Categories
ಪತ್ರಿಕೋದ್ಯಮ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ ಎಸ್ ಸಚ್ಚಿದಾನಂದ ಮೂರ್ತಿ

ಆಂಗ್ಲಭಾಷೆಯ ‘ದಿ ವೀಕ್’ ಪತ್ರಿಕೆ ಮತ್ತು ‘ಮಲೆಯಾಳಂ ಮನೋರಮ’ ಪತ್ರಿಕೆಗಳಿಗೆ ನವದೆಹಲಿಯಲ್ಲಿ ಸ್ಥಾನಿಕ ಸಂಪಾದಕರಾಗಿ ಕೆಲಸ ಮಾಡುತ್ತಿರುವ ಕನ್ನಡಿಗ ಶ್ರೀ ಸಚ್ಚಿದಾನಂದಮೂರ್ತಿಯವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಅಪಾರ.

ಶ್ರೀ ಸಚ್ಚಿದಾನಂದಮೂರ್ತಿಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೨ರಲ್ಲಿ ‘ದಿ ವೀಕ್’ ಪತ್ರಿಕೆಯ ಬೆಂಗಳೂರು ಬಾತ್ಮೀದಾರರಾದರು. ಆನಂತರ ೧೯೯೦ರಲ್ಲಿ ಮಲೆಯಾಳಂ ಮನೋರಮ ಸಂಸ್ಥೆಯ ನವ ದೆಹಲಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿ ಹಾಗೂ ಘಟನಾವಳಿಗಳ ವಿಶ್ಲೇಷಣೆಯಲ್ಲಿ ಪರಿಣತರಾದ ಶ್ರೀ ಸಚ್ಚಿದಾನಂದಮೂರ್ತಿಯವರು ರಾಷ್ಟ್ರದ ರಾಜಧಾನಿಯಲ್ಲಿದ್ದರೂ ಕರ್ನಾಟಕವನ್ನು ಮರೆತಿಲ್ಲ. ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ತರುವಲ್ಲಿ ನ್ಯಾಯೋಚಿತ ಕೆಲಸ ಮಾಡುತ್ತ ಬಂದಿದ್ದಾರೆ.

ಅನೇಕ ದೇಶಗಳನ್ನು ಸುತ್ತಿ ಬಂದಿರುವ ಇವರು ಅನುಭವ ಮತ್ತು ಅಧ್ಯಯನಶೀಲತೆಗಳಿಂದ ಪತ್ರಿಕೋದ್ಯಮದ ಪ್ರಮುಖ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಂವಿಧಾನ, ಸರ್ಕಾರ, ರಾಯಭಾರ, ರಾಷ್ಟ್ರೀಯ ಸುರಕ್ಷತೆ – ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆ ಮೌಲಿಕ ಬರಹಗಳನ್ನು ನೀಡಿ ಪ್ರಸಿದ್ಧರಾಗಿದ್ದಾರೆ. ಈಗ ತಮ್ಮ ಅಪೂರ್ವ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.