Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಜೆ. ಚಂದೂಲಾಲ್ ಜೈನ್

ಉತ್ತಮ ಗುಣಮಟ್ಟದ ಚಿತ್ರಗಳನ್ನು ಕನ್ನಡ ಚಿತ್ರರಸಿಕರಿಗೆ ನೀಡುತ್ತ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕ ಶ್ರೀ ಚಂದ್ರಲಾಲ್ ಜೈನ್ ಅವರು.
ಶ್ರೀ ಚಂದ್ರಲಾಲ್ ಜೈನ್ ಅವರು ಕನ್ನಡ ಚಲನಚಿತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಸಾಂಸ್ಕೃತಿಕ ಪರಿಸರದಲ್ಲಿ ತೊಡಗಿಸಿಕೊಂಡವರು. ೧೯೭೦ರಲ್ಲಿ ‘ತಾಯಿದೇವರು’ ಚಿತ್ರದೊಂದಿಗೆ ಪ್ರಾರಂಭಿಸಿ ‘ಭೂತಯ್ಯನ ಮಗ ಅಯ್ಯು’, ‘ಹೇಮಾವತಿ’, ‘ತಬ್ಬಲಿಯು ನೀನಾದೆ ಮಗನೆ’ ಮೊದಲಾದ ಅನೇಕ ಶ್ರೇಷ್ಠ ಚಿತ್ರಗಳನ್ನು ನೀಡಿದ ಖ್ಯಾತಿ ಶ್ರೀಯುತರದು.
ಹಿಂದಿ ಚಿತ್ರ ‘ಗೋಧೂಳಿ’ಯೂ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಶ್ರೀ ಚಂದ್ರಲಾಲ್ ಜೈನ್ ಅವರ ಅನೇಕ ಚಲನಚಿತ್ರಗಳಿಗೆ ಕೇಂದ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಸಿದ್ಧ ನಿರ್ಮಾಪಕರು ಹಾಗೂ ನಿರ್ದೇಶಕರಾದ ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ನಾಗಾಭರಣ, ಕೆ. ಬಾಲಚಂದರ್‌ ಮೊದಲಾದವರೊಂದಿಗೆ ಚಿತ್ರಗಳನ್ನು ಮಾಡಿರುವ ಶ್ರೀಯುತರು ‘ಇದು ಸಾಧ್ಯ’ ಎಂಬ ಪ್ರಾಯೋಗಿಕ ಚಿತ್ರವನ್ನು ನಲವತ್ತೆಂಟು ಗಂಟೆಗಳಲ್ಲಿ ನಿರ್ಮಿಸಿ ದಾಖಲೆ ಮಾಡಿದ್ದಾರೆ. ‘ಗಂಗವ್ವ ಗಂಗಾಮಾಯಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ‘ಉತ್ತಮ ಚಿತ್ರ ಪ್ರಶಸ್ತಿ
ದೊರಕಿದೆ.
ಮೂರು ದಶಕಗಳ ಕಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಕೈಗಾರಿಕಾ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಸದಸ್ಯರಾಗಿ, ಹಲವಾರು ಚಲನಚಿತ್ರ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ನಿರ್ದೆಶಕರ ಸಂಘದಿಂದ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕನ್ನಡ ಚಲನಚಿತ್ರ ರಂಗದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಯಶಸ್ವೀ ನಿರ್ಮಾಪಕರು ಶ್ರೀ ಜೆ. ಚಂದ್ರಲಾಲ್ ಜೈನ್ ಅವರು.