Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಬ್ಲ್ಯೂ, ಪಿ. ಕೃಷ್ಣ

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡವರು ಸಮಾಜಸೇವಕ ಶ್ರೀ ಡಬ್ಲ್ಯೂ, ಪಿ. ಕೃಷ್ಣರವರು.
೧೯೬೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀಯುತರು ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಹಾಗೂ ಎಲ್ಎಲ್.ಬಿ. ಪದವಿಗಳಿಸಿದ್ದಾರೆ. ಇವರ ತಂದೆ ಶ್ರೀ ಡಬ್ಲ್ಯೂ, ಹೆಚ್. ಪುಟ್ಟಯ್ಯನವರು ಹಿರಿಯ ಸ್ವಾತಂತ್ರ್ಯ ಯೋಧರು ಹಾಗೇ ತಾತನವರರಾದ ದಿ|| ಡಬ್ಲ್ಯೂ, ಹೆಚ್, ಹನುಮಂತಪ್ಪನವರು ಸಹ ಸ್ವಾತಂತ್ರ್ಯಯೋಧರಾಗಿದ್ದು ಬೆಂಗಳೂರಿನ ಪುರಸಭಾಧ್ಯಕ್ಷರು, ಮೈಸೂರು ಪ್ರಜಾಪ್ರತಿನಿಧಿಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಆಗಿದ್ದವರು.
ವೃತ್ತಿಯಲ್ಲಿ ಚಾರ್ಟಡ್್ರ ಇಂಜಿನಿಯರ್ ಹಾಗೂ ಅಧಿಕೃತ ಮೌಲ್ಯಮಾಪಕರೂ ಆಗಿರುವ ಕೃಷ್ಣ ಅವರು ಪ್ರತಿಷ್ಠಿತ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳ ಗೌII ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಖಾಸಗಿ ಸ್ನಾತಕೋತ್ತರ ಮಹಾವಿದ್ಯಾಲಯಗಳ ಸಂಘದ ಸ್ಥಾಪಕ ಕಾರ್ಯದರ್ಶಿಗಳು, ಭಾರತೀಯ ರೆಡ್ಕ್ರಾಸ್ ಸೊಸೈಟಿ, ಭಾರತ ಸೇವಾದಳ ಮುಂತಾದ ಸಂಸ್ಥೆಗಳ ಪ್ರಮುಖ ಸದಸ್ಯರೂ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಬೆಂಗಳೂರು ಕೇಂದ್ರದ ಖಜಾಂಚಿಗಳಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಾಗಿ ೨೦೦೨ರಲ್ಲಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಸಮುದಾಯ ಸೇವೆಗಾಗಿ ೧೯೯೨ರಲ್ಲಿ ರಾಜ್ಯಯುವ ಪ್ರಶಸ್ತಿ ಇವರಿಗೆ ದೊರೆತಿದೆ.
ಇದಲ್ಲದೆ ರಾಜ್ಯದ ಹಲವಾರು ಸೇವಾಪರ ಸಂಸ್ಥೆಗಳಲ್ಲಿ ಪ್ರಮುಖ ಸದಸ್ಯರಾಗಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು ನಾಡಿನ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ.
ಇವರ ಈ ಬಹುಮುಖ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇವರ ಪ್ರತಿಭೆಯ ಕಿರೀಟಕ್ಕೆ ತೊಡಿಸಿದ ಮತ್ತೊಂದು ಗರಿ.