Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಟಿ.ವಿ.ರಾಜು

ಸುಗಮ ಸಂಗೀತ ಗಾಯನ ಕ್ಷೇತ್ರದಲ್ಲಿ ಟಿ.ವಿ.ರಾಜು ಅವರದು ಗಮನಾರ್ಹ ಸಾಧನೆ.
ನಗರ ಪ್ರದೇಶಗಳಲ್ಲಿ ಚಿರಪರಿಚಿತವಿರುವ ಸುಗಮ ಸಂಗೀತ ಪ್ರಕಾರವನ್ನು ಗ್ರಾಮಾಂತರ ಪ್ರದೇಶಗಳಲ್ಲೂ ಪಸರಿಸುವ ನಿಟ್ಟಿನಲ್ಲಿ ಗಾಯಕ ರಾಜು ಅವರ ಪರಿಶ್ರಮ ಶ್ಲಾಘನೀಯ.
ಮೂಲತಃ ತುಮಕೂರಿನವರಾದ ರಾಜು ಕಳೆದ ೪೫ ವರ್ಷಗಳಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿರುವರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಗ್ರಾಮಾಂತರ ಪ್ರದೇಶಗಳ ಯುವಜನರಿಗೆ ಸುಗಮ ಸಂಗೀತ ತರಬೇತಿ ನೀಡುವ ಮೂಲಕ ಕಲಿತ ಕಲೆಯನ್ನು ಸಾರ್ಥಕಗೊಳಿಸಿರುವ ಅಪರೂಪದ ಕಲಾವಿದರು ಶ್ರೀಯುತರು.
ಸುಗಮ ಸಂಗೀತ ಕ್ಷೇತ್ರವನ್ನೇ ನೆಚ್ಚಿಕೊಂಡಿರುವ ಅವರು ಏರ್ಪಡಿಸಿರುವ ವಿಚಾರ ಸಂಕಿರಣ, ಕಾರ್ಯಾಗಾರ, ಸುಗಮ ಸಂಗೀತ ಸಾಪ್ತಾಹಿಕ ಕಾರ್ಯಕ್ರಮಗಳು ಹಲವಾರು. ೨೦೦೨ರಲ್ಲಿ ರಾಜ್ಯಮಟ್ಟದ ಜನ ಸಂಸ್ಕೃತಿ ಮೇಳ ಆಯೋಜನೆ ಹಾಗೂ ೨೦೦೨-೦೩ನೇ ಸಾಲಿನಲ್ಲಿ ರಾಜ್ಯ ಮಟ್ಟದ ಚಿಣ್ಣರ ಪ್ರತಿಭಾ ಪ್ರಗತಿ ಪ್ರದರ್ಶನ ಪ್ರಮುಖವಾದವು.
ಕೂಡಲ ಸಂಗಮ, ಮಹಾಶಕ್ತಿ ಗಣಪತಿ, ಶೃಂಗೇರಿ ಶಾರದೆ ಸೇರಿದಂತೆ ಅನೇಕ ಧ್ವನಿಸುರುಳಿಗಳಿಗೆ ಶ್ರೀಯುತರು ಹಾಡಿರುವರು.
ರಾಜು ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ‘ಕರ್ನಾಟಕ ಕಲಾಶ್ರೀ’ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವಗಳು ಹಲವು.
ಸುಗಮ ಸಂಗೀತದ ಮೂಲಕ ಕಾವ್ಯ ಪರಂಪರೆಯನ್ನು ಜನಮನಕ್ಕೆ ಮುಟ್ಟಿಸುವ ಕಾಯಕದಲ್ಲಿ ತೊಡಗಿರುವವರು ಶ್ರೀ ಟಿ.ವಿ.ರಾಜು.