Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಂಗಾಧರ್

ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸಿದ ಪ್ರತಿಭಾವಂತ ನಾಯಕ ನಟ ಶ್ರೀ ಎಸ್. ಗಂಗಾಧರ್ ಅವರು.
ತುಮಕೂರಿನಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಗಂಗಾಧರ್ ಅವರು ಎಸ್.ಎಸ್.ಎಲ್.ಸಿ. ಮುಗಿಸಿ ಕೈಗಾರಿಕಾ ತರಬೇತಿ ಪಡೆದು ಎಚ್.ಎ.ಎಲ್.ನಲ್ಲಿ ವೃತ್ತಿ ಆರಂಭಿಸಿದರು. ರಂಗಭೂಮಿಯಲ್ಲಿ ಆಸಕ್ತಿ ತಳೆದು ಹವ್ಯಾಸಿ ನಾಟಕರಂಗದಲ್ಲಿ ಅಭಿನಯಿಸಲು ಆರಂಭಿಸಿದ ಶ್ರೀಯುತರು ಎಚ್ಚಮ ನಾಯಕ, ದೇವದಾಸಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಭಾತ್ ಕಲಾವಿದರು, ಬಷೀರ್ ನಾಟಕಗಳಲ್ಲಿ ಅಭಿನಯಿಸಿದ ಶ್ರೀಯುತರ ಮೊದಲ ಚಲನ ಚಿತ್ರ ಜಿ.ವಿ. ಅಯ್ಯರ್ ನಿರ್ದೇಶನದ ‘ಚೌಕದ ದೀಪ’.
ಗೆಜ್ಜೆಪೂಜೆ, ಶರಪಂಜರ, ಸೀತ, ಸೋತು ಗೆದ್ದವಳು, ಮಣ್ಣಿನ ಮಗಳು, ಕಥಾ ಸಂಗಮ, ನನ್ನ ತಮ್ಮ, ಮುಂತಾದ ಸುಮಾರು ೮೦ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀ ಗಂಗಾಧರ್ ಅವರಿಗೆ ಯಶಸ್ಸು ತಂದು ಕೊಟ್ಟ ಚಿತ್ರಗಳು ಗೆಜ್ಜೆಪೂಜೆ, ಶರಪಂಜರ ಚಿತ್ರಗಳು, ಶ್ರೀಯುತರ ಮನೋಜ್ಞ ಅಭಿನಯದ ಪ್ರತೀಕಗಳು.
ಶರಪಂಜರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕಾರ, ಗೆಜ್ಜೆ ಪೂಜೆ ಮತ್ತು ಕಥಾ ಸಂಗಮ ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಶ್ರೀಯುತರ ಅಭಿನಯಕ್ಕೆ ಸಂದ ಗೌರವಗಳಾಗಿವೆ.
ಗೆಜ್ಜೆಪೂಜೆ, ಶರಪಂಜರದಂಥ ಚಿತ್ರಗಳಲ್ಲಿನ ವಿಶಿಷ್ಟ ಅಭಿನಯದಿಂದಾಗಿ ಚಿತ್ರರಸಿಕರ ಮನ ಗೆದ್ದಿರುವ ಪ್ರತಿಭಾವಂತ ನಾಯಕ ನಟರು ಶ್ರೀ ಗಂಗಾಧರ್ ಅವರು.