ತುಮಕೂರು ಜಿಲ್ಲೆಯ ಕುಣಿಗಲ್ನ ಸೂಫಿಗಳ ಹಾಗೂ ಉಲೇಮಾಗಳ ಕುಟುಂಬದಿಂದ ಬಂದ ಜಿಯಾ ಮೀರ್ ಉರ್ದು ಭಾಷೆ, ಸಾಹಿತ್ಯ ಸಂಸ್ಕೃತಿಗಳ ಸಂವರ್ಧನೆಗೆ ಸೂಕ್ತ ವೇದಿಕೆಯಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡವರು.
ಕೋಮು ಸುಹಾರ್ದತೆಗೆ ವಿಶೇಷವಾದ ಒತ್ತು ಕೊಟ್ಟು, ಸಾಂಸ್ಕೃತಿಕ ಒಳನೋಟವೊಂದನ್ನು ಬಿಂಬಿಸುವ ಮೀರ್ರ ಲೇಖನಗಳು ಓದುಗರ ಸಂವೇದನೆಗಳನ್ನು ಸೂಕ್ಷ್ಮವಾಗಿ ತಟ್ಟುವ ವಿಶಿಷ್ಟ ಗುಣವನ್ನು ಹೊಂದಿರುವಂಥವು. ಆರಂಭದಲ್ಲಿ ಉರ್ದು ಸಾಹಿತ್ಯ ಪತ್ರಿಕೆಗಳಿಗೆ, ವೃತ್ತ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರೆಯುತ್ತಿದ್ದ ಮೀರ್ ಮಹತ್ವದ ಉರ್ದು ತ್ರೈ ಮಾಸಿಕ ಸೌಗತ್ನ ಸಂಪಾದಕರಲ್ಲೊಬ್ಬರಾಗಿ ಕಾರ ನಿರ್ವಹಿಸಿದರು.
ಕಳೆದ ೫೦ ವರ್ಷಗಳಿಂದ ಪತ್ರಿಕೋದ್ಯಮದ ನಿರಂತರ ಸಂಪರ್ಕದಲ್ಲಿರುವ ಮೀರ್ ಹವ್ಯಾಸಿ ಪತ್ರಕರ್ತರಾಗಿ ಡೈಲಿ ಸಾಲಾರ್ನಲ್ಲಿ ವೃತ್ತಿನಿರತ ಪತ್ರಕರ್ತರಾಗಿ, ಹೊಸ ತಲೆಮಾರಿನ ಉರ್ದು ಕವಿಗಳನ್ನು ಬರಹಗಾರರನ್ನು ರೂಪಿಸುವ ಸಂಪನ್ನತೆಯನ್ನು ಡೈಲಿ ಸಾಲಾರ್ಗೆ ಒದಗಿಸಿಕೊಡುವವರಾಗಿ, ಅದರ ಪ್ರಧಾನ ಸಹಾಯಕ ಸಂಪಾದಕರಾಗಿ, ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುವುದರ ಮೂಲಕ ಉರ್ದು ಪತ್ರಿಕೋದ್ಯಮದ ದಿಗಂತಗಳಲ್ಲಿ ವಿಹರಿಸಿದವರು.
ವಿಮರ್ಶಕ, ಕವಿ, ಸಣ್ಣ ಕಥೆಗಾರ ಹಾಗೂ ಸಾಲಾರ್ನ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ವಿವಿಧ ಹೊಣಿಗಾರಿಕೆಗಳನ್ನು ಅವರು ನಿರ್ವಹಿಸಿದ ರೀತಿ ಉರ್ದು ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಅನೇಕ ಹೊಸ ಬರಹಗಾರರು ಸಾಹಿತ್ಯ ಕ್ಷೇತ್ರಕ್ಕೆ ಪ್ರೀತಿಯಿಂದ ಪ್ರವೇಶಿಸಲು ಪ್ರೇರಕ ಶಕ್ತಿಯಾಯಿತು.
ಮೀರ್ ಅವರು ಸಂಪಾದಿಸಿರುವ ‘ಮಜಮೀರ್’ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನ ನಿರತರಾಗಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬಲ್ಲ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ. ಕನ್ನಡದ ಖ್ಯಾತ ಕವಿಗಳ ಹಲವಾರು ಕವಿತೆಗಳನ್ನು ಉರ್ದುವಿಗೆ ಅನುವಾದಿಸಿರುವ ಮೀ ಕನ್ನಡ, ಉರ್ದು ಭಾಷಾ ಬಾಂಧವ್ಯವನ್ನು ಬೆಸೆಯಲು ಶ್ರಮಿಸುತ್ತಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೂ ಪಾತ್ರರಾಗಿರುವ ಜಿಯಾ ಮೀರ್ ತಮ್ಮ ಸಮತೂಕದ ಸಮಯೋಚಿತ ಸಾಹಿತ್ಯ ಕೃಷಿ ಮತ್ತು ಬರವಣಿಗೆಗಳಿಂದ ಉರ್ದು ಪತ್ರಿಕಾ ಪ್ರಪಂಚದ ಸುಪ್ರಸಿದ್ಧ ಹಿರಿಯ ಪತ್ರಕರ್ತರಾಗಿದ್ದಾರೆ.
Categories
ಶ್ರೀ ಜಿಯಾಮೀರ್
