ಪೂರ್ವ ದಿಕ್ಕಿಗೆ ಇಲ್ಲವೆ ಉತ್ತರಕ್ಕೆ ಮುಖಮಾಡಿದ ೬ ಅಡಿ ಎತ್ತರದ ಸುಮಾರು ೨೫ ಅಡಿ ೨೫ ಅಟ್ಟ, ಎರಡೂ ಬದಿಗೆ ನಾಟಕಗಳಲ್ಲಿಯಂತೆ. ಇತ್ತೀಚೆಗೆ ಕವಾಟುಗಳನ್ನು ಇಟ್ಟರೂ ಪೂರ್ವದಲ್ಲಿ ಇವು ಇರಲಿಲ್ಲ ಮೇಲೆ ಗುಡಾರ ಮಾತ್ರ ಹೊದಿಕೆ.

ರಂಗಪೂಜೆ-ಮೊದಲು ಗಣೇಶನ ಸ್ತುತಿ

ಇಬ್ಬರೂ ಶಾಲು ಹಿಡಿದಿದ್ದಾರೆ. ಪೀಠದ ಮೇಲೆ ೮-೧೦ ವರ್ಷದ ಬಾಲಕ-ಗಣೇಶನ ಮುಖವಾಡ ಹೊತ್ತುಕೊಂಡು ಕುಳಿತಿರುವನು.

ವೇಳೆ :  ಶ್ರೀ ಗಜಾನನಂ ಭೂತಗಣಾಧಿಸೇವಿತಂ
ಕಪಿಸ್ಥ ಜಂಬೂಫಲಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ
ಸಮಾಮಿ ವಿಘ್ನೇಶ್ವ ಪಾದಪಂಕಜಂ-
(ಇದರೊಂದಿಗೆ ಶಾರದೆಯ ಸ್ತೋತ್ರ, ಕೊನೆಗೆ ಕವಿ ಪದ್ಯ )
ನೋಡಿರೊ ಬಲ ಭೀಮನ ದಯವಿದು
ಜಗದಿ ಜಾಗೃತೆಯಿಂದ ಹಗೆಗಳ ಜಯಿಸುವ
ಜಗದೀಶನ ದಯ !
ಕಾಲಕಾಲಕೆ ಜಗಪಾಲನ ಮಾಡುವ
ಗೋಕುಲದರಸ
ಲೋಕದೊಳಗೆ ಬಲು ಜೋಕೆಲೆ ಮೆರೆವಂಥ
ಕುಲಗೇಡ ಭೀಮನ ಬಲ ನೋಡಿರೋ ಭೀಮನ ದಯವಿದು –
(ಇಲ್ಲಿಗೆ ಶಾಲ ಎತ್ತಲು ಗಣೇಶನು ಕಂಡು ಬರುತ್ತಾನೆ…)

ಭಾಗವತ:  ನಮೋ ನಮೋ ವಿಘ್ನೇಶ್ವರ ನಮೋ ನಮೋ

ಗಜಾನನ:  ಕಲ್ಯಾಣಮಸ್ತು, ಶುಭಮಸ್ತು, ಬಾಲಕಾ, ನಾನು ಶಿವಪಾರ್ವತಿಯರೊಡನೆ ಕೈಲಾಸದಲ್ಲಿ ಆನಂದದಿಂದಿರುವ ಸಮಯದೊಳ್ ನಿನ್ನ ದೀನವಾಣಿಯು ಎನಗೆ ಕೇಳಿ ಬಂದ ಪ್ರಯುಕ್ತ ನಾವು ಈ ಸಭಾ ಮಂಟಪಕ್ಕೆ ಆಗಮಿಸಬೇಕಾಯಿತು. ಕಾರಣವೇನು ಪೇಳಿದಂಥವನಾಗ ಲೈ ಬಾಲಕಾ…

ಭಾಗವತ:  ಗಜವದನೆ ಇಂದು ನಾನು ದಶಮಸ್ಕಾಂದದೊಳಗಿನ ಭಾಗವತನ ಶ್ರೀಕೃಷ್ಣ ಪಾರಿಜಾತ ಎಂಬ ಅಖ್ಯಾದವನ್ನು ನನ್ನ ನಟಿಯರೊಂದಿಗೆ ಈ ಸಭಾ ಸ್ಥಾನದಲ್ಲಿ ಆಡಬೇಕೆಂದು ನಿಶ್ಚಯಿಸಿ, ನಿರ್ವಿಘ್ನನಾಗಿ ಸಾಗುವಂತೆ ಕೃಪೆದೋರು ಪ್ರಭುವೆ…

ಗಜಾನನ :  ಎಲೈ ಭಾಗವತನೆ, ಯಾವ ವಿಘ್ನವೂ ಬಾರದಂತೆ ವರವನ್ನಿತ್ತಿದ್ದೇನೆ. ಆದರೆ ನನ್ನ ಪೂಜೆಯನು ನೀವು ಸರಿಯಾಗಿ ಸುವಿಸ್ತಾರವಾಗಿ ಮಾಡಬೇಕು.

ಭಾಗವತ  :  ಹಾಗೆ ಆಗಲಿ

ಮರಿಭಾಗವತ :  ಎನ್ರಿಪಾ ಬಂದವರು ಇವರು ದಾರಪಾಟ

ಭಾಗವತ  :  ಬಂದವರು ದಾರು… ತಿಳಿಯಲಿಲ್ಲೇನೆ ನಿನಗ

ಮರಿಭಾಗವತ :  ನನಗೆ ತಿಳಿಲಿಲ್ಲ ಬಿಡ್ರಿ… ಮ್ಯಾಲ ನೋಡಿದರ ಆನಿಮುಖ ಕೆಳಗೆ ನೋಡಿದರ ನಮ್ಮಂಗ ಮನಸ್ಯಾರ – ಎಂಥ ವಿಚಿತ್ರ ಅದಾರ್ರಿಪಾ.

ಭಾಗವತ :  ಹೌದು ಇವರಿಗೆ ವಿಘ್ನೇಶ್ವರ, ವಿಘ್ನೇಶ್ವರ, ಅಂತ ಅಂತಾರ

ಮರಿಭಾಗವತ :  ಅಂದ್ರ ಇವರು ಬಂದ ಕೂಡಲೇ ವಿಘ್ನ ಸುರು ಆಗತಾವೇನು ?

ಭಾಗವತ :  ಆಗೋದಿಲ್ಲ-ವಿಘ್ನಗಳೆಲ್ಲ ದೂರ ಹೋಗತಾವ

ಮರಿಭಾಗವತ :  ಮತ್ತ ಏನ ಅಂತಾರಪ ಇವರಿಗೆ

ಭಾಗವತ ಇವರಿಗೆ ಲಂಬೋದರ ಲಂಬೋದರ ಅಂತ ಅಂತಾರ

ಮರಿಭಾಗವತ :  ಹೌದಾ…ಲಂಬ ಅಂದರ ಉದ್ದ…ಉದ್ದ ಅದರಂತೇನ

ಭಾಗವತ :  ಹಾಗಲ್ಲಪ್ಪ…ಇವರ ಹೊಟ್ಟೆ ಮುಂದಕ್ಕೆ ಇರೋದರಿಂದ ಇವರಿಗೆ ಲಂಬೋದರ ಲಂಬೋದರ ಅಂತ ಅಂತಾರ.

ಮರಿಭಾಗವತ ಸರಿ ಹೋತು ಬಿಡ್ರಿ ಇರವಲ್ಲದಾಕ-ಇವರ್ಯಾಕ ಇಲ್ಲಿಗೆ ಬಂದಾರ

ಭಾಗವತ :  ವರ ಕೊಡಾಕ-

ಮರಿಭಾಗವತ ವರ ಕೊಡಾಕ ! ಬೇಸಾತಲ್ಲ ಕೊಟ್ಟು ಹೋಗ್ಲಿ ಎಷ್ಟತ್ತು ಆಯಿತಲ್ಲೊ ಮಾರಾಯ ಸೊಟ್ಟಮುಖ ಮಾಡಿಕೊಂಡು ಕುತುಗೊಂಡು

ಭಾಗವತ ಇವರು ಹಾಂಗ ಕೊಡೂದಿಲ್ಲ

ಮರಿಭಾಗವತ ಮತ್ತ ಏನ ಮಾಡಿದರ ಕೊಡತಾರ

ಭಾಗವತ :  ಮನಸ್ಸಿಟ್ಟು ಪೂಜಾಮಾಡಿದರ ವರ ಕೊಡತಾರ

ಮರಿಭಾಗವತ ಮನಸ್ಸಿಟ್ಟು ಅಂದ್ರ ಹ್ಯಾಂಗರಪಾ…

ಭಾಗವತ ಅಂದರೆ ಪರಮಾನಂದ ಜಪದಿಂದ ಮಜ್ಜನಂಗೈದು, ಪರಮಶಾಂತಿಯೆಂಬ ಗಂಧವನ್ನು ಧರಿಸಿ, ನಿತ್ಯತ್ವವೆಂಬ ಅಕ್ಷತೆಯನ್ನಿಟ್ಟು, ಹೃದಯ ಕಮಲವೆಂಬ ಪುಷ್ಪವನ್ನು ಏರಿಸಿ, ಶಿವಸಂಸ್ಕಾರವೆಂಬ ಧೂಪವನ್ನು ಹಾಕಿ, ಭಕ್ತಿಭಾವವೆಂಬ ನೈವೇದ್ಯ ಹಿಡಿದು, ಶಿವಭಕ್ತಿಯೆಂಬ ತಾಂಬೂಲ ಕೊಟ್ಟು, ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಬೇಕು. ಇದು ಅಂತರಂಗದ ಪೂಜೆ.

ಮರಿಭಾಗವತ ಎಷ್ಟೂಂದು ಕಂತ್ರಟ ಹೇಳಿದಿರಲ್ಲರೆಪಾ ನಮಗೆಲ್ಲಾ ಇವು ನೀಗುವಂತವಲ್ಲ ನಮಗ ನೀಗುವಂತಾವು ಹೇಳ್ರಿ.

ಭಾಗವತ :  ಇವರಿಗೆ ಪೂಜೆಗೆ ಪನ್ನೀರು ಬೇಕು

ಮರಿಭಾಗವತ ಪನ್ನೀರು ಅಂದ್ರ ನಾವರಿಗ್ಯಾರ ಬಟ್ಟಲದಾಗ ಇರತಾವಲ್ಲ ಅದ್ ಹೌದಿಲ್ಲ

ಭಾಗವತ ಅಂಥವಲ್ಲ

ಮರಿಭಾಗವತ ಮತ್ತೆಂಥವು

ಭಾಗವತ ಅಂದರೆ ಬೆಳಿಗ್ಗೆ ಕರಕೆ ಪತ್ರಿಯ ಮೇಲಾಗಲಿ, ಕಬ್ಬಿನ ಮೇಲಾಗಲಿ ಇದ್ದ ಇಬ್ಬನ್ನಿಯನ್ನು ತಂದು ಸುಗಂಧದ್ರವ್ಯಗಳನ್ನು ಅದರಲ್ಲಿ ಬೆರಿಸಿ ಇವರ ಮುಖ ಮಾರ್ಜನೆ ಮಾಡಬೇಕು.

ಮರಿಭಾಗವತ ಮತ್ತ ಏನ ಬೇಕಪಾ…

ಭಾಗವತ ಸ್ನಾನದ ನಂತರ ಗಂಧಾಕ್ಷತೆ

ಮರಿಭಾಗವತ : ಕೊಡತೀವ್ರಪಾ ಮತ್ತ

ಭಾಗವತ : ಮತ್ತ ತರತರದ ಪುಷ್ಪಗಳು ಬೇಕು.

ಮರಿಭಾಗವತ : ಯಾವಾವು ಬೇಕು ಹೇಳ್ರಿ

ಭಾಗವತ : ಕರಕಿಪತ್ರಿ ! ಕಮಲದ ಹೂವು ಶ್ರೀಗಣನಾಥ
ಬಿಲ್ವಪತ್ರಿ ! ಮಲ್ಲಿಗಿ ಹೂವು ಶ್ರೀ ಗಣನಾಥ

ಭಾಗವತ : ಇವರಿಗೆ ಕರಿಕೆ ಬೇಕು.

ಮರಿಭಾಗವತ : ಕರಕಿನ ಎಷ್ಟು ಹೊರಿ ಬೇಕು.

ಭಾಗವತ : ಎಷ್ಟ ಹೊರಿ ಅನ್ನಾಕ ಇವರೇನು ದನ ಅಂತ ತಿಳಿದಿಯೇನೋ ಐದು ದಳ-ಇಪ್ಪತ್ತೈದು ದಳ ಆದ್ರ ಸಾಕು…

ಮರಿ ಭಾಗವತ : ಇದು ನಮಗ ಆಗಕಿಲ್ಲ

ಭಾಗವತ : ಮತ್ತೇನು ಆಗತೈತಿ ನಿನ್ನ ಕೈಯಿಂದ

ಮರಿ ಭಾಗವತ : ಬೇಕಾದರ ಒಂದ ಹೊರಿ ಸಜ್ನಿಕಣಿಕೆ ಹೊಟ್ಟ ತಂದು ಇವರ ಮ್ಯಾಲ ಬೇಕಾದರ ಸುರುವು ಅಂದ್ರ ಸುರುತೀನಿ

ಭಾಗವತ : ಮೂರ್ಖ ಹಾಗೆಲ್ಲ ಮಾತಾಡಬಾರದು, ನಾನು ಹೇಳಿದಂತೆ ಮಾಡು

ಮರಿ ಭಾಗವತ : ಮಾಡತೇನಿ-ಮತ್ತೇನು ಮಾಡಬೇಕು ಹೇಳಪಾ

(ಹೀಗೆಯೇ ಫಲ, ಭೋಜಭಕ್ತಗಳ ವರ್ಣನೆ-ಹಾಸ್ಯ ನಡೆದು )

ಭಾಗವತ : ಪೂಜೆ ಅಂತೂ ಮುಗಿತಲ್ಲಪಾ…ವರ ಬೇಡಿಕೋ

ಮರಿ ಭಾಗವತ : ನಮೋ ನಮೋ ಗಜಾನನ ಮಹಾರಾಜನೇ ನಿನಗೆ ನಮೋ ನಮೋ ಇಷ್ಟ ದಿನ್ ನನಗ ಕಾಲಿನಿಂದ ನಡೆದು ನಡೆದು ಸಾಕಾಗಿ ಹೋಗಿದೆ. ಇನ್ನ ಮ್ಯಾಲ ತಲೆಯಿಂದ ನಡೆಯುವಂತೆ ಆಶಿರ್ವಾದ ಮಾಡಪಾ

ಗಜಾನನ : ಒಳ್ಳೇದು ಬಾಲಕಾ ತಲೆಯಿಂದ ನಡೆಯುವದು ಅಂದರೆ ಬುದ್ಧಿವಂತಿಕೆಯಿಂದ ನಡೆಯುವದು ಎಂದರ್ಥ ನಿನ್ನ ಕೋರಿಕೆ ಯತಾರ್ಥವಾಗಿದೆ. ವರ ಕೊಟ್ಟಿದ್ದೇನೆ. ಭಾಗವತ ನಿನ್ನ ಕಾರ್ಯದಲ್ಲಿ ಯಾವ ವಿಘ್ನಗಳೂ ಬರಲಾರವು. ನೀನಿನ್ನು ಆಟವನ್ನು ಪ್ರಾರಂಭಿಸು ನಮಗೆ ಹೊತ್ತಾಯಿತು. ನಾವಿನ್ನು ಬರುತ್ತೇವೆ.

ಭಾಗವತ : ಆಗಬಹುದು ಗಜಾನನ. ನಮೋ ನಮೋ ಗಜಾನನ

ಗಜಾನನ : ಕಲ್ಯಾಣಮಸ್ತು…
ಗಜವದನ ಗಜವದನ
ಗಜಾನನ ! ಗಜಮುಖನೆ…..     ತೆರೆ.

(ಇಲ್ಲಿ ಹಾಲು ಮಾರುವ ಗೌಳಗಿತ್ತಿ ತಲೆಯ ಮೇಲೆ ಬುಟ್ಟಿ, ಮಡಿಕೆಗಳನ್ನು ಹೊತ್ತು ಹಾಡುತ್ತ ಬರುವಳು)

ಗೊಲ್ಲತಿ : ನಾನು ಬಂದಂಥವಳು ದಾರು
ಹೇಳಿದರೆ ತಿಳಿಯ ಬಂದೀತೇನವ್ವ
ಎಲ್ಲ ಕುಲಗಳಲಿ ನಮ್ಮ ಗೊಲ್ಲತಿಕುಲ
ಕುಲವು ಮೇಲಮ್ಮ
ನಾಲ್ಕು ಮಂದಿ ನಾವು ಬಂದೀವಿ ಈಗ
ಹಾಲಮೊಸರು ಮಾರಾಕ….
ಏನ್ರವ್ವಾ…ಈ ಓಣಿಯಲ್ಲಿ ಯಾರಾದರೂ ಹಾಲ್ಮೊಸರು ತೊಗೊಳ್ಳುವವರು ಇದ್ದಿರೇನು-

ಭಾಗವತ : (ಅಣಕು ಧ್ವನಿಯಲ್ಲಿ) ಏನ್ರವ್ವಾ ಈ ಓಣಿಯಲ್ಲಿ ಯಾರಾದರು ಹಾಲ್ಮೊಸರು ಮಾರವರು ಇದ್ದೆರೇನು-

ಗೊಲ್ಲತಿ : ಈ ಓಣ್ಯಾಗ ಯಾರೂ ತಗೊಳ್ಳುವವರು ಇದ್ದಾಂಗ ಇಲ್ಲ

ಭಾಗವತ : ಈ ಓಣ್ಯಾಗ ಯಾರೂ ಮಾರುವವರು ಇದ್ದಂಗ ಇಲ್ಲ

ಗೊಲ್ಲತಿ : ಅಯ್ಯೂ ಮನಿಹಾಳ

ಭಾಗವತ : ಅಯ್ಯೂ ನನ ಓಣಿ ಹಾಳ

 

ಶ್ರೀ ಗಜಾನನಂ

ಗೊಲ್ಲತಿ : ನಾವು ಮುಂದಿನ ಓಣಿಗೆ ಹೋಗೋನು

ಭಾಗವತ : ನಾವೂ ಮುಂದಿನ ಓಣಿಗೆ ಹೋಗೋನು

(ಎದುರು ಬದರಾಗಲು….)

ಗೊಲ್ಲತಿ : ಮೈಮ್ಯಾಲೆ ಏನ ಎಚ್ಚರೈತೋ ಇಲ್ಲ

ಭಾಗವತ : ನಿನಗ ಖಬರ ಐತಿಲ್ಲೋ- ಯಾರ ನೀನು

ಗೊಲ್ಲತಿ : ನೀನು ದಾರು

ಭಾಗವತ : ನಾನು ದಾರು ನೀನು ದಾರು

ಗೊಲ್ಲತಿ : ನನಗೆ ಗೊಲ್ಲತಿ ಗೊಲ್ಲತಿ-ಅಂತ ಅಂತಾರ

ಭಾಗವತ : ನನಗ ನಿಮ್ಮಂಥವರನ್ನು ಎತ್ತಿ, ಒಯ್ದ ನಡಮಂದ್ಯಾಗ ಚಲ್ಲತಿ ಚಲ್ಲತೀ ಅಂತ ಅಂತಾರ

ಗೊಲ್ಲತಿ : ನನಗೆ ಒಯ್ಯಾರಿ ಅಂತ ಅಂತಾರ

ಭಾಗವತ : ನಮಗೂ ಅಂತಾರವ್ವ

ಗೊಲ್ಲತಿ : ಏನಂತ ಅಂತಾರ

ಭಾಗವತ : ನಮಗ ತಯ್ಯಾರಿ ತಯ್ಯಾರಿ ಅಂತ ಅಂತಾರ

ಗೊಲ್ಲತಿ : ಏ ಮೂಳಾ, ಚೇಷ್ಟೆ ಮಾಡತೀಯೇನ ನನಗ ರಾಧಿಕಾ ರಾಧಿಕಾ ಅಂತ ಅಂತಾರ

ಭಾಗವತ :  ನಮಗ ಶೋಧಿಕಾ ಶೋಧಿಕಾ ಅಂತ ಅಂತಾರ

ಗೊಲ್ಲತಿ : ನನಗ ಗೌಳಗಿತ್ತಿ ಗೌಳಗಿತ್ತಿ ಅಂತ ಅಂತಾರ

ಭಾಗವತ : ಎಂಥ ಗಿತ್ತಿ

ಮರಿ ಭಾಗವತ : ಎಷ್ಟ ತರದ ಗಿತ್ತಿ ಅದಾವ ಹೇಳಾಟು

ಭಾಗವತ : ಕಳಸಗಿತ್ತಿ, ಸೂಲಗಿತ್ತಿ ನಂತರ ಇನ್ನೂಂದು ಐತಿ ಹೇಳಲೋ ಬ್ಯಾಡ.

ಮರಿ ಭಾಗವತ : ಬ್ಯಾಡಯಾಕ ಹೇಳ

ಭಾಗವತ : ನಿನ್ನಂಥ ಹಾದರ…

ಮರಿ ಭಾಗವತ : ಥೂ ನಿನ ಮಂಜಾಳ ಹೋಗ

ಗೊಲ್ಲತಿ : ಬರೆ ಇದ ಮಾತ ಹಾಲು ಮೂಸರು ಕೊಳ್ಳತೀರಾ

ಭಾಗವತ : ನಾವು ತೆಗೆದುಕೊಳ್ಳವರಲ್ಲಾಬೇ ಮಾರಸವರು

ಗೊಲ್ಲತಿ : ಮಾರಸಲ್ಲಂಗರ

ಭಾಗವತ : ಏನೇನ ತಂದೀಯವ್ವಾ ಹೇಳಿದರ ಮಾರಿಸ್ತಾರ

ಗೊಲ್ಲತಿ : ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ ಅದರ ಮ್ಯಾಲಿನ ಚರಟ ಸಹ ತಂದೀನಿ.

ಭಾಗವತ : ಬಾಳ ಬೇಸಿ ಆತು ಬಿಡು ಕೆಳಗ ಇಳಸಲ್ಲ-ನೋಡಿಂದ ಅಲ್ಲೇನು ಮಾರಸೋದು

ಗೊಲ್ಲತಿ : ಇಳಸವ್ವಾ….ಹೈನಾ ಎಂಥದು ಗೊತ್ತೇನು

ಭಾಗವತ : ಹೇಳದ ಹ್ಯಾಂಗಬೇ ತಿಳಿತದ

ಗೊಲ್ಲತಿ : ಹೌದೇನು-ಹೇಳತೀನಿ ಕೇಳ…ಹೆಪ್ಪು ಮುರಿಯೆದ ಮೊಸರ ಜಪ್ಪೀಸಿ ತಂದೀನಿ ತಪ್ಪು ಹೇಳುವವಳಲ್ಲ ಒಪ್ಪಿಟ್ಟು ಕೊಳ್ಳಿರವ್ವಾ ಹಾಲು ಮೊಸರ

(ಇದರಂತೆ ಹಾಲು, ಮಜ್ಜಿಗೆ, ಬೆಣ್ಣೆ ಇತ್ಯಾದಿಗಳ ವರ್ಣನೆ-ಇಬ್ಬರ ನಡುವೆ ಹಾಸ್ಯ-ಅಶ್ಲೀಲವೆನ್ನುವುದರ ಅಂಚಿನವರೆಗೆ ಸಾಗುತ್ತದೆ.) ಮಜ್ಜಿಗೆ ತಯಾರಿಕೆಯ ರೀತಿಯ ವರ್ಣನೆ ಅಮೋಘವಾಗಿದೆ.

ಗೊಲ್ಲತಿ: ಮಜ್ಜಿಗೆ ಮಾಡಿದ ರೀತಿ ಹೇಳಬೇಕಲ್ಲೇನು. ನೆಟ್ಟಗೆ ಮನಸ್ಸಿಗೊಟ್ಟು ಕೇಳು. ಸ್ಥಿರಬುದ್ದಿಯೆಂಬ ಕಂಬವನ್ನು ನಿಲ್ಲಿಸಿ. ಗುರು ಧ್ಯಾನವೆಂಬ ಸಿಂಬಿಯನಿಟ್ಟು, ಕರಣೇಂದ್ರಿಯಗಳೆಂಬ ಹಗ್ಗ ಕಟ್ಟಿ, ಕಾಮ ಕ್ರೋಧಾದಿ ದುರ್ಗುಣ ಓಡಿಸಿ. ಈ ದೇಹವೆಂಬ ಪಾತ್ರೆಯಲ್ಲಿ ಮನಸ್ಸೆಂಬ ಕಡಗೋಲಿಟ್ಟು, ಅನುಭವವೆಂಬ ಮೊಸರು ತುಂಬಿ, ಭಕ್ತಿಯೆಂಬ ಹಗ್ಗವನ್ನು ವಿನಯ ವೈರಾಗ್ಯಗಳೆಂಬ ಕೈಗಲ್ಲಿ ಹಿಡಿದು, ಅರಿವು ಮರವುಗಳೆಂಬ ಎಡಸುತ್ತು ಬಲ ಸುತ್ತು ಮಾಡಿ, ಅಜ್ಞಾನವೆಂಬ ಸವತಿಯನ್ನು ಲೆಕ್ಕಿಸದೆ, ಸಂಶಯಬೆಂಬ ಗರೆಟೂಡೆದು ಶ್ರೇಯಸ್ಸೆಂಬ ನೊರೆಬುರುಗು ಏಳುವಂತೆ ಮಥನ ಮಾಡುವುದೇ ಫಲಪ್ರಾಪ್ತಿಯ ಮಾರ್ಗ. ಆ ವೇಳೆಯೊಳು ಕೆಟ್ಟ ನಡತೆಯೆಂಬ ನೊಣವನ್ನು ಹೊಡೆದು, ತಾನು ಪರಮಾತ್ಮನೆಂದು ತಿಳಿದು, ದೇಹ ಮಡಕೆಯಲ್ಲಿ ಕೈಯಿಟ್ಟು, ಕಲಿಕೆ ಪರತತ್ವವೆಂಬ ಬೆಣ್ಣೆ ತೆಗೆದು, ಸ್ಥಿರ ಮುಕ್ತಿಯೆಂಬ ತುಪ್ಪವನ್ನು ಕಾಸಿ, ಯಾರು ಆ ಗುರುಸಿದ್ಧನ ಸವಿ ನೋಡಬೇಕೆನ್ನುವರೋ ಅಂಥವರ ಕೂಡ ವ್ಯಾಪಾರಮಾಡಲಿಕ್ಕೆ ಬಂದಿದ್ದೇನೆ.

ಭಾಗವತ : ಅಯ್ಯಯ್ಯಾ ನಮ್ಮವ್ವ-ನಮಗ ತಿಳಿಲಿಲ್ಲವ ನಿನ್ನ ಹಕಿಕತ್ತು. ತಾ ತಗೊಳ್ಳದಿದ್ದರ ಮುಂದಿನ ಮನೆ ತೋರಿಸು ಅಂತ ಗಾದೆ ಮಾತು ಇದೆ, ತಾವು ಮುಂದಿನ ಕೇರಿಗೆ ಹೋಗ್ರೆವ್ವಾ

ಗೊಲ್ಲತಿ : ಮುಂದೆ ಇರುವುದು ಯಾವ ಕೇರಿ

ಭಾಗವತ : ಅದು ಚನ್ನಪಟ್ಟಣ

ಗೊಲ್ಲತಿ : ಚನ್ನಪಟ್ಟಣ ಅಂದ್ರ

ಭಾಗವತ : ಅಂದ್ರ ಹೊಲಗೇರಿ

ಗೊಲ್ಲತಿ : ಅದಕಾದರ ನೀನ ಹೋಗು

ಭಾಗವತ : ಯವ್ವಾ ಹಂಗ್ಯಾಕ ಅಂತೀರಿ ಎಲ್ಲಾರೂ ಮೊದಲು ಹೋಗೋದು ಅಲ್ಲಿ ವ್ಯಾಪಾರ ಮಾಡಾಕ-ಬೇಕಾದರ ನೀವು ಮುಂದಿನ ಕೇರಿಗೆ ಹೋಗ ತಾಯಿ

ಗೊಲ್ಲತಿ : ಅದು ಯಾವ ಕೇರಿ ದೂತಿ

ಭಾಗವತ: ಅದು ಮಧುರಾಪುರಾ ತಾಯಿ

ಗೊಲ್ಲತಿ : ಮಧುರಾಪುರ ಅಂದ್ರ

ಭಾಗವತ : ಗೋಕುಲ ತಾಯಿ

ಗೊಲ್ಲತಿ : ಅಲ್ಲಿ ಯಾವ ಯಾವ ಓಣಿಗಳಿವೆ ದೂತಿ

ಭಾಗವತ : ಗೋಕುಲದಲ್ಲಿ ವರ್ಣಾಶ್ರಮಕ್ಕೆ ಅನುಸಾರವಾಗಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಹೀಗೆ ನಾಲ್ಕು ಓಣಿಗಳಿವೆ. ಬ್ರಾಹ್ಮಣರು ಹಾಲು ಮೊಸರಿನ  ಮ್ಯಾಲೆ ಬಹಳ ಪ್ರೀತಿ. ನೀ ಓಣಿಗೆ ಹೋದ್ರ ಬಾಳ ವ್ಯಾಪಾರ ಆಗತೈತಿ

ಗೊಲ್ಲತಿ : ಇದ ಬ್ರಾಹ್ಮಣರ ಓಣಿ ಅನ್ನೋದು ಹೇಗೆ ತಿಳಿತೈತಿ ದೂತಿ

ಭಾಗವತ : ನೆಟ್ಟಗ ಹೋಗ ಯವ್ವಾ ಹಣಮಂತ ದೇವರ ಗುಡಿ ಮುಂದ ಬಲಕ್ಕ ತಿರಗಿದರ ಅದ ಬ್ರಾಹ್ಮಣರ ಓಣಿ

ಗೊಲ್ಲತಿ : ತಿಳೀತು ಬಿಡು ದೂತೆ-ಅಲ್ಲೇನು ಕಾಡವರು ಬೇಡವರು ಸುಂಕತಾ ಅನ್ನವರು ಯಾರೂ ಇಲ್ಲ ಹೌದಲ್ಲ ಮತ್ತ

ಭಾಗವತ : ಅವರೆಲ್ಲ ಒಳ್ಳೆಯವರು ತಾಯಿ, ಆದ್ರ ಒಬ್ಬ ಹುಡುಗ

ಗೊಲ್ಲತಿ : ಯಾರವ ಹುಡುಗ

ಭಾಗವತ : ಸುಂಕದ ಸುಬ್ಬಣ್ಣನ ಮಗ ಯಲ್ಲಣ್ಣ ಅಂತ ಒಬ್ಬ ಅದಾನ

ಗೊಲ್ಲತಿ : ಅವನ ಏನ ಮಾಡತಾನ

ಭಾಗವತ : ಸುಂಕಾ ಬೇಡತಾನ. ನಾನೊಮ್ಮೆ ಅಲ್ಲಿಗೆ ಹೋಗಿದ್ದೆ, ನಾ ಮುದುಕಿ ಅಂತ ಹೇಳಿದರೂ ಕೇಳಲಿಲ್ಲ ಫಜೀತಿ ಅಂದ್ರ ಫಜೀತಿ ಆಯ್ತು

ಗೊಲ್ಲತಿ : ಕೊಡೊದು ಕೊಟ್ರೆ-ನಮಗೇನು ಮಾಡತಾನ

ಭಾಗವತ : ಹಾಂಗದರ ಸರಿ ಬಿಡ್ರಿ…ಯವ್ವಾ ಭಗವಂತನ ನಾಮಸ್ಮರಣೆ ಮಾಡಾ ಹೋದರ ವ್ಯಾಪಾರ ಬಾಳ ಚನ್ನಾಗಿ ಆಗತೈತಿ

ಗೊಲ್ಲತಿ : ಹೌದು ದೂತೆ-ನಾಮಸ್ಮರಣಿ ಮಾಡತಾ ಹೋದರೆ ವ್ಯಾಪಾರ ಚನ್ನಾಗಿ ಆಗತೈತಿ-ನಿರ್ಗಮನ