Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಟಿ.ಎಸ್. ನಾಗಾಭರಣ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿರುವ ಖ್ಯಾತನಾಮರು ಶ್ರೀ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು.
ಹಿಂದೂಸ್ತಾನಿ ಸಂಗೀತ ಗಾಯನದ ಮೂಲಕ ಕಲಾ ಪ್ರಪಂಚವನ್ನು ಪ್ರವೇಶಿಸಿದ ನಾಗಾಭರಣ ಅವರು ಜಾನಪದ ಗೀತೆ, ಮತ್ತು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದಲ್ಲೂ ಪರಿಶ್ರಮ ಪಡೆದವರು. ಶ್ರೀರಂಗರ ನಾಟಕಗಳಿಂದ ಪ್ರಭಾವಿತರಾದ ಶ್ರೀಯುತರು ಕಾಲೇಜು ಮಟ್ಟದಲ್ಲಿರುವಾಗಲೇ ನಾಟಕಗಳನ್ನು ನಿರ್ದೇಶಿಸತೊಡಗಿದರು. ಬಿ.ವಿ. ಕಾರಂತ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್ ಅವರಂತಹ ಗಣ್ಯರೊಡನೆ ಚಿತ್ರರಂಗದಲ್ಲಿ ಕೆಲಸಮಾಡುವ ಸುಯೋಗ ಇವರಿಗೆ ಒದಗಿಬಂದಿತು. ಗ್ರಾಮೀಣ ಹಿನ್ನೆಲೆಯಿಂದ ಬಂದ ಇವರು ಸಹಜವಾಗಿ ತಮ್ಮ ನಿರ್ದೇಶನದಲ್ಲಿ ಹಳ್ಳಿಯ ಸೊಗಡನ್ನು ಬಳಸಿಕೊಂಡರು. ಬೆನಕ ಹಾಗೂ ರಂಗಸಂಪದ ಕಲಾ ತಂಡಗಳ ನಿರ್ದೆಶಕರಾಗಿ ಪ್ರಶಂಸೆ ಗಳಿಸಿದರು..
ತಮ್ಮ ೨೫ ನೆಯ ವಯಸ್ಸಿನಲ್ಲಿಯೇ ‘ಗ್ರಹಣ’ ಚಿತ್ರಕಥೆ ಬರೆದು, ನಿರ್ದೇಶಿಸಿ ತೆರೆಗೆ ತಂದರು. ಆ ಚಿತ್ರಕ್ಕೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ. ಕಳೆದ ೨೫ ವರ್ಷಗಳಲ್ಲಿ ಅವರು ೨೮ ಚಿತ್ರಗಳನ್ನು ನಿರ್ಮಿಸಿದ್ದು ಹದಿನಾಲ್ಕು ಚಿತ್ರಗಳಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಅಲ್ಲದೆ ಆರು ಚಿತ್ರಗಳು ಭಾರತೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಅವುಗಳಲ್ಲಿ ನಾಗಮಂಡಲ ಮತ್ತು ಜನುಮದ ಜೋಡಿ ಹೆಚ್ಚು ಮೆಚ್ಚುಗೆಗೆ ಪಾತ್ರವಾದವು. ಶ್ರೀಯುತರು ಅನೇಕ ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನು, ಕಿರುತೆರೆ ಚಿತ್ರಗಳು ಹಾಗೂ ಚಲನಚಿತ್ರ, ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ, ಅಭಿನಯಿಸಿದ್ದಾರೆ ಕೂಡಾ.
ಬೆನಕ ಮಕ್ಕಳ ರಂಗ ಕೇಂದ್ರದ ಸ್ಥಾಪಕಾಧ್ಯಕ್ಷರಾಗಿ, ಚಲನಚಿತ್ರ ಅನುದಾನ ಸಮಿತಿಯ ಅಧ್ಯಕ್ಷರಾಗಿ ಹಾಗೂ ಅನೇಕ ರಂಗ ಮತ್ತು ಚಿತ್ರ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಅತ್ಯುನ್ನತ ಚಿತ್ರ ನಿರ್ದೇಶಕ ಪ್ರಶಸ್ತಿಯಾದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ ಪುರಸ್ಕಾರಗಳು ಇವರಿಗೆ ಸಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯಿಂದ ಪ್ರೇಕ್ಷಕರ ಅಭಿಮಾನ ಗಳಿಸಿರುವ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಗಾಯಕ ಹೀಗೆ ಬಹುಮುಖ ಪ್ರತಿಭೆಯುಳ್ಳ ಕನ್ನಡದ ಹೆಮ್ಮೆಯ ಕುವರ ಶ್ರೀ ಟಿ.ಎಸ್. ನಾಗಾಭರಣ ಅವರು.