“ಅಮ್ಮಾ, ನಾನು ಸಂನ್ಯಾಸಿಯಾಗಬೇಕು, ದಯವಿಟ್ಟು ಒಪ್ಪಿಗೆ ಕೊಡು”- ಮಗನು ಗೋಗರೆದು ಕೇಳಿದನು.

ಆ ತಾಯಿ ಮೌನವಾಗಿಯೇ ಇದ್ದರು. ಆಕೆಯ ಮನಸ್ಸು ದುಃಖದಿಂದ ತುಂಬಿತ್ತು.

“ನನಗೆ ಪ್ರಪಂಚದಲ್ಲಿರುವ ಯಾವ ವಸ್ತೂವೂ ಬೇಡ ನನಗಿರುವ ಆಸೆ ಒಂದೇ ಒಂದು. ದೇವರನ್ನು ಒಲಿಸಿಕೊಳ್ಳುವುದು. ಅದಕ್ಕೆ ಸಂನ್ಯಾಸ ಬಹಳ ಅನುಕೂಲ. ನೀನು ಒಪ್ಪಿಗೆ ಕೊಡಮ್ಮ” ಎಂದು ಪುನಃ ಆ ಯುವಕನು ಬೇಡಿದನು.

ತಾಯಿ ಒಪ್ಪಲಿಲ್ಲ. ಆಕೆಯ ಕಣ್ಣುಗಳಲ್ಲಿ ನೀರು ತುಂಬಿತ್ತು.

ತಾಯಿ ಒಪ್ಪಿದರು:

“ಈಗ ನೀನು ಸಂನ್ಯಾಸಕ್ಕೆ ಅಪ್ಪಣೆ ಕೊಡದಿದ್ದರೆ ಸ್ವಲ್ಪ ಕಾಲ ನಾನು ಹೀಗೆಯೇ ಇರಬಹುದು. ನೀನು ಎಷ್ಟೇ ಬಲವಂತ ಮಾಡಿದರೂ ನಾನು ಮದುವೆಯಾಗುವುದಿಲ್ಲ. ಎಂದಾದರೂ ಸಂನ್ಯಾಸಿಯಾಗಿ ದೇಶಾಂತರ ಹೊರಟು ಹೋಗುತ್ತೇನೆ. ಆಗ ನಿನಗೆ ನನ್ನ ಮುಖವೂ ಕಾಣಸಿಗದು. ಈಗ ಅಪ್ಪಣೆ ಕೊಟ್ಟರೆ ಆಗಾಗ ನನ್ನನ್ನು ನೋಡುವುದುಕ್ಕಾದರೂ ಅವಕಾಶ ಸಿಗುತ್ತದೆ. ಯೋಚಿಸಿ ನೋಡು. ನನ್ನ ಆಸೆಯೂ ಈಡೇರುವಂತೆ ಅಶಿರ್ವಧಿಸು” ಎಂದು ಮೃದುವಾಗಿ ಬೇಡಿಕೊಂಡನು. ಆತನ ನಿರ್ಧಾರ ದೃಢವಾಗಿತ್ತು.

ಈ ಮಾತುಗಳನ್ನು ಕೇಳುತ್ತಿದ್ದ ಆ ಯುವಕನ ತಂದೆಯೂ ಮತ್ತೊಬ್ಬ ಹಿರಿಯರೂ ಆಶ್ಚರ್ಯಪಟ್ಟರು. ಈ ಸಣ್ಣ ವಯಸ್ಸಿನಲ್ಲಿಯೇ ಎಂತಹ ವೈರಾಗ್ಯ ಎಂದು. ಆ ಯುವಕ ದೃಢ ನಿಶ್ಚಯ ಆ ತಾಯಿಯ ನಿರ್ಧಾರವನ್ನು ಅಲುಗಿಸಿಬಿಟ್ಟಿತ್ತು. ಆಕೆ ಅತ್ಯಂತ ದುಃಖದಿಂದ ಒಪ್ಪಿಗೆಯಿತ್ತರು.

ಯುವಕ ಸಂನ್ಯಾಸಿಯಾದ.

ಹೀಗೆ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳಾದರು.

ಆದರ್ಶ ವಿದ್ಯಾರ್ಥಿ:

ಶೃಂಗೇರಿಯ ಹೆಸರನ್ನು ನೀವೆಲ್ಲರೂ ಕೇಳಿದ್ದೀರಿ. ಅಲ್ಲಿ ಗೋಪಾಲಶಾಸ್ತ್ರಿ ಮತ್ತು ಲಕ್ಷ್ಮಮ್ಮ ಎಂಬ ದಂಪತಿಗಳಿದ್ದರು. ತುಂಬಾ ಬಡವರಾದರೂ ಅಲ್ಪ ವರಮಾನದಿಂದ ತೃಪ್ತರಾಗಿದ್ದರು. ಶಾಸ್ತ್ರಿಗಳು ಶೃಂಗೇರಿ ಮಠದಲ್ಲಿ ವಿಧ್ವಾಂಸರಾಗಿದ್ದರು. ತುಂಬಾ ದೈವಭಕ್ತರು. ಸಜ್ಜನರೂ ಆದ ಈ ದಂಪತಿಗಳಿಗೆ ಹದಿಮೂರು ಮಕ್ಕಳಾದರೂ ಉಳಿದದ್ದು ಒಬ್ಬನೇ ಮಗ. ಆತನೇ ನರಸಿಂಹ ಶಾಸ್ತ್ರೀ. ಮಕ್ಕಳನ್ನು ಕಳೆದುಕೊಂಡು ತುಂಬಾ ನೊಂದಿದ್ದ ಆ ಮಾತಾಪಿತರಿಗೆ ಈ ಮಗನಿಗೆ ಅತೀ ಪ್ರೀತಿ. ವಾತ್ಸಲ್ಯ. “ಇವನಾದರೂ ಆಯಸ್ಸು ತುಂಬಿ ಬೆಳೆದರೆ, ಇವನನ್ನು ಶ್ರೀ ಶಾರದಾದೇವಿಗೆ ಒಪ್ಪಿಸುತ್ತೇವೆ” ಎಂದು ಹರಕೆ ಹೊತ್ತಿದ್ದರು. ಅದು ಹಾಗೆಯೇ ಆಯಿತು.

ನರಸಿಂಹನ ಮನಸ್ಸು ಬಾಲ್ಯದಿಂದಲೇ ದೇವರತ್ತ ಒಲಿಯಿತು. ಆಗ ಶೃಂಗೇರಿಯ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀಯರು ದೃಷ್ಟಿ ಈ ಬಾಲಕನ ಮೇಲೆ ಬಿದ್ದಿತು.  ಅವರ ಮಾರ್ಗದರ್ಶನದಂತೆಯೇ ಬಾಲಕನ ವಿದ್ಯಾಭ್ಯಾಸ ನಡೆಯಿತು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಪರೀಕ್ಷೆಗಳಲ್ಲಿ ನರಸಿಂಹನು ಶಾಲೆಗೆ ಮೊದಲನೆಯದಾಗಿ ತೇರ್ಗಡೆ ಹೊಂದಿದನು. ಜಾಣನೆಂದು, ಒಳ್ಳೆಯವನೆಂದು ಎಲ್ಲರೂ ಅವನನ್ನು ಮೆಚ್ಚಿಕೊಂಡಿದ್ದರು.

ಮಾಧ್ಯಮಿಕ ಶಾಲೆಯ ಪರೀಕ್ಷೆಯ ನಂತರ ಗುರುಗಳ ಅಪ್ಪಣೆಯಂತೆ, ನರಸಿಂಹನು ಮಠದ ಸಂಸ್ಕೃತ ಪಾಠ ಶಾಲೆಯನ್ನು ಪ್ರವೇಶಿಸಿದನು. ಕಾವ್ಯ, ನಾಟಕ, ಅಲಂಕಾರ, ವ್ಯಾಕರಣಗಳಲ್ಲಿ ಬಲುಬೇಗ ವ್ಯಾಸಂಗ ಪೂರೈಸಿದನು. ಒಂದು ಸಲ ಹೇಳಿದರೆ ಸಾಕು,  ಎಂತಹ ಕಷ್ಟವಾದ ಪಾಠವನ್ನೂ ಸಹ ಗ್ರಹಿಸಿಬಿಡುತ್ತಿದ್ದನು.

ನರಸಿಂಹನದು ತುಂಬಾ ನಾಚಿಕೆಯ ಸ್ವಭಾವ. ಹೆಚ್ಚು ಮಾತಿನವನಲ್ಲ. ರಸ್ತೆಯಲ್ಲಿ ಹೋಗುವಾಗ ಒಂದು ಬದಿಯಲ್ಲಿ ತಲೆ ಬಗ್ಗಿಸಿ ಹೋಗುತ್ತಿದ್ದನು. ಆಗಲೂ ಪಾಠದ ಯಾವುದಾದರೂ ಭಾಗವನ್ನು ಆಲೋಚಿಸುತ್ತಲೋ ಅಥವಾ ಸ್ತೋತ್ರವನ್ನು ಹೇಳಿಕೊಳ್ಳುತ್ತಲೋ ಇರುತ್ತಿದ್ದನು. ಆದರೆ ಆತನಲ್ಲಿ ಪರೋಪಕಾರ ಬುದ್ಧಿಯು, ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ ಮೃದು ಸ್ವಭಾವವೂ ಇದ್ದುವು. ಕಷ್ಟದ ಸಮಯದಲ್ಲಿ ಯಾರಿಗಾದರೂ ನೆರವಾಗುತ್ತಿದ್ದನು.

ಆತನು ಅಕ್ಕಪಕ್ಕದ  ಮನೆಯವರಿಗೆ ತುಂಬಾ  ಉಪಕಾರಿ ಬಾಲಕ. ಅದರಲ್ಲಿಯೂ ಪಾಠ ಹೇಳುವ ಉಪಾಧ್ಯಾಯರ ಸೇವೆಯೆಂದರೆ ಆತನಿಗೆ ಬಲು ಶ್ರದ್ಧೆ, ತಾಯಿ ತಂದೆಯರಲ್ಲಿ ಎಂತಹ ಭಕ್ತಿಯಿತ್ತೋ ಅಷ್ಟೇ ಗೌರವ ಭಕ್ತಿ ತನ್ನ ಪಾಠದ ಗುರುಗಳಲ್ಲಿಯೂ ಸಹ  ಇತ್ತು.

ತನ್ನ ಸಹಪಾಠಿಗಳಲ್ಲಿ ನರಸಿಂಹನಿಗೆ ತುಂಬಾ ಪ್ರೀತಿ.  ಅವರಿಗೆ ವ್ಯಾಸಂಗದಲ್ಲಿ ಏನಾದರೂ ತೊಂದರೆ ಬಂದರೆ, ತಾನು ಅವರಿಗೆ ನೆರವಾಗುತ್ತಿದ್ದನು.

 

ಅಮ್ಮಾ ನಾನು ಸಂನ್ಯಾಸಿಯಾಗಬೇಕು.

ಪ್ರಾಮಾಣಿಕ ಶಿಷ್ಯ :

ಶೃಂಗೇರಿಯ ಒಂದು ವಿದ್ಯಾರ್ಥಿ ಮಂದಿರದಲ್ಲಿ ಇದ್ದ ಹಲವರು ಹಿರಿಯ  ವಿದ್ಯಾರ್ಥಿಗಳು ಇಸ್ಪಿಟಾಟವನ್ನು ಆಗಾಗ ಆಡುತ್ತಿದ್ದರು. ನರಸಿಂಹನೂ ಅಲ್ಲಿಗೆ ಓದಲು ಹೋಗುತ್ತಿದ್ದನು. ಆ ಹಿರಿಯ ವಿದ್ಯಾರ್ಥಿಗಳಿಗೆ ಉಪಾಯವಾಗಿ ಆಗಾಗ ಎಚ್ಚರಿಕೆಯನ್ನು ನೀಡುತ್ತಿದ್ದನು. ಕಷ್ಟಕ್ಕೆ ಸಿಕ್ಕಿಕೊಳ್ಳಬಾರದೆಂದು ಬುದ್ಧಿವಾದ ಹೇಳುತ್ತಿದ್ದನು. ಮೃದು ಸ್ವಭಾವದ ಈ ಚಿಕ್ಕವನ ಮಾತನ್ನು ಆ ಹಿರಿಯ ಹುಡುಗರು  ಕೇಳುತ್ತಿರಲಿಲ್ಲ.

ಒಂದು ದಿನ ಮಧ್ಯಾಹ್ನದ ಸಮಯ. ನರಸಿಂಹನು ವಿದ್ಯಾರ್ಥಿ ಮಂದಿರದ ಮಧ್ಯದಲ್ಲಿಯೇ ದೇವಾಲಯದ ಜಗುಲಿಯ ಮೇಲೆ ಕುಳಿತು ಓದುತ್ತಿದ್ದನು. ಇದ್ದಕ್ಕಿದ್ದಂತೆಯೇ ಉಪಾಧ್ಯಾಯರೊಬ್ಬರು ವಸತಿ ಮಂದಿರಕ್ಕೆ ಬಂದು ಬಿಟ್ಟರು. ನರಸಿಂಹ ಎದ್ದುನಿಂತು ಅವರಿಗೆ ನಮಸ್ಕಾರ ಮಾಡಿದ.  ಹಿರಿಯ ವಿದ್ಯಾರ್ಥಿಗಳೀಗೆ ಇದು ಗೊತ್ತಾಗಿ, ಅವರು ಇಸ್ಪೀಟಿನ ಎಲೆಗಳನ್ನು ಮುಚ್ಚಿಟ್ಟರು. ಪುಸ್ತಕಗಳನ್ನು ಹಿಡಿದು ಓದುವವರಂತೆ ನಟನೆ ಮಾಡಿದರು. ಅವರ ಎದೆ ಭಯದಿಂದ ತಲ್ಲಣಿಸುತ್ತಿತ್ತು.

ನರಸಿಂಹನ ಹತ್ತಿರ  ಬಂದ ಉಪಾಧ್ಯಾಯರು, “ನರಸಿಂಹ” ಇಲ್ಲಿ ಯಾರೋ ಕೆಲವರು  ಇಸ್ಪೀಟಾಟ ಮಾಡುತ್ತಾರೆಂದು ದೂರು ಬಂದಿದೆ, ಇದು ನಿಜವೇ?” ಎಂದು ಕೇಳಿದರು. ಆಟವಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗಂತೂ ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ನರಸಿಂಹ ಸುಳ್ಳು ಹೇಳುವವನಲ್ಲ. ಇದ್ದುದನ್ನು ಇದ್ದಂತಯೇ ಹೇಳುತ್ತಾನೆ. ತಮ್ಮನ್ನೆಲ್ಲ ಪಾಠಶಾಲೆಯಿಂದ ಹೊರಗೆ ಹಾಕುತ್ತಾರೆ, ವಿದ್ಯಾರ್ಥಿ ಮಂದಿರದಿಂದ ಓಡಿಸಿಬಿಡುತ್ತಾರೆ, ವಿದ್ಯೇಯೂ ಇಲ್ಲ, ಮಾನವೂ ಹೋಗುತ್ತದೆ ಎಂದು ಹೆದರಿದ ಆ ಹುಡುಗರು ನರಸಿಂಹನತ್ತ ನೋಡುತಿದ್ದರು.

ಉಪಾಧ್ಯಾಯರ ಮಾತಿಗೆ ನರಸಿಂಹನು, “ಇಲ್ಲ ಗುರುಗಳೇ, ಇಲ್ಲಿ ಯಾರೂ ಇಸ್ಪೀಟ ಆಟವಾಡುತ್ತಿರಲಿಲ್ಲ” ಎಂದು ಬಿಟ್ಟನು. ಗುರುಗಳು, “ಹಾಗಿದ್ದರೆ ಸರಿ” ಎಂದು ಹೇಳಿ ಹೊರಕ್ಕೆ ಹೊರಟು ಹೋದರು.  ವಿದ್ಯಾರ್ಥಿಗಳು ನರಸಿಂಹನ ಬಳೀ ಬಂದು ತಮ್ಮ ನಡತೆಗೆ ಪಶ್ಚಾತಾಪ ಪಟ್ಟರು. ಇನ್ನು   ಇಸ್ಪೀಟಾಟ ವಾಡುವುದಿಲ್ಲವೆಂದು ಪ್ರತಿಜ್ಞೆ ಮಾಢಿದರು.

ತನ್ನ ಸ್ನೇಹಿತರನ್ನು ಅಪಾಯದಿಂದ ರಕ್ಷಿಸಲು ನರಸಿಂಹನು ಸುಳ್ಳು ಹೇಳಿಬಿಟ್ಟಿದ್ದನು.  ಸತ್ಯವಂತನಾದ ಆತನ ಮನಸ್ಸು ವಿಲಿವಿಲಿ ಒದ್ದಾಡಿತು. ಗುರುಗಳೀಗೆ ಸುಳ್ಳು ಹೇಳಿಬಿಟ್ಟೇನಲ್ಲಾ ಎಂದು ತಳಮಳ ಪಟ್ಟನು.ಮಾರನೆಉಯ ದಿನ ಬೆಳಿಗ್ಗೆಯೇ  ಹೋಗಿ ಗುರುಗಳ ಮುಂದೆ ತಪ್ಪಿತಸ್ಥನಂತೆ ನಿಂತರು.

“ಏನಪ್ಪಾ ನರಸಿಂಹ?  ಈ ವೇಳೆಗೆ ಏಕೆ ಬಂದೆ? ಎಂದು ಗುರುಗಳು ಕೇಳಿದರು.

ಖಿನ್ನನಾದ ನರಸಿಂಹ ತಲೆಬಾಗಿ ಹಿಂದಿನ ದಿನ ತಾನು ಸುಳ್ಳು ಹೇಳಿದ್ದನ್ನು, ಅದಕ್ಕೆ ಕಾರಣವನ್ನು ವಿವರಿಸಿದನು. ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡನು. ನರಸಿಂಹ ಸಮಯಾವಧಾನ ಮತ್ತು ಪ್ರಮಾಣೀಕತೆ  ಇವುಗಳನ್ನು ಕಂಡ ಉಪಾಧ್ಯಾಯರು ಆತನನ್ನು ಮೆಚ್ಚಿಕೊಂಡರು.

ಗುರುವಿನ ಕರೆ :

ಶ್ರೀ ಶಂಕರಚಾರ್ಯರ ಹೆಸರು ಪ್ರಪಂಚದಲ್ಲಿಯೇ ಪ್ರಸಿದ್ಧವಾದುದು. ನಮ್ಮ ದೇಶವೆಲ್ಲವೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಅಖಂಡವೆಂಬುವುದನ್ನು  ಶಂಕರರು ನೂರಾರು ವರ್ಷಗಳ ಹಿಂದೆಯೇ ತೋರಿಸಿಕೊಟ್ಟರು. ಹಿಂದೂ ಧರ್ಮದ ಏಕತೆಯನ್ನು ಕಾಪಾಡಲು, ಭರತ ಖಂಡದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಧರ್ಮಪೀಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಶೃಂಗೇರಿಯ ಶಾರದಾ ಪೀಠ ಮೊದಲನೆಯದು. ಶಂಕರರಿಂದ ಆರಂಭವಾಗಿ ಅನೇಕ ಜನ ಮಹಾತ್ಮರು ಶಾರದಾ ಪೀಠದಲ್ಲಿ ಧರ್ಮಪ್ರಸಾರ ಮಾಡಿದರು.

ಇಂದಿಗೆ ಎಂಬತ್ತು ವರ್ಷಗಳ ಹಿಂದೆ ಅಲ್ಲಿದ್ದ ಜಗದ್ಗುರುಗಳು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ ಸ್ವಾಮಿಗಳು. ಮಹಾ ತಪಸ್ವಿಗಳೂ ರಾಜ ಯೋಗಿಗಳೂ ಆಗಿದ್ದ ಆ ಮಹಾತ್ಮರು, ನರಸಿಂಹನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ನಿರ್ಧರಿಸಿದ್ದರು.  ಆದ್ದರಿಂದಲೇ ಅವರು ನರಸಿಂಹನ ಅಭ್ಯುದಯದಲ್ಲಿ ತುಂಬಾ ಆಸಕ್ತಿ ವಹಿಸಿದ್ದರು. ಬೆಂಗಳೂರಿನ ಮಹಾಪಾಠ ಶಾಲೆಯಲ್ಲಿ ಮೀಮಾಂಸಾ ಮತ್ತು ವೇದಾಂತ ಶಾಸ್ತ್ರಗಳನ್ನು ಓದಲು ಅವರು ನರಸಿಂಹನನ್ನು ಕಳೂಹಿಸಿದರು.

ಶೃಂಗೇರಿಯಲ್ಲಿಯೇ ಇದ್ದ ಗುರುಗಳ ಶರೀರದ ಆರೋಗ್ಯ ಆಗಾಗ ಕೆಡುತ್ತಿತ್ತು. ಅವರಿಗೆ ತಾವು ಇನ್ನು ಹೆಚ್ಚು ದಿನ ಬದುಕುವುದಿಲ್ಲವೆಂಬುವುದು ಅರಿವಾಯಿತು. ನರಸಿಂಹನನ್ನು ಕರೆಸಿ, ಬೇಗ ಸಂನ್ಯಾಸ ದೀಕ್ಷೆಯನ್ನು ಕೊಡಬೇಕೆಂದು ಗುರುಗಳು ನಿರ್ಧರಿಸಿದರು.  ಆಗ ಬೆಂಗಳೂರಿನಲ್ಲಿಯೇ ಇದ್ದ ನರಸಿಂಹನನ್ನು ಕರೆದುಕೊಂಡು ಬರಲು ಜನರನ್ನು ಕಳುಹಿಸಿದರು.

ಸಂನ್ಯಾಸಿಯಾಗಬೇಕೆಂದು ನರಸಿಂಹನಿಗೆ ಬಾಲ್ಯದಿಂದಲೂ ಅಪೇಕ್ಷೆಯಿತ್ತು. ಅವನು ಗುರುಗಳ ಆಜ್ಞೆಯನ್ನು ತಿಳಿದಾಗ ಆಶ್ಚರ್ಯಪಟ್ಟನು. ಅಂತಹ ಮಹಾತ್ಮರ ಶಿಷ್ಯನಾಗುವ ಯೋಗ ತನಗೆ ಲಭಿಸಿತ್ತಲ್ಲಾ ಎಂದು ಹರ್ಷಿತನಾದನು. ಸಂನ್ಯಾಸಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದರು.  ಆದರೆ ತಂದೆ ತಾಯಿಯರನ್ನು ಒಪ್ಪಿಸುವುದು ಕಷ್ಟವಾಯಿತು. ಅದರಲ್ಲಿಯೂ ತಾಯಿಯನ್ನು ಒಪ್ಪಿಸುವುದು ಬಲು ಪ್ರಯಾಸವಾಯಿತು. ಕಡೆಗೆ ಆಕೆಯ ಒಪ್ಪಿಗೆಯನ್ನೂ ಪಡೆದನು.

ಶ್ರೀ ಚಂದ್ರಶೇಖರ ಭಾರತೀ :

ಆಗ ಮೈಸೂರು ಮಹಾರಾಜರಾಗಿದ್ದ ನಾಲ್ಮಡಿ ಕೃಷ್ಣರಾಜರು ಬೆಂಗಳೂರಿನಲ್ಲಿಯೇ ಇದ್ದರು. ಅವರನ್ನು ಕಾಣಲು ಮಠದ ಅಧಿಕಾರಿಯೂ ಹೊಸ ಸ್ವಾಮಿಗಳಾಗುವ ನರಸಿಂಹಶಾಸ್ತ್ರಿಗಳೂ ಅರಮನೆಗೆ ಹೋಗಿದ್ದರು.  ಮಹಾರಾಜರು, “ತಮ್ಮನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸುವ ವಿಚಾರವನ್ನು ಶ್ರೀ ಜಗದ್ಗುರುಗಳು ನನಗೆ ಈ ಮೊದಲೇ ತಿಳಿಸಿದ್ದಾರೆ.  ತುಂಬಾ ಸಂತೋಷ. ನನ್ನಿಂದ ಆಗಬೇಕಾದ  ಸೇವೆ ಯಾವುದಿದ್ದರೂ ಮಾಡಿಕೊಡಲು ಸಿದ್ಧನಾಗಿದ್ದೇನೆ” ಎಂದರು.ಆಗ ನರಸಿಂಹಶಾಸ್ತ್ರೀಗಳು ಶ್ರೀ ಜಗದ್ಗುರುಗಳ ಅಪ್ಪಣೆಯಂತೆ ಸಂನ್ಯಾಸ ಸ್ವೀಕರಿಸಲು ನಾನು ಸಿದ್ಧನಾಗಿದ್ದೇನೆ. ಆದರೆ ಮಠದ ಆಡಳಿತ ಮತ್ತು ವ್ಯವಹಾರಗಳನ್ನು ನನ್ನ ಸಂನ್ಯಾಸ ಜೀವನಕ್ಕೆ ಅಡ್ಡಿ ಬರದಂತೆ ತಾವು ವ್ಯವಸ್ಥೆ ಮಾಡಿದರೆ ಸಾಕು” ಎಂದು ತಿಳಿಸಿದರು. ಮಹಾರಾಜರೂ ತಮ್ಮ ಒಪ್ಪಿಗೆ ನೀಡಿದರು.

ಅನಂತರ ನರಸಿಂಹಾಶಾಸ್ತ್ರಿಗಳೂ ಶೃಂಗೇರಿಗೆ ಬಂದರು. ಆ ವೇಳೆಗಾಗಲೇ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಸ್ವಾಮಿಗಳು ಮಹಾಸಮಾಧಿ ಹೊಂದಿದ್ದರು. ತಮ್ಮ ಗುರುಗಳ ನಿರ್ವಾಣದಿಂದ ನರಸಿಂಹಶಾಸ್ತ್ರಿಗಳು ಅತ್ಯಂತ ದುಃಖ ಪಟ್ಟರು. ಅವರ ಅರಾಧನಾಧಿ ಕಾರ್ಯಗಳಲ್ಲಿ ಭಕ್ತಿಯಿಂದ ಭಾಗವಹಿಸಿದ್ದರು. ಅನಂತರ ಸಂನ್ಯಾಸ ಸ್ವೀಖರಿಸಿ ಶ್ರೀ ಶ್ರೀ ಚಂದ್ರಶೇಖರ ಭಾರತೀ ಎಂಬ ಹೆಸರನ್ನುಪಡೆದರು.

ಯೋಗಿಗಳು :

ಶ್ರೀ ಚಂದ್ರಶೇಖರ ಭಾರತೀಯರವರು ಸಂನ್ಯಾಸ ಸ್ವೀಕರಿಸಿದ ಕೆಲವು ದಿನಗಳಲ್ಲಿಯೇ ಅದಕ್ಕೆ ಹೊಂದಿಕೊಂಡರು. ಮೂರು ಹೊತ್ತು ಸ್ನಾನ, ಅಹ್ನಿಕ , ಜಪ , ಪೂಜೆ ತಪ್ಪಸ್ಸು, ವೇದಾಂತ ಶಾಸ್ತ್ರದ ಅಧ್ಯಯನ- ಇವುಗಳಲ್ಲಿ ಮಗ್ನರಾದರು. ಬೆಂಗಳೂರಿನಲ್ಲಿ ನಿಂತುಹೋಗಿದ್ದ ವೇದಾಂತದ ವ್ಯಾಸಂಗವನ್ನು ಮುಂದುವರೆಸಿ ಎರಡು ವರ್ಷಗಳಲ್ಲಿಯೇ ಪೂರೈಸಿದರು. ಈಗ ಉಳಿದಿದ್ದುದು ಓದಿದ ಶಾಸ್ತ್ರವನ್ನು ಅಭ್ಯಾಸಕ್ಕೆ ತಂದುಕೊಳ್ಳುವ ಕೆಲಸ.

ಹಿಂದಿನ ಗುರುಗಳಾಗಿದ್ದ ಶ್ರೀ ನರಸಿಂಹಭಾರತೀಯವರು ಯೋಗಾಭ್ಯಾಸದಲ್ಲಿ ತುಂಬಾ ಸಾಧನೆ ನಡೆಸಿದ್ದರು. ಈ ವಿಚಾರವನ್ನು ತಿಳಿದಿದ್ದ ಶ್ರೀ ಚಂದ್ರಶೇಖರ ಭಾರತೀಯವರು ಯೋಗಾಭ್ಯಾಸವನ್ನು ಆರಂಭಿಸಿದರು.

ಯಾವುದಾದರೂ ಶಬ್ದವನ್ನು ಕೇಳಿದರೆ ನಾವು ಅತ್ತ ಕಡೆಗೆ ತಿರುಗುತ್ತೇವೆ. ಆ ಶಬ್ದ ಕೇಳಲು ಹಿತವಾಗಿದ್ದಲ್ಲಿ, ಇನ್ನೂ ಸ್ವಲ್ಪ ಕೇಳೋಣ ಎನಿಸುತ್ತದೆ, ಅಲ್ಲವೇ? ಹಾಗೆಯೇ ಯಾವುದಾದರೂ ಸುಂದರವಾದ ವಸ್ತುವನ್ನು ಕಂಡರೆ ದಿಟ್ಟಿಸಿ ನೋಡುತ್ತೇವೆ. ಸುವಾಸನೆ ಬಂದಾಗ ನಮ್ಮ ಮೂಗು ಅರಳುತ್ತದೆ. ಹೀಗೆ ಕಣ್ಣು, ಕಿವಿ ಮೂಗೂ, ನಾಲಿಗೆ, ಚರ್ಮ ಇವು ನಮಗೂ ನಮ್ಮ ಹೊರಗಿನ ಪದಾರ್ಥಗಳಿಗೂ ಸಂಬಂಧವುಂಟು ಮಾಡಿ ಕೊಡುತ್ತವೆ. ಇವುಗಳಿಗೆ ಜ್ಞಾನೇಂದ್ರೀಯಗಳೆಂದು ಹೆಸರು.  ಕಿವಿಯಿಂದ ಕೇಳೂವುದು, ಕಣ್ಣಿನಿಂದ  ನೋಡುವುದು, ಮೂಗಿನಿಂದ ವಾಸನೆ  ನೋಡುವುದು, ನಾಲಗೆಯಿಂದ ರುಚಿಯನ್ನು ಪಡೆಯುವುದು- ಇವೆಲ್ಲವುಗಳು ಸದಾ ನಡೆಯುತ್ತಿರುತ್ತವೆ. ನಮ್ಮ ಮನಸ್ಸು- ಈ ಇಂದ್ರೀಯಗಳ ಯಜಮಾನ. ಅದು ಈ ಇಂದ್ರಿಯಗಳ ಮೂಲಕ ಯಾವಾಗಲೂ ಹೊರಗಡೆಯೇ ಸುತ್ತಾಡುತ್ತಿರುತ್ತದೆ. ಈ ಜ್ಞಾನೇಂದ್ರಿಯಗಳ ಜೊತೆಗೆ ಕಾಲು, ಕೈ ಬಾಯಿ ಮುಂತಾದ ಕರ್ಮೇಂದ್ರಿಯಗಳೂ ಸೇರಿ, ಮನಸ್ಸು ಯಾವಾಗಲೂ ಅದು ಬೇಕು, ಇದುಬೇಕು ಎಂದು ಚಡಪಡಿಸುತ್ತ ಇರುತ್ತದೆ. ಆ ಮನಸ್ಸನ್ನು ಹೊರಗಿನ ಪದಾರ್ಥಗಳತ್ತ ಹೋಗದಂಥೆ ತಡೆದು, ಒಳಮುಖವಾಗಿ ತಿರುಗಿಸುವುದೇ ಯೋಗಾಭ್ಯಾಸ. ಹೀಗೆ ಒಳಮುಖವಾಗಿ ತಿರುಗಿದ ಮನಸ್ಸನ್ನು ದೇವರಲ್ಲಿ ನೆಲೆ ನಿಲಿಸುವುದೇ ಯೋಗಾಭ್ಯಾಸದ ಗುರಿ. ಮನಸ್ಸು ಗಾಳಿಯಲ್ಲಿಟ್ಟ ಹಣತೆಯಂತೆ ಚಂಚಲ, ದೀಪದ ಉರಿ ಗಾಳಿಯಲ್ಲಿ ಅತ್ತಿತ್ತ ಅಲುಗಾಡುತ್ತಿದ್ದರೆ, ಓದಲು, ಬರೆಯಲು ಸಾಧ್ಯವೇ? ದೀಪವನ್ನು ಗಾಳಿಯಿಂದ ಮರೆ ಮಾಡಿದರೆ, ದೀಪ ನಿಧಾನವಾಗಿ ಉರಿಯುತ್ತದೆ.  ಬೆಳಕೂ ನಿಶ್ಚಲವಾಗಿರುತ್ತದೆ.  ಹಾಗೆಯೇ ಮನಸ್ಸು ನಿಶ್ಚಲವಾಗಿರಬೇಕು.

ಇದು ಅತ್ಯಂತ ಕಷ್ಟದ ಕೆಲಸ,. ಬಹಳ ಕಾಲ ಸತತವಾದ ಅಭ್ಯಾಸದಿಂದ ಸಾಧಿಸಬೇಕಾದುದು. ಒಮ್ಮೆ ದೇವರಲ್ಲಿ ಮನಸ್ಸು ನೆಲೆ ನಿಂತಿತೆಂದರೆ ಹೊರಗಿನ ಯಾವ ಪದಾರ್ಥದಲ್ಲಿಯೂ ಆಸಕ್ತಿ ಮೂಡುವುದಿಲ್ಲ. ಅಂತಹ ಯೋಗಿಗೆ ಎಲ್ಲಿ ನೋಡಿದರೂ ದೇವರೇ  ಕಾಣಿಸುತ್ತಾನೆ. ಹೀಗೆ ಇರುವಾತನಲ್ಲಿ ದುಷ್ಟರೂ ಸಾಧುಗಳಾಗಿ ಬಿಡುತ್ತಾರೆ.  ಹಾವು, ಹುಲಿ, ಮುಂತಾದ ಕ್ರೂರ ಜಂತುಗಳೂ ಸಾಧು ಪ್ರಾಣಿಗಳಾಗಿ ಬಿಡುತ್ತವೆ. ಇಂತಹ ಯೋಗಿಗೆ ಹಸಿವಿಲ್ಲ, ಬಾಯಾರಿಕೆಯಿಲ್ಲ, ನಿದ್ರೆಯಿಲ್ಲ.  ಬಿಸಿಲು, ಮಳೆ ,ಚಳೀ ಗಾಳಿ ಯಾವುದೂ ಇವರನ್ನು ಬಾಧಿಸುವುದಿಲ್ಲ. ಯೋಗಿಗಳ ಈ ಸ್ಥಿತಿಗೆ “ಸಮಾಧಿ” ಎಂದು ಹೆಸರು. ಶ್ರೀ ಚಂದ್ರಶೇಖರಭಾರತೀಯವರು ಅಂತಹ ದಿವ್ಯ ಸ್ಥಿತಿಯನ್ನು ತಲುಪಿದ್ದ ಮಹಾತ್ಮರು.

ಹುಚ್ಚರೇ?

ಗುರುಗಳು ಇಂತಹ ಸಮಾಧಿಯಲ್ಲಿ ದಿನಗಟ್ಟಲೆ, ತಿಂಗಳುಗಟ್ಟಲೆ, ಇದ್ದು ಬಿಡುತ್ತಿದ್ದರು.  ಆಗ ಆಹಾರವಿಲ್ಲದ, ನಿದ್ರೆಯಿಲ್ಲ. ಏಕಾಂತವಾಸ ಇದ್ದು ಬಿಡುತ್ತಿದ್ದರು.  ಕೆಲವರಿಗೆ ಇದು ಹುಚ್ಚು ಎನಿಸಿತು. ವೈದ್ಯರು ಬಂದು ಬಲು ವಿಧವಾಗಿ ಪರೀಕ್ಷಿಸಿದರು. ಯಾರಿಗೂ ಏನೂ ಅರ್ಥವಾಗಲಿಲ್ಲ.  ಶಾಸ್ತ್ರ ಗಳನ್ನು ಬಲ್ಲವರಾಗಿದ್ದ ಕೆಲವರಿಗೆ ಮಾತ್ರ ಗೊತ್ತಿ‌ತ್ತು- ಇದು :”ಸಮಾಧಿ ಸ್ಥಿತಿ” ಎಂಬುವುದಾಗಿ, ಇಂತಹ ಸ್ಥಿತಿಯಲ್ಲಿ ಇರುವ ಮಹಾತ್ಮರು ಮೂಢರಂತೆ ಹುಚ್ಚರಂತೆ, ಮಕ್ಕಳಂತೆ ಒಮ್ಮೊಮ್ಮೆ ಮಹಾರಾಜ, ಚಕ್ರವರ್ತಿಯಂತೆ ವರ್ತಿಸುತ್ತಾರೆ.

ಚಂದ್ರಶೇಖರ ಭಾರತೀ ಅವರ ಅಸಾಧಾರಣ ಶಕ್ತಿಯನ್ನು ಕುರಿತು ಭಕ್ತರು ಅನೇಕ ಪ್ರಸಂಗಗಳನ್ನು ವರ್ಣಿಸುತ್ತಾರೆ.

ಒಮ್ಮೆ ಗುರುಗಳು ಸಮಾಧಿಯಲ್ಲಿ ಇದ್ದರು. ರಾತ್ರಿ ತುಂಬಾ ಮಳೆ ಸುರಿಯುತ್ತಿತ್ತು.  ವಿಪರೀತ ಗಾಳಿ, ಛಳಿ, ಗುರುಗಳು ಕಿಟಕಿಯ ಹತ್ತಿರ ಬಂದು ಸೇವಕನನ್ನು ಕರೆದರು. ನಿದ್ರೆ ಮಾಡುತ್ತಿದ್ದ ಅತ ಧಿಗ್ಗನೇ ಎದ್ದುನಿಂತ. “ನೋಡು, ಮಠದ ಆ ಕೊನೆಗೆ ಇರುವ ಕೊಠಡಿಯಲ್ಲಿ ಗೋಡೆಯೊಂದು ಕುಸಿದಿದೆ. ಸ್ವಾಮಿಗಳೊಬ್ಬರು ಅದರ ಕೆಳಗೆ ಸಿಕ್ಕಬಿದ್ದಿದ್ದಾರೆ ಓಡಿ ಹೋಗಿ ಅವರನ್ನು ರಕ್ಷಿಸು” ಎಂದರು. ಗುರುಗಳು ಇದ್ದುದು ತುಂಗಾ ನದಿಯ ದಕ್ಷಿಣಕ್ಕೆ.ಮಠವೂ ಅದರ ಕಟ್ಟಡಗಳೂ ಇದ್ದುದು ನದಿಯ ಉತ್ತರಕ್ಕೆ. ಸಂನ್ಯಾಸಿಯಿದ್ದುದ್ದೂ ಉತ್ತರಕ್ಕಿದ್ದ ಕೊಠಡಿಯೊಂದರಲ್ಲಿ ಹೊಳೆಯನ್ನು ದಾಟಿ ಓಡಿ ಹೋಗಿ ನೋಡಿದ. ಗುರುಗಳು ಹೇಳಿದ್ದು ನಿಜವಾಗಿತ್ತು. ಸಂನ್ಯಾಸಿ ಗೋಡೆಯಡಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದರು.  ಸೇವಕನು ಬೇಗ ಹೋಗಿ  ಒಬ್ಬಿಬ್ಬರನ್ನು ಸಹಾಯಕ್ಕೆ ಕರೆದು, ಆ ಸ್ವಾಮಿಗಳನ್ನು ಗೋಡೆಯ ಅಡಿಯಿಂದ ಹೊರಕ್ಕೆ ಎಳೆದನು.

ಇನ್ನೊಮ್ಮೆ ಗುರುಗಳು ಮಠದ ಆಡಳಿತಾಧಿಕಾರಿಯನ್ನು ಕರೆದು ನೇಪಾಳದ ದೊರೆ ತ್ರಿಭುವನರಿಗೆ ಅಶೀರ್ವಾದ ಪತ್ರವನ್ನು ಬರೆಸಿದರು.  ಆಗ ತಾನೆ ತ್ರಿಭುವನರು ರಾಜ್ಯಭ್ರಷ್ಟರಾಗಿ ಬಹಳ ಕಷ್ಟದಿಂದ ಭಾರತಕ್ಕೆ ಬಂದಿದ್ದರು.  ಈ ವಿಚಾರ ಪತ್ರಿಕೆಗಳಲ್ಲಿ ಬರುವ ಮೋದಲೇ ಗುರುಗಳಿಗೆ ತಿಳಿದು ಬಿಟ್ಟಿತ್ತು. “ಶ್ರೀ ಪಶುಪತಿನಾಥ, ಶ್ರೀಶಾಋದಾಂಬಾರವರ ಪರಮ ಅನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲವೂ ಮೂರು ವಾರಗಳ ಒಳಗೆ, ಸುರ್ಯೋದಯದ ಮಂಜಿನಂತೆ ಕರಗಿ ಹೋಗುತ್ತವೆ. ನೀವು ಮತ್ತೇ ರಾಜ್ಯವನ್ನು ಪಡೆಯುತ್ತೀರಿ” ಎಂದು ಗುರುಗಳು ಪತ್ರ ಬರೆದಿದ್ದರು. ಗುರುಗಳು ಹೇಳಿದಂತೆಯೇ ರಾಜ ತ್ರಿಭುವನರು ಮತ್ತೇ ತಮ್ಮ ರಾಜ್ಯವನ್ನು ಗಳಿಸಿಕೊಂಡರು.

ಅರ್ಹತೆ ಇರಬೇಕು :

ಗುರುಗಳ ಸಮಾಧಿಯಿಂದ ಬಹಿರ್ಮುಖರಾದಾಗ, ಅವರ ದರ್ಶನಕ್ಕೆ ಸಹಸ್ರಾರು ಜನ ಬರುತ್ತಿದ್ದರು.  ಆ ಸಮಯದಲ್ಲಿ ಗುರುಗಳು ತ್ರೀಕಾಲ ಸ್ನಾನ, ಜಪ, ಅನುಷ್ಠಾನಗಳನ್ನು ನೆರವೇರಿಸುತ್ತಿದ್ದರು. ಬಂದವರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದರು.  ತೀರ್ಥ  ಪ್ರಸಾದಗಳನ್ನು ಕೊಡುತ್ತಿದ್ದರು.  ರಾತ್ರಿಯ ವೇಳೆಗೆ ತಾವು ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು  ಮಾಡುತ್ತಿದ್ದರು.

ತಮ್ಮ ಕಷ್ಟ, ರೋಗ ರುಜಿನ, ಭಯ ಭೀತಿಗಳನ್ನು  ಹೇಳಿಕೊಳ್ಳಳು ಬಹು ಜನ ಅವರಲ್ಲಿ ಬರುತ್ತಿದ್ದರು.  ಗುರುಗಳೂ ಎಲ್ಲರಿಗೂ ಸಮಾಧಾನವನ್ನು, ಸಾಂತ್ವನವನ್ನು ನೀಡುತ್ತಿದ್ದರು.  ಶಾಸ್ತ್ರಗಳಲ್ಲಿ ಸಂದೇಹವಿದ್ದವರಿಗೆ ಸಂದೇಹ ನಿವಾರಣೆಗೆ ಸಹಾಯ ಮಾಡುತ್ತಿದ್ದರು.  ಬಹು ಜನರು ಗುರುಗಳನ್ನು ವೈದ್ಯರಂತೆ ಭಾವಿಸಿ ಸಹಾಯ ಪಡೆಯುತ್ತಿದ್ದರು.   ಜನಗಳ ಕಷ್ಟ, ದುಃಖಗಳನ್ನು ಪರಿಹರಿಸುವುದರಲ್ಲಿ ಗುರುಗಳು ಯಾವಾಗಲೂ ಸಹಾನುಭೂತಿಯುಳ್ಳವರಾಗಿದ್ದರು.

ಆಧ್ಯಾತ್ಮಿಕ ಸಾಧನೆ ಮಾಡಲು ಮಂತ್ರೋಪದೇಶ ಬೇಕೆಂದು ಯಾರಾದರೂ ಬಂದರೆ ಗುರುಗಳು ಅಂತಹವರ ಅರ್ಹತೆ, ಯೋಗ್ಯತೆಗಳನ್ನು ಪರೀಕ್ಷಿಸುತ್ತಿದ್ದರು.  ಅವರ ನಡತೆ, ಸ್ವಭಾವಗಳನ್ನು ಅರಿಯುತ್ತಿದ್ದರು.  ಅನಂತರ ಅವರಿಗೆ ಯೋಗ್ಯವಾದ ಮಾರ್ಗ ಸೂಚಿಸುತ್ತಿದ್ದರು.

ಅರ್ಹತಗೆ, ಯೋಗ್ಯತೆ ಎಂದರೇನು? ಒಂದು ತರಗತಿಗೆ ಸೇರಬೇಕಾದರೆ ಇಂತಹ ಪರೀಕ್ಷೆಯಲ್ಲಿ ಉತ್ತಿರ್ಣನಾಗಿರಬೇಕು ಎಂದು ನಿಯಮ, ಅಲ್ಲವೇ? ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ, ಮುಂದೆ ಹೇಳಿಕೊಡುವುದನ್ನು ಅರ್ಥಮಾಡಿಕೊಳ್ಳಬಹುದು. ಇಲ್ಲದಿದ್ದರೆ ತರಗತಿಗೆ ಸೇರಿಯೂ ಪ್ರಯೋಜನವಿಲ್ಲ. ಹಾಗೆಯೆ ಆಧ್ಯಾತ್ಮಿಕ ಸಾಧನೆಗೆ, ಪ್ರತಿಯೊಬ್ಬರಿಗೂ ಅವರವ ಅರ್ಹತೆ, ಯೋಗ್ಯತೆಗೆ ತಕ್ಕಂತಹ ಮಾರ್ಗವನ್ನು ಗುರುಗಳು ತೋರಿಸುತ್ತಿದ್ದರು.  ಶಿಷ್ಯನ ಮನಸ್ಸಿನ ಬೆಳವಣಿಗೆ, ಗ್ರಹಣ ಶಕ್ತಿಗೆ ತಕ್ಕಂತೆ ಉಪದೇಶ ಕೊಡುತ್ತಿದ್ದರು.

ಶಿಷ್ಯರಿಂದ ಗುರುಗಳು ಅಪೇಕ್ಷಿಸುತ್ತಿದ್ದುದೇನು? ಸತ್ಯ, ಪ್ರಾಮಾಣೀಕತೆ, ನಿರ್ವಂಚನೆ, ನ್ಯಾಯಪರತೆ, ಋಜು ಜೀವನ ಇವನ್ನು ಮಾತ್ರ. ಈ ಧರ್ಮದಲ್ಲಿ ನಂಬಿಕೆಯಿದ್ದವರನ್ನು ಗುರುಗಳು ತುಂಬಾ ಮೆಚ್ಚುತ್ತಿದ್ದರು.

ಈ ಪೀಟಕ್ಕೆ ಸಲ್ಲಬೇಕಾಧ ಗೌರವಗಳೂ ಇವರಿಗೆ ಸಲ್ಲಬೇಕು:"

ಧರ್ಮಗುರುಗಳ ಕೆಲಸ

ಒಬ್ಬ ದೊಡ್ಡ ಅಧಿದಕಾರಿ. ಆತನು ಗುರುಗಳ ದರ್ಶನಕ್ಕಾಗಿ ಬರುವ ಅಪೇಕ್ಷೆಯನ್ನು ಸೂಚಿಸಿ ಕಾಗದವನ್ನು ಬರೆದನು. ಆತ ಸರಕಾರದಲ್ಲಿ ದೊಡ್ಡ ಸ್ಥಾನದಲ್ಲಿದ್ದ. ರಾಜಕೀಯ ಕ್ಷೇತ್ರದಲ್ಲಿಯೂ ಸಹ ಪ್ರಸಿದ್ಧನಾಗಿದ್ದನು  ತುಂಬಾ ವಿದ್ಯಾವಂತ. ಬುಧಿವಂತನೆಂದು ಹೆಸರು ಪಡೆದಿದ್ದನು.

ಆತನ ಕಾಗದ ಬಂದಾಗ ಮಠದ ಅಧಿಕಾರಿಗಳು ಆತನಿಗೆ ಉತ್ತರ ಬರೆಯಲು ತಡಮಾಡಿದರು.  ತನ್ನ ಕಾಗದ ಮಠಕ್ಕೆ ತಲುಪಿತೋ ಇಲ್ಲವೋ ಎಂದುಅವನಿಗೆ ಅನುಮಾನ ಬಂದಿತು. ಮತ್ತೊಂದು ಕಾಗದವನ್ನು ಬರೆದನು. ಆಗ ಮಠದ ಅಧಿಕಾರಿಗಳು ಈ ವಿಚಾರವನ್ನು ಗುರುಗಳಲ್ಲಿ ಭಿನ್ನವಿಸಿದರು.  ಗುರುಗಳೂ, “ಮೊದಲು ಬರೆದ ಕಾಗದಕ್ಕೆ ನೀವು ಉತ್ತರ ಬರೆಯಬೇಕಾಗಿತ್ತು. ಈಗ ಆತನಿಗೆ ಬರುವಂತೆ ತಿಳಿಸಿ ಕಾಗದ ಬರೆಯಿರಿ” ಎಂದರು.

ಮಠದ ಅಧಿಕಾರಿ, “ಆತನ ಗುಣ ನಡತೆ ಸರಿಯಾಗಿಲ್ಲ. ಮಧ್ಯ, ಮಾಂಸಗಳನ್ನು ಸೇವಿಸುತ್ತಾನೆ. ತುಂಬಾ ಅಹಂಕಾರಿ” ಎಂದರು.

“ಇರಲಿ, ಬರಮಾಡಿ. ನಾವಿರುವುದೇ ಅಂಥವರನ್ನು ತಿದ್ದುವುದಕ್ಕೆ . ಒಳ್ಳೆಯವರೂ ಸದ್ಗುಣವಂತರೂ ಆದವರಿಗೆ ನಮ್ಮಿಂದ ಯಾವ ಸಹಾಯವೂ ಅಗತ್ಯವಿಲ್ಲ.  ಯಾರು ದುಷ್ಟರೋ, ಯಾರು ಕೆಟ್ಟವರೋ, ಯಾರು ಗುಣನಡತೆಗಳಿಂದ ಕೆಳಮಟ್ಟದಲ್ಲಿದ್ದಾರೋ, ಅಂಥವರನ್ನು ತಿದ್ದುವುದೇ ಧರ್ಮಗುರುಗಳ ಕೆಲಸ. ಆದ್ದರಿಂದ ಆತನಿಗೆ ಬರುವಂತೆ ತಿಳಿಸಿ ಕಾಗದ ಬರೆಯಿರಿ” ಎಂದು ಗುರುಗಳು ಅಪ್ಪಣೆ ಮಾಡಿದರು.

ಆತ ಶೃಂಗೇರಿಗೆ ಬಂದನು. ಗುರುಗಳ ದರ್ಶನ ಮಾಡಿದನು. ಬಹುಕಾಲ ಅವರೊಡನೆ ಮಾತುಕತೆ ನಡೆಸಿದನು. ಆತನ ಮನಸ್ಸಿನ ಮೇಲೆ ಗುರುಗಳ ಉಪದೇಶ ತುಂಬಾ ಪರಿಣಾಮ ಬೀರಿತು. ತನ್ನ ದುಶ್ಚಟಗಳನ್ನೆಲ್ಲಾ ಬಿಟ್ಟು ತುಂಬಾ ಸಾತ್ವಿಕ ಸ್ವಭಾವದವನಾದನು. ಗುರುಗಳ ಆಪ್ತ ಭಕ್ತನಾದನು.

ಒಮ್ಮೆ ಬಾಲಕನೊಬ್ಬ ಗುರುಗಳ ದರ್ಶನಕ್ಕೆ ಬಂದ. ಅವನು ತಂದೆಯಿಲ್ಲದ ತಬ್ಬಲಲಿ. ಅನೇಕರು ಗುರುಗಳ ದರ್ಶನ ಪಡೆದು ಸಂತೋಷವಾಗಿ ಬರುತ್ತಿದ್ದರು. ಹಲವರು ಮಂತ್ರೋಪದೇಶವನ್ನು ಪಡೆಯುತಿದ್ದುದನ್ನು ಕಂಡ ಹುಡುಗ, ತಾನೂ ಯಾವುದಾದರೂ ಮಂತ್ರೋಪದೇಶ ಪಡೆಯಲು ಆಸೆಪಟ್ಟು, ಅವನನ್ನು ಕೇಳುವವರಾರು? ಒಳಕ್ಕೆ ಹೋಗಲು ಅವನಿಗೆ ಅವಕಾಶವೇ ಸಿಕ್ಕಲೇ ಇಲ್ಲ.

ಒಂದು ದಿನ ಬಾಲಕ ಹೊರಗಿನ ಕಂಬವನ್ನು ಒರಗಿ ಕುಳಿತ್ತಿದ್ದನು.  ಗುರುಗಳೂ ತಮ್ಮಸೇವಕನನ್ನು ಕರೆದು, :ಹೊರಗೆ  ಒಬ್ಬ ಹುಡುಗ ಬಹಳ ದಿನದಿಂದ ಬರುತ್ತಾ ಇದ್ದಾನೆ. ಕಂಬಕ್ಕೆ ಒರಗಿ ಕುಳಿತಿದ್ದಾನೆ. ಅವನನ್ನು ಕರೆದುಕೊಂಡು ಬಾ ಎಂದರು.

ಸೇವಕನು ಬಂದು ಬಾಲಕನನ್ನು ಒಳಕ್ಕೆ ಕರೆದೊಯ್ದ.  ಬಾಲಕನಿಗೆ ತುಂಬಾ ವಿಸ್ಮಯ, ಸಂತೋಷದಿಂದ ಕಣ್ಣಲ್ಲಿ ನೀರು ತುಂಬಿತ್ತು. ಸಾಷ್ಟಾಂಗ ವಂದಿಸಿ, ಕೈಮುಗಿದು ನಿಂತ.

“ನಿನಗೇನು ಬೇಕಪ್ಪಾ ಮಗು?” ಗುರುಗಳು ಕೇಳಿದರು.

“ನಾನು ಬಹಳ ದಡ್ಡ ಅಂತ ಎಲ್ಲರೂ ಜರೆಯುತ್ತಾರೆ. ವಿದ್ಯೆ ಕಲಿಯಲು ತುಂಬಾ ಕಷ್ಟವಾಗುತ್ತಿದೆ. ನನಗೆ ಯಾವುದಾಧರೂ ಉಪದೇಶಬೇಕು” ಎಂದು ಬೇಡಿದ. ಗುರುಗಳಿಗೆ ಆಶ್ಚರ್ಯವಾಯಿತು.

“ಆಗಲಿ, ನಾಳೆ ಬಾ” ಎಂದರು.

ಬಾಲಕ ಮಾರನೆಯ ದಿನ ಬಂದಾಗ ಸೇವಕರು ಆತನನ್ನು ಒಳಕ್ಕೆ ಬಿಟ್ಟರು. ಗುರುಗಳು ಆತನನ್ನು ನೋಡಿ “ಏನಪ್ಪಾ ಮಗು, ಮಂತ್ರದ ಉಪದೇಶ ಪಡೆಯುವವರು ಶುದ್ಧವಾಗಿರಬೇಕು. ನೀನಾಗಲೇ ಊಟಮಾಡಿ ಬಿಟ್ಟೀದಿಯಲ್ಲಾ!” ಎಂದರು.

ಬಾಲಕನಿಗೆ ಅ‌ತ್ಯಾಶ್ಚರ್ಯವಾಯಿತು. ತಾನು ಮನೆಯಲ್ಲಿ ತಂಗುಳನ್ನ ಉಂಡುದು ಗುರುಗಳಿಗೆ ಹೇಗೆ ಗೊತ್ತಾಗಿ ಬಿಟ್ಟಿತ್ತು ಎಂದು ವಿಸ್ಮಯಪಟ್ಟ.

ನಮ್ರನಾಗಿ ತಲೆಬಾಗಿ, “ತಪ್ಪಾಯಿತು ಗುರುಗಳೇ. ನನಗೆ ತಿಳಿಯಲಿಲ್ಲ. ನಾಳೆ ಹೊಳೆಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆ ಮುಗಿಸಿ, ತಮ್ಮ ದರ್ಶನಕ್ಕೆ ಬರುತ್ತೇನೆ” ಎಂದು ಭಿನ್ನವಿಸಿದ. ಆಗಲೆಂದು ಹೇಳೀದ ಗುರುಗಳು, ಮಾರನೆಯ ದಿನ ಆ ಬಾಲಕನಿಗೆ ಮಂತ್ರೋಪದೇಶ ಮಾಡಿದರು. ಅವನ ಬುದ್ಧಿಗೆ ಕವಿದಿದ್ದ ಮಂಕುತನವೂ, ದಡ್ಡತನವೂ ದೂರವಾದುವು, ಆತನು ಬುದ್ಧಿವಂತನಾದನು.

ದೇವರ ಸ್ತೋತ್ರ ಹೇಳಲು“-

ಶ್ರೀ ಗುರುಗಳು ತಮ್ಮ ಬೆಳಗಿನ ಪೂಜಾದಿಗಳನ್ನು ಮುಗಿಸಿದ ನಂತರ ಶ್ರೀ ನರಸಿಂಹಭಾರತೀ ಸ್ವಾಮಿಗಳ ಸಮಾಧಿಗೆ ಬಂದು  ಅಲ್ಲಿ ತಮ್ಮಗುರುಗಳ ದರ್ಶನ  ಮಾಡುತ್ತಿದ್ದರು.  ಒಂದು ದಿನ ಗುರುಗಳು ಸಮಾಧಿ ಮಂದಿರದಿಂದ ಹೊರಕ್ಕೆ ಬರುತ್ತಿದ್ದಾಗ, ಹತ್ತಿರದಲ್ಲಿಯೇ ಒಂದು ಮರದ ಕೆಳಗೆ ಒಬ್ಬ ಹುಡುಗ  ಅಳುತ್ತಾ ನಿಂತಿರುವುದನ್ನು ಕಂಡರು. ಅವನನ್ನು ತಮ್ಮ ಹತ್ತಿರಕ್ಕೆ ಕರೆಯದೇ ತಾವೇ ಅವನ ಬಳಿ ಸಾಗಿದರು. ತನ್ನ ಸಮೀಪಕ್ಕೆ ಬಂದ ಗುರುಗಳನ್ನು ಕಂಡ ಆ ಹುಡುಗ ಕೂಡಲೇ ಅಡ್ಡಬಿದ್ದು ನಮಸ್ಕರಿಸಿದನು. ಎದ್ದು ಕೈಜೋಡಿಸಿ ನಿಂತನು. ಅವನ ಕಣ್ಣಲ್ಲಿ ನೀರು ಇನ್ನೂ ಹಾಗೆಯೇ ಇತ್ತು.

“ಮಗು, ಏಕೆ ಅಳುತ್ತಿದ್ದೀಯೆ?” ಗುರುಗಳು ಕೇಳಿದರು.  ಅವನಿಗೆ ಪುನಃ ಅಳುಬಂದು ಬಿಟ್ಟಿತು.

ಗುರುಗಳು ಪುನಃ ಕೇಳಿದರು: “ನಿನ್ನ ಹೆಸರೇನಪ್ಪ?”

“ನರಸಿಂಹ ” ಆತ ಹೇಳಿದ.

“ಎಲ್ಲಿಂದ ಬಂದೆ?”

“ರಾಮನಾಥಪುರದಿಂದ”

ಹುಡುಗ ತಂದೆಯ ಹೆಸರನ್ನು ಹೇಳಿದ.

“ನೀನು ಅಳುತ್ತಿದ್ದುದು ಏಕೆ?”

“ನಾನು ಲಲಿತಾ ಸಹಸ್ರನಾಮ ಸ್ತೋತ್ರವನ್ನು ಹೇಳುತ್ತಿದ್ದೆ.  ನಮ್ಮ ಶಾಸ್ತ್ರಿಗಳು, “ಮಡಿಯಿಲ್ಲ, ಮೈಲಿಗೆ ಇಲ್ಲ, ಯಾವಾಗೆಂದಸರೆ ಆಗ ಸಹಸ್ರನಾಮ ಸ್ತೋತ್ರ ಹೇಳುತ್ತಿಯಾ? ಸಾಕು, ನಿಲ್ಲಿಸು” ಎಂದು ಗದರಿಸಿಕೊಂಡರು. ಹಾಗೆಲ್ಲಾ ಹೇಳುತ್ತಿದ್ದರೆ ತುಂಬಾ ಕೆಟ್ಟದಾಗುವುದೆಂದು ಹೇಳಿದರು. ಅದಕ್ಕೆ ಅಳು ಬಂತು” ಎಂದ ಬಾಲಕ.

“ಪಾಪ, ಶಾಸ್ತ್ರಿಗಳಿಗ ಮರೆವು ಎಂದು ಕಾಣುತ್ತದೆ. ದೇವರನ್ನು ಸ್ತೋತ್ರ ಮಾಡಲು ಮಡಿ, ಮೈಲಿಗೆಯ ಆತಂಕವಿಲ್ಲ, ಹೊತ್ತು ಗೊತ್ತಿನ ನಿಯಮವಿಲ್ಲ, ಯಾವಾಗ ಬೇಕಾದರೂ ಹೇಳಬಹುದು. ಮನಸ್ಸು ಶುದ್ಧವಾಗಿರಬೇಕು, ಭಕ್ತಿ ಇರಬೇಕು, ಅಷ್ಟೇ, ನೀನು ಶ್ರೀ ಲಲಿತಾ ಸಹಸ್ರನಾಮವನ್ನು ಪೂರ್ತಿಯಾಗಿ ಕಲಿತಿದ್ದೀಯಾ?”

“ನಮ್ಮ ತಾತನವರೇ ಹೇಳಿಕೊಟ್ಟಿದ್ದಾರೆ. ನನಗೆ ಕಂಠಪಾಠವಾಗಿದೆ”.

“ಹಾಗಿದ್ದಲ್ಲಿ ಯಾರ ಭಯವೂ ಇಲ್ಲ. ಧೈರ್ಯವಾಗಿ ತಾಯಿಯ ಸ್ತುತಿ ಮಾಡು” ಎಂದು ನುಡಿದ ಗುರುಗಳು ಅವನಿಗೆ ಪ್ರಸಾದವನ್ನು ಕೊಟ್ಟು ಆಶೀರ್ವಾದ ಮಾಡಿದರು.

ನಿಮ್ಮಮತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ“:

ಗುರುಗಳಲ್ಲಿ ಮಾರ್ಗದರ್ಶನ ಪಡೆಯಲು ಎಲ್ಲ ಮತ ಜಾತಿಗಳ  ಜನರು ಬರುತ್ತಿದ್ದರು. ಪ್ರತಿಯೊಬ್ಬರೂ ಅವರವರ ಮಥದ ಧರ್ಮವನ್ನು ಶ್ರದ್ದೇಯಿಂದ ಆಚರಿಸಿದರೆ, ಅನ್ಯಮತ ದ್ವೇಷವನ್ನು ಬಿಟ್ಟರೆ ಲೋಕ ಕಲ್ಯಾಣವಾಗುತ್ತದೆಯೆಂದು ಗುರುಗಳು ಬೋಧಿಸುತ್ತಿದ್ದರು.

ಒಮ್ಮೆ ಪಾಶ್ಚಾತ್ಯ ದೇಶದ ಪ್ರಜೆಯೊಬ್ಬನು ಗುರುಗಳ ದರ್ಶನಕ್ಕೆ ಬಂದನು. ಆತನಿಗೆ ತನ್ನಮತವಾದ ಕ್ರೈಸ್ತ ಮತದಲ್ಲಿ ನಂಬಿಕೆ ಇರಲಿಲ್ಲ. ಹಿಂದೂ ಧರ್ಮದ ಅನೇಕ ಗ್ರಂಥಗಳನ್ನು ಓದಿದ. ಆತನಿಗೆ ತಾನು ಹಿಂದೂ ಧರ್ಮಕ್ಕೆ ಸೇರಬೇಕೆಂಬ ಆಸೆ ಮೂಡಿತು. ಗುರುಗಳಲ್ಲಿ ತನ್ನ ಅಭಿಲಾಷೆಯನ್ನು ತಿಳಿಸಿದನು.

“ನೀವು ಹಿಂದುಗಳಾಗಬೇಕೆಂದೇ ಇಲ್ಲ. ಹಿಂದುಗಳಲ್ಲದಿರುವವರೂ ಹಿಂದು ಧರ್ಮದ ನಿಯಮಗಳನ್ನು ಪಾಲಿಸಬಹುದು”.

“ಅದು ಹೇಗೆ ಗುರುಗಳೇ?”

“ನೋಡಿ, ಹಿಂದು ಮತ ಎಂದು ಕರೆಯುವುದೇ ತಪ್ಪು. ಇದು ಹಿಂದು ಮತವಲ್ಲ, ಹಿಂದು ಧರ್ಮ. ಏಕೆಂದರೆ ಇದನ್ನು ಯಾರೋ ಒಬ್ಬ ಮತಸ್ಥಾಪಕರು ಸ್ಥಾಪಿಸಿದರು ಎಂದು  ಹೇಳುವ ಹಾಗಿಲ್ಲ.  ಇಂತಹ ಕಾಲದಲ್ಲಿ ಇದು ಹುಟ್ಟಿತು, ಅದಕ್ಕೆ ಮೊದಲು ಇರಲಿಲ್ಲವೆಂದು ಹೇಳುವ ಹಾಗಿಲ್ಲ. ಎಲ್ಲ ಮತಗಳು ಹೇಳುವ ಹಿರಿಯ ತತ್ವಗಳು, ಉಪದೇಶಗಳು ಹಿಂದು ಧರ್ಮದಲ್ಲಿಯೇ ಇವೆ”.

“ಹಾಗಾದರೆ ನಾನು ಪ್ರತ್ಯೇಕವಾಗಿ ಹಿಂದೂ ಧರ್ಮಕ್ಕೆ ಸೇರಬೇಕಾಗಿಲ್ಲವೆಂದೂ ತಾವು ಹೇಳಿದ್ದಿರಿ. ಈಗ ನಾನೇನು ಮಾಡಲಿ?”

“ನೀವು ನಿಮ್ಮ ಮತದ ಬೋಧನೆಯಲ್ಲಿಯೇ ನಂಬಿಕೆ ಯಿಟ್ಟು ನಡೆಯಬೇಕು”.

“ನಮ್ಮ ಮತದಲ್ಲಿ  ಮಾರ್ಗ ತೊರುವಂತಹ ಗುರುಗಳೇ ಕಾಣುತ್ತಿಲ್ಲ ಮಹಾಸ್ವಾಮಿ”.

“ಅದನ್ನು ನಾನು ಒಪ್ಪಲಾರೆ. ಸರಿಯಾದ ಮಾರ್ಗವನ್ನು ತೋರಿಸುವವರು ಸಿಕ್ಕುತ್ತಾರೆ. ನಿಮ್ಮ ಮತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನೀವು ಇಂದಿನಿಂದಲೇ ನಿಮ್ಮಮತದ ತತ್ವಗಳನ್ನು ಅನುಸರಿಸಿರಿ”.

ಗುರುಗಳ ಈ ಬೋಧನೆಯಿಂದ ಆತನು ವಿಸ್ಮಿತನಾದನು.”ಸ್ವಾಮೀ, ತಾವು ನನ್ನ ಮತದ ಬಗೆಗೆ ನನ್ನಲ್ಲಿದ್ದ ಅಜ್ಞಾನವನ್ನು ಹೋಗಲಾಡಿಸಿದಿರಿ. ನನ್ನನ್ನು ಉತ್ತಮ ಕ್ರೈಸ್ತನಾಗುವಂತೆ ಪ್ರೇರೇಪಿಸಿದಿರಿ. ನಿಮಗೆ ನಾನು ಎಷ್ಟು ಕೃತಜ್ಞನಾಗಿದ್ದರೂ ಸಾಲದು” ಎಂದು ಹೇಳಿ ವಂದಿಸಿದರು.

ಗುರುಗಳು ಬಳಿ ಬರುವ ಮೊದಲು

ತಾಯಿ ತಂದೆಯರಲ್ಲಿಯೂ, ಗುರುಹಿರಿಯಲ್ಲಿಯೂ ಭಕ್ತ ಶ್ರದ್ದೇ ಇರಬೇಕೆಂದು ಗುರುಗಳು ತಮ್ಮಲ್ಲಿಗೆ ಬಂದವರಿಗೆ ಬೋಧಿಸುತ್ತಿದ್ದರು.

ಒಮ್ಮೆ ಒಬ್ಬರುಗುರುಗಳ ದರ್ಶನಕ್ಕೆ ಬಂದರು. ಅವರು ತುಂಬಾ ಬುದ್ಧಿವಂತರಾದ ವಕೀಲರೆಂದು ಹೆಸರು ಪಡೆದಿದ್ದರು.  ತನ್ನ ಪತ್ನಿಯೊಡನೆ ಬಂದಿದ್ದ ಆತ ಗುರುಗಳಿಗೆ ವಂದನೆ ಸಲ್ಲಿಸಿ ಕುಳಿತುಕೊಂಡರು. ಗುರುಗಳು ಅವರ ಯೋಗಕ್ಷೇಮ ವಿಚಾರಿಸಿದರು.  ಅನಂತರ ವಕೀಲರು ಹೇಳಿದರು:

“ಗುರುಗಳಲ್ಲಿ ನನ್ನದೊಂದು ಬೇಡಿಕೆಯಿದೆ”.

“ಏನದು? ಹೇಳಿ”.

ಸಂಧ್ಯಾವಂದನೆ, ದೇವತಾರ್ಚನೆಗಳನ್ನು ತಕ್ಕಮಟ್ಟಿಗೆ ಮಾಡುತ್ತಿದ್ದೇನೆ.”

“ತುಂಬಾ ಸಂತೋಷ”.

“ಯಾವುದಾದರೂ ಮಂತ್ರೋಪದೇಶ ಪಡೆಯಬೇಕೆಂಬ ಆಸೆ ಬಲವಾಗಿದೆ”.

ಈ ಮಾತನ್ನು ಕೇಳಿದ ಗುರುಗಳ ಮುಖ ಗಂಭೀರವಾಯಿತು. ತಮ್ಮ ದರ್ಶನಕ್ಕೆ ಬರುತ್ತಿದ್ದವರ ಎಲ್ಲ ವಿಚಾರಗಳೂ ಗುರುಗಳಿಗೆ ಗೊತ್ತಾಗಿ ಬಿಡುತ್ತಿತ್ತು. ವಕೀಲರು ತಾಯಿ ತಂದೆಗೆ ಒಬ್ಬನೇ ಮಗ. ಸಾಹುಕಾರರ ಮನೆಯ ಹುಡುಗಿಯನುನ ಮದುವೆ ಮಾಡಿಕೊಂಡರು.ಅನಂತರ ಈತ ತಾಯಿ-ತಂದೆಯರನ್ನು ದೂರ ಮಾಢಿದ್ದರು. ಆ ಮುದುಕರು ದೂರದ ಹಳ್ಳಿಯಲ್ಲಿಯೇ  ಕೊರಗುತ್ತಿದ್ದರು.  ಈ ವಿಚಾರ ಗುರುಗಳ ಮನಸ್ಸಿನಲ್ಲಿ ಬಂಧಿತು. ಅವರು ಮಾತನಾಡಲಿಲ್ಲ. ವಕೀಲರೇ ಕೇಳಿದರು:

“ಗುರುಗಳು ನನ್ನ ಬೇಡಿಕೆಯನ್ನು ಮನ್ನಿಸಬೇಕೆಂದು ಪ್ರಾರ್ಥನೆ”

“ನಿಮಗೇಕೆ ಉಪದೇಶ? ನೀವು ಗುರುವನ್ನು ಆಶ್ರಯಿಸಬೇಕಾದ್ದು ಯಾವಾಗ? ಮೊದಲು ತಾಯಿ-ತಂದೆಯರನ್ನು ಪ್ರೀತಿಯಿಂದ ಸೇವಿಸಿ, ಅನಂತರ ಗುರುವಿನ ಬಳಿ ಬರಬೇಕು. ತಾಯಿ ತಂದೆಯರನ್ನು ಅಲಕ್ಷಿಸಿ ಬಿಟ್ಟೀದಿರಿ” ಎಂದರು ಗುರುಗಳೂ. ಆತನಿಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತಾಪದಿಂದ ತಲೆ ಬಗ್ಗಿಸಿದರು.

“ಹೋಗಿ ನಿಮ್ಮ ಮುದುಕ ತಂದೆ-ತಾಯಿಯರನ್ನು ಕರೆದುಕೊಂಡು ಬನ್ನಿ, ನಿಮ್ಮ ಬಳೀ ಇಟ್ಟುಕೊಳ್ಳೀ. ಚೆನ್ನಾಗಿ ಅವರನ್ನು ಸೇವಿಸಿ, ಅವರನ್ನು ಸಂತೋಷಪಡಿಸಿ. ಅನಂತರ ನನ್ನಲ್ಲಿ ಬನ್ನಿ” ಎಂದರು. ಆತನೊಡನೆಯೇ ಬಂದಿದ್ದ ಆತನ ಹೆಂಡತಿಗೂ ಬುದ್ಧಿವಾದ ಹೇಳಿದರು.

ರೋಗಿಗಳ ಸೇವೆಯೆ ನಿಜವಾದ ಪೂಜೆ!

ಗುರುಗಳು ಕೆಲವುಕಾಲ ಕಾಲಟಿಯಲ್ಲಿ ಇದ್ದರು. ಅಲ್ಲಿ ದರ್ಶನ ಮಾಡಲು ಮುಸಲ್ಮಾನ ಅಧಿಕಾರಿಯೊಬ್ಬಾತ ಬಂದನು. ಸುಂಸ್ಕೃತನಾಗಿದ್ದ ಆತನು ಗುರುಗಳೀಗೆ ವಂದನೆ ಸಲ್ಲಿಸಿ, ಅವರ ಅಪ್ಪಣೆಯಂತೆ ಕುಳಿತುಕೊಂಡನು. ಆತನ ಯೋಗಕ್ಷೇಮವನ್ನು ವಿಚಾರಿಸಿದ ನಂತರ ಗುರುಗಳು “ನೀವು ಖುರಾನನ್ನು ಸಂಪೂರ್ಣವಾಗಿ ಓದಿದ್ದೀರಾ?” ಎಂದು ಕೇಳಿದರು.

“ಪೂರ್ಣವಾಗಿ ಓದಿದ್ದೇನೆಂದು ಧೈರ್ಯವಾಗಿ ಹೇಳಲಾರೆ. ಸಾಮಾನ್ಯವಾಗಿ ಓದಿಕೊಂಡಿದ್ದೇನೆ.”

“ಸಂತೋಷ, ಓದಿಕೊಂಡಿರುಷ್ಟನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಾ?”

“ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆಂದೂ  ಹೇಳಲಾರೆ. ಸುಮಾರಾಗಿ ಅರ್ಥಮಾಡಿಕೊಂಡಿದ್ದೇನೆ”.

“ಅರ್ಥಮಾಡಿಕೊಂಡಿರುವುದನ್ನು ನಿಮ್ಮಜೀವನದಲ್ಲಿ ಅಭ್ಯಾಸಕ್ಕೆ ತಂದಿದ್ದೀರಾ?”

“ತರಬೇಕೆಂದು ಪ್ರಯತ್ನ ಮಾಡುತ್ತಿದ್ದೇನೆ”.

“ಅದರಲ್ಲಿರುವ ಯಾವುದಾಧರೂ ಒಂದು ತತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅಭ್ಯಾಸಕ್ಕೆ ತಂದರೆ, ಅದರಿಂದ ದೇವರಿಗೆ ಪ್ರೀತಿ ಉಂಟಾಗುತ್ತದೆ.”

“ತಮ್ಮ ಬೋಧನೆ  ನನಗೆ ತುಂಬಾ ಹಿಡಿಸಿತು ಮಹಾಸ್ವಾಮಿ. ಇನ್ನು ಸ್ವಲ್ಪ ದಿನ ನನಗೆ  ಈ ಕೆಲಸದಿಂದ ನಿವೃತ್ತಿಯಾಗುತ್ತದೆ. ಆಗ ಸಮಾಜ ಸೇವೆ ಮಾಡಬೇಕೆಂದು ಆಶಿಸಿದ್ದೇನೆ.”

“ಸಮಾಜಸೇವೆಯೆಂದರೆ ಹೇಗೆ?”

“ರೋಗಿಗಳ ಸೇವೆ ಮಾಡುವುದು”.

“ಅದು ನಿಜವಾಗಿಯೂ ಶ್ಲಾಘ್ಯ ವಿಚಾರ. ಅಸಹಾಯಕರಿಗೆ ಮಾಡಿದ ಸೇವೆ, ದೇವರ ಸೇವೆಯಾಗುತ್ತದೆ”.

“ಕುಷ್ಠರೋಗಿಗಳ ಸೇವೆಗಾಗಿ ಒಂದು ಆಶ್ರಮ ಸ್ಥಾಪಿಸಿ, ಅವರ ಸೇವೆ ಮಾಡುತ್ತ ಅಲ್ಲಿಯೇ ಇರಬೇಕೆಂದು ನಿಶ್ಚಯಿಸಿದ್ದೇನೆ. ಅದಕ್ಕೆ ತಮ್ಮ ಅಶೀರ್ವಾದ ಬೇಕು”.

“ರೋಗಿಗಳ ಸೇವೆಗಿಂತ ಮಹತ್ಕಾರ್ಯ ಬೇರೆ ಯಾವುದೂ ಇಲ್ಲ. ಅದೇ ನಿಜವಾದ ದೇವರ ಪೂಜೆ, ಅವಶ್ಯವಾಗಿ ಮಾಡಿ”.

ಆ ಅಧಿಕಾರಿ ತಮ್ಮ ವಿಶ್ರಾಂತ ಜೀವನದಲ್ಲಿ ಕುಷ್ಠರೋಗಿಗಳ ಸೇವೆ ಮಾಡುತ್ತ ಜೀವನವನ್ನು ಸಾರ್ಥಕಪಡಿಸಿಕೊಂಡರು.

ನಿಮ್ಮ ತಂದೆತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ, ಅನಂತರ ಬನ್ನಿ.

ವ್ಯಾಪಾರ ದೇವರ ಕೆಲಸ :

ಒಂದು ದಿನ ಗುರುಗಳು ಭಕ್ತರಿಗೆ ತೀರ್ಥ ಕೊಡುತ್ತಿದ್ದರು. ಜನಸಂದಣಿ ಹೆಚ್ಚಾಗಿತ್ತು. ಜನರೆಲ್ಲಾ ಕರಗಿದ ಮೇಲೆ ಒಬ್ಬ ವೈಶ್ಯ ಯುವಕನು ಮುಂದೆ ಬಂದು ವಿನಯದಿಂದ ನಮಸ್ಕರಿಸಿದನು. ಅನಂತರ ನಮ್ರನಾಗಿ ತೀರ್ಥಕ್ಕೆ ಕೈಯೊಡ್ಡಿದನು. ಗುರುಗಳು ಅವನತ್ತ ನೋಡಿದರು. ಅವನು ದೈನ್ಯವಾಗಿದ್ದನು. ದುಃಖವನ್ನು ಕಷ್ಟಕ್ಕೂ ಸಿಕ್ಕಿದವನಂತೆ ಕಾಣುತ್ತಿದ್ದನು. ಆತನಿಗೆ ತಿರ್ಥವನ್ನು ಕೊಡುತ್ತಾ ವನ ತಂದೆಯ ಹೆಸರು ಹೇಳಿ, “ನೀನು… ಅವರ ಮಗನಲ್ಲವೇನಪ್ಪಾ?” ಎಂದು ಗುರುಗಳು ಕೇಳಿದರು.  ಗುರುಗಳು ತನ್ನ ತಂದೆಯ ಹೆಸರನ್ನು ಹೇಳೀ ತನ್ನನ್ನು ಗುರುತಿಸಿದುದರಿಂದ ಆ ಯುವಕ ಪುಲಕಿತನಾದ. ತನ್ನ ತಂದೆ ವ್ಯಾಪಾರದಲ್ಲಿ ತುಂಬಾ ನಷ್ಟಕ್ಕೆ ಗುರಿಯಾದುದುನ್ನು, ಕೊರಗಿನಲ್ಲಿಯೇ ಮೃತರಾದುದನ್ನು ಈಗ ಸಂಸಾರವು ಕಷ್ಟ ಪರಿಸ್ಥಿತಿಯಲ್ಲಿ ಇರುವುದನ್ನು ಆತ ಗುರಗಳಿಗೆ ಹೇಳಿಕೊಂಡನು,. “ನಮ್ಮ ತಂದೆಯವರು ಮರಣ ಹೊಂದುವ ಸಮಯದಲ್ಲಿ “ನಮಗೆ ದೇವರಂತೆ ಇರುವವರು ನಮ್ಮ ಶೃಂಗೇರಿಯ ಗುರುಗಳೂ ಶ್ರೀ ಚಂದ್ರಶೇಖರ ಭಾರತೀಯವರು. ನಿನಗೆ ತುಂಬಾ ಕಷ್ಟ ಬಂದಾಗ ಹೋಗಿ ಅವರ ದರ್ಶನ ಮಾಡು. ಅವರ ದೃಷ್ಟಿ ನಿನ್ನ ಮೇಲೆ ಬಿದ್ದರೆ ಸಾಕು. ನಿನ್ನ ಕಷ್ಟಗಳನ್ನೆಲ್ಲಾ ಪರಿಹಾರವಾಗುತ್ತವೆ. ಅವರೇ ನಿಮಗೆ ದಿಕ್ಕು” ಎಂದು ಹೇಳಿದರು. ನಾನು ತಂದೆಯವರ ಕಸುಬನ್ನೇ ಮುಂದುವರೆಸುತಿದ್ದೇನೆ. ವ್ಯಾಪಾರ ಕೈಗೂಡುತ್ತಿಲ್ಲ. ಕೈಯಿಟ್ಟುದ್ದೆಲ್ಲ ನಷ್ಟವೇ ಆಗುತ್ತಿದೆ: ಎಂದು ಆ ಯುವಕ ಬಿನ್ನವಿಸಿದ.

ಗುರುಗಳು, “ಅಪ್ಪಾ, ದೇವರ ಕೃಪೆ ನಿನಗೆ ದೊರೆಯುತ್ತದೆ. ಮಧ್ಯಾಹ್ನ ಬಾ, ಪ್ರಸಾದ ಕೊಡುತ್ತೇನೆ” ಎಂದು ಮೃದುವಾಗಿ ನುಡಿದರು.

ಅವನು ಪುನಃ ಗುರುಗಳ ದರ್ಶನಕ್ಕಗಿ ನಾಲ್ಕು ಗಂಟೆಗೆ ಹೋದನು. ಆಗ ಅವರು, ಆತನ ತಂದೆಯ ಒಳ್ಳೆಯ ಗುಣ, ಸಾಧು ಸ್ವಭಾವ, ಪ್ರಾಮಾಣಿಕತೆ ಇವನ್ನೆಲ್ಲಾ ಹೇಳಿ, “ನೀನು ನಿಮ್ಮತಂದೆಯವರಂತೆಯೇ ಆಗಬೇಕು.  ವ್ಯಾಪಾರವನ್ನೇ ಮುಂದುವರೆಸು. ವ್ಯಾಪಾರ ಮಾಡಿಯೂ ಪ್ರಾಮಾಣಿಕವಾಗಿ ಇರಲು ಸಾಧ್ಯ. ಅತಿ ಲಾಭಕ್ಕಾಗಿ  ಅಸೆಪಡಬೇಡ. ಅಳತೆ, ತೂಕದಲ್ಲಿ ಮೋಸ ಮಾಡಬೇಡ. ಒಳ್ಳೆಯ ಪದಾರ್ಥಗಳನ್ನೇ ಮಾರು. ಕಲಬೆರಕೆ ವಸ್ತುಗಳನ್ನು ತರಬೇಡ. ವ್ಯಾಪಾರ ದೇವರ ಕೆಲಸವೆಂದು ಭಾವಿಸು. ಪ್ರಾಮಾಣಿಕನಾಗಿರು. ದೇವರ ಅನುಗ್ರಹ ನಿನಗೆ ದೊರಕುತ್ತದೆ” ಎಂದು ಹರಿಸಿದರು.

ಅವನಿಗೆ ತಮ್ಮ ಆಶೀರ್ವಾದದೊಡನೆ ಸ್ವಲ್ಪ ಹಣವನ್ನೂ ಕೊಟ್ಟರು. ಆತನು ಗುರುಗಳ ಮಾತಿನಂತೆಯೇ  ನಡೆದುಕೊಂಡು ಮುಂದೆ ಅನುಕೂಲ ಸ್ಥಿತಿಗೆ ಬಂದನು. ಒಳ್ಳೆಯ ಹೆಸರನ್ನು ಗಳಿಸಿದನು.

ವೈರಾಗ್ಯ ಮೂರ್ತಿ:

ವಿಜಯನಗರ ಸಾಮ್ರಾಜ್ಯಕ್ಕೆ ಕಾರಣರು ಶ್ರೀ ವಿದ್ಯಾರಣ್ಯ ಸ್ವಾಮಿಗಳು. ಅವರ ಕಾಲದಿಂದಲೂ ಶೃಂಗೇರಿಯ ಮಠಕ್ಕೆ ವಿಶೇಷ ಮರ್ಯಾದೆ. ಗೌರವಗಳು ಇದ್ದುವು. ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಅವರೂ, ಅವರ ಗುರುಗಳಾಗಿದ್ದ ವಿದ್ಯಾತಿರ್ಥರೂ, ಭಾರತೀ ತೀರ್ಥರೂ ತಪ್ಪಸ್ಸು ಮಾಡಿದರು. ಕ್ಷತ್ರೀಯರನ್ನು ಹುರಿದುಂಬಿಸಿದರು. ರಾಜ್ಯ ಕಟ್ಟಿದರು.  ಹೊಸ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಮಠದ ಐಶ್ವರ್ಯವನ್ನೆಲ್ಲ ಧಾರೆಯೆರೆದು ಬಿಟ್ಟರು. ಶೃಂಗೇರಿ ಗುರುಪೀಠದ ಈ ತ್ಯಾಗದ ಅಡಿಪಾಯದ ಮೇಲೆ ಕ್ಷತ್ರೀಯವೀರರಾದ ಹಕ್ಕ-ಬುಕ್ಕರು ರಾಷ್ಟ್ರನಿರ್ಮಾಣ ಮಾಡಿದರು. ಅಂದಿನಿಂದ ಶೃಂಗೇರಿಯ ಗುರುಗಳು ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯರೆಂದು ಗೌರವಿಸಲ್ಪಟ್ಟರು.  ಅವರಿಗೆ ರಾಜಯೋಗ್ಯವಾದ ಬಿರುದು ಬಾವಲಿಗಳು ಒಪ್ಪಿಸಲ್ಪಟ್ಟವು. ರತ್ನದ ಕಿರೀಟ, ಚಿನ್ನದ ಪಾಲಕಿ, ಕುದುರೆ, ಕಾಲಾಳು ಮೊದಲಾದ ರಾಜ ಲಾಂಛನಗಳು ಸಲ್ಲಿಸಲ್ಪಟ್ಟವು.  ಮಠ ಮತ್ತು ದೇವಾಲಯ ಲಾಂಛಣಗಳು ಸಲ್ಲಿಸಲ್ಪಟ್ಟವು. ಮಠ ಮತ್ತು ದೇವಾಲಯ ಗಳಿಗಾಗಿ ಜಹಗೀರಿಯೂ ಕೊಡಲ್ಪಟ್ಟವು.

ಶೃಂಗೇರಿಯ ಗುರುಗಳು ಮಠದ ಆಡಳೀತ ವ್ಯವಹಾರ ಗಳಲ್ಲಿ ರಾಜನಂತೆಯೇ ವರ್ತಿಸಬೇಕಾಗುತ್ತಿತ್ತು. ನವರಾತ್ರಿ, ರಥೋತ್ಸವ, ವಿಶೇಷ ದಿನಗಳಲ್ಲಿಯೂ ಮತ್ತು ಹೊರಗೆ ಸಂಚಾರ ಹೊರಟಾಗಲೂ ರಾಜರಂತೆ ಗುರುತುಗಳನ್ನು ಧರಿಸಬೇಕಾಗುತ್ತಿತ್ತು.  ಶ್ರೀ ಚಂದ್ರಶೇಖರ ಭಾರತೀಯವರು ಪೀಠಕ್ಕೆ ಬರುವ ಮೊದಲೇ ಮೌನ, ವೈರಾಗ್ಯಗಳ ಜೀವನವನ್ನು ನಡೆಸುತ್ತಿದ್ದರು. ಸಂನ್ಯಾಸ ಸ್ವೀಕರಿಸಿದ ಮೇಲೆ ಈ ವೈರಾಗ್ಯ ಇನ್ನೂ ಹೆಚ್ಚಾಯಿತು. ಸಂನ್ಯಾಸ ಸ್ವೀಕರಿಸಿದ ಮೇಲೆ ಈ ವೈರಾಗ್ಯ ಇನ್ನೂ ಹೆಚ್ಚಾಯಿತು. ರಾಜಲಾಂಛನಗಳನ್ನು ಧರಿಸುವುದಕ್ಕೂ ತುಂಬಾ ಸಂಕೋಚ ಪಡುತ್ತಿದ್ದರು.

ಗುರುಗಳ ವೈರಾಗ್ಯ ಬರಬರುತ್ತಾ ಹೆಚ್ಚಾಯಿತು. ಅವರ ಅಗತ್ಯಗಳೆಲ್ಲವೂ ಬಹು ಸ್ವಲ್ಪವಾದವು. ಅವರು ಉಡುತ್ತಿದ್ದುದು ಅಂಚು ಇರದ ಸಾದಾ ಧೋತ್ರ. ಆಹಾರ ಬಹು ಸ್ವಲ್ಪ.  ರುದ್ರಾಕ್ಷಿ ಮಾಲೆಯನ್ನು ಮಾತ್ರ ಧರಿಸುತ್ತಿದ್ದರು.  ಧ್ಯಾನ, ಸಮಾಧಿ ಇವುಗಳೆಲ್ಲಾ ಇಲ್ಲದಿದ್ಧಾಗಲೂ ಅವರು ಏಕಾಂತ ವಾಸವನ್ನೇ ಬಯಸುತ್ತಿದ್ದರು. ಅಂತರ್ಮುಖ ರಾಗಿದ್ದಾಗಲಂತೂ ಅವರ ದರ್ಶನ ದುರ್ಲಭವಾಗುತ್ತಿತ್ತು. ಮಠದ ಮುಖ್ಯ ವಿಚಾರಗಳಲ್ಲಿಯೂ ಗುರುಗಳು ಆಸಕ್ತಿ ತೋರುತ್ತಿರಲಿಲ್ಲ. ಸಲಹೆ ಅಭಿಪ್ರಾಯಗಳನ್ನು ಕೊಡುತ್ತಿರಲಿಲ್ಲ.

ಶಿಷ್ಯರೆಲ್ಲ ಈ ವಿಚಾಋವನ್ನು ಗುರುಗಳಲ್ಲಿ  ಹೇಳಿಕೊಂಡರು. ತಮಗೆ ಮಾರ್ಗದರ್ಶನ ನೀಡಲು ಮತ್ತು ಮಠದ ಆಡಳೀತದಲ್ಲಿ ಸಲಹೆಯನ್ನು ನೀಡಲು ಗುರುಗಳು ಮನಸ್ಸು ಮಾಡಬೇಕೆಂದು ಪದೇಪದೇ ಕೇಳಿಕೊಂಡರು. ಶಿಷ್ಯರ ಬೇಡಿಕೆಯನ್ನು ಪೂರೈಸಲು ಗುರುಗಳು ಒಪ್ಪಿಕೊಂಡರು.

ಸ್ವಲ್ಪ ದಿನಗಳ ನಂತರ ಶ್ರೀ ಅಭಿನವ ವಿದ್ಯಾತಿರ್ಥರನ್ನು ಶಿಷ್ಯರಾಗಿ ಪರಿಗ್ರಹಣ ಮಾಡಿದರು. ಅವರಿಗೆ ಎಲ್ಲ ವಿಧದ ಮಾರ್ಗದರ್ಶನವನ್ನು ನೀಡಿದರು. ಇಂದಿನಿಂದ ಇವರೇ ನಮ್ಮ ಜಗದ್ಗುರುಗಳು. ಈ ಪೀಠಕ್ಕೆ ಸಲ್ಲಬೇಕಾದ ಮರ್ಯಾದೆ, ಗೌರವಗಳು ಇವರಿಗೆ ಸಲ್ಲಬೇಕು” ಎಂದು ತಮ್ಮ ಶಿಷ್ಯರಿಗೆಲ್ಲಾ ತಿಳಿಸಿದರು. ತಮ್ಮ ಉತ್ತರಾಧಿಕಾರಿಯನ್ನು ತಾವೇ ಸ್ವತಃ ಆರಿಸಿ, ಅವರಿಗೆ ಎಲ್ಲ ವಿಧವಾದ ಮಾರ್ಗದರ್ಶನವನ್ನು ನೀಡಿ ತಾವು ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನರಾದರು.

ಮಹಾಸಮಾಧಿ :

ಶ್ರೀ ಚಂದ್ರಶೇಖರ ಭಾರತೀಯವರು ೧೯೫೪ನೆಯ ಸೆಪ್ಟೆಂಬರ‍್ ೨೪ ರಂದು ಮಹಲಯ ಅಮವಾಸ್ಯೆ ಪರ್ವದಿನದ ಪ್ರಾತಃಕಾಲದಲ್ಲಿ ತುಂಗಾ ನದಿಯಲ್ಲಿ ಮಹಾಸಮಾಧಿ ಹೊಂದಿದರು. ಅವರ ಪವಿತ್ರವಾದ ಶರೀರವು ತುಂಗಾ ನದಿಯಲ್ಲಿ ತೇಲಿಹೋಗಿತ್ತು.  ಅದನ್ನು ದಡಕ್ಕೆ ತಂದಾಗ ಅವರ ಶರೀರ ಪದ್ಮಾಸನ ಸ್ಥಿತಿಯಲ್ಲಿತ್ತು. ಬಲಗೈ ಚಿನ್ಮದ್ರೆಯನ್ನು ಪ್ರದರ್ಶಿಸುತ್ತಿತ್ತು. ಶರೀರದಲ್ಲಿ ಒಂದು ತೊಟ್ಟು ನೀರು ಸೇರಿರಲಿಲ್ಲ. ಅವರ ಪವಿತ್ರ ಶರೀರವು ಅವರ ಗುರುಗಳ ಸಮಾಧಿಯ ಮಗ್ಗುಲಲ್ಲಿಯೇ ಸಮಾಧಿಯಾಯಿತು.

ಆಚರಿಸಬೇಕಾದದ್ದು ಧರ್ಮವನ್ನು :

ಗುರುಗಳವರು ಯಾವ ಮತವನ್ನು ದೂಷಿಸುತ್ತಿರಲಿಲ್ಲ. ಯಾವ ಮತಬೋಧಕನನ್ನೂ ತೆಗಳುತ್ತಿರಲಿಲ್ಲ. “ಎಲ್ಲ ಮತಗಳ ಗುರಿಯೂ ಒಂದೇ. ಆದರೆ ಮಾರ್ಗದಲ್ಲಿ ಮಾತ್ರ ವ್ಯತ್ಯಸ” ಎಂದು ಹೇಳುತ್ತಿದ್ದರು. “ದೇವರು ಪ್ರತಿಯೊಬ್ಬರಿಗೂ ಅವರವರ ಯೋಗ್ಯತೆಗೆ, ಅರ್ಹತೆಗೆ ತಕ್ಕಂತಹ ಮಾರ್ಗವನ್ನು ತೋರಿಸಿದ್ದಾನೆ. ಪ್ರತಿ ಮತದವರೂ ತಮ್ಮ ತಮ್ಮಮತದ ಮಾರ್ಗದಲ್ಲಿ ಸರಿಯಾಗಿ ನಡೆದು ಕೊಂಡರೆ, ಘರ್ಷಣೆಗೆ ಅವಕಾಶವಿರದು” ಎಂದು ಹೇಳುತ್ತಿದ್ದರು.  ಮಕ್ಕಳಲ್ಲಿ ಯಾವ ಮಗುವಿಗೆ ಎಷ್ಟು ಆಹಾರ ಕೊಡಬೇಕು, ಎಂತಹ ಆಹಾರ ಕೊಡಬೇಕು ಎಂಬುವುದು ತಾಯಿಗೆ ಚೆನ್ನಾಗಿ ಗೊತ್ತು. ಒಂದು ಮಗುವಿಗೆ ಹಾಲನ್ನೂಡಿಸಿದ ತಾಯಿ, ಇನ್ನೊಂದು ಮಗುವಿಗೆ ಅನ್ನ ತಿನ್ನಿಸಿದರೆ, ಅದನ್ನು ಪಕ್ಷಪಾತವೆನ್ನಲಾದೀತೆ? ಬಿಸಿಲಲ್ಲಿ ದಣಿದವನಿಗೆ ಪಾನಕವನ್ನೋ, ತಣ್ಣೀರನ್ನೋ ಕೊಡಬಹುದು. ಜ್ವರದ ತಾಪದಿಂದ ಬೆಂದವನಿಎಗ ಪಾನಕವನ್ನಾಗಲಿ ತಣ್ಣೀರನ್ನಾಗಲೇ ಕೊಡಬಹುದೇ?

“ಧರ್ಮವು ಪ್ರತಿಯೊಬ್ಬರೂ ಸುಲಭವಾಗಿ ಅನುಸರಿಸಬಹುದಾದ ಮಾರ್ಗವನ್ನು ತೋರಿಸುತ್ತದೆ.  ಯಾವ ಮತ ದೊಡ್ಡದು. ಯಾವುದು ಶ್ರೇಷ್ಠ ಎಂಬ ಚರ್ಚೆ ಈಗ ಮತ ಮುಖ್ಯವಲ್ಲ. ಈಗ ಆಗಬೇಕಾದ ಕೆಲಸವೆಂದರೆ ಧರ್ಮ ಮಾರ್ಗದಲ್ಲಿ ನಡೆಯುವುದು, ಎಂದರೆ ಸತ್ಯವಚನ, ಪ್ರಾಮಾಣೀಕತೆ, ಶುದ್ಧವಾದ ನಡೆನುಡಿ, ಮಾತಾಪಿತರಲ್ಲಿ ಭಕ್ತಿ, ಗುರು ಹಿರಿಯರಲ್ಲಿ ಗೌರವ, ವಂಚನೆ ಮಾಡದಿರುವುದು, ಸುಳ್ಳು ಹೇಳದಿರುವುದು, ಅನ್ಯರನ್ನು ದ್ವೇಷಿಸದಿರುವುದು, ಪರರ ಪದಾರ್ಥಕ್ಕೆ ಆಸೆ ಪಡದಿರುವುದು- ಇಂತಹ ಸುಲಭವಾದ ನಿಯಮಗಳ ಪಾಲನೆಯೇ ಧರ್ಮಾಚರಣೆ. ನಾವೆಲ್ಲ ಕಲಿಯಬೇಕಾದುದು ಈ ಧರ್ಮವನ್ನು: ಅಚರಿಸಬೇಕಾದುದು ಈ ಧರ್ಮವನ್ನು” ಇದು ಗುರು ಶ್ರೀ ಚಂದ್ರಶೇಖರ ಭಾರತೀಯವರ ದಿವ್ಯವಾದ ಉಪದೇಶ.

ಇದನ್ನೇ ಅಲ್ಲವೆ ನಮ್ಮ ಹಿಂದಿನ ಮಹರ್ಷಿಗಳೂ ಬೋಧಿಸಿದ್ದು? ಇದೇ ಅಲ್ಲವೇ ನಮ್ಮ ಧರ್ಮಗ್ರಂಥಗಳ ಸಾರ?