ರಂಗಭೂಮಿ ಕ್ಷೇತ್ರದಲ್ಲಿ ಐದು ದಶಕಗಳಿಂದಲೂ ನಿಗ್ರಹ ಸೇವೆ ಸಲ್ಲಿಸುತ್ತಿರುವ ಹಿರಿಯ ಚೇತನ ಶ್ರೀ ಕೆ. ಗುರುರಾವ್ ಅವರು.
ತುಮಕೂರು ಜಿಲ್ಲೆಯ ಇರಕಸಂದ್ರದಲ್ಲಿ ಜನಿಸಿದ ಶ್ರೀ ಕೆ. ಗುರುರಾವ್ ಎಳವೆಯಲ್ಲೇ ನಾಟಕದ ಗೀಳು ಅಂಟಿಸಿಕೊಂಡವರು. ಪ್ರಖ್ಯಾತ ರಂಗಭೂಮಿ ಕಲಾವಿದರಾದ ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಯಲ್ಲಿ ತಮ್ಮ ಅಪ್ರತಿಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡ ಶ್ರೀ ಗುರುರಾವ್ ಹಲವಾರು ವರ್ಷ ಸುಪ್ರಸಿದ್ದ ಪ್ರಭಾತ್ ಕಲಾವಿದರ ಸಂಸ್ಥೆಯಲ್ಲಿ ಅಭಿನಯಿಸಿ, ಜನ ಮೆಚ್ಚುಗೆ ಪಡೆದಿದ್ದಾರೆ. ಬೆಂಗಳೂರಿನ ವೈ.ಎಂ.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ರಾಜ್ಯದಲ್ಲೇ ಪ್ರಪ್ರಥಮವಾದ ಧ್ವನಿಬೆಳಕಿನ ಶ್ರೀಕೃಷ್ಣದೇವರಾಯ ಕಾರ್ಯಕ್ರಮದಲ್ಲಿ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಇವರ ಅಭಿನಯ ಮನೋಜ್ಞವಾದುದು. ಬೆಂಗಳೂರಿನಲ್ಲಿ ೨೨ ವರ್ಷಗಳು ಹಾಗೂ ಮೈಸೂರಿನಲ್ಲಿ ೨೦ ವರ್ಷಗಳು ರಂಗಭೂಮಿ ಕಲಾವಿದರಾಗಿ, ಚಲನಚಿತ್ರಗಳಲ್ಲಿ ಪೋಷಕ ನಟರಾಗಿ, ಗಮಕಿಯಾಗಿ, ಹುಟ್ಟು ಹೋರಾಟಗಾರರಾಗಿ, ಸಮಾಜಸೇವಕರಾಗಿ ಸಾರ್ಥಕ ಬದುಕನ್ನು ಕಂಡವರು.
ಅನೇಕ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದಲ್ಲದೆ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ‘ಭಕ್ತ ಅಂಬರೀಷ’, ‘ಕೃಷ್ಣಲೀಲೆ’, ‘ಚಂದ್ರಚಕೋರಿ’, ‘ಕುರುಕ್ಷೇತ್ರ’, ‘ಧರ್ಮಭೂಮಿ’ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ಜನಪ್ರಿಯತೆ ಗಳಿಸಿದೆ. ಇಂಗ್ಲಿಷ್, ಕನ್ನಡ ಹಾಗೂ ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿರುವ ಹಿರಿಮೆ ಶ್ರೀಯುತರದು. ಕಲಾ ಸೇವೆಯ ಜೊತೆಗೆ ಸಮಾಜ ಸೇವೆ ಇವರ ಇನ್ನೊಂದು ಸೇವಾಕ್ಷೇತ್ರ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರೀಯುತರ ಹೋರಾಟ ಗಮನಾರ್ಹ.
ಅಭಿನಯ ಚಾತುರ್ಯ, ಕಲಾನೈಪುಣ್ಯತೆ, ಹೋರಾಟದ ಹುಟ್ಟುಗುಣ, ಸ್ನೇಹಪರತೆ ಹಾಗೂ ಮಾನವೀಯತೆಗಳು ಸಂಗಮಿಸಿದ ಅಪರೂಪದ ವ್ಯಕ್ತಿ ಶ್ರೀ ಕೆ. ಗುರುರಾವ್ ಅವರು.
Categories
ಶ್ರೀ ಕೆ. ಗುರುರಾವ್
