ನಟರಾಗಿ, ಕಂಪನಿಯ ಮಾಲೀಕರಾಗಿ, ಕಲಾವಿದರಿಗೆ ಆತ್ಮೀಯ ಬಸಣ್ಣನಾಗಿ ಕನ್ನಡ ರಂಗಭೂಮಿಗೆ ಸುಪರಿಚಿತರು ಶ್ರೀ ಚೆನ್ನಬಸಪ್ಪ ಅವರು.
ನಾಟಕರತ್ನ ಗುಬ್ಬಿ ವೀರಣ್ಣ ಹಾಗೂ ಭದ್ರಮ್ಮನವರ ಹಿರಿಯ ಮಗನಾದ ಶ್ರೀಯುತರು ೧೯೨೬ರಲ್ಲಿ ಜನಿಸಿದರು. ಸಣ್ಣಪುಟ್ಟ ಪಾತ್ರಗಳ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಶ್ರೀ ಚೆನ್ನಬಸಪ್ಪ ಅವರು ಗುಬ್ಬಿ ಕಂಪನಿಯ ಮುನ್ನಡೆಗೆ, ವೃತ್ತಿರಂಗಭೂಮಿಯ ಚೈತನ್ಯಕ್ಕೆ ಹೆಗಲು ಕೊಟ್ಟ ಹಿರಿಯರು. ಹೊಸ ಹೊಸ ರಂಗತಂತ್ರಗಳನ್ನು ಅಳವಡಿಸುತ್ತ ತಂದೆಯವರ ಗುಬ್ಬಿ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ರಂಗಕಲೆಯನ್ನು ರಕ್ತಗತವಾಗಿ ಪಡೆದಿರುವ ಶ್ರೀ ಚೆನ್ನಬಸಪ್ಪ ಅವರು ‘ಸಾಹುಕಾರ’ ನಾಟಕದ ವಿಜಯಾನಂದನಾಗಿ, ‘ಕಾಲಚಕ್ರ’ ನಾಟಕದ ಶಂಕರನಾಗಿ, ‘ಅಣ್ಣತಮ್ಮ’ ನಾಟಕದ ಶೈಲೇಂದ್ರನಾಗಿ ಪಾತ್ರಗಳಿಗೆ ಜೀವ ತುಂಬಿದರು; ಜನರನ್ನು ರಂಜಿಸಿದರು. ಭಕ್ತಿ ಪ್ರಧಾನ ನಾಟಕಗಳ ಗುರುಸ್ಥಾನದ ಪಾತ್ರಗಳಲ್ಲಿ ಈ ಕಲಾವಿದರದು ಎತ್ತಿದ ಕೈ. ‘ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ’, ‘ಬಸವೇಶ್ವರ’, ‘ಶಿರ್ಡಿ ಸಾಯಿಬಾಬ’ಗಳಂಥ ಪಾತ್ರಗಳು ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ, ಜನಮನದಲ್ಲಿ ಸ್ಥಿರವಾಗಿ ನಿಂತಿವೆ. ಗುಬ್ಬಿ ಕುಟುಂಬವೇ ಕಲೆಗೆ ಮೀಸಲಾದ ಕುಟುಂಬ. ಆಕಸ್ಮಿಕವಾಗಿ ರಂಗಭೂಮಿಗೆ ಪ್ರವೇಶ ಮಾಡಿದ ಶ್ರೀಯುತರು ಇಂದು ರಂಗಭೂಮಿಗೆ ಅತ್ಯಗತ್ಯ ಹಾಗೂ ಅನಿವಾರ್ಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಮೊದಲು ವ್ಯವಸ್ಥಾಪಕರಾಗಿದ್ದು ಗುಬ್ಬಿ ಕಂಪನಿಯನ್ನು ಬೆಳೆಸಿ, ಈಗ ಮಾಲೀಕತ್ವದ ಹೊಣೆ ಹೊತ್ತಿದ್ದಾರೆ.
ರಂಗಕಲೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಶ್ರೀ ಜಿ.ವಿ. ಚೆನ್ನಬಸಪ್ಪ ಪ್ರಬುದ್ಧ ಅಭಿನಯದ ಶ್ರೇಷ್ಠ ಕಲಾವಿದರು.