಳಗಾವಿತಾವ ಐತಲ್ಲ ಖಾಸಬಾಗ

ಸತ್ಯಭಾಮ : ಖಾಸಬಾಗ ಅಲ್ಲ ದೂತೆ-ಭಾವ ಅಂದರೆ ಗಂಡಂದಿರ ಅಣ್ಣ- ಆ ಸುಭದ್ರದೇವಿ ನನಗೆ ನಾದಿನಿ-ಗಂಡನ ತಂಗಿ ಆಗಬೇಕು ನೋಡ.

ಭಾಗವತ : ಅದನ್ನೆಲ್ಲ ತೊಗೊಂಡು ನಾವೇನು ಮಾಡೂದೈತೆ ಬಿಡ್ರಿ-ಅಲ್ರಿ ನಿಮ್ಮ ಯಜಮಾನ್ರ ಹೆಸರ ಹೇಳಲಿಲ್ಲರಿ ಮೊದಲಿಗೆ-

ಸತ್ಯಭಾಮ: ದೂತೆ-ಇಂಥ ಕೂಡಿದ ಸಭಾದಾಗ ಅವರ ಹೆಸರು ಹೇಳಲು ನಾಚಿಕೆ ಬರತದ

ಭಾಗವತ : ಯವ್ವಾ ನಿಮ್ಮಂತವರಿಗೆ-ಕಲಿತವರಿಗೆ, ಯಾಕ್ರಿ ನಾಚಿಕೆ-

ಸತ್ಯಭಾಮ : ಕಲಿತವರಿಗೆ ನಾಚಿಕೆ ಇರೂದಿಲ್ಲಂತ ತಿಳಿದೇನು

ಭಾಗವತ : ಹಾಂಗಲ್ರಿಯವ್ವಾ…ನೀವು ಮದುವಿಯಾಗುವಾಗ ಮಂದಿ ಇದ್ರ ಇಲ್ಲ

ಸತ್ಯಭಾಮ : ಇದ್ರು

ಭಾಗವತ : ಮಂದಿ ಅವಾಗೂ ಇರವ್ರು, ಈಗಲೂ ಇರವ್ರು–ಅದಕ ಯಾಕರಿ ನಾಚಿಕೆ ಹೆಸರ ಹೇಳ ತಾಯಿ ಬೇಗ

ಸತ್ಯಭಾಮ : ಹಾಗದರೆ ಕೇಳೆ ದೂತೆ-
ಶ್ರೀ ಕೃಷ್ಣ ಪುರುಷನವ್ವ
ಸರಿಯ ಸವತಿ ರುಕ್ಮಿಣಿವ್ವಾ
ಎನ್ನ ಹೆಸರು ಸತ್ಯಭಾಮಾ
ಶ್ರೀ ಕೃಷ್ಣಯನ್ನ ಪುರುಷನವ್ವ
ದೂತೆ-ಆ ಕೃಷ್ಣ ಪರಮಾತ್ಮರು ಯನಗೆ ಪ್ರೀತಿಯ ಪುರುಷರಾಗಬೇಕು. ಮತ್ತ ಅವಳು (ಬೆರಳು ಮುರಿಯುತ್ತಾ…)

ಭಾಗವತ : ಬೆರಳು ಮುರದಾವ ನನ್ನ ತಾಯಿ…ಅಷ್ಟ್ಯಾಕ ಸಿಟ್ಟು

ಸತ್ಯಭಾಮ : ಆ ರುಕ್ಮಿಣಿ ಇದ್ದಾಳಲ್ಲ ಅವಳು ನನ್ನ ಸರಿಸರಿ ಸವತಿ ನೋಡ…

(ದೂತಿಗೆ ತಿವಿಯುವಳು)

ಭಾಗವತ : ಅಯ್ಯಾ ನಮ್ಮವ್ವ ಹೀಂಗ್ಯಕೆವ್ವ…ದೂರ ನಿಂದ್ರು ಅಂದ್ರನಾನ ನಿಲ್ಲಿತಿದ್ದೆ

ಸತ್ಯಭಾಮ : ಸವತಿ ಮತ್ಸರ

ಭಾಗವತ : ನಾನಂತೂ ಇಂಥಾದು ಎಲ್ಲೆನೂ ಕಂಡಿಲ್ಲವ್ವ…ಅಲ್ಲಯವ್ವ ನಿಮ್ಮ ಹೆಸರಿನ ಹೇಳಲಿಲ್ಲವಲ್ಲ

ಸತ್ಯಭಾಮ : ಸತ್ರಜಿತರಾಜನ ಪುತ್ರಿ

ಭಾಗವತ : ಪು-ಪುತ್ರಿ ಅಂದರ

ಸತ್ಯಭಾಮ : ಪುತ್ರಿ ಅಂದರೆ ಮಗಳು-ಸತ್ರಜಿತ ಮಹಾರಾಜನ ಮಗಳು ಸತ್ಯಾಭಾಮಾ

ಭಾಗವತ : ಸತ್ಯಭಾಮಾ ದೇವಿ ಅಂತಾ ತಿಳಿದಂಗಾತು-ಅಲ್ಲ ತಾಯಿ ಅಂಥವರು ಮಗಳು ಅಂದ್ರ ಪಲ್ಲಕ್ಕಿ ಛತ್ರ ಚಾಮರ, ಭಟ್ಟಂಗಿಗಳು ಇಲ್ಲದ ಇಂಥ ಅಪರಾತ್ರನ್ಯಾಗ ಬಂದೀರಲ್ಲ ತಾಯಿ ಇದರ ಕಾರಣವೇನು

ಸತ್ಯಭಾಮ : ಕಾರಣ ಅದ ಹೇಳಲೇನು

ಭಾಗವತ : ಹೇಳಂತ-ಕೇಳಾಕ ಹತ್ತೀನಿ ನಮ್ಮವ್ವ

ಸತ್ಯಭಾಮ : ಹೇಳೀನೇ ಅಂದ್ರ ಹೇಳಲಾಗದು-ಬಿಟ್ಟೀನಿ ಅಂದ್ರೆಬಿಡಲಾಗದು

ಭಾಗವತ : ಅಂಥಾದಿದ್ರ ಬಿಟ್ಟ ಬಿಡ್ರಿ

ಸತ್ಯಭಾಮ : ಹ್ಯಾಂಗ ಬಿಡಲಿ ದೂತೆ-, ಅತ್ತ ಕೇರಿ ಇತ್ತ ಭಾವಿ-

ಭಾಗವತ : ನಡುವ ಹರಿ ಹೊಡಿರಿ-ಎಲ್ಲಾ ಹೊಲಿ ಏಕಾಗಿ ಹರೀಲಿ…

ಸತ್ಯಭಾಮ : ನನಗಾದ ಸಂಕಟ ನಿನಗೇನ ಗೊತ್ತು ದೂತೆ-

ಭಾಗವತ : ನೀವು ಹೇಳದ ನಮಗ ಹ್ಯಾಂಗ ತಿಳಿಬೇಕ ನಮ್ಮವ್ವಾ ನಿಮ್ಮ ಸಂಕಟ

ಸತ್ಯಭಾಮ : ಕಾಮನ ರೂಪನ ತೊರೆ
ಕಾಮಿನಿ-ನಾ-ಸೈರಿಸಲಾರೆ
ಚಂದನ್ನ ಕರಗಳ ಬೀಸುವ
ಸುಂದರಾಂಗನ ತಂದು ತೋರೆ–
ದೂತೆ- ಆ ಕೃಷ್ಣ ಪರಮಾತ್ಮರು ಮಂದಿರ ಬಿಟ್ಟು ಹೋಗಿ ನಾಲ್ಕು ದಿನಗಳಾದವು. ನೀನರ್ ಹುಡುಕಿ ಕೊಟ್ಟೀಯೇನ

ಭಾಗವತ : ಬೇಯವ್ವಾ-ಪರಮಾತ್ಮನ್ನ ಕಾಣಬೇಕಂತ ಎಂಥೆಂಥವರು ಕುಂತಾರ, ಇನ್ನ ನಮ್ಮ ಗತಿ-ಏನ್ ಯವ್ವಾ

ಸತ್ಯಭಾಮ : ಯಾರ್ಯಾರು ಕುಂತಾರೆ ದೂತೆ

ಭಾಗವತ : ಮಹಾ ಮಹಾ ಮುನಿಗಳು

ಸತ್ಯಭಾಮ : ಹ್ಯಾಗೆ ಕೂತಾರೆ ದೂತಿ

ಭಾಗವತ : ಶ್ಲೋಕ : ಧೈರ್ಯಂ ಯಸ್ಯ ಪಿತಾ ಕ್ಷಮಾ ಚ ಜನನೀ
ಶಾಂತಶ್ಚಿರಂ ಗೇಹಿನೀ ಸತ್ಯಾಂ ಸುನುರಮಂ
ದಯಾಚ ಭಗಿನಿ ಭ್ರೂತಾ ಮನಃ ಸಂಯಮಃ
ಶಯ್ಯಾ ಭೂಮಿತಲಂ ದಿಶೋಪಿ ವಸನಂ ಜ್ಞಾನಾಮೃತ ಭೋಜನಂ
ಏತೆ ಯಸ್ಯ ಕುಟುಂಬಿನೋ ವರ ಸಖೇ ಕಸ್ಮಾತ್ ಭಯಂ, ಯೋಗಿನಃ

ಸತ್ಯಭಾಮ: ದೂತೆ-ಹೀಂಗದ್ರ ಏನ

ಭಾಗವತ : ಧೈರ್ಯ ಗುಣವೇ ತಂದೇ, ಕ್ಷಮೆಯೇ ತಾಯಿ, ಶಾಂತಿಯೇ ಹೆಂಡತಿ, ದಯಾಗುಣಗಳೇ ಅಕ್ಕತಂಗಿಯರು, ಸತ್ಯವೇ ಮಗನು, ದಶದಿಕ್ಕುಗಳೇ ಆಭರಣಗಳು, ಭೂಮಿಯೇ ಹಾಸಿಗೆ, ಆಕಾಶವೇ ಹೊದೆಯುವುದು, ನಾನಾರು, ನನ್ನ ಕರ್ತವ್ಯಗಳೇನೆಂಬುದನ್ನು ಅರಿಯುವುದೇ ಊಟವೆಂದು ಭಾವಿಸಿ ತಪಶ್ಚರ್ಯ ಮಾಡುತ್ತಿರುವ ಯೋಗಿಗಳಿಗೂ, ಆ ಪರಮಾತ್ಮನ ದರ್ಶನವಾಗಬಹುದು, ಅಂದ ಮೇಲೆ ನನ್ನಂಥ ಯಕಶ್ಚಿತ್ ದೂತೆಯ ಪಾಡೇನು? ಆ ಪರಮಾತ್ಮನು ಇರುವ ದಿಕ್ಕು ಯಾವುದು, ಅವನಿರುವ ಸ್ಥಳ ಯಾವುದು ಅವರ ದರ್ಶನ ಹೇಗೆ ಸಾಧ್ಯ. ಇದನ್ನೆಲ್ಲ ಸಾದ್ಯಾಂತ ಸವಿಸ್ತಾರವಾಗಿ ವಿವರಿಸಿ ಹೇಳಿದರೆ ನಾನು ಸ್ವಾಮಿಯನ್ನು ಕರೆದುಕೊಂಡು ಬರಬಹುದು.

ಸತ್ಯಭಾಮ : ಅವರಿರುವ ಸ್ಥಳ, ದಿಕ್ಕು ತಿಳಿಸಿದರೆ, ಅವರನ್ನು ಕರೆತರುವಿಯಾ ?

ಭಾಗವತ : ಅಗತ್ಯವಾಗಿ.

ಸತ್ಯಭಾಮ : ದೂತೆ-ಹಾಗದರೆ ಕೇಳು.

ಪದ : ತಂದು ತೋರೆ ಅರವಿಂದ ನಯನನ
ನಂದಕಂದ ಗೋವಿಂದನ
ಸುಂದರಾಂಗ ಮುಕುಂದನ ಕಾಣದೆ
ಒಂದು ನಿಮಿಷ ನಾನಿರಲಾರೆ ||

|| ಚಲತಿ || ದಡಿಗನಾಗಿ ಹರಿದಾಡುವ ಜಲದೂಳು ಪೊಕ್ಕನ
ಪ್ರಚಂಡಶೈಲದ ಭಾರವ ಬೆನ್ನಲ್ಲಿ ಹೊತ್ತವನ
ಕ್ರೂರ ರೂಪದಿಂದ ಘೋರ ಅಡವಿಯೂಳು ಸೇರ್ಪನ
ದೃಡತರ ಸ್ತಂದಿವನೂಡೆದು ಬ್ರಹ್ಮಾಂಡ ನಡುಗಿಸಿದ
ಪೂಡವಿಯನು ಪಾತಾಳದಿಂದ ಮೇಲೆ ತಂದ
ಚಾಪಗೊಡಲಿಯ ಧರಿಸಿದ ಕೋದಂಡಪಾಣಿಯ
ಪಾಂಡವರನು ಸಲುಹಿದ ಅಂಡಿತ ಬೌದ್ಧನ
ಕಡಲನೇರಿದ ಶೇಷಶಯನನ !
ಯನ್ನ ಪರಮಾತ್ಮಾ ಹತ್ತು ಅವತಾರ ತಾಳಿ, ಹತ್ತೂ ದಿಕ್ಕಿನಲ್ಲಿದ್ದಾರೆ. ಅವರಿಲ್ಲದೆ ನಾನು ಬದುಕಿರಲಾರೆ. ಕಾರಣ ದುತೆ- ಜಾಗ್ರತೆಯಾಗಿ
ಕರೆತಾರಮ್ಮಾ.

ಭಾಗವತ : ಅಲ್ಲ ನನ್ನ ತಾಯಿ, ನನಗೆ ಒಂದು ದಿಕ್ಕು ಸುದ್ದ ಗೊತ್ತಿಲ್ಲ. ಅವರು ಹತ್ತು ಅವತಾರ ತಾಳಿ; ಹತ್ತು ದಿಕ್ಕಿನಲ್ಲಿ ಇದ್ದಾರ ಅಂದ್ರ ನಾನು ಎಲ್ಲಿಗೆ ಯಾವ ದಿಕ್ಕಿಗೆ ಹೋಗಲಿ ನಮ್ಮವ್ವ. ಒಂದು ದಿಕ್ಕು, ಒಂದು ಅವತಾರ ನೀವು ಹೇಳಿದರ ಹೋದೇನೌ. ಕರಕೊಂಡು ಬಂದೇನು…

ಸತ್ಯಭಾಮ : ದೂತೆ- ನನ್ನ ಪರಮಾತ್ಮರು ಈಗ ಆ ನನ್ನ ಸವತೀ ಸವತೀ

ಭಾಗವತ : ಇದ್ದಾಳ್ರೀ ನಿಮ್ಮ ಸವತಿ

ಸತ್ಯಭಾಮ : ಹಾ, ಅವಳ ಮನೆಯಲ್ಲಿ ನಮ್ಮ ಪರಮಾತ್ಮರು ಇದ್ದಾರೆ, ನೀನಲ್ಲಿಗೆ ಹೋಗಿ ಅವರನ್ನು ಕರೆದುಕೊಂಡು ಬಾ ದೂತೆ-

ಭಾಗವತ : ಆಗಲೆವ್ವಾ-ನಾನು ಹೋಗಿ ಕರಕೊಂಡು ಬರತೀನಿ. ನೀವು ಒಳಗ ನಡ್ರಿ.

(ಇಬ್ಬರೂ ಬೇರೆ ಬೇರೆ ದಿಕ್ಕಿಗೆ ಹೋಗುವರು)

(ಜಟಾಜೂಟಧಾರಿಯಾಗಿ, ಕೈಯಲ್ಲಿ ತಂಬೂರಿ, ಚಿಟಿಕೆಗಳನ್ನು ಕುಟ್ಟುತ್ತ ನಾರದನ ಪ್ರವೇಶ-)

ಪದ :  ನಾರಾಯಣ ಗೋವಿಂದ ಜಯ
ಹರಿ ನಾರಾಯಣ ದುರಿತ ನಿವಾರಣ
ಪರತರ ಪರಮಾನಂದ ಸದಾಶಿವ ಶಂಕರ…

ದ್ವಾರಪಾಲಕ : ತಾವು ಬಂದಂಥವರು ದಾರು ಸ್ವಾಮಿ ?

ನಾರದ : ಲೋ, ಮುಂಡೇಮಗನೆ ರಂಡೇಗಂಡ ನೀನು ಯಾರು ?

ದ್ವಾರಪಾಲಕ : ನಾನು ಶ್ರೀ ಕೃಷ್ಣ ಪರಮಾತ್ಮನ ದ್ವಾರಪಾಲಕ

ನಾರದ : ನಾರದರು ಬಂದಿದ್ದಾರೆಂದು ನಿಮ್ಮ ಪರಮಾತ್ಮರಿಗೆ ಹೇಳು

ದ್ವಾರಪಾಲಕ : ಸ್ವಾಮೀ, ನಾರು ಬಂದೈತಿ

ಕೃಷ್ಣ : ಅದನ್ನ ಒಯ್ದು ಕುದುರೆಯ ಕಾಲಿಗೆ ಕಟ್ಟು

ದ್ವಾರಪಾಲಕ : ಬರ್ರಿ ನಾರದರೆ (ಜಗ್ಗುವನು…)

ನಾರದ : ಲೋ, ರಂಡೇಗಂಡ ಏನಿದು ?

ದ್ವಾರಪಾಲಕ : ಮತ್ತ ಪರಮಾತ್ಮರೇ ಹೇಳಿದರು ಕುದುರೆ ಕಾಲಿಗೆ ಕಟ್ಟು ಅಂತಾ.

ನಾರದ : ಅವರಿಗೆ ನೀನು ಏನಂತ ಹೇಳಿದೀ ?

ದ್ವಾರಪಾಲಕ : ನೀವು ಹೇಳಿದಂಗ ಹೇಳಿದೆ…ನಾರ ಬಂದೈತಿ ಸ್ವಾಮಿ ಅಂತ…

ನಾರದ : ಲೋ ರಂಡೇಗಂಡಾ ಯತಿಗಳು ಬಂದಾರಂತ ಹೇಳು

ದ್ವಾರಪಾಲಕ : ಯಪ್ಪ…ಯತಗೋಳು ಬಂದಾವರ್ರೀ

ಕೃಷ್ಣ : ಹಿಡಕೊಂಡು ಹೋಗಿ ಗಳೇಕ ಹೂಡು.

ದ್ವಾರಪಾಲಕ : ಬರ್ರಿ ನಿಮ್ಮನ್ನ ಹೂಡಿ ಗಳೆ ಹೊಡಿತೀನಿ…

ನಾರದ :  ಎಂಥ ರಂಡೇ ಗಂಡ ಇದ್ದೀಯಲ್ಲೊ- ಪರಮಾತ್ಮನಿಗೆ ನಾರದ ಮಹರ್ಷಿ ಇಂದ್ರಲೋಕದಿಂದ ಬಂದಿದ್ದಾರೆ ಅಂತ ಹೇಳು.

ದ್ವಾರಪಾಲಕ : ನಿಮ್ಮ ಗುರುಗಳು ಇಂದ್ರಲೋಕದಿಂದ ಬಂದಿದ್ದಾರೆ ಸ್ವಾಮಿ.

ಕೃಷ್ಣ : ಅಗತ್ಯವಾಗಿ ಒಳಗೆ ಬಿಡು.

ನಾರದ : ನಾರಾಯಣ, ನಾರಾಯಣ

ಕೃಷ್ಣ : ಮುನಿಗಳೇ ದಯವಿಟ್ಟು ಕುಳಿತುಕೊಳ್ಳಿ-ತಾವು ಯಾವ ಲೋಕದಿಂದ ಬಂದಿರಿ ? ಏನ ಸುದ್ದಿ ತಂದೀರಿ ? ನಮಗೇನಾದರೂ ತಂದೀರಾ ?…

ನಾರದ : ಪರಮಾತ್ಮ, ಸ್ವರ್ಗದಿಂದ ಇಲ್ಲಿಗೆ ಬಂದೆ. ರಾಜರ ಭೆಟ್ಟಿಗೆ ಋಷಿಗಳ ಭೆಟ್ಟಿಗೆ ಬರಿಗೈಯಿಂದ ಬರಕೂಡದೆಂಬ ಉಕ್ತಿ ಉಂಟು. ದೇವರಿಗೆ ಫಲಪುಷ್ಪ ತರಬೇಕು.

ಕೃಷ್ಣ : ಈಗ ತಾವು ಯಾವುದಾದರೂ ಫಲಪುಷ್ಪ ತಂದಿರಲೇ ಬೇಕಲ್ಲ.

ನಾರದ : ತಂದಿದ್ದೇನೆ. ಕೇಳು
ತಂದೇನಿ ಕುಸುಮವನು | ಸಾರಿ ಮುಕುಂದ
ಸುರಪನ ಲೋಕದಿಂದ
ಇದು ನಿಮ್ಮಯಾ ಚರಣಯುಗಳಕೆ ||
ಪರಮಾತ್ಮ ಈ ಪಾರಿಜಾತ ಪುಪ್ಪವನ್ನು ಇಂದ್ರಲೋಕದಿಂದ ತಂದಿದ್ದೇನೆ. ತಮ್ಮ ಪಟ್ಟದ ರಾಣಿಗೆ ಕೊಡಿ- ಈಗ ಯಾರಿದ್ದಾರೆ ?

ಕೃಷ್ಣ : ಈಗ ರುಕ್ಮಿಣಿ ಇಲ್ಲಿದ್ದಾಳೆ.

ನಾರದ : ಕೃಷ್ಣ, ಈ ಪಾರಿಜಾತವನ್ನು ಪಟ್ಟದರಸಿಯಾದ ರುಕ್ಮಿಣಿದೇವಿಯವರಿಗೇ ಕೊಡಿ, ನೀನು ಆಕೆಯ ಮುಖ ನೋಡುತ್ತ ಮುಡಿಗೆ ಈ ಪುಷ್ಪವನ್ನು ಮುಡಿಸು.

ಕೃಷ್ಣ : (ಒಳಗೆ ಹೋಗಿ ಬಂದು..) ತಮ್ಮ ಆಜ್ಞಾನುಸಾರದಂತೆಯೇ ನಡೆದಿದ್ದೇನೆ.

ನಾರದ : ಪರಮಾತ್ಮ ನನಗೆ ಇನ್ನು ಹೊತ್ತಾಯಿತು. ನಾನಿನ್ನು ಬರುತ್ತೇನೆ ನಾರಾಯಣ, ನಾರಾಯಣ
(ಒಂದು ಬದಿಗೆ ನಾರದ ಇನ್ನೊಂದು ಬದಿಗೆ ಕೃಷ್ಣ ನಿರ್ಗಮನ)