ಅಂಗವಿಕಲತೆ ಸಾಧನೆಯ ಬದುಕಿಗೆ ಅಡ್ಡಿಯಾಗದೆಂದು ತೋರಿಸಿಕೊಟ್ಟಿರುವ ಹಾಗೂ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವವರು ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ ಅವರು.
ಬಾಗಲಕೋಟೆಯ ಶ್ರೀ ಘನಶ್ಯಾಂ ಭಾಂಡಗೆ ಅವರ ಜನನ ೧೯೬೬ರಲ್ಲಿ. ಪೋಲಿಯೋದಿಂದ ತಮ್ಮೆರಡು ಕಾಲು ಕಳೆದುಕೊಂಡಾಗ ಶ್ರೀಯುತರಿಗೆ ಮೂರು ವರ್ಷ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುವಾಗ ಓದಿನೊಂದಿಗೆ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಶ್ರೀ ಘನಶ್ಯಾಂ
ಭಾಂಡಗೆ ಅವರು.
ಅಂಗವಿಕಲತೆಯ ಸಮಸ್ಯೆ ಕಾಡಬಾರದೆಂದು ಹಲವಾರು ಊರುಗಳನ್ನು ತಮ್ಮ ದ್ವಿಚಕ್ರ ಸೈಕಲ್ ನೊಂದಿಗೆ ಸುತ್ತಿ ಅಂಗವಿಕಲರನ್ನು ಸಂಘಟಿಸಿದ ಕೀರ್ತಿಗೆ ಪಾತ್ರರು. ೨೨೧೮ ಅಂಗವಿಕಲರಿಗೆ ಮಾಸಾಶನ, ಕೊಡಿಸಿದ್ದಾರೆ. ಪ್ರತಿ ವರ್ಷ ಅಂಗವಿಕಲರ ದಿನಾಚರಣೆಯ ಅರ್ಥಪೂರ್ಣ ಆಚರಣೆ, ಗ್ರಾಮಾಂತರ ಜನರಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ೨೦ ಸಾವಿರ ಅಂಗವಿಕಲರಿಗೆ ಉಚಿತ ಬಸ್ ಪಾಸ್ ದೊರಕಿಸಿಕೊಟ್ಟಿದ್ದಾರೆ. ಅಲ್ಲದೆ ಅಂಗವಿಕಲರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದು, ಅಂಗವಿಕಲರ ಸಾಮೂಹಿಕ ವಿವಾಹ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು ಘನಶ್ಯಾಂ ಭಾಂಡಗೆ ಅವರು.
ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ೧೮ ಚಿನ್ನ, ೯ ಬೆಳ್ಳಿ, ೬ ಕಂಚು ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಚಿನ್ನ, ೮ ಬೆಳ್ಳಿ, ೨ ಕಂಚನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ೨ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ ಸಿಡ್ನಿ ಕ್ರೀಡಾಕೂಟದಲ್ಲಿ ೧ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
Categories
ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ
